Sunday, June 14, 2015

ಜನರ ಮುಂದೆ ಮಾತಾಡೋದು ಅಂದ್ರೆ ಉಫ಼್ಫ಼್ ಕಷ್ಟ ಕಷ್ಟಾ .....!

 ಸಾಂದರ್ಭಿಕ  ಚಿತ್ರ  ಕೃಪೆ ಅಂತರ್ಜಾಲ 



ನಮಸ್ತೆ ಗೆಳೆಯರೇ , ಗೆಳೆಯರು ಒಬ್ಬರು  ಹೇಳ್ತಾ ಇದ್ರೂ .....   ಮೊನ್ನೆ ಮೊನ್ನೆ ವರ್ಗೂ  ಅವನಿಗೆ ನೆಟ್ಟಗೆ ಮಾತಾಡೋಕೆ ಬರ್ತಾ ಇರಲಿಲ್ಲ , ಈಗೆನ್ರೀ  ಅಷ್ಟೊಂದು  ಜನರ ಮುಂದೆ ನಿಂತು   ಯಾವುದೇ ವಿಚಾರದ ಬಗ್ಗೆ ಬೇಕಾದರೂ  ಮಾತಾಡೋ ಧೈರ್ಯ ಬಂದಿದೆ , ಮೊನ್ನೆ ಅವನ ಮಾತು ಕೇಳಿದೆ  ಅಬ್ಬಬ್ಬ   ಏನ್ರೀ ಬಹಳ  ಕಮಾಲ್ ಮಾಡಿದ ಬಿಡ್ರೀ ಅಂತಾ ನನ್ನ ಇನ್ನೊಬ್ಬ ಗೆಳೆಯನೊಬ್ಬನ  ಬಗ್ಗೆ  ಮೆಚ್ಚುಗೆ ವ್ಯಕ್ತ ಪಡಿಸಿದರು .

ಈ ಜನರ ಸಮಾರಂಭ , ಮೈಕು , ವೇದಿಕೆ  ಇತ್ಯಾದಿಗಳು  ಒಂತರಾ  ಆಕರ್ಷಣೆ ಕಣ್ರೀ  ಎಲ್ಲರಿಗೂ ಒಮ್ಮೆಯಾದರೂ ನಾನು ಸಹ  ಒಮ್ಮೆ ಇಂತಹ ವಾತಾವರಣದಲ್ಲಿ  ಮಾತನಾಡಬೇಕು ಅಂತಾ ಖಂಡಿತಾ ಅನ್ಸಿರುತ್ತೆ,  ಆದರೆ ಮನದ  ಒಳಗೆ ಅಡಗಿರುವ ಭಯ, ಸಂಕೋಚ,  ನಾಚಿಕೆ ಇತ್ಯಾದಿಗಳು   ನಮ್ಮನ್ನು  ಇಂತಹ ಅವಕಾಶಗಳಿಂದ  ವಂಚಿತರನ್ನಾಗಿ ಮಾಡಿಬಿಡುತ್ತವೆ . ಆದರೆ ಒಂದು ಮಾತು,   ಯಾರೂ ಸಹ ಒಮ್ಮೆಲೇ  ಧೈರ್ಯವಾಗಿ  ವೇದಿಕೆಯಲ್ಲಿ, ಸಭೆಗಳಲ್ಲಿ,  ಮಾತನಾಡಲು  ಆಗುವುದಿಲ್ಲ,  ಹಲವಾರು ಎಡವಟ್ಟುಗಳು ಘಟಿಸಿದ ನಂತರವೇ   ನಮ್ಮ  ಮಾತನಾಡುವ ಹಾದಿ ಸುಗಮ  ಆಗೋದು  ಎಂಬಂತೂ ಸತ್ಯ .

 ಚಿಕ್ಕವಯಸ್ಸಿನಿಂದ  ತರಗತಿಗಳಲ್ಲಿ ಪಾಠ  ಮಾಡುವ ಶಿಕ್ಷಕರು, ಸಾರ್ವಜನಿಕ ಸಭೆ, ಸಮಾರಂಭ , ತರಬೇತಿ   ಕಾರ್ಯಕ್ರಮಗಳಲ್ಲಿ ಮಾತನಾಡುವ ವ್ಯಕ್ತಿಗಳನ್ನು ನೋಡಿ ನಾನೂ ಸಹ ಹೀಗೆ ಮಾತನಾಡುವ  ಆಸೆ ಆಗ್ತಾ ಇತ್ತು, ಆದರೆ ಮನದಲ್ಲಿನ ಪುಕ್ಕಲುತನ  ಇದಕ್ಕೆ ಅವಕಾಶ  ಕೊಡುತ್ತಿರಲಿಲ್ಲ .   ಬುದ್ದಿ ಬಲಿತ ನಂತರ  ಪುಕ್ಕಲುತನ ಬಿಟ್ಟು  ಅಡ್ಡಾ ದಿಡ್ಡಿಯಾಗಿ  ಎಡವಟ್ಟು ಮಾಡಿಕೊಳ್ಳುತ್ತಾ ಹಾದಿಗೆ  ಬಂದೆ . ಇಂತಹ ಎಡವಟ್ಟುಗಳ  ನೆನಪು  ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ  ಬನ್ನಿ.

೧] ನಾನಾಗ  ಆರನೇ ತರಗತಿಯ ವಿದ್ಯಾರ್ಥಿ  ಮಳವಳ್ಳಿ ಸರ್ಕಾರಿ ಪ್ರಾಥಮಿಕ  ಶಾಲೆ ಯಲ್ಲಿ     ಪುಷ್ಪಾವತಮ್ಮ  ಎನ್ನೋ  ಪೂಜ್ಯ ಮುಖ್ಯ ಶಿಕ್ಷಕಿ  ಇದ್ದರು, ಮಕ್ಕಳ ಪ್ರತಿಭೆ ಹೊರತಂದು  ಶಾಲೆಯ ಕೀರ್ತಿ ಬೆಳಗಿಸುವ  ಹಂಬಲ ಅವರದು ,  ಹೇಗಾದರೂ ಮಾಡಿ  ತಮ್ಮ ಶಾಲೆಯ ಮಕ್ಕಳಿಂದ  ಆಕಾಶವಾಣಿಯಲ್ಲಿ  ಕಾರ್ಯಕ್ರಮ ಕೊಡಿಸುವ  ಆಸೆ ಅವರದು,  ಮಕ್ಕಳ ಪ್ರತಿಭೆಯ  ಪರೀಕ್ಷೆ ಮಾಡಲು ಹೊರಟರು ,  ಪ್ರತಿಭಾ ಪರೀಕ್ಷೆಗೆ  ಆಯ್ಕೆಯಾದವರಲ್ಲಿ  ನಾನೂ ಒಬ್ಬ,   ತರಗತಿಯ ಆಯ್ಕೆ ಸುತ್ತಿನಲ್ಲಿ  ಮಿಮಿಕ್ರಿಯಲ್ಲಿ   ಆಯ್ಕೆಯಾಗಿದ್ದೆ  ನಾನು ,   ಮನೆಯಲ್ಲಿ  ಬಹಳ ಜಂಬಾ  ಕೊಚ್ಚಿಕೊಂಡಿದ್ದೆ ,  ಅಮ್ಮನಿಗೂ ತನ್ನ ಮಗ ಜಗವನ್ನೇ ಗೆದ್ದ ಎಂಬ ಖುಷಿ . ಅಂತಿಮ ಸುತ್ತಿನ  ಆಯ್ಕೆ ಇದೇ ಶಾಲೆಯ   ಶಿಕ್ಷಕರ ಹಾಗು ಮಕ್ಕಳ ಎದುರು ಪ್ರದರ್ಶನ ನೀಡಬೇಕು,   ಆ ದಿನ ಬಂದೆ ಬಿಟ್ಟಿತು,  ಕಾರ್ಯಕ್ರಮ ಶುರು ಆಯ್ತು , ಕೆಲ ಮಕ್ಕಳು  ಹೆದರದೆ  ಪ್ರದರ್ಶನ ನೀಡಿ ಚಪ್ಪಾಳೆ ಗಿಟ್ಟಿಸಿದರು , ಆದರೆ ನನ್ನ ಸರದಿ ಬಂತು, ಮೈಕಿನಲ್ಲಿ ನನ್ನ ಹೆಸರನ್ನು  ಕರೆದರೂ , ಏಳಲು ಆಗುತ್ತಿಲ್ಲಾ,   ಆದರೆ ಕುಳಿತಿದ್ದ  ಭೂಮಿ ನನ್ನ ದೇಹವನ್ನು  ಕಚ್ಚಿಕೊಂಡು   ನನ್ನನ್ನು  ಮೇಲೆ ಏಳಲು ಬಿಡಲಿಲ್ಲ,  ಮೈಯೆಲ್ಲಾ ನಡುಕ ಶುರು ಆಗಿ,  ಯೂನಿಫಾರ್ಮ್ ಚಡ್ಡಿ ಒದ್ದೆಯಾಗಿ   ,  ಬಾಯಲ್ಲಿನ  ಜೊಲ್ಲು ರಸ ಬತ್ತಿ ಹೋಗಿ  ಅವಮಾನಿತನಾಗಿ  ಜಾಗ ಖಾಲಿಮಾಡಿದೆ , ನನ್ನ ಹೆಸರನ್ನು ಕರೆದೂ ಕರೆದೂ ಸುಸ್ತಾಗಿ  ಮುಂದಿನ ವಿಧ್ಯಾರ್ಥಿಯನ್ನು  ಕರೆದಿದ್ದರು,  ಮಾರನೆಯ ದಿನ ನನಗೆ  ಬಿಸಿ ಬಿಸಿ ಏಟಿನ  ಕಜ್ಜಾಯ  ಸೇರಿದಂತೆ ಮಾರನವಮಿಯ  ಹಬ್ಬ  ತರಗತಿಯಲ್ಲಿ  .




 ಸಾಂದರ್ಬಿಕ  ಚಿತ್ರ  ಕೃಪೆ ಅಂತರ್ಜಾಲ





೨]  ಅದೊಂದು   ತರಬೇತಿಯ  ಕಾರ್ಯಕ್ರಮ ,  ನನ್ನ ಹಿರಿಯ  ಅಧಿಕಾರಿಗಳು  ತರಬೇತಿ ನೀಡಬೇಕಾಗಿತ್ತು,  ತರಬೇತಿ ಪಡೆಯಲು   ಸುಮಾರು  ೧೦೦ ಕ್ಕೂ  ಹೆಚ್ಚು ಶಿಕ್ಷಕರು, ಹಾಗು ವಿವಿಧ  ಇಲಾಖೆಯ  ಅಧಿಕಾರಿಗಳು  ಆಗಮಿಸಿದ್ದರು .  ತರಬೇತಿ  ಕಾರ್ಯಕ್ರಮ  ಉದ್ಘಾಟನೆ  ಆಯಿತು,   ನಂತರ  ನನ್ನ ಅಧಿಕಾರಿಗಳು  ಅಲ್ಲಿದವರನ್ನು ಉದ್ದೆಶಿಸಿ ,  ಈ  ತರಬೆತಿಗೆ ನೀವೆಲ್ಲಾ ಬಂದಿದ್ದು ಸಂತೋಷ  , ತರಬೇತಿ ಚೆನ್ನಾಗಿ ಪಡೆದು  ಉತ್ತಮವಾಗಿ ಕಾರ್ಯ ನಿರ್ವಹಿಸಿ ಸಮಾಜಕ್ಕೆ    ಒಳ್ಳೆ ಹೆಸರನ್ನು ತನ್ನಿ ಎನ್ನುತ್ತಾ  ಎಲ್ಲರಿಗೂ ವಂದಿಸಿದರು , ನಂತರ ಈಗ ಮುಂದಿನ  ತರಬೇತಿಯನ್ನು ಶ್ರೀ ಬಾಲೂ ನಿಮಗೆ ನೀಡ್ತಾರೆ   ಅಂದು ನನ್ನ ಕಡೆ ನೋಡಿ  ಅನಿರೀಕ್ಷಿತ ಬಾಂಬ್  ಎಸೆದು   ನಡೆದು ಬಿಟ್ಟರು, ನಿರೀಕ್ಷೆ  ಮಾಡದೆ ಇದ್ದ  ಕೆಲ್ಸಾ ಅದು, ಶಾಲೆಯ ಒಂದು   ತರಗತಿಯ  ಕೋಣೆ ಆದ ಕಾರಣ   ಮಕ್ಕಳಿಗೆ  ಪಾಠ  ಮಾಡುವಂತೆ  ಬೋರ್ಡ್  ಬಳಸಿ  ಗಂಟೆ ಗಟ್ಟಲೆ ಪಾಠ  ಮಾಡಬೇಕಾಗಿತ್ತು,  ವಿಚಿತ್ರಾ ಅಂದರೆ ಜೀವನದಲ್ಲಿ ಎಂದೂ  ಹೀಗೆ ತರಬೇತಿ ನೀಡಿದ್ದಾಗಲೀ, ಪಾಠ  ಮಾಡಿದ್ದಾಗಲಿ ಇರಲಿಲ್ಲ,   ಅದೂ ಅಲ್ಲದೆ ವಯಸ್ಸಿನಲ್ಲಿ ನಾನೂ ಅಲ್ಲಿದ್ದ ಎಲ್ಲರಿಗಿಂತಾ  ಬಹಳ ಚಿಕ್ಕವನು ,   ತರಬೇತಿ ಪಡೆಯಲು  ಬಂದವರಲ್ಲಿ ನನಗೆ ಪ್ರಾಥಮಿಕ  ಹಾಗು ಪ್ರೌಡಶಾಲೆಯಲ್ಲಿ  ಪಾಠ  ಮಾಡಿದ್ದ ಸುಮಾರು  ಆರುಜನ  ಗುರುಗಳೂ ಸಹ ಇದ್ದರು,  ಅಯ್ಯೋ ದೇವ್ರೇ   ಅಂತಾ  ಬೆಪ್ಪನಂತೆ   ನಿಂತಿದ್ದೆ , ಭೂಮಿಯೇ ಬಾಯ್ತೆರೆದು   ನನ್ನನ್ನು  ನುಂಗಿ  ಬಿಡಬಾರದೇ  ಅನ್ನಿಸುತ್ತಿತ್ತು,  ಇನ್ನು ಮುಂದಿದ್ದ   ಬಹಳಷ್ಟು ಜನ  ಇದ್ಯಾವ್ದೋ  ಚಿಕ್ಕ ಹುಡುಗನನ್ನು ತಂದು ನಿಲ್ಲಿಸಿ  ತರಬೇತಿ ಕೊಡಿಸೋಕೆ  ಹೊರಟಿದ್ದಾರೆ ನೋಡ್ರೀ ಅಂತಾ ಗೇಲಿಮಾಡಲು  ಶುರು ಮಾಡಿದ್ರು,  ನಾನು ಏನೂ ತಿಳಿಯದೆ  ಕೈ ಕಾಲು ನಡುಗಿಸುತ್ತಾ ನಿಂತಿದ್ದೆ, ನನ್ನ ಸ್ಥಿತಿಯನ್ನು ಗಮನಿಸಿದ  ನನ್ನ ಗುರುಗಳು ಒಬ್ಬರು  ಹತ್ತಿರ ಬಂದು  ಬಾಲೂ  ಹೆದರ ಬೇಡ , ನಾವು ಯಾರೂ ಇಲ್ಲಿ  ಪರಿಪೂರ್ಣರಲ್ಲಾ , ಮುಂದೆ ನಿನಗೆ ಅರ್ಥಾ ಆಗುತ್ತೆ,  ಇವತ್ತು ನಿನಗೆ ತಿಳಿದಷ್ಟನ್ನು ಹೇಳು ನಂತರ  ಮತ್ತೊಮ್ಮೆ ಸಿದ್ದವಾಗಿ ಬಾ ನಾಳೆ  ನಿನಗೆ ಸುಲಭ ಆಗುತ್ತೆ ಅಂತಾ  ಹೇಳಿ, ಅಲ್ಲಿದ್ದವರನ್ನು  ಉದ್ದೇಶಿಸಿ, ನೋಡಿ ಈ ಹುಡುಗ ತರಬೇತಿ  ನೀಡಲು ಅವಕಾಶ ಕೊಡಿ,  ಎಲ್ಲರಿಂದಲೂ ನಾವು ಕಲಿಯುವು ಇದ್ದೆ ಇರುತ್ತೆ,   ಅಂತಾ ತಿಳಿಹೇಳಿ ಗಲಾಟೆಯನ್ನು ತಹಬಂದಿಗೆ ತಂದು ಈಗ ಶುರು ಮಾಡಪ್ಪಾ ಅಂತಾ ಹೇಳಿದರು,  ಈ ಒಂದು ಮಾತು ನನ್ನಲ್ಲಿ ಆತ್ಮ ವಿಶ್ವಾಸ  ಹೆಚ್ಚಿಸಿ,  ಅಂದಿನ ತರಬೇತಿಯನ್ನು  ಶುರು ಮಾಡಿದೆ, ಆದರೆ ಹೇಳಬೇಕಾದ ವಿಚಾರಗಳ ಬಗ್ಗೆ ತಲೆ ಖಾಲಿಯಿತ್ತು,  ಆದರೆ ಸೋಲೊಪ್ಪಿಕೊಳ್ಳುವ ಮನಸಾಗಲಿಲ್ಲ,   ನನಗೆ ನಾನೇ  ಸಂಬಾಳಿಸಿಕೊಂಡು  ಧೈರ್ಯ ತಂದು ಕೊಂಡು,   ತರಬೇತಿಯ ಬಗ್ಗೆ ಮಾತನಾಡಲು ಶುರು ಮಾಡಿದೆ   ಬನ್ನಿ ತರಬೇತಿಗಾಗಿ ನಮಗೆ  ಕೊಟ್ಟಿರುವ ನಮೂನೆಗಳ ಪರಿಚಯ ಮಾಡಿಕೊಳ್ಳೋಣ ಅಂತಾ ಹೇಳಿ  ಉದ್ದೇಶಿತ ಕೆಲಸದಲ್ಲಿ  ನೀಡಿರುವ ವಿವಿಧ ನಮೂನೆಗಳು, ಅವುಗಳನ್ನು ಬಳಸುವ ರೀತಿ ಅದರಲ್ಲಿ  ಮಾಹಿತಿಯನ್ನು ಹೇಗೆ ಭರ್ತಿ ಮಾಡಬೇಕು  ಎಂಬ ರೀತಿ ಇತ್ಯಾದಿಗಳನ್ನು  ತಿಳಿಸಿಕೊಟ್ಟೆ , ಮಾತನಾಡುತ್ತಾ ಮಾತನಾಡುತ್ತಾ, ಉತ್ಸಾಹದ  ಚಿಲುಮೆ ಜಿನುಗಲು ಶುರು  ಆಯ್ತು,  ಮುಂದುವರೆದು  ದಯಮಾಡಿ  ನಿಮಗೆ ಕೊಟ್ಟಿರುವ ಕೈಪಿಡಿಯನ್ನು ಓದಿಕೊಂಡು  ಬನ್ನಿ ಅಂತಾ ಹೇಳಿ  ನಿಗದಿತ  ಸಮಯಕ್ಕಿಂತಾ  ಎರಡು ತಾಸು ಮೊದಲೇ  ತರಬೇತಿ  ಮುಕ್ತಾಯ ಗೊಳಿಸಿದೆ ,  ಅಲ್ಲಿಂದ ಹೊರಟವನೆ   ೧೫೦ ಪುಟಗಳ  ಕೈಪಿಡಿಯನ್ನು  ಸುಮಾರು ಎರಡು ಸಾರಿ ಓದಿ  ಚೆನ್ನಾಗಿ ಮನನ ಮಾಡಿಕೊಂಡು , ಜೊತೆಗೆ  ನನ್ನದೇ ಆದ ಶೈಲಿಯಲ್ಲಿ  ಚಾರ್ಟ್  ತಯಾರಿಸಿಕೊಂಡು  ಮಾರನೆಯ ದಿನದ ಯುದ್ದಕ್ಕೆ ಸಿದ್ದನಾದೆ ,  ಮಾರನೆಯ ದಿನ  ಹೇಳಬೇಕಾದ  ವಿಚಾರಗಳು   ಸುಲಭವಾಗಿ  ನಾಲಿಗೆಯ ಮೇಲೆ  ಕುಣಿದಾಡುತ್ತಾ  ಹೊರಗೆ ಬಂದವು, ತರಬೇತಿ ಪಡೆದ ನುರಿತ ಶಿಕ್ಷಕನಂತೆ  ತರಬೇತಿಯ ವಿಚಾರಗಳನ್ನು  ನನ್ನದೇ ಆದ  ಶೈಲಿಯನ್ನು ಬಳಸಿ , ಬೋರ್ಡ್  ಮೇಲೆ ಬರೆಯುತ್ತಾ , ಚಾರ್ಟ್  ಬಳಸಿ ವಿವರಿಸುತ್ತಾ  ತಿಳಿಸಿದೆ,  ಅಂದು ಸುಮಾರು ಆರು ಗಂಟೆಗಳ ಕಾಲ  ವಿವರ ನೀಡಿದರೂ  ಸಹ  ಮನದಲ್ಲಿ ಹೊಸ ಹೊಸ ವಿಚಾರಗಳು  ಹೊಳೆಯುತ್ತಲೇ ಇದ್ದವು , ಅಂದಿನ ತರಬೇತಿ ಮುಗಿದ ನಂತರ  ಮೊದಲ ದಿನ   ಗೇಲಿ ಮಾಡಿದ್ದ ಶಿಕ್ಷಕರು ಹತ್ತಿರ ಬಂದು  ಅಭಿನಂದಿಸಿ  ಖುಷಿಪಟ್ಟರು,  ಅಂದಿನ ಎಡವಟ್ಟು ಜೀವನದಲ್ಲಿ ಮರೆಯಲಾರದ್ದು ಹಾಗು ಅನುಭವ   ಅಮೂಲ್ಯವಾದದ್ದು  ಇಂದಿಗೂ ಕೂಡ   ಆ ನೆನಪು  ನನಗೆ ಬೆಂಗಾವಲಾಗಿ  ಯಾವುದೇ ವಿಚಾರ  ಅಧ್ಯಯನ  ಮಾಡದೆ , ತಿಳಿಯದೆ ಮಾತನಾಡ ಬಾರದು ಎಂಬ  ಸತ್ಯ ತಿಳಿಸಿದೆ , ಅಂದು ನನ್ನ ಬೆನ್ನು ತಟ್ಟಿದ ನನ್ನ ಗುರುಗಳಿಗೆ  ಈ ಮನಸು ಸದಾ ನಮಿಸುತ್ತದೆ.


