ಮಧುಕೇಶ್ವರ ದೇವಾಲಯದ
ಪ್ರವೇಶ ದ್ವಾರದ ಸುಂದರ ಆನೆ ಗಳೆರಡು ವೈಭವದ ಜಾಗಕ್ಕೆ ಸ್ವಾಗತ ಕೋರುತ್ತಾ
ನಿಂತಿದ್ದವು. ನಮ್ಮ ಕಾಲುಗಳು ದೇವಾಲಯ ಪ್ರವೇಶ ದ್ವಾರದಲ್ಲಿ ಬಂದು ನಿಂತವು ,
ನನಗರಿವಿಲ್ಲದೆ ನನ್ನ ಕೈಗಳನ್ನು ಮುಗಿದು ನನ್ನ ಕ್ಯಾಮರದಲ್ಲಿ ಪ್ರವೇಶ ದ್ವಾರದಿಂದ
ದೇವಾಲಯದ ಒಳಗಿನ ಚಿತ್ರ ತೆಗೆದೇ. ಒಳಗಡೆ .........ನಿಧಾನವಾಗಿ...........ಭಕ್ತಿ
ಯಿಂದ ......... ನಮ್ಮ ಪಾದಗಳು ಪ್ರವೇಶಿಸಿದ್ದವು ......!!!!!!
|
ಬನ್ನಿ ನಿಮಗೆ ಸ್ವಾಗತ |
ಬನ್ನಿ ಪುರಾಣ ಪ್ರಸಿದ್ದ ಬನವಾಸಿಯ ಐತಿಹಾಸಿಕ ಮಧುಕೇಶ್ವರ ದೇವಾಲಯದೊಳಗೆ ಪ್ರವೇಶಿಸಿದೆವು.ದೇವಾಲಯದ ಒಳ ಆವರಣದಲ್ಲಿ ಕಣ್ಣಿಗೆ ಕಾಣಿಸಿದ್ದು ಎರಡು ಬೃಹತ್ ಕಂಬಗಳ ನೋಟ. ಒಂದು ಕಂಬದಲ್ಲಿ ಕಂಬದ ಮೇಲಿನ ತುದಿಯಲ್ಲಿ ಮಂಟಪ ಇದ್ದು ಅದರೊಳಗೆ ಒಂದು ನಂದಿ ವಿಗ್ರಹ ಸ್ಥಾಪಿಸಲಾಗಿದೆ . ಮತ್ತೊಂದು ಕಂಬದ ಮೇಲಿನ ತುದಿಯಲ್ಲಿ ಮಡಕೆ ಆಕಾರದ ಆಕ್ರುತಿ ಕಾಣಸಿಗುತ್ತದೆ , ಮತ್ತು ಅದೇ ಕಂಬದ ಪೀಠದಲ್ಲಿ ಆನೆ , ನಂದಿ,ಹಾಗು ಲಿಂಗದ ಸುಂದರ ಚಿತ್ರಗಳನ್ನು ಬಿಡಿಸಲಾಗಿದೆ.
