Wednesday, September 20, 2017

ಬನ್ನಿ ಅರಿಯೋಣ ಶ್ರೀರಂಗಪಟ್ಟಣದ ಮಹಾನವಮಿ/ ದಸರಾ / ನವರಾತ್ರಿ ಸಂಭ್ರಮದ ಇತಿಹಾಸವ ..... !



ಶ್ರೀ ರಂಗಪಟ್ಟಣದಲ್ಲಿ   ಮೈಸೂರು ಯದು ಕುಲದ   ಅರಸರ  ಅರಮನೆ ಇದ್ದ ಪ್ರದೇಶ 

ಕಳೆದ ಒಂದು ತಿಂಗಳ ಹಿಂದೆ   ಒಂದು ರಾತ್ರಿ. "ಮೈಸೂರು  ದಸರಾ  ಎಷ್ಟೊಂದು ಸುಂದರ  ಚೆಲ್ಲಿದೆ ನಗೆಯ ಪನ್ನೀರ ..... ಎಲ್ಲೆಲ್ಲು ನಗೆಯ ಪನ್ನೀರಾ ........"  ಅಂತಾ   ಹಾಡು ಬರ್ತಾ ಇತ್ತು,  ಅದೇ ಗುಂಗಿನಲ್ಲಿ  ನಿದ್ದೆಗೆ ಜಾರಿದ್ದೆ .  ಕನಸಿನಲ್ಲಿ   ರಾಜರುಗಳ ಒಡ್ಡೋಲಗ  ದರ್ಶನ ಆಗುತ್ತಿತ್ತು, ಯಾರೋ ಅಳುತ್ತಿರುವ  ದ್ವನಿ ಕೇಳಿ ಅತ್ತ ನಡೆದೇ .....! ಶ್ರೀ ರಂಗಪಟ್ಟಣದ  ಕಾವೇರಿ ತೀರದಲ್ಲಿ  ಒಬ್ಬ ವ್ಯಕ್ತಿ ಕುಳಿತು  ಅಳುತ್ತಿರುವುದ ಕಂಡೆ  ಹತ್ತಿರ ಹೋಗಲಾಗಿ  ,  ಅದು  ಮತ್ತೆ ಮತ್ತೆ  ಬಿಕ್ಕಿಸಿ  ನನ್ನತ್ತ ನೋಟ ಬೀರಿತು.  ಯಾರಮ್ಮ ನೀನು ...?  ಅನ್ನುತ್ತಾ   ಹತ್ತಿರ   ತೆರಳಲು  ಕೈ ಅಡ್ಡ ಪಡಿಸಿ  ನಾನು ಈ ಊರಿನ "ದಸರಾ ವೈಭವ "  ಕಂಡ  ಕಾವೇರಿ  .... ! ಅನ್ನುತ್ತಾ  ಮಾಯವಾದಳು   ಆ  ನಾರಿ.  ತಕ್ಷಣ ಎಚ್ಚರ ಆಯ್ತು , ಅರೆ ಶ್ರೀ ರಂಗ ಪಟ್ಟಣದ  ದಸರಾ ವೈಭವ   ಹೇಗಿತ್ತು ಅನ್ನುತ್ತಾ   ಮಾಹಿತಿ   ಅರಸಿ ಹೊರಟೆ , ಆಗ ದೊರೆತ ಮಾಹಿತಿ   ಶ್ರೀ ರಂಗ ಪಟ್ಟಣದ  ವೈಭವದ   ದಸರಾ  ಅಥವಾ ಮಹಾನವಮಿ, ಆಚರಣೆಯ   ಸಂಭ್ರಮದ  ಆಚರಣೆ ವಿಧಾನಗಳು, ಬನ್ನಿ ಶ್ರೀ ರಂಗ ಪಟ್ಟಣದ   ದಸರಾ ಸಂಭ್ರಮ ಹೇಗಿತ್ತು ನೋಡೋಣ. 


