|
ಹಸಿರು ಹಾದಿಯ ಪಯಣ |
ಹ , ಹೌದು "ಸಿಂಥೆರಿ'' ರಾಕ್ಸ್ ನಿಂದ
ನಮ್ಮ ಪ್ರವಾಸ ದಿಬ್ಬಣ ಮುಂದುವರೆಯಿತು,ಹಸಿರು ಹಾದಿಯ ಪಯಣ ಸಾಗಿತ್ತು, "ಸಿಂಥೆರಿ ರಾಕ್ಸ್" ನಿಂದ "ಗಣೇಶ್ ಗುಡಿ " ಯ ಕಡೆ ಹೊರಟಿದ್ದಾದರೂ ದಾರಿಯಲ್ಲಿ ಕಾರುಗಳಿಗೆ ಇಂಧನ ತುಂಬಿಸಬೇಕಾದ ಕಾರಣ, "ಜೋಯ್ಡ'' ಪಟ್ಟಣಕ್ಕೆ ಬರಲೇ ಬೇಕಾಯ್ತು .
|
ಜೋಯ್ಡಾ ಪಟ್ಟಣ |
"ಜೋಯ್ಡಾ " ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಒಂದು ತಾಲೂಕು ಕೇಂದ್ರ , ಈ ಊರಿನ ಜನ ಸಂಖ್ಯೆ ಮೂರು ಸಾವಿರ ವೆಂದು ತಿಳಿದು ಬರುತ್ತದೆ. ಹತ್ತಿರದಲ್ಲೆ ಇರುವ "ಸೂಪ " ಆಣೆಕಟ್ಟು ಯೋಜನೆಯ ಫಲವಾಗಿ ಅಂಬಿಕಾನಗರ ಹತ್ತಿರವಿರುವ ಕಾರಣ ಜನ ಸಂಖ್ಯೆ ಇನ್ನಷ್ಟು ಹೆಚ್ಚಿದೆ . ಬಹುಷಃ ತಾಲೂಕು ಕೇಂದ್ರ ಒಂದು ಇಷ್ಟು ಕಡಿಮೆ ಜನ ಸಂಖ್ಯೆ ಹೊಂದಿರುವುದು ಅಪರೂಪವೇ ಸರಿ, ಊರಿಗೆ ಹೊಕ್ಕ ನಮಗೆ ಯಾವುದೋ ಹೋಬಳಿ ಕೇಂದ್ರ ದಂತೆ ಕಂಡು ಬಂದಿತು ಈ ಊರು, ಆದರೆ ಈ ತಾಲೂಕು ಅತೀ ಹೆಚ್ಚು ಕಾಡಿನ ಪ್ರದೇಶ ಹೊಂದಿದೆ, ಪೋರ್ಚುಗೀಸರ ಕಾಲದಲ್ಲಿ "ಚಾರ್ದು" ಕುಟುಂಬಗಳು ಗೋವಾ ದಿಂದ ಇಲ್ಲಿಗೆ ಬಂದು ನೆಲೆಸಿದ್ದಾಗಿ ತಿಳಿದು ಬರುತ್ತದೆ. ಅಲ್ಲೇ ಇದ್ದ ಪೆಟ್ರೋಲ್ ಬಂಕ್ ನಲ್ಲಿ ಇಂಧನ ತುಂಬಿಸಿ "ಗಣೇಶ್ ಗುಡಿ " ಯ ಹಾದಿ ಹಿಡಿದೆವು,
|
ಬನ್ನಿ ಗಣೇಶ್ ಗುಡಿ ಗೆ ಸ್ವಾಗತ |
|
ನಿಷ್ಯಭ್ದ ವಾದ ಪರಿಸರ |
ಹಾಗೆ ಸಾಗಿದ ನಮ್ಮನ್ನು ಅಲ್ಲಿದ್ದ ಒಂದು ಬೋರ್ಡು ಸ್ವಾಗತ ನೀಡಿತು . ಮುಖ್ಯ ರಸ್ತೆಯಿಂದ ಒಳಗೆ ಹೋಗಲು ಮಣ್ಣು ಹಾದಿ ಸಿಕ್ಕಿತು, ಆ ದಾರಿಯಲ್ಲಿ ಸಾಗಿದ ನಮಗೆ ದರ್ಶನ ನೀಡಿದ್ದು "ಓಲ್ಡ್ ಮ್ಯಾಗಜಿನ್ " ಪರಿಸರ ಸುತ್ತಲೂ ದಟ್ಟ ಅರಣ್ಯ ಇದರ ನಡುವೆ ನಿರ್ಮಿತವಾಗಿರುವ " ಹಳೆಯ ಮದ್ದಿನ ಮನೆಗಳ ಗುಂಪು " ಇದೆ ಇಂದಿನ "ಗಣೇಶ್ ಗುಡಿಯ ಓಲ್ಡ್ ಮ್ಯಾಗಜಿನ್ ಹೌಸ್" ಇದೇನು ಇಲ್ಲಿ ಮದ್ದಿನ ಮನೆಗಳ ಮಾತು ಏಕೆ ಬಂತು ಅನ್ನುತ್ತೀರಾ ?? ಅದೇ ಇಲ್ಲಿನ ವಿಶೇಷ
|
ಅಂದಿನ ಮದ್ದಿನ ಮನೆಗಳು |
ಹೌದು ಈ ಮದ್ದಿನ ಮನೆಗಳ ಇತಿಹಾಸ 1 9 7 0 ರ ದಶಕಕ್ಕೆ ಕರೆದೊಯ್ಯುತ್ತದೆ , ಸೂಪಾದಲ್ಲಿ ಕಾಳಿ ಜಲ ವಿಧ್ಯುತ್ ಯೋಜನೆ ನಿರ್ಮಾಣ ಮಾಡುವ ಸಮಯದಲ್ಲಿ ದೊಡ್ಡ ದೊಡ್ಡ ಬಂಡೆಗಳನ್ನು ಸಿಡಿಸಲು ಡೈನಮೆಂಟ್ , ಮುಂತಾದ ಸಿಡಿ ಮದ್ದುಗಳನ್ನು ಬಳಸಬೇಕಾಗಿತ್ತು, ಆ ವೇಳೆಯಲ್ಲಿ ಅಗತ್ಯವಿರುವ ಸಿಡಿಮದ್ದುಗಳನ್ನು ಸುರಕ್ಷಿತವಾಗಿ ಮಳೆ, ಹಾಗು ಶೀತದಿಂದ ಕಾಪಾಡಿಕೊಂಡು ಸಂಗ್ರಹ ಮಾಡಲು ಈ ತರಹದ ಮದ್ದಿನ ಮನೆಗಳನ್ನು ನಿರ್ಮಿಸಲಾಯಿತು, ಯೋಜನೆ ಪೂರ್ಣ ಗೊಂಡ ನಂತರ ಇವುಗಳನ್ನು ಜಂಗಲ್ ಲಾಡ್ಜ್ ನವರು ವಹಿಸಿಕೊಂಡು ಇವುಗಳನ್ನು ಮಾರ್ಪಾಡು ಮಾಡಿ ಪ್ರವಾಸಿಗಳ ವಾಸಕ್ಕಾಗಿ ಅನುವು ಮಾಡಿದ್ದಾರೆ .
|
ಸ್ವಾಗತ ತಾಣ |
ಇಲ್ಲಿಗೆ ಬಂದ ನಮ್ಮನ್ನು ಸ್ವಾಗತ ಮಾಡಿದ್ದು ಯಾವುದೇ ಆಧುನಿಕತೆ ಇಲ್ಲದ ಸ್ವಾಗತ ತಾಣ , ಅಲ್ಲಿನ ಸಿಬ್ಬಂಧಿ ನಮಗೆ ಮಾರ್ಗದರ್ಶನ ನೀಡಿ ನಮಗೆ ರೂಂ ಗಳ ವ್ಯವಸ್ಥೆ ಒದಗಿಸಿ ಕೊಟ್ಟರು . ಸುತ್ತಲೂ ಹಸಿರಿನ ವಾತಾವರಣ ಚಿಲಿ ಪಿಲಿ ಹಕ್ಕಿಗಳ ಹಾಡು ಸುಂದರ ಪಕ್ಷಿಗಳ ನೋಟ ಸವಿಯುತ್ತಾ ಮಧ್ಯಾಹ್ನದ ಭೋಜನ ಸವಿದೆವು. ಮತ್ತೊಮ್ಮೆ ಅಲ್ಲಿನ ಪರಿಸರದ ಅವಲೋಕನ ನಡೆಸಿದ ನಮಗೆ ಅಲ್ಲಿನ ವಿವಿಧ ಬಗೆಯ ಪಕ್ಷಿ ಲೋಕದ ಪರಿಚಯ ವಾಯಿತು, ಇಲ್ಲಿನ ಸಿಬ್ಬಂಧಿಗೂ ಇಲ್ಲಿನ ಪರಿಸರದ ಬಗ್ಗೆ ಒಳ್ಳೆಯ ತಿಳುವಳಿಕೆ ಇದೆ, ಪ್ರವಾಸಿಗಳಿಗೆ ಮಾಹಿತಿ ನೀಡುತ್ತಾರೆ .