೩] ಅದೊಂದು  ಬೀಳ್ಕೊಡುಗೆ ಸಮಾರಂಭ  , ಕಾವೇರಿಯ ನದಿಯ ದಡದಲ್ಲಿ  ನಡೆದ ಕಾರ್ಯಕ್ರಮ   ಹಲವಾರು ಹಿರಿಯ ಅಧಿಕಾರಿಗಳು ಸೇರಿದ್ದರು,  ಕಾರ್ಯಕ್ರಮದ ನಿರೂಪಣೆ ನನ್ನದೇ ಆಗಿತ್ತು, ಆದರೆ  ಪ್ರಾರ್ಥನೆ  ಮಾಡುವ ಮಹಿಳೆ  ಸಮಯಕ್ಕೆ ಬಾರದೆ ಕೈಕೊಟ್ಟರು,  ಅಲ್ಲೇ ಇದ್ದ  ನನ್ನ  ಸಹೋದ್ಯೋಗಿಗೆ  ಹೇಳುತ್ತಾ ,  ಮೊದಲು ನೀನು ನಿರೂಪಣೆ    ಮಾಡು ಪ್ರಾರ್ಥನೆ  ನಂತರ  ನಾನು ಮುಂದುವರೆಸುತ್ತೇನೆ ಅಂದೇ  ನೋಡು ಕಾರ್ಯಕ್ರಮ ಶುರು ಮಾಡು ಅಂದೇ  ಅವನು   ಹಾವು ತುಳಿದವನಂತೆ   ಅಲ್ಲಿಂದ  ಓಡಿಹೋದ ,  ಕಾರ್ಯಕ್ರಮ ಶುರು ಆಯ್ತು,    ನಾನೇ ನಿರೂಪಕ ,   ಈಗ ಕಾರ್ಯಕ್ರಮ  ಪ್ರಾರಂಭ ಅಂತಾ ಹೇಳುತ್ತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ  ಶುರುಮಾಡೋಣ ,  ಎನ್ನುತ್ತಾ    ...... ಇವರಿಂದಾ    ಪ್ರಾರ್ಥನೆ ಅಂತಾ ಹೇಳಿ    ಸ್ವಲ್ಪ  ಗ್ಯಾಪ್ ಕೊಟ್ಟು, ನಂತರ  ಜ್ಞಾಪಿಸಿಕೊಂಡವನಂತೆ ನಟಿಸಿ   ಅರೆ ಮರ್ತೆಹೊಗಿತ್ತು, ಅಂತಾ ಹೇಳಿ ಪ್ರಾರ್ಥನೆ ನನ್ನದೇ ಅಂತಾ ಘೋಷಿಸಿ   ಪ್ರಾರ್ಥನೆ ಮಾಡಲು ನಿಂತೇ,  ಮೂಷಿಕ ವಾಹನ  ಮೋದಕ ಹಸ್ತಾ  ಅಂತಾ ಹೇಳಿದ್ದೆ ಅಷ್ಟೇ  ಜೀವನದಲ್ಲೇ  ಹಾಡೇ ಹಾಡದಿದ್ದ  ನನ್ನ  ಗಂಟಲಲ್ಲಿ  ಮೋದಕ ಸಿಕ್ಕಿ ಹಾಕಿಕೊಂಡು  ಬಿಟ್ಟಿತು,  ಉಸಿರು ಬಾಯಿಗೆ ಬಂದು    ಕೆಟ್ಟ  ದ್ವನಿಯಲ್ಲಿ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಕುಲಗೆಡಿಸಿದ್ದೆ ಅಂತಾ , ತಕ್ಷಣ ಗೊತ್ತಾಗಿ ನಾಲ್ಕೇ  ನಾಲ್ಕು ಸಾಲು ಹೇಳಿ ಸುಮ್ಮನಾದೆ .   ಆ  ಮೋದಕ ಪ್ರಿಯ ಗಣಪನಿಗೆ ನನ್ನ ಸುಶ್ರಾವ್ಯವಾದ  ಗಾಯನದ   ಬಗ್ಗೆ  ಅನುಮಾನ ಮೂಡಿ  ನನ್ನ ಗಂಟಲಿಗೆ ಮೋದಕ ತುರುಕಿದ್ದ , ಪ್ರಾರ್ಥನೆಯ ನಂತರ  ನನ್ನ ನಿರೂಪಣೆಯಲ್ಲಿ  ಲಯ ಕಂಡುಕೊಳ್ಳಲು  ಬಹಳ ಸಮಯ ಹಿಡಿಯಿತು,  ಅಂದಿನ ಘಟನೆ ಮತ್ತೊಂದು ವಿಚಾರ ತಿಳಿಸಿತು,  ಗೊತ್ತಿಲ್ಲದ  ವಿಚಾರದಲ್ಲಿ ಮೂಗು ತೂರಿಸಿ   ದೊಡ್ಡ ಮನುಷ್ಯ ಆಗೋದು ಸಾಧ್ಯವಿಲ್ಲಾ  ಅಂತಾ,  ಅಂದಿನಿಂದ ಇಂದಿನ ವರೆಗೆ ಪ್ರಾರ್ಥನೆಗೆ  ನನ್ನದು ದೊಡ್ಡ ಸಲಾಂ .

೪]  ಕೆಲವೊಮ್ಮೆ   ಬಹಳಷ್ಟು ಕಾರ್ಯಕ್ರಮಗಳಲ್ಲಿ  ಭಾಗವಹಿಸಿ,  ನಿರೂಪಣೆ ಮಾಡಿ,  ಮಾಧ್ಯಮಗಳಲ್ಲಿ ವರದಿಯಾಗಿ  ಪ್ರಚಾರಕ್ಕೆ  ಬಂದಮೇಲೆ  ಜಂಭಬಂದುಬಿಡುತ್ತದೆ ,    ನನಗೂ ಸಹ  ಅಂತಹ ಅಹಂ ಬಂದಿತ್ತು  . ಅಂತಹ  ವರ್ತನೆ ಅದಕ್ಕೆ ತಕ್ಕಂತೆ  ಪಾಠ  ಸಹ ಕಲಿಸುತ್ತದೆ  . ಒಮ್ಮೆ ಹೀಗಾಯ್ತು , ಯಾವುದೋ ಒಂದು ಸಂಸ್ಥೆಯವರು  ನನ್ನನ್ನು ಇತಿಹಾಸಕಾರ ಅಂತಾ ಗುರುತಿಸಿ , ಅತಿಥಿಯನ್ನಾಗಿ  ಆಹ್ವಾನ  ನೀಡಿ ಪತ್ರಿಕೆ  ತಂದುಕೊಟ್ಟರು,  ಇನ್ನೇನು ಜಗವನ್ನೇ ಗೆದ್ದ ನೆಪೋಲಿಯನ್  ನಂತೆ  ಬೀಗಿದೆ,  ಅದರಲ್ಲಿ  ನನ್ನ ಹೆಸರಿನ ಪಕ್ಕದಲ್ಲಿ ಇತಿಹಾಸಕಾರ   ಎಂಬ ಪದ ನನ್ನ ಹಮ್ಮನ್ನು ಇನ್ನೂ ಹೆಚ್ಚಿಸಿತು, ಕಾರ್ಯಕ್ರಮದ ದಿನ ಹೊರಟೇ  ಅಲ್ಲಿಗೆ, ಕಾರ್ಯಕ್ರಮ ಶುರು ಆಯ್ತು ,   ಕಾರ್ಯಕ್ರಮದ  ಅತಿಥಿಯಾಗಿ ನನ್ನ ಭಾಷಣ  ಶುರು ಆಯ್ತು  ಮುಂದೆ ನೋಡಿದೆ ಹಲವಾರು ಶಿಕ್ಷಕರು, ಹಾಗು ಕೆಲವರು ಸಾರ್ವಜನಿಕರು  ಇದ್ದರು, ಇವರಿಗೇನು ಗೊತ್ತು ಅಂತಾ  ಭಾವಿಸಿ  ಅಗತ್ಯಕ್ಕಿಂತ  ಹೆಚ್ಚಾಗಿ ಸ್ಕೊಪ್  ತಗೊಂಡ್  ಇತಿಹಾಸದ   ವಿಚಾರ ತಿಳಿಸುತ್ತಿದ್ದೆ , ನಂತರ ಅದೇ ಸಂವಾದವಾಗಿ  ಬದಲಾಯ್ತು,  ಅಲ್ಲಿದ್ದ  ಪ್ರೇಕ್ಷಕರಲ್ಲಿ  ನನಗಿಂತಾ ಹೆಚ್ಚಿನ ಜ್ಞಾನವಿತ್ತು,  ಇತಿಹಾಸ ಗೌರವಿಸಿ ಹೆಚ್ಚಿನ ವಿಚಾರ ತಿಳಿಯುವ ಹಂಬಲ ಇತ್ತು,  ಅವರು ಕೇಳಿದ ಪ್ರಶ್ನೆಗಳು ನನ್ನ ಜ್ಞಾನದ  ಮಟ್ಟವನ್ನು  ಅಣಕಿಸಿ,  ನನ್ನ ಜಂಭದ  ಗಂಟನ್ನು  ಹೊಸಕಿಹಾಕಿತ್ತು,   ಹೇಗೋ ಅಲ್ಲಿನ ಜನರಿಗೆ ತಿಳಿದ ವಿಚಾರವನ್ನು  ಹೇಳಿ  ಅಲ್ಲಿಂದ  ಬಚಾವಾದೆ  .  ಅವತ್ತಿನಿಂದ  ಯಾವುದೇ  ಸಭೆ ಸಮಾರಂಭದಲ್ಲಿ ವೇದಿಕೆಯ  ಎದುರು ಕುಳಿತ  ಜನರನ್ನು  ಅವರ ಜ್ಞಾನವನ್ನು ಗೌರವಿಸುವುದ ಕಲಿತೆ . ವ್ಯಕ್ತಿಯ ಜ್ಞಾನ  ಸಭ್ಯ ನಡವಳಿಕೆ ಕಲಿಸುತ್ತದೆ ಎಂಬ  ವಿಚಾರ ತಿಳಿಯಿತು .



 ಸಾಂದರ್ಬಿಕ  ಚಿತ್ರ  ಕೃಪೆ ಅಂತರ್ಜಾಲ 


೫]   ಮತ್ತೊಂದು ಘಟನೆ  ಹೀಗಾಯ್ತು , ಅದೊಂದು ಸಂಸ್ಥೆಯ  ಕಾರ್ಯಕ್ರಮ, ನಿರೂಪಣೆ ಹೊಣೆ ನನ್ನದಾಗಿತ್ತು, ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯುತ್ತಿತ್ತು,   ಆ ಸಂಸ್ಥೆಯಲ್ಲಿ  ಜ್ಞಾನ ಪಡೆದ ಹಲವರು ಆ ಸಂಸ್ಥೆಯಬಗ್ಗೆ  ಕೃತಜ್ಞತಾ ಪೂರ್ವಕವಾಗಿ  ಮಾತನಾಡುತಿದ್ದರು , ನಂತರ ಅಲ್ಲಿದ್ದ ಗಣ್ಯರು ಒಬ್ಬರು  ವೇದಿಕೆಯಲ್ಲಿ  ಬಂದು ಮೈಕ್ ಮುಂದೆ ನಿಂತರು ,  ಆದರೆ  ಅವರಿಗೆ ಮಾತನಾಡಲು ಆಗುತ್ತಿಲ್ಲಾ , ಸುಮ್ಮನೆ ಕೈಮುಗಿದು  ಮೌನವಾಗಿ ನಿಂತರು .   ಮಾತನಾಡಲು  ಆಸೆ  ಇದ್ದರೂ ಸಹ ಅಪಾರ ಜನರಿದ್ದ ಆ ಸಭೆಯಲ್ಲಿ  ಅವರಿಗೆ   ಮಾತನಾಡಲು  ಆಗದೆ  ಗಂಟಲು ಒಣಗಿ  ಹೆದರಿ   ಸುಮ್ಮನೆ ನಿಂತುಬಿಟ್ಟರು ನಾನೂ ಸಹ ಎರಡು ಮೂರು ನಿಮಿಷ  ಕಾದೆ, ನಂತರ  ಅಲ್ಲಿದ್ದ ಜನಗಳ ಗದ್ದಲ ಹೆಚ್ಚಾಗುವ   ಲಕ್ಷಣ ಕಂಡು ಬಂದ ಕಾರಣ , ನಾನೇ ಮುಂದೆ ಬಂದು  ಅವರನ್ನು ಸಂತೈಸಿ   ಅವರಿಂದ ಮೈಕ್  ಪಡೆದು  ಸಭೆಯನ್ನು  ಉದ್ದೇಶಿಸಿ , ನೋಡಿ ಸರ್  ನಮ್ಮ ಈ ಗಣ್ಯರು  ಯಾಕೆ ಮೌನವಾಗಿ ಕೈಮುಗಿದು ನಿಂತರು ಗೊತಾಯ್ತಾ  ನಿಮಗೆ ...?  ಯಾರಾದ್ರೂ ಹೇಳ್ತೀರಾ  ಹೇಳೋದಾದ್ರೆ  ಬನ್ನಿ ಯಾಕೆ  ಅಂತಾ ಹೇಳಿ .. ಅಂದೇ , ಗೊತ್ತಿಲ್ಲಾ  ನೀವೇ ಹೇಳಿ ಸಾರ್ ಅಂದ್ರೂ ಸಭೆಗೆ ಬಂದಿದ್ದ  ಜನ ,    ನೋಡಿ ಯಾವುದೇ ಸಂಸ್ಥೆಯ ಅಥವಾ ವ್ಯಕ್ತಿಯ ಬಗ್ಗೆ ಅಪಾರ ಗೌರವ ಇದ್ರೆ  ಹೀಗೆ ಆಗುತ್ತೆ,   ಅವರ ಮೌನ   ಇಲ್ಲಿ  ಲಕ್ಷ  ಲಕ್ಷ  ಕೊಟ್ಟರೂ ಸಿಗದ  ವಿಚಾರವನ್ನು ತಿಳಿಸಿಕೊಟ್ಟಿದೆ,  ಹೇಗೆ ಗೊತ್ತಾ ಅಂದೇ  ಮತ್ತೆ ಸಭೆಯಲ್ಲಿ ಇಲ್ಲಾ  ಅಂತಾ ಉತ್ತರ ಬಂತು,  ನೋಡಿ ತಮಗೆ ಅಪಾರ ಜ್ಞಾನ ಕೊಟ್ಟ ಈ ಸಂಸ್ಥೆಗೆ   ಬರೀ ಮಾತಿನಲ್ಲಿ    ಎಷ್ಟು ಬೆಲೆ ಕಟ್ಟಲು ಸಾಧ್ಯ..? ಆ ಮಾತುಗಳು ಆ ಸಂಸ್ಥೆ ನೀಡಿದ ಜ್ಞಾನಕ್ಕೆ ಸಮನಾಗುವುದೇ  ಎಂಬ ಪ್ರಶ್ನೆ ಅವರನ್ನು ಕಾಡಿ  ಮಾತನಾಡದೆ ಮೌನವಾಗಿ  ಆ ಸಂಸ್ಥೆಯ ಬಗ್ಗೆ ಗೌರವದಿಂದ ಕೈಮುಗಿದು  ಕೃತಜ್ಞತೆ ಸಲ್ಲಿಸಿದ್ದಾರೆ ,  ಜೊತೆಗೆ  ಆ ಸಂಸ್ಥೆಯ ಉದ್ದಾರಕ್ಕಾಗಿ ಕೈಲಾದ   ಆರ್ಥಿಕ ಸಹಾಯ ಮಾಡಲು ಸಹ ನಿರ್ಧಾರ ಮಾಡಿದ್ದಾರೆ  ಬನ್ನಿ ಅವರ ಈ ಒಳ್ಳೆಯ ನಿರ್ಣಯಕ್ಕೆ ಚಪ್ಪಾಳೆ ಮೂಲಕ ಅಭಿನದನೆ ಸಲ್ಲಿಸೋಣ ಅಂದೇ  ಪ್ರೇಕ್ಷಕರಿಂದ ಅಪಾರ ಪ್ರಮಾಣದ ಚಪ್ಪಾಳೆ ಬಂತು  , ಹೆದರಿ ನಡುಗಿದ್ದ ಆ ಅತಿಥಿ ಗಣ್ಯರು ನನ್ನ ಕಡೆ  ಕೃತಜ್ಞತೆ ಯಿಂದ ನೋಡಿದರು .   ಕಾರ್ಯಕ್ರಮ  ನಿರೂಪಣೆ  ಮಾಡುವಾಗ  ಆಕಸ್ಮಿಕವಾಗಿ ಎದುರಾಗುವ ಅನಿರೀಕ್ಷಿತ  ಅಡೆ  ತಡೆಗಳನ್ನು  ಹೇಗೆ ನಿಭಾಯಿಸಬೇಕೆಂಬ  ಬಗ್ಗೆ ಅರಿವು ನನಗೆ  ಮೂಡಿತು.


ಸಾಂದರ್ಬಿಕ  ಚಿತ್ರ  ಕೃಪೆ ಅಂತರ್ಜಾಲ


 ಹೀಗೆ  ಜನರ ಮುಂದೆ ಮಾತನಾಡುವ ನನ್ನ ಪಯಣ ಸಾಗಿದ್ದು,  ಪ್ರತೀ ಕಾರ್ಯಕ್ರಮದಲ್ಲಿಯೂ ಸಹ  ಏನಾದರೂ ಕಲಿಯುವ ವಿಚಾರ ಇದ್ದೆ ಇರುತ್ತದೆ,  ತನ್ನ ಜನರೆದುರು ಏನೇ ಜಂಭ ಕೊಚ್ಚಿಕೊಂಡರೂ  ಸಾರ್ವಜನಿಕ ವೇದಿಕೆಯಲ್ಲಿ ಮೈ ಹಿಡಿದು ಮಾತನಾಡುವಾಗ  ಇಂತಹ ಘಟನೆಗಳು ಎಲ್ಲರಿಗೂ  ಆಗುವಂತದು , ಇದೆಲ್ಲವನ್ನು  ಮೀರಿ ಕಲಿಯುತ್ತಾ ಸಾಗಿದರೆ   ನಾವೂ ಕಲಿಯುತ್ತಾ  ಉತ್ತಮ  ಮಾತುಗಾರರಾಗಿ  ಎಲ್ಲರ ಮೆಚ್ಚುಗೆಗೆ  ಖಂಡಿತಾ    ಪಾತ್ರರಾಗುತ್ತೇವೆ  ಆಲ್ವಾ,.   ಅದಕ್ಕೆ ಹೇಳಿದ್ದೂ ಜನರ ಮುಂದೆ ಮಾತಾಡೋದು  ಅಂದ್ರೆ  ಉಫ಼್ಫ಼್  ಕಷ್ಟ ಕಷ್ಟಾ .....!





Sunday, May 31, 2015

ಕ್ಷಮಿಸಿ ಕಸ್ತೂರಿ ಅಕ್ಕ ನಿಮ್ಮ ಪ್ರೀತಿಯ ಆತಿಥ್ಯ ಪಡೆಯುವ ಅರ್ಹತೆ ನಮಗಿಲ್ಲ



ಆಗುಂಬೆಯ   ಅನ್ನಪೂರ್ಣೆ


ಕೆಲವು ದಿನಗಳ ಹಿಂದೆ ನಮ್ಮ ಬ್ಲಾಗ್  ಮಿತ್ರ  ಪ್ರವೀಣ್  ವಿವಾಹಕ್ಕೆ ಹೋಗಬೇಕಾಗಿತ್ತು,   ವಿವಾಹ ಕಾರ್ಯಕ್ರಮ ಆಗುಂಬೆ ಸನಿಹದ  ತಲ್ಲೂರಂಗಡಿ  ಎಂಬಲ್ಲಿ  ಇದ್ದ ಕಾರಣ, ಹಿಂದಿನ ದಿನವೇ  ಆಗುಂಬೆಯಲ್ಲಿ ಮೊಕ್ಕಾಂ  ಮಾಡಿದೆ, ಆಗುಂಬೆ ಬಗ್ಗೆ  ಹಲವು ವಿಚಾರಗಳು ತಿಳಿದಿತ್ತು,  ಆಗುಂಬೆಯ ಸೂರ್ಯಾಸ್ತ, ಸನಿಹದಲ್ಲೇ  ಸೂರ್ಯೋದಯ ನೋಡಲು   ಕೈ ಬೀಸಿ ಕರೆಯುವ  ಕುಂದಾದ್ರಿ,  ಗೋಪಾಲ ಕೃಷ್ಣ   ದೇಗುಲ,ಎಲ್ಲದರ ಜೊತೆಗೆ  ಆಗುಂಬೆಯ  ದೊಡ್ದಮನೆಯಲ್ಲಿ ಉಳಿಯುವ ಆಸೆ ಬಾಕಿ ಇತ್ತು.  ಈ  ಪ್ರವಾಸದಲ್ಲಿ ಅದಕ್ಕೆ ಅವಕಾಶ  ಸಿಕ್ಕಿದ್ದು  ಖುಶಿ ಕೊಟ್ಟಿತು .

 ನನ್ನ ಗೆಳೆಯರು  ಕುಟುಂಬದೊಡನೆ  ಅಲ್ಲಿಗೆ ಹೋಗಿ ಆತಿಥ್ಯ ಸವಿದು  ರಸವತ್ತಾದ ಕಥೆಗಳನ್ನು ಹೇಳಿ  ಹೊಟ್ಟೆ ಉರಿಸಿದ್ದರು , ಅವರುಗಳ ಪ್ರತೀ ಮಾತಿನಲ್ಲೂ  ಕಸ್ತೂರಿ ಅಕ್ಕನ  ನಗು ಮುಖದ  ಅತಿಥಿ ಸತ್ಕಾರದ ಬಗ್ಗೆ ಮಾಹಿತಿಗಳು   ಇರುತ್ತಿತ್ತು, ನಮ್ಮ ಪ್ರವೀಣ್ ಮದುವೆಗೆ  ಬಂದ  ನೆಪದಲ್ಲಿ  ಕಸ್ತೂರಿ ಅಕ್ಕನ  ಮನೆಗೆ ಪ್ರವೇಶ  ಪಡೆದೆ . ಇಲ್ಲಿಗೆ ಬರುವ ಮೊದಲು ಕಸ್ತೂರಿ ಅಕ್ಕನ  ಮನೆಯ ಫೋನ್ ನಂಬರ್  ಸಂಪಾದಿಸಿ  ಕರೆ ಮಾಡಿದರೆ  ಸಿಕ್ಕವರೇ  ಕಸ್ತೂರಿ ಅಕ್ಕಾ ,  ಆಗುಂಬೆಗೆ ಬರುವುದಾಗ ತಿಳಿಸಿ  ಉಳಿಯಲು ಅವಕಾಶ ಮಾಡಿಕೊಡಲು ಕೋರಿದೆ , ಬಹಳ ಸಂತೋಷದಿಂದ ಒಪ್ಪಿ  ನಾನು ಬರುವ ದಿನವನ್ನು  ಗುರುತು ಹಾಕಿಕೊಂಡರು .  ಅಕ್ಕಾ  ನಿಮ್ಮಲ್ಲಿ ಉಳಿಯಲು  ಎಷ್ಟು ದುಡ್ಡು  ಕೊಡಬೇಕು ..? ಊಟ ತಿಂಡಿಗೆ ಎಷ್ಟಾಗುತ್ತೆ   ದಯವಿಟ್ಟು ತಿಳಿಸಿ ನಿಮ್ಮ ಖಾತೆ ನಂಬರ್ ಕೊಡಿ ಅಲ್ಲಿಗೆ ಹಣ ಜಮಾ ಮಾಡುತ್ತೇನೆ ಅಂದೇ , ಅದಕ್ಕೆ ಕಸ್ತೂರಿ ಅಕ್ಕಾ  ಅಯ್ಯೋ ಅದೆಲ್ಲಾ ಬೇಡ ಇಲ್ಲಿಗೆ ಬನ್ನಿ ಉಳಿಯಿರಿ ನಂತರ ಅದರ ಬಗ್ಗೆ ಮಾತಾಡೋಣ  ಅಂದರು .


