ಆಗುಂಬೆಯ ಅನ್ನಪೂರ್ಣೆ |
ಕೆಲವು ದಿನಗಳ ಹಿಂದೆ ನಮ್ಮ ಬ್ಲಾಗ್ ಮಿತ್ರ ಪ್ರವೀಣ್ ವಿವಾಹಕ್ಕೆ ಹೋಗಬೇಕಾಗಿತ್ತು, ವಿವಾಹ ಕಾರ್ಯಕ್ರಮ ಆಗುಂಬೆ ಸನಿಹದ ತಲ್ಲೂರಂಗಡಿ ಎಂಬಲ್ಲಿ ಇದ್ದ ಕಾರಣ, ಹಿಂದಿನ ದಿನವೇ ಆಗುಂಬೆಯಲ್ಲಿ ಮೊಕ್ಕಾಂ ಮಾಡಿದೆ, ಆಗುಂಬೆ ಬಗ್ಗೆ ಹಲವು ವಿಚಾರಗಳು ತಿಳಿದಿತ್ತು, ಆಗುಂಬೆಯ ಸೂರ್ಯಾಸ್ತ, ಸನಿಹದಲ್ಲೇ ಸೂರ್ಯೋದಯ ನೋಡಲು ಕೈ ಬೀಸಿ ಕರೆಯುವ ಕುಂದಾದ್ರಿ, ಗೋಪಾಲ ಕೃಷ್ಣ ದೇಗುಲ,ಎಲ್ಲದರ ಜೊತೆಗೆ ಆಗುಂಬೆಯ ದೊಡ್ದಮನೆಯಲ್ಲಿ ಉಳಿಯುವ ಆಸೆ ಬಾಕಿ ಇತ್ತು. ಈ ಪ್ರವಾಸದಲ್ಲಿ ಅದಕ್ಕೆ ಅವಕಾಶ ಸಿಕ್ಕಿದ್ದು ಖುಶಿ ಕೊಟ್ಟಿತು .
ನನ್ನ ಗೆಳೆಯರು ಕುಟುಂಬದೊಡನೆ ಅಲ್ಲಿಗೆ ಹೋಗಿ ಆತಿಥ್ಯ ಸವಿದು ರಸವತ್ತಾದ ಕಥೆಗಳನ್ನು ಹೇಳಿ ಹೊಟ್ಟೆ ಉರಿಸಿದ್ದರು , ಅವರುಗಳ ಪ್ರತೀ ಮಾತಿನಲ್ಲೂ ಕಸ್ತೂರಿ ಅಕ್ಕನ ನಗು ಮುಖದ ಅತಿಥಿ ಸತ್ಕಾರದ ಬಗ್ಗೆ ಮಾಹಿತಿಗಳು ಇರುತ್ತಿತ್ತು, ನಮ್ಮ ಪ್ರವೀಣ್ ಮದುವೆಗೆ ಬಂದ ನೆಪದಲ್ಲಿ ಕಸ್ತೂರಿ ಅಕ್ಕನ ಮನೆಗೆ ಪ್ರವೇಶ ಪಡೆದೆ . ಇಲ್ಲಿಗೆ ಬರುವ ಮೊದಲು ಕಸ್ತೂರಿ ಅಕ್ಕನ ಮನೆಯ ಫೋನ್ ನಂಬರ್ ಸಂಪಾದಿಸಿ ಕರೆ ಮಾಡಿದರೆ ಸಿಕ್ಕವರೇ ಕಸ್ತೂರಿ ಅಕ್ಕಾ , ಆಗುಂಬೆಗೆ ಬರುವುದಾಗ ತಿಳಿಸಿ ಉಳಿಯಲು ಅವಕಾಶ ಮಾಡಿಕೊಡಲು ಕೋರಿದೆ , ಬಹಳ ಸಂತೋಷದಿಂದ ಒಪ್ಪಿ ನಾನು ಬರುವ ದಿನವನ್ನು ಗುರುತು ಹಾಕಿಕೊಂಡರು . ಅಕ್ಕಾ ನಿಮ್ಮಲ್ಲಿ ಉಳಿಯಲು ಎಷ್ಟು ದುಡ್ಡು ಕೊಡಬೇಕು ..? ಊಟ ತಿಂಡಿಗೆ ಎಷ್ಟಾಗುತ್ತೆ ದಯವಿಟ್ಟು ತಿಳಿಸಿ ನಿಮ್ಮ ಖಾತೆ ನಂಬರ್ ಕೊಡಿ ಅಲ್ಲಿಗೆ ಹಣ ಜಮಾ ಮಾಡುತ್ತೇನೆ ಅಂದೇ , ಅದಕ್ಕೆ ಕಸ್ತೂರಿ ಅಕ್ಕಾ ಅಯ್ಯೋ ಅದೆಲ್ಲಾ ಬೇಡ ಇಲ್ಲಿಗೆ ಬನ್ನಿ ಉಳಿಯಿರಿ ನಂತರ ಅದರ ಬಗ್ಗೆ ಮಾತಾಡೋಣ ಅಂದರು .
