Friday, August 12, 2016

ಅಯ್ಯೋ ಗೆಳೆಯ ನೀನೇಕೆ ಅಪರಾಧಿಯಾದೆ ...?


ನ್ಯಾಯಾಧೀಶರು  ಮಿಂಡಿ  ಗ್ಲಜೆರ್  [ ಚಿತ್ರ ಕೃಪೆ  ಅಂತರ್ಜಾಲ ] 
ನಮಸ್ಕಾರ ಬಹಳ ದಿನಗಳ ನಂತರ ನಿಮ್ಮ ಭೇಟಿ ಮತ್ತೊಮ್ಮೆ,  ನೋವಿನಿಂದ   ಬಳಲುತ್ತಾ ಇದ್ದರೂ ನೀನು ಬರೆಯಲೇ ಬೇಕೆಂಬ  ಮನಸಿನ ಒತ್ತಾಯಕ್ಕೆ ಮಣಿದು  ನನ್ನ ಬ್ಲಾಗ್  ಬರಹ  ಪ್ರಾರಂಭ   ಮಾಡುತ್ತಿದ್ದೇನೆ. ಪ್ರತಿನಿತ್ಯ  ನಾವುಗಳು  ಹಲವಾರು ವಿಚಾರಗಳನ್ನು  ಪತ್ರಿಕೆಗಳಲ್ಲಿ,  ಸಾಮಾಜಿಕ ತಾಣಗಳಲ್ಲಿ,  ಲೇಖನಗಳ  ಅಥವಾ ವೀಡಿಯೊ  ಮೂಲಕ   ಗಮನಿಸುತ್ತಾ ಇರುತ್ತೇವೆ, ಬಹಳಷ್ಟು  ವಿಚಾರಗಳು ಅಯ್ಯೋ  ಇವೆಲ್ಲಾ  ಮಾಮೂಲಿ ಬಿಡ್ರೀ  ಅನ್ನಿಸಿ  ಅವುಗಳನ್ನು  ನಾವು  ನಿರ್ಲಕ್ಷ್ಯ  ಮಾಡುತ್ತೇವೆ,  ಆದಾಗ್ಯೂ  ಕೆಲವು  ವಿಚಾರಗಳು,  ಘಟನೆಗಳು  ಮನಸಿನಲ್ಲಿ   ಆಳವಾಗಿ ಬೇರೂರಿ,  ನಮ್ಮನ್ನು ಕಾಡುತ್ತವೆ,

ಇತ್ತೀಚಿಗೆ  ನನ್ನನ್ನು ಬಹಳ ಕಾಡಿದ   ಒಂದು ಘಟನೆ ಇದು,  ಇದು ಯಾವುದೇ ದೇಶದಲ್ಲಿ ನಡೆದಿರಬಹುದಾದ  ಅಥವಾ ನಡೆಯ ಬಹುದಾದ  ಘಟನೆ,  ನ್ಯಾಯಾಂಗ ವ್ಯವಸ್ಥೆಯಲ್ಲಿ  ವಿಶ್ವದ    ಬಹಳಷ್ಟು ದೇಶಗಳು  ತಮ್ಮದೇ ಆದ ವಿಧಿ ವಿಧಾನಗಳನ್ನು  ತಮ್ಮ   ದೇಶದ  ಸಂವಿಧಾನದಂತೆ  ರಚನೆ ಮಾಡಿರುತ್ತವೆ.


ಕೆಲವೊಂದು    ದೇಶದ ನ್ಯಾಯಾಧೀಶರು  ತಮ್ಮ ಮನಸಿನ ಭಾವನೆ ವ್ಯಕ್ತ ಪಡಿಸಲು  ಅಲ್ಲಿನ ಸಂವಿಧಾನ ಅವಕಾಶ ಮಾಡಿಕೊಟ್ಟಿರುತ್ತವೆ. ಹಾಗಾಗಿ  ಆ   ದೇಶದ  ಕಾನೂನಿನ  ರೀತ್ಯ   ಅಲ್ಲಿನ  ನ್ಯಾಯಾಲಯಗಳ ಕಲಾಪ  ಪ್ರತಿಯೊಂದೂ  ಪಾರದರ್ಶಕ  ಆಗಿರುತ್ತದೆ, ಅಲ್ಲಿನ  ನ್ಯಾಯಾಲಯಗಳ  ಪ್ರತಿಯೊಂದೂ ಚಟುವಟಿಕೆ   ವೀಡಿಯೊ ದಲ್ಲಿ ದಾಖಲಾಗುತ್ತದೆ.  ಹಾಗೆ ದಾಖಲಾದ   ವೀಡಿಯೊಗಳಲ್ಲಿ ಸಾರ್ವಜನಿಕರಿಗೆ   ಅನುಕೂಲ ಆಗುವ  ಕೆಲವು ನ್ಯಾಯಾಲಯಗಳ  ಕಲಾಪ  ಅಲ್ಲಿನ  ಮಾಧ್ಯಮಗಳಲ್ಲಿ ಪ್ರಸಾರ  ಆಗುತ್ತದೆ. ಇಂತಹ  ಒಂದು  ನ್ಯಾಯಾಲಯದ  ಕೌತುಕ  ಕಲಾಪದ ಘಟನೆ ಇಲ್ಲಿದೆ. ಇದು ನಡೆದದ್ದು  ದಿನಾಂಖ  27 ನೆ  ಜುಲೈ 2015 ರಲ್ಲಿ  ಅಮೇರಿಕಾದ  ಮಿಯಾಮಿ ಯಲ್ಲಿ ನ  ಒಂದು ನ್ಯಾಯಾಲಯದಲ್ಲಿ. ಬನ್ನಿ ಕಥೆಗೆ  ಹೋಗೋಣ .


ಚಿತ್ರ ಕೃಪೆ ಅಂತರ್ಜಾಲ 




ನಾನು ಲಿಂಡಿ  ಗ್ಲೆಜರ್  ಈ  ನ್ಯಾಯಾಲಯದ  ನ್ಯಾಯಾಧೀಶೆ.........   ಬನ್ನಿ   ಬನ್ನಿ  ಆ ಕಥೆ  ಏನೂ ಅಂತಾ   ಹೇಳ್ತೀನಿ, ಅವತ್ತು  2015 ಜೂನ್  30  , ಎಂದಿನಂತೆ   ನ್ಯಾಯಾಲಯದ   ಕಲಾಪ  ನಡೆಸಲು  ಸಿದ್ದಳಾಗಿದ್ದೆ,   "ಸೈಲೆನ್ಸ್  ಸೈಲೆನ್ಸ್   ನ್ಯಾಯಾಧೀಶರು ಬರ್ತಾ ಇದ್ದಾರೆ,"  ಅಂತಾ ಒಬ್ಬ  ನ್ಯಾಯಾಲಯದ   ನೌಕರ    ಕೂಗಿದ  , ನಾನು ನನ್ನ  ಕೋಣೆಯಿಂದ   ಆಚೆಗೆ ಬಂದೆ   ನ್ಯಾಯಾಲಯ  ಸ್ಥಬ್ಧ  ಆಗಿತ್ತು, , ಅಲ್ಲಿದ್ದವರ  ಎಲ್ಲರ  ಗೌರವ ಮಿಶ್ರಿತ  ಕಣ್ಣುಗಳೂ  ನ್ಯಾಯಾಧೀಶರ  ಆಗಮನದ  ಕಡೆಗೆ ನೆಟ್ಟಿದ್ದವು , ನಿಧಾನವಾಗಿ  ಆಗಮಿಸಿ   ನ್ಯಾಯಾಧೀಶರ   ಆಸನವನ್ನು ಗೌರವ ಪೂರ್ವಕವಾಗಿ  ಏರಿ ಕುಳಿತೆ,

 ಎಂದಿನಂತೆ ಪ್ರಕರಣಗಳ ವಿಚಾರಣೆ  ಶುರು ಆಯ್ತು,  ನಿಜಾ  ಹೇಳಬೇಕೂ  ಅಂದ್ರೆ  ನನ್ನ ನಿತ್ಯದ  ಕಲಾಪಗಳಲ್ಲಿ   ವಾದಿಗಳ  ಪ್ರತಿವಾದಿಗಳ  ಪರ  ವಕೀಲರ  ವಾದ/ ಪ್ರತಿವಾದ   ಕೇಳುವುದು  , ಕಲಾಪದಲ್ಲಿ ನ  ಪ್ರತಿಯೊಂದೂ ಪ್ರಕರಣದಲ್ಲಿ    ವಾದಿಗಳ  ಪ್ರತಿವಾದಿಗಳ ವಿಚಾರಣೆ  ನಡೆಸುವುದು,    ಸಾಕ್ಷಿಗಳ  ಹಾಗು ದಾಖಲೆಗಳ  ಪರಿಶೀಲನೆ,  ಕಾನೂನು  ಪುಸ್ತಕಗಳ  ಪರಿಶೀಲನೆ ,  ಇವೆಲ್ಲಾ  ಮಾಡ ಬೇಕಾಗುತ್ತದೆ, ಕೆಲವೊಮ್ಮೆ  ಮನಸಿಗೆ ಇಷ್ಟಾ ಇರಲಿ ಇಲ್ಲದಿರಲಿ,   ಗಂಟೆಗಟ್ಟಲೆ  ವಾದ   ಪ್ರತಿವಾದಗಳನ್ನು ಕೇಳಬೇಕಾಗುತ್ತದೆ, ಕೆಲವೊಮ್ಮೆ  ಇಂತಹ  ಕಲಾಪಗಳಲ್ಲಿ  ಬಹಳವಾಗಿ ದೇಹ  ಹಾಗು ಮೆದುಳಿಗೆ  ಧಣಿವಾಗುವುದು ಉಂಟು,  ಆದರೆ ಕರ್ತವ್ಯ ....?     ಇವೆಲ್ಲವನ್ನೂ  ಸಹಿಸಿಕೊಂಡು,  ಇದ್ಯಾವುದನ್ನೂ  ಹೊರಗಡೆ  ತೋರಿಸಿಕೊಳ್ಳದೆ    ಕಾರ್ಯ ನಿರ್ವಹಣೆ   ಮಾಡಬೇಕಾಗುತ್ತದೆ,  ಇವೆಲ್ಲವನ್ನೂ ಸಹಿಸಿಕೊಂಡು  ದಿನಪೂರ್ತಿ   ಕಲಾಪ ನಡೆಸಿ   ಕೊನೆಗೆ  ನನ್ನ ಕೋಣೆಗೆ ಬರುವಷ್ಟರಲ್ಲಿ  ಹೈರಾಣಾಗಿರುತ್ತೇನೆ. ಆದಾಗ್ಯೂ   ಕೆಲವೊಮ್ಮೆ  ಕಲಾಪದಲ್ಲಿ   ಹಾಸ್ಯ  ಘಟನೆಗಳು/ ಅಚ್ಚರಿಯ  ಘಟನೆಗಳು  ನಡೆದಾಗ  ಮನಸಿಗೆ  ಖುಷಿಕೊಡುತ್ತದೆ.

ಅಂದೂ ಸಹ  ಹಾಗೆ  ಆಯಿತು,  ಒಂದೆರಡು ಪ್ರಕರಣ ಮುಗಿದ ನಂತರ   ಒಂದು ಪ್ರಕರಣ ಬಂತು  ಅದು ಕಳ್ಳತನದ ಪ್ರಕರಣ   "ಆರ್ಥರ್  ಬೂತ್"  ಎಂಬ   ಹೆಸರನ್ನು ಕೂಗಿದ ತಕ್ಷಣ   ಅಪರಾದಿ   ಬಂದು  ಕಟಕಟೆಯಲ್ಲಿ   ನಿಂತ ,


ಚಿತ್ರ  ಕೃಪೆ   ಅಂತರ್ಜಾಲ 



ವಿಚಾರಣೆ ಪ್ರಾರಂಭ ಆಯ್ತು, "ಏನಪ್ಪಾ ನಿನ್ನ ಹೆಸರು ಅಂದೇ ...? "   "ಅರ್ಥರ್  ಬೂತ್"  ಅಂದಾ   , "ನೀನು ಮಾಡಿದ ತಪ್ಪು  ಗೊತ್ತಾಯ್ತಾ  ...?"   ಅಂದಾಗ    ಅವನ ಮುಖ ಪಾಪ ಪ್ರಜ್ಞೆಯಿಂದ  ಬಾಡಿ ಹೋಯ್ತು ,  ಅವನನ್ನು ನೋಡಿದರೆ  ಎಲ್ಲೋ ನೋಡಿದ ನೆನಪು ಸರಿಯಾಗಿ ಜ್ಞಾಪಕಕ್ಕೆ ಬರಲಿಲ್ಲ ,  ಅವನಿಗೆ ಹಲವಾರು ಪ್ರಶ್ನೆಗಳನ್ನು  ಕೇಳುತ್ತಾ   ವಿವರಗಳನ್ನು ಕೆದಕುತ್ತಾ    ಅವನ ಬಗ್ಗೆ  ಪೋಲಿಸ್  ಇಲಾಖೆಯವರು  ಒದಗಿಸಿದ್ದ    ಮಾಹಿತಿ ಪರಿಶೀಲನೆ ನಡೆಸತೊಡಗಿದೆ,

  ಅರೆ  ಇವನಾ ....? ಮನಸಿನಲ್ಲಿ   ತಟ್ಟನೆ   ನನ್ನ ಶಾಲಾ ದಿನಗಳ ನೆನಪು ಬಂತು. ನನ್ನ ಪ್ರಾಥಮಿಕ  ಶಾಲೆಯಲ್ಲಿ  "ಅರ್ಥರ್  ಬೂತ್ " ಎಂಬ  ಬುದ್ದಿವಂತ  ಸಹಪಾಟಿ ಯಿದ್ದ , ಬಹಳ ಒಳ್ಳೆಯ ಹುಡುಗ   ಅವನನ್ನು ಕಂಡರೆ   ಶಾಲೆಯಲ್ಲಿ  ಎಲ್ಲರಿಗೂ ಇಷ್ಟ , ತನ್ನ ಒಳ್ಳೆಯ  ಸ್ವಭಾವದಿಂದ  ಎಲ್ಲರ  ಪ್ರೀತಿಗೆ ಪಾತ್ರನಾಗಿದ್ದ,  ಆ ದಿನಗಳಲ್ಲಿ ನನಗೂ ಸಹ   ಇವನ ಗೆಳೆತನ   ಇಷ್ಟಾ ಆಗಿತ್ತು, ಜೊತೆಗೆ ಶಾಲೆಯಲ್ಲಿ ಅವನ ಜೊತೆ ಫುಟ್ ಬಾಲ್ ಆಡಿದ್ದ ನೆನಪು ಬಂತು.  ............. , ಆದರೆ ಅವನೇ ಇವನಾ ...?  ಎಂಬ ಅನುಮಾನ  ಕಾಡತೊಡಗಿತು.


ವಿಚಾರಣೆ ಮುಂದುವರೆಸಿದೆ,  ಏನಪ್ಪಾ  ನೀನು   ಪ್ರಾಥಮಿಕ   ಶಾಲೆ  ಓದಿದ್ದು ಎಲ್ಲಿ,  ...?["Did you go to Nautilus?"]   ಅವನು  ತಾನು ಓದಿದ್ದು ನಟಾಒಲಿಸ್ ನಲ್ಲಿ ಅಂದ ತಕ್ಷಣ   ಇವನು ಅವನೇ ಎಂಬ  ತೀರ್ಮಾನಕ್ಕೆ ಬಂದೆ  ,  ಆ ಕ್ಷಣದಲ್ಲಿ  "oh my goodness"  ಎಂಬ ಮಾತು  ನಮ್ಮಿಬ್ಬರ  ಬಾಯಿಂದ  ಒಟ್ಟಿಗೆ ಹೊರಟಿತ್ತು.   ನಿನಗೆ   ನನ್ನ ನೆನಪಿದೆಯಾ  ಎನ್ನುತ್ತಾ   ಪ್ರಾಥಮಿಕ  ಶಾಲೆಯ  ಕೆಲ ಘಟನೆಗಳನ್ನು ಹೇಳಿದೆ,  ಅವನಿಗೆ ನನ್ನ ಗುರುತು ಸಿಕ್ಕಿತು, ಬಿಕ್ಕಿ ಬಿಕ್ಕಿ ಅಳಲು  ಶುರು ಮಾಡಿದ,  ತನ್ನ ಜೊತೆ ಓದಿದ   ಶಾಲಾ ಗೆಳತಿಯ ಮುಂದೆ    ಅಪರಾಧಿಯಾಗಿ  ನಿಂತಿದ್ದ  ನೋವು  ಅವನ ಮುಖದಲ್ಲಿ  ಮೂಡಿತ್ತು,  ನಾನೇ   ಮುಂದುವರೆಸಿ  "  "ಶಾಲೆ ದಿನಗಳ ನಂತರ  ನೀನು ಏನಾದೆ ...? ಎಂದು ಬಹಳಷ್ಟು   ಸಾರಿ ನಿನ್ನನ್ನು  ನೆನೆಯುತ್ತಿದ್ದೆ,    ಆದರೆ ನೋಡು ನಾವಿಬ್ಬರು  ಇಲ್ಲಿ ಭೇಟಿ ಮಾಡಬೇಕಾಯ್ತು. "  "ನಿಜಕ್ಕೂ ಬೇಸರ  ಆಗ್ತಿದೆ,  ಆದಾಗ್ಯೂ ನನ್ನ ಕೆಲಸ   ಮಾಡಬೇಕಿದೆ " ಎಂದು  ಮುಂದು ವರೆದೆ.


ಚಿತ್ರ ಕೃಪೆ ಅಂತರ್ಜಾಲ 


ವಿಧಿ ಎಷ್ಟು ವಿಚಿತ್ರ ನೋಡ್ರೀ, ಶಾಲೆಯಲ್ಲಿ  ಒಟ್ಟಿಗೆ ಓದಿದ  ಈ ಗೆಳೆಯ  ಹಲವು ದಶಕಗಳ ನಂತರ  ನನ್ನ ಮುಂದೆ ಅಪರಾಧಿಯಾಗಿ ಬಂದು ನಿಂತಿದ್ದ.  ಜೀವನ ಅಂದ್ರೆ ಹೀಗೆ ಆಲ್ವಾ  ಕೆಲವೊಮ್ಮೆ, ನಾವು ನಿರೀಕ್ಷಿಸದ  ಘಟನೆಗಳು ನಡೆದುಬಿಡುತ್ತವೆ.  ಶಾಲೆಯಲ್ಲಿ  ಒಳ್ಳೆಯ ವಿಧ್ಯಾರ್ಥಿ ಯಾಗಿದ್ದ ಈ ಹುಡುಗ , ದೇಶದಲ್ಲಿ  ಒಳ್ಳೆಯ ನಾಗರೀಕ ಆಗಿ  ಒಳ್ಳೆಯ ಸ್ಥಾನ  ಪಡೆಯಬೇಕಿದ್ದ  ಇವನ ಜೀವನದಲ್ಲಿ  ಕೆಟ್ಟ ಬಿರುಗಾಳಿ ಬೀಸಿ , ಇವನ  ಭವಿಷ್ಯವನ್ನು  ಮಣ್ಣುಪಾಲು ಮಾಡಿತ್ತು,  ಕನಸುಗಳು  ಛಿದ್ರವಾಗಿದ್ದವು, ಸಮಾಜದಲ್ಲಿ ಕಳ್ಳನಾಗಿ  ಕೆಟ್ಟ ಹೆಸರು ಪಡೆದು  ಈ ಗೆಳೆಯ    ನ್ಯಾಯಾಧೀಶೆಯಾದ ನನ್ನ ಮುಂದೆ  ನಿಂತಿದ್ದ,


   ನ್ಯಾಯಾಲಯದ ಕಲಾಪದಲ್ಲಿ  ಇವನ ವಿಚಾರಣೆ ನಡೆಸಿ  ಇವನ ಒಳ್ಳೆಯ ತನದ  ಪರಿಚಯ ಮಾಡಿಕೊಡುತ್ತಾ "This was the nicest kid in middle school,"  "He was the best kid in middle school. I used to play football with him, all the kids, and look what has happened."   "What's sad is how old we've become,"  

 ಎಂಬ ಮಾತನ್ನು  ಕಲಾಪದಲ್ಲಿ ಹಾಜರಿದ್ದ ಎಲ್ಲರಿಗೂ  ಹೇಳಿದಾಗ  ಅಲ್ಲಿದ್ದ ಎಲ್ಲರೂ  ಅಚ್ಚರಿಗೊಂಡಿದ್ದರು .  ಮುಂದೇನು ಎಂಬ ಪ್ರಶ್ನೆಯೋಡನೆ  ನ್ಯಾಯಾಧೀಶೆಯಾದ  ನನ್ನನ್ನೂ   ಅಪರಾಧಿಯಾದ   ಅವನನ್ನು  ನೋಡುತ್ತಿದ್ದರು,  ಆದರೆ    ನಾನು  ನನ್ನ ಸ್ಥಾನದ ಗೌರವ  ಉಳಿಸುವ  ಜವಾಬ್ದಾರಿ  ಹೊತ್ತಿದ್ದೆ,  ನನ್ನೆಲ್ಲಾ ಭಾವನೆಗಳನ್ನು  ಹತ್ತಿಕ್ಕಿ ಕರ್ತವ್ಯ  ನಿರ್ವಹಣೆಗೆ  ಮುಂದಾದೆ,    "ನಿನಗೆ ಒಳ್ಳೆಯದಾಗಲಿ ಗೆಳೆಯ  ಮುಂದೆ ಕಾನೂನು ಬದ್ದವಾಗಿ ಜೀವನ ಸಾಗಿಸು"  ಎಂದು ಹೇಳಿ  ಅವನ ಅಪರಾದಕ್ಕೆ  ತಕ್ಕಂತೆ  43000  ಡಾಲರ್  ಬಾಂಡ್  ಹಾಗು  ಹತ್ತು ತಿಂಗಳ  ಜೈಲು ಶಿಕ್ಷೆ  ವಿಧಿಸಿ  ಆದೇಶ ಮಾಡಿ   ಪ್ರಕರಣ ಮುಗಿಸಿದೆ,


 ಅವನೂ ಸಹ  ನನ್ನನ್ನು ಭೇಟಿಮಾಡಿದ   ಖುಷಿಯನ್ನು ಅನುಭವಿಸಲಾರದೆ     ಅವಮಾನ ದಿಂದ  ನ್ಯಾಯಾಲಯದ  ಕಟಕಟೆಯಿಂದ   ಇಳಿದು ಹೋದ , ನನ್ನ ಮನಸು  ವಿಶಾದದ  ಮನಸಿನಿಂದ  ಮುದುಡಿ ಹೋಗಿತ್ತು.  ಇಡೀ ನ್ಯಾಯಾಲಯ ದಲ್ಲಿದ್ದ  ಎಲ್ಲರೂ     ನನ್ನನ್ನು ಮೆಚ್ಚುಗೆಯಿಂದ  ನೋಡಿದರು,  ಅವರೆಲ್ಲರ  ಕಣ್ಣುಗಳಲಿ  ನನ್ನ  ಬಗ್ಗೆ  ಸಾಂತ್ವನದ ಮೆಚ್ಚುಗೆ ಕಂಡೆ. ಅಂದಿನ ಕಲಾಪ ಮುಗಿಸಿ  ಮನೆಗೆ ಬಂದು ಅವನಿಗಾಗಿ  ಮರುಗುತ್ತಾ , ಅವನ  ಬಾಲ್ಯದ  ಗೆಳೆತನದ  ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ   ನಿದ್ದೆ ಹೋದೆ. 