|
ಶ್ರೀ ಮಧುಕೇಶ್ವರ ದೇವಾಲಯ |
ಹಾಗೆ ಮುಂದುವರೆದ ನಾವು ದೇವಾಲಯದ ಸಮೀಪ ಬಂದೆವು, 8 ನೆ ಶತಮಾನದ ದೇವಾಲಯವೆಂದು ಹೇಳಲಾಗುವ ಈ ದೇವಾಲಯದಲ್ಲಿ ಪುರಾತನ ಶಿಲ್ಪಿಗಳ ಕೆತ್ತನೆಗಳನ್ನು ಕಾಣಬಹುದು,ಈ ದೇವಾಲದ ಪ್ರದಕ್ಷಣ ಪಥ ,ಒಳಮಂಟಪಗಳು ತಮ್ಮದೇ ಆದ ವಾಸ್ತು ವಿನ್ಯಾಸದಿಂದ ಕಂಗೊಳಿಸುತ್ತಿವೆ .ಕದಂಬರ ಕಾಲದಲ್ಲಿ ಈ ದೇವಾಲಯ ಇಟ್ಟಿಗೆಯಿಂದ ನಿರ್ಮಿತವಾಗಿ , ನಂತರ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆಯೆಂದು ಕೆಲವು ಇತಿಹಾಸ ತಜ್ಞರು ಹೇಳುತ್ತಾರೆ.ಬನ್ನಿ ಈ ದೇವಾಲಯದ ಬಗ್ಗೆ ಪ್ರಾಚ್ಯವಸ್ತು ತಜ್ಞರ ಅಭಿಪ್ರಾಯ ಹೀಗಿದೆ, ಮೂಲತಹ ಈ ದೇವಾಲಯ ವಿಷ್ಣು ದೇವಾಲಯ ಆಗಿತ್ತೆಂದೂ ಕಾಲಾನಂತರ ಇದನ್ನು ಶಿವ ದೇವಾಲಯವಾಗಿಸಲಾಗಿದೆ ಎಂದು ತಮ್ಮ ವೆಬ್ ಸೈಟ್ನಲ್ಲಿ ಮಾಹಿತಿ ನೀಡಿದ್ದಾರೆ. ಮಾಹಿತಿ ಲಿಂಕ್ ಕೆಳಕಂಡಂತೆ ಇದೆ.
The temple is naturally a synthesis of several schools of architecture.
Though presently a Shivalinga of ancient times is there, it is believed
that the original shrine was that of Vishnu. The statues of Kesava
(Vishnu) and Kartikeya are also there, which are attributed to Kadamba
times. There are many smaller idols of different deities, added from
time to time in the renovated temple.[ ಮಾಹಿತಿ ಕೃಪೆ http://www.kamat.com/kalranga/archaeology/banavasi.htm]
ಮಾಹಿತಿ ಏನಾದರೂ ಇರಲಿ ಕೆಲವು ಶತಮಾನಗಳಿಂದ ಇಲ್ಲಿ ಮಧುಕೇಶ್ವರ ನೆಲೆಸಿರುವುದು ನಿಜ.ಮೊದಲು ಯಾವುದೇ ರಾಜ ಯಾವುದೇ ಧರ್ಮ ಬದಲಾವಣೆ ಮಾಡಿದರೆ ಸಹಜವಾಗಿ ದೇವಾಲಯಗಳ ರೂಪದಲ್ಲಿಯೂ ಸಹ ಸಹಜವಾಗಿ ಇದೆ ಬದಲಾವಣೆ ಆಗುತ್ತಿತ್ತು, ಅದನ್ನು ಪ್ರಜೆಗಳೂ ಸಹ ಒಪ್ಪಿಕೊಳ್ಳುತ್ತಿದ್ದರು.
|
ಶ್ರೀ ಮಧುಕೇಶ್ವರ ಸ್ವಾಮೀ |
ದೇವಾಲಯದ ಆವರಣ ಪ್ರವೇಶಿಸಿದ ನಾವು ಒಳ ಪ್ರವೇಶ ಮಾಡಿದೆವು , ಹೆಚ್ಚಿನ ಪ್ರವಾಸಿಗಳು ಇಲ್ಲದ ಕಾರಣ ಗರ್ಭಗುಡಿಯಲ್ಲಿ ಶ್ರೀ ಮಧುಕೇಶ್ವರ ಸ್ವಾಮೀ ದರ್ಶನ ಪಡೆದೆವು. ಅಲ್ಲೇ ಇದ್ದ ಅರ್ಚಕರು ನಗುಮುಖದಿಂದ ಸ್ವಾಗತಿಸಿ ದೇವಾಲಯದ ಇತಿಹಾಸವನ್ನು ತಮಗೆ ತಿಳಿದಿರುವಂತೆ ವಿವರಿಸಿದರು.ಮಂಗಳಾರತಿ ,ಪ್ರಸಾದ ಸ್ವೀಕರಿಸಿದ ನಾವು ಅರ್ಚಕರೊಡನೆ ಹೊರ ಬಂದು ದೇವಾಲಯ ಪರಿಚಯ ಮಾಡಿಕೊಟ್ಟರು.
