ಕನ್ನಡ ತಾಯಿಯ ಮಕ್ಕಳು ನಾವು |
ಬಹಳ ದಿನ ಆಗಿತ್ತು ಬ್ಲಾಗ್ ಬರೆದು ಮತ್ತೊಂದು ಹಳೆಯ ನೆನಪಿನ ಪ್ರವಾಸ ಸರಣಿ ಬರೆಯಲು ಸಿದ್ಧವಾಗಿದೆ, ಆದರೆ ಬರೆಯಲು ಕೆಲವು ಹೆಚ್ಚಿನ ಮಾಹಿತಿ ಹುಡುಕಾಟದ ಕಾರಣ ವಿಳಂಭವಾಗಿದೆ, ಆದ್ರೆ ಅಷ್ಟರಲ್ಲಿಯೇ ಬಂದೆ ಬಿಟ್ಟಿದೆ ಕನ್ನಡ ನಾಡಿನ ಹಬ್ಬ , ಹಾಗಾಗಿ ಈ ಚಿಕ್ಕ ಕಾಲ್ಪನಿಕ ಹಾಸ್ಯ ಪ್ರಸಂಗ ನಿಮಗಾಗಿ .
ಅದೊಂದು ದಿನ ನಮ್ಮ ಮನೆಯ ಮುಂದೆ ಕೈತೋಟದಲ್ಲಿ ಕುಳಿತಿದ್ದೆ, ನಮ್ "ಪುಟ್ಮಾದ "
ಅವಸರದಲ್ಲಿ ಬಂದಾ ...!! ನಮ್ ಮಂಡ್ಯ ಕಡೆ ಹಂಗೆ ದೊಡ್ಮಾದ , ಪುಟ್ಮಾದ , ಸಣ್ಮಾದ ,
ಇತ್ಯಾದಿ ಹೆಸರು ಸಹಜ, ಜೋತೆಗೆ ಅವನ ಪಟಾಲಂ ಬೇರೆ ಬಂದಿತ್ತು ಜೊತೆಯಲ್ಲಿ, ಪಟಾಲಂ
ಹೊರಗೆ ನಿಲ್ಲಿಸಿ ನನ್ನ ಬಳಿಗೆ ನಗುತ್ತಾ ಬಂದ ,
ನಮ್ ಹೀರೋ ಇದಾನಲ್ಲಾ "ಪುಟ್ಮಾದ " ನನ್ನ ಶಿಷ್ಯ ಹೌದು ಒಂದೊಂದು ತರಗತಿಯಲ್ಲೂ ಕನಿಷ್ಠ ಎರಡು ವರ್ಷ ಓದಿದವ , ಒಂದನೇ ತರಗತಿಯಲ್ಲಿ ಇವನ ಕೈಯಲ್ಲಿ ಅ ಆ ಇ ಈ ಬರೆಸಲು ಹರಸಾಹಸ ಪಟ್ಟಿದ್ದು ನನಗೆ ಮಾತ್ರ ಗೊತ್ತಿತ್ತು, ಎಷ್ಟು ತಿದ್ದಿದರೂ ವರ್ಣ ಮಾಲೆ ಬರೆಯಲು ತಡ ಕಾಡುತ್ತಿದ್ದ, ಇನ್ನು ಇವ ಕನ್ನಡ ಬರೆದರೆ ಜಿಲೆಬಿಯಂತಹ ಕನ್ನಡ ಅಕ್ಷರಗಳು ಕಣ್ಣಲ್ಲಿ ನೀರು ಹರಿಸುತ್ತಿದ್ದವು, ಏಳನೆತರಗತಿಯಲ್ಲಿ, ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಡುಮ್ಕಿ , ಹತ್ತನೇ ತರಗತಿಯಲ್ಲಿ ಕನ್ನಡ ಭಾಷೆ ಯಲ್ಲಿ ಎಗಲಾರದೆ ಓದಿನ ಸಹವಾಸ ಬಿಟ್ಟ ಪುಣ್ಯಾತ್ಮ, ಕೆಲ ಕಾಲ ಯಾವ ಯಾವುದೋ ಸಂಘ ಕಟ್ಟಿ , ಓಡಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಸ್ಯನಾಗಿ, ಕನ್ನಡ ಸಂಘ ಕಟ್ಟಿ ಇಂದು ನಮ್ "ದುರಾಸೆ ಪುರ" ಪಟ್ಟಣದಲ್ಲಿ ಲೀಡರ್ ಆಗಿ ಓಡಾಡುತ್ತಿದ್ದವ , ..... ಇಂದು ನಮ್ಮ ಮನೆಗೆ ಬಂದಿದ್ದ
ಪುಟ್ಮಾದ :- ನಮಸ್ಕಾರಾ ಸಾ , ಸಂದಾಕಿದ್ದೀರೋ ...??
ನಾನು :- ಒಹ್ , ನಮ್ "ಪುಟ್ಮಾದ " ಬಾರಯ್ಯಾ , ಬಾ ಬಾ ಏನ್ ವಿಶೇಷ ಈ ಕಡೆ ಬಂದಿದ್ದು
,
ಪುಟ್ಮಾದ:- ಏನಿಲ್ಲಾ ಸಾ , ಸ್ಯಾನೆ [ ಬಹಳ ] ದಿನಾ ಆಗಿತ್ತು ನಿಮ್ ನೋಡಿ ಅದ್ಕೆ ಬಂದೆ .
ನಾನು :- ಏನಪ್ಪಾ ವಿಶೇಷ , ನನ್ನ ನೋಡೋ ಅಂತಹ ಕೆಲ್ಸಾ ಏನಿದೆ ??
ಪುಟ್ಮಾದ :- ಹೇ ಹೇ ಹೇ ಏನ್ ಸಾ ಅಂಗಂದ್ರೆ ನವಂಬರ್ ಬತ್ತಾ ಅದೇ [ ಬರ್ತಾ ಇದೆ ] ನಮ್ "ದುರಾಸೆಪುರ" ದಾಗೆ ರಾಜ್ಯೋಸ್ತವ ಮಾಡುಮಾ ಅಂತಾ , ನಿಮಗೆ ಗೊತ್ತಲ್ಲಾ ನಾಮ್ ಎಂಗೆ ಮಾಡ್ತಿಮೀ ಅಂತಾ , ಈ ಸರಿ ಇನ್ನೂ ಜೋರಾಗಿ ಮಾಡುಮಾ ಅಂತಾ .
ನಾನು :- ಒಮ್ಮೆಗೆ ಬೆಚ್ಚಿ ಆ ಅಂದೇ ,....!!! [ಕಳೆದ ವರ್ಷ ಇವರು ಮಾಡಿದ ಕನ್ನಡ ರಾಜ್ಯೋತ್ಸವದ ಅವಾಂತರ ಕಾಡಿತ್ತು ]
ಪುಟ್ಮಾದ :- ಯಾಕ್ ಸಾ ..... ಒಂತರಾ ಮೊಖ ಮಾಡ್ಕಂದ್ರೀ [ ಮುಖ ಮಾಡಿ ಕೊಂಡಿರಿ ]
ನಾನು :- ನಿಟ್ಟುಸಿರು ಬಿಡುತ್ತಾ ... "ಹೋಗ್ಲಿ ಬಿಡಪ್ಪಾ ಅದೆಲ್ಲಾ ಯಾಕೀಗ, ಅದೇನ್ ವಿಷ್ಯ ಹೇಳು" ಅಂದೇ
ಪುಟ್ಮಾದ :- ಸಾ ಈ ಸರ್ತಿ ನೋಡಿ ಸಾ ಎಡ್ಲಕ್ಸ [ ಎರಡು ಲಕ್ಷ ] ಕರ್ಚು ಸಾ .... ರಾಜ್ಯೋಸ್ತವಕ್ಕೆ ನಿಮ್ ಸಹಕಾರ ಬೇಕೂ ಅಂದಾ .
ನಾನು :- ಏನ್ ಸಹಕಾರ ಬೇಕಪ್ಪಾ ನಾನೊಬ್ಬ ಬಡ ರಿಟೈರ್ಡ್ ಮೇಷ್ಟ್ರು , ನಂ ಮಾತು ಯಾರ್ ಕೇಳ್ತಾರೆ ,
ಪುಟ್ಮಾದ:- ಸಾ ಎನ್ಸಾ ಅಂಗಂದ್ರೆ ಈ ಊರಲ್ಲಿ ನಿಮ್ ತಾವು ಇದ್ಯಾ ಕಲ್ತವ್ರು ಏನೇನ್ ಆಗವ್ರೆ
ನಾನು :- ಅಯ್ಯೋ ಅದೆಲ್ಲಾ ಯಾಕಪ್ಪಾ ...?
ಪುಟ್ಮಾದ :- ಏನ್ ಸಾ ಅಂಗಂದ್ರೆ , ಬಸುರಾಜ ಅದೇ ಕಪ್ಪೆ ಪಕ್ಸದ ಪ್ರೆಸಿಡೆಂಟು , ಅದೇ ಮೊನ್ನೆ ಕೋರ್ಟ್ನಲ್ಲಿ ಕೇಸ್ ಇರ್ನಿಲ್ವೆ ಸಾ , ಅದೇ ಆ ದೊಡ್ಡ ಬಂಗಲೆ ಅವ್ನು ನಿಮ್ ಶಿಷ್ಯ, ಆಮೇಕೆ ಆ ಸರಾಯಿ ಕಂತ್ರಾಟು ಬಸ್ನಿಂಗ , ಆವಾ ನಿಮ್ ಶಿಷ್ಯ , ಆಮೇಕೆ ಆ ಕಡೆ ಹಟ್ಟಿ [ ಕೊನೆ ಮನೆ ] ಯಜಮಾನ ಸಂಭು ಅದೇಯ ಸಾ ಮೊನ್ನೆ ತಾನೇ ಜೈಲಿಂದ ಬಂದ್ನಲ್ಲಾ ಅವ್ನು ನಿಮ್ ಶಿಷ್ಯ ...ಇಂಗೆ ಹೇಳ್ತಾಹೋದ
ನಾನು :- ಅಯ್ಯ ಪುಟ್ಮಾದ ಯಾಕಪ್ಪಾ ಬರಿ ಇಂತಹವರ ಹೆಸರನ್ನು ಹೇಳುತ್ತೀಯ .... ಆ ಶಂಕರ್, ತಹಸಿಲ್ದಾರ, ಆ ನಾಗರಾಜ ಪ್ರೋಫೆಸರು, ಆ ಉಷಾ ಡಾಕ್ಟರು, ಆ ಲೋಕೇಶ ಇಂಜಿನಿಯರು ಇವರೆಲ್ಲಾ ನಂ ಶಿಷ್ಯರು ಅಲ್ವೇನಪ್ಪಾ ,
ಪುಟ್ಮಾದ :- ಅಯ್ಯೋ ತಗಲಿ ಸಾ ನೀಮು ಯೋಳ್ದವ್ರು ಎಲ್ಲವ್ರೆ ಊರ್ನಾಗೆ , ಎಲ್ಲಾ ದೆಸಾಂತ್ರ ಹೋಗವೆ,
ನಾನು :- ಆದರೇನಂತೆ ಅವರೆಲ್ಲಾ ಈ ಊರಿನ ಜನ ಅಲ್ವೇ
ಪುಟ್ಮಾದ :-ಅಯ್ಯೋ ಅವೆನ್ ಬುಡಿ ಸಾ ಎಷ್ಟು ಕಾಸಿದ್ರೇನು ನಾಯಿ ಆಲಿದ್ದಂಗೆ , ಊರ್ಗೆನ್ ಉಪಯೋಗ ..