ಕಸ್ತೂರಿ ಅಕ್ಕನ ಕುಟುಂಬದ ಸದಸ್ಯರು |
ಅವರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಲೇ ಏನೋ ಒಂದು ಬಗೆಯ ಅನಿಸಿಕೆ ಅವರನ್ನು ಕಾಣುವ ಆಸೆ ಜಾಸ್ತಿಯಾಯ್ತು . ಅವರ ಮನೆಗೆ ತೆರಳಿದ ನಾನು ನನ್ನ ಹೆಸರು ಹೇಳಿದ ತಕ್ಷಣ ಓ ಮೈಸೂರಿನವರು ಬನ್ನಿ , ಕೈಕಾಲು ತೊಳೆಯುವಿರ , ತೊಳೆದು ಬನ್ನಿ ವಿಶ್ರಾಂತಿ ಪಡೆದು ನಂತರ ಊಟ ಮಾಡೊರಂತೆ , ನಿಮ್ಮ ರೂಂ ಮೇಲಿದೆ ಅಲ್ಲಿ ಉಳಿಯಬಹುದು ಅಂದರು, ಹಾಗೆ ಕೈ ಕಾಲು ಮುಖಕ್ಕೆ ನೀರು ಹಾಕಿಕೊಂಡು ದೇಹಕ್ಕೆ ವಿಶ್ರಾಂತಿ ನೀಡಿದೇ ಸ್ವಲ್ಪ ಕಷಾಯದ ಸೇವನೆ ಆಯ್ತು . ಮನಸು ಉಲ್ಲಾಸ ಕಂಡಿತು . ಹಾಗೆ ಮನೆಯನ್ನೆಲ್ಲಾ ವೀಕ್ಷಣೆ ಮಾಡುತ್ತಾ ಮನೆಯ ಮುಂದಿನ ಜಗಲಿಗೆ ಬಂದೆ ಸುಮಾರು ಇಪ್ಪತ್ತು ಮಂದಿ ಅಲ್ಲಿದ್ದರು, ಕೆಲವು ಹುಡುಗ ಹುಡುಗಿಯರು ಟ್ರೆಕಿಂಗ್ ಮಾಡಲು ಬಂದಿದ್ದರು, ಮತ್ತೊಂದು ಕುಟುಂಬ ಆಗುಂಬೆ ಸುತ್ತಾ ಮುತ್ತಾ ನೋಡಲು ಬಂದಿತ್ತು, ಹೀಗೆ ಗುರುತಿಲ್ಲದ ಜನರ ನಡುವೆ ನನ್ನ ಬಾವುಟವೂ ಹಾರಿತ್ತು.