ಕಸ್ತೂರಿ ಅಕ್ಕನ  ಕುಟುಂಬದ  ಸದಸ್ಯರು




ಅವರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಲೇ ಏನೋ ಒಂದು ಬಗೆಯ  ಅನಿಸಿಕೆ  ಅವರನ್ನು ಕಾಣುವ ಆಸೆ ಜಾಸ್ತಿಯಾಯ್ತು . ಅವರ ಮನೆಗೆ ತೆರಳಿದ  ನಾನು ನನ್ನ ಹೆಸರು ಹೇಳಿದ ತಕ್ಷಣ  ಓ ಮೈಸೂರಿನವರು ಬನ್ನಿ , ಕೈಕಾಲು ತೊಳೆಯುವಿರ , ತೊಳೆದು ಬನ್ನಿ ವಿಶ್ರಾಂತಿ ಪಡೆದು  ನಂತರ  ಊಟ  ಮಾಡೊರಂತೆ , ನಿಮ್ಮ   ರೂಂ ಮೇಲಿದೆ  ಅಲ್ಲಿ ಉಳಿಯಬಹುದು ಅಂದರು, ಹಾಗೆ ಕೈ ಕಾಲು   ಮುಖಕ್ಕೆ ನೀರು ಹಾಕಿಕೊಂಡು  ದೇಹಕ್ಕೆ ವಿಶ್ರಾಂತಿ ನೀಡಿದೇ ಸ್ವಲ್ಪ ಕಷಾಯದ  ಸೇವನೆ ಆಯ್ತು . ಮನಸು  ಉಲ್ಲಾಸ  ಕಂಡಿತು . ಹಾಗೆ ಮನೆಯನ್ನೆಲ್ಲಾ ವೀಕ್ಷಣೆ ಮಾಡುತ್ತಾ  ಮನೆಯ ಮುಂದಿನ ಜಗಲಿಗೆ ಬಂದೆ  ಸುಮಾರು  ಇಪ್ಪತ್ತು ಮಂದಿ  ಅಲ್ಲಿದ್ದರು,  ಕೆಲವು ಹುಡುಗ ಹುಡುಗಿಯರು ಟ್ರೆಕಿಂಗ್  ಮಾಡಲು ಬಂದಿದ್ದರು, ಮತ್ತೊಂದು ಕುಟುಂಬ  ಆಗುಂಬೆ ಸುತ್ತಾ ಮುತ್ತಾ ನೋಡಲು ಬಂದಿತ್ತು, ಹೀಗೆ  ಗುರುತಿಲ್ಲದ ಜನರ  ನಡುವೆ  ನನ್ನ ಬಾವುಟವೂ ಹಾರಿತ್ತು.

ಅಷ್ಟರಲ್ಲಿ   ಕಸ್ತೂರಿ ಅಕ್ಕನ ಅಳಿಯ  ಶ್ರೀ  ರವಿ ಕುಮಾರ್   ಅವರು ಹೊರಗೆ ಬಂದು ಬನ್ನಿ ಬನ್ನಿ ಊಟಕ್ಕೆ ಎಲ್ಲರೂ  ಅಂತಾ ಮನೆಯ ನೆಂಟರನ್ನು  ಕರೆದಂತೆ ಕರೆದರೂ , ನನಗೂ ಅಚ್ಚರಿ  ಒಳಗೆ ಬಂದೆ  ಮನೆಯ   ಕೇಂದ್ರ ಭಾಗದಲ್ಲಿ  ಒಂದು ಸುಂದರ  ತೊಟ್ಟಿಯಂತಹ  ಜಾಗದಲ್ಲಿ  ಚೌಕಾಕ್ರುತಿಯಲ್ಲಿ    ಊಟದ  ಟೇಬಲ್ ಗಳನ್ನೂ ಜೋಡಿಸಿ  ಅದರ ಮೇಲೆ  ಬಾಳೆ  ಎಲೆಗಳನ್ನು ಹಾಕಿದ್ದರು , ಎಲ್ಲರಿಗೂ ಪ್ರೀತಿ ತುಂಬಿದ ಪ್ರೀತಿಯ  ಮಾತುಗಳೊಡನೆ   ಊಟ ಬಡಿಸಿದ್ದರು,   ರುಚಿ ರುಚಿಯಾದ ಆರೋಗ್ಯಕರ  ಊಟ ನಮ್ಮದಾಗಿತ್ತು,  ಇದೆ ರೀತಿ ರಾತ್ರಿ ಸಹ  ಪುನರಾವರ್ತನೆ,   ಉಳಿದಿದ್ದ   ಕೋಣೆ   ಶುಚಿಯಾಗಿತ್ತು,  ಹಾಸಿಗೆ ಹೊದ್ದಿಗೆ  ಬಹಳ ಶುಭ್ರವಾಗಿತ್ತು,   ಚಿಕ್ಕ ವಯಸಿನಲ್ಲಿ ಅಜ್ಜಿಯ  ಮನೆಯ  ನೆನಪುಗಳು  ಮರುಕಳಿಸಿದ ಅನುಭವ. ಜೊತೆಗೆ ಈ ಪ್ರಪಂಚದಲ್ಲಿ ಇಂತಹ  ವ್ಯಕ್ತಿಗಳು ಇದ್ದಾರ ಎನ್ನುವ  ಪ್ರಶ್ನೆ..? ಕಾಡಿತ್ತು,




 ಕಸ್ತೂರಿ ಅಕ್ಕನ  ದೊಡ್ಡ ಮನೆ


ಮುಂಜಾನೆಯ  ಹಕ್ಕಿಗಳ ಕಲರವ ನನ್ನನ್ನು ಎಚ್ಚರ ಗೊಳಿಸಿತ್ತು,   ಮಹಡಿಯ ಕೋಣೆ ಯಿಂದಾ  ಮೆಟ್ಟಿಲಿಳಿದು  ಬಂದೆ ... ಬನ್ನಿ ಬನ್ನಿ  ಬಿಸಿನೀರು ಕಾದಿದೆ , ಸ್ನಾನ ಮಾಡ್ತೀರಾ , ಅಲ್ಲೇ ಹಿಂದೆ ಸ್ನಾನದ ಮನೆ ಇದೆ ,    ಮುಖತೊಳೆದು ಬನ್ನಿ , ಟೀ , ಕಾಫಿ, ಏನಾದರೂ ಬೇಕಾ   , ಅಲ್ಲೇ ಇದೆ ನೋಡಿ ರೆಸ್ಟ್  ರೂಮು  ಅಂತಾ  ಅತಿಥಿಗಳಿಗೆ   ಪ್ರೀತಿಯಿಂದ  ತಿಳಿಸುತ್ತಾ ಇದ್ದರು .  ನನಗೆ ಈ ಮನೆ  ಹೊಸದು ಅನ್ನಿಸಲೇ ಇಲ್ಲಾ, ನಮ್ಮ  ಅಜ್ಜಿಯ  ಮನೆಗೆ ಬಂದಂತೆ ಅನ್ನಿಸಿತು, ಬೆಳಿಗ್ಗೆ ಉಪಹಾರ    ಸೇವನೆ ನಂತರ  ಕಸ್ತೂರಿ ಅಕ್ಕಾ ನಿಮ್ಮ ಜೊತೆ ಸ್ವಲ್ಪ  ಮಾತಾಡೋಕೆ  ಅವಕಾಶ ಮಾಡಿಕೊಡಿ  ಅಂದೇ,  ಅದಕ್ಕೇನಂತೆ  ಬನ್ನಿ  ನಾನು ಕೆಲ್ಸಾ ಮಾಡ್ತಾ ಮಾಡ್ತಾ ಮಾತಾಡುತ್ತೇನೆ ಅಂತಾ  ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು ,  ಅವರ ಉತ್ತರ ನನ್ನ ಜಂಘಾ ಬಲವನ್ನೇ ಉಡುಗಿಸಿಬಿಟ್ಟಿತು,  ಜೊತೆಗೆ ಪ್ರವಾಸಿಗರ ವೇಷದಲ್ಲಿ ಬರುವ  ನಾವುಗಳು  ಎಂತಹ ಕೆಟ್ಟ ಜನ  ಎನ್ನುವ ಪ್ರಶ್ನೆ ಮೂಡಿತು,





ಮನೆಯಲ್ಲಿನ ಹಿರಿಯ ಜೀವ ಕೂಡ  ಕೆಲಸ ಮಾಡಿ  ಊಟ ಮಾಡುವ ಸ್ವಾಭಿಮಾನಿ

ಕಸ್ತೂರಿ ಅಕ್ಕನ ಮನೆ   ಆಗುಂಬೆಯಲ್ಲಿ ದೊಡ್ಡ ಮನೆ ಅಂತಾನೆ ಪ್ರಸಿದ್ಧಿ, ಈ ಮನೆಯಲ್ಲಿ ಬಹಳ ಹಿಂದಿನಿಂದಲೂ   ಆತಿಥ್ಯಕ್ಕೆ  ಪ್ರಾದಾನ್ಯತೆ  ನೀಡಲಾಗಿದೆ,   ಬಹಳ ಹಿಂದೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ   ಅಧಿಕಾರಿಗಳು   ಆಗುಂಬೆ ಘಟ್ಟ  ಹತ್ತಿ ಬಂದು ಇಲ್ಲಿ ಉಳಿದು  ವಿಶ್ರಾಂತಿ ಪಡೆದು ನಂತರ  ಶಿವಮೊಗ್ಗಕ್ಕೆ ಸಾಗುತ್ತಿದ್ದರು,  ಕಸ್ತೂರಿ ಅಕ್ಕ  ಸುಮಾರು ನಲವತ್ತು ವರ್ಷಗಳಿಂದ  ಒಂದು ದಿನವೂ ತಪ್ಪಿಸದೇ   ಈ ಮನೆಗೆ ಆಗಮಿಸುವ ಅತಿಥಿಗಳಿಗೆ  ಊಟ ವಸತಿ ನೀಡಿ ಆಗುಂಬೆಯ
ಅನ್ನ ಪೂರ್ಣೆ  ಯಾಗಿದ್ದಾರೆ .  ನಲವತ್ತು ವರ್ಷಗಳಿಂದ  ಆಗುಂಬೆಯ ಈ ಮನೆ ಬಿಟ್ಟು ಆಚೆ ಹೋಗಿಲ್ಲ,  ಹಾಗೆಯೇ  ಈ ಮನೆಯಲ್ಲಿ ಒಂದು ದಿನವೂ  ಈ ಕಾರ್ಯಕ್ಕೆ ರಜೆ ನೀಡಲಾಗಿಲ್ಲ . ಇಂತಹ  ಜಾಗಕ್ಕೆ  ಬಂದ  ನಾವುಗಳು ಹೇಗೆ ಇರಬೇಕು ಅಲ್ವಾ..?  ಆದರೆ ನಾವುಗಳು ಮಾಡುವ ಅವಾಂತರ ನೋಡಿ

೧] ನೀವು ಯಾವುದೇ ಊರಿಗೆ ಹೋಗಿ, ಕನಿಷ್ಠ ಒಂದು ಊಟಕ್ಕೆ  ೬೦ ರಿಂದ ೮೦ ರೂ   ರವರೆಗೆ ಖರ್ಚಾಗುತ್ತದೆ , ಬೆಳಗಿನ ಉಪಹಾರಕ್ಕೆ  ಕನಿಷ್ಠ  ೮೦ ರೂ  ಖರ್ಚಾಗುತ್ತದೆ,   ಉಳಿಯಲು  ನೀಡುವ  ಕೋಣೆ  ಬಾಡಿಗೆ ಕನಿಷ್ಠ ೮೦೦ ರೂ  ಆಗುತ್ತದೆ,  ಇದೆ ಆಧಾರದ ಮೇಲೆ   ನೀವು ಯಾವುದೇ ಪುಟ್ಟ ಪಟ್ಟಣಕ್ಕೆ ಹೋದರು   ಅಲ್ಲಿಸಿಗುವ  ಕನಿಷ್ಠ ಸೌಲಭ್ಯಕ್ಕೆ    ರೂ ೮೦ ರಿಂದ  ೧೦೦ ರವರೆಗೆ, ತೆರಬೇಕು   , ಆದರೆ ಇಲ್ಲಿ ನೀಡುವ ಆರೋಗ್ಯಕರ ರುಚಿಯಾದ ಉಪಹಾರಕ್ಕೆ  ೮೦ ರೂ  ಮುಲಾಜಿಲ್ಲದೆ ನೀಡ ಬಹುದು,   ಸುಮಾರು ೧೫೦ ವರ್ಷಗಳ ಇತಿಹಾಸ ಉಳ್ಳ ಆ ಮನೆಯಲ್ಲಿ ಉಳಿಯಲು  ಕನಿಷ್ಠ    ರೂ ೬೦೦ ,  ನೀಡ ಬಹುದು  ಆದರೆ  ಬೆಲೆಕಟ್ಟಲಾಗದ ಈ ಆತಿಥ್ಯಕ್ಕೆ  ಕೆಲವರು  ದುಡ್ಡು ಕೊಡದೆ , ಬರುವುದುಂಟು, ಮತ್ತೆ ಕೆಲವರು ೧೦೦,  ೨೦೦ ರೂಪಾಯಿ ನೀಡಿ ಕಳ್ಳ ನಗೆಯನ್ನು  ನಕ್ಕು ಬರುವುದು ಉಂಟು .  ಯಾವುದೋ  ರೆಸಾರ್ಟ್ ಗಳಿಗೆ  ಒಂದು ದಿನಕ್ಕೆ  ರೂ ೨೦೦೦ ದಿಂದ ೩೦೦೦ ದ ವರೆಗೆ ತಲಾ ಒಬ್ಬೊಬ್ಬರು  ತೆತ್ತು ಬರುವ ಜನ ಇಲ್ಲಿ ಬಂದ ತಕ್ಷಣ  ಜಿಪುಣ ರಾಗುತ್ತಾರೆ, 

೨} ನಮ್ಮ ಮನೆಯ ಟಾಯ್ಲೆಟ್ ಗಳು ಕೊಳಕಾದರೆ  ನರಳಾಡುವ ನಾವು ಸ್ವಚ್ಛತೆ ಬಗ್ಗೆ ಭಾಷಣ ಬಿಗಿಯುತ್ತೇವೆ , ಆದರೆ ಹೆಚ್ಚು ವಿಧ್ಯೆ ಗಳಿಸಿದ  ಕೆಲವು   ಪಟ್ಟಣದ ಹೆಣ್ಣು ಮಕ್ಕಳು  ತಾವು ಬಳಸಿದ  ಪ್ಯಾಡ್ ಗಳನ್ನೂ  ಸಹ  ಟಾಯ್ಲೆಟ್ ಗಳಲ್ಲಿ ತುರುಕಿ ಬರುತ್ತಾರೆ , ಇನ್ನು ಕೆಲವರು ಬಳಸಿದ  ಶೌಚಾಯಗಳಲ್ಲಿ  ನೀರು ಹಾಕದೆ  ಬೇರೆಯವರು  ಉಪಯೋಗಿಸದ  ಹಾಗೆ  ಮಾಡಿ ಬರ್ತಾರೆ ಇದನ್ನೆಲ್ಲಾ  ತೊಳೆಯುವ ಕಾರ್ಯ  ಪಾಪ  ಕಸ್ತೂರಿ ಅಕ್ಕನ  ಮನೆಯ ಸದಸ್ಯರದು ,  ಕೆಲವೊಮ್ಮೆ ಪ್ಯಾಡ್ ಗಳು   ಸಿಕ್ಕಿಕೊಂಡು ಶೌಚಾಲಯ  ಕಟ್ಟಿಕೊಂಡಾಗ ಅದನ್ನು ತೆರವುಗೊಳಿಸಲು  ಒಮ್ಮೊಮ್ಮೆ ೫೦೦ ರೂಗಳ ವರೆಗೆ  ಖರ್ಚು ಮಾಡಿ  ಕಸ್ತೂರಿ ಅಕ್ಕ  ಮತ್ತೆ ಪ್ರವಾಸಿಗರಿಗೆ ತೊಂದರೆ ಆಗದಂತೆ  ನೋಡಿಕೊಳ್ಳುತ್ತಾರೆ . ಪ್ರತಿ ನಿತ್ಯ  ಮನೆಯ ಹೆಣ್ಣುಮಕ್ಕಳೂ ಒಳಗೊಂಡಂತೆ  ಮನೆಯ ಎಲ್ಲಾ ಸದಸ್ಯರು   ಶೌಚಾಲಯಗಳನ್ನು  ಶುಚಿಗೊಳಿಸುವ   ಕಷ್ಟ  ಯಾರಿಗೂ ಕಾಣೋಲ್ಲ .  ಕಸ್ತೂರಿ ಅಕ್ಕನ  ಜೊತೆ ಮಾತನಾಡುವಾಗ  ಈ ಅಂಶ ಬೆಳಕಿಗೆ ಬಂತು .  ಎಷ್ಟು ಓದಿದರೇನು   ಜ್ಞಾನವಿಲ್ಲದಿದ್ದರೆ  . 

೩] ಇನ್ನು ಉಳಿದುಕೊಂಡ  ಕೋಣೆಗಳನ್ನು   ನಾವು ಬಳಸಿಕೊಳ್ಳೋದು ನೋಡಿ ,  ಮಲಗಲು ನೀಡಿದ  ಹೊದಿಕೆಗಳನ್ನು  ವಿರೂಪ ಗೊಳಿಸುವಿಕೆ , ಮಲಗಿ ಎದ್ದ ನಂತರ   ಹಾಸಿಗೆ ಹೊದಿಕೆ ದಿಂಬುಗಳನ್ನು   ವ್ಯವಸ್ತಿತವಾಗಿ  ಇಡದೆ  ಇಷ್ಟ ಬಂದಂತೆ  ಬಿಸಾಡಿ ಬರುವುದು , ಇದನ್ನೂ ಸಹ ಕುಟುಂಬದ ಸದಸ್ಯರು  ಸರಿಪಡಿಸುವ ಕಾರ್ಯ ಮಾಡುತ್ತಾರೆ,  ಒಬ್ಬ ಅತಿಥಿ ಬಳಸಿದ  ಹೊದಿಕೆಗಳನ್ನು ತೆಗೆದು  ಶುಚಿಗೊಳಿಸಲು  ಎಷ್ಟು ಶ್ರಮ ಆಗುತ್ತೆ ಎಂಬುದನ್ನು  ಲೆಕ್ಕಿಸದೆ  ಪ್ರವಾಸಿಗಳು ಮನಸೋ ಇಚ್ಚೆ ನಡೆದುಕೊಳ್ಳುತ್ತಾರೆ , 

೪] ಕೆಲವೊಮ್ಮೆ  ಅತಿಥಿಗಳ ರೂಪದಲ್ಲಿ ಬಂದವರು  ಕೆಲವು ವಸ್ತುಗಳನ್ನು ತಮ್ಮದೆಂಬಂತೆ  ಕದ್ದು ಹೋಗುವುದೂ ಉಂಟು,  ಮಾಲ್ಗುಡಿಡೇಸ್  ಚಿತ್ರೀಕರಣ ಸಮಯದಲ್ಲಿ  ಬಂದ  ಕೆಲವು  ವ್ಯಕ್ತಿಗಳು  ಈ ಮನೆಯ  ಅಮೂಲ್ಯ ವಸ್ತುಗಳನ್ನು   ಕದ್ದು ಹೋಗಿದ್ದಾರೆ .ಅಂದಿನಿಂದ ಈ ಮನೆಯಲ್ಲಿ ಚಿತ್ರೀಕರಣ ಮಾಡುವವರಿಗೆ  ಅವಕಾಶ  ನೀಡಿಲ್ಲ . 

೫] ಈ ಮನೆಯಲ್ಲಿ  ಕಸ್ತೂರಿ ಅಕ್ಕನ  ನಿಯಮಗಳಿವೆ  ಇಲ್ಲಿ ಬರುವವರು  ಬೇರೆ ಅತಿಥಿಗಳಿಗೆ ತೊಂದರೆ ಆಗದಂತೆ ನಡೆದು ಕೊಳ್ಳಬೇಕು , ಮಾಂಸಾಹಾರ , ಮದ್ಯ ಕುಡಿದು ಬರುವುದು ,  ಬೀಡಿ  ಸಿಗರೆಟ್ , ಸೇವನೆ  ಮಾಡುವಂತಿಲ್ಲ , ಆದರೆ ಕೆಲವರು  ಈ ನಿಯಮ ಮುರಿಯಲು ಪ್ರಯತ್ನಿಸಿ ವಿಫಲ ರಾಗುತ್ತಾರೆ .

೬]  ಮಾಲ್ಗುಡಿಡೇಸ್  ಚಿತ್ರೀಕರಣ ಆದ ಕಾರಣ ಈ ಮನೆಗೆ ಮಾಲ್ಗುಡಿ ಮನೆ ಅಂತಾ  ಕೆಲವರು ನಾಮ ಕರಣ ಮಾಡಿದ್ದಾರೆ  ಆದರೆ  ಸುಮಾರು ನಲವತ್ತು   ವರ್ಷಗಳಿಂದ   ಆತಿಥಿ ದೇವೋಭವ  ಎಂದಿರುವ  ಕಸ್ತೂರಿ ಅಕ್ಕನ  ಮನೆ ಎಂಬುದಾಗಿ ಕರೆಯದೆ  ಅವರ ವ್ಯಕ್ತಿತ್ವಕ್ಕೆ ಅವಮಾನ ಮಾಡುವ  ಪ್ರವಾಸಿಗರಿದ್ದಾರೆ . 