ನಾನು :- ಯಾಕಪ್ಪಾ ಅಂಗೆ ಹೇಳ್ತೀಯಾ
ಪುಟ್ಮಾದ :- ಅಯ್ಯೋ ಓದೋರ್ಸಾ ಓಗಿದ್ದೆ ಎಲ್ಲರ ತವ್ಕೆ ,ರಾಜ್ಯೋಸ್ತವ ಮಾಡ್ತೀನಿ ಅಂದೇ ಆದ್ರೆ ಮುದೆವಿಗೊಳು ಕಾಸು
ಕೊಡ್ನಿಲ್ಲಾ
ನಾನು :- ಅಲ್ಲಪ್ಪಾ ಅವರೆಲ್ಲಾ ಊರಿಗೆ ಒಳ್ಳೆಯದಾಗಲಿ ಅಂತಾ ಬಹಳ ಕೆಲ್ಸಾ ಮಾಡುತ್ತಿದ್ದಾರೆ ಅಂತಾ ಕೇಳ್ದೆ .
ಪುಟ್ಮಾದ :- ಓ ಬುಡಿಸಾ ಆ ಮಾತಾ , ಈಗ ಏಡ್ ಲಕ್ಸಾ [ ಎರಡು ಲಷ ] ದುಡ್ಡು ಆಯ್ತದೆ ಉಸ್ತವ ಎಂಗೆ ಮಾಡುಮ ಹೇಳಿ
ನಾನು :- ಎರಡು ಲಕ್ಷವೆ, ಒಳ್ಳೆದಾಯ್ತು, ಹೇಗೂ ನಮ್ ಕನ್ನಡ ಶಾಲೆ ಮಕ್ಕಳಿಗೆ ಆಟದ ಮೈದಾನ ಇಲ್ಲಾ ಅದನ್ನು ಮಾಡಿಸೋಣ ಬಿಡು .
ಪುಟ್ಮಾದ :- ಏ ಬ್ಯಾರೆ ಯೋಳಿ ಸಾ
ನಾನು :- ಹೋಗ್ಲಿ ಮಕ್ಕಳಿಗೆ ಅನುಕೂಲ ಆಗುವ ಹಾಗೆ ಉಪಗ್ರಹ ಶಿಕ್ಷಣದ ಬಗ್ಗೆ ಡಿಶ್ ಹಾಕಿಸೋಣ ಮಕ್ಕಳಿಗೆ , ಎಲ್ಲರಿಗೂ ಸಂತೋಷ ಆಗುತ್ತೆ
ಪುಟ್ಮಾದ :- ಏನ್ ಸಾ ನಮ್ ಮೇಷ್ಟ್ರೂ ಅಂತಾ ಮನೆತಕೆ ಬಂದ್ರೆ ಹಿಂಗೆಲ್ಲಾ ಮಾತಾಡ್ತೀರ , ಬ್ಯಾರೆ ಯೋಳಿ ಕೊನೆದಾಗಿ,
ನಾನು :- ಅದು ಬಿಟ್ರೆ ಏನಪಾ ಮಾಡೋದು, ಊರಿಗೆ ಸಮೀಪದ ಕುಡಿಯುವ ನೀರಿನ ಕೆರೆ ಹೂಳು ತೆಗೆಸೋಣ ಆಗುತ್ತಾ
ಪುಟ್ಮಾದ :- ಎ ಯಾವ್ ಸೀಮೆ ಮಾತು ಓಗಿ ಸಾ, ನಿಮ್ ಮಾತು ಒಪ್ಪಾಕಿಲ್ಲಾ ನಮ್ ಹೈಕ್ಳು , ಅದ್ಕೆ ಬ್ಯಾರೆ ಕಾರ್ಯಕ್ರಮ ಹಾಕಂತೀವಿ ಬುಡಿ
ನಾನು :- ಅಲ್ಲಾ ಕಣಪ್ಪಾ ಹಾಗಿದ್ರೆ ನಂ ಹತ್ರಾ ಯಾಕ್ ಬಂದೆ ನಿನ್ ಇಷ್ಟಾ ಬಂದ ಹಾಗೆ ಮಾಡ್ಕೋ ಹೋಗು , ನಂಗೆ ಯಾಕೆ ಹಿಂಸೆ ಕೊಡ್ತೀಯ
ಪುಟ್ಮಾದ :- ಅಲ್ಲಾ ಸಾ ನೀವು ನಮ್ ಜೊತೆ ಬರ್ದೇ ಇದ್ರೆ ರಾಜ್ಯೋಸ್ತವಕ್ಕೆ ಭಾಸಣ ಮಾಡೋರು ಯಾರು , ಅದ್ಕೆ ನಮ್ ಜೊತೆ ಇರಿ ಉಳಿದದ್ದು ನಾವ್ ಮಾಡ್ಕತೀವಿ .