ಚಿತ್ರ ಕೃಪೆ ಅಂತರ್ಜಾಲ 




  ಹೀಗೆ  ದಿನಗಳು ಸಾಗಿದವು , ಗೆಳೆಯನ ಬಿಡುಗಡೆ  ದಿನ ಬಂದೆ ಬಿಟ್ಟಿತು,  ಆ ಗೆಳೆಯನ ಭೇಟಿ ಮಾಡಲು  ಮನಸು  ಪೀಡಿಸುತ್ತಾ ಇತ್ತು,  ನ್ಯಾಯಾಲಯಕ್ಕೆ ರಜೆ   ಹಾಕಿ,  ಜೈಲಿನಿಂದ  ಬಿಡುಗಡೆ ಆಗುವ   "ಅರ್ಥರ್  ಬೂತ್"  ಕಾಣಲು ಹೋದೆ,  ಅಲ್ಲಿನವರಿಗೂ ಅಚ್ಚರಿ, ಒಬ್ಬ ಖೈದಿಯನ್ನು ಸ್ವಾಗತಿಸಲು  ನ್ಯಾಯಾಧೀಶರು  ಬಂದಿದ್ದು  ಅವರಿಗೆ ವಿಚಿತ್ರವಾಗಿತ್ತು,


ಆದರೆ ಅವರಿಗೇನು ಗೊತ್ತು,  ನನ್ನ ಬಾಲ್ಯದ  ಗೆಳೆಯನ  ಮಹತ್ವ.   ಜೈಲಿನ   ನಿಯಮಗಳನ್ನು   ಪಾಲಿಸಿದ    ಜೈಲಿನಿಂದ   ಹೊರಬಂದ ಗೆಳಯ , ಮೊದಲು ಅವನ ಕುಟುಂಬದ   ಎಲ್ಲರೂ ಅವನನ್ನು ಅಪ್ಪಿಕೊಂಡು ಸ್ವಾಗತಿಸಿದರು,  ಅವನ ಮುಖದಲ್ಲಿ  ಬಿಡುಗಡೆಯ  ಸಂತೋಷವಿತ್ತು,  ಅವನ ಕುಟುಂಬದ  ನಂತರ  ಅಲ್ಲೇ ಇದ್ದ ನಾನು    ಆರ್ಥರ್    ಅನ್ನುತ್ತಾ  ಅವನ ಮುಂದೆ ಪ್ರತ್ಯಕ್ಷಳಾದೆ ...!  ಅವನಿಗೆ ನಂಬಲು ಆಗಲಿಲ್ಲ,  ಅವನಿಗೆ ಅದು ಕನಸೋ ನನಸೋ ತಿಳಿಯದಾಯಿತು,  ಅಪರಾಧಿಯಾದ  ತನ್ನನ್ನು  ನ್ಯಾಯಾಧೀಶೆ ಯಾದ  ನಾನು  ಭೇಟಿ  ಮಾಡಬಹುದು ಎಂಬ  ಕಲ್ಪನೆ  ಅವನಿಗೆ ಇರಲಿಲ್ಲ,  ಮುಖದಲ್ಲಿ ಸಂತೋಷ ಉಕ್ಕಿತ್ತು,  ಅವನನ್ನು ನಾನು    ಸೋದರ   ವಾತ್ಸಲ್ಯದಿಂದ   ಅಪ್ಪಿಕೊಂಡೆ  , ಅವನ ಕಣ್ಣಲ್ಲಿ  ಧನ್ಯತೆಯ ಮಿಂಚು ಹರಿದಿತ್ತು,




ಅವನ ಕುಟುಂಬವನ್ನು ಪರಿಚಯಿಸಿದ  ಅವನು, ತನ್ನ ತಪ್ಪಿನ  ಅರಿವಾಗಿ  ಹೊಸ    ಜೀವನ ನಡೆಸಲು  ಸಿದ್ದನಾಗಿದ್ದ,  ಬಹಳ ಹೊತ್ತು, ಅವನ ಜೊತೆಯಲ್ಲಿ ಶಾಲಾ ದಿನಗಳ  ನೆನಪುಗಳನ್ನು  ಮೆಲುಕು ಹಾಕಿದೆ,  ಮುಂದೆ ಒಳ್ಳೆಯ ಗೆಳೆಯರಾಗಿ  ಮುಂದುವರೆಯಲು  ಸಂಕಲ್ಪ ಮಾಡಿದೆವು, ಅವನೂ ತಾನು ಇನ್ನುಮುಂದೆ   ನ್ಯಾಯವಾದ  ಜೀವನ ಮಾಡುವುದಾಗಿ   ನನಗೆ ಮಾತುಕೊಟ್ಟ,  ಅವನ ಬಗ್ಗೆ ಗೌರವ    ಮತ್ತಷ್ಟು  ಜಾಸ್ತಿಯಾಯಿತು,  ಒಬ್ಬ  ಗೆಳೆಯ   ನನಗೆ ಹೀಗೆ  ಒಳ್ಳೆಯವನಾಗಿ ಬದಲಾಗಿದ್ದು ಖುಷಿಕೊಟ್ಟಿತು,  ನಗು ನಗುತ್ತಾ ಅವನಿಗೆ ಶುಭ ಹಾರೈಸಿ  ವಿದಾಯ   ಹೇಳಿದೆ.


 ಒಂದು  ವಿನಂತಿ  :-) ಈ  ಲೇಖನದಲ್ಲಿ ಬಳಸಿರುವ    ಎಲ್ಲಾ   ಚಿತ್ರಗಳನ್ನು   ಅಂತರ್ಜಾಲದಿಂದ   ಕೃತಜ್ಞತಾ  ಪೂರ್ವಕವಾಗಿ  ಪಡೆಯಲಾಗಿದೆ. ಓದುಗರೇ ಇದೊಂದು ಅಮೇರಿಕಾದಲ್ಲಿ    ನಡೆದ   ಸತ್ಯ ಘಟನೆ    ಇದಕ್ಕೆ ನನ್ನ ಕಲ್ಪನೆಯನ್ನೂ ಸೇರಿಸಿ  ಒಂದು ಕಥೆಯ ಚೌಕಟ್ಟು  ನೀಡಿದ್ದೇನೆ.  ನಮ್ಮ ದೇಶದ  ಸಂವಿಧಾನದ  ಕಾನೂನಿಗೂ   ಅಮೆರಿಕದೇಶದ   ಸಂವಿಧಾನದ ಕಾನೂನಿಗೂ  ಬಹಳಷ್ಟು ಅಂತರವಿದೆ,  ಆ ದೇಶದ   ಜನರ   ಜೀವನ ಶೈಲಿಗೆ ತಕ್ಕಂತೆ  ಸಂವಿದಾನ  ರಚನೆ ಆಗಿರುತ್ತದೆ,  ಅಲ್ಲಿನ ಕಾನೂನಿಗೂ  ನಮ್ಮ ದೇಶದ ಕಾನೂನಿಗೂ  ಹೋಲಿಕೆ   ಮಾಡಲಾಗದು,  ಹಾಗಾಗಿ ಈ ಅಂಶಗಳನ್ನು  ಗಮನದಲ್ಲಿ ಇಟ್ಟುಕೊಂಡು ನಿಮ್ಮ ಅನಿಸಿಕೆ ಹಾಕಿ,  ಉದ್ವೇಗದಿಂದ  ನಮ್ಮ ದೇಶದ   ಕಾನೂನನ್ನು, ನ್ಯಾಯಾಲಯಗಳನ್ನು , ನ್ಯಾಯಾಂಗ   ವ್ಯವಸ್ಥೆಯನ್ನು, ದೂಷಿಸುವ  ಅನಿಸಿಕೆ    ಹಾಕಬೇಡಿ ದಯವಿಟ್ಟು.

Thursday, June 16, 2016

ಏನಪ್ಪಾ ಕೊನೆಗೂ ಬಂದ್ಯಾ.......? ಅಂದಿತ್ತು ನನ್ನ ಬಾಲ್ಯದ ಗೆಳೆಯ ಕೆರೆ ......!

ಮರೆಯಲೆಂದರೆ   ಮರೆಯಲಿ ಹ್ಯಾಂಗ  ನಿನ್ನನ್ನ 



ಸುಮಾರು  ಒಂದು ವರ್ಷದ ಹಿಂದೆ  ಅನ್ಸುತ್ತೆ,  ಯಾವುದೋ ಒಂದು ಕೆಲಸದ ನಿಮಿತ್ತ    ಬೆಂಗಳೂರಿಗೆ ಹೋಗಿದ್ದೆ,   ವಾಪಸ್ಸು    ಬರುವಾಗ   ಏನೋ ನೆನಪಾಗಿ,     ಮದ್ದೂರಿನ  ಟಿ.ಬಿ. ಸಿರ್ಕಲ್ ನಲ್ಲಿ   ಹಾಗೇ ನಿಂತೇ  ,  ಅಲ್ಲಿಗೆ   ಹೋಗೋದೋ   ಬೇಡವೋ...?  ಅಲ್ಲಿ ಹೋಗಿ   ನನಗೆ ನಾನೇ ಮಾತನಾಡಿ ಕೊಂಡರೆ   ಜೊತೆಯಲ್ಲಿದ್ದವ   ಏನು  ಅಂದುಕೊಂಡಾನೋ...? ಅನ್ನೋ ಭಯ , ಆದ್ರೆ    ಅಲ್ಲಿಗೆ ಹೋಗಲೇ ಬೇಕೂ ಎನ್ನುವ  ಆಸೆ  ತಡೆಯಲಾಗಲಿಲ್ಲ,  ನನ್ನ ಬಾಲ್ಯದಲ್ಲಿ  ಮನಸ್ಸು ಬಿಚ್ಚಿ   ಹೇಳಿದ  ಕಷ್ಟ ಸುಖಗಳಿಗೆ    ಕಿವಿಯಾದ   ಈ ಬಾಲ್ಯದ ಮಿತ್ರನನ್ನು   ನೋಡಲೇ ಬೇಕೆಂಬ   ಹಂಬಲ  ಜಾಸ್ತಿಯಾಗಿತ್ತು,  ಯಾಕಂದ್ರೆ ಅವನನ್ನು  ಭೇಟಿಮಾಡಿ  ಸುಮಾರು 35 ವರ್ಷಗಳಿಗೂ  ಜಾಸ್ತಿಯಾಗಿತ್ತು.  ಒಮ್ಮೊಮ್ಮೆ   ಇವನನ್ನು    ಗೆಳೆಯ ಎನ್ನಬೇಕೋ  ಅಥವಾ   ವಾತ್ಸಲ್ಯ  ತೋರಿ  ನನ್ನ ಮಾತನ್ನು  ಮರುಮಾತನಾಡದೆ  ಕೇಳಿಸಿಕೊಂಡ   ತಾಯಿ ಎನ್ನಬೇಕೋ ತಿಳಿಯುತ್ತಿಲ್ಲ, ಇನ್ನು ಇವನೋ  ನನಗಿಂತಾ ಬಹಳ ಹಿರಿಯ , ನಾನು , ನನ್ನಪ್ಪ ಹುಟ್ಟುವ ಮೊದಲೇ ಇವನು  ಹುಟ್ಟಿದ್ದ,  ಹಾಗಾಗಿ ಇವನನ್ನು  ಅಜ್ಜ, ಅಥವಾ ಅಜ್ಜಿ  ಅನ್ನೋಕೆ   ಭಯ, ಯಾಕಂದ್ರೆ  ಇವನು    ಯಾವತ್ತೂ  ಅಜ್ಜ  ಅಜ್ಜಿಯರಂತೆ   ನನ್ನ   ಬಾಲ್ಯದ  ಅನುಭವಗಳನ್ನು    ಕೇಳಿಸಿಕೊಳ್ಳಲಾಗದ   ಅಸಹಾಯಕನಾಗಿರಲಿಲ್ಲ .   ಹಾಗಾಗಿ  ಇವ ನನಗೆ ಎಲ್ಲವೂ ಆಗಿದ್ದ , ಗಟ್ಟಿ ಮನಸು ಮಾಡಿ  ಅವನನ್ನು ನೋಡಲು  ತೆರಳಿದೆ.


ಕಬ್ಬಿನ  ಗದ್ದೆಯಲ್ಲಿ  ಚಾಮರ ಬೀಸಿತ್ತು ತಂಗಾಳಿ 

ನನ್ನ ಬಾಲ್ಯ ಕಳೆದ  ಊರು , ಮನೆ, ಗದ್ದೆ, ವಿ.ಸಿ. ನಾಲೆ,  ಎಲ್ಲದರ ದರ್ಶನವನ್ನು ತುರ್ತಾಗಿ  ಮಾಡಿದೆ.   ,  ಆದರೆ ನನ್ನ ಮನಸು   ಇವನನ್ನು  ಕಾಣಲು ಹಾತೊರೆಯುತ್ತಿತ್ತು,   ನನ್ನ ಗೆಳೆಯನ ಕಾಣಲು    ಒಂದೇ  ಉಸಿರಿನಲ್ಲಿ  ಓಡಿದೆ . ಜೊತೆಯಲ್ಲಿದ್ದ ಗೆಳೆಯನಿಗೆ  ನನ್ನನ್ನು  ಒಂಟಿಯಾಗಿ  ಬಿಡುವಂತೆ ಕೋರಿ, ಒಬ್ಬನೇ  ನನ್ನ ಗೆಳೆಯನ  ಸನಿಹ ಕುಳಿತೆ. ನನಗೆ ಅರಿವಿಲ್ಲದಂತೆ  ನೆನಪಿನ  ಚಿತ್ರಗಳು  ಮನದಲ್ಲಿ ಮೂಡುತ್ತಿದ್ದವು,  ಬಾಲ್ಯದ  ಚಿತ್ರಗಳನ್ನು  ಕಾಣುತ್ತಾ  ಕಣ್ಣಲ್ಲಿ   ನೀರು ಜಿನುಗಲು ಶುರು ಆಯ್ತು   ಅದು  ಆನಂದ ಕ್ಕೊ  ಅಥವಾ  ನೋವಿಗೋ ಒಂದೂ ತಿಳಿಯಲಿಲ್ಲ.      ಅಲ್ಲೇ ಸನಿಹದಿಂದ  ತಂಗಾಳಿ ಬೀಸಿ  ನನ್ನನ್ನು  ಸಂತೈಸುತ್ತಿತ್ತು.  ದಡದಲ್ಲಿ   ಸದ್ದು ಮಾಡದೆ ಕುಳಿತೇ  ಇದ್ದೆ   ನಾನು ಬಾಲ್ಯದಲ್ಲಿ ಕಂಡ  ಗೆಳೆಯ   ಮೂವತ್ತೈದು  ವರ್ಷಗಳಲ್ಲಿ  ಬಡವಾಗಿದ್ದ, ಮೊದಲಿದ್ದ  ಅಲಂಕಾರ ಇಲ್ಲವಾಗಿತ್ತು,  ಸಾವಿನ ಅಂಚಿನಲ್ಲಿ   ದಿನಗಳನ್ನು ಎಣಿಸುತ್ತಾ  ಇರುವ   ರೋಗಿಯಂತೆ  ಅವನ ದರ್ಶನ  ಆಯಿತು.     ನಾನು ಅವನನ್ನು ನೋಡುತ್ತಾ  ಕುಳಿತೇ ಇದ್ದೆ,  ನಿಶ್ಯಬ್ಧ  ನಿಶ್ಯಬ್ಧ  ನಿಶ್ಯಬ್ಧ   ,.........................   ಎತ್ತಲಿಂದಲೋ   ತೇಲಿಬಂತು    "ಓ   ಹೋ ಕೊನೆಗೂ ಬಂದ್ಯಾ....? "   "ಈಗ ನೆನಪಾದ್ನಾ    ನಾನೂ ...?"     ಎಂಬ ಮಾತು,  ಬೆಚ್ಚಿ ಬಿದ್ದು    ಅತ್ತ ಇತ್ತ ನೋಡಿದೆ, ಯಾರೂ ಇಲ್ಲ .  ಅಲ್ಲೇ ಸನಿಹದಲ್ಲಿ   ನೀರಿನ ಒಳಗಿಂದ   ಒಂದು ಕಪ್ಪೆ  ನನ್ನನ್ನು ನೋಡಿ  ಬಾಯ್ತೆರೆದು  ಕಣ್ಣಗಲಿಸಿ    ಅಣಕಿಸಿತ್ತು .   ಆದರೆ ಯಾರೂ ಇಲ್ಲ .  ಮತ್ತೆ ನಿಶ್ಯಬ್ಧ    ಸ್ವಲ್ಪ ಹೊತ್ತು ಬಿಟ್ಟು   ಮತ್ತದೇ   ಪ್ರಶ್ನೆ ತೇಲಿಬಂತು  .   ಮತ್ತೆ   ಮತ್ತೆ  ಕಣ್ಣುಗಳು  ಸುತ್ತ ಮುತ್ತ ನೋಡಿದರೂ   ಏನೂ ಕಾಣಲಿಲ್ಲ.   ಅಷ್ಟರಲ್ಲಿ    ಕಣ್ಣು ಮುಚ್ಚಿಕೋ.......   ಹಾಗೆ ಮಾತನಾಡೋಣ  ಎನ್ನುವ   ಮಾತು ತಂಗಾಳಿ  ಯೊಡನೆ ತೇಲಿಬಂತು.    ಗೆಳೆಯನ  ಜೊತೆ ಸಂವಾದ ನಡೆಸಲು   ಕಣ್ಣು ಮುಚ್ಚಿ  ಕುಳಿತೆ.

ಬಾಲ್ಯದ  ನೆನಪುಗಳ  ಸಾಕ್ಷಿ  ಇವೆಲ್ಲಾ 


 "ಓ   ಹೋ ಕೊನೆಗೂ ಬಂದ್ಯಾ....? "   "ಈಗ ನೆನಪಾದ್ನಾ    ನಾನೂ ...?"  ಅಂತೂ ಇಂತೂ  ಬಂದ್ಯಲ್ಲಪ್ಪ  ಖುಷಿಯಾಯ್ತು ,  ಹೇಗಿದ್ದೀಯ  ...?

ನಾನು :-     "ಹೌದು ಬಹಳ ವರ್ಷಗಳ   ನಿನ್ನ ನೆನಪು ಕಾಡಿತ್ತು   ನಿನ್ನ ನೋಡಲು ಬಂದೆ ,   ನನ್ನ ಹಳೆಯ  ಬಾಲ್ಯದ ನೆನಪುಗಳ  ಸಾಕ್ಷಿ   ಆಲ್ವಾ ನೀನು ಅದಕ್ಕಾಗಿ   ಓಡಿ  ಬಂದೆ . ದಯವಿಟ್ಟು ಕ್ಷಮಿಸಿ ಬಿಡೂ   ಬಹಳ ವರ್ಷಗಳಿಂದ   ನಿನ್ನನ್ನು ನೋಡಲು  ಜೀವನ ಜಂಜಾಟದ   ಕಾರಣ ಬರಲಾಗಲಿಲ್ಲ. "

ಅವನು :- "ಅಯ್ಯೋ ಕ್ಷಮೆಯಾಕೆ ಕೇಳ್ತೀಯ ...?  ಹೋಗಲಿ ಬಿಡೂ,  ಎಷ್ಟೋ  ಜನ  ನಿನ್ನ ಹಾಗೆ ನನ್ನ ಬಳಿಯಲ್ಲಿ  ಬಾಲ್ಯದ ನೆನಪಿನ  ಗಂಟನ್ನು  ಬಿಟ್ಟಿದ್ದರೂ  ಇಲ್ಲಿಯವರೆಗೆ  ಅದನ್ನು  ಹುಡುಕಿಕೊಂಡು  ಯಾರೂ ಬಂದಿಲ್ಲ,  ಬರುವುದಿಲ್ಲಾ ಕೂಡ,  ಆದರೆ ನೀನು   ಹಾಗೆ ಮಾಡಲಿಲ್ಲ  ,  ನನ್ನ  ಜೀವಿತಾವದಿಯಲ್ಲಿ   ಗೆಳೆತನ ಹುಡುಕಿಕೊಂಡು  ಒಬ್ಬನಾದರೂ   ಬಂದನಲ್ಲ  ಅದೇ ಖುಷಿ ನನಗೆ. "

ನಾನು :-  "ಅಯ್ಯೋ  ಅದರಲ್ಲಿ ನನ್ನ ದೊಡ್ಡಸ್ತಿಕೆ  ಏನೂ ಇಲ್ಲಾ,  ನಿನಗೆ ಗೊತ್ತಲ್ಲಾ   ನಿನ್ನ ಬಳಿ  ನಾನು  ಅತ್ಯಂತ ಖುಷಿಯ  ಹಾಗು  ಅತ್ಯಂತ  ನೋವಿನ  ಕ್ಷಣಗಳನ್ನು ಹಂಚಿ ಕೊಂಡಿದ್ದೇನೆ . ನಾನು ಸಂತೋಷ ಗೊಂಡಾಗ  ನಲಿದು,  ನಾನು ಸಂಕಟದಿಂದ  ನರಳಿದಾಗ  ಕರುಣೆಯಿಂದ   ಸಂತೈಸಿದವ   ನೀನು. ಪ್ರತಿನಿತ್ಯ  ಶಾಲೆಗೆ  ಹೋಗುವಾಗ    ಹಾಗು ಬರುವಾಗ   ನನ್ನ ಸೈಕಲ್  ನಿಲ್ಲಿಸಿ   ನಿನ್ನ  ಹತ್ತಿರ ಕೂರುತ್ತಿರಲಿಲ್ಲವ ನಾನು...?  ಕೆಲವೊಮ್ಮೆ   ಹಾಗೆ ಕುಳಿತು ನನಗೆ ನಾನೇ ಮಾತನಾಡುವುದನ್ನು  ಕಂಡ ಕೆಲವು  ಜನರು    ಲೇ  ಹುಡುಗ   ಯಾಕೋ ಅಲ್ಲಿ ಕುಳಿತಿದ್ದೀಯ ...?  ಕಾಲು ಜಾರಿ ನೀರಿಗೆ ಬಿದ್ದೀಯ  .....!   ಮೊದ್ಲು    ಅಲ್ಲಿಂದ  ಎದ್ದು  ಮನೆಗೆ ಹೋಗು ಅಂತಾ  ಗದರಿಸಿ ಹೇಳ್ತಾ ಇದ್ರೂ ,  ಅದಕ್ಕೆ ಸೊಪ್ಪು ಹಾಕಿರಲಿಲ್ಲ.   ಈ ವಿಚಾರ ನನ್ನಪ್ಪನಿಗೂ ಗೊತ್ತಾಗಿ  ಒಂದೆರಡು  ಏಟು  ಬಹುಮಾನ   ಕೊಟ್ಟು ಅಲ್ಲಿಗೆ ಹೋಗಿ ಕೂರದಂತೆ   ತಾಕೀತು   ಮಾಡಿದ್ದರು . ಆದರೆ  ನಾನು    ನಿನ್ನ ಹತ್ತಿರ ಕುಳಿತು  ಮಾತನಾಡುವುದನ್ನು ಮಾತ್ರ ಬಿಡಲಿಲ್ಲ.  ಸುಮಾರು ಹತ್ತು ವರ್ಷ ನಿನ್ನೊಡನೆ  ಮಾತು ಕಥೆ  ನಡೆಸಿದ ನೆನಪು ನನಗೆ ಹೌದಲ್ವಾ ...? "