|
ಪಕ್ಷಿಗಳನ್ನು ಸೆಳೆಯಲು ಒಂದು ವಿಧಾನ |
|
ಪಕ್ಷಿ ಬೇಟೆಗಾರರು |
ಹೌದು ಈ ಪರಿಸರದಲ್ಲಿ ವಿವಿಧ ಬಗೆಯ ಪಕ್ಷಿಗಳ ನೋಟ ನೋಡ ಬಹುದು, ದೇಶದ ವಿವಿದೆಡೆಯಿಂದ ಬರುವ ಛಾಯಾಗ್ರಾಹಕರು ಪಕ್ಷಿ ಛಾಯಾ ಚಿತ್ರ ತೆಗೆಯಲು ಅನುಕೂಲವಾಗುವಂತೆ ಅಲ್ಲಿ ಎತ್ತರದ ಪ್ರದೇಶದಲ್ಲಿ ಮಣ್ಣಿನ ತಟ್ಟೆ ಗಳನ್ನ ಇತ್ತು ಅವುಗಳಲ್ಲಿ ನೀರು , ಕಾಲು ಇವುಗಳನ್ನು ಇತ್ತು , ಪಕ್ಷಿಗಳು ಅವುಗಳನ್ನು ಸೇವಿಸಲು ಬರುವಾಗ ಚಿತ್ರ ತೆಗೆಯಲು ಪರಿಸರ ಛಾಯಾ ಚಿತ್ರ ಗಾರರು ಮುಗಿಬೀಳುತ್ತಾರೆ, ಅಲ್ಲಿ ಪಕ್ಷಿ ಛಾಯಾಚಿತ್ರಗಾರರ ಸಂತೆಯೇ ನೆರೆದಿತ್ತು, ಅವರ ಕ್ಯಾಮರ ಹಾಗು ದೊಡ್ಡ ದೊಡ್ಡ ಲೆನ್ಸ್ ಗಳು ನನ್ನ ಗಮನ ಸೆಳೆಯಿತು ,ನಾನು ನನ್ನ ದೊಡ್ಡ ಲೆನ್ಸ್ ಗಳನ್ನೂ ತರದೇ ಇರಲು ಸಾಧ್ಯವಾಗದ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡೆ ಆದರೆ ಅಲ್ಲಿನ ಛಾಯಾಚಿತ್ರಗಾರರಲ್ಲಿನ ತನ್ಮಯತೆ, ಹಾಗು ಅಲ್ಲಿನ ಪಕ್ಷಿಗಳಿಗೆ ತೊಂದರೆ ಆಗದಂತೆ ವರ್ತಿಸಿದ ಅವರ ವರ್ತನೆ ಇಷ್ಟವಾಯಿತು .