ಅಷ್ಟರಲ್ಲಿ ಕಸ್ತೂರಿ ಅಕ್ಕನ ಅಳಿಯ ಶ್ರೀ ರವಿ ಕುಮಾರ್ ಅವರು ಹೊರಗೆ ಬಂದು ಬನ್ನಿ ಬನ್ನಿ ಊಟಕ್ಕೆ ಎಲ್ಲರೂ ಅಂತಾ ಮನೆಯ ನೆಂಟರನ್ನು ಕರೆದಂತೆ ಕರೆದರೂ , ನನಗೂ ಅಚ್ಚರಿ ಒಳಗೆ ಬಂದೆ ಮನೆಯ ಕೇಂದ್ರ ಭಾಗದಲ್ಲಿ ಒಂದು ಸುಂದರ ತೊಟ್ಟಿಯಂತಹ ಜಾಗದಲ್ಲಿ ಚೌಕಾಕ್ರುತಿಯಲ್ಲಿ ಊಟದ ಟೇಬಲ್ ಗಳನ್ನೂ ಜೋಡಿಸಿ ಅದರ ಮೇಲೆ ಬಾಳೆ ಎಲೆಗಳನ್ನು ಹಾಕಿದ್ದರು , ಎಲ್ಲರಿಗೂ ಪ್ರೀತಿ ತುಂಬಿದ ಪ್ರೀತಿಯ ಮಾತುಗಳೊಡನೆ ಊಟ ಬಡಿಸಿದ್ದರು, ರುಚಿ ರುಚಿಯಾದ ಆರೋಗ್ಯಕರ ಊಟ ನಮ್ಮದಾಗಿತ್ತು, ಇದೆ ರೀತಿ ರಾತ್ರಿ ಸಹ ಪುನರಾವರ್ತನೆ, ಉಳಿದಿದ್ದ ಕೋಣೆ ಶುಚಿಯಾಗಿತ್ತು, ಹಾಸಿಗೆ ಹೊದ್ದಿಗೆ ಬಹಳ ಶುಭ್ರವಾಗಿತ್ತು, ಚಿಕ್ಕ ವಯಸಿನಲ್ಲಿ ಅಜ್ಜಿಯ ಮನೆಯ ನೆನಪುಗಳು ಮರುಕಳಿಸಿದ ಅನುಭವ. ಜೊತೆಗೆ ಈ ಪ್ರಪಂಚದಲ್ಲಿ ಇಂತಹ ವ್ಯಕ್ತಿಗಳು ಇದ್ದಾರ ಎನ್ನುವ ಪ್ರಶ್ನೆ..? ಕಾಡಿತ್ತು,
ಕಸ್ತೂರಿ ಅಕ್ಕನ ದೊಡ್ಡ ಮನೆ |
ಮುಂಜಾನೆಯ ಹಕ್ಕಿಗಳ ಕಲರವ ನನ್ನನ್ನು ಎಚ್ಚರ ಗೊಳಿಸಿತ್ತು, ಮಹಡಿಯ ಕೋಣೆ ಯಿಂದಾ ಮೆಟ್ಟಿಲಿಳಿದು ಬಂದೆ ... ಬನ್ನಿ ಬನ್ನಿ ಬಿಸಿನೀರು ಕಾದಿದೆ , ಸ್ನಾನ ಮಾಡ್ತೀರಾ , ಅಲ್ಲೇ ಹಿಂದೆ ಸ್ನಾನದ ಮನೆ ಇದೆ , ಮುಖತೊಳೆದು ಬನ್ನಿ , ಟೀ , ಕಾಫಿ, ಏನಾದರೂ ಬೇಕಾ , ಅಲ್ಲೇ ಇದೆ ನೋಡಿ ರೆಸ್ಟ್ ರೂಮು ಅಂತಾ ಅತಿಥಿಗಳಿಗೆ ಪ್ರೀತಿಯಿಂದ ತಿಳಿಸುತ್ತಾ ಇದ್ದರು . ನನಗೆ ಈ ಮನೆ ಹೊಸದು ಅನ್ನಿಸಲೇ ಇಲ್ಲಾ, ನಮ್ಮ ಅಜ್ಜಿಯ ಮನೆಗೆ ಬಂದಂತೆ ಅನ್ನಿಸಿತು, ಬೆಳಿಗ್ಗೆ ಉಪಹಾರ ಸೇವನೆ ನಂತರ ಕಸ್ತೂರಿ ಅಕ್ಕಾ ನಿಮ್ಮ ಜೊತೆ ಸ್ವಲ್ಪ ಮಾತಾಡೋಕೆ ಅವಕಾಶ ಮಾಡಿಕೊಡಿ ಅಂದೇ, ಅದಕ್ಕೇನಂತೆ ಬನ್ನಿ ನಾನು ಕೆಲ್ಸಾ ಮಾಡ್ತಾ ಮಾಡ್ತಾ ಮಾತಾಡುತ್ತೇನೆ ಅಂತಾ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು , ಅವರ ಉತ್ತರ ನನ್ನ ಜಂಘಾ ಬಲವನ್ನೇ ಉಡುಗಿಸಿಬಿಟ್ಟಿತು, ಜೊತೆಗೆ ಪ್ರವಾಸಿಗರ ವೇಷದಲ್ಲಿ ಬರುವ ನಾವುಗಳು ಎಂತಹ ಕೆಟ್ಟ ಜನ ಎನ್ನುವ ಪ್ರಶ್ನೆ ಮೂಡಿತು,
ಮನೆಯಲ್ಲಿನ ಹಿರಿಯ ಜೀವ ಕೂಡ ಕೆಲಸ ಮಾಡಿ ಊಟ ಮಾಡುವ ಸ್ವಾಭಿಮಾನಿ |
ಕಸ್ತೂರಿ ಅಕ್ಕನ ಮನೆ ಆಗುಂಬೆಯಲ್ಲಿ ದೊಡ್ಡ ಮನೆ ಅಂತಾನೆ ಪ್ರಸಿದ್ಧಿ, ಈ ಮನೆಯಲ್ಲಿ ಬಹಳ ಹಿಂದಿನಿಂದಲೂ ಆತಿಥ್ಯಕ್ಕೆ ಪ್ರಾದಾನ್ಯತೆ ನೀಡಲಾಗಿದೆ, ಬಹಳ ಹಿಂದೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಅಧಿಕಾರಿಗಳು ಆಗುಂಬೆ ಘಟ್ಟ ಹತ್ತಿ ಬಂದು ಇಲ್ಲಿ ಉಳಿದು ವಿಶ್ರಾಂತಿ ಪಡೆದು ನಂತರ ಶಿವಮೊಗ್ಗಕ್ಕೆ ಸಾಗುತ್ತಿದ್ದರು, ಕಸ್ತೂರಿ ಅಕ್ಕ ಸುಮಾರು ನಲವತ್ತು ವರ್ಷಗಳಿಂದ ಒಂದು ದಿನವೂ ತಪ್ಪಿಸದೇ ಈ ಮನೆಗೆ ಆಗಮಿಸುವ ಅತಿಥಿಗಳಿಗೆ ಊಟ ವಸತಿ ನೀಡಿ ಆಗುಂಬೆಯ
ಅನ್ನ ಪೂರ್ಣೆ ಯಾಗಿದ್ದಾರೆ . ನಲವತ್ತು ವರ್ಷಗಳಿಂದ ಆಗುಂಬೆಯ ಈ ಮನೆ ಬಿಟ್ಟು ಆಚೆ ಹೋಗಿಲ್ಲ, ಹಾಗೆಯೇ ಈ ಮನೆಯಲ್ಲಿ ಒಂದು ದಿನವೂ ಈ ಕಾರ್ಯಕ್ಕೆ ರಜೆ ನೀಡಲಾಗಿಲ್ಲ . ಇಂತಹ ಜಾಗಕ್ಕೆ ಬಂದ ನಾವುಗಳು ಹೇಗೆ ಇರಬೇಕು ಅಲ್ವಾ..? ಆದರೆ ನಾವುಗಳು ಮಾಡುವ ಅವಾಂತರ ನೋಡಿ
