Sunday, June 26, 2011

ಬಿಳಿಗಿರಿ ಕಾನನದಲ್ಲಿ ಮೌನವಾಗಿ ಇದ್ದರು !!!! ಇವರೇ ಸ್ವಾಮಿ ಅಲ್ಲದ ಸ್ವಾಮಿ ನಿರ್ಮಲಾನಂದ !!!!!!! ಪಯಣ ...4ಅರೆ ಇದೇನು ಸ್ವಾಮೀಜಿಯಬಗ್ಗೆ ಅಂತೀರಾ !!!! ಹೌದು ಇವಾಗ ಎಲ್ಲೆಲ್ಲೂ ಸ್ವಾಮಿಜಿಗಳದ್ದೆ ಸುದ್ದಿ.ಆದರೆ ಇಲ್ಲೊಬ್ಬ ಸ್ವಾಮಿಜೀ ಮೌನವಾಗಿ ಇದ್ದು  ಶಿಷ್ಯರಿಲ್ಲದೆ ಬರೀ ಗೆಳೆಯರೊಡನೆ ಸಂಪರ್ಕ ಇಟ್ಟುಕೊಂಡು , ಅಂತರಾಷ್ಟ್ರೀಯ ಮಟ್ಟದಲ್ಲಿ ಮೌನವಾಗಿಯೇ ಸುದ್ದಿ ಮಾಡಿ ವನಸುಮದಂತೆ ಇದ್ದು ಮರೆಯಾದರು.ಇವರು ಮನಸ್ಸು ಮಾಡಿದ್ದರೆ ಬೇರೆ ಸ್ವಾಮಿಜಿಗಳಂತೆ ಮೆರೆಯ ಬಹುದಿತ್ತು ಆದರೆ ತನ್ನದೇ ಹಾದಿಯಲ್ಲಿ ಕಾಡಿನೊಳಗೆ ಇದ್ದುಕೊಂಡೇ ಸಾಧಿಸಿ ಮರೆಯಾದರು.                                                                       
ಸ್ವಚ್ಛವಾದ  ಪರಿಸರದ ಸ್ವಾಗತ ನಿಮಗೆ.

ಬನ್ನಿ ನಮ್ಮ ಪಯಣದ ಇಂದಿನ ಭೇಟಿ ಒಂದು ಆಶ್ರಮಕ್ಕೆ ಅಲ್ಲಿಗೆ  ಹೋಗೋಣ. ನಾನು ಬಹಳಷ್ಟು ಸಾರಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದರೂ ಇಲ್ಲಿಗೆ ಬಂದಿರಲಿಲ್ಲ . ದಾರಿಯಲ್ಲಿ ಆಶ್ರಮದ ಬಾಗಿಲು ಕಂಡರೂ ಆಸಕ್ತಿ ಯಿಲ್ಲದೆ ಇಲ್ಲಿಗೆ ಬಾರದೆ ಹೊರಟು ಬಿಡುತ್ತಿದ್ದೆ . ಒಮ್ಮೆ ಗೆಳೆಯರೊಬ್ಬರು ಬಲವಂತವಾಗಿ ಇಲ್ಲಿಗೆ ಕರೆದುಕೊಂಡು ಬಂದರು  ನಾನು ಇಲ್ಲಿಗೆ ಬರುವ ವೇಳೆಗಾಗಲೇ ಸ್ವಾಮೀ ನಿರ್ಮಲಾನಂದ ಇಹ ಲೋಕದಿಂದ ಹೊರಟು ಹೋಗಿದ್ದರು . ಆದರೆ ಇಲ್ಲಿನ ಪರಿಸರದ ಚಿತ್ರ ಕ್ಲಿಕ್ಕಿಸುತ್ತಾ ಸುಮ್ಮನೆ ಅಡ್ಡಾಡಿದ ಅನುಭವ ಮೊದಲನೆಯದು. ನಂತರ ಇಲ್ಲಿನ ನಿಶಬ್ದ ವಾತಾವರಣಕ್ಕೆ ಮನಸೋತು ಹಲವು ಬಾರಿ ಬಂದಾಗ ಇಲ್ಲಿನ ವಿಸ್ಮಯದ ಬಗ್ಗೆ ಆಸಕ್ತಿ ಮೂಡಿ ವಿಚಾರ ತಿಳಿಯಿತು . ಬನ್ನಿ ಸ್ವಾಮೀ,                                 "ನಿರ್ಮಲಾನಂದ ಸ್ವಾಮೀ "ಯಾರು ಎಂದು ತಿಳಿಯೋಣ.                                             

