| ಜ್ಞಾನದಲ್ಲಿ ದೇವರ ಕಂಡ ಕನಕ ದಾಸರು |
ಬಾಡ ದಲ್ಲಿನ ವೃತ್ತದಲ್ಲಿ ಕುಳಿತಿದ್ದ ಕನಕದಾಸರ ಪ್ರತಿಮೆ "ನೀ ಮಾಯೆಯೊಳಗೋ ಮಾಯೇಯೋಳು ನೀನೋ " ಎಂದು ಹಾಡುವ ಬದಲಾಗಿ "ನೀ ಅಜ್ಞಾನ ದೊಳಗೋ ಅಜ್ಞಾನ ದೊಳು ನೀನೋ" ಎಂದು ಹಾಡಿದಂತೆ ಅನ್ನಿಸಿ ಹೆಚ್ಚಿನ ಸಮಯ ವ್ಯರ್ಥ ಮಾಡಬಾರದೆಂದು ಕಾಗಿನೆಲೆ ನೋಡಲು ಹಾವೇರಿಯ ಕಡೆ ಪಯಣ ಮುಂದುವರೆಸಿದೆವು , ಹೊಟ್ಟೆ ಚುರುಗುಟ್ಟುತ್ತಿತ್ತು , ಕಾರು ಹಾವೇರಿ ಪ್ರವೇಶ ಮಾಡಿತ್ತು ,
![]() |
| ಹಾವೇರಿಯಲ್ಲಿ ಒಂದು ಒಳ್ಳೆಯ ಹೋಟೆಲ್ |
ಹಾವೇರಿ ಪಟ್ಟಣದೊಳಗೆ ನಮಗೆ ಮೊದಲ ಪ್ರವೇಶ , ಆ ಊರಿನ ಬಗ್ಗೆ ಹೆಚ್ಚು ತಿಳುವಳಿಕೆ ಇರಲಿಲ್ಲ,
ಯಾವುದಾದರೂ ಒಳ್ಳೆ ಹೋಟೆಲ್ ಸಿಕ್ಕಿದರೆ ಮೊದಲು ಊಟ ಮಾಡೋಣಾ ಅಂತಾ ಅನ್ನಿಸಿತು. ಹಾವೇರಿಗೆ ಪ್ರವೇಶಿಸುತ್ತಿದ್ದಂತೆ ಕಂಡಿತು ಒಂದು ಭವ್ಯ ಕಟ್ಟಡದಲ್ಲಿ ಮಿಂಚುತ್ತಿದ್ದ ಹೋಟೆಲ್ ಒಂದಕ್ಕೆ ನಮ್ಮ ಪ್ರವೇಶ , ಅಚ್ಚರಿ ಎಂದರೆ ಒಬ್ಬರೂ ಗ್ರಾಹಕರು ಇರಲಿಲ್ಲ, ಪ್ರಕಾಶಣ್ಣ ಹೇಳಿದ್ರೂ ಕೇಳದೆ ಬನ್ನಿ ಪ್ರಕಾಶಣ್ಣ ಜನ ಜಾಸ್ತಿ ಇಲ್ಲಾ ಆರಾಮವಾಗಿ ಕುಳಿತು ಹೊಟ್ಟೆ ತುಂಬಾ ಊಟ ಮಾಡೋಣ ಅಂತಾ ಆ ಹೋಟೆಲ್ ನೊಳಗೆ ಪ್ರವೇಶಿಸಿ ಮೂರು ಊಟಕ್ಕೆ ಆರ್ಡರ್ ಮಾಡಿ ಕೈತೊಳೆಯಲು ಹೊರಟೆ ಪ್ರಕಾಶಣ್ಣ ಮೊದಲು ಹೋಗಿದ್ದವರು ಓದಿ ಬಂದು ಬಾಲಣ್ಣ ಇಲ್ಲಿ ತಿಂದೆ ಇದ್ರೂ ಪರವಾಗಿಲ್ಲ ಮೊದಲು ಆರ್ಡರ್ ಕ್ಯಾನ್ಸಲ್ ಮಾಡಿ ಅಂತಾ ಒಂದೇ ಉಸಿರಿಗೆ ಹೇಳಿದ್ರೂ , ಅರೆ ಇದೇನಿದೂ ಅಂತಾ ಕೈತೊಳೆಯಲು ಹೋದ್ರೆ ಆ ವಾಶ್ ಬೇಸಿನ್ ನೋಡಿ ಅಲ್ಲಿನ ದರ್ಶನ ಕಂಡು ಸುಸ್ತಾದೆ , ಅತ್ಯಂತ ಕೊಳಕು ವಾಶ್ ಬೇಸಿನ್, ಊಟಮಾಡಲು ಅಸಹ್ಯ ಉಂಟುಮಾಡುವಂತಹ ದರ್ಶನ ನೀಡಿತ್ತು, ಈ ಹೋಟೆಲ್ ಹೊರನೋಟಕ್ಕೆ ಥಳಕು ಒಳಗಡೆ ಗಬ್ಬು ನಾರುವ ಕೊಳಕು ಎಂಬುದು ಅರ್ಥ ಆಗಿತ್ತು, ಈ ಗಡಿಬಿಡಿಯಲ್ಲಿ ಆ ಹೋಟೆಲ್ ಹೆಸರನ್ನು ನೋಡೋದೇ ಮರೆತಿದ್ದೆ . ಮೊದಲೇ ಹೊಟ್ಟೆ ಹಸಿವು ತಿನ್ನಲು ಹೋದ್ರೆ ಇಂತಹ ಹೋಟೆಲ್ ಗಳ ನರಕ ದರ್ಶನ , ನಮ್ಮ ಪ್ರವಾಸಕ್ಕೆ ಹೊಸ ಅನುಭವ ಸೇರಿಸಿತ್ತು, ಹಸಿವಿನ ಆತುರದಲ್ಲಿ ಮಾಡಿಕೊಂಡಿದ್ದ ನಮ್ಮ ದಡ್ಡತನಕ್ಕೆ ಪ್ರಕಾಶಣ್ಣ ಹಾಗು ನಾನು ಪರಸ್ಪರ ಮುಖ ನೋಡಿಕೊಂಡು ನಕ್ಕು ಮುಂದೆ ಸಾಗಿದೆವು , ಸ್ಥಳಿಯರ ಶಿಫಾರಸ್ಸಿನಂತೆ ಹಾವೇರಿ ಪಟ್ಟಣದೊಳಗೆ ಇದ್ದ ಹೋಟೆಲ್ ಶಿವ ಶಕ್ತಿ ಯನ್ನು ಹೊಕ್ಕೆವು . ಇದ್ದದ್ದರಲ್ಲಿ ನಮ್ಮ ಹಸಿವಿನ ಸಂಕಟಕ್ಕೆ ಇದ್ದದ್ದರಲ್ಲೇ ಶುಚಿಯಾದ ರುಚಿಯಾದ ಊಟ ಸಾಂತ್ವನ ಸಾಂತ್ವನ ನೀಡಿತ್ತು .
![]() |
| ಪ್ರಕಾಶಣ್ಣ ಹಾಸ್ಯಕ್ಕೆ ನೆತ್ತಿ ಹತ್ತಿತ್ತು ನನಗೆ |
ಹೋಟೆಲ್ ಶಿವಶಕ್ತಿಯಲ್ಲಿ ಊಟ ಮಾಡುತ್ತಾ , ಸಮಾಧಾನ ಪಟ್ಟು ಕೊಂಡೆವು , ಇನ್ನೇನು ಊಟ ಮುಗಿಸಿ ನೀರು ಕುಡಿಯುವ ವೇಳೆ , ಪ್ರಕಾಶ್ ಹೆಗ್ಡೆ ಹಾಸ್ಯದ ಬಾಣ ಬಿಟ್ಟರು , ಬಾಲಣ್ಣ ಒಂದು ವೇಳೆ ಅದೇ ಕೊಳಕಿನ ವಾಶ್ ಬೇಸಿನ್ ನಲ್ಲಿ ಕೈತೊಳೆದು ಅದೇ ಹೋಟೆಲ್ ಊಟ ಮಾಡಿದ್ರೆ ನಮ್ಮ ಮುಖ ಹೇಗೆ ಇರ್ತಿತ್ತು ..? ನೀರು ಕುಡಿಯುತ್ತಿದ್ದ ನನಗೆ ಈ ಹಾಸ್ಯಕ್ಕೆ ನಗು ತಡೆಯಲಾಗಲಿಲ್ಲ, ಗೊಳ್ ಅಂತಾ ನಕ್ಕೆ ಕುಡಿಯುತ್ತಿದ್ದ ನೀರು ಚಿಲುಮೆ ಯಂತೆ ಉಕ್ಕಿ ಮೈಮೇಲೆ ಚೆಲ್ಲಿತು , ಅದೇ ಸಮಯಕ್ಕೆ ನನ್ನ ಶಿಷ್ಯ ನನಗೆ ಗೊತ್ತಿಲ್ಲದಂತೆ ಚಿತ್ರ ತೆಗೆದು ಆ ಸನ್ನಿವೇಶ ದ ದರ್ಶನ ಮಾಡಿಸಿದ . ಅ ಕೊಳಕು ಹೋಟೆಲ್ ನಲ್ಲಿನ ನಮ್ಮ ಎಡವಟ್ಟು ಪ್ರಸಂಗ ನೆನೆ ನೆನೆದು ಮಸಾರೆ ನಕ್ಕು ಬಿಟ್ಟೆವು . ರುಚಿಯಾದ ಊಟದ ಜೊತೆ ಈ ಹಾಸ್ಯದ ರಸಾಯನ ನಮ್ಮ ಪ್ರಯಾಣದ ಆಯಾಸ ಪರಿಹಾರ ಮಾಡಿತ್ತು .
