Sunday, July 17, 2011

ಚುಮು ಚುಮು ಚಳಿಯಲ್ಲಿ ಇನ್ನಷ್ಟು ನೋಟ !!! ಸಂಜೆಯಲ್ಲಿ ಅಂತಿಮ ವಿರಾಮ..ಪಯಣ ..07


ಹೌದು  ಕಳೆದ  ಆರು  ಸಂಚಿಕೆಯಿಂದ ಬಿಳಿಗಿರಿ ರಂಗನ ಬೆಟ್ಟ ಪ್ರವಾಸದ ಪಯಣದಲ್ಲಿ ಭಾಗವಹಿಸಿ ಸುಸ್ತಾಗಿದ್ದೀರಿ,  ಈಗಾಗಲೇ ಬೆಟ್ಟದಲ್ಲಿ ನೋಡ ಬೇಕಾದ ಬಹಳಷ್ಟು ಸ್ಥಳಗಳನ್ನು ದರ್ಶಿಸಿದ್ದೀರಿ ,  ಇನ್ನು ಉಳಿದಿರುವ ಕೆಲವೇ ದರ್ಶನ ಯೋಗ್ಯವಾದ ಸ್ಥಳಗಳ ಪರಿಚಯ ಮಾಡಿಕೊಂಡು ಇಲ್ಲಿಂದ ವಿರಮಿಸೋಣ. ಬಿಳಿಗಿರಿ ರಂಗನ ಬೆಟ್ಟದಲ್ಲಿ  ಉಳಿಯಲು ಹಲವಾರು ಇಲಾಖೆಗಳ ವಸತಿ ಗೃಹಗಳು ಇವೆ, ಅವುಗಳು ರಜದ ದಿನಗಳಲ್ಲಿ ಸಿಗುವುದು ಕಷ್ಟ ಅದಕ್ಕೆ ನೀವು ರಜ ಇಲ್ಲದ ದಿನಗಳಲ್ಲಿ ಹೋದರೆ ನಿಮ್ಮ ಪ್ರವಾಸ ಉತ್ತಮವಾಗಿರುತ್ತದೆ.  ಮುಂಜಾವಿನ ಮಬ್ಬಿನಲಿ ವಾಕಿಂಗ್ ಹೊರಟರೆ ನಿಮಗೆ ಆಗುವ ಅನುಭವ , ಮನಸ್ಸಿಗೆ ಆಗುವ ಉತ್ಸಾಹದ ಉಲ್ಲಾಸ ವರ್ಣಿಸಲು ಅಸದಳ.
ಮಂಜಿನ ಮುಸುಕು ಹೊದ್ದ ಪರಿಸರ
ಮಂಜು ಮುಸುಕಿದ ಹಾದಿಯ ನೋಟ

ಮುಂಜಾನೆಯ ಮಂಜಿನ ಮಳೆಯಲ್ಲಿ ನಡಿಗೆ

ಮಂಜಿನ ಲೋಕದಲ್ಲಿ ನಿಮಗೆ ಸುಂದರ ಪ್ರಕೃತಿಯ ದರ್ಶನ ಭಾಗ್ಯ ಲಭಿಸುತ್ತದೆ.   ಹಾಗುಹೀಗೂ ಸೂರ್ಯ ಕಿರಣಗಳು ಮಂಜಿನ ಪರದೆಯನ್ನು ಹರಿದು ಬೆಳಕ ಚೆಲ್ಲಲು ಹೊರಟಾಗ ನಿಮಗೆ ವಿಸ್ಮಯ ಲೋಕದ ದರ್ಶನವಾಗುತ್ತದೆ.
ಮುಂಜಾವಿನ ನೋಟ 
ಮುಂಜಾವಿನ ರಮ್ಯ ನೋಟ.

ಕೆಲವೊಮ್ಮೆ ನೀವೇ ಸ್ವರ್ಗ ಲೋಕದಲ್ಲಿ ರುವ ಭಾವನೆ ಮೂಡುತ್ತದೆ ನೀವು ಛಾಯಾಗ್ರಾಹಕರಾಗಿದ್ದರಂತೂ ನಿಮ್ಮ ಕ್ಯಾಮರಾಗೆ ಈ ಸುಂದರ ನೋಟ ಕ್ಲಿಕ್ಕಿಸುವ ಅವಕಾಶ ಖಂಡಿತ ಸಿಗುತ್ತದೆ . ಬನ್ನಿ ಇಲ್ಲೇ ಹತ್ತಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮೀ ಸನ್ನಿಧಿ ಇದೆ ಅಲ್ಲಿಗೆ ಹೋಗೋಣ.ಈ ರಾಘವೇಂದ್ರ ಸ್ವಾಮೀ ಆಲಯವನ್ನು 12 -07 - 1975  ರಲ್ಲಿ  ಸೋಸಲೆ ಶ್ರೀ ಗಳು ಪ್ರತಿಷ್ಟಾಪಿಸಿದರೆಂದು ತಿಳಿಯುತ್ತದೆ
ರಾಘವೇಂದ್ರ ಸ್ವಾಮೀ ಆಲಯ 

