|
ಇಕ್ಕೆರಿಯ ಸುಂದರ ಬಸವ |
ಕಳೆದ ಸಂಚಿಕೆಯಲ್ಲಿ ಇಕ್ಕೆರಿಯ ಬಸವನ ಮೂಗಿಗೆ ಕೈ ಬೆರಳನ್ನು ಇಟ್ಟು , ಮಕ್ಕಳಂತೆ ತುಂಟಾಟ ಮಾಡಿದ್ದ ನಾವು , ದೇವಾಲಯದ ಆವರಣದಿಂದ ಸ್ವಲ್ಪ ಮುಂದೆ ನಡೆದೆವು, ದೇವಾಲಯದ ಒಳಗೆ ಪ್ರವೇಶ ಮಾಡಿದೆವು . ನಮ್ಮನ್ನು ನೋಡುತ್ತಲೇ ನಗು ಮುಖದಿಂದ ಸ್ವಾಗತಿಸಿದ ಅರ್ಚಕರನ್ನು ಮಾತನಾಡಿಸಿ ಅವರು ದೇವಾಲಯ ಪ್ರವೇಶ ಮಾಡುವ ಸನ್ನಿವೇಶದ ಚಿತ್ರ ತೆಗೆಯುವ ಆಸೆಯಿಂದ ಅವರಿಗೆ ನಮ್ಮ ಕೋರಿಕೆಯನ್ನು ತಿಳಿಸಿದಾಗ , ಬಹಳ ಸಂತೋಷದಿಂದ ನಮ್ಮ ಕೋರಿಕೆಯಂತೆ ದೇವಾಲಯವನ್ನು ಪ್ರವೇಶ ಮಾಡಿ ನಾವು ಫೋಟೋ ತೆಗೆಯಲು ಅನುವು ಮಾಡಿಕೊಟ್ಟರು .
|
ಸ್ವಾಮಿಯ ಸೇವೆ ಮಾಡಲು ನಗು ಮುಖದಿ ಬಂದವರು |
ನಗು ಮುಖದಿಂದ ಉತ್ಸಾಹದಿಂದ ತಮ್ಮ ಕಾರ್ಯ ಮಾಡುವ ಅರ್ಚಕರ ಬಗ್ಗೆ ಗೌರವ ಮೂಡಿತು . ಪರಸ್ಪರ ಪರಿಚಯ, ಮಾತುಕತೆ ನಂತರ ದೇವಾಲಯದ ಬಗ್ಗೆ ತಮಗೆ ತಿಳಿದ ವಿವರಗಳನ್ನು ನಮ್ಮೊಡನೆ ಹಂಚಿಕೊಂಡರು . ದೇವಾಲಯದ ವಿವರಗಳನ್ನು ಅವರು ಹೇಳುತ್ತಿದ್ದರೆ ಕೇಳಲು ಬಹಳ ಸಂತೋಷ ಆಗುತ್ತಿತ್ತು . ಬನ್ನಿ ಸ್ವಾಮಿಯ ದರ್ಶನ ಮಾಡೋಣ ಅಂತಾ ಕರೆದು ಕೊಂದು ಹೋಗಿ ನಮ್ಮಗಳ ಹೆಸರನ್ನು ಹೇಳಿ ಸಂಕಲ್ಪಮಾಡಿ ಅರ್ಚನೆ ಮಾಡಿ ಮಂಗಳಾರತಿ ಬೆಳಗಿ ಶಿವ ಲಿಂಗದ ದರ್ಶನ ಮಾಡಿಸಿದರು .
|
ಅಘೋರೆಶ್ವರ ಸನ್ನಿಧಿಯಲ್ಲಿ ಮಂಗಳಾರತಿ |
ಅರೆ ಇದೇನು....? ಈ ಭವ್ಯ ದೇಗುಲಕ್ಕೆ ಇತಿಹಾಸ ಇರಬೇಕಲ್ಲಾ ಎಂಬ ಪ್ರಶ್ನೆ ಮನದಲ್ಲಿ ಮೂಡಿತು . ಬನ್ನಿ ಇಕ್ಕೆರಿಯ ಇತಿಹಾಸ ತಿಳಿಯೋಣ
ಐತಿಹಾಸಿಕ ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಸೇರಿದೆ . ಸಾಗರದಿಂದ ಕೇವಲ ಮೂರು ಕಿಲೋ ಮೀಟರ್ ದೂರದಲ್ಲಿದೆ ಇಕ್ಕೆರಿ. ಅರಳಿ ಕೊಪ್ಪ ಗ್ರಾಮದ ಉಪಗ್ರಾಮ ಈ ಇಕ್ಕೇರಿ .