ಶ್ರೀ ರಂಗ ಪಟ್ಟಣದಲ್ಲಿ  ಆಳ್ವಿಕೆ ನಡೆಸಿದ  ಯದುಕುಲದ  ಮಹಾರಾಜರುಗಳು 




ಎಲ್ಲರಿಗೂ ತಿಳಿದಂತೆ  ವಿಜಯ ನಗರ ಸಾಮ್ರಾಜ್ಯ ಅವಸಾನದ ಅಂಚಿಗೆ  ತೆರಳುತ್ತಿದ್ದ  ಕಾಲದಲ್ಲಿ  ಮೈಸೂರು ಅರಸರು   ನಂತರ  ಚಾಮರಾಜ ಒಡೆಯರ್   v [೧೬೧೭-೧೬೩೭,], ಇಮ್ಮಡಿ ರಾಜ ಒಡೆಯರ್ [೧೬೩೭-೧೬೩೮],  ಕಂಠೀರವ ನರಸರಾಜ ಒಡೆಯರ್  1 ,[೧೬೩೮-೧೬೫೯],ದೇವರಾಜ ಒಡೆಯರ್ [ ೧೬೫೯-೧೬೭೩] , ಚಿಕ್ಕ ದೇವರಾಜ ಒಡೆಯರ್[೧೬೭೩-೧೭೦೪],  ನರಸರಾಜ ಒಡೆಯರ್ [ ೧೭೦೪ -೧೭೧೪],  ಒಂದನೇ ಕೃಷ್ಣರಾಜ ಒಡೆಯರ್  [ ೧೭೧೪-೧೭೩೨], ಏಳನೇ ಚಾಮರಾಜ ಒಡೆಯರ್ [ ೧೭೩೨-  ೧೭೩೪ ] , ಎರಡನೇ ಕೃಷ್ಣರಾಜ ಒಡೆಯರ್  [ ೧೭೩೪- ೧೭೬೧ ]      ಆ ನಂತರ  ಹೆಸರಿಗೆ ಮೈಸೂರ ಅರಸರೂ ಇದ್ದೂ    ಹೈದರ್ ಅಲಿಯ   ಪ್ರತಿನಿಧಿಸಿದ್ದ ಆಡಳಿತದಲ್ಲಿ   ಎರಡನೇ  ಕೃಷ್ಣ ರಾಜ ಒಡೆಯರ್ [ ೧೭೬೧- ೧೭೬೬] ನಂಜರಾಜ ಒಡೆಯರ್ [೧೭೬೬-೧೭೭೦ ],ಬೆಟ್ಟದ ಚಾಮರಾಜ ಒಡೆಯರ್ v11     {೧೭೭೦-೧೭೭೬] ನಂತರ ಖಾಸಾ ಚಾಮರಾಜ ಒಡೆಯರ್ V111  ರ  ಪ್ರತಿನಿದಿಯಾಗಿ ಹೈದರ್ ಅಲಿ ,ಆನಂತರ ಟಿಪ್ಪೂ ಸುಲ್ತಾನ್         ಆಳ್ವಿಕೆ ನಡೆಸಿ ಕ್ರಿ .ಶ.1799  ರ ಮೈಸೂರಿನ ಅಂತಿಮ ಯುದ್ದದ ಸೋಲಿನ ನಂತರ  ಶ್ರೀ ರಂಗ ಪಟ್ಟಣ ದ ಒಂದು  ಸುವರ್ಣ ಅಧ್ಯಾಯ ಮುಗಿದಿತ್ತು

                                

 ಶ್ರೀ ರಂಗಪಟ್ಟಣದ   ಹಳೆಯ ಅರಮನೆಯ  ಒಂದು ಭಾಗ 





ವಿಜಯನಗರದ ನಂತರ ಮೈಸೂರು ಅರಸರ ಆಳ್ವಿಕೆಗೆ ಹಲವಾರು  ಪ್ರದೇಶಗಳು ಬಂದರೂ ಸಹ, ವಿಜಯನಗರ  ಸಾಮ್ರಾಜ್ಯದ  ಹಲವಾರು ಸಾಂಸ್ಕೃತಿಕ  ಆಚರಣೆಗಳು, ಆಡಳಿತ ವಿಧಿ ವಿಧಾನಗಳು  ಮೈಸೂರು  ಅರಸರ ಕಾಲದಲ್ಲಿಯೂ  ಮುಂದುವರೆದವು, ಅದರಲ್ಲಿ ವಿಶೇಷವಾಗಿ  ಆಶ್ವೀಜ  ಮಾಸದ  ಶುಕ್ಲ ಪಕ್ಷದಲ್ಲಿ ಪ್ರಥಮಾ ತಿಥಿಯಿಂದ ದಶಮಿಯವರೆವಿಗೆ . ಮಹಾನವಮಿ  ಹಬ್ಬದ  ಆಚರಣೆ  ಮುಂದುವರೆಯಿತು.  


