Friday, May 20, 2011

ಐಸ್ ಕ್ಯಾಂಡಿ ಪುರಾಣ !!!! ಹಳ್ಳಿ ಯಲ್ಲೊಂದು ರಾಮಾಯಣ., ನಾನು ವಿಜ್ಞಾನಿ ಆಗಿದ್ದೆ !!!!


                                                                                                                                                                                     ಐಸ್ ಕಿರೀ ........>>>> ಅಂತಾ ಅವನು ಬಂದ್ರೆ ಸಾಕು ಹಳ್ಳಿಯ ಮಕ್ಕಳೆಲ್ಲಾ ಅವನ ಹಿಂದೆ . ಅವನೋ ಹಳ್ಳಿಯ ಮಕ್ಕಳಿಗೆ ಬಣ್ಣ  ಬಣ್ಣ ದ ಐಸ್ ಕ್ಯಾಂಡಿಯನ್ನು  ಪಟ್ಟಣದಿಂದ ಹಳ್ಳಿಗೆ ತಂದು ಸರಿಯಾಗಿ ಬೆಳಿಗ್ಗೆ ಹನ್ನೊಂದು ಘಂಟೆಗೆ  ಹಳ್ಳಿಯ ಶಾಲೆ ಬಿಡುವ ವೇಳೆಗೆ  ಹಾಜರಾಗುತ್ತಿದ್ದ. ಒಂದು ಮರದ ಪೆಟ್ಟಿಗೆಯೊಳಗೆ ಥರ್ಮೊಕೊಲ್ ನ ಪ್ಯಾಕಿಂಗ್ ಮಾಡಿ ಬಣ್ಣ ಬಣ್ಣ ದ  ಐಸ್ ಕ್ಯಾಂಡಿಗಳನ್ನು ಅದರಲ್ಲಿ ತುಂಬಿ ಕೊಂಡು ಬಂದು  ಮಳವಳ್ಳಿ ಪಟ್ಟಣದಿಂದ  ಐದು ಕಿ.ಮಿ.ದೂರವಿದ್ದ ನಮ್ಮ ಹಳ್ಳಿಗೆ ಬಂದು ಐದು ಪೈಸೆಗೆ ಒಂದರಂತೆ ಮಾರುತಿದ್ದ.ಇನ್ನು ಇವ ಮಾರುತಿದ್ದ "ಐಸ್ ಕ್ಯಾಂಡಿಗಳು" ನಾನೂ ಸೇರಿದಂತೆ ಎಲ್ಲಾ ಹಳ್ಳಿ ಹೈಕಳಿಗೂ ಬಲು. ಅಚ್ಚುಮೆಚ್ಚು. ಗುಂಡಾದ ಕಡ್ಡಿಗೆ ಐಸ್ ಕ್ಯಾಂಡಿ ಸಿಕ್ಕಿಸಿ  ಹಳದಿ, ನೀಲಿ, ಹಸಿರು, ಕೆಂಪು, ಬಣ್ಣದ ಒಂದೊಂದು  ಐಸ್ ಕ್ಯಾಂಡಿ ಕೈಯಲ್ಲಿ ಎತ್ತಿ  ಹಿಡಿದು ತನ್ನದೇ ಆದ ಗತ್ತಿನಲ್ಲಿ ಜೋರಾಗಿ ಇಡೀ ಬೀದಿಗೆ  ಕೇಳುವಂತೆ   ಐಸ್ ಕಿರೀ ...........>>>>>. ಅಂದ್ರೆ  ಸಾಕು ಇತ್ತ ಹೈಕಳು ಅಪ್ಪಂದಿರ ಚಡ್ಡಿ/ಪಂಚೆ ಎಳೆದು, ಅವ್ವಂದಿರ ಸೀರೆ ಎಳೆದು ಅತ್ತೂ, ಕುಣಿದು,ರಂಪಾಟ ಮಾಡಿ "ಐಸ್ ಕ್ಯಾಂಡಿ"  ತಿಂದೇ ತಿನ್ನುತ್ತಿದ್ದವು. ಆ ದಿನಗಳಲಿ ಕಡಿಮೆ ಸಂಪಾದನೆಯ ಹಳ್ಳಿಯ  ಹಲವು ಜನಗಳಿಗೆ ದಿನಾ ಇದೊಂದು ಸಂಕಟ.  ತಮ್ಮ ಹೈಕಳು "ಐಸ್ ಕ್ಯಾಂಡಿ" ತಿಂದು ತಾವು ಬೀಡಿ ಸೇದುವ ದುಡ್ಡನ್ನು, ಹಾಳು ಮಾಡುತ್ತಿವೆ ಎಂಬ ಕೊರಗು ಅಪ್ಪಂದಿರಿಗಾದರೆ , ಎಲೆ ಅಡಿಕೆ ಕಾಸು ಹಿಂಗೆ ಮಕ್ಕಳ ಐಸ್ ಕ್ಯಾಂಡಿ ಪಾಲಾಗ್ತಿದೆ ಎಂಬ ಕೊರಗು ಅವ್ವಂದಿರಿಗೆ,                                                                                                                                                                     ಇದು ಹೀಗೆ ಸಾಗಿತ್ತು. ಇನ್ನು ಐಸ್ ಕ್ಯಾಂಡಿ ಮಾರುವವನೋ  ಪಕ್ಕಾ ಶಿವಾಜಿ ಗಣೇಶನ್ ಸಿನೆಮಾದ  ಸ್ಟೈಲು. ಗುಂಗುರು ಕೂದಲನ್ನು ಹಣೆಯ ಮೇಲೆ ಇಳಿಬಿಟ್ಟು., ಹಣೆಗೆ ತಮಿಳರ ಕುಂಕುಮ ಧರಿಸಿಕೊಂಡು, ಕಣ್ಣಿಗೆ ರಾಚುವ ಬಣ್ಣಗಳ ಶರ್ಟು, ಬಣ್ಣ ಬಣ್ಣ ದ ಹೂವುಗಳ  ಲುಂಗಿ ಉಟ್ಟುಕೊಂಡು, ಸೈಕಲ್ಲನ್ನು ತನ್ನದೇ ಆದ ಸ್ಟೈಲಿನಲ್ಲಿ  ಅಲಂಕರಿಸಿ " ಪುವಾಯ್  ಪುವಾಯ್ " ಅಂತಾ ಜೋರಾಗಿ ಹಾರನ್ ಮಾಡ್ತಾ  ತಾನೇ ಶಿವಾಜಿ ಗಣೇಶನ್ ನಂತೆ ಪೋಸ್ ಕೊಡ್ತಿದ್ದ,[ಪುಣ್ಯಾ ಆಗ  ಸಿನಿಮಾ ರಂಗದಲ್ಲಿ ರಜನೀಕಾಂತ್  ಇರಲಿಲ್ಲ ]  ಆದರೂ ಕಷ್ಟ ಪಟ್ಟು  ಉರಿ ಬಿಸಿಲಿನಲ್ಲಿ  ಊರೂರು ತಿರುಗಿ ಐಸ್ ಕ್ಯಾಂಡಿ ಮಾರಿ ಜೀವನ  ಸಾಗಿಸುತ್ತಿದ್ದ . ಆದ್ರೆ ಯಾವಾಗಲು ನಗುತ್ತಾ ನಗುತ್ತಾ ಮಕ್ಕಳಿಗೆ  ಐಸ್ ಕ್ಯಾಂಡಿ ಮಾರುತ್ತಿದ್ದ. ಹೀಗೆ ಸಾಗಿತ್ತು ದಿನಗಳು. ಹಳ್ಳಿಯಲ್ಲಿ ಒಮ್ಮೆ ಇದ್ದಕಿದ್ದಂತೆ  ಜೋರಾಗಿ ಗಲಾಟಿ ನಡೆದಿತ್ತು.  ಊರಿನ  "ಪಟೇಲ್  ಬೋರೆಗೌಡರು" ಜೋರಾಗಿ ಐಸ್ ಕ್ಯಾಂಡಿ ಮಾರುತ್ತಿದ್ದ ನಮ್ಮ  ಐಸ್ ಕ್ಯಾಂಡಿ "ಶಿವಾಜಿ ಗಣೇಶನ್" ಮೇಲೆ ಎಗರಿದ್ದರು !!!  