"ಇಕ್ಕೇರಿ" ಅಂದರೆ ಎರಡು ಕೇರಿ ಅಥವಾ ಎರಡು ಬೀದಿ ಎಂದು ಅರ್ಥ , ಬಹುಷಃ ಆಕಾಲದಲ್ಲಿ ಈ ಊರಿನಲ್ಲಿ ಎರಡು ಬೀದಿಗಳಲ್ಲಿ ಮಾತ್ರ ಜನವಸತಿ ಇತ್ತೆಂದು ಕಾಣುತ್ತದೆ ಅದಕ್ಕಾಗಿ ಈ ಊರನ್ನು ಇಕ್ಕೇರಿ ಎಂದು ಕರೆಯಲಾಗಿದೆ. ಕ್ರಿ.ಶ . ೧೫೧೨ ರಲ್ಲಿ ಕೆಳದಿ ಅರಸರು ಇಕ್ಕೇರಿಯನ್ನು ರಾಜಧಾನಿಯನ್ನಾಗಿ ಘೋಷಿಸಿಕೊಂಡು ತಮ್ಮ ಆಡಳಿತ ವನ್ನು ಕೆಳದಿ ಯಿಂದ ಇಲ್ಲಿಗೆ ವರ್ಗಾಯಿಸಿಕೊಳ್ಳುತ್ತಾರೆ . ಹಾಗಾಗಿ ಈ ಊರು ಮತ್ತಷ್ಟು ಪ್ರಖ್ಯಾತಿ ಪಡೆಯುತ್ತದೆ . ಜೊತೆಗೆ ಕೆಳದಿ ಅರಸರು ಇಲ್ಲಿ ಒಂದು ಟಂಕ ಸಾಲೆಯನ್ನು ಸ್ಥಾಪಿಸಿ ಇಲ್ಲಿ ಇಕ್ಕ್ರಿ ಹೆಸರಿನ "ಪಗೋಡ ಹಾಗು ಫಣಮ್ಸ್"[ ಅಂದಿನಕಾಲದ ಹಣದ ಹೆಸರು ] ನಾಣ್ಯಗಳನ್ನು ಇಲ್ಲಿ ತಯಾರು ಮಾಡಲಾಗುತ್ತದೆ . ಇಂದು ಈ ಟಂಕ ಸಾಲೆ ಇಲ್ಲವಾದರೂ ಅದರ ಅವಶೇಷಗಳನ್ನು ಇಂದೂ ಕಾಣ ಬಹುದೆಂದು ಹೇಳಲಾಗುತ್ತದೆ , ನಮಗೆ ಅದನ್ನು ನೋಡಲು ಆಗಲಿಲ್ಲ. ನಂತರ ೧೬೩೯ ರಲ್ಲಿ ಕೆಳದಿ ಅರಸರು ತಮ್ಮ ರಾಜಧಾನಿಯನ್ನು ಇಲ್ಲಿಂದ ಬಿದನೂರಿಗೆ ಮತ್ತೊಮ್ಮೆ ಬದಲಾವಣೆ ಮಾಡುತ್ತಾರೆ . ಆದರೆ ಇಕ್ಕೇರಿ ತನ್ನ ಗತ ವೈಭವದ ಗತ್ತನ್ನು ಬಿಟ್ಟುಕೊಡದೆ ಅಘೋರೆಶ್ವರ ದೇವಾಲಯದ ಮಹತ್ವ ಸಾರುತ್ತಾ ನಿಂತಿದೆ .
|
ಅಘೋರೆಶ್ವರ ದೇಗುಲ ದರ್ಶನ |
ಅಘೋರೆಶ್ವರ ದೇವಾಲಯ ಬಹಳ ವಿಸ್ತಾರವಾದ ದೇವಾಲಯವಾಗಿದ್ದು, ೧೬ ನೆ ಶತಮಾನದಲ್ಲಿ ವಿಜಯನಗರ, ಹೊಯ್ಸಳ ವಾಸ್ತು ಶೈಲಿಗಳ ದರ್ಶನ ನಿಮಗೆ ಆಗುತ್ತದೆ . ದೇವಾಲಯದ ಮುಂಬಾಗದಲ್ಲಿ ಕೆಳದಿ ಅರಸರುಗಳ ಪ್ರತಿಮೆಗಳು ಇದ್ದು ಕೆಳದಿ ಇಕ್ಕೆರಿಯ ಇತಿಹಾಸ ನೆನಪು ಮಾಡಿಕೊಡುತ್ತವೆ . ದೇವಾಲಯ ಉತ್ತರ ಮುಖಿಯಾಗಿದೆ . ಸುಂದವಾದ ಚಾವಣಿ, ಗರ್ಭ ಗೃಹ , ಸುಖನಾಸಿ ಹಾಗು ದೇವಾಲಯದ ಹೊರ ಆವರಣದಲ್ಲಿ ಸುಂದವಾಗಿ ಕಲೆ ಅರಳಿದೆ . ಕಲ್ಲಿನಲ್ಲಿ ಅರಳಿದ ಸುಂದರ ಕೆತ್ತನೆಗಳು ಕಣ್ಮನ ತಣಿಸುತ್ತವೆ .