೧] ನೀವು ಯಾವುದೇ ಊರಿಗೆ ಹೋಗಿ, ಕನಿಷ್ಠ ಒಂದು ಊಟಕ್ಕೆ ೬೦ ರಿಂದ ೮೦ ರೂ ರವರೆಗೆ ಖರ್ಚಾಗುತ್ತದೆ , ಬೆಳಗಿನ ಉಪಹಾರಕ್ಕೆ ಕನಿಷ್ಠ ೮೦ ರೂ ಖರ್ಚಾಗುತ್ತದೆ, ಉಳಿಯಲು ನೀಡುವ ಕೋಣೆ ಬಾಡಿಗೆ ಕನಿಷ್ಠ ೮೦೦ ರೂ ಆಗುತ್ತದೆ, ಇದೆ ಆಧಾರದ ಮೇಲೆ ನೀವು ಯಾವುದೇ ಪುಟ್ಟ ಪಟ್ಟಣಕ್ಕೆ ಹೋದರು ಅಲ್ಲಿಸಿಗುವ ಕನಿಷ್ಠ ಸೌಲಭ್ಯಕ್ಕೆ ರೂ ೮೦ ರಿಂದ ೧೦೦ ರವರೆಗೆ, ತೆರಬೇಕು , ಆದರೆ ಇಲ್ಲಿ ನೀಡುವ ಆರೋಗ್ಯಕರ ರುಚಿಯಾದ ಉಪಹಾರಕ್ಕೆ ೮೦ ರೂ ಮುಲಾಜಿಲ್ಲದೆ ನೀಡ ಬಹುದು, ಸುಮಾರು ೧೫೦ ವರ್ಷಗಳ ಇತಿಹಾಸ ಉಳ್ಳ ಆ ಮನೆಯಲ್ಲಿ ಉಳಿಯಲು ಕನಿಷ್ಠ ರೂ ೬೦೦ , ನೀಡ ಬಹುದು ಆದರೆ ಬೆಲೆಕಟ್ಟಲಾಗದ ಈ ಆತಿಥ್ಯಕ್ಕೆ ಕೆಲವರು ದುಡ್ಡು ಕೊಡದೆ , ಬರುವುದುಂಟು, ಮತ್ತೆ ಕೆಲವರು ೧೦೦, ೨೦೦ ರೂಪಾಯಿ ನೀಡಿ ಕಳ್ಳ ನಗೆಯನ್ನು ನಕ್ಕು ಬರುವುದು ಉಂಟು . ಯಾವುದೋ ರೆಸಾರ್ಟ್ ಗಳಿಗೆ ಒಂದು ದಿನಕ್ಕೆ ರೂ ೨೦೦೦ ದಿಂದ ೩೦೦೦ ದ ವರೆಗೆ ತಲಾ ಒಬ್ಬೊಬ್ಬರು ತೆತ್ತು ಬರುವ ಜನ ಇಲ್ಲಿ ಬಂದ ತಕ್ಷಣ ಜಿಪುಣ ರಾಗುತ್ತಾರೆ,
೨} ನಮ್ಮ ಮನೆಯ ಟಾಯ್ಲೆಟ್ ಗಳು ಕೊಳಕಾದರೆ ನರಳಾಡುವ ನಾವು ಸ್ವಚ್ಛತೆ ಬಗ್ಗೆ ಭಾಷಣ ಬಿಗಿಯುತ್ತೇವೆ , ಆದರೆ ಹೆಚ್ಚು ವಿಧ್ಯೆ ಗಳಿಸಿದ ಕೆಲವು ಪಟ್ಟಣದ ಹೆಣ್ಣು ಮಕ್ಕಳು ತಾವು ಬಳಸಿದ ಪ್ಯಾಡ್ ಗಳನ್ನೂ ಸಹ ಟಾಯ್ಲೆಟ್ ಗಳಲ್ಲಿ ತುರುಕಿ ಬರುತ್ತಾರೆ , ಇನ್ನು ಕೆಲವರು ಬಳಸಿದ ಶೌಚಾಯಗಳಲ್ಲಿ ನೀರು ಹಾಕದೆ ಬೇರೆಯವರು ಉಪಯೋಗಿಸದ ಹಾಗೆ ಮಾಡಿ ಬರ್ತಾರೆ ಇದನ್ನೆಲ್ಲಾ ತೊಳೆಯುವ ಕಾರ್ಯ ಪಾಪ ಕಸ್ತೂರಿ ಅಕ್ಕನ ಮನೆಯ ಸದಸ್ಯರದು , ಕೆಲವೊಮ್ಮೆ ಪ್ಯಾಡ್ ಗಳು ಸಿಕ್ಕಿಕೊಂಡು ಶೌಚಾಲಯ ಕಟ್ಟಿಕೊಂಡಾಗ ಅದನ್ನು ತೆರವುಗೊಳಿಸಲು ಒಮ್ಮೊಮ್ಮೆ ೫೦೦ ರೂಗಳ ವರೆಗೆ ಖರ್ಚು ಮಾಡಿ ಕಸ್ತೂರಿ ಅಕ್ಕ ಮತ್ತೆ ಪ್ರವಾಸಿಗರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ . ಪ್ರತಿ ನಿತ್ಯ ಮನೆಯ ಹೆಣ್ಣುಮಕ್ಕಳೂ ಒಳಗೊಂಡಂತೆ ಮನೆಯ ಎಲ್ಲಾ ಸದಸ್ಯರು ಶೌಚಾಲಯಗಳನ್ನು ಶುಚಿಗೊಳಿಸುವ ಕಷ್ಟ ಯಾರಿಗೂ ಕಾಣೋಲ್ಲ . ಕಸ್ತೂರಿ ಅಕ್ಕನ ಜೊತೆ ಮಾತನಾಡುವಾಗ ಈ ಅಂಶ ಬೆಳಕಿಗೆ ಬಂತು . ಎಷ್ಟು ಓದಿದರೇನು ಜ್ಞಾನವಿಲ್ಲದಿದ್ದರೆ .
೩] ಇನ್ನು ಉಳಿದುಕೊಂಡ ಕೋಣೆಗಳನ್ನು ನಾವು ಬಳಸಿಕೊಳ್ಳೋದು ನೋಡಿ , ಮಲಗಲು ನೀಡಿದ ಹೊದಿಕೆಗಳನ್ನು ವಿರೂಪ ಗೊಳಿಸುವಿಕೆ , ಮಲಗಿ ಎದ್ದ ನಂತರ ಹಾಸಿಗೆ ಹೊದಿಕೆ ದಿಂಬುಗಳನ್ನು ವ್ಯವಸ್ತಿತವಾಗಿ ಇಡದೆ ಇಷ್ಟ ಬಂದಂತೆ ಬಿಸಾಡಿ ಬರುವುದು , ಇದನ್ನೂ ಸಹ ಕುಟುಂಬದ ಸದಸ್ಯರು ಸರಿಪಡಿಸುವ ಕಾರ್ಯ ಮಾಡುತ್ತಾರೆ, ಒಬ್ಬ ಅತಿಥಿ ಬಳಸಿದ ಹೊದಿಕೆಗಳನ್ನು ತೆಗೆದು ಶುಚಿಗೊಳಿಸಲು ಎಷ್ಟು ಶ್ರಮ ಆಗುತ್ತೆ ಎಂಬುದನ್ನು ಲೆಕ್ಕಿಸದೆ ಪ್ರವಾಸಿಗಳು ಮನಸೋ ಇಚ್ಚೆ ನಡೆದುಕೊಳ್ಳುತ್ತಾರೆ ,
೪] ಕೆಲವೊಮ್ಮೆ ಅತಿಥಿಗಳ ರೂಪದಲ್ಲಿ ಬಂದವರು ಕೆಲವು ವಸ್ತುಗಳನ್ನು ತಮ್ಮದೆಂಬಂತೆ ಕದ್ದು ಹೋಗುವುದೂ ಉಂಟು, ಮಾಲ್ಗುಡಿಡೇಸ್ ಚಿತ್ರೀಕರಣ ಸಮಯದಲ್ಲಿ ಬಂದ ಕೆಲವು ವ್ಯಕ್ತಿಗಳು ಈ ಮನೆಯ ಅಮೂಲ್ಯ ವಸ್ತುಗಳನ್ನು ಕದ್ದು ಹೋಗಿದ್ದಾರೆ .ಅಂದಿನಿಂದ ಈ ಮನೆಯಲ್ಲಿ ಚಿತ್ರೀಕರಣ ಮಾಡುವವರಿಗೆ ಅವಕಾಶ ನೀಡಿಲ್ಲ .