ಅವನು :-) "ಹ ನಿಜ  ನಿಜ ,  ನನಗೆ ನೆನಪಿದೆ,   ನಿನ್ನ ಈ ಎಲ್ಲಾ  ನಡವಳಿಕೆ ,  ನಿನ್ನ ಮೊದಲ ಭೇಟಿ   ಹೇಗಾಯ್ತು ಗೊತ್ತಾ ...?  ಹೇಳ್ತೀನಿ ಕೇಳು.  ನೀನು ಬಹುಷಃ  ಆರನೇ ತರಗತಿ ಇರಬೇಕು,  ಒಂದು ದಿನ ಸಂಜೆ   ಶಾಲೆ ಮುಗಿಸಿ   ನಿನ್ನ ಮನೆಯ ಕಡೆ ಹೊರಟಿದ್ದೆ,  ಜಿಟಿ  ಜಿಟಿ ಮಳೆ ಬರ್ತಾ ಇತ್ತು, ಆದರೆ  ನಿನ್ನ  ಉತ್ಸಾಹಕ್ಕೆ   ಕೊರತೆ ಇರಲಿಲ್ಲ,  ಬಾಯಿಗೆ ಬಂದಂತೆ ಹಾಡುತ್ತಾ  ಜೋರಾಗಿ ಸೈಕಲ್  ತುಳಿಯುತ್ತಾ    ಬರ್ತಾ  ಇದ್ದೆ.  ನಿನಗೆ ಗೊತ್ತಲ್ಲ...?   ಆಗಿನ ರಸ್ತೆ ಈಗಿರುವಷ್ಟು ದೊಡ್ಡದಾಗಿ ಇರಲಿಲ್ಲ.   ನಿನ್ನ ಎದುರುಗಡೆ    ವೇಗವಾಗಿ  "ಉದಯರಂಗ"  ಬಸ್ ಬರ್ತಾ  ಇತ್ತು,  ನೀನು ಆ ಬಸ್ಸಿನ  ರಭಸಕ್ಕೆ  ಬೀಸಿದ     ಗಾಳಿಯಿಂದ  ಆಯತಪ್ಪಿ ಸೈಕಲ್ಲಿನಿಂದ ಬಿದ್ದೆ, ನಿನ್ನ ಪುಣ್ಯ ಚೆನ್ನಾಗಿತ್ತು   ಅಲ್ಲೇ ಇದ್ದ  ತಡೆ ಕಲ್ಲಿಗೆ ನಿನ್ನ ಸೈಕಲ್ ಗುದ್ದಿ ನಿಂತಿತು. ಹಾಗು ನಿನ್ನನ್ನು ಸಹ ನನ್ನೊಳಗೆ ಬೀಳದಂತೆ ತಡೆಯಿತು.  ನಿನ್ನ ಬಲಕಾಲಿನ  ಮಂಡಿಯಲ್ಲಿ   ಗಾಯವಾಗಿ ರಕ್ತ  ಸೋರುತ್ತಿತ್ತು,  ಅಷ್ಟರಲ್ಲಿ  ಬಂದ ಯಾರೋ ಒಬ್ಬರು  ನಿನ್ನನ್ನು ಅಲ್ಲೇ ಕೂರಿಸಿ,  ಅಲ್ಲೇ ಇದ್ದ ತುಂಬೆ ಗಿಡದ   ಎಲೆಗಳನ್ನು  ಕಿತ್ತು ತಂದು  ಅವುಗನ್ನು  ಕೈಗಳಲ್ಲಿ  ಉಜ್ಜಿ ಹಿಂಡಿ  ರಸ ತೆಗೆದು  ನಿನ್ನ ಗಾಯಕ್ಕೆ ಹಾಕಿದರು, ಅಲ್ಲೇ ಸ್ವಲ್ಪ  ಹೊತ್ತು ತುಂತುರು ಮಳೆಯಲ್ಲೇ  ನೆನೆಯುತ್ತಾ  ನನ್ನ ಬಳಿ  ಕುಳಿತಿದ್ದೆ  ನೀನು,   ಆ ದಿನ  ಶುರು ಆದ ನಿನ್ನ ನನ್ನ ಗೆಳೆತನ   ಮಾತನಾಡುವ  ಮಟ್ಟಕ್ಕೆ  ಬಂದಿತ್ತು." "



 ದಿನವೂ  ಶಾಲೆಗೇ ಹೋಗ್ತಾ ಇದ್ದ  ರಸ್ತೆ 

ನಾನು :-    "ನಿಜ, ನೀನು ಹೇಳಿದ್ದು,  ನೋಡು ಅವತ್ತು ಆದ ಗಾಯದ ಗುರುತು ಇಂದಿಗೂ ಹಾಗೆ ಇದೆ, ಅದ್ಯಾಕೋ ಗೊತ್ತಿಲ್ಲ, ಆ ಘಟನೆ ಆದ ಮಾರನೆಯ ದಿನ  ಮತ್ತೆ  ಶಾಲೆಗೇ ಹೊರಟೇ, ಮನೆಯಲ್ಲಿ ಅಮ್ಮಾ   ಲೋ ನಿನ್ನೆ ತಾನೇ  ಮಳೆಯಲ್ಲಿ ನೆನೆದು  ಬಂದೆ,  ರಾತ್ರಿಯೆಲ್ಲಾ   ಮೈ ಬಿಸಿ ಇತ್ತು   ಇವತ್ತು ಶಾಲೆ ಬೇಡ ಮನೆಯಲ್ಲಿ ಇರು ಅಂದ್ರೂ ಕೇಳದೆ . ಸೈಕಲ್ಲಿನಲ್ಲಿ  ಹೊರಟೆ,  ದಾರಿಯಲ್ಲಿ  ನಿನ್ನ ಹತ್ತಿರ ಬಂದ ತಕ್ಷಣ  ನಾನು ಬಿದ್ದ ಸ್ಥಳವನ್ನು   ಹುಡುಕಿ, ಅಲ್ಲಿ ನಿಂತೇ,  ಮನದಲ್ಲಿ  ಸ್ವಲ್ಪ ಹೆದರಿಕೆ ಇತ್ತು,  ನಿನ್ನ ಸಮೀಪ ಸ್ವಲ್ಪ ಹೊತ್ತು  ಮೌನವಾಗಿ ಕುಳಿತು,  ಶಾಲೆಗೇ ಹೊರಟೆ , ಮತ್ತೆ   ವಾಪಸ್ಸು  ಬರುವಾಗ   ಮಳವಳ್ಳಿಯ ಪರಿಮಳ ಬೇಕರಿಯಲ್ಲಿ   "ದಿಲ್ ಪಸಂದ್ " ಅನ್ನೋ  ತಿಂಡೀ  ಹಾಗು ಖಾರ  ಪಕೋಡ  ಖರೀದಿಸಿ  ನಿನ್ನ  ಬಳಿ ಬಂದು   ಕುಳಿತೆ,  ತಿಂಡೀ ತಿನ್ನುವ ಮೊದಲು   ಸ್ವಲ್ಪ  ಮುರಿದು  ನಿನಗೆ  ಕೊಟ್ಟೆ , ನೀನು ನನಗೆ ಥ್ಯಾಂಕ್ಸ್ ಸಹ ಹೇಳಲಿಲ್ಲ.  ಹಾಗೆ ಕೊಟ್ಟ ತಿಂಡಿಯನ್ನು  ಗುಳುಂ ಮಾಡಿದೆ.   ನಂತರ ನಿನ್ನೊಡನೆ ಮಾತನಾಡುತ್ತಾ   ಗಾಯದ ನೋವಿನ ಬಗ್ಗೆ   ಹೇಳಿಕೊಂಡೆ. ಬೇಗನೆ ಗಾಯ ವಾಸಿಮಾಡು  ಅಂತಾ ನಿನ್ನಲ್ಲಿ ಕೇಳಿಕೊಂಡ  ನೆನಪು.  ಮರೆತಿಲ್ಲ  ಮಿತ್ರ".


ಗೆಳೆಯನ ಇಂದಿನ ಪರಿಸ್ಥಿತಿ 


ಅವನು :-  "ಪ್ರತೀ ಶನಿವಾರ   ಶಾಲೆಯಿಂದ ವಾಪಸ್ಸು ಬರುವಾಗ   ನೀನು  ಮಸಾಲೆ ದೋಸೆ  ತಂದು  ನನ್ನ ಜೊತೆ ಹಂಚಿಕೊಂಡು  ತಿನ್ನುತ್ತಿದ್ದೆಯಲ್ಲ  ಅದನ್ನು ಮರೆತಿಲ್ಲಾ  ಕಣಪ್ಪ, ಜೊತೆಗೆ  ನಿನ್ನ ಶಾಲೆಯಲ್ಲಿ  ಶಿಕ್ಷಕರು  ಬೈದಾಗ , ಹೊಡೆದಾಗ  ಅಂದು  ಅಳುತ್ತಾ  ನನ್ನೊಡನೆ  ನೋವನ್ನು  ಹಂಚಿಕೊಳ್ತಾ  ಇದ್ದೆ.  ನನಗೂ ಅಯ್ಯೋ ಅನ್ನಿಸುತ್ತಿತ್ತು, ಪ್ರತೀ ವರ್ಷ  ಶಾಲೆಯಲ್ಲಿ ನಿನ್ನ ಫಲಿತಾಂಶ  ಬಂದಾಗ  ಖುಷಿಯಿಂದ ಬಂದು ಸಿಹಿ  ನೀಡಿ   ನಿನ್ನ ಸಾಧನೆ ಬಗ್ಗೆ  ಜಂಭ  ಕೊಚ್ಚಿ ಕೊಳ್ತಾ  ಇದ್ದೆ ನೀನು. ಒಮ್ಮೆಯಂತೂ  ಒಂದು ಹಾವು  ಕಪ್ಪೆಯನ್ನು ತಿನ್ನಲು ಬಂದಾಗ   ಅದಕ್ಕೆ ಕಲ್ಲು ಹೊಡೆದು , ಕಪ್ಪೆ  ತಿನ್ನಲು ಅವಕಾಶ ಕೊಡಲಿಲ್ಲ ನೀನು,  ನಂತರ   ಆ ಹಾವು  ನಿನ್ನನ್ನು  ಅಟ್ಟಿಸಿಕೊಂಡು ಬಂದಾಗ   ನಿನ್ನ ಸೈಕಲ್  ಏರಿ ಓಟ ಕಿತ್ತಿದ್ದೆ,  ಆ ಹಾವಿಗೆ ಹೆದರಿ ನೀನು ಎರಡುದಿನ ಬರಲಿಲ್ಲ  . ಇನ್ನೊಂದು ದಿನ  ಮೀನು ಹಿಡಿಯುವ  ಹುಡುಗರು  ಮೀನು ಹಿಡಿಯಲು ಬಂದಾಗ ,   ಗಾಳಕ್ಕೆ  ಕಟ್ಟಲು  ಅವರು ತಂದಿದ್ದ  ಎರೆಹುಳುಗಳನ್ನು   ಅಪಹರಿಸಿ   ಅವರಿಂದ  ಗೂಸ ತಿಂದೆ , ಆದರೆ ಏನ್ ಮಾಡಲಿ  ನಾನು ಅಸಹಾಯಕನಾಗಿ ಇದನ್ನೆಲ್ಲಾ   ನೋಡ್ತಾ ಇದ್ದೆ.   ಮತ್ತೊಮ್ಮೆ  ಏಡಿ  ಹಿಡಿಯಲು ಬಂದ  ಕೊಕ್ಕರೆಗೆ ಹೊಡೆದ ಕಲ್ಲು  ಯಾರಿಗೋ ಬಿದ್ದು  ಅವರಿಂದಲೂ ಸಹ  ನಿನಗೆ ಗೂಸ  ಸಿಕ್ಕಿತ್ತು   ಆದರೆ ಘಟನೆಗಳು  ನಡೆದ ಸಂಜೆಯೇ   ನೀನು ಅಳುತ್ತಾ  ಅ ಹುಡುಗರು  ಮೀನನ್ನು ಹಿಡಿದು ಸಾಯಿಸುತ್ತಿರುವುದಾಗಿ  ನನ್ನ  ಬಳಿ ಅಳುತ್ತಾ  ಸಂಕಟ ಪಟ್ಟೆ. ಇಷ್ಟೆಲ್ಲಾ  ಆದ್ರೂ  ನೀನೇನು  ಬಹಳ ಒಳ್ಳೆಯವನಲ್ಲಾ ಬಿಡೂ  ಒಮ್ಮೊಮ್ಮೆ   ನನ್ನ ಒಡಲಿಗೆ  ಮೂತ್ರ  ಸಿಂಚನ  ಮಾಡುತ್ತಾ ಇದ್ದೆ , ಆದರೆ ನಿನ್ನ ಮೇಲಿನ ಪ್ರೀತಿಯಿಂದ ಅದನ್ನೂ ಸಹ ಸಹಿಸಿಕೊಂಡಿದ್ದೆ   ಗೊತ್ತಾ ನಿನಗೆ . "

ನಾನು :-" ಅರೆ ಇದೆಲ್ಲಾ  ನೀನು ಮರೆತೇ ಇಲ್ವಾ ...? ಹೌದಯ್ಯ    ಆಗ ತಿಳುವಳಿಕೆ ಇರಲಿಲ್ಲ  ಕೆಲವೊಮ್ಮೆ ವಯಸ್ಸಿನ ಸಹಜ  ಹುಡುಗಾಟ ಆಡಿದ್ದೆ  ನಿನ್ನ ಜೊತೆ , ಈಗ ಇದನ್ನೆಲ್ಲಾ ನೆನೆದಾಗ  ಕೆಲವೊಮ್ಮೆ ನೋವಾಗುತ್ತದೆ.   ಹೌದಪ್ಪಾ  ಅ ದಿನಗಳು ಸ್ವರ್ಗದ  ದಿನಗಳು ಕಣಪ್ಪಾ,  ನೋಡು  ನೀರು  ತುಂಬಿಕೊಂಡು  ಜೋರಾಗಿ  ಎತ್ತರವಾದ ಅಲೆಗಳನ್ನು ಎಬ್ಬಿಸಿ   ದಡಕ್ಕೆ ಅಪ್ಪಳಿಸಿ  ನೀರನ್ನು  ರಸ್ತೆಗೆ  ಚೆಲ್ಲಾಡುತ್ತಿದೆ, ಆಗಂತೂ ನೀನು ಸಮುದ್ರ   ಎನ್ನುವಂತೆ  ಭಾವನೆ ಬರ್ತಾ ಇತ್ತು,  ಮಳೆಗಾಲದಲ್ಲಿ  ಮಳೆಯಲ್ಲಿ  ನೆನೆಯುತ್ತಾ   ನಿನ್ನನ್ನು  ನೋಡ್ತಾ ಇದ್ದರೆ ಅದರ ಮಜವೇ ಮಜಾ ಬಿಡೂ ,    ನಿನ್ನಲ್ಲಿ ಬಿದ್ದ ಮಳೆ ಹನಿಗಳು  ಚಕ್ಕುಲಿಯಂತೆ  ಚಿತ್ತಾರ ಬಿಡಿಸುತ್ತಿದ್ದವು.  ಇನ್ನು ಚಳಿಗಾಲ ಬಂದರೆ ನಿನ್ನಲ್ಲಿ  ನೂರಾರು  ಹಕ್ಕಿಗಳ  ಕಲರವ  ತುಂಬಿದ  ಆಟ  ಕಾಣುತ್ತಿತ್ತು, ದೂರದಲ್ಲಿ ನೀರು ನಾಯಿಗಳು  ನೆಗೆದಾಡುತ್ತಾ  ತೇಲುತ್ತಿದ್ದವು.  ಬೇಸಿಗೆಯಲ್ಲೂ ಸಹ ನಿನ್ನ ಅಂದ  ಕೆಡುತ್ತಿರಲಿಲ್ಲ, ಅಷಾಡ ಮಾಸದ  ಬಿರುಸಾದ ಗಾಳಿಗೆ  ನನ್ನ ಸೈಕಲ್  ನೆಟ್ಟಗೆ ಓಡಿಸಲು ಆಗ್ತಾ ಇರಲಿಲ್ಲ.  ಆದರು ಓರೆ ಕೊರೆಯಾಗೆ  ಸೈಕಲ್ಲನ್ನು ಓಡಿಸಿಕೊಂಡು ನಿನ್ನ ಬಳಿ   ಬರ್ತಾ ಇದ್ದೆ.   ಇನ್ನು ಮುಸ್ಸಂಜೆಯಲ್ಲಿ   ಸುಂದರ  ಸೂರ್ಯಾಸ್ತ  ನೋಡುತ್ತಿದ್ದ  ಆ  ಖುಷಿಯೇ  ಬೇರೆ  ಬಿಡೂ.    ನಿನ್ನ ಬಗ್ಗೆ ಯಾಕೆ ಹೆಮ್ಮೆ ಗೊತ್ತಾ....?  ನಾನೂ ನೀನು ಗೆಳೆಯರಾಗಿದ್ದ  ಸಮಯದಲ್ಲಿ  ನೀನು ಯಾರಿಗೂ  ತೊಂದರೆ ಕೊಡಲಿಲ್ಲ,  ಒಂದು ದಿನವೂ ನಿನ್ನಲ್ಲಿ ಅಪಘಾತದಿಂದ  ವಾಹನಗಳು  ಬಿದ್ದ ಬಗ್ಗೆಯಾಗಲಿ,  ಜನಗಳು ಸತ್ತ ಬಗ್ಗೆಯಾಗಲಿ  ವರದಿ ಆಗಲಿಲ್ಲ. ಸುತ್ತ ಮುತ್ತ ಇದ್ದ  ಗದ್ದೆಗಳ  ರೈತರಿಗೆ , ಅವರ ಬೆಳೆಗೆ  ಜೀವ ನೀಡುತ್ತಿದ್ದೆ ನೀನು,  ಇನ್ನು   ಎರಡೂ  ಕೊನೆಯಲ್ಲಿ ಇದ್ದ ಎರಡು ಕೊಡಿಗಳು  ತುಂಬಿ ಜಲಪಾತದಂತೆ  ಹರಿದಾಗ   ಅವೇ ನಮಗೆ ಗಗನ ಚುಕ್ಕಿ , ಭರಚುಕ್ಕಿ  ಜಲಪಾತ ವಾಗುತ್ತಿದ್ದವು. ಆ ರಮಣೀಯ   ದೃಶ್ಯ  ನೋಡೋ ಭಾಗ್ಯ ಈಗಿಲ್ಲಾ ಬಿಡೂ.   ಆ ಕೋಡಿಯಲ್ಲಿ  ಮನೆಯವರಿಗೆ ಗೊತ್ತಿಲ್ಲದಂತೆ  ಸ್ನಾನ ಮಾಡುತ್ತಿದ್ದುದು ಮರೆತಿಲ್ಲಾ ಕಣಯ್ಯ ."

ಅಸ್ಥಮಿಸುವ   ಸೂರ್ಯನೂ   ಕೆಂಪಗೆ 



ಅವನು :-" ನೋಡು ಹಳೆಯ  ನೆನಪನ್ನು  ಜ್ಞಾಪಿಸ ಬೇಡ  ಸಂಕಟ ಆಗುತ್ತೆ.  ನನ್ನ ಕಥೆ ಇರಲಿ ಇದೇನಯ್ಯ  ನೀನು  ಏನು  ಹೀಗೆ ಆಗಿದ್ಯಾ,.....?  ಚಿಕ್ಕ ವಯಸ್ಸಿನಲ್ಲಿ ಒಳ್ಳೆ ಹೀರೋ  ತರಹ ಇದ್ದವನು  ಈಗ  ವಿಲ್ಲನ್  ತರಹ ಆಗಿದ್ದೀ ...?  ಯಾಕೆ  ಜೀವನದಲ್ಲಿ ಖುಶಿ ಇಲ್ವಾ ...?"