|
ಮಧುಕೇಶ್ವರ ಸನ್ನಿಧಿ ಯಲ್ಲಿನ ನಂಧಿ |
ಗರ್ಭಗುಡಿಯಿಂದ ಹೊರಗೆ ಬಂದ ನಮಗೆ ಶ್ರೀ ಮಧುಕೇಶ್ವರ ಸ್ವಾಮೀ ಎದುರು ತನ್ನದೇ ಗಾಂಭೀರ್ಯದಿಂದ ನಂದಿ ಕುಳಿತಿತ್ತು.ಅರ್ಚಕರು ಇದರ ಬಗ್ಗೆ ಹೇಳುತ್ತಾ , " ನೋಡಿಸಾರ್ ನಂದಿಯಲ್ಲಿನ ಒಂದು ಕಣ್ಣು [ ಎಡ ಕಣ್ಣು] ಮಧುಕೆಶ್ವರನನ್ನೂ , ಮತ್ತೊಂದು ಕಣ್ಣು [ ಬಲ ಕಣ್ಣು] ಅಮ್ಮನವರ ದರ್ಶನ ಮಾಡುತ್ತಿದೆ ಎಂಬ ವಿಚಾರ ತಿಳಿಸಿದರು.
|
ದೇವಾಲಯದ ಗರ್ಭಗುಡಿಯ ದ್ವಾರದಲ್ಲಿನ ಕಲ್ಲು ಮಂಟಪ |
|
ಕಲ್ಲಿನ ಮಂಟಪದ ಒಳಗೆ ಶಿವ ಪಾರ್ವತಿ |
ಗರ್ಭ ಗುಡಿಯ ಪ್ರವೇಶ ದ್ವಾರದ ಬಲಭಾಗದಲ್ಲಿ ಸುಂದರವಾದ ಒಂದು ಕಲ್ಲಿನ ಮಂಟಪವಿದ್ದು ಅದರ ಒಳಗೆ ಶಿವ ಹಾಗು ಪಾರ್ವತಿ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಇದು ವಿಜಯನಗರ ಕಾಲದ ನಿರ್ಮಾಣವೆಂದೂ ಹೇಳುತ್ತಾರೆ. ಸುತ್ತಲಿನ ಕಂಬಗಳು ಚಾಲುಕ್ಯರ ಕಾಲದ ಶೈಲಿಯನ್ನು ಹೋಲುತ್ತವೆ. ಇದರ ಎದುರು ಸನಿಹದಲ್ಲೇ ಒಂದು ಶಾಸನ ಕಾಣಿಸಿತು.ಹತ್ತಿರ ಹೋಗಿ ನೋಡಿ ಫೋಟೋ ತೆಗೆಯಲು ಆರಂಭಿಸಿದೆ .
|
ಸೋಂದೆ ಅರಸರ ಕಾಲದ ಶಾಸನ |
|
ಕಲ್ಲಿನ ಜಾಲರಿ |
|
ದೇವಾಲಯದ ಕಂಬಗಳು |
|
ಅಮ್ಮನವರ ಸನ್ನಿಧಿ |
ಶಾಸನದಲ್ಲಿ ಸೋಂದೆ ಅರಸರಾದ "ಸದಾಶಿವ ರಾಜೇಂದ್ರ" ರ ಕಾಲದ ಸೇವೆಯನ್ನು ಉಲ್ಲೇಖಿಸಲಾಗಿದೆ. ಶಾಸನದ ಸನಿಹದಲ್ಲೇ ಕಣ್ಣಿಗೆ ಕಾಣುತ್ತದೆ ಸುಂದರವಾದ ಕಲ್ಲಿನ ಜಾಲರಿ ದೇವಾಲಯಕ್ಕೆ ಬೆಳಕಿನ ವ್ಯವಸ್ಥೆ ಬಗ್ಗೆ ನಿರ್ಮಿಸಿರುವ ಈ ಕಲ್ಲಿನ ಜಾಲರಿ ಸುಂದರ ಕೆತ್ತನೆಗಳಿಂದ ಸಿಂಗಾರಗೊಂಡಿದೆ. ದೇಗುಲದ ಸುಂದರ ಕಲ್ಲು ಕಂಬಗಳು ಹಲವು ಶತಮಾನಗಳಿಂದ ದೇವಾಲಯದಲ್ಲಿ ನಿಂತು ಹಿರಿಮೆ ಸಾರುತ್ತಿವೆ.ಒಳ ಆವರಣದಲ್ಲೇ ನಿಮಗೆ ಅಮ್ಮನವರ ದರ್ಶನ ಆಗುತ್ತದೆ.