೫] ಈ ಮನೆಯಲ್ಲಿ ಕಸ್ತೂರಿ ಅಕ್ಕನ ನಿಯಮಗಳಿವೆ ಇಲ್ಲಿ ಬರುವವರು ಬೇರೆ ಅತಿಥಿಗಳಿಗೆ ತೊಂದರೆ ಆಗದಂತೆ ನಡೆದು ಕೊಳ್ಳಬೇಕು , ಮಾಂಸಾಹಾರ , ಮದ್ಯ ಕುಡಿದು ಬರುವುದು , ಬೀಡಿ ಸಿಗರೆಟ್ , ಸೇವನೆ ಮಾಡುವಂತಿಲ್ಲ , ಆದರೆ ಕೆಲವರು ಈ ನಿಯಮ ಮುರಿಯಲು ಪ್ರಯತ್ನಿಸಿ ವಿಫಲ ರಾಗುತ್ತಾರೆ .
೬] ಮಾಲ್ಗುಡಿಡೇಸ್ ಚಿತ್ರೀಕರಣ ಆದ ಕಾರಣ ಈ ಮನೆಗೆ ಮಾಲ್ಗುಡಿ ಮನೆ ಅಂತಾ ಕೆಲವರು ನಾಮ ಕರಣ ಮಾಡಿದ್ದಾರೆ ಆದರೆ ಸುಮಾರು ನಲವತ್ತು ವರ್ಷಗಳಿಂದ ಆತಿಥಿ ದೇವೋಭವ ಎಂದಿರುವ ಕಸ್ತೂರಿ ಅಕ್ಕನ ಮನೆ ಎಂಬುದಾಗಿ ಕರೆಯದೆ ಅವರ ವ್ಯಕ್ತಿತ್ವಕ್ಕೆ ಅವಮಾನ ಮಾಡುವ ಪ್ರವಾಸಿಗರಿದ್ದಾರೆ .
೭] ಹಣಕ್ಕಾಗಿ ವ್ಯವಹಾರ ಮಾಡದೆ ಪ್ರವಾಸಿಗರನ್ನು ಸುಲಿಗೆ ಮಾಡದೆ ಅತಿಥಿಗಳ ಸೇವೆ ಮಾಡಿ ಕೊಟ್ಟಷ್ಟನ್ನು ಪ್ರೀತಿಯಿಂದ ಪಡೆಯುವ ಇವರ ಈ ಕಾಯಕವನ್ನು ಹೆಚ್ಚಿನ ನ್ಯಾಯಬದ್ದವಾದ ಮೊಬಲಗು ನೀಡಿ ಪ್ರೋತ್ಸಾಹಿಸದೆ ಹಾಲು ಕೊಡುವ ಹಸುವಿನ ಕೆಚ್ಚಲನ್ನು ತಿನ್ನಲು ಪ್ರವಾಸಿಗರಾದ ನಾವು ಮುಂದಾಗಿದ್ದೇವೆ ,
೮] ಕಸ್ತೂರಿ ಅಕ್ಕಾ, ಪ್ರತಿಯೊಂದನ್ನೂ ಖರೀದಿಸಿ ತರಬೇಕು, ಅತಿಥಿಗಳಿಗೆ ಉಣ್ಣಲು ನೀಡುವ ಊಟ ತಿಂಡಿಗೆ ಸಾಮಗ್ರಿಗಳನ್ನು ಹಣ ನೀಡಿಯೇ ತರಬೇಕು, ಬಿಟ್ಟಿ ಯಾಗಿ ಏನೂ ಸಿಗಲ್ಲಾ ಆದ್ರೆ ನಾವು ಇದನ್ನು ತಿಳಿಯದೆ ಮಾಡುತ್ತಿರುವ ಕಾರ್ಯ ನಮ್ಮ ನಾಗರೀಕತೆಯ ಮೌಲ್ಯದ ಪರಿಚಯ ಮಾಡುತ್ತಿದೆ