                                                 
1924 ರ ಡಿಸೆಂಬರ್ ನಲ್ಲಿ ಕೇರಳದಲ್ಲಿ ಬಾಲಕೃಷ್ಣನ್[ಸ್ವಾಮೀ ನಿರ್ಮಲಾನಂದರ ಮೊದಲ ಹೆಸರು ] ಎಂಬ ಮಗುವಿನ ಜನನವಾಗುತ್ತದೆ, ಬಾಲ್ಯ ಕಳೆದ ಆ ಜೀವ  ಇಪ್ಪತ್ತು ವರ್ಷ ಕ್ಕೆ ಕಾಲಿಟ್ಟ ಆ ಸಮಯದಲ್ಲಿ  ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ  1943 ರಲ್ಲಿ  ಸೈನಿಕರಾಗಿ ಸೇರುತ್ತಾರೆ ಅಲ್ಲಿನ ಸೈನಿಕ ಅಂಚೆ ಇಲಾಖೆಯ ಸೇವೆ ಇವರದು,ಎರಡನೇ ಮಹಾಯುದ್ದ ನಡೆದಾಗ ಇವರ ಸೇವೆ ನಾಲ್ಕು ವರುಷಗಳ  ಕಾಲ ಯೂರೋಪ್ ನಲ್ಲಿ ಮುಂದುವರೆಯಿತು. ಎರಡನೇ ಮಹಾಯುದ್ದದ ಭೀಕರತೆ ,ರಕ್ತಪಾತ ವನ್ನು ಹತ್ತಿರದಿಂದ ಕಂಡ ಇವರು ಶಾಂತಿ ಜೀವನದತ್ತ ಮುಖ ತಿರುಗಿಸಲು ಪ್ರೇರಣೆಯಾಗುತ್ತದೆ. ಭಾರತಕ್ಕೆ ಬಂದ ಇವರು ಅಧ್ಯಯನ ಮುಂದುವರೆಸಿ "ಟಾಲ್ ಸ್ಟಾಯ್", "ತೋರೋ", "ಮಹಾತ್ಮಾ ಗಾಂಧೀ" "ರಾಮಕೃಷ್ಣ ಪರಮ ಹಂಸ" "ವಿವೇಕಾನಂದ"  ಇವರ ಬದುಕು ಬೋದನೆಗಳ ಪ್ರಭಾವಕ್ಕೆ  ಮನಸ್ಸು ಕೊಡುತ್ತಾರೆ ಹಾಗು ಇವುಗಳಿಂದ ಪ್ರಭಾವಿತರಾಗುತ್ತಾರೆ.ನಂತರ ಭಾರತದ ಉದ್ದಗಲಕ್ಕೂ ಸಂಚರಿಸಿ ದೇಶವನ್ನು  ಅರಿತುಕೊಳ್ಳುವ  ಕಾರ್ಯ ಮಾಡುತ್ತಾರೆ.ಈ ವೇಳೆಯಲ್ಲಿ ಹಲವಾರು ಸಾಧು , ಸಂತರು, ಕ್ರಿಶ್ಚಿಯನ್ ಪಾದ್ರಿಗಳು, ಫಕೀರರು, ಗಳ ಪರಿಚಯವಾಗಿ ಅವರ ವಿಚಾರ ಧಾರೆ   ಅರಿತುಕೊಳ್ಳುತ್ತಾರೆ. "ವಿನೋಬಾ ಭಾವೆ  'ಯವರ "ಭೂಧಾನ"ಚಳುವಳಿಯಲ್ಲಿ ಭಾಗವಹಿಸಿ     ತಮ್ಮತನ   ಮೆರೆಯುತ್ತಾರೆ. ಇದಾದ ಮೇಲೆ 1959 ರಿಂದ 1964 ವರೆಗೆ ಮತ್ತೊಮ್ಮೆ ಯೂರೋಪ್ , ಮಧ್ಯ ಪ್ರಾಚ್ಯ ,ಅಮೇರಿಕಾ ಜಪಾನ್ ರಾಷ್ಟ್ರಗಳಿಗೆ ಪ್ರವಾಸ ಮಾಡುತ್ತಾರೆ. ಆ ಸಮಯದಲ್ಲಿ ವಿಶ್ವದ ಹಲವಾರು ದೇಶಗಳಲ್ಲಿ   ಚಾಲ್ತಿಯಲ್ಲಿದ್ದ ಹಲವು ಧರ್ಮಗಳ,ಬಗ್ಗೆ , ದಾರ್ಶನಿಕರ  ಬಗ್ಗೆ ಅರಿತುಕೊಳ್ಳುತ್ತಾರೆ . ನಂತರ ವಾಪಸ್ಸು ತಾಯ್ನಾಡಿಗೆ ಬಂದುನೆಲೆಸಲು ನಿರ್ಧರಿಸಿ 1964 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರಿಗೆ ಬಂದು ಅಲ್ಲಿ ಪ್ರಸಿದ್ದ  ಸ್ವಾತಂತ್ರ ಹೋರಾಟಗಾರ '' ತಗಡೂರು ಶ್ರೀ ರಾಮಚಂದ್ರ ರಾಯ" ರನ್ನು ಭೇಟಿ ಮಾಡಿ ಕೆಲ ಕಾಲ ಅಲ್ಲಿಯೇ ನೆಲೆಸುತ್ತಾರೆ.