ಬನ್ನಿ ನಾವೂ ಗಲಾಟೆಯ ಡೈಲಾಗ್ ಕೇಳೋಣ.                                                                                                                                                 ."ಪಟೇಲ್ ಬೋರೆಗೌದರು" [ ಮುಂದೆ ಇವರನ್ನು ಪಟೇಲರು   ಎನ್ನೋಣ.] :- "ಲೇ ಯಾವನ್ಲಾ ಅದು ಐಸ್ ಕ್ಯಾಂಡಿ ಬಲಾ ಇಲ್ಲಿ".                                                                                                                                                        "ಐಸ್ ಕ್ಯಾಂಡಿ ಶಿವಾಜಿ ಗಣೇಶನ್"[ ಮುಂದೆ  ಶಿವಾಜಿ ಎನ್ನೋಣ ]:-  ಬಂದೆ ಪಟೇಲ್ರೇ.                                                                                      ಪಟೇಲರು:- "ಏನ್ಲಾ ನಮ್ ಹಳ್ಳಿ ಹೈಕಳನೆಲ್ಲಾ  ನಿನ್ ಕಳಪೆ  ಐಸ್ ಕ್ಯಾಂಡಿ ತಂದು ಮಾರಿ  ಹಾಳು ಮಾಡ್ತಾ ಇದ್ದೀಯ???" ಒಂದ್ ಮಾಡಗ್ದಾ ಅಂದ್ರೆ  ನೋಡು!!!"  ಅಂದ್ರೂ ,                                                                                                                      ಶಿವಾಜಿ:- "ಅಲ್ಲಾ ಸ್ವಾಮೀ ನಂ ಮಾಲು ಕಳಪೆ ಅಲ್ಲಾ ಬೇಕಾದ್ರೆ ಪರೀಕ್ಸೆ ಮಾಡಿ ಈ ಹಳ್ಳಿ  ಹೈಕಳು ನಮ್ಮ ಮನೆ ಮಕ್ಕಳಂಗೆ"ಅಂದಾ ,