ನಾನು :- ಅಲ್ಲಾ ಕಣಯ್ಯ ಪ್ರತೀವರ್ಷ ನಾನೇ ಭಾಷಣ ಮಾಡಿದ್ರೆ ಏನಯ್ಯ ಚೆನ್ನಾಗಿರುತ್ತೆ, ಬ್ಯಾರೆಯವ್ರ್ ಕರ್ಸಿ ಭಾಷಣ ಮಾಡಿಸ್ರಪ್ಪಾ
ಪುಟ್ಮಾದ :-ಅಯ್ಯೋ ಅದೆಲ್ಲಾ ಆದಾತೆ , ಅದ್ಕೆ ನೀಮೆ ಸರಿ,
ನಾನು :- ಏನಪ್ಪಾ ದುಡ್ಡು ಎರಡು ಲಕ್ಷ ಅಂತೀರಾ , ಬೇರೆಯವರನ್ನು ಕರೆಸಿ ಭಾಷಣಕ್ಕೆ ಅಂದ್ರೆ ನೀವೇ ಸಾಕು ಅಂತೀರಾ , ಏನಿದು ಕಥೆ
ಪುಟ್ಮಾದ :- ಬಸುರಾಜ ಅದೇ ಕಪ್ಪೆ ಪಕ್ಸದ ಪ್ರೆಸಿಡೆಂಟು , ಅವ್ರಲ್ಲಾ ಅವ್ರು ಚಿತ್ರ ತಾರೆ ಮಿಂಚು ಜೊತೆ ಪೋಟೋ ತೆಗೆಸ್ಕಾಬೇಕಂತೆ ಅದ್ಕೆ ಅವರ್ನ ಕರ್ಸೀ ಅಂತಾ ಜೊತೆಗೆ ಆರ್ಕೆಷ್ಟ್ರ ಖರ್ಚು ಅಂತಾ ಐವತ್ತು ಸಾವ್ರಾ ಕೊಟ್ಟವ್ರೆ,
ನಾನು :- ಅದೇನಪ್ಪಾ ಬಸುರಾಜಂಗೆ ಆ ಖಯಾಲಿ,
ಪುಟ್ಮಾದ :- ಅದೇ ಸಾ ಮುಂದಿನ ಸಾರಿ ಎಲಕ್ಸನ್ ಬತ್ತುದೆ, ಆ ಯಮ್ಮ ಕಪ್ಪೆ ಪಾರ್ಟಿ ಗೆ ಬಂದಾಳಂತೆ , ನಮ್ ಕನ್ನಡ್ ದವಳೇ ಸಾ, ಅವಳ ಮಾತು ಆ ಪಕ್ಸದಲ್ಲಿ ನಡ್ಡದಂತೆ ಅದ್ಕೆ ಈಗಲೇ ಸರಿ ಮಾಡ್ಕಲಕ್ಕೆ ಒಂಟವ್ರೆ .
ನಾನು :- ಉಳಿಕೆ ಹಣ ಎಲ್ಲಿಂದ ಬರುತ್ತೆ ??