ನಂತರ ಅಂದು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಜ್ಜನರಾಗಿದ್ದ" ಶ್ರೀ  ಬಿ .ರಾಚಯ್ಯ " ರವರ ಸಹಕಾರದಿಂದ  ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆನಿಂತು  ಆಶ್ರಮ ಕಟ್ಟುತ್ತಾರೆ .                                          
ಶೀರ್ಷಿಕೆ ಸೇರಿಸಿ
   ಮುಂದಿನ ಹಾದಿ  ನಿಶಬ್ದವಾಗಿ ನಿರಂತರ ಹನ್ನೊಂದು ವರುಷಗಳ ಮೌನ ವ್ರತ ಆಚರಣೆ . ಮೌನವಾಗಿಯೇಇವರು ಪತ್ರಗಳ ಮೂಲಕ ಜಗತ್ತಿನ  ಪ್ರಮುಖ ವ್ಯಕ್ತಿಗಳ ಒಡನಾಟ ಇಟ್ಟು ಕೊಂಡಿದ್ದರು. ಅಂತರಾಷ್ಟ್ರೀಯ ಮುಖಂಡರಾಗಿದ್ದ  ಹಲವಾರು ದೇಶಗಳ  ಮುಖಂಡರೊಂದಿಗೆ  ಪತ್ರ ವ್ಯವಹಾರ ಇತ್ತು. ತನ್ನ ಆಶ್ರಮದಲ್ಲಿ , ಟಿ.ವಿ. ,ಟೆಲೆಫೋನ್,  ಯಾವುದೇ ಸಂಪರ್ಕ ವಿಲ್ಲದೆ  ಬರಿ ಪತ್ರ ಬರೆಯುವ ಮೂಲಕ  ಹೊರ ಪ್ರಪಂಚದ ಸಂಪರ್ಕ ಇಟ್ಟುಕೊಂಡಿದ್ದರು. ಈ ಸಮಯ ದಲ್ಲಿ ಹಲವಾರು ಪುಸ್ತಕಗಳನ್ನು ಬರೆದ ಇವರು ಜಗತ್ತಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.ಇವರು ಬರೆದ ಪುಸ್ತಕ ಗಳಲ್ಲಿ   "  A GARLAND OF FOREST FLOWERS "   ಪುಸ್ತಕ  ಜಗತ್ತಿನಲ್ಲಿ ಪ್ರಸಿದ್ದಿ ಪಡೆದು ಅಂತರಾಷ್ಟ್ರ್ರೀಯ  ಮನ್ನಣೆ ಪಡೆದಿದೆ.  ಇವರ ಈ  ಕಾರ್ಯ ವನ್ನು ಗುರುತಿಸಿರುವ ವಿಶ್ವ ಇವರಿಗೆ 
1] 10 th edition 'international who's who of intellectuals" award  2] 15 th 'men of achivements 3] ' international man of the year 1990-91  4] 4 th edition 'Distinguished leadership award " in religion and spirituality 5] 1 st edition  'The most admired men and women of the year '