ಈ ದೇವಾಲಯದ ಹೊರಗೆ ಬಂದರೆ ಅರ್ಚಕರು ದೇವಾಲಯದ ಪುರಾಣ ಹೇಳುತ್ತಾ ಪುರಾಣ ಕಾಲದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಹಾಗು ಕೈಟಭ ಎಂಬ ದೈತ್ಯರನ್ನು ಮಹಾವಿಷ್ಣು
ಸಂಹರಿಸಿದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಹಾಗು
ವರದಾ ನದಿಯ ಇನ್ನೊಂದು ದಡದಲ್ಲಿರುವ ಆನವಟ್ಟಿಯಲ್ಲಿ ಕೈಟಭೇಶ್ವರ ದೇವಾಲಯಗಳು
ಅನಂತರದಲ್ಲಿ ನಿರ್ಮಾಣವಾದವು ಎಂಬ ಮಾಹಿತಿ ನೀಡಿದರು.
|
ಮಧುಕೇಶ್ವರ ದೇವಾಲಯದ ಬಲ ಭಾಗದಲ್ಲಿ ನರಸಿಂಹ ದೇವಾಲಯ. |
ಮಧುಕೇಶ್ವರ ದೇವಾಲಯದ ಹೊರ ಆವರಣಕ್ಕೆ ಬಂದರೆ ಬಲಭಾಗದಲ್ಲಿ ನಿಮಗೆ ಕಾಣ ಸಿಗುವುದು ನರಸಿಂಹ ದೇವಾಲಯ ಹೌದು ಈ ಸ್ಥಳದಲ್ಲಿ ಹರಿ ಹಾಗು ಹರ ಇಬ್ಬರೂ ಸಹ ಅಕ್ಕಪಕ್ಕದಲ್ಲಿ ಈ ದೇವಾಲಯದಲ್ಲಿ ಜೊತೆಯಾಗಿಯೇ ಸೌಹಾರ್ದದಿಂದ ಇದ್ದಾರೆ. ದೇವಾಲಯದ ಗೋಡೆಗಳಲ್ಲಿಯೂ ಸಹ ನೀವು ವಿಷ್ಣು ಹಾಗು ಶಿವನ ಬಗ್ಗೆ ಮೂರ್ತಿಗಳ ಕೆತ್ತನೆ ಕಾಣಬಹುದು.