ಪುಟ್ಮಾದ :- ಸರಾಯಿ ಕಂತ್ರಾಟು ಬಸ್ನಿಂಗ ಸಾಮಿಯಾನ , ಊಟ ಅಂತಾ ಐವತ್ತು ಸಾವ್ರ ಕೊಟ್ಟು ಹಾಗು ನಮ್ ಹೈಕಳಿಗೆ ಯವಸ್ತೆ ಮಾಡ್ತೀನಿ ಅಂದವ್ರೆ
ನಾನು :- ಒಹ್ ಪರವಾಗಿಲ್ಲಾ , ಅದೇನದು ... ಅದೇನದು ವ್ಯವಸ್ತೆ ,
ಪುಟ್ಮಾದ :- ಅಯ್ಯೋ ಅದೆಲ್ಲಾ ಬ್ಯಾಡ ಬುಡೀ ಸಾ , ಮೆರವಣಿಗೆಯಲ್ಲಿ ವಾಧ್ಯ , ತಮಟೆ, ಬ್ಯಾಂಡು , ಕುಣಿತಾ ಮಾಡೋರ್ಗೆ ಬೇಕಾಯ್ತದೆ
ನಾನು :- ಆಮೇಲೆ , ಉಳಿದ ಹಣ
ಪುಟ್ಮಾದ :-ಕಡೆ ಹಟ್ಟಿ [ ಕೊನೆ ಮನೆ ] ಯಜಮಾನ ಸಂಭು ಯಪ್ಪತು ಸಾವ್ರಾ ಕೊಟ್ಟವ್ರೆ , ಅವರದೆ ಅಧ್ಯಕ್ಸತೆ ಸಾ, ಉಳಿದದ್ದು ನಮ್ ಹೈಕ್ಳೂ ಮಾಡ್ಕತಾರೆ ಕಲೆಕ್ಸನ್ನು ಅದು ಒಂದು ಇಪ್ಪತೈದು ಆಯ್ತದೆ , ಎಲ್ಲಾ ಒಟ್ಟು ಏಡು ಲಕ್ಸ ಆಯ್ತದೆ
ನಾನು :-ಅದ್ಸರಿ ಕಾರ್ಯಕ್ರಮ ಏನಪ್ಪಾ,
ಪುಟ್ಮಾದ :- ಅದೇ ಸಾ ಬೆಳಿಗ್ಗೆ ಆ ಬಸ್ ಸ್ಟಾಂಡ್ ತಾವು ಸೇರೋದು, ಇಪ್ಪತ್ತು ಆಟೋ ರಿಕ್ಸ, ಎತ್ತಿನಗಾಡಿ ಅಲಂಕಾರ , ಸೀನಪ್ಪನ ಲಾರಿ ಮ್ಯಾಲೆ ಕನ್ನಡ ಮಾತೆ ಪೋಟೋ ಇಟ್ಟು ಮೆರವಣಿಗೆ, ಇಸ್ಕೂಲ್ ಹೈಕ್ಳಿಂದ ಕಾರ್ಯಕ್ರಮ, ಆಮ್ಯಾಕೆ ಅವುಕ್ಕೆ ಮಿಟಾಯಿ , ಹುಳಿಯನ್ನ ಮೊಸರನ್ನ, ಕೊಟ್ಟು ಕಳ್ಸೋದು, ಸಂಜೆ ಸಿದ್ದಪ್ಪನವರ ಆಲೆಮನೆ ಮೈದಾನ ದಲ್ಲಿ ಇರುವ ಪೆಂಡಾಲಿಗೆ ಓಗಿ ಸಂಜೆ ಕಾರ್ಯಕ್ರಮ ಸುರು ಸಾ,
ನಾನು :- ಸಂಜೆ ಏನಪ್ಪಾ ..??