ಪಟೇಲರು:- ಏನ್ಲಾ ನಾನು ಪಟೇಲ ನಂ ಮಾತ್ಗೆ  ಎದುರ್ಮಾತಾ ?? ಲೇ ಹುಸಾರು  ಕಂಬಕ್ಕೆ ಕಟ್ಟಿ ಕಜ್ಜಾಯ ಕೊಡ್ಬೇಕಾಯ್ತದೆ. ಅಲ್ಲಾ ಕನ್ಲಾ ದಿನಾ ನಮೂರಲ್ಲಿ ಹೈಕಳು ಐಸ್ ಕ್ಯಾಂಡಿ ತಿನ್ನೋಕೆ ಮನೇಲಿ ದುಡ್ಡಾ ಕದೀತಾವಂತೆ , ಕೂಲಿ ನಾಲಿ ಮಾಡಿ ಮಡಗಿದ್ದ ದುಡ್ದ ನೀನು ಹೈಕಳಿಗೆ ಐಸ್ ಕ್ಯಾಂಡಿ ಕೊಟ್ಟು ಕಿತ್ಕಂಡು ಒಯ್ತಿ  !!! ನಮ್  ಅಳ್ಳಿ ಜನ          ಹೊಟ್ಟೆಗೆ ಮಣ್ಣು ತಿನ್ಬೇಕೆನ್ಲಾ ???  ಅದೂ ಅಲ್ದೆ ನಿನ್ ಐಸ್ ಕ್ಯಾಂಡಿಯಲ್ಲಿ  ಹುಳ ಅವೇ ಅಂತಾ ನಮ್ಮೂರ  ಬಸಪ್ಪಾ ದಾಕುಟ್ರೂ ಬ್ಯಾರೆ ಏಳುದ್ರೂ !!! ಈ ಉಳಾ ನೆಲ್ಲಾ ನಮ್ ಹೈಕಳಿಗೆ ತಿನ್ಸಿ ರೋಗಾ ಬರ್ಸಿ ಸಾಯ್ಸ್ ಬೇಕೂ ಅಂತಾ ಅನ್ಕಂಡಿದ್ದೀಯ?? ಹುಸಾರು ಇನ್ನೊಂದಿನ  ಈ ಊರಲ್ಲಿ ನಿನ್ನ ಕಂಡ್ರೆ  ನಿನ್ನೂವೆ ನಿನ್ ಸೈಕೊಲ್ನುವೆ ಪಿನಿಸ್ ಮಾಡ್ಬೇಕಾಯ್ತದೆ !!! ಅಂದ್ರೂ [ ಸುತ್ತಾ ನಿಂತಿದ್ದ ಹಳ್ಳಿಹೈಕಳ  ಮುಖದಲ್ಲಿ  ನಾಳೆಯಿಂದ ಐಸ್ ಕ್ಯಾಂಡಿ ಸಿಗಲ್ಲಾ ಅನ್ನುವ ಘಾಬರಿ   ಒಂದೆಡೆ ಯಾದರೆ  ಅಪ್ಪ ಅವ್ವಂದಿರ ಮನದಲ್ಲಿ  ತಮ್ಮ ಬೀಡಿ ಎಲೆ ಅಡಿಕೆ ಕಾಸು ಐಸ್ ಕ್ಯಾಂಡಿಗೆ ಹೋಗೋದಿಲ್ಲ ಅನ್ನುವ ಖುಷಿ ]                   ಶಿವಾಜಿ :- ಸ್ವಾಮೀ ಪಟೇಲ್ರೇ  ನನ್ನ ಮಾಲಲ್ಲಿ ಹುಳಾ  ಐತೆ ಅಂದಾ ದಾಕುಟ್ರೂ ಸುಳ್ಳ, 
  ಅವೈಯ್ಯ  ದಾಕುಟ್ರೆ ಅಲ್ಲಾ ಅಂತಾ  ಹಿಂದ್ಲೂರ್ ನಲ್ಲಿ ಹೊಡ್ದಿದ್ರೂ,
 ಈಗ ನಿಮ್ಮೂರಿಗೆ ಬಂದವನೇ , 
ಈಗ ನಂ ಮ್ಯಾಲೆ ಪಿಟ್ಟಿಂಗ್ ಇಟ್ಟವ್ನೆ , 
ನಾನು ಪೋಲಿಸ್ ಗೆ ಕಂಪ್ಲೇಂಟ್  ಕೊಡ್ತೀನಿ,
 ಆಮ್ಯಾಕೆ ಗೊತ್ತಾಯ್ತದೆ ,
ಇನ್ಸ್ಪೆಟ್ರೂ   ನಂ ನೆಂಟರೆ ಅವ್ರ್ನೆ 
ಕರ್ಕಂಬತ್ತೀನಿ ಬುಡಿ ಅಂದಾ !!!                                      
 ಪಟೇಲರೂ :- [ ಮನಸ್ಸಿನಲ್ಲಿ ಇದ್ಯಾಕೋ  ಸರಿ ಹೋಗ್ತಿಲ್ಲಾ , ನಾಳೆ ಪೋಲಿಸ್ ಬಂದ್ರೆ ನಂ ಮರ್ವಾದೆ ಹೋಗುತ್ತೆ ಅಂತಾ ಯೋಚಿಸಿ ] "ಲೇ ಐಸ್ ಕ್ಯಾಂಡಿ ಒಂದ್ ಕೆಲಸ ಮಾಡು,