|
ಮಂಟಪದಲ್ಲಿ ಬಂದಿಯಾದ ಬಳಪ ಕಲ್ಲಿನ ಮಂದಹಾಸನ |
|
ಕಲ್ಲಿನ ಮಂದಹಾಸನದ ಒಂದು ಕಾಲು |
|
ಶೀರ್ಷಿಕೆ ಸೇರಿಸಿ |
ಇಲ್ಲೇ ಸನಿಹದಲ್ಲಿ ದೇವಾಲಯದ ದಕ್ಷಿಣ ಭಾಗದಲ್ಲಿ ಒಂದು ಮನೆಯಲ್ಲಿ ಕಲ್ಲಿನ ಮಂಚವನ್ನು ಕಬ್ಬಿಣ ಗೆಟ್ ನಲ್ಲಿ ಮುಚ್ಚಲಾಗಿದೆ, ಆದರೆ ಮನೆಯ ಒಳಗೆ ಇರುವುದು ನಿಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಬಳಪದ ಕಲ್ಲು ಬಳಸಿ ನಿರ್ಮಿಸಿರುವ ಈ ಮಂಟಪದಲ್ಲಿ ಶಿಲ್ಪಿಯ ಕಲಾ ವೈಭವ ಅಚ್ಚರಿಗೊಳಿಸುತ್ತದೆ. ಪ್ರತೀ ಕಂಬದಲ್ಲಿಯೂ ಕುದುರೆ,ಆನೆ, ಸಿಂಹ, ಗಿಳಿ, ಹೂ, ಮುಂತಾದ ಚಿತ್ರಗಳನ್ನು ಮೂಡಿಸಿ ಶಿಲ್ಪಿ ತನ್ನ ಕಲಾವಂತಿಕೆಯನ್ನು ಸುಂದರವಾಗಿ ಅನಾವರಣಗೊಳಿಸಿದ್ದಾನೆ ಈ ಕಲ್ಲಿನ ಮಂಚವನ್ನು .ಸೊಂದೆಯ "ರಘುನಾಥ ನಾಯಕರು" ದೇವಾಲಯಕ್ಕೆ ವಸಂತ ಋತುವಿನ ಪೂಜೆಗಾಗಿ ಸಮರ್ಪಣೆ ಮಾಡಿದುದಾಗಿ ತಿಳಿಸುತ್ತಾರೆ.ಅದರ ಮೇಲಿನ ಶಾಸನ 1628 ಎಂದು ತಿಳಿಸುತ್ತದೆ.
|
ದೇವಾಲಯದ ಗೋಡೆಯ ಮೇಲಿನ ಸುಂದರ ಚಿತ್ತಾರ. |
|
ಪ್ರತೀ ಶಿಲ್ಪವೂ ಒಂದು ಪುರಾಣ ಕಥೆಯನ್ನು ಹೇಳುತ್ತದೆ |
|
|
|
|
|
|
ದರ್ಶನ ನೀಡಿದ ಅರ್ಧ ಗಣಪತಿ |
ಕ್ಯಾಮಾರಾ ಹಿಡಿದು ದೇವಾಲಯದ ಹೊರ ಆವರಣದ ಪ್ರದಕ್ಷಿಣಾ ಪಥದಲ್ಲಿ ಹೋರಟ ನನಗೆ ದೇವಾಲಯದ ಗೋಡೆಯ ಮೇಲೆ ಆಕರ್ಷಕ ಚಿತ್ತಾರಗಳ ದರ್ಶನವಾಯಿತು , ಪುರಾಣ ಕಥೆಗಳ ಸನ್ನಿವೇಶಗಳಿಗೆ ಅನುಗುಣವಾಗಿ ಈ ದೃಶ್ಯವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಮೇಲಿನ ಚಿತ್ರಗಳಲ್ಲಿ ವಿವಿಧ ಕೋನಗಳಿಂದ ನೋಡಿದರೆ ಒಂದೊಂದು ರೀತಿ ಕಾಣುವ ಕೆಲವು ವಿಶೇಷ ಮೂರ್ತಿಗಳು ಗೋಚರಿಸಿದವು. ಹಾಗೆ ಗಮನಕ್ಕೆ ಬಂದ ಮತ್ತೊಂದು ಸಂಗತಿ ಎಂದರೆ ದೇವಾಲಯದ ಸುತ್ತಾ ಒಳ ಆವರಣದಲ್ಲಿ ಸಣ್ಣ ಸಣ್ಣ ಗುಡಿಗಳನ್ನು ನಿರ್ಮಿಸಿ ನಮ್ಮ ದೇಶದ ಪ್ರಸಿದ್ಧ ದೇವರುಗಳನ್ನು ಪ್ರತಿಷ್ಠಾಪಿಸಿದ್ದಾರೆ , ಇಂದ್ರ, ಸೂರ್ಯ, ಮುಂತಾದ ಆಲಯಗಳು ಇಲ್ಲಿವೆ, ನನಗೆ ಅಚ್ಚರಿ ತಂದಿದ್ದು ಅರ್ಧ ಭಾಗ ಮಾತ್ರ ಇರುವ ಗಣಪತಿ. ಇದರ ಬಗೆ ಹೆಚ್ಚಿನ ವಿವರ ದೊರೆಯಲಿಲ್ಲ.