ಪುಟ್ಮಾದ :- ಸಂಜೆ ಚಿತ್ರ ತಾರೆ ಮಿಂಚು ಬತ್ತಾರೆ ... ಸಂಜೆ ಅವರ ಮೆರವಣಿಗೆ ಜೊತೆಗೆ ಆರ್ಕೆಷ್ಟ್ರ ಅದೇ , ಇನ್ನು ನಮ್ ಊರಿನ ಗಣ್ಯರಿಗೆ ಸನ್ಮಾನ ಅದೇ ಸಾ
ನಾನು :- ಸನ್ಮಾನ ಯಾರಿಗಪ್ಪಾ
ಪುಟ್ಮಾದ :- ಅದೇ ಸಾ ಕಾರ್ಯಕ್ರಮಕ್ಕೆ ದುಡ್ಡು ಕೊಟ್ಟವ್ರಲ್ಲಾ ಅವ್ರ್ಗೆ ಜೊತೆಗೆ ನಿಮಗೆ
ನಾನು :- ನನಗ್ಯಾಕೆ ಸನ್ಮಾನ , ದುಡ್ಡು ಕೊಟ್ಟಿಲ್ವಲ್ಲಾ , ನನಗೆ ಬೇಡ ಕಣಪ್ಪಾ ದಯವಿಟ್ಟು
ಪುಟ್ಮಾದ :-ಅಯ್ಯೋ ಅಂಗಂದ್ರೆ ಯಂಗೆ ಸಾ ನಿಮ್ತಾವು ಬೋ ಕೆಲ್ಸಾ ಅದೇ , ಆಮೇಕೆ ಎಲ್ಲಾ ಯಕ್ಕುಟ್ ಒಯ್ತದೆ ಅಷ್ಟೇಯ , ಸಾ ನೇಮು , ಆ ಮಿಂಚು ಮೇಡಂ ಅವ್ರಲ್ಲಾ ಅವರಿಗೆ ರಾಜ್ಯೋಸ್ತವ ಭಾಷಣ ಕನ್ನಡದಂತೆ ಇಂಗ್ಲೀಶ್ ನಲ್ಲಿ ಬರೆದು ಕೊಡ್ಬೇಕು . ಆಮೆಗೆ ಕೈ ಎತ್ತಿರೀ ಜೋಕೆ
ನಾನು :- ಇದ್ಯಾವ ಕರ್ಮನಯ್ಯ ನನಗೆ ,
ಪುಟ್ಮಾದ :-ಸಾ ನಮ್ ಊರು ನಿಮ್ಮ ಇಷ್ತ್ವರ್ಸ ಎಷ್ಟು ಮರ್ವಾದೆ ಯಿಂದ ಕಂಡದೆ ಇಷ್ಟು ಆಗಲ್ವಾ ನಿಮ್ ಕೈಲಿ
ನಾನು :- ಮುಂದಿನ ಅನಾಹುತ ನೆನೆದು ಒಪ್ಪಿಕೊಂಡೆ , ಆಯ್ತು ಬಿಡಪ್ಪಾ
ಪುಟ್ಮಾದ :- ಸಾ ನಿಮಗೆ ಸಾಲು ೨೦೦ ರುಪಾಯ್ದು ಸಾಕು ಆಲ್ವಾ ಸಾ, ಸನ್ಮಾನಕ್ಕೆ
ನಾನು :- ಉಗುಳು ನುಂಗುತ್ತಾ ಏ ಜಾಸ್ತಿಯಾತು ಬಿಡಪ್ಪಾ