 ನಮ್ ಊರಿಗೆ  ಪೋಲಿಸ್ ಯಾಕ್ಲಾ ಬೇಕೂ?
 ನಾಮೆನು ಮನುಸ್ರಲ್ವಾ?
  ಏನೋ ಬಡವಾ ಬದೀಕಾ ಓಗು"
 "ಏನಾದರೂ ನಮ್ ಹಳ್ಳಿ ಹೈಕಳು ಒಸಾರಿಲ್ದೆ ಮನೀಕಂದ್ರೆ......
  ನಿನ್ನ ಗತಿ ಕಾಣಿಸ್ಬುಡ್ತೀನಿ ಉಸಾರು"!!! 
ಅಂದಾ ಜಾರಿ ಕೊಂಡರೂ .
ಅಲ್ಲಿದ್ದ ಜನ  ನಿರಾಸೆಯಿಂದ ನಮ್ ಕಥೆ ಇಷ್ಟೇನೆ ಅಂತಾ  ಚದುರಿದರು.                                                                                                       
ನಾನು ಇದನೆಲ್ಲಾ ನೋಡ್ತಾ ಇದ್ದೆ  ನನಗೆ ಆಗ ಸುಮಾರು ಎಂಟು ವರ್ಷ , ಈ ಗಲಾಟಿಯಲ್ಲಿ  ನನಗೆ ಐಸ್ ಕ್ಯಾಂಡಿಯಲ್ಲಿ ಹುಳು ಇದ್ಯಾ ನೋಡಬೇಕೆಂಬ ಆಸೆ ಆಯಿತು. ಮಾರನೆಯ ದಿನ  ಜೇಬಿನಲ್ಲಿದ್ದ ಹತ್ತು  ಪೈಸೆಗೆ ಎರಡು  ಐಸ್ ಕ್ಯಾಂಡಿ ಖರೀದಿಸಿ  ಮನೆಗೆ ಬಂದು ನನ್ನ ತಾಯಿಗೆ  "ಅಮ್ಮಾ  ನನಗೆ ಸೀಮೆಣ್ಣೆ ಕೊಡು" ಅಂದೇ !!!  "ಯಾಕೋ " ಅಂತಾ ಕೇಳ್ತಾ ಅಮ್ಮಾ ಸೀಮೆ ಎಣ್ಣೆ  ಒಂದು ಗಾಜಿನ ಲೋಟಕ್ಕೆ  ಹಾಕಿ ತಂದು ಕೊಟ್ಟಳು , "ಬಾ ನಿನಗೆ ಹುಳು ತೋರಿಸ್ತೀನಿ" ಅಂತಾ ಹೇಳ್ತಾ  ಸೀಮೆ ಎಣ್ಣೆ ಒಳಗೆ ಐಸ್ ಕ್ಯಾಂಡಿಯನ್ನು ಅದ್ದಿದೆ  ಐಸ್ ಕ್ಯಾಂಡಿ ಕರಗಿತೆ ಹೊರತು ಹುಳುಗಳು ಮಾತ್ರಾ ಕಾಣಲಿಲ್ಲಾ !!!  ಅಮ್ಮನಿಗೆ ಈ ವಿಚಾರ ಹೇಳಿದ್ರೆ  ದಡ್ಡ ಮುಂಡೇದೆ  ಐಸ್ ಕ್ಯಾಂಡಿಯಲ್ಲಿ ಹುಳು ಇರೋ ಸಾಧ್ಯತೆ ಇಲ್ವೆ ಇಲ್ಲಾ  ಅಂತಾ ಹೇಳುತ್ತಾ ಪ್ರೀತಿಯಿಂದ   "ದಡ್ಡ"  ಎಂಬ ಬಿರುದು ಕೊಟ್ಟಳು. ನಂತರ ಬಂದವರ ಎದುರು ನನ್ನ ಮಗ ದೊಡ್ಡ ವಿಜ್ಞಾನಿ ಆಗ್ತಾನೆ ಅಂತಾ ಬೀಗಿದಳು. ಆದ್ರೆ ನಾನು ಈಗ  ಅಜ್ಞಾನಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ!!