|
ಕಾಡಿನ ನಡುವೆ ಚಾರಣ |
ಹಾಗೂ ಹೀಗೂ ವೇಳೆ ಕಳೆದು ಸಂಜೆಯ ಚಾರಣಕ್ಕೆ ಸಿದ್ಧವಾದೆವು , ಅಲ್ಲಿನ ಸಿಬ್ಬಂಧಿ ನಮ್ಮನ್ನು ದಟ್ಟ ಕಾಡಿನ ನಡುವೆ ಬೆಟ್ಟಗಳನ್ನು ಹತ್ತಿಸುತ್ತಾ ಚಾರಣಕ್ಕೆ ಕರೆದೊಯ್ದರು,ಆದರೆ ನಮ್ಮ ತಂಡದ ಜೊತೆಗಿದ್ದ ಕೆಲವರ ಗಲಾಟೆ ಕಾಡಿನಲ್ಲಿನ ಶಾಂತಿಯನ್ನು ಕದಡಿತ್ತು , ಈ ಗಲಾಟೆಗೆ ಯಾವ ಪ್ರಾಣಿ ದರ್ಶನ ನೀಡೀತು, ಹಾಗೂ ಹೇಗೋ ಗುಡ್ಡಗಳನ್ನು ಹತ್ತಿ ಒಂದು ಪ್ರದೇಶದಲ್ಲಿ ನೆಲೆ ನಿಂತೆವು . ಆ ಪ್ರದೇಶದಲ್ಲಿ ಅನಾವರಣ ಗೊಂಡಿದ್ದೆ ಕಾಳಿ ನದಿಯ ಸುಂದರ ಚಲುವಿನ ನೋಟ
|
ಚೆಲುವಿನ ಪರಿಸರ |
|
ಕಾಳಿ ನದಿಯ ಸಂಜೆಯ ನೋಟ |
ಹೌದು, ಗುಡ್ಡದ ಮೇಲೆ ನಮ್ಮ ತಂದ ತಲುಪಿದ ವೇಳೆ ಸಂಜೆಯಾಗಿತ್ತು, ಸೂರ್ಯಾಸ್ತವಾಗುವ ಹೊತ್ತು ಸಮೀಪಿಸುತ್ತಿತ್ತು ಸುಂದರ ನೋಟಗಳ ಹಬ್ಬ ನಮ್ಮದಾಗಿತ್ತು, ಅಲ್ಲಿದ್ದ ಎಲ್ಲಾ ತಂಡದ ಜನರ ಉತ್ಸಾಹ ಮೆರೆಮೀರಿತ್ತು, ತೃಪ್ತಿಯಾಗುವಷ್ಟು ಅಲ್ಲಿನ ಸಂತಸ ಕ್ಷಣಗಳನ್ನು ಸವಿದರು, ಕ್ಯಾಮರಾಗಳು ಪಟಪಟನೆ ಕ್ಷಣಗಳನ್ನು ಸೆರೆ ಹಿಡಿಯುತ್ತಿದ್ದವು, ಸುಮಾರು ಒಂದು ಘನತೆಯ ಕಾಲ ಎಲ್ಲರೂ ಅಲ್ಲಿನ ಸೌಂದರ್ಯ ನೋಡಿ ಧನ್ಯತೆ ಪಡೆದೆವು
|
ಶಿಸ್ತು ಬದ್ದ ಆಹಾರ ವ್ಯವಸ್ತೆ |
ಸುಂದರ ನೋಟಗಳ ನೋಡಿ ಮತ್ತೆ ನಮ್ಮ ತಾಣಕ್ಕೆ ವಾಪಸ್ಸು ಬರುವಷ್ಟರಲ್ಲಿ ಕತ್ತಲಾಗಿತ್ತು, ಧಣಿದ ವಿಶ್ರಾಂತಿ ಬಯಸಿತ್ತು, ಸ್ವಲ್ಪ ವಿಶ್ರಾಂತಿ ಪಡೆದು, ರಾತ್ರಿಯ ಊಟಕ್ಕೆ ತೆರಳಿದೆವು, ಅಲ್ಲೇ ಸಾಗಿದ್ದ ನಮಗೆ ಅಡಿಗೆ ಮನೆಯ ದರ್ಶನ ವಾಗಿತ್ತು , ಆಹಾರದ ಸುವಾಸನೆ ಆಸ್ವಾಧಿಸುತ್ತಾ ಸಾಗಿದ ನಮಗೆ ಶಿಸ್ತುಬದ್ದವಾಗಿ ಆಹಾರಗಳನ್ನು ಸಾಲಾಗಿ ಇಡಲಾಗಿತ್ತು , ಹಿತವಾದ ಗಾಳಿ, ಸುಂದರ ಪರಿಸರ ಇನ್ನೇನು ಬೇಕು, ನಮಗೆ ಅರಿವಿಲ್ಲದಂತೆ ಹೆಚ್ಚಾಗಿಯೇ ಊಟ ಮಾದಿದೆವು. ಒಂದಷ್ಟು ಹರಟೆ ಮಾಡಿದ ನಮಗೆ ನಿದ್ರಾದೇವಿ ಕೈ ಬೀಸಿ ಕರೆಯುತ್ತಿದ್ದಳು , ನಮ್ಮ ರೂಮಿಗೆ ತೆರಳಿ ನಿದ್ರಾದೇವಿ ಮಡಿಲು ಸೇರಿದೆವು,