ನಾನು : -  "ಹೌದು ಕಣಯ್ಯ   ಜೀವನ ಪಯಣದಲ್ಲಿ ಆದ ಬದಲಾವಣೆ  ಇದು.  ಜೀವನ ಮಾಗಿದಂತೆ ದೇಹವೂ ಮಾಗುತ್ತದೆ ಆಲ್ವಾ ..?"
 ನಂತರ   ಸ್ವಲ್ಪ ಕೋಪ ಬಂದು   "ಓ.......   ಹೋ ....   ನೀನೇನು  ಈಗ ಸುರಸುಂದರಾಂಗನ ತರಹ  ಇದ್ದೀಯ  ಅದಕ್ಕೆ ನನ್ನನ್ನು ಕಿಚ್ಹಾಯಿಸುತ್ತಿದ್ದೀಯ ಆಲ್ವಾ ...?  ನಿನ್ನ ಅವಸ್ತೆ ನೋಡಿಕೋ  ಹೇಗಿದೆ  ಅಂತಾ ..? " ಅಂದೇ

ಅವನು :-  "ನಿಜ  ಕಣಪ್ಪಾ  ನಾನು ಇಂದು ಕುರೂಪಿಯೇ , ಇಂದು ನನ್ನ ಒಡಲಲ್ಲಿ ವಿಷ ಇದೆ,  ಯಾವ ಜೀವಿಯೂ ಬದುಕಲಾಗದಷ್ಟು  ನನ್ನ ಒಡಲು ಬಂಜರಾಗಿದೆ , ನೋಡು ನಾನು  ಹೇಗಿದ್ದೇನೆ,  ಜೊಂಡು  ಹುಲ್ಲು, ತಾವರೆ ಗಿಡಗಳು,  ನಾನೇ ನಿರಡಿಕೆಯಿಂದ  ಕೆಲವೊಮ್ಮೆ  ನೀರು ಸಿಗದೇ   ನರಳುತ್ತೇನೆ,   ಹಕ್ಕಿ ಪಕ್ಷಿಗಳು  ಹೆಚ್ಚು ಬರುತ್ತಿಲ್ಲ,   ಏಡಿಗಳು, ಮೀನುಗಳು, ನೀರು ಹಾವುಗಳು  , ನೀರು ನಾಯಿಗಳು   ಎಲ್ಲಾ ನನ್ನನ್ನು ತ್ಯಜಿಸಿವೆ.  ಹೊಸ ರಸ್ತೆಯಾದ ನಂತರ   ನನ್ನೊಳಗೆ  ಬೀಳುವ  ವಾಹನ , ಜನ  ಜಾಸ್ತಿಯಾಗುತ್ತಿದ್ದು,   ಅದರ ಕೆಟ್ಟ ಹೆಸರು ನನಗೆ ಬರ್ತಾ ಇದೆ.  ಪಕ್ಕದ ಗದ್ದೆಗಳ ರೈತರು  ನನ್ನನ್ನು  ನನ್ನ ಸಂಕಟವನ್ನು ಅರಿಯದೆ   ಬೈಯ್ಯುತ್ತಾರೆ .  ಇನ್ನೆಷ್ಟು ದಿನ  ಇಂತಹ  ಜೀವನವೋ  ನಾ ಕಾಣೆ, ಕೊನೆಯ ಉಸಿರನ್ನು  ಎಳೆಯಲು  ಯಾತನಾಮಯ  ದಿನಗಳನ್ನು ಎಣಿಸುತ್ತಾ ಇದ್ದೇನೆ.   ಬೇಗ  ನನಗೆ ಸಾವು ಬರಲಿ  ಅಂತಾ     ಹಾರೈಸು  ಗೆಳೆಯ ."

ನಾನು :-) ಗೆಳೆಯನ ಮಾತನ್ನು ಕೇಳಿ   ಅದುರಿಹೋದೆ,  ಮೈ ಎಲ್ಲಾ  ಕಂಪಿಸುತ್ತಿತ್ತು,  "ಗೆಳೆಯ ನೀ ಸಾಯ ಬೇಡ..........  ನೀ ಸಾಯ ಬೇಡ ದಯವಿಟ್ಟು  ಅನ್ನುತ್ತಾ  ಜೋರಾಗಿ  ಕಿರುಚುತ್ತಿದ್ದೆ,  ಅಯ್ಯಾ    ನಿನ್ನ ಚಿತ್ರಗಳನ್ನು   ತೆಗೆಯಲೇ...?  " ಅಂದೇ.

    ಅವನು :- ಏನಯ್ಯ  ಯಾರಾದ್ರೂ   ಸಾಯೋ ಕ್ಷಣಗಳನ್ನು  ಎಣಿಸುತ್ತಿರುವ   ಮಂದಿಯ  ಅಥವಾ   ಹೆಣದ   ಚಿತ್ರ  ತೆಗೀತಾರ ...? ನಿನಗೆಲ್ಲೂ ಹುಚ್ಚು,   ಏನೂ ಬೇಡ ನಡ್ ನಡೀ ಅಂದ,

ನಾನು  :- ಏ ಸುಮ್ನಿರಪ್ಪಾ  ನಿನ್ನ ನೆನಪಿಗಾದ್ರೂ   ಕೆಲವು ಚಿತ್ರ ತೆಗೀತೀನಿ  ಅಂದೇ    ಅವನ ಸ್ಥಿತಿ ನೋಡಿ ನನ್ನ ಕರುಳು  ಚುರುಕ್  ಅಂದಿತ್ತು. ಮನದಲ್ಲಿ ಹೇಳಲಾಗದ   ಸಂಕಟ  ಶುರು ಆಯ್ತು .

ಅವನು :-   ,ಅಂತೂ ಇಂತೂ ಸಾಯುವವನಿಗೂ  ಒಮ್ಮೊಮ್ಮೆ   ಇಂತಹ ಸಂತಸ ಪಡುವ ಯೋಗ ಬರುತ್ತೆ ಕಣಯ್ಯ  ಅನ್ನುತ್ತಾ ನಕ್ಕ, [ ನನ್ನ ಕರುಳು  ಕಿವುಚಿದಂತೆ ಆಯ್ತು  ]  ಏನಾದರೂ ಮಾಡ್ಕೊಂಡು   ಹಾಳಾಗ್ ಹೋಗು . , ನಾನು   "ಏ  ನೀನು  ಮಾತ್ರ ದಯವಿಟ್ಟು ಸಾಯ ಬೇಡ ಕಣಯ್ಯ  "  ಅನ್ನುತ್ತಾ   ಚಿತ್ರಗಳನ್ನು   ಕ್ಲಿಕ್ಕಿಸುತ್ತಿದ್ದೆ

ಅಷ್ಟರಲ್ಲಿ ,  ನಮ್ಮ ಹುಡುಗ  "ಸಾರ್ ಸಾರ್   ಇದೇನ್  ಸಾರ್  ಇದು   ಇಲ್ಲಿ ಕುಳಿತು,  ನಿನಗೆ ನೀವೇ ಮಾತಾಡ್ತಾ  ಇದ್ದೀರಿ,  ಸುಮಾರು  ಜನರು   ನಿಮ್ಮನ್ನು ನೋಡಿಕೊಂಡು   ನಗುತ್ತ  ಹೋಗ್ತಿದ್ರು. ನಡೀರಿ ಹೊತ್ತಾಯ್ತು "  ಅಂತಾ ಹತ್ತಿರ ಬಂದ  . ಏ ಗೆಳೆಯ  ಮತ್ತೊಮ್ಮೆ ಬರ್ತೀನಿ   ಅಂತಾ ಹೇಳಿ ಅಲ್ಲಿಂದ  ನಮ್ಮೂರಿಗೆ   ಹೊರಟೆ. ಮನದ ತುಂಬಾ ಅವನೇ ಆವರಿಸಿಕೊಂಡಿದ್ದಾ  ಕಣ್ಣಲ್ಲಿ ಸಂಕಟದ  ನೀರು  ಬರ್ತಾ  ಇತ್ತು.

ಸೌಂದರ್ಯ  ವಲ್ಲದ ಸೌಂದರ್ಯ  ಇದು  ಪ್ರಕೃತಿಯ ಮಾಯಾಜಾಲ 

ಅರೆ ಕ್ಷಮಿಸಿ  ನನ್ನ ಗೆಳೆಯನ  ಪರಿಚಯ   ಮಾಡಿಕೊಡಲಿಲ್ಲ ನಿಮಗೆ   , ಇಷ್ಟೆಲ್ಲಾ  ಪುರಾಣ  ಯಾರ ಬಗ್ಗೆ ಅಂದ್ರಾ   ನನ್ನ ಬಾಲ್ಯದಲ್ಲಿ  ಪ್ರಮುಖ ಪಾತ್ರ ವಹಿಸಿದ    "ಮಳವಳ್ಳಿ ಕೆರೆ " ಯ ಬಗ್ಗೆ  ಹೇಳಿದ್ದು.  ಹೌದು  ಜನುಮದಲ್ಲಿ ಮರೆಯಲಾರದ  ತುಂಟ ನೆನಪುಗಳ   ನೆನಪಿಸುವ  ತಾಕತ್ತು ಈ ಕೆರೆಗೆ ಇದೆ .   ಈ ಕೆರೆಗೆ ನನ್ನ ಪ್ರೀತಿಯ   ನಮನಗಳು . 

Sunday, June 5, 2016

ಕಾವೇರಿ ನದಿಯ ಮಡಿಲ ಈ ಊರಿನಲ್ಲಿ ಸಪ್ತ ಸ್ವರ ದೇವತೆಗಳು ನೆಲಸಿದ್ದಾರೆ .....!

ಸಂಗೀತವಿಲ್ಲದ   ಸ್ಥಳ  ಯಾವುದೂ ಇಲ್ಲ



ಮೊನ್ನೆ  ಹಾಗೆ ನನ್ನ  ಹಳೆಯ ಚಿತ್ರಗಳ  ಸರಣಿಯನ್ನು ನೋಡುತ್ತಾ  ಇದ್ದೆ , ಕೆಲವು ಚಿತ್ರಗಳು  ನೆನಪಿನ ಲೋಕಕ್ಕೆ ಕರೆದೊಯ್ದವು , ಅಷ್ಟರಲ್ಲಿ   ಎಲ್ಲಿಂದಲೋ ತೇಲಿ ಬಂತು    '' ಏಳು ಸ್ವರವೂ ಸೇರಿ ಸಂಗೀತವಾಯಿತು,   ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು"    ಎಂಬ ಹಾಡು.  ಯಾವುದೋ ಲೋಕಕ್ಕೆ ಕರೆದುಕೊಂಡು ಹೋಯಿತು,  ಅರೆ  ಹೌದಲ್ವಾ,  ಸಂಗೀತಕ್ಕೆ   ಏಳು ಸ್ವರ  ಬೇಕೇ ಬೇಕು,     ಇನ್ನು  ವೈಜ್ಞಾನಿಕ  ನಿಯಮಗಳ  ರೀತ್ಯ   ಬಿಳಿಯ ಬಣ್ಣ  ದೊಳಗೆ  ಏಳು  ಬಣ್ಣಗಳು  ಮಿಳಿತಗೊಂಡಿವೆ ,   ನಮ್ಮ ಸುತ್ತ ಮುತ್ತ  ನಡೆಯುವ ಸಾಮಾನ್ಯ  ಕ್ರಿಯೆಗಳು  ನಮ್ಮ  ಅರಿವಿಗೆ ಬರುವುದಿಲ್ಲ , ಆದರೆ ಒಬ್ಬ  ಗೀತ ರಚನೆ ಕಾರ  ಇವನ್ನೆಲ್ಲಾ   ಸೂಕ್ಷ್ಮವಾಗಿ  ಗಮನಿಸಿ  ಹಾಡನ್ನು ರಚನೆ ಮಾಡಿ  ಸಾಮಾನ್ಯ  ಜನರಿಗೆ  ತಲುಪಿಸುತ್ತಾನೆ . ಇಂತಹ ಗೀತೆಗಳಿಗೆ  ಸಂಗೀತದ  ಅಲಂಕಾರ ಮಾಡಿದಾಗ   ಜನರ ಮನಸಿನಲ್ಲಿ   ಅವು  ಅತೀ ಹೆಚ್ಚುಕಾಲ  ಚಿರಾಯುವಾಗಿ  ಉಳಿದು  ಬಿಡುತ್ತವೆ . ಈ ಹಾಡಿನಲ್ಲಿ ಹೇಳುವಂತೆ   ಸಪ್ಥ ಸ್ವರಗಳು   ಅಂದ್ರೆ   ಏನೂ ಅಂತಾ  ಕೇಳುತ್ತೇವೆ ಹೊರತು  ಅದರ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ ,

 ಪುರಾತನ   ದೇಗುಲಕ್ಕೆ   ನಿತ್ಯ  ಸಂಗೀತದ  ಅಭಿಷೇಕ  


ಬನ್ನಿ ಸಪ್ತಸ್ವರ  ಗಳ ವಿಚಾರ ತಿಳಿಯೋಣ,  ಮೊದಲನೆಯದಾಗಿ   ಸ್ವರ ಅಂದ್ರೆ   ಮನುಷ್ಯನ  ಬಾಯಿಂದ  ಗಾಳಿಯ ರೂಪದಲ್ಲಿ   ಹೊರಡುವ  ಶಬ್ಧ ತರಂಗದ  ಏರಿಳಿತಗಳ   ಒಂದು ಸ್ವರೂಪ  ಅಷ್ಟೇ.  ಅವು ಕಣ್ಣಿಗೆ ಕಾಣಲಾರವು ಆದರೆ  ಕೇಳಿ ಅನುಭವಿಸಬೇಕಷ್ಟೇ .  ಬಹಳ ಹಿಂದೆಯೇ   ಹೀಗೆ ಹೊರಡಿಸುವ   ಶಬ್ಧಗಳ  ಸ್ವರೂಪ  ಏಳು  ಬಗೆಯದ್ದಾಗಿದೆ  ಎಂಬ  ವಿಚಾರವನ್ನು  ತಿಳಿದು, ಅವುಗಳಿಗೆ   ವಿವಿಧ ರೂಪದ  ಕಟ್ಟುಪಾಡುಗಳನ್ನು   ಹಾಕಿ ನಿಯಮ ಬದ್ದವಾಗಿ  ಸ್ವರಗಳಿಗೆ  ಮನುಷ್ಯನ ಉಸಿರಿನ  ಏರಿಳತಗಳ   ಸಂಯೋಜನೆ  ಮಾಡಲಾಗಿದೆ.  ಆ ನಿಯಮ ಬದ್ದ್ದ  ಸ್ವರಗಳು  ಏಳು   ಬಗೆಯದ್ದಾಗಿದ್ದು   ಅವುಗಳನ್ನು   ಸಂಕ್ಷಿಪ್ತವಾಗಿ ಸ.ರಿ.{ಅಥವಾ  ರೆ},    ಗ. ಮ.ಪ. ಧ. ನಿ. ಎನ್ನುತ್ತಾರೆ   ಈ ಏಳೂ ಸ್ವರಗಳ ವಿಸ್ತೃತ   ಹೆಸರು  ಕ್ರಮವಾಗಿ  1]  "ಸ. " ಎಂದರೆ  ಷಡ್ಜ, 2]   "ರಿ"   ಅಂದರೆ  ರಿಶಭ ,   3]  " ಗ "  ಎಂದರೆ  ಗಾಂಧಾರ  4]  " ಮ "  ಎಂದರೆ  ಮಧ್ಯಮ  5]  "ಪ " ಎಂದರೆ  ಪಂಚಮ  6]  "ಧ"  ಎಂದರೆ  ದೈವತ್     ಹಾಗು 7]  "ನಿ " ಎಂದರೆ  ನಿಶದ್   ಎಂದು  ಕರೆಯುತ್ತಾರೆ,  ಕರ್ನಾಟಕ ಸಂಗೀತದಲ್ಲಿ   "ರಿ"  ಎಂದು ಬಳಸುವ ಸ್ವರವನ್ನು   ಹಿಂದುಸ್ತಾನಿ ಸಂಗೀತದಲ್ಲಿ   "ರೆ "  ಎಂದು ಬಳಸುತ್ತಾರೆ , ಉಳಿದಂತೆ  ಎಲ್ಲಾ ಸ್ವರಗಳ ಉಚ್ಚಾರಣೆ   ಒಂದೇ ತೆರನಾಗಿರುತ್ತವೆ .  ಏಳು ಸ್ವರಗಳಿಗೂ  ಪ್ರಾಣಿ ಪಕ್ಷಿಗಳ  ಹಾಗು ದೇವತೆಗಳ   ನಾಮಕರಣ  ಮಾಡಲಾಗಿದ್ದು,    ಕ್ರಮವಾಗಿ  1]  " ಸ "   ಅಂದರೆ   "ನವಿಲು "  ಹಾಗು ಸ್ವರ   ದೇವತೆ   "ಗಣಪತಿ"    2]  "ರಿ" ಅಂದರೆ    "ಗೂಳಿ"  ಹಾಗು  ಸ್ವರ ದೇವತೆ  "ಅಗ್ನಿ" 3] " ಗ " ಎಂದರೆ   "ಮೇಕೆ " ಸ್ವರ ದೇವತೆ    "ರುದ್ರ"  4]  "ಮ"  ಎಂದರೆ  "ಪಾರಿವಾಳ " ಸ್ವರ ದೇವತೆ   "ವಿಷ್ಣು" 5]  "ಪ" ಎಂದರೆ  ಕೋಗಿಲೆ  ಸ್ವರ ದೇವತೆ  "ನಾರದ" 6]  "ಧ "  ಎಂದರೆ  "ಕುದುರೆ" ಸ್ವರ ದೇವತೆ   "ಸದಾ ಶಿವ"  7]  " ನಿ"  ಎಂದರೆ   "ಆನೆ"   ಸ್ವರ ದೇವತೆ    "ಸೂರ್ಯ"  ಈ ಸಪ್ತ ಸ್ವರಗಳಿಗೆ  ಎಷ್ಟೊಂದು ವಿಶೇಷ  ಇದೆ ಆಲ್ವಾ ...!             ಈ  ದೇಶದಲ್ಲಿ  ನಾವು  ಕೇಳುವ  ಎಲ್ಲಾ  ಬಗೆಯ ಸಂಗೀತಗಳು  ಈ   ಸಪ್ತ ಸ್ವರಗಳ ಅಡಿಪಾಯದ ಮೇಲೆ  ನಿರ್ಮಿತವಾದವು  ಎಂಬ ಮಾತು  ಸುಳ್ಳಲ್ಲ.



Saturday, May 28, 2016

ಅಸಹಾಯಕ "ನೀರು ನಾಯಿ " ಗಳು ಕಣ್ಮರೆಯಾಗುತ್ತಿವೆ, ಆದ್ರೆ ನಮಗೆ ಇವು ನಮ್ಮ ನಡುವೆಯೇ ಇದ್ದದ್ದು ಗೊತ್ತೇ ಆಗ್ಲಿಲ್ಲ .....!



  "ನಾನೇ ಕಣ್ರೀ   ನೀರು ನಾಯಿ ಅಂದ್ರೆ " [ ಚಿತ್ರ ಕೃಪೆ   ಅಂತರ್ಜಾಲ  ] 

ಮೊನ್ನೆ ಅಂತರ್ಜಾಲದಲ್ಲಿ   ಬ್ಲಾಗ್   ವೀಕ್ಷಣೆ   ಮಾಡುತ್ತಿದ್ದಾಗ   ಶಿರಸಿಯ   ವಿನಯ್ ಹೆಗ್ಡೆ  ಅವರ ಬ್ಲಾಗ್    "    ಅಘನಾಶಿನಿ "   ಯಲ್ಲಿ    ಶಿರಸಿಯ ಸಮೀಪ  ಹುಟ್ಟಿ ಹರಿಯುವ    "ಅಘನಾಶಿನಿ"    ನದಿಯು   ಶತಮಾನದಲ್ಲಿ    ಇದೆ ಮೊದಲ ಬಾರಿಗೆ    ಬತ್ತುತ್ತಾ   ಇದ್ದು ಆ ನದಿಯಲ್ಲಿ ವಾಸುಸುತ್ತಿದ್ದ   ನೀರುನಾಯಿಗಳು   ಅಪಾಯದ ಅಂಚಿನಲ್ಲಿರುವ ವಿಚಾರದ    ಬಗ್ಗೆ    ಮನಕರಗುವಂತೆ   ಬರೆಯಲಾಗಿತ್ತು.  ಸರಿ ಅಘನಾಶಿನಿ  ಬ್ಲಾಗಿನ  ಲೇಖನವನ್ನು   ನನ್ನ ಫೇಸ್ಬುಕ್  ಪುಟದಲ್ಲಿ  ಹಂಚಿಕೊಂಡೆ  , ಬಹಳಷ್ಟು ಜನ  ಅದನ್ನು ನೋಡಿ  ವಿಚಾರ ತಿಳಿದರು,  ಇನ್ನು ಕೆಲವರು   ನೀರು ನಾಯಿ ಅಂದ್ರೆ ಏನು ...?    ಅದನ್ನು ನಮ್ಮ ಮನೆಗಳಲ್ಲಿ ಸಾಕುವ  ನಾಯಿಗಳ   ಹಾಗೆ   ಸಾಕ ಬಹುದಾ ..?    ನೀರು ನಾಯಿ  ಅಂದ್ರೆ ಹೇಗಿರುತ್ತೆ ...?  ಅದು ಕಳ್ಳರನ್ನು ಹಿಡಿಯುತ್ತಾ  ...?    ಅದನ್ಯಾಕೆ ನೀರು ನಾಯಿ ಅಂತಾರೆ ..?    ಹೀಗೆ   ಪ್ರಶ್ನೆಗಳನ್ನು  ದೂರವಾಣಿ ಮೂಲಕ  ಕೇಳಿದರು .  ಇನ್ನು ನನ್ನ ಮಗನ ಜೊತೆ ಮಾತನಾಡುತ್ತಾ    ನೀರು ನಾಯಿ  ವಿಚಾರ ಹೇಳಿದೆ  , ಅವನು ಅಪ್ಪಾ   ನೀರು ನಾಯಿ ನಾನಂತೂ ನೋಡಿಲ್ಲ ,   ಈ ಬಗ್ಗೆ     ನಾನು ಓದಿದ    ಶಾಲೆ, ಕಾಲೇಜುಗಳ  ಪುಸ್ತಕದಲ್ಲಿ   ವಿಚಾರ ಇರಲಿಲ್ಲ,  ಯಾವುದೇ ಟಿ. ವಿ.  ಇದರ ಬಗ್ಗೆ  ಮಾಹಿತಿ ನೀಡಿಲ್ಲ  , ಯಾವುದೇ    ನ್ಯೂಸ್  ಪೇಪರ್  ನಲ್ಲಾಗಲಿ   ಮ್ಯಾಗಜಿನ್  ಅಲ್ಲಾಗಲಿ   ಓದಿಲ್ಲ,  ಇದೇನೋ   ಹೊಸ ಕಾರ್ಟೂನ್  ಹೆಸರು ಅನ್ನೋ ಹಾಗೆ ಕಾಣ್ತಿದೆ,  ಅಂದ. ಇನ್ನು ನನ್ನ ಕೆಲವು  ಗೆಳೆಯರನ್ನು   ನೀರು ನಾಯಿ ಬಗ್ಗೆ ಕೇಳಿದೆ   "ಅಯ್ಯೋ ಗುರು   ಅದೇ ನಮ್ಮನೆ  ನಾಯಿಗಳನ್ನು   ನೀರಿಗೆ   ಎತ್ತಿಹಾಕಿ ಅವುಗಳನ್ನೇ    ನೀರುನಾಯಿ ಅನ್ನಬೇಕೂ   ಅಷ್ಟೇ....!"  ಅಂತಾ ಹಾಸ್ಯ ಮಾಡಿದರು,  ಅವರಾದರೂ ಏನು ಮಾಡಿಯಾರು  ನಮ್ಮ   ನಾಡಿನ   ದೊಡ್ಡ ದೊಡ್ಡ ಕೆರೆಗಳಲ್ಲಿ,  ನದಿಗಳಲ್ಲಿ,  ಬದುಕಿ  ಬಾಳುತ್ತಿದ್ದ ಇಂತಹ ಒಂದು ಜೀವಿ  ಹೆಚ್ಚು ಕಡಿಮೆ ಅವಸಾನದ  ಅಂಚಿಗೆ ಬಂದು ನಿಂತಿರಲು   ಯಾರಿಗೆ ತಾನೇ ತಿಳಿಯುತ್ತೆ ಇವುಗಳ ಬಗ್ಗೆ .