೭] ಹಣಕ್ಕಾಗಿ  ವ್ಯವಹಾರ ಮಾಡದೆ  ಪ್ರವಾಸಿಗರನ್ನು ಸುಲಿಗೆ ಮಾಡದೆ  ಅತಿಥಿಗಳ ಸೇವೆ ಮಾಡಿ ಕೊಟ್ಟಷ್ಟನ್ನು ಪ್ರೀತಿಯಿಂದ  ಪಡೆಯುವ  ಇವರ  ಈ ಕಾಯಕವನ್ನು  ಹೆಚ್ಚಿನ  ನ್ಯಾಯಬದ್ದವಾದ  ಮೊಬಲಗು ನೀಡಿ ಪ್ರೋತ್ಸಾಹಿಸದೆ   ಹಾಲು ಕೊಡುವ  ಹಸುವಿನ ಕೆಚ್ಚಲನ್ನು ತಿನ್ನಲು  ಪ್ರವಾಸಿಗರಾದ ನಾವು ಮುಂದಾಗಿದ್ದೇವೆ ,

೮] ಕಸ್ತೂರಿ ಅಕ್ಕಾ, ಪ್ರತಿಯೊಂದನ್ನೂ   ಖರೀದಿಸಿ ತರಬೇಕು,  ಅತಿಥಿಗಳಿಗೆ  ಉಣ್ಣಲು ನೀಡುವ  ಊಟ ತಿಂಡಿಗೆ  ಸಾಮಗ್ರಿಗಳನ್ನು  ಹಣ ನೀಡಿಯೇ  ತರಬೇಕು,  ಬಿಟ್ಟಿ ಯಾಗಿ ಏನೂ ಸಿಗಲ್ಲಾ  ಆದ್ರೆ  ನಾವು ಇದನ್ನು ತಿಳಿಯದೆ  ಮಾಡುತ್ತಿರುವ ಕಾರ್ಯ ನಮ್ಮ ನಾಗರೀಕತೆಯ  ಮೌಲ್ಯದ  ಪರಿಚಯ ಮಾಡುತ್ತಿದೆ


ಕಾಯಕವೇ ಕೈಲಾಸ  ಈ ಕಸ್ತೂರಿ ಅಕ್ಕನಿಗೆ


ಹೀಗೆ ಕಸ್ತೂರಿ ಅಕ್ಕನ ಜೊತೆ ಮಾತನಾಡುತ್ತಾ  ಅವರ ಬವಣೆಗಳನ್ನು ಕೆದಕುತ್ತಾ  ಅಲ್ಲಿನ ಪ್ರವಾಸಿಗರ ವರ್ತನೆ ಗಮಸಿಸುತ್ತಾ  ಪ್ರವಾಸಿಗರಾದ ನಮ್ಮ  ನಡತೆಯಬಗ್ಗೆ ನಾಚಿಕೆ ಪಟ್ಟುಕೊಂಡೆ ,  ಕಸ್ತೂರಿ ಅಕ್ಕ  ಮಾತಿನ ನಡುವೆ  ಹೀಗೆ ಹೇಳಿದ್ರೂ  ದಯವಿಟ್ಟು ಯಾವ ಪ್ರವಾಸಿಗರಿಗೂ ನೋವಾಗುವುದು ಇಷ್ಟ ಇಲ್ಲಾ  ಅಂತಾ,  ಆದರೆ ಪ್ರವಾಸಿಗರಾದ ನಮಗೆ  ಅವರ  ಆತಿಥ್ಯಕ್ಕೆ ತಕ್ಕ ಮರ್ಯಾದೆ ಕೊಡೊ  ಬುದ್ದಿ ಇಲ್ವಲ್ಲಾ  ಅನ್ನೋ ಯೋಚನೆ ಬಂತು .   ಆ ಮನೆಯಲ್ಲಿ ನನ್ನ ವಾಸ್ತವ್ಯ  ಪೂರ್ಣಗೊಂಡು  ಪ್ರವೀಣ್  ವಿವಾಹ ಕಾರ್ಯಕ್ಕೆ ತೆರಳಬೇಕಾದ ಕಾರಣ   ಕಸ್ತೂರಿ ಅಕ್ಕನ  ಆಶೀರ್ವಾದ ಪಡೆದು ಅವರ ಮನೆಯ ಎಲ್ಲರಿಗೂ ವಂದನೆ  ತಿಳಿಸಿ  ನನಗೆ ಸರಿ ಎನ್ನಿಸಿದ ಮೌಲ್ಯ ನೀಡಿ ಬಂದೆ , ಅಕ್ಕಾ ನಿಮ್ಮ ಈ ಪ್ರೀತಿಯ ಆತಿಥ್ಯಕ್ಕೆ ಬೆಲೆ ಕಟ್ಟಲಾರೆ  ಅನ್ನುತ್ತಾ   ಮೌಲ್ಯ ನೀಡಿದೆ  ಅಯ್ಯೋ  ಅದ್ಯಾವ ಮಾತು ಅನ್ನುತ್ತಾ ಪ್ರೀತಿಯಿಂದ ಸ್ವೀಕರಿಸಿ ಹಾರೈಸಿದರು . ಮನೆಯಿಂದ ಹೊರಗೆ ಬರುತ್ತಾ   ಕ್ಷಮಿಸಿ ಕಸ್ತೂರಿ  ಅಕ್ಕಾ  ನಮಗೆ ನಿಮ್ಮ ಪ್ರೀತಿಯ  ಆತಿಥ್ಯ ಪಡೆಯುವ  ಅರ್ಹತೆ ಇಲ್ಲಾ ಎಂಬ ಮಾತುಗಳು ಮನದಲ್ಲಿ ಮೂಡಿತು .



 ಕಸ್ತೂರಿ ಅಕ್ಕನ  ಅಳಿಯ  ಶ್ರೀ  ರವಿ ಕುಮಾರ್  


ದಯವಿಟ್ಟು ಗೆಳೆಯರೇ ಆಗುಂಬೆಗೆ ಹೋದರೆ  ದೊಡ್ಡ ಮನೆ ಊಟ ಮಾಡಿ ಕಸ್ತೂರಿ ಅಕ್ಕನ  ಕೈ ರುಚಿಯನ್ನು ಸವಿಯಲು ಮರೆಯಬೇಡಿ , ಆದರೆ  ಅವರ ಪ್ರೀತಿಯ  ಆತಿಥ್ಯಕ್ಕೆ  ತಕ್ಕ ಮರ್ಯಾದೆ ನೀಡಿ  ಒಳ್ಳೆಯ ಮೌಲ್ಯ  ನೀಡಿ ಬನ್ನಿ . ಇಂತಹ ಜನರನ್ನು  ಕಳೆದುಕೊಂಡರೆ  ನಮ್ಮ ನಾಡಿನ  ಒಂದು ಒಳ್ಳೆಯ ಸಂಸ್ಕೃತಿ ಕಳೆದುಕೊಂಡಂತೆ  ಅಲ್ವಾ.?

Sunday, May 24, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......17 ಪ್ರವಾಸದ ಅಂತಿಮ ಚರಣದಲ್ಲಿ ಕಾಗಿನೆಲೆ ಕೇಶವನ ಕಂಡು ಧನ್ಯವಾಯಿತು ಜೀವ .

ನಾನು ಹೋದರೆ ಹೋದೇನು




ಹಾವೇರಿಯಲ್ಲಿ ಊಟ ಮಾಡಿ ಕಾಗಿನೆಲೆಯತ್ತ  ಹೊರಟೆವು ನಾವು.  ಕಾಗಿನೆಲೆ ಬಗ್ಗೆ ಕನಕದಾಸರು ಹಾಗು ಅವರ ಪದಗಳಲ್ಲಿ  ಬರುವ "ಕಾಗಿನೆಲೆಯಾದಿ ಕೇಶವ"  ಎಂಬ ನಾಮಾಂಕಿತ ಹೊರತಾಗಿ ನನಗೆ ಈ ಜನುಮದಲ್ಲಿ ಬೇರೇನೂ ಗೊತ್ತಿರಲಿಲ್ಲ, ಭಕ್ತಕನಕದಾಸ ಕನ್ನಡ  ಚಲನಚಿತ್ರ ನೋಡಿದ ಮೇಲೆ  ಬಹುಷಃ ಕನಕದಾಸರು  ಹೀಗೆ ಇದ್ದಿರಬಹುದು ಎಂಬ ಒಂದು ಕಲ್ಪನೆ ಮೂಡಿತ್ತು, ಅವರ ಉಗಾಭೋಗ , ಹಾಡು ಭಕ್ತಿ ಪೂರ್ವಕ ಕೃತಿಗಳನ್ನು ಕೇಳಿದಾಗ  "ಕಾಗಿನೆಲೆಯಾದಿ ಕೇಶವ" ಎಂಬ ಪದ ಬಳಸಿ ಹಾಡನ್ನು ಮುಕ್ತಾಯಗೊಳಿಸುತ್ತಿದುದು   ಗಮನಕ್ಕೆ ಬಂದಿತು, ಹಾಡಿನಲ್ಲಿ "ಕಾಗಿನೆಲೆಯಾದಿಕೇಶವ"  ಎಂಬ ಪದ ಬಂದರೆ ಅದು ಕನಕದಾಸರ ಪದ ಎಂಬ ಅರಿವು ಮೂಡಿತ್ತು, ಆದರೆ  ಕಾಗಿನೆಲೆ ಎಂಬ ಊರಿದೆ  ಅಲ್ಲಿ ಆದಿಕೇಶವ ನೆಲೆಸಿದ್ದಾನೆ  ಯಾವತ್ತಾದರೂ  ಅವನ ದರ್ಶನ ಮಾಡುತ್ತೇನೆ ಎಂಬ  ಆಸೆ ಯಾವತ್ತು ಮನದಲ್ಲಿ ಮೂಡಿರಲಿಲ್ಲ,  ಆದರೆ  ಯಾವ ಜನ್ಮದ ಪುಣ್ಯವೋ  ಕಾಣೆ ಆ ಅವಕಾಶ ಅರಿವಿಲ್ಲದೆ  ಸಿಕ್ಕಿತ್ತು .


ಕಾಗಿನೆಲೆ  ಗ್ರಾಮದ ಒಂದು ಬೀದಿ




೧೫೦೯ ರಿಂದ ೧೬೦೯  ರ ಅವದಿಯಲ್ಲಿ  ಕನಕದಾಸರು  ಜೀವಿಸಿದ್ದರೆಂದು  ಹೇಳುತ್ತಾರೆ  . ಹಾವೇರಿ ಜಿಲ್ಲೆಯ  ಶಿಗ್ಗಾವ್  ತಾಲೂಕಿನ ಬಾಡ  ಗ್ರಾಮ ದಲ್ಲಿ ಜನಿಸಿ  ರಾಜನಂತೆ ಮೆರೆದು  ಜೀವನದ  ಹಲವು ಏಳು ಬೀಳುಗಳನ್ನು ಕಂಡು  ಜೀವನದ ತಿರುವು ಕಂಡು  ಭೋಗ ಜೀವನದಿಂದ  ವೈರಾಗ್ಯ  ಹೊಂದಿ  ಶ್ರೀ ಹರಿಯ ದಾಸನಾಗಿ  ಪುಣ್ಯ ಕ್ಷೇತ್ರಗಳಿಗೆ ಅಲೆದಾಡಿ  ಜ್ಞಾನ ಸಂಪಾದಿಸಿ  ಆದಿ ಕೇಶವ ವಿಗ್ರಹದೊಂದಿಗೆ   ಕನಕದಾಸರು  ನೆಲೆಕಂಡ ,  ಪುಣ್ಯ ಭೂಮಿ  ಈ "ಕಾಗಿನೆಲೆ  ಅಥವಾ ಕಾಗಿನೆಲ್ಲಿ" . ಕಾಗಿನೆಲೆ  ಬ್ಯಾಡಗಿ ತಾಲೂಕಿನ ಒಂದು ಗ್ರಾಮ  ಇಂದು . ತಾಲೂಕು ಕೇಂದ್ರ ಬ್ಯಾಡಗಿ ಇಂದ ೧೯ ಕಿಲೋಮೀಟರು , ಹಾಗು ಜಿಲ್ಲಾ ಕೇಂದ್ರ ಹಾವೇರಿ ಇಂದ ೧೪ ಕಿಲೋಮೀಟರ್ ದೂರದಲ್ಲಿದೆ . ಕಾಗಿನೆಲೆ ಗ್ರಾಮದಲ್ಲಿ ಆದಿಕೇಶವ  ದೇವಾಲಯ , ಸಂಗಮನಾಥ ದೇವಾಲಯ  ಹಾಗು ಕನಕದಾಸ ದೇಗುಲಗಳು ಇವೆ,  ಆದಿಕೇಶವ  ದೇವಾಲಯ ಕನಕದಾಸರು ಸ್ಥಾಪಿಸಿದ ದೇವಾಲಯವೆಂದು ಹೇಳಲಾಗುತ್ತದೆ . ಉಳಿದ ದೇವಾಲಯಗಳ ಬಗ್ಗೆ ಅಷ್ಟು ಮಾಹಿತಿ ತಿಳಿದು ಬರೋದಿಲ್ಲ .




ಕಾಗಿನೆಲೆ  ಗ್ರಾಮದ ಒಂದು ನೋಟ


ದೇಗುಲದ ಮರು ನಿರ್ಮಾಣ ಕಾರ್ಯದ ನೋಟ




ಕನಕದಾಸರ ಕಾಗಿನೆಲೆಯ ಪುಣ್ಯ ಭೂಮಿಯಲ್ಲಿ  ಕಾಲಿಟ್ಟ ನಾವು ಆದಿಕೇಶವ ದೇವಾಲಯ ತಲುಪಿದೆವು,  ಅಚ್ಚರಿಯೆಂದರೆ , ಈ ಐತಿಹಾಸಿಕ ದೇಗುಲಕ್ಕೆ  ತಲುಪಲು  ಒಂದು ರಾಜಮಾರ್ಗವೇ ಇಲ್ಲ , ಸಂದಿ ಗೊಂದಿಗಳ ಪುಟ್ಟ ಗಲ್ಲಿಗಳಲ್ಲಿ  ನಡೆದು  ಕನಕರ ಪ್ರೀತಿಯ  ಆದಿಕೇಶವನ  ದರ್ಶನ ಮಾಡಬೇಕು .  ಅಂದಿನಕಾಲದಲ್ಲಿ  ಅತ್ಯಂತ ವೈಭವಯುತವಾಗಿ ಮೆರೆದ  ಈ ದೇಗುಲ ಇಂದು  ಶಿಥಿಲಾವಸ್ಥೆ  ತಲುಪಿ ಈಗ ದುರಸ್ಥಿ  ಕಾಣುತ್ತಿದೆ.





ಶ್ರೀ ಲಕ್ಷ್ಮಿ ನರಸಿಂಹ  ಸನ್ನಿಧಿ




ಕನಕದಾಸರು ಇಲ್ಲಿಗೆ ಬರುವ ಮೊದಲು  ಈ ಊರು ಕಾಗಿನೆಲ್ಲಿ  ಆಗಿತ್ತೆಂದು ಹಾಗು ಅವರು ಬರುವ ಮೊದಲೇ ಇಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮೀ ದೇಗುಲ ಇತ್ತೆಂದು ಹೇಳುತ್ತಾರೆ, ಈ ಊರಿಗೆ  ಕಾಗಿನೆಲ್ಲಿ ಎಂಬ ಹೆಸರು ಬರಲು  ಒಂದು ಕಥೆ ಹೇಳುತ್ತಾರೆ . ಬಹಳ ಹಿಂದೆ ೬೦೦  ವರ್ಷಗಳಿಗೂ  ಹಿಂದೆ   ಒಂದು ಕಾಗೆ ನೆಲ್ಲಿ ಮರದಲ್ಲಿ  ಕುಳಿತು ನೆಲ್ಲಿ ಕಾಯಿ  ತಿನ್ನುತ್ತಿತ್ತೆಂದೂ , ಆ ನೆಲ್ಲಿಕಾಯಿ ಚಿನ್ನದ ನೆಲ್ಲಿಕಾಯಿಯಂತೆ  ಕಂಡು ಬಂದ  ಕಾರಣ ಅಲ್ಲಿನ ರೈತರು  ಆ ಕಾಗೆಯನ್ನು  ಅಟ್ಟಿಸಿಕೊಂಡು ಹೋಗಲು , ಬೆದರಿದ ಆ ಕಾಗೆ  ನೆಲ್ಲಿಕಾಯಿಯನ್ನು ಒಂದು ಹುತ್ತದೊಳಗೆ ಹಾಕಿ ಹಾರಿಹೊಯಿತೆಂದೂ , ನಂತರ  ಆ ಹುತ್ತವನ್ನು ಅಗೆದಾಗ  ಈ ಲಕ್ಷ್ಮಿ ನರಸಿಂಹ ವಿಗ್ರಹ  ಸಿಕ್ಕಿ  ಒಂದು ದೇಗುಲವನ್ನು ನಿರ್ಮಿಸಲಾಯಿತೆಂದೂ , ಅಂದಿನಿಂದ ಈ ಜಾಗವನ್ನು  ಕಾಗಿ ನೆಲ್ಲಿ ಎಂದು ಕರೆಯಲಾಯಿತೆಂದೂ ಹೇಳುತ್ತಾರೆ . ನಂತರ  ಕನಕದಾಸರು  ಇಲ್ಲಿಗೆ ಬಂದು  ವ್ಯಾಸರಾಜರ  ಸಮ್ಮುಖದಲ್ಲಿ  ಇಲ್ಲಿ ಆದಿ ಕೇಶವ ಪ್ರತಿಷ್ಟಾಪಿಸಿದರೆಂದೂ  ಹೇಳುತ್ತಾರೆ . ಏನೇ ಆದರೂ ಈ ಸ್ಥಳ  ಹಲವುಶತಮಾನಗಳ  ಐತಿಹಾಸಿಕ  ಘಟನೆಗಳಿಗೆ ಸಾಕ್ಷಿ ಯಾಗಿರುವುದಂತೂ ನಿಜ .



ಕನಕದಾಸರು  ಬಳಸಿದ ಶಂಖ ಹಾಗು ಕರಂಡ




ಶ್ರೀ  ಲಕ್ಷ್ಮಿ ನರಸಿಂಹ ದೇಗುಲದಲ್ಲಿ  ದರ್ಶನ ಪಡೆದ ನಮಗೆ ಅಲ್ಲಿನ  ಅರ್ಚಕರು  ನಮಗೆ ದೇಗುಲದ ಬಗ್ಗೆ  ಮಾಹಿತಿ ನೀಡಿ ಕನಕದಾಸರು ಬಳುಸುತ್ತಿದ್ದರೆನ್ನಲಾದ  ಶಂಖ ಹಾಗು  ಕರಂಡ ಗಳನ್ನೂ ದರ್ಶನ ಮಾಡಿಸಿ ಅದನ್ನು ಸ್ಪರ್ಶಿಸಲು ಹಾಗು ನಾವುಗಳೇ   ಶಂಖ ಮುಟ್ಟಿ  ಶಂಖ ನಾಧ  ಮಾಡಲು ಅನುವು ಮಾಡಿಕೊಟ್ಟರು , ಕನಕದಾಸರು ಸ್ಪರ್ಶಿಸಿದ  ಈ ಅಮೂಲ್ಯ  ವಸ್ತುಗಳನ್ನು ಕಂಡು ಸ್ಪರ್ಶಿಸಿ  ಆನಂದಪಟ್ಟೆವು, ನಂತರ  ತೆರಳಿದ್ದು   ಕನಕರ ಪ್ರೀತಿಯ  ಆದಿಕೇಶವನ ಸನ್ನಿಧಿಗೆ





ಕನಕದಾಸರ  ಆದಿಕೇಶವ ನೋಡಿ ಇಲ್ಲಿದ್ದಾನೆ

ಕಾಗಿನೆಲೆಯಾದಿ   ಕೇಶವನ ದರ್ಶನ ಮಾಡಿ


 ಕಾಗಿನೆಲೆ  ಆದಿಕೇಶವನ  ದರ್ಶನ ಮಾಡಲು ಮೂರ್ತಿಯ ಮುಂದೆ ನಿಂತ ನಮಗೆ  ಮಾತು ಹೊರಡಲಿಲ್ಲ ,  ಮುದ್ದಾದ  ಆದಿಕೇಶವ  ನಮ್ಮ ಮನದಲ್ಲಿ ಅಚ್ಚಳಿಯದೆ  ಉಳಿಯುವಂತಹ  ದರ್ಶನ ಕರುಣಿಸಿದ್ದ , ಮನದ ತುಂಬಾ ಸಂತಸದ  ಭಾವನೆ ಹೊಮ್ಮಿತು.  ಹನುಮ ಪೀಠದ  ಮೇಲೆ ಗರುಡದೇವನ  ಸಹಿತ ಆದಿಕೇಶವ ನೆಲೆಸಿದ್ದಾನೆ, ಶಂಖ, ಚಕ್ರ , ಗದೆಗಳು ಮೂರು  ಕೈಗಳಲ್ಲಿ  ಮತ್ತೊಂದು ಅಭಯ ಹಸ್ತ  ಈ  ಸುಂದರ ಮೂರ್ತಿಯ ವಿಶೇಷ ,  ಈ ಆದಿಕೇಶವ  ಮೂರ್ತಿಯನ್ನು  ಕನಕದಾಸರ  ಗುರುಗಳಾದ ವ್ಯಾಸರಾಜರು  ಪ್ರತಿಷ್ಟಾಪಿಸಿದರೆಂದು ಹೇಳಲಾಗುತ್ತದೆ ,   ಭಕ್ತಿಯಿಂದ   ಆದಿಕೇಶವನನ್ನು   ಆರಾಧಿಸುತ್ತಾ  ಕನಕದಾಸರು  ಈ ಪವಿತ್ರ  ಸ್ಥಳದಲ್ಲಿ  ನೆಲೆಸಿ  ನಳಚರಿತ್ರೆ , ಹರಿಭಕ್ತಿಸಾರ ,ನೃಸಿಂಹಸ್ತವ , ರಾಮಧಾನ್ಯ ಚರಿತೆ  ಹಾಗು ಉಗಾಭೋಗ  ಮುಂತಾದವುಗಳನ್ನು ರಚಿಸುತ್ತಾರೆ . "ಈಶ ನಿನ್ನ ಚರಣ  ಭಜನೆ " ಎಂಬ ಹಾಡು ಕನಕದಾಸರು  ಅವರ ಜೀವಿತ ಅವದಿಯಲ್ಲಿ ರಚಿಸಿದ ಕೊನೆಯ ಹಾಡು  ಅದರಲ್ಲಿನ ಪಾಂಡಿತ್ಯ ಒಮ್ಮೆ ನೋಡಿದರೆ  ನಿಮಗೆ ಅವರ ಜ್ಞಾನದ ಅರಿವಾಗುತ್ತದೆ https://youtu.be/lUl6VREGTXE  ಈ ಹಾಡಿನಲ್ಲಿ  ಆದಿ ಕೇಶವನನ್ನು  ಹೊಗಳಲು  ಒಮ್ಮೆ ಬಳಸಿದ  ವಿಷ್ಣುವಿನ   ಹೆಸರನ್ನು ಮತ್ತೊಮ್ಮೆ ಬಳಸದೆ  ವಿಷ್ಣುವಿನ  ೨೬  ಹೆಸರುಗಳನ್ನು  ಬಳಸುತ್ತಾ  ತಮ್ಮ ಜ್ಞಾನ ನೈಪುಣ್ಯತೆ ಮೆರೆದಿದ್ದಾರೆ .




ಯತಿಗಳ ವೃಂದಾವನ

ಮಾರುತಿಯ ದರ್ಶನ




ಆದಿಕೇಶವನ ದರ್ಶನ ಪಡೆದು ಪಾವನ ರಾದ ನಾವು  ದೇಗುಲದ ಆವರಣದಲ್ಲೇ ಇದ್ದ  ಶ್ರೀ ರಾಜ ವಂದಿತ ತೀರ್ಥರ ವೃಂದಾವನ, ಹಾಗು ಮಾರುತಿ ದೇವರ ದರ್ಶನ ಪಡೆದೆವು, ಈ ಮಾರುತಿ ದೇಗುಲದಲ್ಲಿ  ಮೂರು ಹನುಮರ ವಿಗ್ರಹ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ, ದೇಗುಲ ನೋಡುತ್ತಾ  ಅಲ್ಲಿನ  ವಾತಾವರಣದಲ್ಲಿ  ಲೀನವಾಗಿದ್ದ ನಮಗೆ  ಊರಿಗೆ ಹೋಗಬೇಕಾದ  ಬಗ್ಗೆ ಮನಸಿನಲ್ಲಿ  ಎಚ್ಚರಿಕೆ ಬಂದೀತು .  ಅಲ್ಲಿಂದ  ವಾಪಸ್ಸು ಹೊರಟು   ಆದಿಕೇಶವನ  ದೇವಾಲಯದ  ಹೊರಗೆ ಬಂದು  ಕಾಗಿನೆಲೆಯ  ನಡು ಬೀದಿಯಲ್ಲಿ ನಡೆದೆವು .




