ಚಿತ್ರ ಕೃಪೆ ಅಂತರ್ಜಾಲ |
ಸಂಚಿಕೆಯಲ್ಲಿ ವರದ ಹಳ್ಳಿಯ ಬರೆದಿದ್ದೆ,ಸುಂದರ ಅನುಭವದ ಮೂಟೆ ಹೊತ್ತು ಸಂತ್ರುಪ್ತನಾಗಿ ವಾಪಸ್ಸು ನಮ್ಮ ಕಾರಿನ ಬಳಿ ಬರುವ ಹಾದಿಯಲ್ಲಿ ಕಣ್ಣಿಗೆ ಬಿತ್ತು , ಆ ಬನವಾಸಿ ಸೂಪರ್ ಬಸ್ಸು , ಕೀಟಲೆಯ ಮನಸು ಜಾಗೃತವಾಯಿತು, ಪ್ರಕಾಶಣ್ಣ ಇಲ್ಲಿ ನೋಡಿ ಅಂದೇ '' ರಾತ್ರಿ ಡಿಮ್ ಡಿಪ್ ಕೊಡು ಮಗಾ'' ಎಂಭ ಘೋಷ ವಾಕ್ಯ , ನಮ್ಮ ಪಟ್ಟಣ ಗಳಲ್ಲಿ ಇರಬೇಕಾದ "ಡಕೋಟಾ ಎಕ್ಸ್ಪ್ರೆಸ್ " ಸ್ವಚ್ಚಂದ ಪರಿಸರ ಇರುವ ಇಲ್ಲಿಗ್ಯಾಕೆ ಬಂತೂ ಅಂತಾ ಜೋರಾಗಿ ನಕ್ಕೆವು. ಇಂತಹ ಸಮಯದಲ್ಲಿಯೂ ನಮ್ಮ ಮುಖದಲ್ಲಿ ನಗು ಅರಳಿಸಿದ ಈ ಬಸ್ಸಿಗೆ ಥ್ಯಾಂಕ್ಸ್ ಹೇಳುತ್ತಾ , ಸಾಗರ ಪಟ್ಟಣಕ್ಕೆ ವಾಪಸ್ಸು ಹೊರಟೆವು . ಸಾಗರ ತಾಲೂಕು ಕೇಂದ್ರ ,
ವರದಹಳ್ಳಿ ಇಂದ ವಾಪಸ್ಸು ಬರುವಾಗ ಸಾಗರ ಪಟ್ಟಣದಲ್ಲಿ ಇರುವ ಬ್ಲಾಗ್ ಮಿತ್ರ ಜಿತೇಂದ್ರ ಹಿಂಡುಮನೆ ಯವರನ್ನು ಭೇಟಿ ಮಾಡಿ ಖುಷಿ ಪಟ್ಟೆವು, ಅವರಿಂದ ಪ್ರಕಾಶಣ್ಣ ಹಾಗು ನನಗೆ ಮನೆಗೆ ಬರಲು ಆತ್ಮೀಯ ಆಮಂತ್ರಣ ಸಿಕ್ಕಿತು. ಅವಕಾಶ ಸಿಕ್ಕಲ್ಲಿ ಖಂಡಿತಾ ಬರುವುದಾಗಿ ಅವರಿಗೆ ತಿಳಿಸಿದೆವು .