ಸುಂದರ ದೇವಾಲಯ ಸುಂದರ ಮೂರ್ತಿಗಳು, ಹಾಗು ನಿಶ್ಯಬ್ದ ವಾತಾವರಣ  ನಿಮ್ಮನ್ನು ಶಾಂತ ಚಿತ್ತರನ್ನಾಗಿ ಮಾಡುತ್ತವೆ. ದರ್ಶನ  ಮುಗಿಸಿ ಹೊರಬನ್ನಿ , ಇಲ್ಲೇ ಸಮೀಪದಲ್ಲೇ ಇದೆ ಗಂಗಾಧರೇಶ್ವರ ದೇವಾಲಯ 
ಗಂಗಾಧರೇಶ್ವರ ದೇವಾಲಯ.

ಭಸ್ಮಾಸುರ ನಿಂದ ಪೀಡಿತನಾದ  ಶಿವನು ವಿಷ್ಣು ವಿನ ಅನುಗ್ರಹದಿಂದ ಮುಕ್ತ ನಾಗಿ  ವಿಷ್ಣುವನ್ನು ಪೂಜಿಸುತ್ತಾಬಿಳಿಗಿರಿರಂಗನ ಬೆಟ್ಟದಲ್ಲಿ  ನೆಲೆಸಿದನೆಂದುಹೇಳುವ ಈ ದೇವಾಲಯ ಇಲ್ಲಿದೆ.  ಇಷ್ಟನ್ನು ನೋಡಿ ಹೊಟ್ಟೆ ಚುರುಗುತ್ತಿದೆ ಅಲ್ವೇ . ಬನ್ನಿ ಬಿಳಿಗಿರಿ ರಂಗನ ಬೆಟ್ಟದಲ್ಲಿ  ಹಲವು ವರ್ಷಗಳಿಂದ  ಯಾತ್ರಿಗಳಿಗೆ ಹಸಿವು ತಣಿಸುವ "ಗಿರಿ ದರ್ಶಿನಿ" ಹೋಟೆಲಿಗೆ ಹೋಗೋಣ.
ಗಿರಿ ದರ್ಶಿನಿ ಹೋಟೆಲ್
ಈ ಹೋಟೆಲಿನಲ್ಲಿ ಕಡಿಮೆ ಬೆಲೆಯಲ್ಲಿ ಶುಚಿಯಾದ ರುಚಿಯಾದ ಊಟ ತಿಂಡಿ ಯನ್ನು ಯಾತ್ರಿಗಳಿಗೆ ನೀಡುತ್ತಾರೆ , ಮಾಲೀಕ ಶಂಕರಪ್ಪ ರವರು ಬಹಳ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಸೇವೆಗೆ ಮಕ್ಕಳಾದ ವಾಸು , ಹಾಗು ಗುರು ಸಾತ್ ನೀಡಿದ್ದಾರೆ . ಸೌದೆ ವಲೆಯಲ್ಲಿ ತಯಾರಾಗುವ ಊಟ ತಿಂಡಿ ಗಳು ಆರೋಗ್ಯ ಕರವಾಗಿ  ನಿಮ್ಮ ಹಸಿವನ್ನು ನೀಗಿಸುತ್ತವೆ . ಈ ಪ್ರದೇಶ ಗಿರಿ ಧಾಮ ಆಗಿರುವ ಕಾರಣ ನೀವು ಪ್ರತಿ ನಿತ್ಯ ತೆಗೆದುಕೊಳ್ಳುವ ಆಹಾರಕ್ಕಿಂತ ಜಾಸ್ತಿಯಾಗಿ  ತಿನ್ನುವುದಂತೂ ನಿಜ ,   ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದರೆ ಗಿರಿ ದರ್ಶಿನಿಯಲ್ಲಿ ತಿಂಡಿ, ಊಟ ಮಾಡದೆ ಬರಬೇಡಿ .  ಊಟವಾಯಿತೇ ಬನ್ನಿ ಸ್ವಲ್ಪ ವಿಶ್ರಾಂತಿ ಪಡೆದು , ವಿರಮಿಸೋಣ.  ಅದ್ಸರಿ ನೀವು ಇಲ್ಲಿ ಜೇನುತುಪ್ಪ ಸವಿದಿದ್ದೀರಾ  ಅರೆ ಬನ್ನಿ ಬನ್ನಿ ಬಿಳಿಗಿರಿಯ ಜೇನು, ಸೊಗದೆ  ಬೇರಿನ ಶರಬತ್ತು,  ಸೀಗೆ ಪುಡಿ,  ನೆಲ್ಲಿಕಾಯಿ , ಚಕ್ಕೋತ ಹಣ್ಣು, ಕೆಂಡ ಸಂಪಿಗೆ ಹೂವು  ಪ್ರಸಿದ್ಧಿ  ಇಲ್ಲಿಗೆ ಬಂದ ನೆನಪಿಗೆ  ನಿಮಗೆ ಬೇಕಾದದ್ದನ್ನು ಖರೀದಿಸಿರಿ  ಗಿರಿಜನ ಕೇಂದ್ರ,    "ಗಿರಿ ದರ್ಶಿನಿ"  ಹಾಗು ಹಲವು ಕಡೆ ಯಲ್ಲಿ  ಸಿಗುತ್ತದೆ.  ಸಂಜೆಯನ್ನು  ಹತ್ತಿರದಲ್ಲಿರುವ ಕೆರೆಯಲ್ಲಿ ಕಳೆಯೋಣ ಸುಂದರ ಸೂರ್ಯಾಸ್ತ ದೃಶ್ಯವನ್ನು ನೋಡೋಣ. 
ಎಂಥಹ ಸುಂದರ ದೃಶ್ಯ ಆಲ್ವಾ.   ಅರೆ ಇದೇನಿದು !!! ಕತ್ತಲೆ ಆಯ್ತು ಕಾಡಿನ ಹಾದಿ ಚೆಕ್  ಪೋಸ್ಟುಗಳು ಮುಚ್ಚಿರುತ್ತವೆ  ಇಲ್ಲೇ  ಉಳಿದು  ಮುಂದೆ ದೊಡ್ಡ ಸಂಪಿಗೆ , ಕೆ.ಗುಡಿ ನೋಡಲು ಹೋಗೋಣ. ಮುಂದಿನ ಸಂಚಿಕೆಯಲ್ಲಿ  ಅಂತಿಮ ಚರಣ . ನಮಸ್ಕಾರ