ನವೆಂಬರ್ ಒಂದರ ರಾಜ್ಯೋತ್ಸವ ಶುರು ಆಯ್ತು ಊರಲ್ಲಿ, ಮುಂಜಾನೆಯೇ ಮೆರವಣಿಗೆ ಹೊಂಟಿತು ತಾಯಿ ಭುವನೇಶ್ವರಿಯ ಮೆರವಣಿಗೆ, ಭರ್ಜರಿ ಯಾಗಿತ್ತು, ಶಾಲಾ ಮಕ್ಕಳ ಕಾರ್ಯಕ್ರಮ, ಸಂಜೆ ಕನ್ನದಿಗಳೇ ಆಗಿದ್ದ ಸಿನಿಮಾ ತಾರೆ ಮಿಂಚು ಮೆರವಣಿಗೆ , ಆರ್ಕೆಷ್ಟ್ರ ನಡೆಯಿತು, ಭಾಷಣದ ಸರದಿ ಬಂದು ಸಿನಿಮಾ ತಾರೆ ಮಿಂಚು ನಾನು ಇಂಗ್ಲೀಶ್ ನಲ್ಲಿ ಬರೆದು ಕೊಟ್ಟ ಕನ್ನಡ ಭಾಷಣವನ್ನು ಓದಿದರೂ, ಊರಿಗೆ ಊರೆ ಕನ್ನಡ ಭಾಷಣ ಕೇಳಿ ಕುಣಿಯಿತು . ನಂತರ ನನಗೆ ಸನ್ಮಾನ ನನ್ನ ಭಾಷಣ ಇತ್ತು, ಆದರೆ ನನ್ನ ಭಾಷಣ ಮುಗಿದರೂ ಚಪ್ಪಾಳೆಯ ಸದ್ದೇ ಬರಲಿಲ್ಲ. ಉಳಿದವರು ಮಾತನಾಡಿ ಆರ್ಕೆಷ್ಟ್ರ ಹಾಡುಗಳು ಎಲ್ಲರನ್ನೂ ರಂಜಿಸಿದವು. ಮಾರನೆಯ ದಿನ ಪೇಪರ್ಗಳಲ್ಲಿ ತಾರೆ ಮಿಂಚು ಮಾಡಿದ ಕನ್ನಡ ಭಾಷಣದ ಬಗ್ಗೆ ಪ್ರಶಂಸೆ ಬಂದಿತ್ತು, ಜೊತೆಗೆ ಚಿತ್ರಬೇರೆ ಬಂದಿತ್ತು, ಅದರಲ್ಲಿ ನಮ್ ಪುಟ್ಮಾದ ಹಾಗು ಸಿನಿಮಾ ತಾರೆ ಮಿಂಚು ಇಬ್ಬರೂ ಮಿಂಚುತ್ತಿದ್ದರು ನನ್ನ ಭಾಷಣ ಅಪ್ಪಿ ತಪ್ಪಿಯೂ ಉಲ್ಲೇಖವಾಗಿರಲಿಲ್ಲ,
ಕಾರ್ಯಕ್ರಮ ಮುಗಿದ ಒಂದುವಾರಕ್ಕೆ ಪುಟ್ಮಾದ ಮನೆಗೆ ಬಂದಾ , ಸಾ ಬನ್ನಿ ಸಾ ಸೆಕೆಂಡ್ ಯಾಂಡ್ ಕಾರ್ ತಗಂದೆ ಆಶಿರ್ವಾದ ಮಾಡಿ ಸಾ ಅಂದಾ ................... ಕಾರಿನ ಮೇಲೆ ಜೈ ಕನ್ನಡಾಂಬೆ ಎಂದಿತ್ತು .
[ ಪ್ರೀತಿಯ ಗೆಳೆಯರೇ ಇದೊಂದು ಹಾಸ್ಯಕ್ಕಾಗಿ ಬರೆದ ಕಥೆ ಅಷ್ಟೇ ಯಾರನ್ನು ಅವಹೇಳನ ಮಾಡುವ ಉದ್ದೇಶವಿಲ್ಲ ]
ತನು ಕನ್ನಡ ಮನ ಕನ್ನಡ ಉಸಿರು ಕನ್ನಡ ವಾಗಿರಲಿ ಗೆಳೆಯರೇ ನಿಮಗೆಲ್ಲಾ ಕನ್ನಡ ಹಬ್ಬದ ಶುಭಾಶಯಗಳು , ಬನ್ನಿ ಕನ್ನಡಿಗರಾಗೋಣ.