 ಮುಂತಾದ ಪ್ರಶಸ್ತಿಗಳನ್ನು   ಪ್ರಧಾನ ಮಾಡಿ  ಗೌರವಿಸಿದೆ. ಇಷ್ಟೆಲ್ಲಾ ಸಾಧನೆ ಮಾಡಿ ಎಲ್ಲಾ ಧರ್ಮಗಳ ಬಗ್ಗೆ  ಗೌರವ ಯುತವಾಗಿ  ಪ್ರವಚನ ಮಾಡಿ ನಿಜವಾದ ವಿಶ್ವ ಮಾನವನಾಗಿ ,  ಶಿಷ್ಯರನ್ನು ಬೆಳಸದೆ , ಭಕ್ತರನ್ನು ಬೆಳೆಸದೆ  ಅಭಿಮಾನಿಗಳನ್ನೂ, ಸ್ನೇಹಿತರನ್ನೂ ಸಂಪಾದಿಸಿ  " ವಿಶ್ವ ಶಾಂತಿನಿಕೇತನ "  ಆಶ್ರಮ ಕಟ್ಟಿ  ವಿಶ್ವ ಮಾನವತಾವಾದಿಯಾಗಿ  ಕಾನನದ ಸುಮವಾಗಿ  ಮೌನದಿಂದಲೇ ಸಾಧಿಸಿ ಬದುಕಿದರು  1997  ರ ಜನವರಿ 10   ರಂದು  ಇಹ ಲೋಕ ದಿಂದ ಪ್ರಯಾಣ ಬೆಳೆಸಿದರು .  1997 ರಲ್ಲಿ ಇವರ ದೇಹ ತ್ಯಾಗದ ಬಗ್ಗೆ  ಒಂದು  ದೊಡ್ಡ ಚರ್ಚೆಯೇ  ಪತ್ರಿಕೆಗಳಲ್ಲಿ ಹಾಗು ಸಮಾಜದಲ್ಲಿ  ಆಗ ದೇಶಾದ್ಯಂತ ನಡೆದು ಹೋಗಿತ್ತು.  ಬನ್ನಿ ಆಶ್ರಮದ ಒಳಗಡೆ ಕೆಲವು ದೃಶ್ಯಗಳನ್ನು  ನೋಡೋಣ.