ಕಾಗಿನೆಲೆಯಲ್ಲಿ  ಸಂತೆಯ ದೃಶ್ಯ


ನಾವು ಭೇಟಿ ನೀಡಿದ ದಿನ ಕಾಗಿನೆಲೆಯಲ್ಲಿ ಸಂತೆ ಇತ್ತು,  ಅಲ್ಲಿನ ಸುತ್ತ ಮುತ್ತ ಹಳ್ಳಿಯ ಜನರು  ದವಸ ದಾನ್ಯಗಳ ಖರೀದಿಯಲ್ಲಿ ತೊಡಗಿದ್ದರು , ಹಲವಾರು  ದಶಕಗಳಿಂದ  ನಡೆದು ಬಂದಿರುವ  ಸಂತೆ  ವ್ಯಾಪಾರ  ನಮ್ಮ ಹಳ್ಳಿಗಳಿಗೆ ಸೂಪರ್  ಮಾರ್ಕೆಟ್ ನಂತೆ  ಎಲ್ಲಾ  ಅಗತ್ಯ ವಸ್ತುಗಳು ಒಂದೆಡೆ ಸಿಗುವ  ತಾಣವಾಗಿವೆ . ಅಲ್ಲಿನ ದ್ರುಶ್ಯ ನೋಡುತ್ತಾ  ಮುಂದೆ ಸಾಗಿದೆ , ನಮ್ಮ ಕಾರು ಬೆಂಗಳೂರಿನ ಹಾದಿ ಹಿಡಿಯಿತು ,



ಹಸಿವ ತಣಿಸಿದ ತಾಣ



ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ  ಹೊರಟ  ನಮಗೆ ಬಿರುಸಾದ ಮಳೆಯ ದರ್ಶನ , ಚಾಲಕರಿಗೆ ದಾರಿ ಕಾಣದಷ್ಟು  ಮಳೆ ದೋ ಎಂದು ಸುರಿಯುತ್ತಿತ್ತು,  ಕಾಗಿನೆಲೆ ಅಲೆದಾಟದಿಂದ  ಹೊಟ್ಟೆ  ಹಸಿದಿತ್ತು,  ಹಾದಿಯಲ್ಲಿ ಸಿಕ್ಕ ಒಂದು ಹೋಟೆಲ್ ಗೆ  ನುಗ್ಗಿ  ಹಸಿದ ಹೊಟ್ಟೆಗೆ  ರುಚಿಯಾದ  ದೋಸೆಗಳನ್ನು  ಬಲಿ ನೀಡಿದೆವು,  ಪ್ರಕಾಶಣ್ಣ  ಬಹಳ ಖುಷಿಯಾಯಿತು ನಿಮ್ಮಜೊತೆ ಕಳೆದ  ಮೂರುದಿನಗಳ  ಯಾತ್ರೆ ಅಂದೇ  , ಅಯ್ಯೋ ಬಾಲಣ್ಣ  ನನಗೂ ಹಾಗೆ ಅನ್ನಿಸಿದೆ,   ನಿಜಕ್ಕೂ  ಈ ಮೂರುದಿನಗಳು  ಮರೆಯಲಾರದ  ಅನುಭವ ಅಂದ್ರೂ . ನಮ್ಮಿಬ್ಬರ ಪೇಚಾಟ ಕೇಳಿ  ನಮ್ಮ  ವಾಹನ ಚಾಲಕ ನಗುತ್ತಿದ್ದ,   ಬೆಂಗಳೂರು ತಲುಪಿ  ಕೀಟಲೆ ಪ್ರಕಾಶಣ್ಣ ನನ್ನು  ಆಶಾ ಅತ್ತಿಗೆ  ವಶಕ್ಕೆ ಒಪ್ಪಿಸಿ  ಮೈಸೂರಿನ ನನ್ನ ಮನೆಗೆ  ನೆಮ್ಮದಿಯಾಗಿ ತಲುಪಿದೆ.





 ಹಸಿದ ಹೊಟ್ಟೆಗೆ  ದೋಸೆಗಳ ಸಾಂತ್ವನ 


ಕಳೆದ ವರ್ಷ ೨೦೧೪ ರ ಮೇ ೨೮ ರಿಂದ  ಇಲ್ಲಿಯವರೆಗೆ  ಸುಮಾರು  ೧೭ ಕಂತಿನ ಈ ಪ್ರವಾಸ ಯಾನದ ಅನುಭವದ  ಮಾಲಿಕೆಯನ್ನು ಬ್ಲಾಗ್ ನಲ್ಲಿ ಓದಿ  ನನ್ನನ್ನು ಪ್ರೀತಿಯ  ಮಾತುಗಳಿಂದ  ಪ್ರೋತ್ಸಾಹಿಸಿ  ಪೊರೆದ  ಎಲ್ಲಾ ಗೆಳೆಯರಿಗೆ   ವಂದಿಸುತ್ತಾ  , ಈ ಪ್ರವಾಸ ಕಥನ ಯಾನವನ್ನು ಮುಗಿಸಿದ್ದೇನೆ .  ನಿಮ್ಮೆಲ್ಲರ ಪ್ರೀತಿಗೆ ನನ್ನ ಸಲಾಂ .

Sunday, May 17, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......16 ಹಾವೇರಿಯಲ್ಲಿ ಹಸಿವಿನಲ್ಲೂ ಹುಡುಗಾಟ ,

ಜ್ಞಾನದಲ್ಲಿ  ದೇವರ ಕಂಡ ಕನಕ ದಾಸರು 





ಬಾಡ ದಲ್ಲಿನ  ವೃತ್ತದಲ್ಲಿ  ಕುಳಿತಿದ್ದ  ಕನಕದಾಸರ  ಪ್ರತಿಮೆ   "ನೀ ಮಾಯೆಯೊಳಗೋ  ಮಾಯೇಯೋಳು ನೀನೋ " ಎಂದು ಹಾಡುವ ಬದಲಾಗಿ   "ನೀ ಅಜ್ಞಾನ ದೊಳಗೋ   ಅಜ್ಞಾನ ದೊಳು  ನೀನೋ"   ಎಂದು ಹಾಡಿದಂತೆ  ಅನ್ನಿಸಿ  ಹೆಚ್ಚಿನ ಸಮಯ ವ್ಯರ್ಥ ಮಾಡಬಾರದೆಂದು   ಕಾಗಿನೆಲೆ ನೋಡಲು  ಹಾವೇರಿಯ ಕಡೆ  ಪಯಣ  ಮುಂದುವರೆಸಿದೆವು , ಹೊಟ್ಟೆ ಚುರುಗುಟ್ಟುತ್ತಿತ್ತು , ಕಾರು ಹಾವೇರಿ  ಪ್ರವೇಶ  ಮಾಡಿತ್ತು ,


ಹಾವೇರಿಯಲ್ಲಿ  ಒಂದು  ಒಳ್ಳೆಯ ಹೋಟೆಲ್


 ಹಾವೇರಿ  ಪಟ್ಟಣದೊಳಗೆ ನಮಗೆ ಮೊದಲ ಪ್ರವೇಶ ,  ಆ ಊರಿನ ಬಗ್ಗೆ ಹೆಚ್ಚು ತಿಳುವಳಿಕೆ ಇರಲಿಲ್ಲ, 
ಯಾವುದಾದರೂ ಒಳ್ಳೆ ಹೋಟೆಲ್ ಸಿಕ್ಕಿದರೆ  ಮೊದಲು ಊಟ ಮಾಡೋಣಾ  ಅಂತಾ  ಅನ್ನಿಸಿತು. ಹಾವೇರಿಗೆ  ಪ್ರವೇಶಿಸುತ್ತಿದ್ದಂತೆ  ಕಂಡಿತು ಒಂದು ಭವ್ಯ  ಕಟ್ಟಡದಲ್ಲಿ ಮಿಂಚುತ್ತಿದ್ದ   ಹೋಟೆಲ್ ಒಂದಕ್ಕೆ ನಮ್ಮ ಪ್ರವೇಶ , ಅಚ್ಚರಿ ಎಂದರೆ  ಒಬ್ಬರೂ ಗ್ರಾಹಕರು ಇರಲಿಲ್ಲ,  ಪ್ರಕಾಶಣ್ಣ  ಹೇಳಿದ್ರೂ ಕೇಳದೆ  ಬನ್ನಿ ಪ್ರಕಾಶಣ್ಣ  ಜನ ಜಾಸ್ತಿ ಇಲ್ಲಾ  ಆರಾಮವಾಗಿ  ಕುಳಿತು ಹೊಟ್ಟೆ ತುಂಬಾ ಊಟ ಮಾಡೋಣ ಅಂತಾ    ಆ ಹೋಟೆಲ್ ನೊಳಗೆ  ಪ್ರವೇಶಿಸಿ   ಮೂರು ಊಟಕ್ಕೆ  ಆರ್ಡರ್  ಮಾಡಿ  ಕೈತೊಳೆಯಲು  ಹೊರಟೆ  ಪ್ರಕಾಶಣ್ಣ  ಮೊದಲು ಹೋಗಿದ್ದವರು  ಓದಿ ಬಂದು  ಬಾಲಣ್ಣ  ಇಲ್ಲಿ ತಿಂದೆ ಇದ್ರೂ  ಪರವಾಗಿಲ್ಲ ಮೊದಲು ಆರ್ಡರ್ ಕ್ಯಾನ್ಸಲ್ ಮಾಡಿ ಅಂತಾ ಒಂದೇ ಉಸಿರಿಗೆ ಹೇಳಿದ್ರೂ  , ಅರೆ ಇದೇನಿದೂ ಅಂತಾ  ಕೈತೊಳೆಯಲು ಹೋದ್ರೆ  ಆ ವಾಶ್ ಬೇಸಿನ್ ನೋಡಿ   ಅಲ್ಲಿನ ದರ್ಶನ ಕಂಡು ಸುಸ್ತಾದೆ , ಅತ್ಯಂತ ಕೊಳಕು ವಾಶ್ ಬೇಸಿನ್,  ಊಟಮಾಡಲು ಅಸಹ್ಯ ಉಂಟುಮಾಡುವಂತಹ  ದರ್ಶನ  ನೀಡಿತ್ತು, ಈ ಹೋಟೆಲ್  ಹೊರನೋಟಕ್ಕೆ  ಥಳಕು  ಒಳಗಡೆ  ಗಬ್ಬು ನಾರುವ ಕೊಳಕು  ಎಂಬುದು ಅರ್ಥ ಆಗಿತ್ತು,  ಈ  ಗಡಿಬಿಡಿಯಲ್ಲಿ  ಆ ಹೋಟೆಲ್ ಹೆಸರನ್ನು ನೋಡೋದೇ ಮರೆತಿದ್ದೆ . ಮೊದಲೇ ಹೊಟ್ಟೆ ಹಸಿವು  ತಿನ್ನಲು ಹೋದ್ರೆ ಇಂತಹ ಹೋಟೆಲ್ ಗಳ ನರಕ ದರ್ಶನ , ನಮ್ಮ ಪ್ರವಾಸಕ್ಕೆ ಹೊಸ ಅನುಭವ ಸೇರಿಸಿತ್ತು,  ಹಸಿವಿನ ಆತುರದಲ್ಲಿ   ಮಾಡಿಕೊಂಡಿದ್ದ  ನಮ್ಮ ದಡ್ಡತನಕ್ಕೆ  ಪ್ರಕಾಶಣ್ಣ  ಹಾಗು ನಾನು ಪರಸ್ಪರ  ಮುಖ ನೋಡಿಕೊಂಡು  ನಕ್ಕು  ಮುಂದೆ ಸಾಗಿದೆವು  , ಸ್ಥಳಿಯರ  ಶಿಫಾರಸ್ಸಿನಂತೆ   ಹಾವೇರಿ ಪಟ್ಟಣದೊಳಗೆ   ಇದ್ದ  ಹೋಟೆಲ್ ಶಿವ ಶಕ್ತಿ   ಯನ್ನು ಹೊಕ್ಕೆವು .     ಇದ್ದದ್ದರಲ್ಲಿ ನಮ್ಮ   ಹಸಿವಿನ  ಸಂಕಟಕ್ಕೆ  ಇದ್ದದ್ದರಲ್ಲೇ  ಶುಚಿಯಾದ ರುಚಿಯಾದ  ಊಟ  ಸಾಂತ್ವನ  ಸಾಂತ್ವನ ನೀಡಿತ್ತು .

 
 ಪ್ರಕಾಶಣ್ಣ ಹಾಸ್ಯಕ್ಕೆ  ನೆತ್ತಿ ಹತ್ತಿತ್ತು  ನನಗೆ 


ಹೋಟೆಲ್ ಶಿವಶಕ್ತಿಯಲ್ಲಿ  ಊಟ ಮಾಡುತ್ತಾ , ಸಮಾಧಾನ ಪಟ್ಟು ಕೊಂಡೆವು ,   ಇನ್ನೇನು  ಊಟ ಮುಗಿಸಿ  ನೀರು ಕುಡಿಯುವ ವೇಳೆ  , ಪ್ರಕಾಶ್ ಹೆಗ್ಡೆ  ಹಾಸ್ಯದ  ಬಾಣ  ಬಿಟ್ಟರು ,   ಬಾಲಣ್ಣ  ಒಂದು ವೇಳೆ ಅದೇ ಕೊಳಕಿನ  ವಾಶ್ ಬೇಸಿನ್ ನಲ್ಲಿ  ಕೈತೊಳೆದು ಅದೇ ಹೋಟೆಲ್ ಊಟ ಮಾಡಿದ್ರೆ ನಮ್ಮ ಮುಖ  ಹೇಗೆ ಇರ್ತಿತ್ತು  ..?  ನೀರು ಕುಡಿಯುತ್ತಿದ್ದ ನನಗೆ ಈ ಹಾಸ್ಯಕ್ಕೆ  ನಗು ತಡೆಯಲಾಗಲಿಲ್ಲ,    ಗೊಳ್  ಅಂತಾ ನಕ್ಕೆ  ಕುಡಿಯುತ್ತಿದ್ದ  ನೀರು ಚಿಲುಮೆ ಯಂತೆ ಉಕ್ಕಿ  ಮೈಮೇಲೆ  ಚೆಲ್ಲಿತು ,   ಅದೇ ಸಮಯಕ್ಕೆ ನನ್ನ ಶಿಷ್ಯ  ನನಗೆ ಗೊತ್ತಿಲ್ಲದಂತೆ ಚಿತ್ರ ತೆಗೆದು   ಆ ಸನ್ನಿವೇಶ ದ  ದರ್ಶನ   ಮಾಡಿಸಿದ . ಅ ಕೊಳಕು ಹೋಟೆಲ್  ನಲ್ಲಿನ   ನಮ್ಮ ಎಡವಟ್ಟು  ಪ್ರಸಂಗ ನೆನೆ ನೆನೆದು ಮಸಾರೆ ನಕ್ಕು ಬಿಟ್ಟೆವು .  ರುಚಿಯಾದ  ಊಟದ ಜೊತೆ  ಈ ಹಾಸ್ಯದ ರಸಾಯನ   ನಮ್ಮ ಪ್ರಯಾಣದ  ಆಯಾಸ  ಪರಿಹಾರ ಮಾಡಿತ್ತು .



 ಹಾವೇರಿಯ ವಿಶೇಷದಲ್ಲಿ   ಈ ಪಾನ್ ಅಂಗಡಿ  ಸಹ ಒಂದು 

 ಹೊಟ್ಟೆ ತುಂಬಾ ಊಟ ಮಾಡಿ ಹೊರಗೆ ಬಂದ  ನಮಗೆ  ಪಕ್ಕದಲ್ಲೇ ಕಂಡಿದ್ದು ಈ ಬೀಡಾ  ಶಾಪ್ , ಎಲ್ಲರೊಡನೆ  ನಗು ನಗುತ್ತಾ ಪಾದರಸದಂತೆ ಬೀಡಾ  ಕಟ್ಟಿಕೊಡುತ್ತಿದ್ದ  ಈ ಹುಡುಗನನ್ನು  ರೇಗಿಸುತ್ತಾ  ಸಿಹಿಯಾದ ಬೀಡಾ  ತಿಂದು  ಖುಶಿ ಪಟ್ಟೆವು .   ಅರೆ ರುಚಿಯಾದ  ಊಟ ಕೊಟ್ಟು  ನಮಗೆ ಖುಶಿನೀಡಿದ  ಹಾವೇರಿ ಬಗ್ಗೆ ಪರಿಚಯ ಮಾಡಿಕೊಳ್ಳೋಣ ಬನ್ನಿ ,






ಈ ಹಾವೇರಿ ಯಲ್ಲಿ ನೋಡೋದು ಬಹಳಷ್ಟಿದೆ , ಆದ್ರೆ ನಮಗೆ ಸಮಯ ಬಹಳ ಕಡಿಮೆ ಇದ್ದ ಕಾರಣ , ಕಾಗಿನೆಲೆ  ಮಾತ್ರ ನೋಡಲು ಸಾಧ್ಯ ಆಯ್ತು,  ಆದರೆ  ಮುಂದೆ ಬಂದಾಗ ಇನ್ನಷ್ಟು ನೋಡಲು  ಒಂದಷ್ಟು ಮಾಹಿತಿ ಸಂಗ್ರಹ   ಮಾಡಿಕೊಂಡೆ . ಹಾವೇರಿಯಲ್ಲಿ   ಐತಿಹಾಸಿಕ  ಸಿದ್ದೇಶ್ವರ  ದೇವಾಲಯ ವಿದೆ,  ಇನ್ನು ಈ ಜಿಲ್ಲೆ   ಹಲವಾರು  ಮಹಾಪುರುಷರಿಗೆ  ಜನ್ಮ ನೀಡಿದೆ , ಸರ್ವಜ್ಞ , ಕನಕದಾಸ, ಶಿಶುನಾಳ ಶರೀಫರು ,  ಹಾನಗಲ್ ಕುಮಾರ ಶಿವಯೋಗಿಗಳು,  ವಾಗೀಶ ಪಂಡಿತರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು,  ಲೇಖಕರಾದ  ಗಳಗನಾಥರು ,  ಗೋಕಾಕ್ ಚಳುವಳಿ ನೇತಾರ, ಡಾಕ್ಟರ್ . ವಿ. ಕೆ. ಗೋಕಾಕ್ ರವರು,  ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ,   ಸ್ವಾತಂತ್ರ್ಯ ಕ್ಕಾಗಿ ಬ್ರಿಟೀಷರ ಸೆಣಸಿದ  ಮೈಲಾರ ಮಹಾದೇವ  ಈ ಮಣ್ಣಿನ ಮಗನೆ .  ಈ ಜಿಲ್ಲೆಯ ನೆಲ  ಚಾಲುಕ್ಯ , ರಾಷ್ಟ್ರಕೂಟ , ಕದಂಬ , ಹೊಯ್ಸಳ, ವಿಜಯನಗರ ಸಾಮ್ರಾಜ್ಯದ ಅರಸರ  ಆಳ್ವಿಕೆ   ಕಂಡಿದೆ .  ತುಂಗಭದ್ರ , ಹಾಗು  ವರದ ಈ ಜಿಲ್ಲೆಯ ಪ್ರಮುಖ ನದಿಗಳು , ತುಂಗಾ ಭದ್ರ ನದಿಯನ್ನು ವರದಾ ನದಿ  ಸೇರುವ   ತಾಣ ಇಲ್ಲಿದೆ .   ನಮ್ಮ ದೇಶದಲ್ಲಿ ಮೆಣಸಿನಕಾಯಿ  ಅಂದ್ರೆ ತಕ್ಷಣ ಜ್ಞಾಪಕಕ್ಕೆ ಬರೋದು   ಒಂದು  ಅಂದ್ರದ ಗುಂಟೂರು, ಮತ್ತೊಂದು  ನಮ್ಮ ರಾಜ್ಯದ ಬ್ಯಾಡಗಿ ,   ಈ ಪ್ರಸಿದ್ಧ  ಬ್ಯಾಡಗಿ ಹಾವೇರಿ ಜಿಲ್ಲೆಯ ತಾಲೂಕು ಕೇಂದ್ರ , ಇಷ್ಟೊಂದು ವಿಶೇಷ ಹೊಂದಿರುವ   ಹಾವೇರಿ ಜಿಲ್ಲಾ ದರ್ಶನ  ಮಾಡಲು ಮತ್ತೊಮ್ಮೆ ಬರುವ ಸಂಕಲ್ಪ ಮಾಡಿ   ಕನಕದಾಸರು ಪೂಜಿಸಿದ  ಆದಿಕೇಶವನ ನೋಡಲು ದೌಡಾಯಿಸಿದೆವು .

Saturday, May 9, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......15 ಹೋಗಿದ್ದು ಕಾಗಿನೆಲೆಗೆ ಮೊದಲು ಕಂಡಿದ್ದು ಬಾಡಾ !


ಎತ್ತ ಪೋಗುವುದೆಂದು ಕೇಳಿತ್ತು ಚಿತ್ತ


ಕಳೆದ ಸಂಚಿಕೆಯಲ್ಲಿ  "ದೇವಿಸರ"  ದ ಅನುಭವ  ಬರೆದ ಬಗ್ಗೆ ಓದಿದ ಹಲವರು  ಬಹಳ ಖುಷಿಪಟ್ಟು ತಮ್ಮ ಅನಿಸಿಕೆ ಹಾಕಿದ್ದಾರೆ, ಕೆಲವರ  ಆತ್ಮೀಯ ಸಂಬಂಧಿಕರು  ನಾನು ಹಾಕಿದ ಚಿತ್ರದಲ್ಲಿ  ಆಕಸ್ಮಿಕವಾಗಿ  ಇದ್ದದ್ದು    ಗೆಳೆಯರಿಗೆ  ಬಾಲ್ಯದ ನೆನಪಾಗಿ  ಖುಷಿಕೊಟ್ಟಿದೆ . ಅದರಲ್ಲೂ  ಗೆಳೆಯರಾದ ನಂಜುಂಡ ಭಟ್ , ರಾಮಕೃಷ್ಣ  ಅವರ  ಸಂತಸದ ಮಾತುಗಳು  ಮನಮುಟ್ಟಿದವು ,  ಈ ಒಂದು ಬ್ಲಾಗ್ ಬರಹ  ಓದುಗರಿಗೆ  ಅವರ  ಬಾಲ್ಯದ ನೆನಪನ್ನು ನೆನಪಿಸಿ  ತಮ್ಮ ಬಂಧು ಗಳ ದರ್ಶನ ಪಡೆಯಲು  ಕಾರಣವಾಗಿದ್ದಕ್ಕೆ  ನನಗೂ ಖುಶಿತಂದಿತು . ಬನ್ನಿ ಮುಂದೆ ಹೋಗೋಣ .