![]() |
| ಹಾವೇರಿಯ ವಿಶೇಷದಲ್ಲಿ ಈ ಪಾನ್ ಅಂಗಡಿ ಸಹ ಒಂದು |
ಹೊಟ್ಟೆ ತುಂಬಾ ಊಟ ಮಾಡಿ ಹೊರಗೆ ಬಂದ ನಮಗೆ ಪಕ್ಕದಲ್ಲೇ ಕಂಡಿದ್ದು ಈ ಬೀಡಾ ಶಾಪ್ , ಎಲ್ಲರೊಡನೆ ನಗು ನಗುತ್ತಾ ಪಾದರಸದಂತೆ ಬೀಡಾ ಕಟ್ಟಿಕೊಡುತ್ತಿದ್ದ ಈ ಹುಡುಗನನ್ನು ರೇಗಿಸುತ್ತಾ ಸಿಹಿಯಾದ ಬೀಡಾ ತಿಂದು ಖುಶಿ ಪಟ್ಟೆವು . ಅರೆ ರುಚಿಯಾದ ಊಟ ಕೊಟ್ಟು ನಮಗೆ ಖುಶಿನೀಡಿದ ಹಾವೇರಿ ಬಗ್ಗೆ ಪರಿಚಯ ಮಾಡಿಕೊಳ್ಳೋಣ ಬನ್ನಿ ,
ಈ ಹಾವೇರಿ ಯಲ್ಲಿ ನೋಡೋದು ಬಹಳಷ್ಟಿದೆ , ಆದ್ರೆ ನಮಗೆ ಸಮಯ ಬಹಳ ಕಡಿಮೆ ಇದ್ದ ಕಾರಣ , ಕಾಗಿನೆಲೆ ಮಾತ್ರ ನೋಡಲು ಸಾಧ್ಯ ಆಯ್ತು, ಆದರೆ ಮುಂದೆ ಬಂದಾಗ ಇನ್ನಷ್ಟು ನೋಡಲು ಒಂದಷ್ಟು ಮಾಹಿತಿ ಸಂಗ್ರಹ ಮಾಡಿಕೊಂಡೆ . ಹಾವೇರಿಯಲ್ಲಿ ಐತಿಹಾಸಿಕ ಸಿದ್ದೇಶ್ವರ ದೇವಾಲಯ ವಿದೆ, ಇನ್ನು ಈ ಜಿಲ್ಲೆ ಹಲವಾರು ಮಹಾಪುರುಷರಿಗೆ ಜನ್ಮ ನೀಡಿದೆ , ಸರ್ವಜ್ಞ , ಕನಕದಾಸ, ಶಿಶುನಾಳ ಶರೀಫರು , ಹಾನಗಲ್ ಕುಮಾರ ಶಿವಯೋಗಿಗಳು, ವಾಗೀಶ ಪಂಡಿತರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಲೇಖಕರಾದ ಗಳಗನಾಥರು , ಗೋಕಾಕ್ ಚಳುವಳಿ ನೇತಾರ, ಡಾಕ್ಟರ್ . ವಿ. ಕೆ. ಗೋಕಾಕ್ ರವರು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ, ಸ್ವಾತಂತ್ರ್ಯ ಕ್ಕಾಗಿ ಬ್ರಿಟೀಷರ ಸೆಣಸಿದ ಮೈಲಾರ ಮಹಾದೇವ ಈ ಮಣ್ಣಿನ ಮಗನೆ . ಈ ಜಿಲ್ಲೆಯ ನೆಲ ಚಾಲುಕ್ಯ , ರಾಷ್ಟ್ರಕೂಟ , ಕದಂಬ , ಹೊಯ್ಸಳ, ವಿಜಯನಗರ ಸಾಮ್ರಾಜ್ಯದ ಅರಸರ ಆಳ್ವಿಕೆ ಕಂಡಿದೆ . ತುಂಗಭದ್ರ , ಹಾಗು ವರದ ಈ ಜಿಲ್ಲೆಯ ಪ್ರಮುಖ ನದಿಗಳು , ತುಂಗಾ ಭದ್ರ ನದಿಯನ್ನು ವರದಾ ನದಿ ಸೇರುವ ತಾಣ ಇಲ್ಲಿದೆ . ನಮ್ಮ ದೇಶದಲ್ಲಿ ಮೆಣಸಿನಕಾಯಿ ಅಂದ್ರೆ ತಕ್ಷಣ ಜ್ಞಾಪಕಕ್ಕೆ ಬರೋದು ಒಂದು ಅಂದ್ರದ ಗುಂಟೂರು, ಮತ್ತೊಂದು ನಮ್ಮ ರಾಜ್ಯದ ಬ್ಯಾಡಗಿ , ಈ ಪ್ರಸಿದ್ಧ ಬ್ಯಾಡಗಿ ಹಾವೇರಿ ಜಿಲ್ಲೆಯ ತಾಲೂಕು ಕೇಂದ್ರ , ಇಷ್ಟೊಂದು ವಿಶೇಷ ಹೊಂದಿರುವ ಹಾವೇರಿ ಜಿಲ್ಲಾ ದರ್ಶನ ಮಾಡಲು ಮತ್ತೊಮ್ಮೆ ಬರುವ ಸಂಕಲ್ಪ ಮಾಡಿ ಕನಕದಾಸರು ಪೂಜಿಸಿದ ಆದಿಕೇಶವನ ನೋಡಲು ದೌಡಾಯಿಸಿದೆವು .