ಆಶ್ರಮದ ಒಳಗಡೆ  ಇರುವ  ಸ್ವಾಮೀ ನಿರ್ಮಲಾನಂದರ  ಸಮಾಧಿ
ಸಮಾಧಿಯ ಮುಂಭಾಗ
ಸಮಾಧಿಯ ಒಂದು ಪಾರ್ಶ್ವದಲ್ಲಿ ನ  ನೋಟ

ಸಮಾಧಿಯ ಹಿಂಭಾಗದಲ್ಲಿನ  ಬರಹ
ಸಮಾಧಿಯ ಮತ್ತೊಂದು ಪಾರ್ಶ್ವದಲ್ಲಿನ ಬರಹ.
ಸಮಾಧಿಯ  ದರ್ಶನ ಪಡೆದು  ಆಶ್ರಮದ ಹಿಂಭಾಗಕ್ಕೆ ಸ್ವಲ್ಪ ದೂರ ನಡೆದು ಬಂದರೆ ನಿಮಗೆ ಮತ್ತೊಮ್ಮೆ ಒಳ್ಳೆಯ  ದೃಶ್ಯ ಕಂಡು ಬರುತ್ತದೆ  ಬನ್ನಿ ಆ ನೋಟ ನೋಡೋಣ. ಇಂದಿಗೂ ಈ ಪ್ರದೇಶದಲ್ಲಿ ನಿಶಬ್ದ ಹಾಗು ಹಕ್ಕಿಗಳ ಕಲರವ , ಸುಂದರ ಪುಷ್ಪಗಳ ನೋಟ ,  ಸಿಗುತ್ತದೆ. ಮುಂದಿನ ಸಾರಿ ನೀವು ಇಲ್ಲಿಗೆ ಬಂದಾಗ ಇಲ್ಲಿಗೆ ಬರಲು ಪ್ರಯತ್ನಿಸಿ ನಿಮ್ಮ ಮನಸ್ಸು ಪ್ರಸನ್ನ ಗೊಳ್ಳುತ್ತದೆ.
ಆಶ್ರಮದ  ಹಿಂಭಾಗದಲ್ಲಿ ಕಂಡುಬರುವ ನೋಟ !!!
ಬಿಳಿಗಿರಿಯ ಒಡಲಲ್ಲಿ ಎಂತೆಂತಹ ವಿಚಾರಗಳು ಇವೆ ನೋಡಿದ್ರಲ್ಲಾ . ಪಯಣದ ಆಯಾಸ ವಾಗಿದೆ ಅಲ್ವೇ, ಸ್ವಲ್ಪ  ವಿಶ್ರಾಂತಿ ಪಡೆಯಿರಿ ಮತ್ತೆ  ಮುಂದಿನ ಸಂಚಿಕೆಯಲ್ಲಿ  ಬಿಳಿಗಿರಿಯ ಲೋಕದಲ್ಲಿ ಇನ್ನಷ್ಟು   ಪಯಣ ಬೆಳೆಸೋಣ .[ ಪ್ರೀತಿ ಯಿಂದ ಹೇಳೋ ಮಾತು:-) ಇಲ್ಲಿ ಬರೆದಿರುವ ಬರಹ ಮಾಹಿತಿಗಾಗಿ ಅಷ್ಟೇ, ಯಾರನ್ನೂ ಮೆರೆಸುವುದಕ್ಕಾಗಲಿ ಜಾಹಿರಾತಿಗಾಗಲಿ ಪ್ರಕಟಣೆ ಮಾಡಿಲ್ಲ  ]


                                                   

11 comments:

prabhamani nagaraja said...

ಸ್ವಾಮಿ ನಿರ್ಮಲಾನ೦ದರ ಬಗೆಗಿನ ನಿಮ್ಮ ಲೇಖನ ಹಾಗೂ ಅಲ್ಲಿಯ ಚಿತ್ರಗಳು ಬಹಳ ಇಷ್ಟವಾಯಿತು. ಮತ್ತೊಮ್ಮೆ ಬಿಳಿಗಿರಿ ರ೦ಗ ಬೆಟ್ಟಕ್ಕೆ ಹೋಗಿ ಬ೦ದಷ್ಟೇ ಆನ೦ದವಾಯಿತು. ಧನ್ಯವಾದಗಳು ಬಾಲುರವರೆ.

S.Sharath Chandra said...

ನಿರ್ಮಲಾನಂದರ ಜೀವನ ಚರಿತ್ರೆಯ ವರ್ಣನೆ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು.

PARAANJAPE K.N. said...