ಕಾಯಕವೇ ಕೈಲಾಸ ಈ ಕಸ್ತೂರಿ ಅಕ್ಕನಿಗೆ |
ಹೀಗೆ ಕಸ್ತೂರಿ ಅಕ್ಕನ ಜೊತೆ ಮಾತನಾಡುತ್ತಾ ಅವರ ಬವಣೆಗಳನ್ನು ಕೆದಕುತ್ತಾ ಅಲ್ಲಿನ ಪ್ರವಾಸಿಗರ ವರ್ತನೆ ಗಮಸಿಸುತ್ತಾ ಪ್ರವಾಸಿಗರಾದ ನಮ್ಮ ನಡತೆಯಬಗ್ಗೆ ನಾಚಿಕೆ ಪಟ್ಟುಕೊಂಡೆ , ಕಸ್ತೂರಿ ಅಕ್ಕ ಮಾತಿನ ನಡುವೆ ಹೀಗೆ ಹೇಳಿದ್ರೂ ದಯವಿಟ್ಟು ಯಾವ ಪ್ರವಾಸಿಗರಿಗೂ ನೋವಾಗುವುದು ಇಷ್ಟ ಇಲ್ಲಾ ಅಂತಾ, ಆದರೆ ಪ್ರವಾಸಿಗರಾದ ನಮಗೆ ಅವರ ಆತಿಥ್ಯಕ್ಕೆ ತಕ್ಕ ಮರ್ಯಾದೆ ಕೊಡೊ ಬುದ್ದಿ ಇಲ್ವಲ್ಲಾ ಅನ್ನೋ ಯೋಚನೆ ಬಂತು . ಆ ಮನೆಯಲ್ಲಿ ನನ್ನ ವಾಸ್ತವ್ಯ ಪೂರ್ಣಗೊಂಡು ಪ್ರವೀಣ್ ವಿವಾಹ ಕಾರ್ಯಕ್ಕೆ ತೆರಳಬೇಕಾದ ಕಾರಣ ಕಸ್ತೂರಿ ಅಕ್ಕನ ಆಶೀರ್ವಾದ ಪಡೆದು ಅವರ ಮನೆಯ ಎಲ್ಲರಿಗೂ ವಂದನೆ ತಿಳಿಸಿ ನನಗೆ ಸರಿ ಎನ್ನಿಸಿದ ಮೌಲ್ಯ ನೀಡಿ ಬಂದೆ , ಅಕ್ಕಾ ನಿಮ್ಮ ಈ ಪ್ರೀತಿಯ ಆತಿಥ್ಯಕ್ಕೆ ಬೆಲೆ ಕಟ್ಟಲಾರೆ ಅನ್ನುತ್ತಾ ಮೌಲ್ಯ ನೀಡಿದೆ ಅಯ್ಯೋ ಅದ್ಯಾವ ಮಾತು ಅನ್ನುತ್ತಾ ಪ್ರೀತಿಯಿಂದ ಸ್ವೀಕರಿಸಿ ಹಾರೈಸಿದರು . ಮನೆಯಿಂದ ಹೊರಗೆ ಬರುತ್ತಾ ಕ್ಷಮಿಸಿ ಕಸ್ತೂರಿ ಅಕ್ಕಾ ನಮಗೆ ನಿಮ್ಮ ಪ್ರೀತಿಯ ಆತಿಥ್ಯ ಪಡೆಯುವ ಅರ್ಹತೆ ಇಲ್ಲಾ ಎಂಬ ಮಾತುಗಳು ಮನದಲ್ಲಿ ಮೂಡಿತು .
ಕಸ್ತೂರಿ ಅಕ್ಕನ ಅಳಿಯ ಶ್ರೀ ರವಿ ಕುಮಾರ್ |