ಬನ್ನಿ  ಮೊದಲು ಮಹಾನವಮಿ   ಹಬ್ಬ ಆಚರಣೆಯ ಬಗ್ಗೆ ತಿಳಿಯೋಣ   ಮಹಾನವಮಿ / ವಿಜಯ ದಶಮಿ /  ಹಬ್ಬದ ಆಚರಣೆ ಪ್ರತೀ ಸಂವತ್ಸರದ ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರಥಮ ಪಾಡ್ಯ  ತಿಥಿಯಿಂದ ದಶಮಿಯವರೆವಿಗೆ ದಿನ ನಿತ್ಯ ಪೂಜೆ ಪುನಸ್ಕಾರ, ಸಂತರ್ಪಣೆ, ಹಾಗೂ  ಹಬ್ಬದ ವಾತಾವರಣವನ್ನು ಕಾಣಬಹುದು. ಈ ಕಾಲವು ಎಲ್ಲ ದೇವತೆಗಳ ಉಪಾಸನೆಗಳಿಗೆ ಶ್ರೇಷ್ಠವಾಗಿದ್ದರೂ ಶಕ್ತಿದೇವತೆಯನ್ನು ಪ್ರಸನ್ನಗೊಳಿಸುವ ಕಾಲವಾಗಿದೆ .  ಮಹಾನವಮಿ ಬಗ್ಗೆ  ಹಿನ್ನೆಲೆ ಹುಡುಕುತ್ತಾ ಹೊರಟಾಗ  ಕೆಲಅಂಶಗಳು ಪೌರಾಣಿಕ ಹಿನ್ನೆಲೆಯಲ್ಲಿ  ಉಲ್ಲೇಖಗೊಂಡಿವೆ . 

 ೧]  ಪೌರಾಣಿಕ  ಹಿನ್ನೆಲೆಯ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷ ನನ್ನು ಶಕ್ತಿ ಮತ್ತು ಯುಕ್ತಿಯಿಂದ  ಆದಿಶಕ್ತಿ  ಚಾಮುಂಡಿ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ.  ಎಂಬ ಮಾಹಿತಿ ತಿಳಿಯುತ್ತದೆ.

೨] ಪೌರಾಣಿಕ ಹಿನ್ನೆಲೆ ರಾಮಾಯಣ ದಲ್ಲಿ ಶ್ರೀ ರಾಮನು ರಾವಣನನ್ನು  ಸಂಹಾರ ಮಾಡಿ  ವಿಜಯ ಸಾಧಿಸಿದ ದಿನ ವೆಂದೂ  ಯುದ್ದಕ್ಕೆ ಮೊದಲು  ಶ್ರೀ ರಾಮನು  ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿ ರಾವಣನ ಮೇಲೆ ಶ್ರೀ ರಾಮನ ವಿಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುವರು. 

೩] ಮಹಾಭಾರತದಲ್ಲಿ  ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ಹೇಳಲಾಗುತ್ತದೆ.ಮಹಾ ಭಾರತದ ಯುದ್ದದ ಮೊದಲು  ಪಾರ್ಥನು  ಶಮಿ ವೃಕ್ಷವನ್ನು ಪೂಜಿಸಿ  ಅದರಲ್ಲಿದ್ದ   ಆಯುಧಗಳನ್ನು  ಮತ್ತೆ ಧರಿಸುವ ಬಗ್ಗೆ  ಪ್ರಸ್ತಾಪವಿದೆ. 


 ಐತಿಹಾಸಿಕ   ಹಿನ್ನೆಲೆ   ಗಮನಿಸಿದಾಗ  ಉತ್ತರ ಭಾರತದಲ್ಲಿ   ರಾಮ ಲೀಲಾ   ಆಚರಣೆ ಮಾಡಿದರೂ ಸಹ    ಆಚರಣೆ ಇದ್ದರೂ ಸಹ  ಇದು  ವಿಷ್ಣು ಲೀಲೆಯ  ನಾಟಕದ  ಅವತಾರದಂತೆ  ಜಾನಪದ ಆಚರಣೆ ಆಗಿದೆ ಅಷ್ಟೇ.   ಆದರೆ  ಇದನ್ನು ಒಂದು   ಐತಿಹಾಸಿಕ  ಹಬ್ಬವಾಗಿ  ಆಚರಿಸಿದ ಬಗ್ಗೆ  ಮೊದಲು  ಮಹಾನವಮಿ  ಉಲ್ಲೇಖ  ವಿಜಯನಗರ   ಸಾಮ್ರಾಜ್ಯದ  ಇತಿಹಾಸದಲ್ಲಿ ಕಾಣಸಿಗುತ್ತದೆ.    ಅದಕ್ಕಿಂತ ಮೊದಲು  ಯಾವ ಯಾವ  ಅರಸರ ಸಾಮ್ರಾಜ್ಯಗಳು  ಮಹಾನವಮಿ  ಆಚರಣೆ ಮಾಡಿದರು ಎಂಬ ಬಗ್ಗೆ  ಎಲ್ಲಿಯೂ ಮಾಹಿತಿ ಲಭ್ಯವಿಲ್ಲ. ಹಾಗಾಗಿ  ಮೊದಲ ಆಚರಣೆ ವಿಜಯನಗರ   ಸಾಮ್ರಾಜ್ಯದಲ್ಲಿ   ಆಯಿತೆಂದು  ಅಂದುಕೊಳ್ಳಬೇಕಾಗಿದೆ.    ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು.