ಬಾಲೂಜಿ, ತು೦ಬ ಚೆನ್ನಾಗಿದೆ ಮಾಹಿತಿ. ಎಲೆಮರೆಯ ಕಾಯ೦ತೆ ಇದ್ದು ಮಹತ್ಸಾಧನೆ ಮಾಡಿದ ಇ೦ಥವರ ಬಗ್ಗೆ ಬಹು ಜನರಿಗೆ ಗೊತ್ತೇ ಇರುವುದಿಲ್ಲ. ತಮ್ಮ ಬಗ್ಗೆ ತಾವೇ ತುತ್ತೂರಿ ಊದಿಕೊಳ್ಳುವ ಜನ ಮಾತ್ರ ಈಗ ನೆನಪಿನಲ್ಲಿ ಉಳಿಯುತ್ತಾರೆ, ಇದು ಇ೦ದಿನ ಸ೦ದರ್ಭದ ಬಹುದೊಡ್ಡ ವಿಪರ್ಯಾಸ. ಹಾಗಾಗಬಾರದು. ಕಾನನದಲ್ಲಿದ್ದು ಅತ್ಯಪೂರ್ವ ಸಾಧನೆ ಮಾಡಿದ ಇವರ ಬಗ್ಗೆ ಎಲ್ಲರಿಗೂ ತಿಳಿಯುವ೦ತಾಗಬೇಕು. ನಿಮ್ಮ ಬರಹ ಆ ನಿಟ್ಟಿನಲ್ಲಿ ಚೆನ್ನಾಗಿದೆ. ಇಂತಹ ಇನ್ನಷ್ಟು ವ್ಯಕ್ತಿಗಳ ಬಗ್ಗೆ ಬರೆಯಿರಿ.

ಮನಸು said...

ತು೦ಬ ಚೆನ್ನಾಗಿದೆ ಮಾಹಿತಿ. ಧನ್ಯವಾದಗಳು

sunaath said...

ಬಾಲು,
ಮಹಾತ್ಮರೊಬ್ಬರ ಪರಿಚಯ ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು.

ಸುಬ್ರಮಣ್ಯ ಮಾಚಿಕೊಪ್ಪ said...

ಉತ್ತಮ ಮಾಹಿತಿ

Deep said...

Illige hoguvudu miss aytu balu..

Adre

Nimma lekhanadinda hoda hage aytu..

shivakumar said...

ಧನ್ಯವಾದಗಳು
ಇಂತಹ ಇನ್ನಷ್ಟು ವ್ಯಕ್ತಿಗಳ ಬಗ್ಗೆ ಬರೆಯಿರಿ.

shivu.k said...

ಬಾಲು ಸರ್,

ಎಲೆಮರೆಕಾಯಿಯಂತೆ ಇದ್ದ ಈ ನಿರ್ಮಲನಂದ ಸ್ವಾಮೀಜಿಯವರ ಬಗೆಗಿನ ನಿಮ್ಮ ಚಿತ್ರ ಲೇಖನ ಓದಿ ತುಂಬಾ ಖುಷಿಯಾಯಿತು. ಇಂಥವರ ಸಾಧನೆ ಪ್ರಪಂಚಕ್ಕೆ ಗೊತ್ತಾಗಬೇಕು. ಅದನ್ನು ಪರಿಚಯಿಸುವಲ್ಲಿ ನಿಮ್ಮ ಪ್ರಯತ್ನ ಅಭಿನಂದನೀಯ..

ಕಲರವ said...

baalusir,svaami nirmalaanandara kuritaada lekhanadondige allina prashaantavaada prisarada sundarachitranada chitranada darshana maadisiruvudakkaagi dhanyavaadagalu.

Sandeep.K.B said...

ನಿಮ್ಮ ಮಾಹಿತಿಯ ಪ್ರಕಾರ ... ಅಲ್ಲಿನ ಪ್ರಶಾಂತತೆ ಎದ್ದು ಕಾಣಿಸುತ್ತದೆ.., ಮಾಹಿತಿಗಾಗಿ ದನ್ಯವಾದ..
ಇನ್ನು ಬಿಳಿಗಿರಿ ರಂಗನ ಬೆಟ್ಟಕ್ಕೆ ನಾನು ಹೋಗಿಲ್ಲ ... , ಅಲ್ಲಿ ಹೋದಾಗ .. ಆಶ್ರಮಕ್ಕೆ ಕೂಡ ಬೇಟಿ ಕೊಡುವೆ ..