ಸಾಗರ ಪಟ್ಟಣದಲ್ಲಿನ ಮಾರಿಕಾಂಬ ದೇಗುಲ |
ಅವರಿಂದ ಬೀಳ್ಕೊಂಡು ಸಾಗರ ಪಟ್ಟಣದ ಒಳಗೆ ನಮ್ಮ ಪಯಣ ಸಾಗಿತು. ಅರೆ ಊರಿನ ಒಳಗೆ ಕಂಡ ಒಂದು ಸುಂದರ ದೇಗುಲ ಮನ ಸೆಳೆಯಿತು, ಅಲ್ಲೇ ನಿಂತು ನೋಡಿದರೆ ಶಿರಸಿಯ ಮಾರಿಕಾಂಬಾ ದೇವಾಲಯದಂತೆ ಸಾಗರದಲ್ಲಿಯೂ ಒಂದು ಮಾರಿಕಾಂಬೆ ದೇವಾಲಯ ಇರುವುದು ತಿಳಿಯಿತು . ದೇವಾಲಯದ ಬಾಗಿಲು ಮುಚ್ಚಿದ್ದ ಕಾರಣ, ತಡಮಾಡದೆ ಕೆಳದಿಯ ಕಡೆ ಹೊರಟೆವು . ಕೆಳದಿಯ ಬಗ್ಗೆ ಹೆಚ್ಚು ಗೊತ್ತಿಲ್ಲದ ನನಗೆ ಅಲ್ಲಿ ಏನು ನೋಡಬೇಕೆಂಬ ಕಲ್ಪನೆ ಇರಲಿಲ್ಲ, ಜೊತೆಗೆ ಅಲ್ಲಿ ಇರುವುದೇನು ಎಂಬುದೂ ತಿಳಿದಿರಲಿಲ್ಲ . ಸಾಗರದಿಂದ ಆರು ಕಿ. ಮೀ . ದೂರದಲ್ಲಿ ಕೈಬೀಸಿ ಕರೆಯುತ್ತಿತ್ತು ಐತಿಹಾಸಿಕ ಕೆಳದಿ
ಕೆಳದಿಯ ಐತಿಹಾಸಿಕ ರಾಮೇಶ್ವರ ದೇವಾಲಯ |
ಕೆಳದಿಯ ನೆಲ ಸ್ಪರ್ಶ ಮಾಡುತ್ತಿದಂತೆ ಇಲ್ಲಿ ಏನೋ ಮಹತ್ವವಾದ ವಿಚಾರ ಇದೆ ಎಂದು ನನ್ನ ಮನಸು ಹೇಳುತ್ತಿತ್ತು, ಆದರೆ ಕೇಳುವುದು ಯಾರನ್ನು, ನಮಗೆ ಇಲ್ಲಿನ ವಿಚಾರ ತಿಳಿಸಲು ಯಾರೂ ಇರಲಿಲ್ಲ, ನಮ್ಮ ಎದುರಿಗೆ ಕೆಳದಿ ರಾಮೇಶ್ವರ ದೇವಾಲಯ ಎಂಬ ಬೋರ್ಡ್ ಇತ್ತು, ಆದರೆ ದೇವಾಲಯದ ರೂಪದ ಯಾವ ಕಟ್ಟಡ ಸಹ ನನಗೆ ಮೊದಲ ನೋಟಕ್ಕೆ ಕಾಣಲಿಲ್ಲ, ಸುತ್ತಲೂ ಇಟ್ಟಿಗೆಯ ಕಾಂಪೌಂಡ್ ಹಾಕಿದ್ದು ನಡುವೆ ಬಹುಶ ಹಳೆಯಕಾಲದ ಜಮೀನು ದಾರರ ಮನೆ ಅಥವಾ ಅರಮನೆ ಯಂತಹ ಒಂದು ಕಟ್ಟಡ ಕಾಣಲು ಸಿಕ್ಕಿತು, ಇದು ಕೆಳದಿ ಚೆನ್ನಮ್ಮನ ಅರಮನೆ ಇರಬಹುದೇ ಎಂಬ ಅನುಮಾನ ಬಂದಿತ್ತು,
ಇದು ದೇಗುಲವೋ ಅಥವಾ ಅರಮನೆಯೂ |
ನಂದಿ ವಾಹನ ಸಹಿತ ಹರ ದಂಪತಿಗಳು |
ಹತ್ತಿರ ಹೋಗಿ ನೋಡಿದರೆ ಒಂದು ಹಳೆಯಕಾಲದ ದೊಡ್ಡ ಮನೆಯನ್ನು ನವೀಕರಿಸಿದಂತೆ ಕಂಡಿತು, ಮನೆಯ ಮುಂದೆ ವಿಶಾಲವಾದ ಹಸಿರಿನ ಪಾರ್ಕ್, ಹತ್ತಿರ ಹೋಗುತ್ತಿದಂತೆ ಕಾಣುವ ಸುಂದರವಾದ ಮರದ ಕಂಬಗಳು, , ಒಳಗೆ ಬರುವಂತೆ ಪ್ರೇರೇಪಿಸುವ ಮೆಟ್ಟಿಲುಗಳನ್ನು ದಾಟಿ ಒಳಗೆ ಬಂದರೆ ನಿಮಗೆ ದರ್ಶನ ನೀಡಲು ನಂದಿ ವಾಹನ ಸಹಿತ ಹರ ದಂಪತಿಗಳು ಕಾಯುತ್ತಿರುವಂತೆ ಅನ್ನಿಸುತ್ತದೆ . ಸುಂದರ ಕಲಾಕೃತಿಯನ್ನು ನೋಡದೆ ನೀವು ದೇಗುಲದ ಒಳಗೆ ಪ್ರವೇಶಿಸುವುದು ಸಾಧ್ಯವೇ ಇಲ್ಲ.
