ಕಳೆದ ಗುರುವಾರ ದಿನಾಂಕ 17 /02 /2011 ರಂದು ನನ್ನ ಸಂಬಂಧಿಯ ಮದುವೇ ನಿಶ್ಚಿತಾರ್ಥ , ಕಾರ್ಯಕ್ರಮ ಹೆಂಡತಿಯ ಕಡೆ ನೆಂಟ , ಹಾಗಾಗಿ ಬೆಂಗಳೂರಿಗೆ ಬರುವ ಕಾರ್ಯಕ್ರಮ, ಬೆಂಗಳೂರಿಗೆ ಬರುವ ಮೊದಲೇ ಹಲವು ಬ್ಲಾಗಿಗರು ಬೆಂಗಳೂರಿಗೆ ಆಗಮಿಸುತ್ತಿರುವ ವಿಚಾರ ಅನಿಲ್ ಬೇಡಗೆ, ಪ್ರಕಾಶಣ್ಣ, ಶಿವೂ , ಇವರ ಮೂಲಕ ತಿಳಿಯಿತು.ಹಾಗಾಗಿ ದೆಹಲಿಯಿಂದ ಬರುವ ಪ್ರವೀಣ್ ಆರ್ ಗೌಡ ಹಾಗೂ ಸ್ವೀಡನ್ ದೇಶದಿಂದ ಆಗಮಿಸಿದ್ದ ಗುರುಮೂರ್ತಿ ಹೆಗ್ಡೆ ರವರುಗಳನ್ನು ನೋಡುವ ಅವಕಾಶ ಸಿಗುವುದಾಗಿ ಹಿಂದಿನ ದಿನವೇ ತಿಳಿದು ಬಂತು. ಸರಿ ಮಾರನೆ ದಿನ ಮುಂಜಾವಿಗೆ ಸಂತೋಷದ ಪಯಣ ಬೆಂಗಳೂರಿಗೆ ಆರಂಭವಾಗಿ ಬೆಂಗಳೂರಿನ ವಾಹನಗಳ ಸಾಗರ ದಾಟಿ ತಲುಪಬೇಕಾದ ಜಾಗ ತಲುಪಿದಾಗ ಹನ್ನೊಂದು ಘಂಟೆ.!!! ಸರಿ ಶಿವೂ ಜೊತೆ ಮಾತಾಡಿ ಭೇಟಿಯಾಗಬೇಕಾದ ಸ್ಥಳ ಹಾಗೂ ಸಮಯ ನಿಗದಿಪಡಿಸಿಕೊಂಡು ಹೊರಟೆ. ಪಾಪ ನಮ್ಮ ಪ್ರಕಾಶ್ ಹೆಗ್ಡೆಗೆ ಆದಿನ ಆರೋಗ್ಯ ಕೈ ಕೊಟ್ಟು ಅವರು ಬರುವುದಿಲ್ಲವೆಂದು ತಿಳಿಯಿತು.ಏಕಾಂಗಿ ಸಂಚಾರಿನಾನು ಬಸವನಗುಡಿ ಬ್ಯೂಗಲ್ ರಾಕ್ ಕಾಮತ್ ಕಡೆಗೆ ಹೊರಟೆ. ಹೋಟೆಲ್ ಬಳಿ ಬಂದು ಶಿವೂ ಗೆ ಫೋನ್ ಮಾಡಿದ್ರೆ ಸಾರ್ ಬನ್ನಿ ಒಳಗೆ ಇಲ್ಲೇ ಇದ್ದೀವಿ ಅಂದ್ರೂ !!!ಹೌದಾ ಬಂದೆ ಅಂತಾ ಒಳಗಡೆ ಹೊರಟೆ "ಸಾಗರದಾಚೆಯ ಇಂಚರ''ಬ್ಲಾಗು "ಛಾಯಾಕನ್ನಡಿ" ಬ್ಲಾಗಿನ ಜೊತೆಯಲ್ಲಿ ಆಗಲೇ ಜುಗಲ್ಬಂದಿ ನಡೆಸಿತ್ತು !!! ಎಷ್ಟೋ ವರ್ಷದಿಂದ ಪರಿಚಯ ಇದ್ದವರಂತೆ ಗುರುಮೂರ್ತಿ ಹೆಗ್ಡೆ "ಬನ್ನಿ ಸಾರ್" ನಗುಮುಖದಿಂದ ಆತ್ಮೀಯವಾಗಿ ಸ್ವಾಗತಿಸಿದರು.ಇನ್ನೂ ಶಿವೂ ಬಗ್ಗೆ ಹೇಳೋದೇ ಬೇಡ ಅದೇ ಪ್ರೀತಿಯ ಆತ್ಮೀಯ ನುಡಿಗಳ ಸ್ವಾಗತ . ವಾತಾವರಣಕ್ಕೆ ಪ್ರೀತಿ ವಿಶ್ವಾಸದ ಸಿಂಚನ ವಾಯಿತು.