ಹೌದು ಕಳೆದ ರಾತ್ರಿ ಒಳ್ಳೆ ನಿದ್ದೆ ತೆಗೆದು ಇವತ್ತು ಬೆಳಿಗ್ಗೆ ಎದ್ದವನಿಗೆ ಯಾಕೋ?? ಗೊತ್ತಿಲ್ಲ, "ಅಪ್ಪೆ ಹುಳಿ" ಜ್ಞಾಪಕಕ್ಕೆ ಬರೋದೆ !!!!ಉತ್ತರ ಕನ್ನಡದ ಗೆಳೆಯರಿಗೆ ಬಿಟ್ರೆ ಬೇರೆ ಭಾಗದ ಗೆಳೆಯರಿಗೆ ಇದರ ಪರಿಚಯ ಹೆಚ್ಚಾಗಿ ಇರುವುದಿಲ್ಲ.ಬನ್ನಿ "ಅಪ್ಪೆ ಹುಳಿ " ನನಗೆ ಪರಿಚಯವಾದ ಕಥೆ ಹೇಳ್ತೀನಿ.
|
ಅಪ್ಪೆ ಹುಳಿ [ ಚಿತ್ರ ಕೃಪೆ ಮನೆ ಅಡಿಗೆ ಬ್ಲಾಗ್ ] |
ನಾನು ಆಗ ಶ್ರೀ ರಂಗ ಪಟ್ಟಣದಲ್ಲಿ ಕರ್ತವ್ಯದಲ್ಲಿದ್ದೆ. ಆಗಷ್ಟೇ ಪರಿಚಯವಾಗಿದ್ದ "ಸುಬ್ಬರಾಯ ಭಟ್" ಮದುವೆ ಆಮಂತ್ರಣ ನೀಡಿ
"ಸಾರ್ ನನ್ನ ಮದುವೆಗೆ ಬರಬೇಕು ಅಂದ್ರೂ !!!" ಅವರು ಕರೆಯುವ ರೀತಿಯಲ್ಲಿ ಪ್ರೀತಿ ಯಿದ್ದರೂ, ಈ ಬಯಲು ಸೀಮೆ ಜನ ಅಲ್ಲಿಗೆ ಬಂದಾರೆ??? ಎನ್ನುವ ಭಾವನೆ ಇದ್ದುದು ಸುಳ್ಳಲ್ಲಾ . ಸರಿ ನಾನು ನನ್ನ ಗೆಳೆಯರೆಲ್ಲಾ ಈ ಮದುವೆಗೆ ಹೋಗಿ ಬರೋಣ ಅಂತಾ ತೀರ್ಮಾನಿಸಿ ಹೊರಟೆ ಬಿಟ್ಟೆವು.ಪಯಣ ಸಾಗಿತು, ಶ್ರೀ ರಂಗ ಪಟ್ಟಣ ದಿಂದ ಕಾರಿನಲ್ಲಿ ಸಂಜೆ ಆರಕ್ಕೆ ಬಿಟ್ಟು ಕೆ.ಆರ್.ಪೇಟೆ. ಚನ್ನರಾಯಪಟ್ಟಣ ,ಅರಸೀಕೆರೆ ,ಕಡೂರು, ತರಿಕೆರೆ,ಭದ್ರಾವತಿ, ಶಿವಮೊಗ್ಗ , ಸಾಗರ, ಸಿದ್ದಾಪುರ , ದಾಟಿ ಶಿರಸಿ ಸೇರಿದಾಗ ಬೆಳಿಗ್ಗೆ ಎಂಟು ಘಂಟೆ ಯಾಗಿತ್ತು.ಮುಂಚೆಯೇ ವಿಚಾರ ಗೊತ್ತಿದ್ದ ಗೆಳೆಯ ರಾಜ ಕೆ. ಭಟ್ ಹಾಗು ಅವರ ಸ್ನೇಹಿತರು ಆತ್ಮೀಯವಾಗಿ ಬರಮಾಡಿಕೊಂಡು ಅಲ್ಲಿಯೇ ಇದ್ದ ಐ.ಬಿ ಗೆ ಕರೆದು ಕೊಂಡು ಹೋಗಿ ನಾವು ವಿಶ್ರಾಂತಿ ಪಡೆಯಲು ತಿಳಿಸಿ ಮುಂದಿನ ಸಿದ್ದತೆ ನಡೆಸಿದ್ದರು. ಬೆಳಗಿನ ಕಾರ್ಯಪೂರ್ಣಗೊಳಿಸಿ ಸಿದ್ದವಾದೆವು, ನಾನು ಕೇಳಿದೆ " ರಾಜಾ ಕೆ ಭಟ್ ಅವರೇ
ಮದುವೆ ನಡೆಯುವ ಊರಿನ ಹೆಸರು ಏನು?? " ಅದಕ್ಕೆ ರಾಜಾ ಕೆ. ಭಟ್ :-