ನಾವು ಇರೋದು ಹೀಗೆ ಗೊತ್ತಾ ....?  [ ಚಿತ್ರ ಕೃಪೆ   ಅಂತರ್ಜಾಲ ] 

ನಾನು ಬಾಲ್ಯ ಕಳೆದದ್ದು  ಹಳ್ಳಿಯಲ್ಲಿ  ನನ್ನ ಹಳ್ಳಿ   ನೆಲಮಾಕನ ಹಳ್ಳಿಯಿಂದ     ಮಳವಳ್ಳಿ ಪಟ್ಟಣ ದಲ್ಲಿದ್ದ   ಪ್ರಾಥಮಿಕ  ಹಾಗು  ಪ್ರೌಡ ಶಾಲೆಗೇ   ಸುಮಾರು ಐದು   ಕಿಲೋಮೀಟರು  ಬೈಸಿಕಲ್  ಮೂಲಕ   ತೆರಳುತ್ತಿದ್ದೆ,  ಆ  ಹಾದಿಯಲ್ಲಿ ನನಗೆ ಸಿಗುತ್ತಿದ್ದುದೆ   ಮಳವಳ್ಳಿಯ   ದೊಡ್ಡ ಕೆರೆ    ಆಗ  ಕೆಲವು  ಕೆಲವು ಜೀವಿಗಳು  ಗುಂಪು ಗುಂಪಾಗಿ  ನೀರೊಳಗೆ  ಮುಳುಗುತ್ತಾ    ಏಳುತ್ತಾ   ಚಲಿಸುತ್ತಿರುವುದನ್ನು   ಕಾಣುತ್ತಿದ್ದೆ,   ಆ ಸಮಯದಲ್ಲಿ   ಇವುಗಳ ಬಗ್ಗೆ   ತಿಳಿಯುವಷ್ಟು   ಜ್ಞಾನ ಇರಲಿಲ್ಲ,  ಇನ್ನು  ಬೇಸಿಗೆ ರಜೆಗೆ   ಅಜ್ಜಿಯ ತಂಗಿ ಮನೆ   ಮಳವಳ್ಳಿ ತಾಲೂಕಿನ   "ಮಿಕ್ಕೆರೆ "  ಎಂಬ ಗ್ರಾಮಕ್ಕೆ ಹೋದಾಗ , "ಬಾರೋ ನೀರು ನಾಯಿ   ಆಟಾ ಆಡೋದನ್ನು  ತೋರಿಸ್ತೇನೆ"    ಅಂತಾ    ಸಂಜೆ ವೇಳೆ   ಅಲ್ಲಿನ   ಕೆರೆಯ ದಂಡೆಯ ಮೇಲೆ  ಮನೆಯ ಹಿರಿಯರು  ನನ್ನನ್ನು   ಜೊತೆಯಲ್ಲಿ  ಕರೆದುಕೊಂಡು   ವಾಕಿಂಗ್    ಹೋಗುತ್ತಿದ್ದರು  ,    ಆ ಸಮಯದಲ್ಲಿ    ಗ್ರಾಮದ   ವಿಶಾಲವಾದ  ಕೆರೆಯ   ಕೋಡಿ  ಯ ಸಮೀಪ , ಬಹಳ ಹತ್ತಿರ   ಇವುಗಳ ದರ್ಶನ ಆಗುತ್ತಿತು,   ಗುಂಪುಗುಂಪಾಗಿ   ಕೆರೆಯ ಉದ್ದಗಲಕ್ಕೂ   ನೀರಲ್ಲಿ ಆಟವಾಡುತ್ತಾ ,   ತೇಲುತ್ತಾ   ಮುಳುಗುತ್ತಾ   ಇರುತ್ತಿದ್ದವು .  ನನಗಂತೂ  ಅವು ಪಲ್ಟಿ  ಹೊಡೆಯೋದನ್ನು  ನೋಡೋದೇ ಖುಷಿ ಕೊಡ್ತಾ ಇತ್ತು. ಹೇಗೆ   ಅಂದ್ರೆ  ಉದಾಹರಣೆಗೆ     ಡಾಲ್ಫಿನ್  ಗಳು ಸಮುದ್ರದಲ್ಲಿ ಚಿಮ್ಮಿ  ನೀರಿನೊಳಗೆ   ಪಲ್ಟಿ ಹೊಡೆಯೋ ಹಾಗೆ  ಇರುತ್ತಿತ್ತು.   ಅಂದಿನ ದಿನಗಳಲ್ಲಿ   ಸಾಮಾನ್ಯವಾಗಿ   ಕೆರೆಗಳು  ಯಾವುದೇ  ರೀತಿಯ  ಮಾಲಿನ್ಯಕ್ಕೆ   ಒಳಗಾಗಿರಲಿಲ್ಲ . ಕೆರೆಗಳಲ್ಲಿ   ಜೊಂಡು  ಬೆಳೆದಿರಲಿಲ್ಲ,   ಪರಿಶುದ್ದವಾದ   ನೀರು  ಇಂತಹ  ಜೀವಿಗಳಿಗೆ   ಆಸರೆಯಾಗಿತ್ತು.   ಆದರೆ ಇಂದಿನ  ಪರಿಸ್ಥಿತಿ ಬೇರೆ ಬಿಡೀ.  ಇಂದು  ಅವುಗಳು ವಾಸ ಮಾಡುತ್ತಿದ್ದ  ಕೆರೆಗಳು  ಕಣ್ಮರೆಯಾಗಿವೆ, ಇಲ್ಲದಿದ್ದಲ್ಲಿ  ಕೆರೆಗಳ ತುಂಬಾ ಜೊಂಡು ಹುಲ್ಲು   ಬೆಳೆದು  ನೀರಿನ  ಸೆಲೆ ಕಡಿಮೆಯಾಗಿದೆ,   ಕೆರೆಯಲ್ಲಿ ನೀರಿದ್ದರೂ  ಸಹ   ಮಾಲಿನ್ಯಗೊಂಡು  ಇಂತಹ ಜೀವಿಗಳು  ಬದುಕಲಾಗದಂತಹ   ಪರಿಸ್ಥಿತಿ  ನಿರ್ಮಾಣ ಆಗಿದೆ . ಅಪರೂಪಕ್ಕೆ   ಅಲ್ಲಿ ಇಲ್ಲಿ ಕಂಡುಬಂದರೆ  ಇವುಗಳನ್ನು  ಮಾಂಸಕ್ಕಾಗಿ , ಚರ್ಮಕ್ಕಾಗಿ    ಬೇಟೆಯಾಡಿ    ನಿರ್ನಾಮ  ಮಾಡಲಾಗುತ್ತಿದೆ.     ಇಂದು ನಮ್ಮ ಸುತ್ತ ಮುತ್ತಲಿನ    ಹಳ್ಳಿಗಳ   ಕೆರೆಗಳಲ್ಲಿ  ಇವುಗಳು  ನಿರ್ನಾಮವಾಗಿದ್ದು  ಕಾಣಸಿಗುವುದೇ ಇಲ್ಲಾ,   ನಮ್ಮ ನಾಡಿನ  ಕೆಲವು ನದಿಗಳ   ತಟದಲ್ಲಿ  ಇವುಗಳು    ಬಹಳ  ಅಪರೂಪಕ್ಕೆ ವಿರಳವಾಗಿ   ಕಾಣಸಿಗುತ್ತಿವೆ ,

ನಮ್ಮ ಪಾಡಿಗೆ ನಮ್ಮನ್ನು ಬಿಡ್ರಪ್ಪಾ    [ ಚಿತ್ರ ಕೃಪೆ   ಅಂತರ್ಜಾಲ ] 


    ಇನ್ನು ನೀರು ನಾಯಿಯ ಬಗ್ಗೆ ಸ್ವಲ್ಪ ತಿಳಿಯೋಣ    ಬನ್ನಿ ,  ಈ ನೀರು ನಾಯಿಯ   ವರ್ಣನೆ ಬಹಳ  ವಿಚಿತ್ರ ,  ಇದು  ನಮಗೆ ಕಾಣ ಸಿಗುವ  ಮುಂಗುಸಿ,  ಬೆಕ್ಕು,   ಅಳಿಲು,  ನಾಯಿ   ಇವುಗಳ   ಕೆಲವು ಗುಣಗಳನ್ನು ಅಳವಡಿಸಿಕೊಂಡಿರುವ     ಜೀವಿ .   ನೀರಿನ  ಆಶ್ರಯ ಇದು ಬದುಕಲು ಬೇಕೇ ಬೇಕು  ಹಾಗಾಗಿ ಇವು,   ಕೆರೆ,  ನದಿಗಳ ಆಶ್ರಯದಲ್ಲಿ  ಜೀವನ ಮಾಡುತ್ತವೆ,   ನದಿಗಳ ದಡದಲ್ಲಿ  ಶೀತವಿರುವ ಪ್ರದೇಶದಲ್ಲಿ   ಒಡ್ಡುಗಳ ಹತ್ತಿರ, ಮರಗಳ ಗುಂಪಿನ  ನಡುವೆ    ಪೊಟರೆ ಗಳನ್ನ  ನಿರ್ಮಿಸ್ಕೊಂಡು   ಗುಂಪು ಗುಂಪಾಗಿ  ವಾಸಿಸುತ್ತವೆ.  ಇವುಗಳ  ಮುಖವನ್ನು  ಗಮಸಿಸಿದರೆ   ಬೆಕ್ಕಿನ  ಹೋಲಿಕೆ  ಕಂಡುಬರುತ್ತದೆ,  ಮತ್ತೊಂದು ಕೋನದಿಂದ  ನೋಡಿದರೆ  ಮುಂಗುಸಿಯಂತೆ ಕಾಣುತ್ತದೆ,  ಪುಟ್ಟ ಕಿವಿಗಳು,   ಮುಖದ  ಮುಂಭಾಗಕ್ಕೆ  ಕಾಣುವ ಕಣ್ಣುಗಳು, ಮೂಗು,  ಮುಖದಲ್ಲಿ  ಮೀಸೆಯಂತಹ ಉದ್ದನೆಯ ಕೂದಲುಗಳು ,  ನಾಯಿಯ  ಚರ್ಮದಂತಹ   ಚರ್ಮ,  ಮುಂದಿನ ಎರಡೂ ಕಾಲುಗಳು  ದಪ್ಪವಾಗಿ  ಗಿಡ್ಡವಾಗಿದ್ದು  , ಹಿಂದಿನ ಕಾಲುಗಳು   ಮುಂದಿನ   ಕಾಲುಗಳಿಗಿಂತಾ  ಸಣ್ಣವಾಗಿ  ಉದ್ದವಾಗಿವೆ .  ಇನ್ನು ಇದರ ಬಾಲ ಉದ್ದವಾಗಿದ್ದು  ಬಹಳ ಶಕ್ತಿಯುತವಾಗಿವೆ. ಕೆಲವೊಮ್ಮೆ ಇವುಗಳು ಕಾಂಗರೂ ಗಳಂತೆ  ಎರಡು ಕಾಲಿನಲ್ಲಿ  ನಿಲ್ಲುತ್ತವೆ.   ಇವುಗಳ   ಜೀವಿತ  ಅವಧಿ    ಸುಮಾರು   ಹನ್ನೊಂದರಿಂದಾ  ಹದಿನಾರು ವರ್ಷಾ  ಅಷ್ಟೇ ,  ಈ ನೀರುನಾಯಿಗಳು ಸರಾಸರಿ   ನಾಲ್ಕರಿಂದ   ಐದು ಕಿಲೋ  ಗ್ರಾಂ  ತೂಕ  ತೂಗುತ್ತವೆ,  ಇನ್ನು  ನೀರುನಾಯಿಗಳ  ಸಂತಾನದ ವಿಚಾರಕ್ಕೆ ಬಂದ್ರೆ   ಹೆಣ್ಣು ಗರ್ಭ  ದರಿಸೋದು   ಇಪ್ಪತೆಂಟು  ದಿನಗಳಿಂದ  ಮೂವತ್ತು ದಿನಗಳು,   ಸಾಮಾನ್ಯವಾಗಿ  ಎರಡರಿಂದ ಮೂರು ಮರಿಗಳಿಗೆ   ನೀರುನಾಯಿ ಜನ್ಮ ನೀಡುತ್ತದೆ .  ಇನ್ನು  ಹೊಸದಾಗಿ ಜನಿಸಿದ ಮರಿಗಳು  ಐವತ್ತು  ಗ್ರಾಂ ತೂಕ   ಅಷ್ಟೇ , ಇವುಗಳು    ಮೊದಲ ಎರಡು ಅಥವಾ ಮೂರುವಾರ   ತಾಯಿಯ ಆಸರೆಯಲ್ಲೇ  ಆರೈಕೆ   ಮಾಡಿಸಿಕೊಳ್ಳುತ್ತವೆ,  ಬಾಯಲ್ಲಿ ಹಲ್ಲು ಮೂಡಿ,  ಕಣ್ಣು  ಬಿಟ್ಟು  ಓಡಾಡಲು   ನೀರುನಾಯಿಗೆ  ಸುಮಾರು ನಲವತ್ತು ದಿನಗಳು ಬೇಕು ,  ಆ ನಂತರವಷ್ಟೇ   ಈ  ಮರಿಗಳು ಗಟ್ಟಿಯಾದ  ಆಹಾರ ತಿನ್ನಲು  ಶಕ್ತವಾಗುತ್ತವೆ.   ಹದಿನಾಲ್ಕು ವಾರ  ಕಳೆದಾಗ  ನೀರುನಾಯಿಗಳು   ತಮ್ಮ  ಜೀವನ  ತಾವೇ  ನಿರ್ವಹಣೆ  ಮಾಡೋದನ್ನು  ಕಲಿತು ಬಿಟ್ಟಿರುತ್ತವೆ . ಇನ್ನು ಪರಸ್ಪರ   ಸೂಚನೆ ಕೊಡಲು,   ತಮ್ಮದೇ ಆದ ವಿಚಿತ್ರ ಕ್ರಮ ಅನಿಸರಿಸುತ್ತವೆ.  ಇವು ಹನ್ನೆರಡು  ವಿವಿಧ  ಬಗೆಯ  ಶಬ್ಧವನ್ನು  ತಮ್ಮ ಬಾಯಿಂದ  ಹೊಮ್ಮಿಸುತ್ತವೆ,  ಒಂದೊಂದು ರೀತಿಯ ಶಬ್ದಕ್ಕೂ  ಅದರದೇ  ಆದ ಅರ್ಥ ಇರುತ್ತದೆ,  ಇನ್ನೊಂದು ವಿಶೇಷ  ಅಂದ್ರೆ ಈ ಜೀವಿಗಳು ತಮ್ಮ ದೇಹದಿಂದ   ವಿವಿಧ ಬಗೆಯ  ವಾಸನೆ  ಹೊಮ್ಮಿಸುವ ಮೂಲಕ  ಸಂವಹನ   ನಡೆಸೋದು  ಒಂದು ಅಚ್ಚರಿಯ ವಿಚಾರ.  ಇನ್ನು ಇವುಗಳಿಗೆ  ಜಲಚರಗಳೇ ಆಹಾರ ,  ನೀರಿನಲ್ಲಿ  ಸಿಗುವ ವಿವಿಧ ಬಗೆಯ ಮೀನುಗಳು,   ಹೊಲ ಗದ್ದೆಯಲ್ಲಿ   ಸಿಗುವ   ಏಡಿ,  ಕಪ್ಪೆ , ಮುಂತಾದವುಗಳನ್ನು  ಭಕ್ಷಿಸುತ್ತವೆ.  ಇದು ಇವುಗಳ ಬಗ್ಗೆ  ಇರುವ ಮಾಹಿತಿ. ಕನ್ನಡ  ಅಂತರ್ಜಾಲ ತಾಣಗಳಲ್ಲಿ    ಏನೂ  ಮಾಹಿತಿ ಸಿಗದಿದ್ದರೂ    ಆಂಗ್ಲ    ಭಾಷೆಯಲ್ಲಿನ  ಕೆಲವೇ ಕೆಲವು ತಾಣಗಳಲ್ಲಿ   ನೀರುನಾಯಿಗಳ   ಬಗ್ಗೆ   ಸ್ವಲ್ಪ  ಮಾಹಿತಿ ಸಿಗುತ್ತವೆ,  ಈ ನೀರುನಾಯಿಗಳು   ಹಾಗು   ಸಮುದ್ರದಲ್ಲಿ   ಕಂಡುಬರುವ   ಸೀಲ್ [  ಸೀ  ಲಯನ್ ]  ಗಳು   ಹೊರನೋಟಕ್ಕೆ  ಕೆಲವೊಮ್ಮೆ   ಒಂದೇ ರೀತಿ  ಕಂಡು ಬರುತ್ತವೆ.  ಕೆಲವು ವಿಚಾರಗಳಲ್ಲಿ   ಚಿಕ್ಕಪ್ಪ ದೊಡ್ಡಪ್ಪನ   ಮಕ್ಕಳ ಹಾಗೆ  ಸಾಮ್ಯತೆ ಕಂಡು ಬರುತ್ತದೆ .

ನಮ್ಮನು  ಉಳಿಸಿ ಪ್ಲೀಸ್  [ ಚಿತ್ರ ಕೃಪೆ  ಅಂತರ್ಜಾಲ ] 


ಇನ್ನು ನಮ್ಮ   ನಾಡಿನ  ಕಥೆ  ಪುಸ್ತಕಗಳಲ್ಲಿ  ಇವುಗಳ ಉಲ್ಲೇಖ   ಅಷ್ಟಾಗಿ ಕಂಡು ಬರುವುದಿಲ್ಲ  ಆದರೆ  ಕಡಲ ತೀರದ ಭಾರ್ಗವ  ಕಾರಂತಜ್ಜ     ಬರೆದಿರುವ      "ಸ್ವಪ್ನದ  ಹೊಳೆ "   ಕಥೆಯಲ್ಲಿ  ಒಂದು ಸನ್ನಿವೇಶದಲ್ಲಿ  ನೀರುನಾಯಿಗಳ ಬಗ್ಗೆ  ಸ್ವಲ್ಪ ಮಾಹಿತಿ ನೀಡಿದ್ದಾರೆ.  ಉಳಿದಂತೆ   ಬೇರೆ ಕಥೆಗಾರರ ಕಣ್ಣಿಗೆ ಇವು  ಕಂಡಿಲ್ಲ.  ಇನ್ನು ಇವುಗಳು    ಬಹಳ  ಸಾದು  ಜೀವಿಗಳಾದ  ಕಾರಣ ಇವುಗಳನ್ನು  ಬೇಟೆಗಾರರು  ಬಹಳ ಸುಲಭವಾಗಿ   ಕೊಲ್ಲುತ್ತಾರೆ,  ಹಾಗಾಗಿ ಇವುಗಳು ಅಳಿವಿನ ಅಂಚಿನಲ್ಲಿ  ಬಂದು ನಿಂತಿವೆ ,   ಈಗಲಾದರೂ    ನಾವುಗಳು ಎಚ್ಚರ ವಹಿಸಿ  ಇವುಗಳನ್ನು ರಕ್ಷಣೆ ಮಾಡುವ  ನಿಟ್ಟಿನಲ್ಲಿ   ಕಾರ್ಯಕ್ರಮ  ಹಾಕಿಕೊಳ್ಳಬೇಕಾಗಿದೆ , ಇಲ್ಲದಿದ್ದರೆ   ಇವುಗಳ ಚಿತ್ರವನ್ನು ಗೋಡೆಯ ಮೇಲೆ ಅಂಟಿಸಿ  ಮುಂದಿನ ಪೀಳಿಗೆಗೆ   ತೋರಿಸಬೇಕಾಗುತ್ತದೆ.  ದಯಮಾಡಿ ನಿಮ್ಮ   ಊರಿನ ಅಥವಾ ಹಳ್ಳಿಗಳ   ಕೆರೆಗಳಲ್ಲಿ   ಈ ನೀರುನಾಯಿಗಳು ಕಂಡು ಬಂದರೆ   ಅವುಗಳನ್ನು  ಸಂರಕ್ಷಿಸಲು ಪ್ರಯತ್ನಿಸಿ  ಗೆಳೆಯರೇ.