ಅಷ್ಟರಲ್ಲಿ ಪ್ರವೀಣ್ ಫ್ಲೈಟು ಲೇಟಾಗಿ ಅವರು ಹಾಗೂ ಅವರ ಜೊತೆ ಬರಬೇಕಾಗಿದ್ದ ಅನಿಲ್ ತಂಡ ಬರಲಾಗುತ್ತಿಲ್ಲವೆಂದು ತಿಳಿಯಿತು. ಸರಿ ಮೂರು ಜನರೇ ಆತ್ಮೀಯವಾಗಿ ಹರಟೆ ,ನಗು , ಹಲವು ಕೌತುಕಗಳ ವಿಚಾರ ವಿನಿಮಯ , ಮಾಡಿದೆವು. ಸರಿ ಹೊಟ್ಟೆ ಚುರುಗುಟ್ಟಲು ಶುರುಮಾಡಿದ ಕಾರಣ ಹೋಟೆಲ್ ಮೇಲಿನ ಆವರಣಕ್ಕೆ ತೆರಳಿ ಊಟಕ್ಕೆ ಆರ್ಡರ್ ಮಾಡಿ ಹರಟಲು ಕುಳಿತೆವು.ಸ್ವೀಡನ್ ದೇಶದ ವಿಶೇಷತೆ, ಅಲ್ಲಿನ ಜಾನಪದ ಹಾಡುಗಳು, ಒಪೆರಾ , ಹಳ್ಳಿಗಳಲ್ಲಿನ ಜೀವನ , ಅಲ್ಲಿನ ಸಂಗೀತ , ಇತಿಹಾಸ , ಟಿ.ವಿ.ಕಾರ್ಯಕ್ರಮಗಳು, ಉತ್ತರದ್ರುವದಲ್ಲಿನ ಹಿಮಕರಡಿಗಳು, ಹವಾಮಾನ, ಅಲ್ಲಿನ ಸಾರ್ವಜನಿಕರಿಗೆ ಅಲ್ಲಿ ದೇಶ ನೀಡುವ ಸೌಲಭ್ಯ , ಅಲ್ಲಿನ ತೆರಿಗೆ ಪದ್ಧತಿ ಎಲ್ಲಾ ವಿಚಾರಗಳ ಬಗ್ಗೆ ಸಾಗರದಾಚೆಯ ಮಿತ್ರ ವಿಶದವಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸಿದರು, ನನ್ನ ಅಲ್ಪ ಜ್ಞಾನದ ಬ್ಯಾಂಕಿನ ಖಾತೆಗೆ ಜ್ಞಾನದ ಹರಿವು ಬಂದಿತ್ತು. ಇನ್ನೂ ಶಿವೂ ನಿಕಾನ್ ಕ್ಯಾಮರಾಗಳ ಬಗ್ಗೆ ಒಳ್ಳೆಯ ಮಾಹಿತಿ, ಸಿರಸಿಯ ಸುಗಾವಿಯಲ್ಲಿ ಅವರು ತೆಗೆದ ಫೋಟೋಗಳ ಬಗ್ಗೆ , ಹೀಗೆ ಹಲವಾರು ವಿಚಾರಗಳನ್ನು ತಿಳಿಸುತ್ತಿದ್ದರೆ ಅಚ್ಚರಿಗೊಳ್ಳುವ ಸರದಿ ನನ್ನದಾಗಿತ್ತು.
ಸಂತಸದ ಈ ವಾತಾವರಣದಲ್ಲಿ ಆತ್ಮೀಯತೆ ಮನೆಮಾಡಿ ರುಚಿಯಾದ ಊಟ ಹೆಚ್ಚು ರುಚಿಸಿತ್ತು. ನಂತರ ಶಿವೂ ಕ್ಯಾಮರಾ ನಮ್ಮ ನೆನಪಿನ ಚಿತ್ರಗಳನ್ನು ಸೆರೆ ಹಿಡಿತಿತ್ತು. ಬಹಳಷ್ಟು ಕಾರ್ಯ ಬಾಕಿ ಇದ್ದ ಕಾರಣ ಮೂರೂಜನರು ಒಲ್ಲದ ಮನಸಿನಿಂದ ನಮ್ಮ ಹಾದಿ ಹಿಸಿದೆವು."