ಮರಕ್ಕೂ  ಬೇಕಂತೆ ಬದಲಾವಣೆ



ಅಣ್ಣಾ ಪ್ರಕಾಶಣ್ಣ  ಯಾವ ಕಡೆಯಿಂದ ಹೋಗೋದು  ಅಂದೇ .....?   ಹ .. ಬಾಲಣ್ಣ   ಯಾವಕಡೆ ಯಿಂದ ಹೋಗಬಹುದು   ಅಂತಾ ಯೋಚಿಸ್ತೀನಿ ತಾಳಿ ಅಂದರು  ............!   
  ಶಿರಸಿಯ  ಮಾರಿಕಾಂಬ  ದೇಗುಲದ ಬಳಿ ನಿಂತು   ಯಾವ ಕಡೆಯಿಂದ   ಊರಿಗೆ ವಾಪಸ್ಸ್ ಹೋಗೋದು ಅಂತಾ  ಯೋಚಿಸುತ್ತಾ  ನಿಂತೆವು ....!  ನಮ್ಮ ಪಯಣದ ಅಂತಿಮ ದಿನ  ಇಂದು   ಊರಿಗೆ ಹೋಗಲೇ ಬೇಕಾದ ಅನಿವಾರ್ಯತೆ , ಆದರು ಮನಸಿನಲ್ಲಿ ದುರಾಸೆ  ಇನ್ನೇನಾದರೂ ನೋಡಲು ಸಿಕ್ಕರೆ ಅದನ್ನು ನೋಡಿಬಿಡುವಾ  ಎಂಬ ತವಕ,  ಚರ್ಚೆಮಾಡುತ್ತಾ  ಅಣ್ಣಾ  ಬೆಂಗಳೂರಿಗೆ  ಶಿರಸಿಯಿಂದ ಹಾವೇರಿ ಕಡೆಯಿಂದ ಹೋದರೆ  ಹತ್ತಿರ ಆಗುತ್ತೆ ಏನ್ .ಹೆಚ್ . ೪ ರಲ್ಲಿ  ವೇಗವಾಗಿ  ಬೆಂಗಳೂರು ತಲುಪೋಣ , ದಾರಿಯಲ್ಲಿ ಸಾಧ್ಯಾ ಆದರೆ ಕಾಗಿನೆಲೆ ನೋಡೋಣ ಅಂತಾ  ತೀರ್ಮಾನ ಮಾಡಿದೆವು,  ಸರಿ ಶಿರಸಿಯಿಂದ  ಹಾವೇರಿ ಕಡೆ ಪಯಣ ಸಾಗಿತು . ದಾರಿಯಲ್ಲಿ  ಸಿಕ್ಕ ಒಂದು ಮರ  ಡೈನಾಸರಸ್ ತರಹ ತಲೆ ಎತ್ತಿ ನಿಂತಿತ್ತು ,  ಅರೆ  ಈ ಮರಕ್ಕೆ  ಯಾಕೆ   ಹೀಗೆ ಬದಲಾವಣೆ  ಆಸೆ  ಮೂಡಿತು ? ಅಂತಾ  ಪ್ರಶ್ನೆ ಮೂಡಿತು,  ಉತ್ತರ ಹೊಳಿಲಿಲ್ಲ  ತಲೆ ಕೆರೆದರೆ  ಕೂದಲು ಉದುರುವ  ಸಂಭವ  ಇದೆ  ಅಂತಾ ಮುನ್ನಡೆದೆವು .


ರೈತನ ಬದುಕಿಗೆ  ಇಲ್ಲೂ  ಕಾಟ ಕೊಟ್ಟ  ವಾಹನಗಳು




ಶಿರಸಿ ಯಿಂದ  ಹಾವೇರಿಯ ಕಡೆ ಸಾಗುವ ರಸ್ತೆ ದುರಸ್ತಿಕಾರ್ಯ  ನಡೆದಿತ್ತು, ಕೆಲವೊಂದು ಕಡೆ  ವಾಹನಗಳನ್ನು ಊರಿನೊಳಗೆ  ಹೋಗುವಂತೆ  ಮಾಡಲಾಗಿದ್ದ ಕಾರಣ ಕೆಲವು ಹಳ್ಳಿಗಳ  ಬೀದಿಗಳ ದರ್ಶನ ಆಯ್ತು , ಮಳೆ  ಇಲ್ಲದೆ  ಒಣಗಿದ ಭೂಮಿ, ದೂಳು ತುಂಬಿದ  ಹಾದಿಗಳು,   ಈ ನಡುವೆ  ರಸ್ತೆ ದುರಸ್ತಿಕಾರಣ  ಊರಿನೊಳಗೆ ಹಾದುಹೋಗುವ  ವಾಹನಗಳ ಕಿರಿ ಕಿರಿ , ಇವುಗಳೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡ ಜನರ ದರ್ಶನ ಆಯ್ತು .   ಶಿರಸಿಯಿಂದ ಹಾವೇರಿಗೆ ನಡುವೆ ಸಿಕ್ಕ  ಹಾನಗಲ್  ಎಂಬ ಊರನ್ನು ನೋಡಿ   "ಗಂಗೂಬಾಯಿ  ಹಾನಗಲ್ "  ಅವರ ಊರು ಇದೆ ಇರಬೇಕೂ  ಅಂತಾ  ಕಾರಿನಿಂದ  ಇಳಿದು ಅಲ್ಲೇ ಇದ್ದ ಅಂಗಡಿಯವರನ್ನು ವಿಚಾರಿಸಿದರೆ   " ಗಂಗೂಬಾಯಿ ಹಾನಗಲ್ " ಅವರ ಊರು ಇದಲ್ಲಾ  ಸರಾ ಅಂತಾ ಉತ್ತರ ನೀಡಿದರು,  ಏನೋ  ಮಹಾ ಹೊಸ ಜಾಗ  ನೋಡಲು ಸಿಕ್ಕಿತು ಎಂದು ಜಂಬದಿಂದ   ಬೀಗಿದ್ದ ನನಗೆ   ಸರಿಯಾದ ಶಾಸ್ತಿ  ಆಗಿತ್ತು ಇಲ್ಲಿ.  ಮತ್ತೆ ಪಯಣ ಮುಂದುವರಿಸಿದೆವು,  ಹಾಗೂ ಹೀಗೂ  ತೆವಳುತ್ತಾ  ದುರಸ್ತಿಕಾರ್ಯ ನಡೆದಿದ್ದ  ರಸ್ತೆಯಲ್ಲಿ ಸುಮಾರು ೭೦ ಕಿಲೋಮೀಟರು  ಹಾದಿಯನ್ನು ೨ಘಂಟೆಗೂ ಹೆಚ್ಚು  ಅವಧಿಯಲ್ಲಿ ಕ್ರಮಿಸಿದೆವು ,



ಬಾಡಾ  ದಲ್ಲಿ ಕಂಡ   ಸ್ಮಾರಕ

 ಹಾವೇರಿ ಗೆ ಪ್ರವೇಶಿಸುವ  ಮೊದಲು  ಕಾಗಿನೆಲೆ ದಾರಿಯಾವುದು  ತಿಳಿಯೋಣ ಎಂದು  ಅಲ್ಲೇ ಬರುತ್ತಿದ್ದ  ಆಟೋ ನಿಲ್ಲಿಸಿ  ಅಣ್ಣಾ   ಕಾಗಿನೆಲೆಗೆ  ಹೋಗ ಬೇಕು ದಾರಿ ಯಾವುದು ಹೇಳ್ತೀರಾ ? ಎಂದು  ಅದರ ಚಾಲಕರನ್ನು ಕೇಳಿದೆ ,  ಬಹಳ ಖುಷಿಯಾಯ್ತು  ಅನ್ನಿಸುತ್ತೆ ಅವರಿಗೆ
 ಸರ ,    ಕಾಗಿನೆಲೆ   ನೋಡುವ ಮೊದಲು  ಬಾಡಾ  ನೋಡ್ರೀ  ಸರಾ , ಇಲ್ಲಿಂದ  ಸುಮಾರು  ಹದಿನಾರು ಕಿಲೋಮೀಟರು  ಆಗ್ತೈತಿ  ನಂತರ  ಮತ್ತೆ ಹಾವೇರಿಗೆ ಬಂದು ಅಲ್ಲಿಂದ ಕಾಗಿನೆಲೆ ನೋಡಬಹುದು  ಎಂದು ಹೇಳಿ ಒಂದು ರೂಟ್  ಮ್ಯಾಪ್  ಹಾಕಿಕೊಟ್ಟರು .  ಅದರಂತೆ ಮೊದಲು ತಲುಪಿದ್ದೆ   ಕನದಾಸರ  ಬಾಡ  ಗ್ರಾಮಕ್ಕೆ .


ಕನಕದಾಸರ ಮೂರ್ತಿ


ಬನ್ನಿ ಬಾಡ ಗ್ರಾಮದ ಬಗ್ಗೆ ತಿಳಿಯೋಣ , ನಮಗೆಲ್ಲಾ  ತಿಳಿದಿರೋದು  ಕನಕದಾಸರು ಅಂದ್ರೆ  ಕಾಗಿನೆಲೆಯಲ್ಲಿ  ಜನಿಸಿದವರು,  ದಾಸಪಂಥಕ್ಕೆ  ಸೇರಿದವರು, ಉಡುಪಿಯಲ್ಲಿ  ತಮ್ಮ ಭಕ್ತಿಯ ಬಲದಿಂದ  ಶ್ರೀ ಕೃಷ್ಣನನ್ನು   ಒಲಿಸಿಕೊಂಡವರು , ಕನಕನಕಿಂಡಿ ಯ ಕಾರಣಕರ್ತರು  ಇತ್ಯಾದಿ  ವಿಚಾರಗಳು ತಿಳಿದಿವೆ,  ಆದರೆ ನಮಗೆ ತಿಳಿಯದ  ಅನೇಕ ವಿಸ್ಮಯದ  ವಿಚಾರಗಳನ್ನು  ಕನಕದಾಸರ ಬಗ್ಗೆ ಈ ಊರು ತನ್ನ ಒಡಲಿನಲ್ಲಿ  ಇಟ್ಟುಕೊಂಡಿದೆ . ಇಲ್ಲಿಗೆ ಬರುವವರೆಗೂ  ನಮಗೂ ಇದ್ದ ಜ್ಞಾನ ಇಷ್ಟೇ , ಇಲ್ಲಿಗೆ ಬಂದ ಮೇಲೆ ಕಂಡಿದ್ದು  ತಿಳಿದದ್ದು  ಬಹಳ ಆಸಕ್ತಿದಾಯಕ ವಿಚಾರಗಳು . ಬನ್ನಿ ಹೋಗೋಣ "ಕನಕದಾಸರ ಬಾಡ" ನೋಡಲು .  ಬಾಡ  ಗ್ರಾಮ ಇರೋದು  ಹಾವೇರಿ ಜಿಲ್ಲೆಯ  ಶಿಗ್ಗಾವ್  ತಾಲೂಕಿನಲ್ಲಿ ,  ಮೊದಲು ಈ ಗ್ರಾಮ ಧಾರವಾಡ ಜಿಲ್ಲೆಗೆ ಸೇರಿತ್ತು ೧೯೯೭-೯೮ ರಲ್ಲಿ  ಜಿಲ್ಲೆಗಳ ಪುನರ್ವಿಂಗಡಣೆ  ಆದಾಗ . ಶಿಗ್ಗಾವ್  ತಾಲೂಕು   ಹಾವೇರಿ ಜಿಲ್ಲೆಗೆ ಸೇರಿದ ಕಾರಣ  ಬಾಡ ಗ್ರಾಮ  ಹಾವೇರಿ ಜಿಲ್ಲೆಯ  ಇತಿಹಾಸದ ಭಾಗವಾಗಿ ನಿಂತಿದೆ .  ಹಾಲಿ ಇಲ್ಲಿ  ಕನಕದಾಸರ ನೆನೆಯಲು  ಒಂದು ಸುಂದರ ಕೋಟೆಯನ್ನು ನಿರ್ಮಿಸಿ ಅದರೊಳಗೆ  ಒಂದು ಸಂಗ್ರಹಾಲಯ  ಮಾಡಲಾಗಿದೆ.  ಒಳಗಡೆ ಕನಕದಾಸರ ಜೀವನದ ಬಗ್ಗೆ  ಹಲವು ಚಿತ್ರಗಳನ್ನು  ಪ್ರದರ್ಶಿಸಲಾಗಿದೆ , ಎಲ್ಲವನ್ನೂ  ನೋಡುತ್ತಾ ಸಾಗಿದೆವು ಇಲ್ಲಿನ ಅಚ್ಚುಕಟ್ಟು  ಗಮನ ಸೆಳೆಯಿತು .



ಕನಕದಾಸರ  ಜನ್ಮಸ್ಥಳ  ಬಾಡ


ಕನಕದಾಸರ  ನೆನಪಿಗಾಗಿ ಒಂದು ಸ್ಮಾರಕ


ಬಾಡ  ಗ್ರಾಮ  ಮೊದಲು  ಒಬ್ಬ ವಿಜಯ ನಗರದ  ಪ್ರತಿನಿಧಿ  ಅಥವಾ ಪಾಳಯಗಾರರ  ಆಡಳಿತಕ್ಕೆ ಒಳಪಟ್ಟ ಕೇಂದ್ರ ಸ್ಥಾನ  ಆಗಿತ್ತು, ಈ ಆಡಳಿತಕ್ಕೆ  ಸುಮಾರು ೮೦ ಹಳ್ಳಿಗಳು ಒಳಪಟ್ಟಿದ್ದವು ,  ಆ ಎಲ್ಲಾ ಹಳ್ಳಿಗಳ ಆಡಳಿತ  ನಡೆಸಲು ಇಲ್ಲಿ  ಮೂರುಸುತ್ತಿನ  ಒಂದು ಕೋಟೆ  ಕಟ್ಟಿ  ಆಡಳಿತ ನಡೆಸಿದ್ದವರೇ  ಬೀರೇಗೌಡ  ಎಂಬ ಸರದಾರರು , ಇವರ ಮಡದಿ ಬಿಚ್ಚಮ್ಮ ಅಥವಾ  ಬೆಚ್ಚಮ್ಮ   ಪತಿಗೆ ಆಡಳಿತದಲ್ಲಿ ಸಹಕಾರ ಕೊಡುತ್ತಿದ್ದರು , ಇವರಿಬ್ಬರ  ಅಪರೂಪದ  ಸಂತಾನವೇ  ಕನಕದಾಸರು ,  ಕನಕದಾಸರ ಮೂಲ ಹೆಸರು ತಿಮ್ಮಣ್ಣ ಅಥವಾ ತಿಮ್ಮಣ್ಣ ನಾಯಕ   ಎಂದು  ಕರೆಯಲಾಗಿತ್ತಂತೆ , ಹೌದು ಬಾಲಕ  ತಿಮ್ಮಣ್ಣ ಸಿರಿವಂತ ಕುಟುಂಬಕ್ಕೆ ಸೇರಿದವರು , ಮೊದಲೇ ರಾಜ ಪ್ರತಿನಿಧಿಯ  ಅರಮನೆ, ಹಾಗು ಕೋಟೆ ಇಲ್ಲಿ  ಆಡಳಿತ ವಿಚಾರಗಳು, ಸೈನ್ಯದ ಮೇಲ್ವಿಚಾರಣೆ  , ಅಪಾರ ಪ್ರಮಾಣದ  ಸಿರಿವಂತಿಕೆ , ಗೌರವ   ಇವೆಲ್ಲಾ ಬಾಲಕ ತಿಮ್ಮಣ್ಣ ನಿಗೆ ಬಳುವಳಿಯಾಗಿ  ಬಂದಿತ್ತು  ಆ ಕಾರಣ ಇವರು ರಾಜಕುಮಾರ ರಂತೆ ಬಾಲ್ಯ ಕಳೆದರು , ಜನನ  ಕಾಲ  ೧೪೮೯ ಎಂದು  ಊಹಿಸಲಾಗಿದ್ದರೂ  ಸರಿಯಾದ ಮಾಹಿತಿ ಲಭ್ಯವಿಲ್ಲ.  ಬಾಲಕ ತಿಮ್ಮಣ್ಣನ  ತಂದೆತಾಯಿಗಳು  ತಿರುಪತಿಯ  ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದ ಕಾರಣ ಈ ಮಗುವಿಗೆ ತಿಮ್ಮಣ್ಣ  ಎಂದು ನಾಮಕರಣ ಮಾಡುತ್ತಾರೆ . ತಿಮ್ಮಣ್ಣ  ಅಥವಾ  ಬಾಲ ಕನಕದಾಸ ರ ವಿಧ್ಯಾಭ್ಯಾಸ   ಬಾಡ  ಸಮೀಪದ ಸದಾಶಿವಪೇಟೆ ಎಂಬಲ್ಲಿದ್ದ ಶೈವ  ಮಠದಲ್ಲಿ  ಆಯಿತೆಂದು ತಿಳಿದುಬರುತ್ತದೆ, ಆ ನಂತರ  ವಿಜಯನಗರದ  ಕಾಲದ  "ಆನೆಗೊಂದಿ"   ಯಲ್ಲಿನ ತಿರುಮಲೆತಾತಾಚಾರ್ಯ  ಎಂಬುವರ  ಆಶ್ರಮದಲ್ಲಿ ಆಯಿತೆಂದು ಹೇಳುತ್ತಾರೆ . ತಂದೆಯ ಕಾಲಾನಂತರ  ಆಡಳಿತದ ಚುಕ್ಕಾಣಿ  ತಿಮ್ಮಣ್ಣನ  ಕೈಗೆ ಬರುತ್ತದೆ  , ಆಡಳಿತ ನಡೆಸುವ ಕಾಲದಲ್ಲಿ  ಒಮ್ಮೆ ಅಪಾರ ಪ್ರಮಾಣದ  ಚಿನ್ನ  ಲಭ್ಯವಾದ ಕಾರಣ  ತಿಮ್ಮಣ್ಣ  ಎಂಬ ಹೆಸರು  ಕನಕ  ಎಂದಾಗುತ್ತದೆ,  ವಿಜಯ ನಗರ  ಸಾಮ್ರಾಜ್ಯದ ಹಿತ ಕಾಯಲು  ಯುದ್ದ ಮಾಡಿ  ಯುದ್ದದಲ್ಲಿ ಗಾಯಗೊಂಡ  ಕನಕ  ಚೇತರಿಸಿಕೊಳ್ಳುವ ಹಂತದದಲ್ಲಿ   ತಾಯಿ,  ಹೆಂಡತಿ ಹಾಗು ಮಕ್ಕಳ   ಸಾವು ಜೀವನದಲ್ಲಿ  ವಿರಕ್ತಿ ಮೂಡಿಸುತ್ತದೆ ,  ಹಣ , ಐಶ್ವರ್ಯ ಎಲ್ಲವನ್ನೂ ತ್ಯಜಿಸಿ   ವಿಷ್ಣುವಿನ ಆರಾಧಕನಾಗಿ  ದಾಸ ನಾಗಿ  ಭಕ್ತಿ ಪಂಥದ  ಮೂಲಕ ವಿಷ್ಣುವನ್ನು ಕಾಣಲು  ಕನಕದಾಸರಾಗಿ  ಲೋಕ ಸಂಚಾರ ಮಾಡುತ್ತಾ   ಅಮರರಾಗುತ್ತಾರೆ, ಕನಕದಾಸರ  ಬಾಳಿನಲ್ಲಿ  ಬಹು ಮುಖ್ಯ ಪಾತ್ರವಹಿಸಿದ  ಗ್ರಾಮವೇ  ಈ  "ಬಾಡ " ಎಂಬ ಐತಿಹಾಸಿಕ ಸ್ಥಳ .


ಬಾಡ ದಲ್ಲಿ ಕಂಡುಬರುವ  ಅರಮನೆಯ ಅವಶೇಷಗಳು



ಅರಮನೆಯ  ಸನಿಹ ಕಂಡುಬರುವ  ಪುರಾತನ ಕೊಳ



ನಾನೂ ಪ್ರಕಾಶ್ ಹೆಗ್ಡೆ  ಅಲ್ಲೇ ಇದ್ದ ಸ್ಥಳೀಯ  ವ್ಯಕ್ತಿಯೊಬ್ಬರ ಮೂಲಕ  ಬಾಡ  ದಲ್ಲಿ ಸುತ್ತಾಡಿದೆವು,   ನಮಗೆ ಒಂದು ಅರಮನೆಯ ಅವಶೇಷ ಗೋಚರಿಸಿತು, ಹತ್ತಿರ  ಹೋಗಿ ಗಮನಿಸಿದರೆ  ಆಕಾಲದಲ್ಲಿ  ಅರಮನೆ ಕಟ್ಟಲು ಉಪಯೋಗಿಸಿದ್ದ  ಗಾರೆ  ಗಚ್ಚು , ಬಂಡೆಗಳ  ಬಳಕೆ, ವಿನ್ಯಾಸ , ಮುಂತಾದ ವಿಚಾರಗಳು ತಿಳಿದುಬಂದವು , ಸನಿಹದಲ್ಲಿ ಒಂದು ದೊಡ್ಡ ವೃತ್ತಾಕಾರದ  ಕೊಳ ಕಾಣಿಸಿತು ಇಲ್ಲಿಯೂ ಸಹ  ವರ್ತುಲಾಕಾರವಾಗಿ ಕೊಳವನ್ನು  ನಿರ್ಮಿಸುವಾಗ  ಬಂಡೆಗಳನ್ನುಅದಕ್ಕೆ ಅನುಗುಣವಾಗಿ   ಅಂದಗೆಡದಂತೆ  ಬಳಸಿರುವುದು  ಕಂಡು ಬಂತು,  ಹಾಗೆ ನೋಡುತ್ತಾ  ಅಲೆದಾಡಿದ್ದ ನಮಗೆ ನಮ್ಮ ಜೊತೆ ಬಂದಿದ್ದ ಸ್ಥಳಿಯರು   ಸಾರ್ ಬನ್ನಿ ಇಲ್ಲಿ ಒಂದು ಪುರಾತನ  ದೇವಾಲಯ ಇದೆ ಎಂದು ಹೇಳಿ  ಅಲ್ಲಿಗೆ ಕರೆದುಕೊಂಡು ಹೋದರು


.
ಪುರಾತನ ವಿಷ್ಣು ದೇಗುಲ  ಇದ್ದ ಬಗ್ಗೆ ಸಾಕ್ಷಿ

ದೇಗುಲದಲ್ಲಿ  ಅಂದು ಉಪಯೋಗಿಸಿದ್ದ  ಸುಂದರ  ಕಲ್ಲಿನ ಕೆತ್ತನೆಯ ಕಂಬದ  ಅವಶೇಷಗಳು

ಈ  ಸಾಕ್ಷಿಯ  ಮೂಲಕ  ಹೇಳೋದಾದ್ರೆ  ಬಾಡ ದಲ್ಲಿ  ಮೂರು ಸುತ್ತಿನ ಕೋಟೆ ಇತ್ತು .