|
ದೇವಾಲಯದ ಒಳಗಿಂದ ಕಾಣುವ ಹೊರಗಿನ ನೋಟ. |
ತೃಪ್ತಿಯಾಗಿ ದೇವಾಲಯ ದರ್ಶನ ಮಾಡಿದ ನಾವುಗಳು ಹೊರಡಲು ಸಿದ್ಧನಾದೆವು. ಹರ್ಷನನ್ನು ಕುರಿತು, " ಏನ್ರೀ ಇದು ಬನವಾಸಿಯಲ್ಲಿ ಪಂಪನ ಬಗ್ಗೆ ಯಾವುದೇ ಸ್ಮಾರಕ, ಸ್ಥಳ , ಮನೆ, ಮುಂತಾದ ಯಾವುದೂ ಇಲ್ಲವೆನ್ರೀ" ಅಂತಾ ಕೇಳಿದೆ. ಹರ್ಷ "ನನಗೆ ಗೊತ್ತಿಲ್ಲಾ ಸಾರ್ ಯಾರನ್ನಾದರೂ ಕೇಳಬೇಕು" ಎಂಬ ಉತ್ತರ ಹೇಳಿ ಸುಮ್ಮನಾದ. ಕೋಟೆ ಕೊತ್ತಲಗಳ ಅವಶೇಷ ಏನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಕೆದುಕಲು ಸಾಧ್ಯವಾ ಅಂತಾ ಯೋಚಿಸಿ ಸಿಕ್ಕ ಕೆಲವು ಸ್ಥಳಿಯರನ್ನು ಪಂಪ, ಮಯೂರ, ಕೋಟೆ, ಇವುಗಳ ಬಗ್ಗೆ ವಿಚಾರಿಸಿದಾಗ ಸಿಕ್ಕ ಉತ್ತರ ಅವುಗಳು ಬನವಾಸಿಯಲ್ಲಿ ಇದ್ದವೇ ?? ಯಾವಾಗ ???ಅಂತಾ ಕೆಲವರು ಅಂದರೆ , ಮತ್ತೆ ಕೆಲವರು "ಇಲ್ಲಾ ಸಾರ್ ನಮಗೆ ಗೊತ್ತಿಲ್ಲಾ ' ಎಂದರು . ಈ ಬಗ್ಗೆ ಸಂಶೋಧಕರ ಉತ್ತರವೂ ಸಹ ಇದೆ ಆಗಿದೆ. ಹೌದು ಬನವಾಸಿಯಲ್ಲಿ ಮಯೂರವರ್ಮ , ಪಂಪ ರ ಬಗ್ಗೆ ಯಾವುದೇ ಕುರುಹು ನಿಮಗೆ ಸಿಗದು, ಹಾಗೂ ಕೋಟೆ ಕೊತ್ತಲ ಇದ್ದ ಬಗ್ಗೆ ಯಾವುದೇ ಕುರುಹು ಇಲ್ಲಾ. ಅದನ್ನು ಹುಡುಕಲು ಕನ್ನಡಿಗರು ಮುಂದಾಗಬೇಕಿದೆ.ಅಲ್ಲಿಯವರೆಗೂ ಬನವಾಸಿಯ ಆದಿಕವಿ ಪಂಪ ಮಕ್ಕಳ ಶಾಲಾ ಪುಸ್ತಕಗಳಲ್ಲಿ,, ಮಯೂರ ಚಲನ ಚಿತ್ರಗಳಲ್ಲಿ , ಮಾತ್ರ ಕಾಣಸಿಗುತ್ತಾರೆ. ಇನ್ನು ಕೋಟೆ ಕೊತ್ತಲ ಕನಸಿಗೆ ಮಾತ್ರ ಸೀಮಿತ . ಹೌದು ಇದು ನಿಜಕ್ಕೂ ನೋವಿನ
ಸಂಗತಿ. ದೇವಾಲಯದಿಂದ ಹೊರ ಬಂದ ನಾವು ಸ್ವಲ್ಪ ಸಮಯ ಬನವಾಸಿಯ ಊರೊಳಗೆ ಅಲೆದಾಡಿ
ಸಿರ್ಸಿ ಹಾದಿ ಹಿಡಿದೆವು.ಕನ್ನಡ ಕನ್ನಡ ಎಂದು ಕೊಗಾಡುವ ನಾವು ಇದರಬಗ್ಗೆ ಯೋಚಿಸಬೇಕಾಗಿದೆ.