12 comments:

ಸುಬ್ರಮಣ್ಯ said...

ಐಸ್ ಕ್ಯಾಂಡಿ ಕಥೆ ಚನ್ನಾಗಿದೆ

shivu.k said...

ಬಾಲು ಸರ್,
ಐಸ್ ಕ್ಯಾಂಡಿ ತಿನ್ನುವ ಮಕ್ಕಳ ಕತೆ ಚಿತ್ರಗಳನ್ನು ತೋರಿಸುತ್ತೆ. ಜೊತೆಗೆ ನಿಮ್ಮ ಮಳವಳ್ಳಿ ಗೌಡರು ಹೇಗಿರುತ್ತಾರೆ ಎನ್ನುವ ಚಿತ್ರವನ್ನು ತೋರಿಸುತ್ತೆ. ತುಂಬಾ ಚೆನ್ನಾಗಿದೆ.. ಹೇಮಾಶ್ರಿ ಕೂಡ ಓದಿ ತನ್ನ ಊರಿನ ನೆನಪುಗಳನ್ನು ಮಾಡಿಕೊಂಡಳು.

ಸಾಗರದಾಚೆಯ ಇಂಚರ said...

chennagide sir

nimma puraana

Ittigecement said...

ಬಾಲೂ ಸರ್...

ಬಾಲ್ಯದ ಐಸ್ ಕ್ಯಾಂಡಿ ನೆನಪು ಮಾಡಿ ಬಾಯಲ್ಲಿ ನೀರು ತರಿಸಿ ಬಿಟ್ರಿ...

ಇಪ್ಪತ್ತೈದು ಪೈಸೆ ಐಸ್ ಕ್ಯಾಂಡಿ...
ಅದರ ಬಣ್ಣಗಳು...
ಆ ಬಣ್ಣಗಳು ತುಟಿಗೆಲ್ಲ ಹರಡಿ ಅನುಭವಿಸುವ ಆ ಆನಂದ .. !!

ವಾಹ್ !!

ಎಂಥಾ ಮಜವಿತ್ತು ಆ ಕಾಲ... ಆ ಬಾಲ್ಯ.. !!

ನಿಮ್ಮ ಗೌಡರ ಕಥೆ...
ನಿಮ್ಮ ಪ್ರಯೋಗಶೀಲತೆ ಮಜವಾಗಿತ್ತು... ಜೈ ಹೋ !

sunaath said...

ಬಾಲು,
ವಿಜ್ಞಾನಿಯ ಮನೋಧರ್ಮ ನಿಮಗಿರುವದನ್ನು ನಾವು ಮೆಚ್ಚಿಕೊಳ್ಳಲೇ ಬೇಕು!

ಜಲನಯನ said...

ಬಾಲು ಪ್ರಕಾಶ ಇಪ್ಪತ್ತೈದು ಪೈಸೆ ಕ್ಯಾಂಡಿ ತಗೊಂಡಾಗ ಅದ್ರಲ್ಲಿ ಸ್ವಲ್ಪ ಪಟ್ಣದ ಎಸ್ಸೆನ್ಸು ಇತ್ತು ಅನ್ಸುತ್ತೆ...ಆದ್ರೆ ನಾವು ಕೇವಲ ಐದು ಪೈಸೆಗೆ ತಗೋತಿದ್ವಿ...ಹತ್ತು ಪೈಸೆದು ಹಾಲು ಕ್ಯಾಂಡಿ...ನಮ್ಮ ಊರ ಪಟೇಲ್ರ ಮಕ್ಕಳು ಮಾತ್ರ ತಗೋತಿದ್ರು....ನಾಸ್ಟಾಲ್ಜಿಕ್ ನೆನಪುಗಳನ್ನು ಕೆದಕಿದ್ದು..ಬಾಲುಗೆ ಹ್ಯಾಟ್ಸ್ ಆಫ್...