 ಸ್ಥಳೀಯರ  ಹೇಳಿಕೆಯಂತೆ  ಹಾಲಿ ಕಾಗಿನೆಲೆಯಲ್ಲಿರುವ  ಕೇಶವನ   ಮೂರ್ತಿ  ರಂಗನಾಥ  ಎಂಬ ಹೆಸರಿನಲ್ಲಿ  ಬಾಡ  ಗ್ರಾಮದ  ರಂಗನಾಥ ದೇವಾಲಯದಲ್ಲಿ   ಇದ್ದಿತೆಂದು  ಹೇಳುತ್ತಾರೆ, ಅದಕ್ಕೆ ಪುಷ್ಟಿಕೊಡುವಂತೆ  ಅಲ್ಲಿ ಒಂದು ಪುರಾತನ  ವಿಷ್ಣು ದೇವಾಲಯ ಇದ್ದ ಬಗ್ಗೆ ಇಂದಿಗೂ  ಸಾಕ್ಷಿದೊರಕುತ್ತದೆ .  ದೇಗುಲದ ಅವಶೇಷಗಳು  ಚೆಲ್ಲಾಪಿಲ್ಲಿಯಾಗಿ    ಅಲ್ಲಲ್ಲಿ ಅಲ್ಲಲ್ಲಿ ಬಿದ್ದಿದ್ದು  , ಕನಕದಾಸರ ಹಿಂದಿನ ವೈಭವದ  ಕಥೆಯನ್ನು  ನೆನಪಿಸುತ್ತವೆ ,  ಅಲ್ಲೇ ಕಂಡುಬರುವ  ಮತ್ತೊಂದು ಚಿತ್ರವೂ ಒಗಟಾಗಿ  ಕಾಡಿ  ಬಾಡ  ಗ್ರಾಮದಲ್ಲಿ ಮೂರು ಸುತ್ತಿನ  ಕೋಟೆ ಇತ್ತು ಎನ್ನುತ್ತದೆ . ಈ ಊರು ಅವನತಿ ಹೊಂದುವುದನ್ನು ಅರಿತಿದ್ದ  ಕನಕದಾಸರು  ಇಲ್ಲಿನ ರಂಗನಾಥ ಮೂರ್ತಿಯನ್ನು  ಕಾಗಿನೆಲೆಗೆ ಸಾಗಿಸಿ  ಅಲ್ಲೇ ನೆಲೆ ನಿಂತರೆಂದು  ಸ್ಥಳೀಯರು  ಹೇಳುತ್ತಾರೆ .  ಇವುಗಳನ್ನು ಪರಿಶೀಲಿಸೋಣ ಎಂದರೆ   ಹೆಚ್ಚಿನ ಮಾಹಿತಿ  ಲಭ್ಯವಾಗುತ್ತಿಲ್ಲಾ, ವಿಕಿಪೀಡಿಯದಲ್ಲಿಯೂ  ಹೆಚ್ಚು ಮಾಹಿತಿ ಇಲ್ಲಾ,  ಗೆಜೆತೀರ್ ಗಳು ಮೌನವಾಗಿವೆ  . ಸಧ್ಯಕ್ಕೆ  ಸ್ಥಳೀಯರ ನಂಬಿಕೆಯೇ  ಇತಿಹಾಸವಾಗಿದೆ ಇಲ್ಲಿ.




ಕನಕದಾಸರ ಗದ್ದಿಗೆ ಇರುವ ಸ್ಥಳ


 ಹಾಗೆ ಮುನ್ನಡೆದ ನಾವು  ಕನಕದಾಸರ ಗದ್ದಿಗೆ  ಇದೆಯೆಂದು ತಿಳಿದು ನೋಡಲು ಹೋದೆವು  ಅಲ್ಲಿಗೆ ಹೋದರೆ ಬಹಳಷ್ಟು  ಜನ ದೂರದ ಊರಿನಿಂದ  ಕನಕದಾಸರ ಗದ್ದಿಗೆ ನೋಡಲು  ಬಂದಿದ್ದರು, ಆದರೆ   ಸುಮಾರು ಒಂದು ತಾಸು ಕಳೆದರೂ  ಬಾಗಿಲು ತೆಗೆದು ಕನಕದಾಸರ ಗದ್ದಿಗೆ ದರ್ಶನ ಮಾಡಿಸಲು ಯಾರೂ ಬರಲಿಲ್ಲ ,  ಅಲ್ಲೇ ಅಡ್ಡಾಡುತ್ತಾ ಇದ್ದ ನಮಗೆ ಸನಿಹದಲ್ಲೇ ಮತ್ತಷ್ಟು ಪುರಾತನ ಅವಶೇಷಗಳು ಗೋಚರಿಸಿದವು




ಕನಕದಾಸರ ಗದ್ದಿಗೆ ಸಮೀಪ ಇರುವ ದೇಗುಲದ ಒಳ ನೋಟ




ಬಾಡ  ಗ್ರಾಮದಲ್ಲಿ  ಕಂಡುಬಂದ  ಶಾಸನ



ಇತಿಹಾಸದ  ಘಟನೆ ನೆನಪಿಸುವ ವೀರಗಲ್ಲುಗಳು






 ಹೌದು ಕನಕದಾಸರ  ಗದ್ದಿಗೆ  ಸಮೀಪ    ಬಿಳೀ ಬಣ್ಣದ ಒಂದು ಸಣ್ಣ ಮನೆ  ಗಮನ ಸೆಳೆಯಿತು ಹತ್ತಿರ ಹೋಗಿ ನೋಡಲು ನಮಗೆ  ಮತ್ತಷ್ಟು ಅಚ್ಚರಿತರುವ  ವಿವರಗಳು  ಕಂಡವು  , ಆ ಬಿಳಿ ಮನೆ ಒಂದು ಹಳೆ ಶಿವನ ದೇಗುಲವಾಗಿದ್ದು , ಒಳಗಡೆ ಪುರಾತನ  ಶಿವಲಿಂಗ , ಬಸವ ಹಾಗು ಮತ್ತೆ ಕೆಲವು ವಿಗ್ರಹಗಳನ್ನು ಕಂಡೆವು,  ದೇಗುಲದ ಹೊರಗೆ ಬಂದರೆ  ಶಾಸನ ಕಲ್ಲು  ಕಾಣಿಸಿತು , ಹತ್ತಿರ ಹೋಗಿ ನೋಡಲು  ಶಾಸನ  ಕಾಲನ ಹೊಡೆತಕ್ಕೆ ಸಿಕ್ಕಿ  ಮಸುಕಾಗಿ ಅಳಿಸಿ ಹೋಗಿತ್ತು , ಅಸ್ಪಷ್ಟ ವಾಗಿಯೂ ಓದಲು ಆಗಲಿಲ್ಲ ಇರಲಿ ಎಂದು ವಿವಿಧ ಕೋನಗಳಿಂದ ಇದರ ಚಿತ್ರ   ಸೆರೆಹಿದಿದೆ , ನಂತರ ಆ ಶಾಸನದ ಕಲ್ಲಿನಲ್ಲಿ ಕಂಡ  ಶಿವಲಿಂಗ , ಹಸುಕರು,  ಸೂರ್ಯ ಚಂದ್ರ  ಇವುಗಳು  ಯಾವುದೋ ಸಂದೇಶ ನೀಡುತ್ತಿವೆ ಎನ್ನೋದು ಸ್ಪಷ್ಟವಾಗಿತ್ತು ಆದರೆ  ಈ ಶಾಸನ ಸಂರಕ್ಷಣೆ ಆಗದೆ ಇದರ  ವಿವರ ಸಂಶೋಧನೆ ಆಗದೆ  ಜಗತ್ತಿಗೆ ವಿಚಾರ ತಿಳಿಯದಾಗಿದೆ, ದಕ್ಷಿಣ ಕರ್ನಾಟಕದ  ಭಾಗದ ಹೆಚ್ಚು ಶಾಸನಗಳನ್ನು  ಬಿ .ಎಲ್ . ರೈಸ್  ರವರು  ಸಂಶೋದಿಸಿ  ಎಪಿಗ್ರಾಫಿಯಾ  ಸಂಚಿಕೆ ತಂದು  ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ , ಆದರೆ  ಇದೆ ರೀತಿ  ಉತ್ತರ ಭಾಗದ  ಕಡೆ  ಶಾಸನಗಳ  ಸಂರಕ್ಷಣೆ , ಸಂಶೋಧನೆ  ಹೆಚ್ಚು ಆಗಿಲ್ಲದಿರುವುದು ಕಂಡು ಬರುತ್ತದೆ . ಹಾಗಾಗಿ  ಇಂತಹ ಪ್ರದೇಶಗಳಲ್ಲಿ ಕಂಡು ಬರುವ  ಶಾಸನಗಳ  ಬಗ್ಗೆ ಮಾಹಿತಿ ಶೂನ್ಯವಾಗಿದೆ .


ಪಾಳು ಬಿದ್ದ ಪುರಾತನ  ದೇಗುಲ


ನಿರಾಸೆಯಿಂದ  ಬರಲು ಅಣಿಯಾಗುತ್ತಿದ್ದ ನಮಗೆ  ಪಾಳು  ಬಿದ್ದ ಮತ್ತೊಂದು ದೇಗುಲದ ದರ್ಶನ ಆಯ್ತು , ದೇಗುಲದ ತಲೆಯಮೇಲೆ ಮಣ್ಣಿನ ಗುಡ್ಡೆ, ಸುತ್ತಲೂ  ಗಿಡ ಗಂಟಿಗಳ  ಅಲಂಕಾರ, ಬಿರುಕುಬಿಟ್ಟ ಗೋಡೆಗಳು,  ಮುಕ್ಕಾದ  ಕೆತ್ತನೆಗಳು ಎಲ್ಲವೂ ರೋಧಿಸುತ್ತಾ   ನಮ್ಮಗಳ   ಇತಿಹಾಸ ಪ್ರಜ್ಞೆಯನ್ನು ಶಪಿಸುತ್ತಾ   ಅಸಹಾಯಕತೆಯಿಂದ  ಅಳಿವಿನತ್ತ ಮುಖಮಾಡಿ ನಿಂತಿದ್ದವು ,



"ನೀ ಮಾಯೆಯೊಳಗೋ  ಮಾಯೇಯೋಳು ನೀನೋ "



ಇತ್ತಾ ಬಾಡ ದಲ್ಲಿನ  ವೃತ್ತದಲ್ಲಿ  ಕುಳಿತಿದ್ದ  ಕನಕದಾಸರ  ಪ್ರತಿಮೆ   "ನೀ ಮಾಯೆಯೊಳಗೋ  ಮಾಯೇಯೋಳು ನೀನೋ " ಎಂದು ಹಾಡುವ ಬದಲಾಗಿ   "ನೀ ಅಜ್ಞಾನ ದೊಳಗೋ   ಅಜ್ಞಾನ ದೊಳು  ನೀನೋ"   ಎಂದು ಹಾಡಿದಂತೆ  ಅನ್ನಿಸಿ  ಹೆಚ್ಚಿನ ಸಮಯ ವ್ಯರ್ಥ ಮಾಡಬಾರದೆಂದು   ಕಾಗಿನೆಲೆ ನೋಡಲು  ಹಾವೇರಿಯ ಕಡೆ  ಪಯಣ  ಮುಂದುವರೆಸಿದೆವು , ಹೊಟ್ಟೆ ಚುರುಗುಟ್ಟುತ್ತಿತ್ತು , ಕಾರು ಹಾವೇರಿ ಪ್ರವೆಶಿಸುತ್ತಿತ್ತು.







Monday, April 27, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......14 "ದೇವಿಸರ" ವೆಂಬ ಪ್ರೀತಿಯ ನಂದಗೋಕುಲದಲ್ಲಿ ವೇಣುಗೋಪಾಲ ಕಾಣಿಸಿದ



ದೇವಿಸರದಲ್ಲಿ  ಕಂಡ ಒಂದು ನೋಟ


ಶಿರಸಿಯ  ಸತ್ಕಾರ್ ಹೋಟೆಲ್ನಲ್ಲಿ   ನಗುತ್ತಿದ್ದ ಮಸಾಲೆ ದೋಸೆಗಳನ್ನು ಹಸಿದ ಹೊಟ್ಟೆಗಳು  ಆದರದಿಂದ  ಸ್ವಾಗತಿಸಿದವು . ಬೆಳಗ್ಗಿನಿಂದ  ಅಲೆದಾಡಿದ್ದ ನಾವು  ದೇವಿಸರ ದ   ಪ್ರಕಾಶಣ್ಣನ    ಮನೆಗೆ  ಹೊರಟೆವು .  ಈ  ದೇವಿಸರ  ಉತ್ತರ ಕನ್ನಡ ಜಿಲ್ಲೆಯ   ಸಿದ್ದಾಪುರ ತಾಲೂಕಿನ  ಒಂದು ಗ್ರಾಮ, ಆದರೆ  ಇಲ್ಲಿನ ಜನ  ಮಕ್ಕಳ  ವಿಧ್ಯಾಭ್ಯಾಸ ಹಾಗು ತಮ್ಮ  ಅವಶ್ಯಕತೆಗಳಿಗೆ  ಒಡನಾಟ ಇಟ್ಟು  ಕೊಂಡಿರೋದು  ಶಿರಸಿ ಪಟ್ಟಣ ಜೊತೆಯಲ್ಲಿ,   ಆದ ಕಾರಣ  ಈ ಊರು ಶಿರಸಿ  ತಾಲೂಕಿಗೆ  ಸೇರಿದ್ದು ಅನ್ನಿಸಿಬಿಡುತ್ತದೆ .


ನಂದಗೋಕುಲ  ಈ ಮನೆ


 ನಮ್ಮ  ಪ್ರಕಾಶ್ ಹೆಗ್ಡೆ  ಹುಟ್ಟಿ ಬೆಳೆದ    ದೇವಿಸರದಲ್ಲಿ   ಎರಡನೇ ದಿನದ  ವಾಸ್ತವ್ಯ  ನಮ್ಮದು , ಬೆಳಗ್ಗಿನಿಂದ  ಅಲೆದು  ಬಂದ  ನಮಗೆ ಪ್ರೀತಿಯ  ಆದರದ  ಆತಿಥ್ಯ ಇಲ್ಲಿ.    ಈ ಮನೆಯಲ್ಲಿ   ಪ್ರೀತಿಸುವ  ಹೃದಯಗಳ  ಒಂದು ಸುಂದರ ಸಂಸಾರವಿದೆ , ಬಂದ  ಕಷ್ಟಗಳನ್ನು  ತಮ್ಮ ತುಂಟ  ನಗೆಯ ಮೂಲಕ  ಎದುರಿಸಿ  ಇಂದು ಮನೆಯಲ್ಲಿ   ಸಂತಸದ  ನೆಮ್ಮದಿ  ಕಾಣುತ್ತಿರುವ  ಕುಟುಂಬ ಇದು .   ಈ  ಊರನ್ನು ನೋಡುತ್ತಿದ್ದಂತೆ  ಈಗಲೇ ಹೀಗೆ    ತುಂಟಾಟ  ಆಡುವ  ಈ ಪ್ರಕಾಶ್ ಹೆಗ್ಡೆ  ಚಿಕ್ಕ ವಯಸ್ಸಿನಲ್ಲಿ  ಏನೇನು  ತಂಟೆ  ಮಾಡಿ  ಮನೆಯವರನ್ನು   ಪೇಚಿಗೆ  ಸಿಕ್ಕಿಸಿರಬಹುದು  ಎಂಬುದನ್ನು  ಕಲ್ಪಿಸಿಕೊಂಡು ನನಗೆ ನಾನೇ ನಕ್ಕೆ ,  ಮನೆಗೆ ಬಂದ  ನನ್ನ ಜೊತೆ ಬಹಳ ಬೇಗ   ಆತ್ಮೀಯವಾಗಿ  ಹೊಂದಿಕೊಂಡಿದ್ದು  ಈ ನಮ್ಮ  ನಾಗೇಶಣ್ಣ ,    ಯಾಕೋ ಇವರದು ನಮ್ಮ  ಮೊದಲ ಸಲದ  ಭೇಟಿ ಅನ್ನಿಸಲಿಲ್ಲ ,  ಬಹಳ ಬೇಗ  ಇವರ ಬಗ್ಗೆ ನನಗೆ   ಗೌರವ ಪೂರ್ವಕ  ವಿಶ್ವಾಸ ಬೆಳೆದು ಬಿಟ್ಟಿತು ,  ಇನ್ನು   ಪತಿಗೆ  ತಕ್ಕ ಪತ್ನಿ ನಮ್ಮ  ನಗುಮುಖದ  ವನಿತಾ ಅತ್ತಿಗೆ,   ಬಾಲಣ್ಣ  ಅಂತಾ ಕರೆದಾಗ   ನನ್ನ ಒಡ ಹುಟ್ಟಿದ ಸಹೋದರಿಯ ವಾತ್ಸಲ್ಯ  ಕಂಡೆ .  ಇನ್ನು ಇವರ ಮಗ  ಗಣಪತಿ  ನಾವು ಭೇಟಿಕೊಟ್ಟ ಸಮಯದಲ್ಲಿ  ಜ್ವರದಿಂದ ಬಳಲುತ್ತಿದ್ದ   ಹೆಚ್ಚಿಗೆ  ಬೆರೆಯಲು ಆಗಲಿಲ್ಲ, ಆದರೆ  ಜ್ವರದಲ್ಲೂ  ನಗು ಮುಖದಿಂದ  ಅಮ್ಮನಿಗೆ ಸಹಾಯ ಮಾಡಿದ್ದ ,  ಇಷ್ಟೇ ಅಲ್ಲಾ  ಆ ಮನೆಯಲ್ಲಿ ಸ್ವಾತಿ ಎಂಬ ಸೈಲೆಂಟ್  ಹುಡುಗಿ ಇದೆ ,  ಬಹಳ ಬುದ್ದಿವಂತ  ಹುಡುಗಿ ಇದು  , ನಗು ನಗುತ್ತಾ  ಅಮ್ಮನ ನೆರಳಾಗಿ  ಸಹಾಯ ಮಾಡುತ್ತಾ   ಮನೆಯ ತುಂಬಾ  ಖುಷಿಯನ್ನು  ಹಂಚುತ್ತಾಳೆ .  ಇವರೆಲ್ಲರಿಗೆ  ಅಮ್ಮನ  ಪ್ರೀತಿಯ ಆಶಿರ್ವಾದದ  ಬೆಂಬಲ ಇದೆ. ಇಂತಹ ಮನೆಯಲ್ಲಿ  ಅಪರಿಚಿತ ನಾನು  ಎಂಬ ಭಾವನೆ ಹೇಗೆ ಬರಲು ಸಾಧ್ಯ ಹೇಳಿ .



ಪ್ರೀತಿ ತುಂಬಿದ ಮನಗಳ ದರ್ಶನ

ಇನ್ನು  ದೇವಿಸರಕ್ಕೆ ಬಂದಮೇಲೆ   ನಾಗೇಶಣ್ಣ  ಸಿಕ್ಕ ಮೇಲೆ  ಪ್ರಕಾಶ್ ಹೆಗ್ಡೆ ಹಂಗೇಕೆ ಅಂತಾ  ಮೆಲ್ಲಗೆ ಜಾರಿಕೊಂಡು ,  ನಾಗೇಶಣ್ಣ ನ ಹತ್ತಿರ ಹರಟೆ ಹೊಡೆಯ ತೊಡಗಿದೆ, ಅಲ್ಲಿನ ಮಳೆ ,  ಬೆಳೆ , ವ್ಯವಸಾಯ  ಪದ್ಧತಿ,  ಕೃಷಿಗೆ ಬಳಸುವ ಸಲಕರಣೆ ,  ಜಾನುವಾರುಗಳ   ಬಗ್ಗೆ  , ಹಾಗು  ಅಲ್ಲಿನ ಆಚಾರ ವಿಚಾರಗಳ ಕುರಿತು  ಅವರಿಂದ ಮಾಹಿತಿ ಪಡೆದೆ , ಎಲ್ಲಾ ವಿಚಾರಗಳಲ್ಲಿ  ಅವರ ಜ್ಞಾನ  ಕಂಡು  ಬೆಕ್ಕಸ ಬೆರಗಾದೆ .    ಹಳ್ಳಿಯ ಜೀವನದ  ಬಗ್ಗೆ  ಇನ್ನೊಬ್ಬ ಹಳ್ಳಿ ಜೀವನ ಕಂಡವ  ಬೆರೆತಾಗ  ಇಂತಹ ವಿಚಾರಗಳ ವಿನಿಮಯ  ಆಗುತ್ತದೆ ,  ಹಾಗೆ  ಎಲ್ಲರೊಡನೆ   ಮಾತನಾಡುತ್ತಾ  ಮನೆ ತುಂಬಾ ಅಡ್ದಾಟ ನಡೆಸಿದ್ದ  ನನಗೆ ಒಂದು ಕಡೆ ಇಸ್ಪೀಟ್ ಪ್ಯಾಕ್ ಕಣ್ಣಿಗೆ  ಬಿತ್ತು , ಅಣ್ಣಾ  ಇದು ಅಂದೇ , ಓ ಅದಾ  ಆಡೋಕೆ ಬರುತ್ತಾ  ಅಂದರು   ಬನ್ನಿ  ಸ್ವಲ್ಪ ಹೊತ್ತು  ಆಡೋಣ  ಅಂತಾ  ಕುಳಿತೆವು ,  ಮೊದ ಮೊದಲ ಎರಡು  ಆಟ  ನನ್ನದೇ ಗೆಲುವು  , ಜಂಬದ  ಮುಖ ಹೊತ್ತು   ಆಡಿದೆ , ನಂತರ  ಸತತವಾಗಿ  ಸುಮಾರು ಹತ್ತು ಆಟಗಳ  ಸೋಲು ,  ತುಂಟ ನಾಗೇಶಣ್ಣ    ನಗು ನಗುತ್ತಾ  ತುಂಟಾಟ  ಮಾಡುತ್ತಾ  ನನ್ನ ಮೊದಲ ಜಯದ  ಹಮ್ಮು ಕೊಚ್ಚಿಕೊಂಡು  ಹೋಗುವಂತೆ ಮಾಡಿದ್ದರು .  ಅಂದು ರಾತ್ರಿ ಭರ್ಜರಿ ರುಚಿಯಾದ  ಅಡಿಗೆ  ವನಿತಾ ಅತ್ತಿಗೆ  ಕೈನಿಂದ   , ಚಪ್ಪರಿಸಿ  ಉಂಡೆವು ಎಲ್ಲರೂ ,   ಟಿ .ವಿ . ಎಂಬ ಭೂತದ ಕಾಟವಿಲ್ಲದೆ , ಮೊಬೈಲ್  ನೆಟ್ವರ್ಕ್  ಇಲ್ಲದೆ  ಕಾರಣ   ಫೋನ್ ಕರೆಗಳ  ಉಪಟಳ  ಇಲ್ಲದೆ ನೆಮ್ಮದಿಯಾಗಿ  ಹರಟೆ ಹೊಡೆಯುತ್ತಾ  ಕುಳಿತೆವು,  ಹಾಗೆ ಯಾವಾಗ ನಿದ್ರಾದೇವಿಯ ಮಡಿಲಿಗೆ ಸೇರಿದೆವೋ  ಅರಿವಾಗಲಿಲ್ಲ,




ವೇಣುಗೋಪಾಲ  ದೇಗುಲದ ಮುಂಭಾಗ
 ದೇಗುಲದ ಒಳಗಡೆ  ಕಂಡ ದೃಶ್ಯ 



ಎಚ್ಚರವಾದಾಗ  ಹಕ್ಕಿಗಳ ಇಂಪಾದ ಚಿಲಿಪಿಲಿ  ಗಾನ,  ಕೇಳಿಸಿತು  , ಮನೆಯಿಂದ ಹೊರಗೆ  ಬಂದಾಗ ತಂಗಾಳಿಯ  ಹಿತವಾದ  ಅನುಭವ,  ಮಂಜಿನ  ತೆರೆಯಲ್ಲಿ ಮಸುಕು ಮಸುಕಾಗಿ  ಕಾಣುವ ಹಳ್ಳಿಯ ನೋಟ  ಇವುಗಳು ಮನ ಸೂರೆಗೊಂಡವು .  ನಿನ್ನೆ ಮಾತನಾಡುವಾಗ   ದೇವಿಸರದಲ್ಲಿ  ಒಂದು ವೇಣುಗೋಪಾಲ  ದೇಗುಲ  ಇದ್ದು   ಅಲ್ಲಿ ಅಭಿಷೇಕ ಮಾಡಲು  ಪ್ರಕಾಶಣ್ಣ ಹಾಗು ನಾಗೇಶಣ್ಣ   ವ್ಯವಸ್ಥೆ ಮಾಡಿದ್ದರು,  ಜೊತೆಗೆ  ದೇಗುಲವನ್ನು ನನಗೆ ತೋರಿಸಬೇಕೆಂಬ  ಅವರ ಆಸೆ  ಕಂಡು  ಅಚ್ಚರಿಯಾಯಿತು . ಅದರಂತೆ ಮುಂಜಾನೆಯೇ  ಶ್ರೀ  ವೇಣುಗೋಪಾಲನ ದರ್ಶನ ಪಡೆಯಲು  ತೆರಳಿದೆವು .  ದೇಗುಲದ ಹೊರಭಾಗ ನೋಡಿ  ಇದೇನಿದು  ಯಾವುದೋ ಮನೆಗೆ  ಕರೆತಂದು  ದೇಗುಲ ಅನ್ನುತ್ತಿದ್ದಾರೆ ಅಂದುಕೊಂಡೆ ಆದರೆ ನನ್ನ ಅನಿಸಿಕೆ ತಪ್ಪಾಗಿತ್ತು,  ಮನೆಯ ಒಳಗಡೆ    ಭಕ್ತಿ ತುಂಬಿದ   ವಾತಾವರಣ ನಿರ್ಮಾಣ ಆಗಿತ್ತು.