ಸಾಗರದಾಚೆಯ ಇಂಚರ" ಹಾಗೂ "ಛಾಯಾ ಕನ್ನಡಿ" ಯ ಪ್ರೀತಿಯ ಹೊಳೆಯಲ್ಲಿ ತೇಲಾಡಿದ ನಿಮ್ಮೊಳಗೊಬ್ಬ ಅಂದು ನಡೆದ ಸುಂದರ ಗಳಿಗೆಗಳ ಮೆಲುಕು ಹಾಕುತಾ ಶುಭ ವಿಧಾಯ ಹೇಳಿ ಹೊರಟ ನನಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡವು. ೧] ಇವರುಗಳು ನಾನು ಹುಟ್ಟಿದಾಗಿನಿಂದ ನೋಡಿದ ಜನಗಳಂತೂ ಅಲ್ಲಾ ಆದರೂ ಇವ್ರು ಯಾಕೆ ಇಷ್ಟು ಹೃದಯಕ್ಕೆ ಹತ್ತಿರ ಆಗ್ತಾರೆ ?? ೨] ಎಲ್ಲೆಲ್ಲಿಯೂ ತಾವೇ ಹೆಚ್ಚು ತಮ್ಮ ನಿಲುವೆ ಸರಿ ತಮ್ಮನ್ನು ಬಿಟ್ಟು ಈ ಪ್ರಪಂಚ ವಿಲ್ಲ ಅನ್ನುವ ಈ ಸಮಯದಲ್ಲಿ ನಾವುಗಳು ಯಾಕೆ ಹೀಗೆ ಹತ್ತಿರವಾಗುತ್ತಿದ್ದೇವೆ?? ೩] ಎಲ್ಲಾ ಕಡೆ ಹಣಕ್ಕೆ ಪ್ರಾಮುಖ್ಯತೆ ಕೊಡುವ ಜನ ಕಂಡುಬರುತ್ತಿರುವ ಸನ್ನಿವೇಶದಲ್ಲಿ ನಮ್ಮ ಬ್ಲಾಗಿಗರಲ್ಲಿ ಸ್ನೇಹದ ಚಿಲುಮೆ ಹೊಮ್ಮುತ್ತಿರಲು ಕಾರಣವೇನು??? ೪] ಇನ್ನೂ ಅತೀ ಹೆಚ್ಚು ಓದಿ ಪದವಿಗಳಿಸಿದವರು ಕಡಿಮೆ ಓದಿನ ಜನರೊಡನೆ ಬೆರೆಯುವುದು ಕಷ್ಟ ಆದರೂ ಇಲ್ಲಿ ಅದು ಇಲ್ಲ ಯಾಕೆ ?? [ಇದೆ ಪ್ರಶ್ನೆ ಉದ್ಯೋಗದ ಬಗ್ಗೆ ಯೂ ಉದ್ಭವಿಸುತ್ತದೆ.] ಯಾವುದೋ ಊರು, ಯಾವ್ದೋ ದೇಶ, ಯಾವುದೋ ಪರಿಸರದ ಜನಗಳಾದ ನಾವು ಹೀಗೇಕೆ ಬೆಸೆದು ಕೊಳ್ಳುತ್ತಿದ್ದೇವೆ?? ಹಾಗಾದ್ರೆ ಈ ಬ್ಲಾಗ್ ಬರಹ ಕ್ರಾಂತಿ ಮಾಡುತ್ತಿದೆಯೇ.?? ಇತರ ಮಾಧ್ಯಮ ಯಾಕೆ ಇಂತಹ ಕ್ರಾಂತಿಗೆ ಪೂರಕವಾಗಿಲ್ಲ ??? ಎಂದೆಲ್ಲಾ ಯೋಚಿಸುತ್ತಾ ಮನೆಗೆ ಬಂದೆ ಆರಾಮ ಕುರ್ಚಿಯ ಮೇಲೆ ಒರಗಿದ ನನಗೆ ಮೆತ್ತಗೆ ಬೀಸಿದ ತಂಗಾಳಿ ನೆನಪಿನ ಗುಂಗಿನಲ್ಲಿ ಸಂತಸದಿಂದ ನಿದ್ದೆ ತಂದಿತ್ತು ಗುರು ಮೂರ್ತಿ ಹೆಗ್ಡೆ ನೀಡಿದ ಪ್ರೀತಿ ಕಾಣಿಕೆ '' ಸಾಗರದಾಚೆಯ ಇಂಚರ " ಪುಸ್ತಕ ನಗುತ್ತಾ ಎದೆಯ ಮೇಲೆ ಮಲಗಿತ್ತು.....!!!