|
ದೇವಾಲಯ ಚಾವಣಿಯಲ್ಲಿ ಅರಳಿದ ಕಲೆ |
ಈ ದೇವಾಲಯಕ್ಕೆ ನವರಂಗ ಇರುವುದಿಲ್ಲ. ದೇವಾಲಯದ ಮುಂದೆ ಸುಂದರ ನಂದಿ ವಿಗ್ರಹವನ್ನು ಮಂಟಪದಲ್ಲಿ ಸ್ಥಾಪಿಸಲಾಗಿದೆ . ಇನ್ನು ಪಾರ್ವತಿ ದೇಗುಲಕ್ಕೆ ಗರ್ಭ ಗೃಹ , ಸುಖನಾಸಿ, ಕಂಬಗಳು ಇಲ್ಲದ ಪುಟ್ಟದಾದ ನವರಂಗ ಕಾಣ ಸಿಗುತ್ತದೆ . ಇಲ್ಲಿನ ಪ್ರಕೃತಿ ಹಾಗು ಹವಾಮಾನಕ್ಕೆ ತಕ್ಕಂತೆ ದೇವಾಲಯ ರಚನೆ ಆಗಿದೆ , ಈ ಭಾಗದಲ್ಲಿ ಹೆಚ್ಚಿನ ಮಳೆ ಆಗುವ ಕಾರಣ ಎಂತಹ ಭಾರಿ ಮಳೆ ಬಂದರೂ ಅದನ್ನು ಎದುರಿಸಿ ಹಲವು ಶತಮಾನಗಳಿಂದ ಹೆಮ್ಮೆಯಿಂದ ನಿಂತಿದೆ ಈ ದೇವಾಲಯ, ಅಂದಿನ ತಾಂತ್ರಿಕತೆಯ ವಿಶೇಷವನ್ನು ನಾವಿಲ್ಲಿ ಕಾಣಬಹುದು .
|
ಇಕ್ಕೆರಿಯಲ್ಲಿ ದರ್ಶನ ವಿತ್ತ ಷಣ್ಮುಖ |
|
ಇಕ್ಕೆರಿಯಲ್ಲಿ ಕಂಡ ಸುಂದರ ಗಣಪ |
ದೇವಾಲಯದಲ್ಲಿ ವಿಶೇಷವಾಗಿ ನಿಮಗೆ ಕಾಣಸಿಗುವುದು ಅಘೋರೆಶ್ವರ ಲಿಂಗ [ ಹಿಂದೊಮ್ಮೆ ಇಲ್ಲಿ ಅಘೋರೆಶ್ವರನ ಬೃಹತ್ ಮೂರ್ತಿಯನ್ನು ಪೂಜಿಸಲಾಗುತ್ತಿತ್ತೆಂದು ಹಾಲಿ ಈ ಮೂರ್ತಿ ಇಲ್ಲವೆಂದು ಹೇಳಲಾಗುತ್ತಿದೆ , ಬಿಜಾಪುರ ಸುಲ್ತಾನ್ ಇಲ್ಲಿ ಆಕ್ರಮಣ ಮಾಡಿದಾಗ ಅಘೋರೆಶ್ವರ ಮೂರ್ತಿ ಭಗ್ನವಾಯಿತೆಂದು ಹೇಳುತ್ತಾರೆ ] , ಭೈರವ, ಮಹಿಷಮರ್ಧಿನಿ , ಷಣ್ಮುಖ , ಹಾಗು ಗಣಪತಿಯ ಮೂರ್ತಿಗಳನ್ನು ಕಾಣಬಹುದು.