ಕೆಳದಿಯ ಇತಿಹಾಸ ಹೇಳಲು ಬಂದ ದಿಟ್ಟೆ ಗುಲಾಬಿ |
ಒಳಗೆ ಪ್ರವೇಶಿಸಿದ ನಮಗೆ ಅಲ್ಲೊಂದು ಪುರಾತನ ದೇವಾಲಯ ಇರುವುದು ಕಾಣ ಸಿಕ್ಕಿತು, ಸುತ್ತಲೂ ನಿರ್ಮಾಣ ಗೊಂಡ ಒಳಜಗುಲಿ ಹೊಂದಿದ ಪ್ರದೇಶದ ನಡುವೆ ರಾಮೇಶ್ವರ ದೇಗುಲ ನಿರ್ಮಾಣ ಗೊಂಡಿದೆ . . ಪ್ರವೇಶಿಸಿದ ನಾವು, ಸುತ್ತಲೂ ನೋಡಿದೆವು, ಅಲ್ಲಿನ ವಿವರ ನೀಡಲು ಯಾರೂ ಇರಲಿಲ್ಲ, ನಮ್ಮ ಪಾಡಿಗೆ ಅಲ್ಲಿನ ದೇಗುಲದ ವಿವರಗಳನ್ನು ಫೋಟೋ ತೆಗೆಯುತ್ತಿದ್ದೆವು, ಅಲ್ಲೇ ಕಾಣ ಸಿಕ್ಕರು ಒಬ್ಬ ಹೆಂಗಸು , ಅಲ್ಲಿನ ಆವರಣವನ್ನು ಶುಚಿ ಮಾಡುತ್ತಿದ್ದರು, ಆ ಬಿಸಿಲಿನಲ್ಲಿ ಬಂದು ಫೋಟೋ ತೆಗೆಯುತ್ತಿದ್ದ ನಮ್ಮನ್ನು ಕಂಡು ಹತ್ತಿರ ಬಂದರು, ಏನಮ್ಮಾ ಇಲ್ಲಿನ ವಿವರ ನೀಡಲು ಯಾರೂ ಇಲ್ವಾ? ಅಂತಾ ವಿಚಾರಿಸಿದೆವು , ಇಲ್ಲಾ ಸಾರ್ ಇಷ್ಟು ಹೊತ್ತಿನಲ್ಲಿ ಯಾರೂ ಇರಲ್ಲಾ, ಅನ್ನುತ್ತಾ ಬನ್ನಿ ಸಾರ್ ನಾನೇ ಹೇಳ್ತೀನಿ ಅಂತಾ ತನಗೆ ತಿಳಿದಿದ್ದ ವಿಚಾರವನ್ನು ನಮಗೆ ಹೇಳಿದರು, ನಗು ನಗುತ್ತಾ ತನ್ನದೇ ರೀತಿಯಲ್ಲಿ ಅಲ್ಲಿನ ದೇಗುಲದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾ ಹೋದರು, ಪಾಪ ತಾನು ಕೆಲಸ ಮಾಡುವ ಪ್ರದೇಶವನ್ನು ನೋಡಲು ಬಂದ ಪ್ರವಾಸಿಗಳನ್ನು ನಿರಾಸೆ ಗೊಳಿಸಬಾರದು ಎಂಬ ಆ ಹೆಂಗಸಿನ ಆ ತುಡಿತಕ್ಕೆ ನಿಜಕ್ಕೂ ಅಭಿಮಾನ ಬಂತು . ಪ್ರಕಾಶಣ್ಣ ಹಾಗು ನಾನು ನಗುತ್ತಾ ಅಮ್ಮ ನಿಮ್ಮ ಹೆಸರೇನು ಅಂತಾ ಕೇಳಿದೆವು ಸಾರ್ ನಾನ್ ಇಲ್ಲೇ ಕೆಲ್ಸಾ ಮಾಡೋದು , ನನ್ ಹೆಸರು "ಗುಲಾಬಿ" ಅಂತಾ ಅಂದರು .