[ ಸೂಚನೆ :-) ಈ ಲೇಖನದಲ್ಲಿನ  ಚಿತ್ರಗಳನ್ನು  ಅಂತರ್ಜಾಲದ ಸಹಾಯದಿಂದ  ಕೃತಜ್ಞತಾ ಪೂರ್ವಕವಾಗಿ  ಪಡೆದಿದ್ದೇನೆ, ಚಿತ್ರಗಳ ಹಕ್ಕು ಮೂಲ  ಛಾಯಚಿತ್ರಗಾರರದು , ಮಾಹಿತಿಯನ್ನು  ವಿವಿಧ ಪುಸ್ತಕಗಳು, ಅಂತರ್ಜಾಲದ ಸಹಾಯದಿಂದ  , ಕೆಲವು  ಪಶು ವೈಧ್ಯರಿಂದ   ಕೃತಜ್ಞತಾ ಪೂರ್ವಕವಾಗಿ  ಪಡೆದು  ಸಂಗ್ರಹಿಸಿ  ಇಲ್ಲಿ ಬಳಸಿಕೊಳ್ಳಲಾಗಿದೆ .   ನೀರುನಾಯಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ  ಆ ಮಾಹಿತಿಯನ್ನು   ನಿಮ್ಮ ಅನಿಸಿಕೆಯಲ್ಲಿ   ಹಾಕಿದರೆ ಉಳಿದವರಿಗೆ ಅನುಕೂಲ ಆಗುತ್ತದೆ . ]


 

Sunday, May 22, 2016

ಇದು ಹೀಗೆ ಆಗಬಾರದಿತ್ತು ಅಂದ್ರು ಹಲವರು, ಬದುಕಿ ಬಂದು ಥ್ಯಾಂಕ್ಸ್ ಹೇಳಿದ್ದಕ್ಕೆ ಖುಷಿ ಪಟ್ರು ಡಾಕ್ಟ್ರು ......!ನನ್ ಕಥೆ ಭಾಗ ....03

 
ನೊಂದ ಮನಸಿಗೆ  ಒಳ್ಳೆಯ ಮಾತುಗಳು  ಪುಷ್ಪಗುಚ್ಚದಂತೆ  ಮುದನೀಡುತ್ತವೆ 


ಆಸ್ಪತ್ರೆಯಲ್ಲಿ ಚಿಕಿತ್ಸೆ    ಪದೆದದ್ದಾಯಿತು,  ವೈಧ್ಯರು  ಮನೆಯಲ್ಲಿ   ವಿಶ್ರಾಂತಿ ಪಡೆಯಲು  ಸೂಚಿಸಿದ ಮೇರೆಗೆ  ನನ್ನ ವಿಶ್ರಾಂತಿ   ಪರ್ವ ಆರಂಭವಾಯಿತು. ನನಗೆ ಅಪಘಾತ ಆದ ವಿಚಾರ  ನನ್ನ ಗೆಳೆಯರಿಗೆ  ನೆಂಟರಿಗೆ   ತಿಳಿಯಲು  ತಡಾ ಆಗಲಿಲ್ಲ,    ದಾವಿಸಿಬಂದರು ಸಂತೈಸಲು........! ಕಂಬನಿ  ಮಿಡಿದವರು  ಹಲವರು, ಕೆಲವರು ಹಾರೈಸಿದರು  ಮತ್ತೆ ಕೆಲವರು .....? ಪತ್ತೆದಾರರಂತೆ  ......ಪ್ರಶ್ನೆ    ಕೇಳಿ  ಎಡವಟ್ಟು ಮಾಡಿಕೊಂಡರು     ಮುಂದೆ ....?    ಹಾಗೆ  ನಡೆಯಿತು , ಪ್ರತಿನಿತ್ಯ  ಕನಿಷ್ಠ   ಹತ್ತರಿಂದ ಇಪ್ಪತ್ತು ಜನ   ಮನೆಗೆ ಬಂದು  ತಮ್ಮ ಪ್ರೀತಿ ತೋರಿದರು ಬಹಳಷ್ಟು ಮಂದಿ. ಅಚ್ಚರಿ ಅಂದ್ರೆ  ಫೇಸ್ಬುಕ್ ನಲ್ಲಿ   ಪರಿಚಯ  ಆಗಿ ಮುಖವನ್ನೇ ನೋಡದ ಕೆಲವರು  ಅದು ಹೇಗೋ  ನನ್ನ ವಿಳಾಸ  ಪತ್ತೆಮಾಡಿ  ಮನೆಗೆಬಂದು  ತಮ್ಮ ಪ್ರೀತಿ ತೋರಿದರು . ಬಹಳಷ್ಟ್ ಜನ   ಹಣಕಾಸು ಸಹಾಯ   ಮಾಡಲು ಮುಂದೆ ಬಂದರು ,  ಆದರೆ ಅದನ್ನು  ನಯವಾಗಿ ನಿರಾಕರಿಸಿದೆ,  ತೀರಾ ಆತ್ಮೀಯರು  ಕೆಲವರು  ನನ್ನ ಬೆನ್ನ ಹಿಂದೆ ನಿಂತರು , ಪ್ರತಿನಿತ್ಯ   ಆಗಮಿಸುವ  ನೆಂಟರು , ಗೆಳೆಯರುಗಳ ಜೊತೆ ಮಾತು ಕಥೆ  ಇವುಗಳ  ಜೊತೆಗೆ  ದೂರವಾಣಿ  ಕರೆಗಳನ್ನು ಸ್ವೀಕರಿಸುವುದೇ  ನಮ್ಮ ಮನೆಯಲ್ಲಿ  ಒಂದು ಹೊಸ ದಿನಚರಿ ಆಯ್ತು,    ಮೊದಮೊದಲು ನನಗೆ  ಮಾತನಾಡಲು, ಎದ್ದು  ಕುಳಿತು  ಮಾಡುವುದು   ಸಾಧ್ಯವಾಗದ   ಕಾರಣ   ನನ್ನ ಮನೆಯವರುಗಳೇ   ನನ್ನ ಪರವಾಗಿ   ಈ ಕಾರ್ಯವನ್ನು  ಮಾಡಿದರು.    ದೇಹದಲ್ಲಿ ಶಕ್ತಿ ಇಲ್ಲದೆ, ನೋವನ್ನು ಅನುಭವಿಸುತ್ತಾ ,  ಮಾತ್ರೆ, ಔಷಧಿ,  ನಿದ್ದೆ, ಊಟ ,  ಎಲ್ಲಕ್ಕೂ   ಆಸರೆ ಪಡೆಯುತ್ತಾ   ದಿನಗಳನ್ನು  ಕಳೆಯುತ್ತಿದ್ದೆ.  ಒಮ್ಮೊಮ್ಮೆ ನಾನು  ಜೀವವಿರುವ  ಅಸಹಾಯಕ  ದೇಹದ  ಯಜಮಾನ   ಎಂಬ ಭಾವನೆ  ಬರುತ್ತಿತ್ತು. ಓದಲು ಆಗುತ್ತಿರಲಿಲ್ಲ , ಎದ್ದುಕುಳಿತರೆ   ತಲೆ ಚಕ್ಕರ್  ಹೊಡೆಯೋದು, ಟಿ. ವಿ. ನೋಡಲು  ಆಗುತ್ತಿರಲಿಲ್ಲ, ತಲೆ ನೋವು ಬರುತಿತ್ತು,  ಇವುಗಳ ಜೊತೆಗೆ  ಹೆಣಗಾಡುತ್ತಾ  ಕೆಲವು  ವಾರಗಳು ಕಳೆದವು,  ನಿಧಾನವಾಗಿ   ದೇಹಕ್ಕೆ   ಚೈತನ್ಯ   ಬರುತ್ತಿತ್ತು, ಬಂದವರೊಡನೆ  ಮಾತನಾಡುವಷ್ಟು   ಶಕ್ತಿ ಬಂತು.   ಬರುವ ನೆಂಟರು , ಗೆಳೆಯರು  ಬರುತ್ತಲೇ ಇದ್ದರು, ಇಂತಹ ವೇಳೆ ಬಂದರು  ಒಬ್ಬ  ಆತ್ಮೀಯರು .





ಶೀರ್ಷಿಕೆ ಸೇರಿಸಿ



ಮನೆಗೆ ಬಂದವರೇ   ಬಹಳ ಆತ್ಮೀಯವಾಗಿ   ಹತ್ತಿರ ಬಂದು  ತಲೆ ಸವರಿದರು, ಮನೆಯವರೆಲ್ಲರ  ಜೊತೆ  ಮಾತು ಕಥೆ ಆಯಿತು,  ನಂತರ  ಅಲ್ಲಿದ್ದ ಕೆಲವರಿಗೆ ಇವರನ್ನು   ಸ್ವಲ್ಪ   ಜಾಸ್ತಿ ಹೊಗಳಿ  ಪರಿಚಯ ಮಾಡಿಕೊಟ್ಟೆ . ಅಲ್ಲೇ  ಆಗಿತ್ತು ತಪ್ಪು.  ಅಲ್ಲಿದ್ದವರ ಪರಿಚಯ ಮಾಡಿಕೊಂಡು    ನನ್ನ ಹತ್ತಿರ ಬಂದು ಕುಳಿತರು,  ಮತ್ತೆ ವಿಶೇಷ ಏನಪ್ಪಾ ....?  ಅಪಘಾತ  ಹೇಗೆ  ಆಯ್ತು ....?  ಅಂದರು   ನಾನು ನನಗೆ  ಗೊತ್ತಿದ್ದ ,  ನನಗಾದ  ಅಪಘಾತದ  ವಿಚಾರವನ್ನು   ಅವರಿಗೆ  ಹೇಳಿದೆ.  ನಂತರ   ಶುರು ಆಯ್ತು ಅವರ  ಪ್ರಶ್ನೆಗಳ ಸುರಿಮಳೆ,   ಅಲ್ಲಾ    ಈ ತುದಿಯಿಂದ   ನೀನು ರಸ್ತೆ    ದಾಟುತ್ತಿದ್ದರೆ... ಆ ಬೈಕಿನವರು   ಈ  ಆಂಗಲ್  ನಲ್ಲಿ  ನಿನಗೆ ಗುದ್ದಿರಬೇಕು,    ಹೀಗೆ ಗುದ್ದಿದರೆ  ನಿನಗೆ   ಇಲ್ಲಿ ಪೆಟ್ಟಾಗಿರಬೇಕು ,  ಆದರೆ  ನಿನಗೆ   ಆಗಿರೋದು   ಬೇರೆ ತರಹ  ಇದೆ  ಇದು ಹ್ಯಾಗೆ ಸಾಧ್ಯ  ...?   ಅಂದರು,  ನನಗೆ   ಇನ್ನೂ    ನನ್ನ ಅಪಘಾತದ   ವಿವರ ತಿಳಿದಿರಲಿಲ್ಲ,  ಅಪಘಾತ  ಆದ ತಕ್ಷಣ   ಪ್ರಜ್ಞೆ ಹೋಗಿತ್ತು,  ಹೀಗಿರುವಾಗ   ಇಂತಹ ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ   ತರಲಿ. ಇರುವ ವಿಚಾರ   ಹೇಳಿದೆ   ಆ ಯಪ್ಪಾ   ಯಾವುದೇ ಕೆಟ್ಟ  ಉದ್ದೇಶ  ಇಲ್ಲದೆ ಇದ್ದರೂ   ಸುಮ್ಮನೆ   ಸುರಿಮಳೆ   ಹಾಕುತ್ತಲೇ ಇದ್ದರು . ಒಂದು ಕಡೆ  ಗಾಯದ ನೋವು,  ತಲೆಯಲ್ಲಾ  ಸುತ್ತುತ್ತಿರುವ  ಅನುಭವ , ದೇಹದಲ್ಲಿ  ತ್ರಾಣವಿಲ್ಲದ   ಅಸಹಾಯಕ ಸ್ಥಿತಿ ,  ಅವರಿಗೆ ತಿಳಿ ಹೇಳಲು  ಹೋದರೆ  ಅವರಿಗೆಲ್ಲಿ ನೋವು ಆಗುತ್ತದೆಯೋ  ಎಂದು  ನಮ್ಮ ಮನೆಯವರಿಗೆ   ಸಂಕೋಚ ,  ಈ ಪರಿಸ್ಥಿತಿ   ನಿಜಕ್ಕೂ ಬಯಸದೆ ಬಂದ   ನೋವಾಗಿತ್ತು,    ಇದೆಲ್ಲವನ್ನೂ    ನೋಡುತ್ತಾ   ಕುಳಿತಿದ್ದ   ನನ್ನ ಗೆಳೆಯರೊಬ್ಬರ    ಪತ್ನಿ,     ಸಾರ್   ಸುಮ್ಮನಿರಿ,   ಅವರ ಪಾಡಿಗೆ ಅವರು ನೋವು ತಿನ್ನುತ್ತಾ  ನರಳುತ್ತಾ ಇದ್ದಾರೆ , ನೀವು    ಸುಮ್ನೆ ಪ್ರಶ್ನೆ ಹಾಕ್ತಾ   ಅವರ ನೋವನ್ನು ಮತ್ತಷ್ಟು ಜಾಸ್ತಿ ಮಾಡ್ತಾ   ಇದೀರ,  ಅಪಘಾತ  ಆದಾಗ ಅವರಿಗೆ ಜ್ಞಾನ  ಹೋಗಿದ್ದಾಗ  ಹೇಗೆ  ಹೇಳುತ್ತಾರೆ  ಏನು ನಡೆಯಿತೆಂದು , ಅದನ್ನು ಯಾರಾದ್ರೂ  ವೀಡಿಯೊ  ಮಾಡಿದ್ರೆ ನಿಮ್ಮ ಪ್ರಶ್ನೆಗಳಿಗೆ   ಉತ್ತರ ಕೊಡಬಹುದು,  ರೀ ಬಾಲೂ   ಮೊದಲು ರೂಂ  ಒಳಗೆ ಹೋಗಿ, ರೆಸ್ಟ್ ಮಾಡಿ  ಪ್ರತಿನಿತ್ಯ  ಹೀಗೆ ಬಂದವರೆಲ್ಲಾ   ಪ್ರಶ್ನೆ  ಕೇಳಿ  ಹಿಂಸೆ ಮಾಡಿದ್ರೆ   ನಿಮ್ಮ ಆರೋಗ್ಯ  ಸುಧಾರಿಸೋದು ಕಷ್ಟ  ಆಗುತ್ತೆ  , ಅಂತಾ ಹೇಳಿ ಬಲವಂತವಾಗಿ   ಒಳಗೆ  ಕಳುಹಿಸಿದರು,   ಇದನ್ನು ನಿರೀಕ್ಷಿಸದೆ ಇದ್ದ   ಆ ಆತ್ಮೀಯರು ಒಂದು ಕ್ಷಣ   ಅವಕ್ಕಾದರು ....!  ತನ್ನ ತಪ್ಪು ಅರಿವಾಯಿತು ಅನ್ನ್ಸುತ್ತೆ  "ಸಾರಿ ಕಣಯ್ಯ  ಪರಿಸ್ಥಿತಿಯ  ಅರಿವಿಲ್ಲದೆ    ಏನೇನೋ ಪ್ರಶ್ನೆ ಕೇಳಿದೆ"   ಅಂತಾ  ಹೇಳಿ    ಅಲ್ಲಿಂದ ನಿರ್ಗಮಿಸಿದರು .   ನಾವು ಕೆಲವೊಮ್ಮೆ   ರೋಗಿಗಳನ್ನು ಕಾಣಲು ಹೋದಾಗ   ಮಾತನ್ನು  ಎಷ್ಟು ಮಿತವಾಗಿ  ಆಡಬೇಕು,  ಹಾಗು ಅವರ ಮನಸಿಗೆ ಘಾಸಿಯಾಗದಂತೆ  ನಡೆದುಕೊಳ್ಳಬೇಕು  ಎಂಬ   ವಿಚಾರ   ನನ್ನ ಅರಿವಿಗೆ  ವೈಜ್ಞಾನಿಕವಾಗಿ ಅರ್ಥ ಆಯ್ತು.





ಯಾವ ಜನ್ಮದ  ಮೈತ್ರಿ  ಈ ಹುಡುಗನಿಗೆ ಹಾಗು ನನಗೆ 



ಹೀಗೆ   ಕೆಲವು  ತಿಂಗಳು ಕಳೆದವು   ದೇಹಕ್ಕೆ ಚೈತನ್ಯ   ಬರಲು ಶುರು ಆಯ್ತು,  ಮನಸಿನಲ್ಲಿ  ನನ್ನ ಪ್ರಾಣ ಉಳಿಸಿದ   ಜಗದೀಶ್, ಹಾಗು ವೈಧ್ಯರನ್ನು ಕಾಣುವ ಬಯಕೆ  ಜಾಸ್ತಿಯಾಯ್ತು,  ಸರಿ ಒಂದು ದಿನ  ನನ್ನ  ಹುಡುಗನ ಕಾರಿನಲ್ಲಿ  ಚನ್ನರಾಯಪಟ್ಟಣಕ್ಕೆ  ಹೊರಟೇಬಿಟ್ಟೆ,  ಜಗದೀಶ್  ಸಿಕ್ಕೆಬಿಟ್ಟರು  ಆನಂದಕ್ಕೆ ಪಾರವಿಲ್ಲ,  ಕೃತಜ್ಞತೆ  ತುಂಬಿದ ಮನ  ಆ ತಮ್ಮನಂತಹ  ಹುಡುಗನನ್ನು ತಬ್ಬಿಕೊಳ್ಳಲು  ಹಾತೊರೆಯುತ್ತಿತ್ತು ,  ಜೀವ ಉಳಿಸಿದ  ವ್ಯಕ್ತಿಯನ್ನು ಕಣ್ಣಾರೆ ಕಾಣುವ ಭಾಗ್ಯ  ಒದಗಿ  ಬಂದಿತ್ತು,  ಗೌರವ ಹಾಗು ಪ್ರೀತಿಯಿಂದ ಅಪ್ಪಿಕೊಂಡೆ ,  ಮಾತುಗಳು  ಹೊರಬರಲು ತಿಣುಕಾಡಿದವು ,  ಬಹಳ ಆತ್ಮೀಯವಾಗಿ  ಮಾತನಾಡಿ   ಜಗದೀಶ್  ನಿಮ್ಮ ಈ ಉಪಕಾರಕ್ಕೆ   ಬೆಲೆ ಕಟ್ಟಲಾರೆ   ಎಂದು ಹೇಳುತ್ತಾ   ಸಿಹಿ  ತಿಂಡಿಯ  ಪೊಟ್ಟಣ  ನೀಡಿದೆ,  ಆ ಹುಡುಗನಿಗೂ   ಖುಷಿಯಾಗಿತ್ತು,  ಅಪಘಾತದ    ವಿವರ  ತಿಳಿಸುವಂತೆ  ಕೋರಿದೆ,  ಬನ್ನಿ ಸಾರ್  ಅಂತಾ ಹೇಳಿ ನನಗೆ ಅಪಘಾತ   ಆದ  ವಿವರ   ನೀಡುತ್ತಾ   ಇದೆ ನೋಡಿ ಸಾರ್  ನಿಮಗೆ  ಆಕ್ಸಿಡೆಂಟ್  ಆದ ಜಾಗ  ಅನ್ನುತ್ತಾ    ಜಾಗ ತೋರಿಸಿದರು ,




ಅಪಘಾತ  ಆದ ಸ್ಥಳ 


  ರಾಷ್ಟ್ರೀಯ ಹೆದ್ದಾರಿಯಲ್ಲಿ   ನನಗೆ ಅಪಘಾತ ನಡೆದಿತ್ತು,  ಅಂದು ಪುಣ್ಯಕ್ಕೆ  ಯಾವುದೇ  ಹೆಚ್ಚಿನ  ವಾಹನ ಸಂಚಾರ ಇರಲಿಲ್ಲ, ಇಲ್ಲಿಂದಾನೆ ಸಾರ್    ಆಪೆ ಆಟೋದಲ್ಲಿ  ಹಾಕಿಕೊಂಡು  ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು , ಅಂದರು ,  "ಜಗದೀಶ್  ನನಗೆ  ಟ್ರೀಟ್ಮೆಂಟ್  ನೀಡಿದ ಡಾಕ್ಟರ್  ಸಿಗುತ್ತಾರ...?" ಅಂದೇ , ಅದಕ್ಕೇನಂತೆ  ಬನ್ನಿ ಹೋಗೋಣ ಅಂತಾ  ಹೇಳಿ    ಸರ್ಕಾರಿ ಆಸ್ಪತ್ರೆಗೆ    ಕರೆದುಕೊಂಡು   ಹೋದರು,  ನನಗೆ ಪ್ರಾಥಮಿಕ  ಚಿಕಿತ್ಸೆ ನೀಡಿ,  ಮುಖದಲ್ಲಿ  ಮೂರು ಕಡೆ ಹೋಳಿಗೆ ಹಾಕಿ ರಕ್ತಸ್ರಾವ  ನಿಲ್ಲಲು  ಕಾರಣರಾಗಿದ್ದ ವೈಧ್ಯರು ಇವರು ,  ಕೊನೆಗೆ ಅವರನ್ನು  ಹುಡುಕಿ,  ಭೇಟಿಮಾಡಿದೆವು, ,





ಚಿಕಿತ್ಸೆ  ನೀಡಿ ಪ್ರಾಣ ಉಳಿಸಿದ  ಸರ್ಕಾರಿ ವೈಧ್ಯರಾದ   ಶ್ರೀನಿವಾಸ್  ಅವರು 



ಯಾರು ನೀವು ಅಂದರು  ಆ ವೈಧ್ಯರು ...?  ಅಪಘಾತದ   ನೆನಪನ್ನು ಹೇಳಿದಾಗ   ಓ   ಗೊತ್ತಾಯ್ತು ಗೊತ್ತಾಯ್ತು  ಎಂದು ಹೇಳಿ  ಅಂದಿನ ಘಟನೆಯನ್ನು   ಸ್ಮರಿಸಿಕೊಂಡರು . ಅವರಿಗೆ ಕೃತಜ್ಞತೆ  ಅರ್ಪಿಸಿ  ಸಿಹಿಯ ಪ್ಯಾಕೆಟ್   ನೀಡಲು , ಅವರಿಗೆ ಅಚ್ಚರಿಯಾಯ್ತು,  ಅಲ್ಲಾ ಸಾರ್ ನನ್ನ ಕರ್ತವ್ಯ ನಾನು ಮಾಡಿದೆ ಅಷ್ಟೇ  ಅಂದರು.  ಮುಂದುವರೆದು,  ಇಲ್ಲಿ ಅಪಘಾತ ಆಗ್ತಾ  ಇರುತ್ತೆ   ನೂರಾರು ಜನರಿಗೆ ತುರ್ತು  ಚಿಕಿತ್ಸೆ  ನೀಡಿದ್ದೇನೆ ,  ಚಿಕಿತ್ಸೆ  ಪಡೆದವರು  ಒಮ್ಮೆ ಹೋದರೆ ಮತ್ತೆ ಬರುವುದಿಲ್ಲ,  ಅದನ್ನು ನಾವು ನಿರೀಕ್ಷೆನೂ  ಮಾಡೋದಿಲ್ಲ , ಆದರೆ ನನಗೆ ಅಚ್ಚರಿ ಅಂದ್ರೆ  ಅಪಘಾತದ ಬಗ್ಗೆ  ಚಿಕಿತ್ಸೆ ಪಡೆದು   ನಂತರ  ಬಂದು  ನನಗೆ ಕೃತಜ್ಞತೆ  ಹೇಳಿದ ಮೊದಲನೇ  ವ್ಯಕ್ತಿ ನೀವು,  ನನ್ನ  ಹುದ್ದೆಯ ಬಗ್ಗೆ ಹೆಮ್ಮೆ ಪಡುವಂತೆ  ಮಾಡಿದ್ರೀ  ಅನ್ನುತ್ತಾ ಪ್ರೀತಿಯ  ಮಾತನಾಡಿದರು. ಅವರಿಂದ  ಬೀಳ್ಕೊಂಡು  ಜಗದೀಶ್  ಜೊತೆ ಚನ್ನರಾಯಪಟ್ಟಣದಲ್ಲಿ   ಊಟ ಮಾಡಿ  , ವಾಪಸ್ಸು  ಹೊರಡುವ ಮೊದಲು . ಜಗದೀಶ್  ನನ್ನ ಚಿಕಿತ್ಸೆಗೆ   ನೀವು ಖರ್ಚು   ಮಾಡಿದ ಹಣ   ಎಷ್ಟು   ಹೇಳಿ ದಯವಿಟ್ಟು ಅಂದೇ .  ಆದರೆ ಆ ಹುಡುಗ   ಏ  ಎನ್ ಸಾರ್ ನನಗೆ   ದುಡ್ಡುಕೊಟ್ಟು   ಅವಮಾನ ಮಾಡ್ತೀರ  ಅನ್ದುಬಿಡೋದೇ , ನನಗೆ ದಿಕ್ಕು ತೋಚಲಿಲ್ಲ .   ಅವರಿಗೆ ಮತ್ತೊಮ್ಮೆ   ಕೃತಜ್ಞತೆ  ಹೇಳಿ ಮನೆಯ ಹಾದಿ ಹಿಡಿದೇ ,  ದಾರಿಯಲ್ಲಿ   ಹಲವಾರು ಪ್ರಶ್ನೆಗಳು  ಕಾಡತೊಡಗಿದವು. ೧]  ಈ ಹುಡುಗ ಯಾರು,     ೨] ನನ್ನನ್ನು ಉಳಿಸ ಬೇಕು  ಅಂತಾ  ಇವನಿಗೆ  ಯಾಕೆ ಅನ್ನಿಸಿತು, ೩ ] ಈ ಹುಡುಗ ನನ್ನ ನೆಂಟನಲ್ಲ, ಒಡ ಹುಟ್ಟಿದವನಲ್ಲಾ  ಆದರೂ  ಈ ತರಹದ ಪ್ರೀತಿ ಯಾಕೆ ಬಂತು ..?  ನನ್ನಿಂದ   ತಾನು ಖರ್ಚು ಮಾಡಿದ  ಹಣವನ್ನೂ  ಸಹ  ತೆಗೆದುಕೊಳ್ಳಲಿಲ್ಲ   ಯಾಕೆ ..?   ಆ ಸರ್ಕಾರಿ ವೈಧ್ಯರೇಕೆ  ಅಷ್ಟು  ಉತ್ತಮವಾಗಿ  ಪ್ರಥಮ  ಚಿಕಿತ್ಸೆ ನೀಡಿದರು ...?   ಈ  ಅಪರಿಚಿತನಿಗೆ   ಈ ಊರಿನಲ್ಲಿ  ಎಷ್ಟೆಲ್ಲಾ   ಉಪಕಾರ  ಸಿಗಲು  ಹೇಗೆ ಸಾಧ್ಯಾ ...?  ಯಾರ ಶುಭ ಹಾರೈಕೆ  ನನ್ನನ್ನು ಬದುಕಿಸಿತು, ..? ಹೀಗೆ   ಪ್ರಶ್ನೆಗಳ ಪ್ರವಾಹ ಬಂದವು , ಯಾವುದಕ್ಕೂ   ನನ್ನ ಬಳಿ  ಉತ್ತರವಿರಲಿಲ್ಲ,   ಹಾಗೆ ಆಲೋಚಿಸುತ್ತಾ   ನಿದ್ದೆಗೆ ಜಾರಿದೆ,   ಸಾರ್ ಮನೆ ಬಂತು ಇಳಿಯಿರಿ  ಅಂದಾ ನಮ್ಮ ಹುಡುಗ ನವೀನ.