6 comments:

sunaath said...

ಬಾಲು,
ಅದ್ಭುತ ಫೋಟೋಗಳನ್ನು ತೆಗೆದಿರುವಿರಿ. ವಿಶೇಷವಾಗಿ, ಮಂಜಿನ ದೃಶ್ಯಗಳು ಮನವನ್ನು ಸೆರೆ ಹಿಡಿಯುತ್ತವೆ. ಇದೇ ಭೂಸ್ವರ್ಗ ಅನ್ನಿಸಿತು.
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

Sandeep.K.B said...

ಸೂಪರ್ ವರ್ಣನೆ ....

ಸುಬ್ರಮಣ್ಯ ಮಾಚಿಕೊಪ್ಪ said...

ಇಲ್ಲ ಇಲ್ಲಾ. ಒಮ್ಮೆಯಾದರೂ ಅಲ್ಲಿಗೆ ಹೋಗಲೇಬೇಕು!!!

ಶಿವಪ್ರಕಾಶ್ said...

Thanks for the biligiri rangana betta series..
Very useful information sir..
waiting for next part of it :)

ಸೀತಾರಾಮ. ಕೆ. / SITARAM.K said...

ಬಿಳಿಗಿರಿ ಬೆಟ್ಟದ ಪರಿಚಯವನ್ನೂ ತುಂಬಾ ಚೆನ್ನಾಗಿ ಮಾಡಿಸುತ್ತಿರುವಿರಿ ಜೊತೆಗೆ ಸುಂದರ ಚಿತ್ರಗಳಿಂದ ದರ್ಶನವನ್ನು ಮಾಡಿಸುತ್ತಿರುವಿರಿ, ಧನ್ಯವಾದಗಳು.

VENU VINOD said...

ಚೆನ್ನಾಗಿತ್ತು ನಿಮ್ಮ ಬಿಳಿಗಿರಿ ರಂಗನ ಬೆಟ್ಟದ ಸಮಗ್ರ ದರ್ಶನ..ನಿಮ್ಮ ಫೋಟೋಗ್ರಫಿ ಕೂಡಾ ಚೆನ್ನಾಗಿದೆ ಬಾಲು...