ಸರ್ ಅದಾ "ಉಪ್ಪರಿಗಿ" ಮನೆ ಅಂತಾ ಸಿರ್ಸಿ ಯಿಂದಾ ಎಲ್ಲಾಪುರ ಕಡೆ ಹೋಗುವ ದಾರಿಯಲ್ಲಿದೆ." ಅಂದ್ರೂ ನನ್ನ ಮನದಲ್ಲಿ ಈ ಊರು ತಲುಪಲು ಬಹುಷಃ ಬೆಟ್ಟ ಹತ್ತ ಬೇಕೆಂದು ಅಂದು ಕೊಂಡೆ . ಪಯಣ ಸಾಗಿತು. ಸಿರ್ಸಿ ಯಿಂದ ಎಲ್ಲಾಪುರ ರಸ್ತೆಯಲ್ಲಿ ಸಾಗಿದೆವು. ದಾರಿಯಲ್ಲಿ ಒಂದು ಕಡೆ ಕಾರನ್ನು ನಿಲ್ಲಿಸಲು ಹೇಳಿದ ರಾಜಾ.ಕೆ.ಭಟ್ ಬನ್ನಿ ಊರು ಹತ್ತಿರ ಬಂದಿದೆ ಇಲ್ಲಿಂದ ನಡೀಬೇಕೂ ಅಂದ್ರೂ. ಸರಿ ಕಾರನ್ನು ಅಲ್ಲೇ ಪರಿಚಯದವರ ಮನೆಯ ಬಳಿ ಬಿಟ್ಟು. ನಡೆದೆವು. ಇಲ್ಲಿಂದ ಚಾರಣ ಶುರುವಾಯ್ತು ಸುಮಾರು ನಾಲ್ಕು ಕಿ.ಮೀ
ಆಳಕ್ಕೆ ಇಳಿದೆವು ಅಲ್ಲಿ ಒಂದು ಕಡೆ ತೋಟದ ನಡುವೆ ಒಂಟಿ ಮನೆಯಲ್ಲಿ ಮದುವೆ ಸಡಗರ ನಡೆದಿತ್ತು. ನಾನು
"ಅಲ್ಲ್ರಯ್ಯ ಈ ಊರಿಗೆ ಉಪ್ಪರಿಗೆ ಮನೆ ಅಂತೀರಾ ಆದ್ರೆ ನಾವೀಗ ಬಂದದ್ದು ಪಾತಾಳಕ್ಕೆ ಆಲ್ವಾ ?? ಇದಕ್ಕೆ ಸರಿಯಾದ ಹೆಸರು "ಪಾತಾಳ ಮನೆ" ಅಂದೇ ಅದಕ್ಕೆ ಅಲ್ಲಿದ ಸ್ನೇಹಿತರು ನಗುತ್ತಾ ನೀನೆಳೋದೂ ಸರಿನೆ, ಅಂತಾ ಹೇಳಿದ್ರೂ, ಮದುವೆ ಮನೆಗೆ ಪ್ರವೇಶ ಮಾಡಿದೆವು. ಬಹು ದೂರದಿಂದ ಬಂದ ನಮಗೆ ಪ್ರೀತಿಯ ಸಿಂಚನದ ಸ್ವಾಗತ ಅಲ್ಲಿನವರಿಂದ , ಯಾರಿಗೂ ನಾವು ಹೊರಗಿನವರೆಂಬ ಭಾವನೆ ಇಲ್ಲ!! ಇಡೀ ವಾತಾವರಣ ಆನಂದವಾಗಿತ್ತು. ಮದುವೆ ಮುಗಿಸಿ ಗೆಳೆಯರ ಮನೆಗೆ ನಡೆದೆವು.ಬರುವಾಗ ಸುಲಭವಾಗಿ ಗುಡ್ಡ ಇಳಿದು ಬಂದಿದ್ದ ನಾವು ಮದುವೆ ಊಟ ತುಂಬಿದ್ದ ಗುಡಾಣಗಳಾಗಿದ್ದ ಹೊಟ್ಟೆಗಳನ್ನು ಹೊತ್ತುಕೊಂಡು ಗುಡ್ಡ ಏರಿದೆವು ಉಸಿರು ಬಾಯಿಗೆ ಬಂದಿತ್ತು !!!ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಗುಡ್ಡ ಬೆಟ್ಟಗಳನ್ನು ಹತ್ತಿ ಇಳಿದು ಹಲವರ ಮನೆಗಳಿಗೆ ಭೇಟಿ ಕೊಟ್ಟೆವು ಎಲ್ಲರ ಮನೆಯಲ್ಲಿಯೂ ಹಲಸಿನ ಸಿಹಿ ,ಖಾರ ತಿನಿಸುಗಳ ಸಮಾರಾಧನೆ . ಸಂಜೆಯ ಹೊತ್ತಿಗೆ ರಾಜಾ ಕೆ.ಭಟ್ ಮನೆಗೆ ಬಂದರೆ ಮೈ ಕೈ ಎಲ್ಲಾ ನೋವು ಸುಸ್ತು ರಾತ್ರಿ ಊಟ ಮಾಡಲು ಮನಸ್ಸಿಲ್ಲದಿದ್ರೂ ಹೊಟ್ಟೆ ಹಸಿವು ಕಾಡುತ್ತಿತ್ತು.