ಶ್ರೀ ರಂಗನ  ಮಡಿಲಲ್ಲಿ  ದಸರಾ  ವೈಭವ ವಿತ್ತು 



ಅಧಿಕೃತ ದಾಖಲೆಗಳ ಆಧಾರದಲ್ಲಿ ಮೈಸೂರು ಸಾಮ್ರಾಜ್ಯದ  ರಾಜ ಒಡೆಯರ್ {1578–1617}  ಅವರ ಕಾಲದಲ್ಲಿ   1610 ರ ಸೆಪ್ಟೆಂಬರ್ 8   ರಿಂದ 17  ರ ವರೆಗೆ    ಮೊದಲ ಮಹಾನವಮಿ ಆಚರಣೆ ಆಯಿತೆಂದು  ತಿಳಿದು ಬರುತ್ತದೆ. ಅಚ್ಚರಿಯ ವಿಚಾರವೆಂದರೆ  1610  ರ ಸೆಪ್ಟೆಂಬರ್  6  ರಂದು  ರಾಜ ವೊಡೆಯರ್ ಅವರ ಹಿರಿಯ  ಮಗ  ನರಸರಾಜ  ಒಡೆಯರ್   ದೈವಾಧೀನವಾಗಿರುತ್ತಾರೆ , ಆದರೂ ಸಹ   ರಾಜ ಒಡೆಯರ್ ಅವರು   ಶಾಸ್ತ್ರ  ಸಂಪನ್ನರನ್ನು  ಸಂಪರ್ಕಿಸಿ,  ಮಹಾನವಮಿ ಹಬ್ಬದ ಆಚರಣೆ ಮಾಡಿಯೇ ಬಿಡುತ್ತಾರೆ, ತದನಂತರ  ಒಂದು ಶಾಸನ ರಚಿಸಿ  ಒಂದು ವೇಳೆ  ರಾಜ ಮನೆತನದಲ್ಲಿ  ಇಂತಹ ಘಟನೆ ಸಂಭವಿಸಿದರೂ ಸಹ  ಮುಂದೆ ನಡೆಯುವ  ಮಹಾನವಮಿ ಹಬ್ಬದ ಆಚರಣೆಗೆ  ಅಡಚಣೆ ಆಗಬಾರದೆಂದು  ನಿಯಮ ಮಾಡಲಾಗುತ್ತದೆ.   ಇದೆ ಆಳ್ವಿಕೆ ಕಾಲದಲ್ಲಿ ಶ್ರೀ ರಂಗಪಟ್ಟಣದಲ್ಲಿ   ಆಡಳಿತ ನಿರ್ವಹಣೆಗೆ  "ದಳವಾಯಿ " [ ನಮ್ಮಲ್ಲಿನ   ಸರ್ಕಾರದ   ಮುಖ್ಯ ಕಾರ್ಯದರ್ಶಿಗಳ ತರಹದ ಹುದ್ದೆ]    ನೇಮಕಾತಿಯನ್ನು  ಪುನಃ  ಪ್ರಾರಂಭ ಮಾಡಲಾಗುತ್ತದೆ. ಅದರಂತೆ ಮೊದಲ ದಳವಾಯಿ ಯಾಗಿ     ಕರಿಕಾಳ ಮಲ್ಲರಾಜಯ್ಯ  ಎಂಬುವರ ನೇಮಕವಾಗುತ್ತದೆ. 