|
ಮುಂಜಾವಿನ ದರ್ಶನ ನೀಡಿದ ಕಂದು ಅಳಿಲು |
|
ಕ್ಯಾಮರ ಹೊತ್ತ ಮಂದಿ |
ಮರುದಿನ ಮುಂಜಾವಿನಲ್ಲಿ ಹಕ್ಕಿಗಳ ಹಾಡು ನಮ್ಮನ್ನು ಎಚ್ಚರಗೊಳಿಸಿತು , ರೂಂ ನಿಂದ ಹೊರಗೆ ಬಂದು ನೋಡಿದರೆ ಹೊರಗೆ ಆಗಲೇ ಬೆಳಕಿನ ಚಿತ್ತಾರ ಮೂಡಿತ್ತು, ಮರಗಳ ಮೇಲೆ ಸರ ಸರ ಸದ್ದಾಗಿ ನೋಡಿದರೆ ಅಲ್ಲೊಂದು ಧೈತ್ಯ ಕಂಡು ಅಳಿಲು [malabar giant squirrel ] ಮರದಿಂದ ಮರಕ್ಕೆ ಹಾರುತ್ತಿತ್ತು. ಕ್ಯಾಮರಾಗಳನ್ನು ಸ್ಟಾಂಡ್ ಸಮೇತ ಹೊತ್ತ ಇಬ್ಬರು ಪಕ್ಷಿ ಚಿತ್ರ ತೆಗೆಯಲು ತೆರಳುತ್ತಿದ್ದರು . ಮುಂದಿನ ಪಯಣಕ್ಕೆ ನಮ್ಮ ಸಿದ್ದತೆ ಶುರುವಾಗಿತ್ತು, ಹೌದು ನಮ್ಮ ಬಯಕೆಯಾದ "ರಿವರ್ ರಾಫ್ಟಿಂಗ್ " ನೀರಿನ ಕೊರತೆಯಿಂದ ರದ್ದಾಗಿತ್ತು, ಹಾಗಾಗಿ ಸ್ವಲ್ಪ ನಿರಾಸೆ ಆಯಿತು.
|
ಹರಿಗೊಲಿನ ಸವಾರಿ |
|
ನವಿಲಿನ ನಲಿವು |
ಮುಂಜಾನೆ ಉಪಹಾರ ಸೇವಿಸಿ , ಹೊರಟ ನಾವು ಕಾಳಿನದಿಯ ದಡಕ್ಕೆ ಬಂದೆವು , ನಮಗಾಗಿ ಹರಿಗೊಲಿನ ವ್ಯವಸ್ತೆ ಮಾಡಲಾಗಿತ್ತು, ಕಾಳಿ ನದಿಯಲ್ಲಿ ಹರಿಗೊಲಿನ ತೇಲಾಟದ ಸವಾರಿ ಮುದನೀಡಿತ್ತು, ದಡದಲ್ಲಿ ಕುಳಿತ ಒಂದು ನವಿಲು ನಲಿದಾದಿತ್ತು, ಸುಂದರ ಈ ಸವಾರಿಯನ್ನು ಮಕ್ಕಳು , ದೊಡ್ಡವರು ಎಲ್ಲರೂ ಆನಂದಿಸಿದರು, ಗಣೇಶ್ ಗುಡಿಯ ಪ್ರವಾಸ ನಮ್ಮ ಪಯಣದ ಅಂತಿಮ ಘಟ್ಟ ತಲುಪಿತ್ತು, ಪರಿಸರದ ನಡುವೆ ಮೂರುದಿನ ಮೂರು ಕ್ಷಣಗಳಂತೆ ಕಳೆದು ಹೋಗಿತ್ತು, ಇಲ್ಲಿಗೆ ಉತ್ತರ ಕರ್ನಾಟಕದ ಮತ್ತೊಂದು ಸುಂದರ ಪ್ರವಾಸ ಅರ್ಥಪೂರ್ಣವಾಗಿ ಮುಗಿಯಿತು. ಇಲ್ಲಿಯ ವರೆಗೆ ಈ ಪಯಣದ ಕೊರೆತ ಅನುಭವಿಸಿದ ನಿಮಗೆ ಥ್ಯಾಂಕ್ಸ್, ಮತ್ತೆ ಸಿಗೊನ. ಹೊಸ ವಿಚಾರದೊಂದಿಗೆ .