ರೀ ರಾಜು ಯಾಕೋ ಮೈಕೈ ಎಲ್ಲಾ ನೋವು ನಿದ್ದೆ ಬರೋಲ್ಲ ಅಂತಾ ಕಾಣ್ತಿದೆ ಕಣ್ರೀ" ಅಂದೇ, ಆಗ ರಾಜು
"ಸಾರ್ ನೀವೇನು ಯೋಚಿಸಬೇಡಿ ಒಳ್ಳೆ ನಿದ್ದೆ ಬರುತ್ತೆ ಮೈಕೈ ನೋವು ಹೋಗುತ್ತೆ ಅದಕ್ಕೆ ಮದ್ದು ಕೊಡ್ತೀನಿ ಈಗ ಊಟ ಮಾಡಿ "ಅಂತಾ ಹೇಳಿ ಒಂದು ಲೋಟದಲ್ಲಿ ತಿಳೀ ಸಾರಿನಂತಾ ದ್ರವ ತಗೊಂಡು ಬಂದು
"ಸರ್ ಇದನ್ನು ಕುಡೀರಿ" ಅಂದ್ರೂ."
ಏನ್ರೀ ಇದು ಅಂದೇ ಇದು "ಅಪ್ಪೆ ಹುಳಿ" ಅಂತಾ ಒಳ್ಳೆ ನಿದ್ದೆ ಬರುತ್ತೆ ಕುಡೀರಿ" ಅಂತಾ ಏನೇನೋ ಹೇಳಿದ್ರು .ಸ್ವಲ್ಪ ಕುಡಿದೆ ರುಚಿಯಾಗಿತ್ತು ಪೂರ್ತಿ ಕುಡಿದೆ ಮಜವಾಗಿತ್ತು , ಕಟ್ ಮಾಡಿದ್ರೆ ನಾನು ನಿದ್ರಾ ದೇವಿಯ ಲೋಕದೊಳಗೆ ಲೀನವಾಗಿದ್ದೆ
' "ಸಾರ್ ಎದ್ದೇಳಿ ಮಾಗೋಡು ಫಾಲ್ಸಿಗೆ ಹೋಗೋಣ!!" ಅಂತಾ ಯಾರೋ ಕೂಗಿದ ಹಾಗೆ ಕೇಳಿಸಿತು ಎಚ್ಚರವಾಗಿ ನೋಡಿದ್ರೆ
"ಏನ್ ಸಾರ್ ನಿನ್ನೆ ರಾತ್ರಿ ಎಂಟು ಘಂಟೆಗೆ ಮಲಗಿ ಇವತ್ತು ಹನ್ನೊಂದು ಘಂಟೆಗೆ ಎದ್ದಿದ್ದೀರಾ!!!" ಅಂದ್ರು. ಆ ಅಂತಾ ವಾಚ್ ನೋಡಿದ್ರೆ ಹನ್ನೊಂದು ಅಂತಾ ಸಮಯ ತೋರಿಸಿ ವಾಚು
"ಲೋ ಸೋಮಾರಿ" ಅಂತಾ ನಕ್ಕಂತೆ ಅನ್ನಿಸಿತು. ಹಿಂದಿನ ದಿನದ ಆಯಾಸ ಎಲ್ಲಾ ಪರಿಹಾರವಾಗಿ ಮೈಯೆಲ್ಲಾ ಹಗುರವಾಗಿ ಹೊಸ ಉಲ್ಲಾಸ ತುಂಬಿತ್ತು!!! ಹೊಸ ಚೈತನ್ಯ ದೊಡನೆ ತಡಬಡಾಯಿಸಿ ಎದ್ದು ನೋಡಿದ್ರೆ ನನ್ನ ಗೆಳೆಯರ ಕಥೆಯೂ ಅಷ್ಟೇ ಆಗಿತ್ತು. ಮನೆಯಲ್ಲಿ ಹಬ್ಬದ ದಿನಗಳಲ್ಲಿ "ಗಸಗಸೆ ಪಾಯಸ" ಕುಡಿದು ನಿದ್ದೆ ತೆಗೆಯುತ್ತಿದ್ದವನಿಗೆ ಈ
"ಅಪ್ಪೆ ಹುಳಿ" ನಾನು
"ಗಸಗಸೆ ಪಾಯಸದ ಅಪ್ಪಾ" ಅಂತಾ ಪ್ರೂವ್ ಮಾಡಿತ್ತು. ಈ ರೀತಿ ಪರಿಚಯವಾದ "ಅಪ್ಪೆಹುಳಿ" ಇವತ್ತಿಗೂ ನನ್ನ ಮೆಚ್ಚಿನ ಪಾನೀಯ ವಾಗಿದೆ. ಆನಂತರ ರೀ ರಾಜು ಈ ಅಪ್ಪೆ ಹುಳಿ ಮಾಡೋದು ಹೇಗ್ರೀ ಅಂದೇ ಅಂದು ಅವರು ಹೇಳಿದ್ದು ನನಗೂ ಸರಿಯಾಗಿ ಅರ್ಥ ಆಗಿರಲಿಲ್ಲ.