|
ಶಿಲ್ಪಿಯ ಕಲ್ಪನೆ ಗರಿ ಬಿಚ್ಚಿದೆ ಇಲ್ಲಿ |
|
ಕಲೆಯ ಬಲೆ ಸುಂದರವಾಗಿ ಅರಳಿದೆ ಇಲ್ಲಿ |
|
ಶಿಲೆಯಲ್ಲಿ ಅರಳಿದ ಪುಷ್ಪ ಕ್ಯಾಮರ ನೋಡಿ ನಕ್ಕಾಗ |
|
ಅದ್ಭತ ಕಲಾ ಲೋಕ ಇಲ್ಲಿದೆ |
ದೇವಾಲಯವನ್ನು ನೋಡುತ್ತಾ ಸಾಗಿದೆ ನನ್ನ ಕ್ಯಾಮರ ದೇಗುಲದ ಸುಂದರ ಕೆತ್ತನೆಗಳನ್ನು ತನ್ನ ಒಡಲೊಳಗೆ ತುಂಬಿ ಕೊಳ್ಳುತ್ತಿತ್ತು , ದೇವಾಲಯದ ಸುಂದರ ಕೆತ್ತನೆಗಳು ಮನ ಸೂರೆಗೊಂಡವು ಕತ್ತಲ ಇತಿಹಾಸದಲ್ಲಿ ಅಡಗಿ ಕುಳಿತ ಈ ಸುಂದರ ಕಲೆಯನ್ನು ಆಸ್ವಾದಿಸಲು ಯಾವ ಜನ್ಮದ ಪುಣ್ಯ ಇತ್ತೋ ಕಾಣೆ ಅದು ಇಲ್ಲಿ ನನಸಾಗಿತ್ತು, ಬಾಲಣ್ಣ ಹೊರಡೋಣ ಎಂದ ಪ್ರಕಾಶ್ ಹೆಗ್ಡೆ ದ್ವನಿ ಕೇಳಿ ವಾಸ್ತವಕ್ಕೆ ಬಂದೆ . ಹೊರಡುವ ಮೊದಲು ಅಲ್ಲಿ ಕಣ್ಣಿಗೆ ಬಿದ್ದ ಕಿಟಕಿಯ ಚಿತ್ರ ತೆಗೆದೇ ಕತ್ತಲಿನಲ್ಲಿ ಕಿಟಕಿಯ ಮೂಲಕ ಬರುವ ಬೆಳಕು ಚಿತ್ತಾರ ಮೂಡಿಸಿತ್ತು, ದೇವಾಲಯಕ್ಕೆ ಬೆಳಕಿನ ರಂಗೋಲಿ ಹಾಕಲು ಇಂತಹ ಕಿಟಕಿಗಳನ್ನು ನಿರ್ಮಿಸಲಾಗಿದೆ ಇಲ್ಲಿ, ಸಂತೃಪ್ತ ಮನಸಿನಿಂದ ಹೊರಬಂದೆ
|
ಬೆಳಕಿನ ರಂಗೋಲಿ ಹಾಕಲು ಇಂತಹ ಕಿಟಕಿಗಳು ಬೇಕು |
|
ಇಕ್ಕೆರಿಯ ಪುಟ್ಟ ಮಕ್ಕಳು |
ದೇವಾಲಯದ ಹೊರಗೆ ಬಂದು ಹೊರಡಲು ಅನುವಾದೆವು , ತಮ್ಮ ಊರಿನ ದೇಗುಲದ ಮಹತ್ವ ತಿಳಿಯದ ಪುಟ್ಟ ಮಕ್ಕಳು ಅಲ್ಲಿ ಸಂತಸದಿಂದ ಕ್ರಿಕೆಟ್ ಆಟಾ ಆಡುತ್ತಿದ್ದರು , ದೇವ್ರೇ ಈ ಮಕ್ಕಳು ಈ ಊರಿನ ಈ ಐತಿಹಾಸಿಕ ದೇಗುಲ ಉಳಿಸಿಕೊಂಡು ಮೆರೆಸುವಂತೆ ಮಾಡಪ್ಪಾ ಅಂತಾ ಮನಸಿನಲ್ಲಿ ಅಂದುಕೊಂಡೆ . ನಮ್ಮ ಪಯಣ ಮುಂದೆ ಸಾಗಿ ಸಾಗರ ತಲುಪುವ ರಸ್ತೆಗೆ ಬಂದು ನಿಂತೆವು ಅಲ್ಲಿ ಕಂಡಿತ್ತು ಒಂದು ಬೋರ್ಡು ........ !!! ಅದು ವರದಾ ಮೂಲ....!! ಪ್ರಕಾಶಣ್ಣಾ ಅಂದೇ ಗೊತ್ತಾಯ್ತು ಬಾಲಣ್ಣ ....! ಅಲ್ಲಿಗೆ ಹೋಗೋಣ ಅಂದ್ರು .... ...!!!