1610 ರಲ್ಲಿ ಶ್ರೀ ರಂಗಪಟ್ಟಣದಲ್ಲಿ  ಪ್ರಾರಂಭವಾದ  ಮಹಾನವಮಿ ಆಚರಣೆ  ಹೇಗೆ ನಡೆಯುತ್ತಿತ್ತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ,   ಅಂದರೆ  1610 ರಿಂದ 1647  ರವರೆಗೆ ಅವಲೋಕನ ನಡೆಸಿದರೆ ,  ರಾಜ ಒಡೆಯರ್ ನಂತರ ಬಂದ  ನಾಲ್ವಡಿ ಚಾಮರಾಜ ಒಡೆಯರ್{1617–1637}  ಅವರು  ಮಹಾನವಮಿ ಆಚರಿಸಿದ ಬಗ್ಗೆ   ಮಾಹಿತಿ ಲಭ್ಯವಿಲ್ಲ  , ನಾಲ್ವಡಿ ಚಾಮರಾಜ  ಒಡೆಯರ್  ಅವರು ತಮ್ಮ 35  ವರ್ಷದಲ್ಲಿ   1637 ರ ಮೇ 2  ನೆ ತಾರೀಕು  ನಿಧನರಾಗುತ್ತಾರೆ,  ಅದೇ ವರ್ಷ ಅಂದರೆ  1637 ರ ಮೇ  14  ನೆ ತಾರೀಕಿನಂದು ಇಮ್ಮಡಿ ರಾಜ ಒಡೆಯರ್ ರಾಜ ಸಿಂಹಾಸನ ಅಲಂಕಾರ ಮಾಡುತ್ತಾರೆ   ಆದರೆ 1638 ರ ಅಕ್ಟೋಬರ್ 8  ರಂದು ತಮ್ಮ 27  ನೆ ವರ್ಷದಲ್ಲಿ   ಮರಣ ಹೊಂದುತ್ತಾರೆ, ಇವರ ಅವಧಿಯಲ್ಲಿ ಮಹಾನವಮಿ ಆಚರಣೆಯಾದ ಬಗ್ಗೆ ಮಾಹಿತಿ ಇಲ್ಲಾ,  


 ಕಂಠೀರವ ನರಸರಾಜ ಒಡೆಯರ್  {ಚಿತ್ರ ಕೃಪೆ  ಗೂಗಲ್  ಅಂತರ್ಜಾಲ } 


ನಂತರ ಮೈಸೂರಿನ  ಅರಸರಾಗಿದ್ದ ಇಮ್ಮಡಿ ರಾಜ ಒಡೆಯರ್   ಅವರಿಗೆ ಸಂತಾನವಿಲ್ಲದ ಕಾರಣ ಕಂಠೀರವ ನರಸರಾಜ ಒಡೆಯರ್  ಅವರು   ಶ್ರೀ ರಂಗಪಟ್ಟಣದಲ್ಲಿ  1638 ರ  ನವೆಂಬರ್ 22  ರಂದು  ಪ್ರಥಮವಾಗಿ  ರಾಜ್ಯಭಾರದ   ಹೊಣೆ ಹೊತ್ತು ಸಿಂಹಾಸನ ಅಲಂಕಾರ ಮಾಡುತ್ತಾರೆ.   ಇವರು ನರಸಿಂಹ ಜಯಂತಿಯಂದು ಜನಿಸಿದ ಕಾರಣ [ 1615 ಮೇ 2]   ನೆನಪಿಗಾಗಿ  ಶ್ರೀ ರಂಗಪಟ್ಟಣದಲ್ಲಿ    ಮೈಸೂರು ಯದು ವಂಶ ಅರಸರ ಅರಮನೆಯ  ಸಮೀಪವೇ .     ನರಸಿಂಹ ದೇವಾಲಯ ನಿರ್ಮಾಣ ಆಗುತ್ತದೆ,   ಅವರು ಉಪಯೋಗಿಸುತ್ತಿದ್ದ ಖಡ್ಗಕ್ಕೆ  "ವಿಜಯನಾರಸಿಂಹ  ಖಡ್ಗ"   ಎಂಬ  ನಾಮಾಂಕಿತ ವಾಗಿರುತ್ತದೆ,    ಅಸಮಾನ್ಯ ಪರಾಕ್ರಮಿ, ಒಳ್ಳೆಯ ಆಡಳಿತಗಾರ  ಎಂಬ ಕೀರ್ತಿ ಎಲ್ಲೆಡೆ ಹಬ್ಬಿರುತ್ತದೆ. ಇವರ   ಆಡಳಿತ  ಕಾಲದಲ್ಲಿ    1647 ರ ಸೆಪ್ಟೆಂಬರ್  19  ರಿಂದ 28  ರ ವರೆಗೆ  ನಡೆದ  ವೈಭವದ ಮಹಾನವಮಿ ಹಬ್ಬದ    ಆಚರಣೆ  ಬಗ್ಗೆ  ಮೊದಲ  ಮಾಹಿತಿ  ಇತಿಹಾಸದ   ಪುಟಗಳಲ್ಲಿ ದಾಖಲಾಗಿದೆ. ಬನ್ನಿ   ಸಂಭ್ರಮದ  ಘಟನೆಗಳನ್ನು  ತಿಳಿಯೋಣ. 