Pradeep Rao said...

ಹ್ಹ ಹ್ಹ ಹ್ಹಾ! ಸಾರ್.. ವಿಙ್ಞಾನಿಯಲ್ಲದಿದ್ದರೂ ಇಂದು ನೀವು ಅಙ್ಞಾನಿಯಂತೂ ಅಲ್ಲ ಬಿಡಿ.. ಆದರೂ ಸನ್ನಿವೇಶದ ವಿವರಣೆ ಸ್ವಾರಸ್ಯಕರವಾಗಿದೆ...!!

V.R.BHAT said...

ಐಸ್ ಕ್ಯಾಂಡಿ ಕಥೆ ಚನ್ನಾಗಿದೆ

Sandeep K B said...

ಹುಳು ಅವಾಗ ಸಿಕ್ತಾ ಇತ್ತೋ ಇಲ್ವೋ .. ಇವಾಗ ಮಾತ್ರ ಸಿಕ್ಕೆ ಸಿಗುತ್ತೆ .......
ಚಂದದ ಬರವಣಿಗೆ ಸರ್...
ವಿಜ್ಞಾನ ಒಂದೇ ಅಲ್ಲದೆ ಹಲವಾರು ಅವಿಗ್ನ ಜ್ಞಾನ ಇರೋರಿಗೆ ನಾವು ಅಜ್ಞಾನಿ ಅಂತೀವಿ ........

balasubramanya said...

ಪ್ರೀತಿ ಮಾತುಗಳಿಂದ ಬೆನ್ನು ತಟ್ಟಿ ಹರಸಿದ ಎಲ್ಲಾ ಬ್ಲಾಗ್ ಮಿತ್ರರಿಗೆ ಕೃತಜ್ಞತೆಗಳು.

ಶಶೀ ಬೆಳ್ಳಾಯರು said...

thumba chennagide sir.... ice cream tindaste khushi aythu....Dhanyavada nimage

ಶ್ರೀವತ್ಸ ಕಂಚೀಮನೆ. said...

ದಾರಿ ಬದಿ ಬಿದ್ದಿರುತ್ತಿದ್ದ ಖಾಲಿ ಬಾಟಲಿಗಳನೆಲ್ಲ ಹೆಕ್ಕಿ ತಂದು ಎಂಟಾಣೆಗೊಂದರ ಲೆಕ್ಕದಲ್ಲಿ ಕ್ಯಾಂಡಿ ಮಾರುವವನಿಗೆ ಕೊಟ್ಟು ಐಸ್ ಕ್ಯಾಂಡಿ ತಿನ್ನುತ್ತಿದ್ದ ಕಾಲವನ್ನ ನೆನಪಿಸಿಬಿಟ್ರಿ ಸರ್...ನಮ್ಮೂರಿಗಾತ ವಾರಕ್ಕೆರಡು ದಿನ ಮಾತ್ರ ಬರುತ್ತಿದ್ದ...ಆ ಎರಡು ದಿನ ಶಾಲೆ ದಾರಿಯ ಅತ್ತ ಇತ್ತ ಬಾಟಲಿಗಳ ಹುಡುಕುತ್ತ ಶಾಲೆಗೆ ಅರ್ಧಘಂಟೆ ತಡವಾಗಿ ಹೋಗಿ ಬೈಸಿಕೊಂಡದ್ದು ಅದೆಷ್ಟು ಸಲವೋ...ಕ್ಯಾಂಡಿಯಲ್ಲಿ ಹುಳ ಇದ್ದೀತೆಂಬ ಭಯ ನಮ್ಮನ್ನೂ ಆಗಾಗ ಕಾಡಿದ್ದಿದೆ... ಆದರೆ ಕ್ಯಾಂಡಿಯ ರುಚಿ ಮರೆಯಲಾಗದು...