ದೇವಿಸರದ    ಶ್ರೀ ವೇಣುಗೋಪಾಲ  ಸ್ವಾಮೀ  ಮೂಲ ವಿಗ್ರಹ 

  ಗರುಡ ದೇವನ ಮೂರ್ತಿ  



ದೇವಿಸರದ  ಈ ದೇಗುಲದ   ಶ್ರೀ ವೇಣುಗೋಪಾಲ ಮೂರ್ತಿ  ಬಹಳ ಮುದ್ದಾಗಿದ್ದು,  ನೋಡುತ್ತಿದ್ದರೆ  ನೋಡುತ್ತಲೇ ಇರಬೇಕು ಅನ್ನಿಸುತ್ತದೆ , ಮೂರ್ತಿಯ  ಶೈಲಿ ಹೊಯ್ಸಳ  ಶಿಲ್ಪಿ ಕಲೆ ಹೋಲುತ್ತಿದ್ದು , ಪ್ರಭಾವಳಿಯಲ್ಲಿ  ವಿಷ್ಣುವಿನ ದಶ ಅವತಾರಗಳನ್ನು ಕೆತ್ತಲಾಗಿದೆ, ಎರಡೂ ಕೈಗಳಲ್ಲಿ ವೇಣು ಹಿಡಿದು  ಮಂದ ಹಾಸ ಬೀರುತ್ತಾ ಇರುವ  ಶ್ರೀ ವೇಣುಗೋಪಾಲ ಮೂರ್ತಿ ಇದು , ಇನ್ನು ಕಾಲ  ಬಳಿ  ಗೋವು ಹಾಗು ಗೋಪಿಕಾ ಸ್ತ್ರೀಯರ  ಬಳಗವನ್ನು ಕಾಣಬಹುದು ,    ಮೂರ್ತಿ ನಿಂತಿರುವ ಪೀಠದಲ್ಲಿ   ಮುಖ್ಯ ಪ್ರಾಣ  ಹನುಮನ  ಮೂರ್ತಿ ಇದೆ ,   ಹಾಗೆ ಈ  ಮೂರ್ತಿಯ  ಮುಂದೆ ಸ್ವಲ್ಪ ದೂರದಲ್ಲಿ  ಸುಂದರವಾದ ಗರುಡ ದೇವನ  ವಿಗ್ರಹ ಕಾಣಬಹುದು .  ಈ ದೇವಾಲಯದ ವಿಗ್ರಹಗಳು  ಪುರಾತನ ಅನ್ನುವುದು  ನಿಜವಾದರೂ , ಇದನ್ನು ಪ್ರತಿಷ್ಟಾಪನೆ ಮಾಡಿದ್ದು ಯಾರು ಎಂದು ತಿಳಿದು ಬರೋದಿಲ್ಲ,



ಊರಿಗೆ ಬಂದ  ಅತಿಥಿಗೆ  ಪ್ರೀತಿಯ   ಆತ್ಮೀಯತೆಯ ದರ್ಶನ ಇಲ್ಲಿ



ದೇವಾಲಯವನ್ನೊಮ್ಮೆ ಅವಲೋಕಿಸುತ್ತಾ ನಡೆದೇ   ಪೂಜೆಗೆ  ಸಿದ್ದತೆ ನಡೆದಿತ್ತು,  ಅಲ್ಲಿನ ಭಕ್ತರು   ದೇಗುಲದಲ್ಲಿ ತಮ್ಮದೇ ಆದ ಕೆಲಸ ಮಾಡಿ ದೇವರ ಪೂಜೆಯಲ್ಲಿ ಪಾಲ್ಗೊಂಡು ಧನ್ಯತೆ ಮೆರೆದಿದ್ದರು,  ಅಲ್ಲಿದ್ದವರಿಗೆ ನನ್ನ ಪರಿಚಯ ಮಾಡಿಕೊಟ್ಟರು ಪ್ರಕಾಶಣ್ಣ ,  ಮತ್ತದೇ ಆತ್ಮೀಯ  ಮನಸುಗಳ  ದರ್ಶನ, ಮುಗುಳ್ನಗೆಯ  ಸ್ವಾಗತ, ಮೈಸೂರು ಎಂದ  ತಕ್ಷಣ  ಮತ್ತಷ್ಟು ಆತ್ಮೀಯತೆ  ತೋರಿ  ಆದರಿಸಿದರು .


ಶ್ರೀ ವೇಣುಗೋಪಾಲ ನಿಗೆ ಮಂಗಳಾರತಿ




ನಸುಕಿನ ಸುಂದರ ನಿಶ್ಯಬ್ಧ  ವಾತಾವರಣ,  ಸುತ್ತಲಿನ ನೋಟಕ್ಕೆ  ಮಂಜಿನ ತೆಳುವಾದ  ತೆರೆ , ಹಿತವಾದ ತಂಗಾಳಿ , ದೇಗುಲದೊಳಗೆ   ಸ್ಪಷ್ಟವಾದ  ಮಂತ್ರಗಳ  ಘೋಷಣೆ  , ಗಂಟೆಯ ನಿನಾದ , ಹಕ್ಕಿಗಳ ಗಾಯನ   ಇಡೀ ವಾತಾವರಣ  ಭಕ್ತಿಯಿಂದ ತುಂಬಿತ್ತು,    ದೇವಿಸರದ  ಶ್ರೀ  ವೇಣುಗೋಪಾಲ ನಿಗೆ ಮುಂಜಾನೆಯ  ಪೂಜೆ ಕಾರ್ಯ ಶುರು ಆಗಿತ್ತು . ಸುಂದರ ಮೂರ್ತಿಗೆ  ಅಭಿಷೇಕ  ನಡೆಸಿ  ಭಕ್ತಿಯಿಂದ  ಮಂತ್ರ ಹೇಳುತ್ತಾ  ಮಂಗಳಾರತಿ  ಮಾಡಿದರು ಅಲ್ಲಿನ ಅರ್ಚಕರು .  ಹೆಚ್ಚು ಜನರಿಲ್ಲದ  ಆ ದೇಗುಲದಲ್ಲಿ   ನಿರ್ಮಲ ವಾತಾವರಣದಲ್ಲಿ   ಶ್ರೀ ವೇಣುಗೋಪಾಲ  ಸ್ವಾಮಿಯ ದರ್ಶನ  ಪಡೆದ ನಾವು ಧನ್ಯರಾದೆವು. ಆದರೆ ಮನವು  ಈ ದೇಗುಲದ ಇತಿಹಾಸ ಅರಿಯಲು ತವಕ ಪಡುತ್ತಿತ್ತು,  ದೇಗುಲದ ಸುತ್ತಾ ಕಣ್ಣಾಡಿಸಿದೆ  ಯಾವುದೇ ಶಾಸನ, ಇತಿಹಾಸದ ಕುರುಹು ಕಂಡು ಬರಲಿಲ್ಲ,   ಬನವಾಸಿಯ ಮಧುಕೇಶ್ವರ , ಯಾಣದ  ಭೈರವೇಶ್ವರ, ಸಹಸ್ರಲಿಂಗ, ಹೀಗೆ ಹೆಚ್ಚಾಗಿ ಶಿವನ   ಆಲಯ ಗಳೇ  ಹೆಚ್ಚಾಗಿ   ಕಂಡು ಬರುವ   ಈ ಪ್ರದೇಶಗಳಲ್ಲಿ   ಮುತ್ತಿನಕೆರೆ ಶ್ರೀನಿವಾಸ , ಮಂಜುಗುಣಿ  ವೆಂಕಟರಮಣ  ಸ್ವಾಮೀ, ಹಾಗು  ದೇವಿಸರದ  ಶ್ರೀ ವೇಣುಗೋಪಾಲ ದೇಗುಲಗಳು  ಗಮನ ಸೆಳೆಯುತ್ತವೆ,  ಮುತ್ತಿನ ಕೆರೆ ಹಾಗು ಮಂಜುಗುಣಿ ದೇಗುಲಗಳಿಗೆ  ಇತಿಹಾಸದ ಬಗ್ಗೆ  ಅಧಾರ ಸಿಕ್ಕಿವೆ , ಆದರೆ ಈ ದೇವಿಸರದ   ಶ್ರೀ ವೇಣುಗೋಪಾಲ ದೇಗುಲದ ಬಗ್ಗೆ  ಸಂಶೋದನೆ ಅಗತ್ಯವಿದೆ ಅನ್ನಿಸಿತು.  ಪೂಜೆ ಮುಗಿಸಿದ ನಾವು ಅಲ್ಲಿಂದ  ಮನೆಯ ಕಡೆ ಹೊರಟೆವು .



ಅದ್ಸರೀ  ನೀವು ಯಾರು ...?  ಅಂದಿತ್ತು ಈ ಎಳೇ ಕರು

ವಾತ್ಸಲ್ಯ  ತೋರಿದ ಅತ್ತಿಗೆ



ಮುಂಜಾನೆಯ ಮಂಜಿನ  ಹೊದಿಕೆಯಲ್ಲಿ  ದೇವಿಸರ  ಗ್ರಾಮ   ಮಲಗಿತ್ತು, ಸೂರ್ಯನ ಕಿರಣಗಳು ಮಂಜಿನ  ತೆರೆಯಲ್ಲಿ ತೂರಿಬಂದು  ಭೂಮಿಗೆ ಬೆಳಕಿನ  ಚಿತ್ತಾರದ  ಸಿಂಚನ  ಮಾಡುತ್ತಿದ್ದವು . ದೇಗುಲದಿಂದ  ಆಗಮಿಸಿದ ನಾನು  ಅಲ್ಲೇ ಇದ್ದ ಕೊಟ್ಟಿಗೆಯಲ್ಲಿ ಕಂಡ  ಈ ಎಳೆಕರುವನ್ನು ನೋಡಿ  ಒಳಗೆ ಬಂದೆ ಮುದ್ದಾದ ಈ ಕರು  ಅಚ್ಚರಿಯಿಂದ  ನನ್ನತ್ತ  ಮುಗ್ಧ ನೋಟ ಬೀರಿತು,    ಅಷ್ಟರಲ್ಲಿ   ಬಾಲಣ್ಣ  ಬನ್ನಿ   ತಿಂಡೀ  ತಿನ್ನೋಣ ಎಂಬ   ಪ್ರಕಾಶಣ್ಣ ನ ಕರೆ ಬಂತು   , ಅಡಿಗೆ ಕೋಣೆ  ಹೊಕ್ಕ ನನಗೆ  ವನಿತಾ ಅತ್ತಿಗೆ  ಬಿಸಿ ಬಿಸಿ ದೋಸೆ  ಸಿದ್ದ ಪಡಿಸುತ್ತಾ, ಬನ್ನಿ ಬಾಲಣ್ಣ   ಎನ್ನುತ್ತಾ  ಬಿಸಿ ಬಿಸಿ ದೋಸೆಯನ್ನು  ಕಾವಲಿಯಿಂದ   ನನ್ನ ಎಲೆಗೆ  ದಾಟಿಸಿದರು,  ಹೊರಗಡೆ ಮಂಜಿನ  ಮಳೆಯ  ಚಳಿಯ ಸಿಂಚನದ ಅನುಭವ ಪಡೆದ ನನಗೆ ಒಳಗಡೆ  ಬಿಸಿ ಬಿಸಿ ದೋಸೆಯ ರುಚಿಯಾದ  ದೋಸೆ,  ಅದಕ್ಕೆ  ಜೋನಿ ಬೆಲ್ಲಾ,  ಉಪ್ಪಿನಕಾಯಿಯ  ಸಾಥ್  ಬೇರೆ,  ಆಹಾ  ಆಹಾ ಎನ್ನುತ್ತಾ  ಯಾವುದೇ ಸಂಕೋಚವಿಲ್ಲದೆ  ತೃಪ್ತಿಯಾಗುವಷ್ಟು  ದೋಸೆಗಳನ್ನು ಸ್ವಾಹ  ಮಾಡಿದ್ದಾಯ್ತು,  ನಗು ಮುಖದ ವನಿತಾ  ಅತ್ತಿಗೆ ವಾತ್ಸಲ್ಯ  ಬೆರೆಸಿ ಮಾಡಿದ್ದ  ಈ ದೋಸೆಗೆ  ಶರಣಾಗಿತ್ತು ನನ್ನ ಹಸಿವು .



ಅಣ್ಣಾ ತಮ್ಮಾ  ಸೇರಿದಾಗ  ತುಂಟಾಟ  ಗ್ಯಾರಂಟೀ 

ಅಂತೂ ಇಂತೂ ನಮ್ಮ ವಾಸ್ತವ್ಯದ  ಕೊನೆ ಘಟ್ಟ  ತಲುಪಿದೆವು ,   ಎಲ್ಲಾ  ಕಾರ್ಯ ಸುಸೂತ್ರವಾಗಿ ಮುಗಿಸಿ, ನಮ್ಮ ಊರುಗಳಿಗೆ  ವಾಪಸ್ಸು  ಹೊರಡಲು ಸಿದ್ದವಾಗುತ್ತಿದ್ದೆವು ..  ಮೊದಲೇ ಎಲ್ಲಾ  ಸಿದ್ದವಾಗಿದ್ದ  ನನ್ನ ಲಗ್ಗೇಜ್  ಕಾರಿನ ಡಿಕ್ಕಿ ಸೇರಿಕೊಂಡಿತು .  ಹಾಗೆ ಮಾತನಾಡುತ್ತಾ  ನಮ್ಮ ನಾಗೇಶಣ್ಣ   ಮದುವೇ ಮಂಟಪಗಳನ್ನು  ಅಂದವಾಗಿ ಮಾಡಿ ಸಿಂಗರಿಸುವ ವಿಚಾರ ಬಂತು ,  ನನಗೆ  ಅಚ್ಚರಿ ...!ಈ  ಅಣ್ಣನಿಗೆ ಬರದ ಇರುವ  ಕೆಲಸ ಯಾವುದು ಅಂತಾ...? , ಅಷ್ಟರಲ್ಲಿ ಬಾಲಣ್ಣ , ತನ್ನ  ಬೈಕ್  ಸಂಪೂರ್ಣ ಕಳಚಿ  ತಾನೇ ಜೋಡಿಸುತ್ತಾರೆ  ಅಂತಾ  ಪ್ರಕಾಶಣ್ಣ  ಹೇಳಿದಾಗ  ನಿಜಕ್ಕೂ  ಅಚ್ಚರಿ ಪಟ್ಟೆ ,   "ಹಣದಾಸೆಗಾಗಿ  ಗೊತ್ತಿಲ್ಲದ ಕೆಲಸವನ್ನು   ಗೊತ್ತು ಎಂದು ಪೋಸ್  ಕೊಡುವ ಜನ ಒಂದು ಕಡೆ  ಮತ್ತೊಂದು ಕಡೆ  ಯಾರ ಹಂಗೂ ಇಲ್ಲದೆ  ತನಗೆ ತಾನೇ  ಹಲವು ಕೆಲಸಗಳನ್ನು ಕಲಿತು  ಆ ಕೆಲಸವನ್ನು  ಹಣಕ್ಕಾಗಿ   ಬಳಸದೆ   ಆತ್ಮ ತೃಪ್ತಿಗಾಗಿ ಮಾಡುತ್ತಾ   ಇರುವ ಇಂತಹ ನಾಗೇಶಣ್ಣ  ಒಂದುಕಡೆ  " ಇದೊಂತರಾ  ವಿಸ್ಮಯದ ವಿಚಾರ ಅನ್ನಿಸಿತು ಅಷ್ಟರಲ್ಲಿ ನಾಗೇಶಣ್ಣ ಕಾಗದದ  ಚಿತ್ತಾರದ  ಹಾರ ಮಾಡಿಕೊಂಡು ಬಂದರು  ನನ್ನ ಕೋರಿಕೆಯಂತೆ  ತಮ್ಮ ಪ್ರಕಾಶ್ ಹೆಗ್ಡೆ ಜೊತೆ ಫೋಟೋ  ತೆಗೆಸಿಕೊಳ್ಳಲು  ಒಪ್ಪಿ  ಪೋಸ್  ಕೊಟ್ಟರು .



ನಂದಗೋಕುಲದ  ಪ್ರೀತಿಯೊಳಗೆ  ನಿಂದ  ಆ ಕ್ಷಣ
ಎಲ್ಲಾ ಸಿದ್ದತೆ  ನಡೆಸಿ ಮನೆಯವರೆಲ್ಲರನ್ನೂ ಮತ್ತೊಮ್ಮೆ ಆತ್ಮೀಯವಾಗಿ ಮಾತನಾಡಿಸಿ  ಅವರಿಗೆ ಕೃತಜ್ಞತೆ  ತಿಳಿಸಿ,  ಪ್ರಕಾಶ್ ಹೆಗ್ಡ ತಾಯಿಯವರ  ಆಶೀರ್ವಾದ ಪಡೆದು  , ಸಂತೋಷಗೊಂಡೆ  , ಎರಡು ದಿನ ಇವರುಗಳ ಪ್ರೀತಿಯ ನಂದಗೋಕುಲದಲ್ಲಿ  ನಲಿದಾಡಿದ ನನಗೆ ಇದೊಂದು ಮರೆಯಲಾರದ  ಅನುಭವ ನೀಡಿತು . ಎಲ್ಲರ  ಶುಭ ಹಾರೈಕೆಗಳೊಂದಿಗೆ   ಮುಂದೆ ಹೊರಟೆವು .   ದೇವಿಸರದ   .  ಗಡಿಯತ್ತ ನಮ್ಮ ಕಾರು ತೆರಳುತ್ತಿತ್ತು .


ಗ್ರಾಮದ  ರಕ್ಷಕ  ಮೂರ್ತಿಯೇ ಇದು ಗೊತ್ತಾಗಲಿಲ್ಲ

ಇನ್ನೇನು ತಿರುವು  ಪಡೆಯಬೇಕು ಅಷ್ಟರಲ್ಲಿ ನನ್ನ ಕಣ್ಣಿಗೆ ಒಂದು  ಕಲ್ಲು ಕಂಡು ಬಂತು , ಅದಕ್ಕೆ ಪೂಜೆ ಸಹ ಮಾಡಿದ್ದರು, ಹೊರಡುವ ಆತುರದಲ್ಲಿದ್ದ  ನಮಗೆ ಹೆಚ್ಚಿನ  ಸಮಯ ಇರಲಿಲ್ಲ ,  ಅದರ ಒಂದು ಚಿತ್ರ ತೆಗೆದು  ಮುಂದಿನ ಸಾರಿ ಬಂದಾಗ  ವಿವರ  ತಿಳಿಯೋಣ ಅಂತಾ  ಮುಂದೆ ಹೊರಟೆ , ಆ ಮೂರ್ತಿಯೂ ಸಹ  ಈಗಲೇ ಎಲ್ಲಾ   ವಿಚಾರ ಸಿಕ್ಕಿ ಬಿಟ್ರೆ ನೀನು ಮತ್ತೆ ಬರೋಲ್ಲಾ, ಅದಕ್ಕೆ ಬಾ ಮುಂದಿನ  ಸಾರಿ  ನನ್ನ ವಿಚಾರ  ತಿಳಿಯೋವಂತೆ ಎನ್ನುತ್ತಾ ನನ್ನನ್ನು  ಬೀಳ್ಕೊಟ್ಟಿತು .  ದೇವಿಸರದ  ಪ್ರೀತಿಯ ಅನುಭವ  ಅನುಭವಿಸಿ , ಪ್ರಕಾಶ್ ಹೆಗ್ಡೆ  ಅವರ  ಭಾವನವರ  ಹೊಸ ಮನೆಯ  ಕಟ್ಟಡದ  ಕಾರ್ಯ ವೀಕ್ಷಿಸಿ , ಶಿರಸಿಗೆ ಬಂದು ಮಾರಿಕಾಂಬೆ ದರ್ಶನ  ಪಡೆದು  ಹೊರಟೆವು .  ಅಣ್ಣಾ ಪ್ರಕಾಶಣ್ಣ  ಯಾವ ಕಡೆಯಿಂದ ಹೋಗೋದು  ಅಂದೇ .....?   ಹ ಬಾಲಣ್ಣ  ಯಾಕದೆ ಹೋಗ ಬಹುದು   ಅಂತಾ ಯೋಚಿಸ್ತೀನಿ ತಾಳಿ ಅಂದರು  ............!    ಶಿರಸಿಯ  ಮಾರಿಕಾಂಬ  ದೇಗುಲದ ಬಳಿ ನಿಂತು   ಯಾವ ಕಡೆಯಿಂದ   ಊರಿಗೆ ವಾಪಸ್ಸ್ ಹೋಗೋದು ಅಂತಾ  ಯೋಚಿಸುತ್ತಾ  ನಿಂತೆವು ....!