Wednesday, April 27, 2016

ಅನಾಥವಾಗಿ ಸಾವಿನ ಕದ ತಟ್ಟಿದ ಸಮಯ.........!!! ನನ್ ಕಥೆ ಭಾಗ ....02

 ಅದೃಷ್ಟ  ಇದ್ದರೆ  ಯಾರೋ ದಿಕ್ಕು ನಮಗೆ , ಇಲ್ಲದಿದ್ರೆ ....?



ಶ್ರೀಕಾಂತ್ ಕಾರು ಬೆಂಗಳೂರಿನ ಕಡೆ  ಹೊರಟಿತ್ತು  ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು,  ಮಸುಕು ಮಸುಕಾಗಿ   ಒಂದು ಬೈಕ್  ಕಂಡಿತ್ತು,   ಕಣ್ಣು  ಮುಚ್ಚಿತ್ತು,  ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,   ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,   ಮಾತನಾಡಲು   ಒಣಗಿದ  ಬಾಯಿಯಲ್ಲಿ  ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................! ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .   ಆಮೇಲೆ   ಕಣ್ ತೆರೆದಾಗ   ಸುತ್ತಲೂ    ಬಿಳಿ   ಬಣ್ಣದ ಪರದೆಗಳ   ದರ್ಶನ,   ಏನೋ ಸಪ್ಪಳ ಕೇಳುತ್ತಿತ್ತು,  ಕಣ್ಣು ಬಿಟ್ಟರೆ   ಕಂಡಿದ್ದು,  ನನ್ನ ತಾಯಿ ಹಾಗು ಪತ್ನಿ ಯ ಭಯಗೊಂಡ  ಮುಖಗಳು, ಅರೆ ಇಲ್ಯಾಕೆ ಬಂದ್ರು ಇವರು  ಅಂತಾ   ಎದ್ದೇಳಲು  ಪ್ರಯತ್ನಿಸಿದೆ , ಊ   ಹೂ    ಆಗಲಿಲ್ಲ, ಎಡಗಣ್ಣು ಮಾತ್ರ ಕಾಣುತ್ತಿತ್ತು,   ಬಲ ಕಣ್ಣಿನ ಮೇಲೆ ಬ್ಯಾಂಡೇಜ್  ಕಟ್ಟಿದ್ದರು,  ಯಾಕೋ ಮೈಎಲ್ಲಾ   ನೋವಾದ ಅನುಭವ ,  ಡ್ರಿಪ್ಸ್   ಹಾಕಿದ್ದರು , ಪ್ಲಾಸ್ಟಿಕ್   ನಾಳದಿಂದ  ಔಷಧಿ ಹನಿ ಹನಿಯಾಗಿ ದೇಹ ಸೇರುತ್ತಿತ್ತು.  ಪಕ್ಕದಲ್ಲಿ ಬೆಡ್ ಪ್ಯಾನ್  ಇಟ್ಟಿದ್ದರು, ನರ್ಸ್  ಹೇಳ್ತಾ ಇದ್ರೂ  ಅವರಿಗೆ ಅಗತ್ಯವಾದಾಗ   ಇದನ್ನು ಕೊಡಿ ಅಂತಾ  ಹೇಳ್ತಾ ಇದ್ರೂ , ಯಾವುದೋ ಯಾತನಾ ಮಯ  ನರಕದ ಅನುಭವ , ಅಮ್ಮಾ  ಎಂದು   ಸಣ್ಣಗೆ ಕೀರಲಿದೆ    ನನ್ನ ಅಮ್ಮಾ  ಏನಪ್ಪಾ   ಹೆದರ  ಬೇಡ ಮಗು ಒಳ್ಳೆದಾಗುತ್ತೆ  ಅಂದ್ರು,  ಪಕ್ಕದಲ್ಲಿದ್ದ ಪತ್ನಿ ಹಣೆ ಮುಟ್ಟಿ  ಬಿಕ್ಕಳಿಸಿದಳು .  ಸಧ್ಯ ಇಷ್ಟಕ್ಕೆ ಆಯ್ತು  ಹೆದರ ಬೇಡಿ  ಅಂತಾ  ಒಳಗೆ  ಬಂದರೂ  ಡಾಕ್ಟರ್  , "ನನಗೆ ಏನಾಗಿದೆ   ಡಾಕ್ಟರ್?" ಅಂದೇ   "ನಿಮಗೆ ಆಕ್ಸಿಡೆಂಟ್   ಆಗಿದೆ ಮಾತಾಡ ಬೇಡಿ ರೆಸ್ಟ್   ಮಾಡಿ" ಅಂದ್ರು ..... "   ಅಷ್ಟರಲ್ಲಿ   ಪಾಪ  ಆ ಜಗಧೀಶ್  ಗೆ  ಥ್ಯಾಂಕ್ಸ್ ಹೇಳಬೇಕು ಅನ್ನುತ್ತಾ ಇದ್ದರು ಅಲ್ಲಿ ಕೆಲವರು ,  ಪಾಪ ಆ ಹುಡುಗ ಬಹಳ ಸಹಾಯ ಮಾಡಿ  ಇಲ್ಲಿಗೆ ಕರೆದು ತಂದಾ  ಅನ್ನುವ ಮಾತುಗಳು   ಕೇಳಿಬಂದವು . ಆ   ನನಗೆ   ಆಕ್ಸಿಡೆಂಟ್ ಆಗಿದ್ಯಾ .....? "  ಅನ್ನುತ್ತಾ    ಹಾಗೆ    ಕಣ್ಣು ಮುಚ್ಚಿದೆ .   ಹಾಗಿದ್ರೆ    ವಾಸ್ತವವಾಗಿ  ಅಪಘಾತ ಹೇಗಾಯ್ತು, ನನಗೆ ಜೀವ  ಉಳಿಸಲು  ಹೆಣಗಾಡಿದವರು ಯಾರು ಯಾರು ಅನ್ನೋದು   ತಿಳಿದಿರಲಿಲ್ಲ,   ದೇಹಕ್ಕೆ ಚೈತನ್ಯ  ಬಂದ ಮೇಲೆ ಚನ್ನರಾಯ ಪಟ್ಟಣಕ್ಕೆ   ಹೋಗಿ    ಜಗಧೀಶ್ ಭೇಟಿ ಮಾಡಿ  ಮಾಹಿತಿ ಕಲೆಹಾಕಿ  ನನ್ನ ಅಪಘಾತದ  ಕಥೆ  ಹೇಗಿತ್ತು ಅನ್ನೋದನ್ನು ಅರಿತೆ,  ಬನ್ನಿ   ಅಪಘಾತ ಹೇಗಾಯ್ತು   ತಿಳಿಯೋಣ.


ಆಪತ್ತಿಗಾದ  ಪುಷ್ಪಕ ವಿಮಾನ 


ಚನ್ನರಾಯ ಪಟ್ಟಣದ  ಬಸ್ ನಿಲ್ಧಾಣದ   ಮುಂದೆ   ಹಾದುಹೋಗುವ   ಹಾಸನ  ಬೆಂಗಳೂರು   ರಾಷ್ಟ್ರೀಯ   ಹೆದ್ದಾರಿಯಲ್ಲಿ    ಮಧ್ಯಾಹ್ನ  ಸುಮಾರು ನಾಲ್ಕು ವರೆ  ಸಮಯದಲ್ಲಿ , ಒಬ್ಬ ವ್ಯಕ್ತಿ  ಬಸ್ ನಿಲ್ಧಾಣಕ್ಕೆ ಬರಲು  ರಸ್ತೆ  ದಾಟುತ್ತಿದ್ದಾನೆ,   ರಸ್ತೆಯಲ್ಲಿ   ಹೆಚ್ಚಿನ   ವಾಹನ ಸಂಚಾರ ಇರಲಿಲ್ಲ ,   ರಸ್ತೆ ಮಧ್ಯದಲ್ಲಿ   ಡಿವೈಡರ್   ಸಮೀಪ ಬರುತ್ತಿದ್ದಂತೆ    ಮೂರುಜನ  ಕುಳಿತಿದ್ದ ಯಾವುದೋ ಬೈಕ್ ಅಡ್ಡಾದಿಡ್ಡಿಯಾಗಿ   ರಾಂಗ್ ಸೈಡ್  ನಲ್ಲಿ ಚಲಿಸುತ್ತಾ ಬಂತು  ಹಿಂದಿನಿಂದ  ಗುದ್ದಿ ಸ್ವಲ್ಪ ದೂರ  ಎಳೆದು ಕೊಂಡು ಹೋಗಿದೆ.  ಅಷ್ಟರಲ್ಲಿ  ಜನರ ಗುಂಪು ಸೇರಿದೆ . ಅಲ್ಲೇ ಸ್ವಲ್ಪ ದೂರದಲ್ಲಿದ್ದ  ಮೊಬೈಲ್  ಶಾಪ್ ನಿಂದ   ಬಂದ   ಜಗಧೀಶ್  ಜನರ ಗುಂಪಿನೆಡೆಗೆ ಹೋಗಿ ನೋಡಿದಾಗ     ಯಾರೋ ಒಬ್ಬ  ರಕ್ತ   ಕಾರಿಕೊಂಡು ರಸ್ತೆಯಲ್ಲಿ   ಬಿದ್ದಿರುವುದು ಕಂಡು ಬಂದಿದೆ,   ತಕ್ಷಣವೇ   ಅಂಗಡಿಗೆ ಬಂದು      "ಗುರು ಯಾರೋ ಕುಡಿದು ಬಿದ್ದು    ಅಪಘಾತಕ್ಕೆ  ಒಳಗಾಗಿದ್ದಾನೆ  ವಿಪರೀತ   ರಕ್ತ  ಹೋಗ್ತಾ ಇದೆ   ಬದುಕೋದು ಕಷ್ಟಾ   ಅನ್ಸುತ್ತೆ"  ಅಂತಾ ಹೇಳಿ    ಅವರ ಗೆಳೆಯನಿಂದ  ಐದು ಸಾವಿರ ರುಪಾಯಿ  ಪಡೆದು   ಮತ್ತೆ  ಅಪಘಾತ ನಡೆದ ಸ್ಥಳಕ್ಕೆ  ಬಂದು  ಅಲ್ಲೇ ಸಿಕ್ಕ  ಒಂದು ಸರಕು ಸಾಗಣೆ ಆಪೆ ಆಟೋ  ನಿಲ್ಲಿಸಿ,   ಅಪಘಾತಕ್ಕೆ ಒಳಗಾದ  ವ್ಯಕ್ತಿಯನ್ನು   ಕೆಲವರ ಸಹಾಯದಿಂದ   ವಿಳಂಭ ಮಾಡದೆ   ಆಟೋ ದಲ್ಲಿ ಹಾಕಿ ಕೊಂಡು  ಚನ್ನರಾಯ ಪಟ್ಟಣದ   ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ . ತಕ್ಷಣವೇ ಸ್ಪಂದಿಸಿದ   ವೈಧ್ಯರು   ಪರೀಕ್ಷೆ ಮಾಡಿ   ಸಿ. ಟಿ. ಸ್ಕ್ಯಾನ್   ಮಾಡಿಸಲು   ಹೇಳಿದ್ದಾರೆ,  ಅಲ್ಲೇ ಇದ್ದ  ಸ್ಕಾನಿಂಗ್  ಸೆಂಟರ್ ನಲ್ಲಿ   ಅಪಘಾತದ ವ್ಯಕ್ತಿಯ   ದೇಹವನ್ನು ಸಂಪೂರ್ಣವಾಗಿ   ಸ್ಕ್ಯಾನ್ ಮಾಡಿಸಿ   ಅದರ  ವರಧಿಯ   ಆಧಾರದ ಮೇಲೆ  ಪ್ರಾಥಮಿಕ  ಚಿಕಿತ್ಸೆ ನೀಡಿ ,  ಮುಖದಲ್ಲಿ   ರಕ್ತ   ಸೋರುತ್ತಿದ್ದ  ಜಾಗಗಳಿಗೆ   ಹೊಲಿಗೆ ಹಾಕಿದ್ದಾರೆ .



ಚನ್ನರಾಯ ಪಟ್ಟಣದಿಂದ ಮೈಸೂರಿಗೆ   ನನ್ನನ್ನು ಸಾಗಿಸಿದ ಆಂಬುಲೆನ್ಸ್ 



ಹೊಲಿಗೆ ಹಾಕಿದ ನಂತರ    ಜಗಧೀಶ್    ಹಾಗು ಅವರ ಮತ್ತೊಬ್ಬ ಗೆಳೆಯ   ಅಪಘಾತಕ್ಕೆ ಒಳಗಾದ  ವ್ಯಕ್ತಿ ಅರೆ ಪ್ರಜ್ಞಾವಸ್ಥೆ ಯಲ್ಲಿ ನೀಡಿದ ಮಾಹಿತಿಯಂತೆ   ದೂರವಾಣಿಯಲ್ಲಿ  ಅಪಘಾತಕ್ಕೆ ಒಳಗಾದ   ವ್ಯಕ್ತಿಯ  ಮನೆಯವರು , ಹಾಗು ಗೆಳೆಯರನ್ನು ಸಂಪರ್ಕಿಸಿ  ಮೈಸೂರಿನ   ಕಾಮಾಕ್ಷಿ   ಆಸ್ಪತ್ರೆಗೆ   ಚನ್ನರಾಯ ಪಟ್ಟಣ ದಿಂದ  ಆಂಬುಲೆನ್ಸ್  ನಲ್ಲಿ   ಸಾಗಿಸುತ್ತಾರೆ. ವಾಹನ ಚಲಿಸುವಾಗ  ಅರೆ ಪ್ರಜ್ಞಾವಸ್ತೆಯಲ್ಲಿದ್ದ   ವ್ಯಕ್ತಿ   ಕತ್ತು  ನೋವು ಅಂದ ಕಾರಣ  ಚನ್ನರಾಯ ಪಟ್ಟಣ ದಿಂದ ಮೈಸೂರಿನ ವರೆಗೂ   iodex  ನಿಂದ ಮಸಾಜ್  ಮಾಡುತ್ತಾ  ಮೈಸೂರಿನವರೆಗೆ   ಸಾಗಿಸಿದ್ದಾರೆ,  ಮೈಸೂರಿಗೆ ತಲುಪಿದ ಕೂಡಲೇ  ಕಾಮಾಕ್ಷಿ ಆಸ್ಪತ್ರೆಯಲ್ಲಿ   ಮೊದಲೇ ಕಾಯುತ್ತಿದ್ದ   ಕೆಲವರು ತುರ್ತು  ಚಿಕಿತ್ಸಾ ಘಟಕಕ್ಕೆ  ಆ ವ್ಯಕ್ತಿಯನ್ನು ಸಾಗಿಸುತ್ತಾರೆ.    ರಾತ್ರಿಯೆಲ್ಲಾ ಅಲ್ಲೇ ಕಾದಿದ್ದ  ಜಗಧೀಶ್  ಹಾಗು ಅವರ ಗೆಳೆಯರು    ಬೆಳಿಗ್ಗೆ  ವಾಪಸ್ಸು   ಚನ್ನರಾಯ ಪಟ್ಟಣ   ತಲುಪುತ್ತಾರೆ.


ಪ್ರಾಣ ಉಳಿಸಿದ   ಜಗಧೀಶ್ ಇವರೇ 



ಇದು ಜಗಧೀಶ್   ಹೇಳಿದ  ಅಪಘಾತದ ಕಥೆ , ನಂತರ  ಮೈಸೂರಿಗೆ ಬಂದಾಗ   ಆದ ಕಥೆ ಕೇಳಿ,  ನನಗೆ ಅಪಘಾತ ಆದಾಗ  ಚನ್ನರಾಯ ಪಟ್ಟಣದಿಂದ  ಮೈಸೂರಿಗೆ ಕರೆತರುವ ಮೊದಲು ಅಲ್ಲಿನ ವೈಧ್ಯರು   ನಾನು ಅರೆ ಪ್ರಜ್ಞಾವಸ್ಥೆಯಲ್ಲಿ ನೀಡಿದ ಮೊಬೈಲ್  ನಂಬರ್  ಗೆ ಫೋನ್ ಮಾಡಿ  ನನ್ನ ಗೆಳೆಯ  ಅನಿಲ್ ಹಾಗು ಅವನ ಅಲ್ಲಲ್ಲ   ನನ್ನ  ತಂಗಿ  ಡಾಕ್ಟರ್  ಸ್ನೇಹ ಶ್ರೀ  ಜೊತೆ ಸಮಾಲೋಚಿಸಿ  ಆಂಬುಲೆನ್ಸ್ ನಲ್ಲಿ  ಕಳುಹಿಸಿದ್ದಾರೆ.   ಆಂಬುಲೆನ್ಸ್ ಮೈಸೂರಿಗೆ   ಬರುವಷ್ಟರಲ್ಲಿ   ನನ್ನ ಪ್ರೀತಿಯ  ಈ ತಂಗಿ    ಕಾಮಾಕ್ಷಿ ಆಸ್ಪತ್ರೆಗೆ   ಬಂದು    ನ್ಯೂರೋ ಸರ್ಜನ್ , ಇ. ಎನ್. ಟಿ. ಸ್ಪೆಷಲಿಸ್ಟ್ , ಹಾರ್ಟ್  ಸರ್ಜನ್ , ಮುಂತಾದವರನ್ನು  ದೂರವಾಣಿ ಮೂಲಕ   ಸಂಪರ್ಕಿಸಿ, ರಾತ್ರೋ ರಾತ್ರಿಯೇ ಕರೆಸಿ  ಒಂದು ಕ್ಷಣವೂ   ವ್ಯರ್ಥವಾಗದಂತೆ    ನನಗೆ  ಚಿಕಿತ್ಸೆ  ದೊರಕಲು  ಸಹಕರಿಸಿ,  ರಾತ್ರಿಯೆಲ್ಲಾ   ನನಗೆ ಚಿಕಿತ್ಸೆ ಕೊಡಿಸಲು  ಓಡಾಡಿದ್ದಾಳೆ .

ಡಾಕ್ಟರ್   ಸ್ನೇಹಶ್ರೀ 



ತನ್ನ ಆನಾರೋಗ್ಯವನ್ನೂ   ಲೆಕ್ಕಿಸದೆ   ತಂಗಿಯ ಜೊತೆ ಬಂದಿದ್ದ ಅನಿಲ್ 



ಯಾವ ಜನ್ಮದ  ಋಣಾನುಬಂಧವೋ   ಕಾಣೆ  ಬಹಳಷ್ಟು ಸಹಾಯ ಮಾಡಿ     ಮರಳಿ ಜೀವದಾನ  ಮಾಡಿದರು ಎಲ್ಲರೂ ಸೇರಿ .  ಒಂದೆರಡು ದಿನ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು   ಡಿಸ್ಚಾರ್ಜ್  ನಂತರ ವೈಧ್ಯರ  ಸಲಹೆಯಂತೆ    ವಿಶ್ರಾಂತಿಗಾಗಿ ಮನೆಗೆ ಬಂದೆ ,  ಏಳಲು ಓಡಾಡಲು  ದೇಹದಲ್ಲಿ  ತ್ರಾಣ ವಿಲ್ಲ ,  ಎದ್ದು ನಿಂತರೆ ತಲೆಯೆಲ್ಲಾ   ಚಕ್ಕರ್  ಹೊಡೆಯೋದು ,  ಹಾಸಿಗೆಯೆ ನನ್ನ ಸಾಮ್ರಾಜ್ಯ ಆಯ್ತು.  ಓದಲು  ಆಗುತ್ತಿಲ್ಲ,  ಬರೆಯಲು ಆಗುತ್ತಿಲ್ಲ,   ಕಂಪ್ಯೂಟರ್  ಮುಂದೆ ಕೂರಲು   ಆಗುತ್ತಿಲ್ಲ, ಟಿ.ವಿ. ನೋದುವನ್ತಿಲ್ಲಾ ,   ಇಲ್ಲಾ  ಇಲ್ಲಾ   ಏನೂ     ಮಾಡುವಂತಿಲ್ಲ, ಅಂದ್ರೆ ಒಂತರಾ  ಬದುಕಿದ್ದೂ  ಪ್ರಯೋಜನ ಇಲ್ಲ ವೇನೋ ಅನ್ನಿಸಿತ್ತು,   ಆದರೆ ಮನದಲ್ಲಿ  ನನ್ನನ್ನು  ಉಳಿಸಿದ  ಜಗಧೀಶ್ ಗೆ  ಕೃತಜ್ಞತೆ ತಿಳಿಸಲು   ಆಗುತ್ತಿಲ್ಲಾ   ಎಂಬ ಕೊರಗು ಇತ್ತು,  ಅದೊಂದು ದಿನ    ಕಷ್ಟ ಪಟ್ಟು  ಕುಳಿತು,  ತಲೆ ನೋವಿದ್ದರೂ    ಲೆಕ್ಕಿಸದೆ  ನನ್ನ ಫೇಸ್ಬುಕ್  ಪುಟದಲ್ಲಿ  ಜಗಧೀಶ್ ಮಾಡಿದ  ಉಪಕಾರದ ಬಗ್ಗೆ ಬರೆದು ಕೃತಜ್ಞತೆ ಅರ್ಪಿಸಿದೆ . ಮೊಬೈಲ್ ನಲ್ಲಿ ಕರೆ ಮಾಡಿ  ಮಾತನಾಡಿ   ದೇಹಕ್ಕೆ ಚೈತನ್ಯ ಬಂದಮೇಲೆ ಬಂದು ಭೇಟಿ ಮಾಡುವುದಾಗಿ   ಹೇಳಿದೆ. ಆದರೂ  ಈ ಜಗಧೀಶ್ ಗೆ ನನ್ನನ್ನು  ಉಳಿಸಬೇಕೂ  ಅಂತಾ   ಯಾಕೆ ಅನ್ನಿಸಿತು ..?  ಎಂಬ ಪ್ರಶ್ನೆ    ಕಾಡುತ್ತಿತ್ತು.