ಕೆಳದಿಯ ಇತಿಹಾಸ ಹೇಳಲು ಬಂದ "ಗುಲಾಬಿ " |
ಒಮ್ಮೆಲೇ ಬೆಚ್ಚಿ ಬಿದ್ದೆ , ಆ ನಿಮ್ಮ ಹೆಸರು ಏನೂ? ಅಂದೇ ಸಾರ್ "ಗುಲಾಬಿ " ಅಂತಾ ಅಂದ್ರೂ, ಜನುಮದಲ್ಲಿ ಮೊದಲ ಸಾರಿ ಒಬ್ಬ ಮಹಿಳೆ "ಗುಲಾಬಿ" ಎಂಬ ಹೆಸರನ್ನು ಇಟ್ಟುಕೊಂಡ ಬಗ್ಗೆ ಕಂಡಿದ್ದು . ಯಾವ ಯಾವ್ದೋ ಹೆಸರನ್ನು ಇಟ್ಟುಕೊಳ್ಳುವ ನಮ್ಮ ಜನ ಗುಲಾಬಿ, ತಾವರೆ, ಸಂಪಿಗೆ, ಮಲ್ಲಿಗೆ , ಜಾಜಿ, ಸೇವಂತಿಗೆ, ಮುಂತಾದ ಹೆಸರನ್ನು ಯಾಕೆ ಮರೆತಿದ್ದಾರೆ ಅನ್ನಿಸಿತು, ಈ ಮಹಿಳೆ ತನ್ನ ಹೆಸರನ್ನು "ಗುಲಾಬಿ " ಎಂದು ಇಟ್ಟುಕೊಂಡು ತನ್ನ ಮುಖದಲ್ಲಿನ ನಗುವಿನಲ್ಲಿ ನಿಜಕ್ಕೂ ಆ ಹೂವಿನ ಹೆಸರನ್ನು ಸಾರ್ಥಕ ಗೊಳಿಸಿದ್ದರು .
ಚಿತ್ರ ಕೃಪೆ ಅಂತರ್ಜಾಲ |
ಮತ್ತೊಂದು ವಿಚಾರ ಅಷ್ಟಾಗಿ ವಿಧ್ಯೆ ಇಲ್ಲದ ಈ ಹೆಂಗಸು ತಾನು ಕೆಲಸ ಮಾಡುವ ದೇವಾಲಯದ ಬಗ್ಗೆ ಅಲ್ಲಿ ಇಲ್ಲಿ ಕೇಳಿದ, ಹಾಗು ಹಿರಿಯರಿಂದ ತಿಳಿದ ವಿಚಾರಗಳನ್ನು ಸಂಕೋಚವಿಲ್ಲದೆ ಹೆಮ್ಮೆಯಿಂದ ಹೇಳುವ ವಿಧಾನ ಇಷ್ಟಾ ಆಯಿತು. ಇತಿಹಾಸ ವೆಂದರೆ ಮೂಗುಮುರಿಯುವ ಇಂದಿನ ಪೀಳಿಗೆ ಯಾವುದೇ ಪ್ರತಿಫಲದ ಆಸೆ ಇಲ್ಲದೆ ಕಾರ್ಯ ನಿರ್ವಹಿಸುವ ಇಂತಹವರನ್ನು ನೋಡಿ ಕಲಿಯಬೇಕಾಗಿದೆ . ಪ್ರೀತಿಯಿಂದ ಇತಿಹಾಸ ಹೇಳಲು ಬಂದ ನಗು ಮುಖದ "ಗುಲಾಬಿ" ಗೆ ಮನದಲ್ಲಿ ಸಲಾಂ ಹೇಳಿದೆವು .
ನಂತರ ಅವರಿಂದ ಬೀಳ್ಕೊಂಡು ದೇವಾಲಯದ ಒಳಗಡೆ ಪ್ರವೇಶಿಸಿದೆವು . ಅರೆ ಕೆಳದಿಯ ವಿಚಾರ ನಿಮಗೆ ತಿಲಿಸಲಿಲ್ಲಾ ಅಲ್ವೇ ಕ್ಷಮಿಸಿ, ಕೆಳದಿಯ ಬಗ್ಗೆ ಹೇಳದಿದ್ದರೆ ನಮಗೆ ಈ ಊರಿನ ಇತಿಹಾಸದ ಬಗ್ಗೆ ಅರಿವಾಗದು, ಮುಂದಿನ ಸಂಚಿಕೆಯಲ್ಲಿ ಕೆಳದಿಯ ಬಗ್ಗೆ ತಿಳಿಯೋಣ