|
ಬನವಾಸಿಯಿಂದ ಸಿರ್ಸಿ ಕಡೆಗೆ ಸಾಗುವ ಹಾದಿ |
|
ಹಾದಿಯಲ್ಲಿ ಕಂಡ ದೃಶ್ಯ |
|
ಕೋಗಿಲೆ ಯಾಗಿ ಅಲ್ಲದಿದ್ದರೂ ಕಾಗೆಯಾಗಿಯಾದರೂ ಹುಟ್ಟಿ ಬನವಾಸಿಯನ್ನು ನೆನೆಯೋಣ. |
ಸಿರ್ಸಿ ಹಾದಿಯಲ್ಲಿ ಹಸಿರ ಸಿರಿಯ ನಡುವೆ ಮಲಗಿದ್ದ ರಸ್ತೆಯಲ್ಲಿ ನಮ್ಮ ಹರ್ಷನ ಬೈಕ್ ಸಾಗಿತ್ತು, ನಾನು ಕ್ಯಾಮರಾ ಹಿಡಿದು ದಾರಿಯಲ್ಲಿ ಏನಾದರೂ ಸಿಗುವುದೇ ಎಂಬ ಆಸೆಯಿಂದ ಫೋಟೋ ಕ್ಲಿಕ್ಕಿಸುತ್ತಾ ಸಾಗಿದೆ ಅಲ್ಲೇ ರಸ್ತೆಯ ಪಕ್ಕದ ಗದ್ದೆಯಲ್ಲಿ ಹುಡುಗನೊಬ್ಬ ಮೇಯುತ್ತಿದ್ದ ಹಸುವಿಗೆ ಕಲ್ಲು ಹೊಡೆಯುತ್ತಿದ್ದ. ಹಸುವಿನಂತಾ ಇತಿಹಾಸಕ್ಕೆ ಕಲ್ಲು ಹೊಡೆಯುವ[ಅ ] ನಾಗರೀಕ ಸಮಾಜ ನಮ್ಮದು ಅಂತಾ ಅನ್ನಿಸಿತು. ಅಲ್ಲೇ ಸನಿಹದಲ್ಲಿ ಮರದ ಮೇಲೆ ಕುಳಿತಿದ್ದ ಕಾಗೆ ಕಾ ಕಾ ಅಂತಾ ಕೂಗುತ್ತಾ ಕುಳಿತಿತ್ತು. ನಮ್ಮ ಬೈಕ್ ಶಿರಸಿಯತ್ತ ಸಾಗಿತ್ತು ಆ ಸಮಯದಲ್ಲಿ ಪಡುವಣದಲ್ಲಿ ಸೂರ್ಯಾಸ್ತ ಆಗುವ ಸಮಯ ಹತ್ತಿರವಾಗುತ್ತಿತ್ತು................!!!!!!