 ಮಹಾನವಮಿ ಆಚರಣೆಗೆ   ಇನ್ನೂ ಹಲವಾರು ತಿಂಗಳುಗಳು ಇರುವಂತೆಯೇ  ಹೊಸ  ಹೊಸ ಪಂಚಾಂಗ  ಬಂದ ತಕ್ಷಣ    ಕಂಠೀರವ ನರಸರಾಜ ಒಡೆಯರ್  ಅವರು  ಆಸ್ಥಾನದ  ಜ್ಯೋತಿಷಿ  ಗಳನ್ನೂ,  ಪಂಡಿತರನ್ನು ಕರೆಸಿ  ಸಮಾಲೋಚನೆ ನಡೆಸಿ ಮಹಾನವಮಿ ಆಚರಣೆಯ  ಕಾರ್ಯಕ್ರಮಗಳ  ರೂಪ ರೇಷೆ  ತಯಾರು ಮಾಡಿಕೊಂಡು , ಕಾರ್ಯಕ್ರಮಕ್ಕೆ  ಪ್ರಾಥಮಿಕ  ಹಂತದ  ಚಾಲನೆ   ನೀಡುತ್ತಿದ್ದರು,  ಇದರ ಜವಾಬ್ಧಾರಿಯನ್ನು  ಹೇಗೆ ನಿಭಾಯಿಸಬೇಕೂ ಎಂಬ ಬಗ್ಗೆ  ದಳವಾಯಿ   ಲಿಂಗರಾಜಯ್ಯ ನ ಜೊತೆ  ಸಮಾಲೋಚನೆ ಮಾಡಿ  ಸಂಪೂರ್ಣ  ಮಹಾನವಮಿ  ಆಚರಣೆಯ   ಕಾರ್ಯಕ್ರಮದ   ಹೊಣೆಯನ್ನು  ದಳವಾಯಿ ಲಿಂಗರಾಜಯ್ಯ ರವರಿಗೆ  ವಹಿಸಿ  ಅಧಿಕಾರ ನೀಡಲಾಗುತ್ತಿತ್ತು,  ನಂತರ  ಇದರ ಅನುಷ್ಠಾನ ವನ್ನು   ದಳವಾಯಿ ಲಿಂಗರಾಜಯ್ಯ ನವರು    ಶ್ರೀ ರಂಗಪಟ್ಟಣ  ರಾಜಧಾನಿಯ   ರಾಜ ಪ್ರಮುಖ  ಅಧಿಕಾರಿ  ಅಥವಾ  ಮೇಯರ್   ಲಿಂಗೇಗೌಡ  ಅವರಿಗೆ  ಸೂಚನೆ ನೀಡಿ   ಮಹಾನವಮಿಗೆ  ಸಿದ್ದತೆ  ಮಾಡಿಕೊಳ್ಳುತ್ತಿದ್ದರು. 

ಮೊದಲು ತಯಾರಾಗುತ್ತಿದ್ದುದೆ   ತಾಳೆಗರಿಯ   ಆಹ್ವಾನ  ಪತ್ರಿಕೆ  ಇದರಲ್ಲಿ ಮಹಾನವಮಿ  ಹಬ್ಬಕ್ಕೆ    ತಮ್ಮ ಪರಿವಾರದೊಂದಿಗೆ  ಆಗಮಿಸುವಂತೆ ಎಲ್ಲಾ ಸಾಮಂತ / ಗೆಳೆಯ ರಾಜರುಗಳಿಗೆ, ಪಾಳೆಯಗಾರರಿಗೆ ,  ಆಹ್ವಾನ  ಪತ್ರಿಕೆಗಳನ್ನು  ರಾಜ ಪ್ರತಿನಿಧಿಗಳ ಮೂಲಕ  ಕಳುಹಿಸಲಾಗುತ್ತಿತ್ತು,   ಹೊಳೆನರಸಿಪುರ,   ಬೇಲೂರು, ಕುಣಿಗಲ್,ಮಾಗಡಿ,  ನಂಜರಾಯಪಟ್ಟಣ , ಇಕ್ಕೇರಿ, ತಂಜಾವೂರು,  ಮಧುರೆ, ಕೊಡಗು, ಮಲೆಯಾಳ,  ಕೊಂಕಣ ,  ರಾಜರುಗಳಿಗೆ  ಆಹ್ವಾನ ಪತ್ರಿಕೆ   ತಲುಪುತ್ತಿತ್ತು. ಇದಷ್ಟೇ  ಅಲ್ಲದೆ,ಬೇಡ  ಜನಾಂಗದ  ನಾಯಕನಿಗೂ  ಆಹ್ವಾನ ಪತ್ರಿಕೆ  ಕಳುಹಿಸಲಾಗುತ್ತಿತ್ತು.   