ನನಗೆ ಅಪಘಾತ ಆದ ವಿಚಾರ  ನನ್ನ ಗೆಳೆಯರಿಗೆ  ನೆಂಟರಿಗೆ   ತಿಳಿಯಲು  ತಡಾ ಆಗಲಿಲ್ಲ,    ದಾವಿಸಿಬಂದರು ಸಂತೈಸಲು........! ಕಂಬನಿ  ಮಿಡಿದವರು  ಹಲವರು, ಕೆಲವರು ಹಾರೈಸಿದರು  ಮತ್ತೆ ಕೆಲವರು .....? ಪತ್ತೆದಾರರಂತೆ  ......ಪ್ರಶ್ನೆ    ಕೇಳಿ  ಎಡವಟ್ಟು ಮಾಡಿಕೊಂಡರು     ಮುಂದೆ ....?









Sunday, April 24, 2016

ಸರ್ ಜಿ ನಾಳೆ ಚನ್ನರಾಯಪಟ್ಟಣಕ್ಕೆ ನೀವ್ ಬರ್ತೀರಾ ಅಷ್ಟೇ ..........!!! ನನ್ ಕಥೆ ಭಾಗ ....01

ಎಲ್ಲರಿಗೂ ನಮಸ್ಕಾರ , ಸುಮಾರು ಆರು ತಿಂಗಳ ನಂತರ  ಬ್ಲಾಗ್ ಬರಹ  ಶುರುಮಾಡಿದ್ದೇನೆ , ನನ್ನದೇ ಆದ ವೈಯಕ್ತಿಕ  ಕಾರಣಗಳು,  ಬ್ಲಾಗ್ ಬರೆಯಲು  ಆಸೆ ಇದ್ದರೂ ಬರೆಯಲಾಗದ   ಅನಿವಾರ್ಯತೆ , ಇತ್ಯಾದಿಗಳ   ಕಾರಣದ ಜೊತೆಗೆ ಸೋಮಾರಿತನ ,  ಹಾಗಾಗಿ ಫೆಸ್ ಬುಕ್ ಲೋಕದಲ್ಲೇ  ಮುಳುಗಿ ಹೋಗಿದ್ದೆ , ಅಂತೂ ಇಂತೂ ಬರೆಯಲು  ಮನಸು  ಬಂದು ಬರೆಯಲು ಶುರು ಮಾಡಿದ್ದೇನೆ . ಮನಸ್ಸು  ವ್ಯಸನ ಮುಕ್ತವಾಗಿ   ಪಕ್ಷಿ ಯಂತೆ   ಗರಿಬಿಚ್ಚಿ   ಹಾರಾಡಿ   ಬರೆಯಲು ಪ್ರೇರಣೆ ನೀಡಿದೆ.


ಮನಸೆಂಬ  ಪಕ್ಷಿ  ಗರಿಬಿಚ್ಚಿದೆ 


ಈ ಬ್ಲಾಗ್ ಲೋಕವೇ ಹಾಗೆ  ಬರೆಯುವ ಕಿಚ್ಚನ್ನು  ಸದಾ ಹೊತ್ತಿಸಿಯೇ  ಇರುತ್ತದೆ, ಅದಕ್ಕೆ ತಕ್ಕಂತೆ  ತಿದ್ದಿ ತೀಡುವ   ಬ್ಲಾಗ್ ಗೆಳೆಯರ   ದಂಡು,  ಇನ್ನು ಇವರೋ   ನಮ್ಮ  ಒಡಹುಟ್ಟಿದವರಲ್ಲಾ, ಜೊತೆಯಲ್ಲಿ ಓದಿದವರಂತೂ  ಅಲ್ಲವೇ ಅಲ್ಲಾ , ಕೆಲಸದಲ್ಲಿನ   ಗೆಳೆಯರೇ  ಉ  ಹೂ  ಅದೂ ಅಲ್ಲಾ  , ಆದರೆ   ಅಕ್ಷರದ ಮೂಲಕ   ಬ್ಲಾಗ್ ಲೋಕದಲ್ಲಿ ಪರಿಚಿತರಾಗಿ    ನನ್ನ ಹೃದಯದಲ್ಲಿ   ನೆಲೆಸಿ   ನಮ್ಮವರೇ   ಆಗಿಬಿಟ್ಟಿದ್ದಾರೆ,  ಒಬ್ಬರೇ ಇಬ್ಬರೇ   ಹೇಳುತ್ತಾ ಹೋದರೆ  ಹನುಮನ   ಬಾಲವಾದೀತು ,   ಆದರೂ ಎಲ್ಲರೂ   ಒಂದಲ್ಲಾ  ಒಂದು ರೀತಿ ನನ್ನ ಜೀವನಕ್ಕೆ ಸ್ಪೂರ್ತಿ  ತುಂಬಿರುವುದಂತೂ ನಿಜಾ .

ಇಂತಹ ಗೆಳೆಯರ ಲಿಸ್ಟ್  ನಲ್ಲಿ ಒಬ್ಬರಾದ   ನಮ್ಮ ಶ್ರೀ ಕಾಂತ್  ಮಂಜುನಾಥ್     ಅಂದು ರಾತ್ರಿ ದೂರವಾಣಿ ಮೂಲಕ  ಕರೆದಿದ್ದರು   "ಸರ್ ಜಿ   ನಾಳೆ ಚನ್ನರಾಯಪಟ್ಟಣಕ್ಕೆ  ನೀವ್ ಬರ್ತೀರಾ   ಅಷ್ಟೇ ..........!!!"   "ನಾಳೆ ಬೆಳಿಗ್ಗೆ  ೯ ಘಂಟೆಗೆ  ನಿಮ್ಮ ಮನೆಗೆ ಬರ್ತೇನೆ  ರೆಡಿ ಇರೀ, "  "ಅಲ್ಲಿಂದ  ನನ್ನ ಕಾರ್  ನಲ್ಲಿ ಚನ್ನರಾಯಪಟ್ಟಣಕ್ಕೆ  ಹೋಗೋಣ ", "ನೀವು ಸಪ್ಪಗೆ ಇರೋದನ್ನು ನೋಡೋಕೆ ಆಗ್ತಾ ಇಲ್ಲಾ  ," "ಕಳೆದ ವಾರ ನಿಮ್ಮನ್ನ ಭೇಟಿಯಾದಾಗ  ನೀವು  ಸಹಜವಾಗಿ ಇರಲಿಲ್ಲ ", "ಯಾಕೋ ನನಗೂ ನಿಮ್ಮ ನಗು  ಮಿಸ್ ಆಗ್ತಾ ಇತ್ತು, " "ಅದಕ್ಕೆ  ಅನ್ನಿಸಿತು ಫೋನ್ ಮಾಡಿದೆ , ನಾಳೆ ಹೇಗೂ ಸೆಕಂಡ್ ಸಾಟರ್ಡೆ , ರಜಾ ಇದೆ ನೀವು ಬನ್ನಿ ಒಂದು ಚೇಂಜ್  ಇರುತ್ತೆ   ನಿಮ್ಮ ಮನಸಿಗೂ ಹಿತವಾಗುತ್ತೆ"ಅಂತಾ  ಪ್ರೀತಿಯ ಆಹ್ವಾನ ನೀಡಿದರು,  ಯಾರಿಗೂ ಹೇಳದ  ನನ್ನ ನೋವನ್ನು  ಅವರು ಗಮನಿಸಿದ್ದು   ಅಚ್ಚರಿಯಾಯ್ತು,


ಚಿತ್ರ  ಕೃಪೆ  ಪ್ರದೀಪ್ ರಾವ್ 


 ಈ ನಮ್ಮ ಶ್ರೀಕಾಂತ್ ಮಂಜುನಾಥ್ ಹಾಗೆ  ಒಮ್ಮೆ ಗೆಳೆತನ  ಶುರು ಆದ್ರೆ ನಿಮ್ಮ ಮನಸನ್ನು ಸೀದಾ  ಹೊಕ್ಕಿಬಿಡುವ   ಸಹೃದಯಿ,   ಎಷ್ಟು ಹೊಗಳಿದರೂ   ಕಡಿಮೆ  ಇವರ ಬಗ್ಗೆ,  ಇನ್ನು ಈ ಯಪ್ಪನ  ಮಾತು ಕೇಳದೆ ಹೋದ್ರೆ   ನನ್ನ ಹುಟ್ಟಿದ ಹಬ್ಬಕ್ಕೆ ಯಾವ್ದಾದ್ರೂ  ದೇವರನ್ನು  ಕರೆದುಕೊಂಡು  ಬಂದು  ಲ್ಯಾಪ್ಟಾಪ್ , ಮೊಬೈಲ್ ಫೋನ್ , ಹೀಗೆ  ಏನಾದರೂ ಕೈಗೆ ಕೊಟ್ಟು, ಆ ದೇವರುಗಳ ಬಾಯಲ್ಲಿ  ನನ್ನ ಗುಣಗಾನ   ಮಾಡಿಸಿ    ಸೇಡು ತೀರಿಸಿಕೊಳ್ಳುವ   ಭೀತಿ ಕಾಡಿ ,  ಸರಿ ಶ್ರೀಕಾಂತ್ , ಬರ್ತೀನಿ ಆದ್ರೆ ಒಂದು ಕಂಡಿಶನ್   ನೀವು ಮೈಸೂರಿಗೆ ಬರೋದು ಬೇಡ , ನಾನೇ ಮೈಸೂರಿನಿಂದ   ಚನ್ನರಾಯ ಪಟ್ಟಣಕ್ಕೆ   ಬರುತ್ತೇನೆ  ಅಂತಾ   ಪೂಸಿ  ಹೊಡೆದು  ಒಪ್ಪಿಸಿದೆ. ಕಟ್ ಮಾಡಿದ್ರೆ  ಮಾರನೆಯದಿನ   ಮೈಸೂರಿನಿಂದ   ಚನ್ನರಾಯ ಪಟ್ಟಣದ  ಬಸ್ ಹತ್ತಲು   ಬಸ್ ನಿಲ್ದಾಣಕ್ಕೆ  ಬಂದಿದ್ದೆ.

ನನ್ನನ್ನು  ಚನ್ನರಾಯ ಪಟ್ಟಣಕ್ಕೆ  ಕರೆದುಕೊಂಡು  ಹೋದ  ಕೆಂಪು ಬಸ್ಸು 


ಯಾರ್ರೀ   ಚನ್ನರಾಯಪಟ್ಟಣ   ಅಂತಾ  ಕಂಡಕ್ಟರ್  ಕೂಗ್ತಾ ಇದ್ದರು,  ಆದರೂ ಈ ಬಸ್ಸು ಹತ್ತಲು ಮನ ಹಿಂಜರಿಯುತ್ತಿತ್ತು,  ಬೇರೆ ಯಾವ್ದಾದ್ರೂ   ಬಸ್ಸು ಇದ್ಯಾ ಅಂತಾ   ವಿಚಾರಿಸಿದೆ, ಸಧ್ಯಕ್ಕೆ   ಯಾವ್ದೂ  ಇಲ್ಲಾ  ಅಂದರು  ಅಲ್ಲಿದ್ದ ಟೀ.ಸಿ. , ಇನ್ನೇನು  ಬಸ್ಸು ಹತ್ತಿ ಮಲಗಿ ಬಿಡೋಣ ಅಂತಾ ಲೆಕ್ಕ ಹಾಕಿ    ಟಿಕೆಟ್  ಪಡೆದು ಬಸ್ಸು  ಹತ್ತಿ ಕಿಟಕಿ ಪಕ್ಕ ಕುಳಿತೆ,  ಮೈಸೂರು   ಬಸ್ ನಿಲ್ದಾಣ ಬಿಟ್ಟ ಬಸ್ಸು   ಸ್ವಲ್ಪ ದೂರ  ಬಂದಿತ್ತು, ಸಂತ  ಫಿಲೋಮಿನ  ಚರ್ಚ್  ಸಮೀಪದ ಸರ್ಕಲ್   ತಿರುವಿ ಬಲಕ್ಕೆ  ಹೊರಟಿತ್ತು ಅಷ್ಟೇ   ಧಡ್ ಅಂದ ಶಬ್ದ   , ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದ   ಡ್ರೈವರ್ , ನಾವೆಲ್ಲರೂ ಇಳಿದು ನೋಡಿದ್ರೆ  ರಸ್ತೆ  ಪಕ್ಕದಲ್ಲಿ ನಿಲ್ಲಿಸಿದ್ದ    ಒಂದು ಸಿಟಿ ಬಸ್ಸು  ಈ ಬಸ್ಸು ಬರುವುದನ್ನು ಗಮನಿಸದೆ    ಚಲಿಸಿ,  ನಮ್ಮ ಬಸ್ಸಿನ  ಹಿಂಭಾಗದ  ಎಡ ಪಾರ್ಶ್ವಕ್ಕೆ  ಗುದ್ದಿತ್ತು, ಒಂದೆರಡು ಕ್ಷಣ ಮುಂಜೆ  ಈ ಬಸ್ಸು ಚಲಿಸಿದ್ದರೆ   ನಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ   ತೊಂದ್ರೆ   ಆಗ್ತಾ ಇತ್ತು,   ಬಸ್ಸಿನಿಂದ ಇಳಿದು   ವಾಪಸ್ಸು ಹೊರತು ಹೋಗೋಣಾ  ಅಂತಾ  ಮನಸಾಯಿತು, ಆದ್ರೆ  ಇನ್ನೊಂದು ಮನಸು   ಅಯ್ಯೋ  ವಿಚಿತ್ರ ಕಣಯ್ಯ  ನೀನು  ಇಂತಹ ಸಣ್ಣ ಪುಟ್ಟ ಘಟನೆ ಆಗ್ತಾ ಇರುತ್ತೆ  ಇದನ್ನೆಲ್ಲಾ ಅಪಶಕುನಾ  ಅಂತಾ  ಭಾವಿಸಿದರೆ  ಜೀವನ ನಡೆಸೋದೆ ಕಷ್ಟಾ  ,  ನಡೀ. ನಡೀ, ಬಸ್ಸು ಹತ್ತು ಅಂತಾ ಪ್ರೇರೇಪಿಸಿಯ್ತು, ಅಷ್ಟರಲ್ಲಿ   ಎರಡೂ ಬಸ್ಸಿನವರು ರಾಜಿಯಾಗಿ  ನಮ್ಮ ಪಯಣ ಸಾಗಿತು.  ಬಸ್ಸಿನಲ್ಲಿ  ನಿದ್ದೆ ಹೊಡೆಯೋಣ  ಅಂದ್ರೆ ಕಿಟಕಿ ಗಾಜಿನ  ಗಡ   ಗಡ  ಸದ್ದಿಗೆ    ಸಾಧ್ಯವೇ ಆಗಲಿಲ್ಲ,  ಒಂದು ಕಡೆ ಬಿಸಿಲಿನ  ತಾಪ ಸಹ  ಕಾಡಿತ್ತು,  ಪ್ರಯಾಣ ಪ್ರಯಾಸವಾಗಿ ಚನ್ನರಾಯ ಪಟ್ಟಣ  ತಲುಪಿದೆ,

ಚನ್ನರಾಯ ಪಟ್ಟಣ  ಮುಖ್ಯ ರಸ್ತೆ 

 ಚನ್ನರಾಯ ಪಟ್ಟಣ  ಬಸ್ ನಿಲ್ದಾಣದಿಂದ  ಶ್ರೀ ಕಾಂತ್ ಗೆ  ಫೋನ್ ಮಾಡಿದ್ರೆ  , "ಸರ್ ಜಿ  ಇಲ್ಲೇ ಇದ್ದೇನೆ   ಬಸ್ ನಿಲ್ದಾಣದ ಮುಂದಿನ ಆಟೋ ಸ್ಟಾಂಡ್ ಬಳಿ ಬನ್ನಿ" ಅಂದ್ರು .   ಹೊರಗೆ ಬಂದ್ರೆ   ಮಾಲಿಕನ ಜೊತೆ ritz ಕಾರು ನಗುತ್ತಾ ನಿಂತಿತ್ತು.   ನಮ್ಮಿಬ್ಬರ ಪಯಣ  ಶುರು  ಆಯ್ತು, ಕಾರು  ಚನ್ನರಾಯ ಪಟ್ಟಣದ  ಕಡೆಯಿಂದ    ಹಾಸನ   ರಸ್ತೆಯಲ್ಲ್ಲಿ  ಸಾಗಿತ್ತು,  ಹೊಟ್ಟೆ   ಹಸಿವಾದ ಕಾರಣ   ದಾರಿಯಲ್ಲಿ  ಸಿಕ್ಕ   ಕಾಮತ್ ಹೋಟೆಲ್ ನಲ್ಲಿ ಭರ್ಜರಿ  ಊಟದ  ಬ್ಯಾಟಿಂಗ್  ನಡೆಸಿ ,  ಶ್ರೀಕಾಂತ್  ಕಸಿನ್   ಅವರ   ಆಶ್ರಮದ    ತೋಟಕ್ಕೆ   ಹೋದೆವು

.
ಭೂಮಿತಾಯಿಯ   ಹಸಿರ ಮಡಿಲಲ್ಲಿ  ಜ್ಞಾನಿಯ ಜೊತೆ 



ದಾರಿಯುದ್ದಕ್ಕೂ  ಈ ಕೀಟಲೆ ಶ್ರೀಕಾಂತ್  ಅವರ ಕಸಿನ್ ಗೆ  ಫೋನ್ ಮಾಡಿ ನಾನು ಒಬ್ಬನೇ ಬರ್ತಾ ಇರೋದಾಗಿ ಹೇಳ್ತಾ ಇದ್ದರು,     , ಕೊನೆಗೆ    ಶ್ರೀಕಾಂತ್   ನನ್ನ ಜೊತೆ  ಇಳಿದದ್ದನ್ನು ಕಂಡು  ಅವರ ಕಸಿನ್ ಅವರಿಗೆ ಬಹಳ ಖುಷಿಯಾಯಿತು,  ಪ್ರೀತಿಯ ಸ್ವಾಗತ , ಪರಸ್ಪರ ಪರಿಚಯ  ಆಯಿತು.  ಸಾಕಷ್ಟು ಮಾತು ಕಥೆ, ಅಲ್ಲಿ ನಡೆದಿದ್ದ   ದಾರ್ಮಿಕ ಚಟುವಟಿಕೆಗಳು ಹಾಗು ಕೃಷಿ ಚಟುವಟಿಕೆಗಳ  ಪರಿಚಯ ಮಾಡಿಕೊಟ್ಟರು . ನಾವೂ ಸಹ ಖುಷಿಯಿಂದ  ಇಡೀ ಜಮೀನಿನಲ್ಲಿ ಓಡಾಡಿದೆವು , ತೆಂಗಿನ  ಗಿಡಗಳಿಗೆ  ನೀರು ಹಾಯಿಸಲು  ಖುಷಿಯಿಂದ  ಹೊರಟೆವು. ಹಾಗೂ ಹೀಗೂ   ಸುಮಾರು ಹೊತ್ತು ಕಳೆದೆವು,  ಶ್ರೀಕಾಂತ್  ಕಸಿನ್ ಅವರಿಂದ  ಪ್ರೀತಿಯಿಂದ  ಬೀಳ್ಕೊಟ್ಟು   ಮತ್ತೆ ಚನ್ನರಾಯ ಪಟ್ಟಣಕ್ಕೆ ಬಂದೆವು,.   "ಸರ್ಜಿ    ಮೈಸೂರಿಗೆ  ಬಂದು ನಿಮ್ಮನ್ನು ಬಿಟ್ಟು ಬೆಂಗಳೂರಿಗೆ ಹೋಗ್ತೇನೆ"  ಅಂತಾ  ಶ್ರೀಕಾಂತ್   ಒತ್ತಾಯ ಶುರು ಮಾಡಿದ್ರು    ಆದರೆ ಮತ್ತೆ  ನನ್ನಿಂದ  ನಯವಾದ ನಿರಾಕರಣೆ,   ಹಾಗು ಹೀಗೂ ಹಗ್ಗ ಜಗ್ಗಾಡಿ ಒಲ್ಲದ ಮನಸಿನಿಂದ   ನನ್ನನ್ನು ಚೆನ್ನರಾಯ ಪಟ್ಟಣದ  ಬಸ್ ನಿಲ್ದಾಣದ  ಮುಂಭಾಗ  ರಸ್ತೆಯಲ್ಲಿ  ಇಳಿಸಿದರು, ಮತ್ತೊಮ್ಮೆ ಶ್ರೀಕಾಂತ್ ಗೆ  ಪ್ರೀತಿಯ  ಹಾರೈಕೆ  ಹೇಳಿದೇ , ಶ್ರೀಕಾಂತ್ ಕಾರು ಬೆಂಗಳೂರಿನ ಕಡೆ  ಹೊರಟಿತ್ತು  ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ, .............!!!  ಅಷ್ಟರಲ್ಲಿ        ...........!!!


 
 ಜೀವನದ  ದೋಣಿ  ಹೊಡೆತಕ್ಕೆ ಸಿಕ್ಕಿ   ಅಲುಗಾಡುತ್ತಿತ್ತು, ...........!