ಇದರ ಜೊತೆಯಲ್ಲೇ  ರಾಜಧಾನಿ  ಶ್ರೀ ರಂಗ ಪಟ್ಟಣದಲ್ಲಿ ಅರಮನೆಯ ಅಲಂಕಾರ  ಹಾಗು ಪಟ್ಟಣದ ಪ್ರಮುಖ ಬೀದಿಗಳ  ಅಲಂಕಾರ  ಮಾಡಲಾಗುತ್ತಿತ್ತು. ಅರಮನೆಯ ದರ್ಭಾರ್ ಸಭಾಂಗಣ [ ಓಲಗ  ಶಾಲೆ,  ಆಸ್ಥಾನ ಮಂಟಪ]   ಚಂದ್ರ ಶಾಲೆ [ ಆಯುಧ ಶಾಲೆ ]  ಉಗ್ರಾಣ ಶಾಲೆ,  ಉಡುಗೊರೆಗಳ   ಬೊಕ್ಕಸ ಶಾಲೆ,  ತಪಾಸಣೆ   ಆಗುತ್ತಿತ್ತು,  ಆ ಶಾಲೆಗಳಲ್ಲಿ  ಬಣ್ಣ ಬಣ್ಣಗಳ ಚಿತ್ರಾದ  ಅಲಂಕಾರ ಮಾಡಲಾಗುತ್ತಿತ್ತು,    ಉಗ್ರಾಣ ಶಾಲೆಯಲ್ಲಿ   ಆಹಾರ   ಸಾಮಗ್ರಿಗಳ, ತೈಲಗಳ , ದವಸ, ಧಾನ್ಯ,  ಉರುವಲು,  ತುಪ್ಪ, ಬೆಣ್ಣೆ,  ಹಣ್ಣು ಹಂಪಲು,  ತರಕಾರಿ, ಹಾಗು   ಇತರ  ಎಲ್ಲಾ ಬಗೆಯ    ಅಡಿಗೆ ಸಾಮಗ್ರಿಗಳ   ತಪಶೀಲು ನಡೆಸಿ   ಮಹಾನವಮಿಗೆ  ಉಗ್ರಾಣವನ್ನು ಅಣಿಗೊಳಿಸಲಾಗುತ್ತಿತ್ತು.    ಉಡುಗೊರೆಗಳ ಬೊಕ್ಕಸ   ಮಹಾನವಮಿ ಆಚರಣೆಗೆ  ಅಗತ್ಯವಿರುವ  ಸಾಮಗ್ರಿಗಳ  ದಾಸ್ತಾನು  ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಲಾಗುತ್ತಿತ್ತು, ಒಂದು ವೇಳೆ ಅಗತ್ಯ ಬಿದ್ದರೆ ಅವುಗಳ   ಸಂಗ್ರಹಕ್ಕೆ   ತಕ್ಷಣ  ಕ್ರಮವಹಿಸಲಾಗುತ್ತಿತ್ತು.  ಚಂದ್ರ ಶಾಲೆಯಲ್ಲಿ ಆಯುಧಗಳ  ದಾಸ್ತಾನು, ಅವುಗಳ ಸಾಮರ್ಥ್ಯ ಗಳ ತಪಾಸಣೆ ಮಾಡಲಾಗುತ್ತಿತ್ತು,   ಮುಂದುವರೆದು,   ನಂತರ ಕುದುರೆ ಲಾಯ ಹಾಗು ಆನೆಗಳ  ಮನೆ ತಪಾಸಣೆ ಮಾಡಿ  ಅವುಗಳ ಆರೋಗ್ಯ,  ಲಾಯ ಹಾಗು ಮನೆಗಳ ದುರಸ್ಥಿ , ಮಹಾನವಮಿ  ಕಾರ್ಯಕ್ರಮಕ್ಕೆ   ಕುದುರೆ, ಆನೆಗಳ   ತಯಾರಿ    ಮಾಡಲಾಗುತ್ತಿತ್ತು. 


 ನಂತರ  ಶುರುವಾಗುತಿತ್ತು   ಮಹಾನವಮಿಗೆ ಆಗಮಿಸುವ   ಆಹ್ವಾನಿತರಿಗೆ  ಉಳಿಯಲು ಬಿಡದಿ ವ್ಯವಸ್ಥೆ ,   ಮಹಾನವಮಿಗೆ   ಆಗಮಿಸುವ  ವಿವಿಧ ಧಾರ್ಮಿಕ  ಸ್ವಾಮಿಗಳು,  ಸನ್ಯಾಸಿಗಳು, ವಿವಿಧ ರಾಜ್ಯಗಳ   ರಾಜರುಗಳಿಗೆ , ಅವರ ಪರಿವಾರದೊಂದಿಗೆ     ಆಗಮಿಸುತ್ತಿದ್ದ,   ವಿಧ್ವಾಂಸರು,  ಕವಿಗಳು,   ಸಂಗೀತಗಾರರು, ವಿವಿಧ ಬಗೆಯ ಕಲಾವಿದರು,   ಕುಸ್ತಿಪಟುಗಳು, ಮಲ್ಲ ಯುದ್ದದ  ಜಟ್ಟಿಗಳು,  ವ್ಯಾಪಾರಿಗಳು,   ನರ್ತಕಿಯರು, ವಿವಿಧ ಬಗೆಯ ವೃತ್ತಿಯ  ಹೆಂಗಸರುಗಳಿಗೆ   ಅವರುಗಳ  ಸ್ಥಾನ ಮಾನಗಳಿಗೆ ತಕ್ಕಂತೆ  ಯೋಜನಾಬದ್ದವಾಗಿ   ಬಿಡಾರ  ನಿರ್ಮಾಣ ಮಾಡಿ ಮಹಾನವಮಿ  ಹಬ್ಬದಲ್ಲಿ   ಅವರುಗಳಿಗೆ ವ್ಯವಸ್ಥಿತವಾಗಿ  ನೀಡಲಾಗುತ್ತಿತ್ತು. 

ಇಷ್ಟೆಲ್ಲಾ  ವ್ಯವಸ್ಥೆ  ಪೂರ್ಣಗೊಳ್ಳುತ್ತಿದ್ದಂತೆ  ಮಹಾನವಮಿಯ ಆಗಮನ ವಾಗುತ್ತಿತ್ತು  ರಾಜಧಾನಿ ಶ್ರೀ ರಂಗಪಟ್ಟಣ  ವಿವಿಧ  ಪ್ರಾಂತದ  ಜನರಿಂದ   ತುಂಬಿ ಹೋಗುತ್ತಿತ್ತು. ವಿವಿಧ     ಪ್ರಾಂತಗಳ ವೇಷ ಭೂಷಣಗಳ  ಜನರು  ಕಾಣಲು ಸಿಗುತ್ತಿದ್ದರು.  ಮಹಾನವಮಿ ಹಬ್ಬದ  ಮೊದಲ ದಿನ  ಇಡೀ ಅರಮನೆಯಲ್ಲಿ , ಅಶ್ವ ಶಾಲೆ, ಗಜ ಶಾಲೆ,  ಆಯುಧ ಶಾಲೆ  ಗಳಲ್ಲಿ    ವೇದ ಪಂಡಿತರಿಂದ  ಮಂತ್ರಗಳ ಘೋಷಣೆಗಳೊಂದಿಗೆ  ರಾಜ  ಪುರೋಹಿತರು   ಪುಣ್ಯಾವರ್ಚನೆ  ಮಾಡುತ್ತಿದ್ದರು,  ನಂತರ   ರಾಜ ಮನೆತನದ   ಚಾಮುಂಡಿಯನ್ನು    ಆವಾಹಿಸಿ   ಯಜ್ಞ ಯಾಗಗಳನ್ನು, ಚಂಡಿಕಾ ಹೋಮ ಇತ್ಯಾದಿ  ಪೂಜೆಗಳನ್ನು  ಮಾಡಲಾಗುತ್ತಿತ್ತು. ಪ್ರತಿನಿತ್ಯವೂ  ಮಹಾನವಮಿಗೆ ಆಗಮಿಸಿದ್ದ ಎಲ್ಲ  ಜನರಿಗೂ  ಊಟದ  ವ್ಯವಸ್ಥೆ  ಮಾಡಲಾಗುತ್ತಿತ್ತು,  ಎಲ್ಲರೂ  ಸಂತೃಪ್ತಿಯಿಂದ  ಖುಷಿಯಾಗಿ ಮಹಾನವಮಿ ಹಬ್ಬದಲ್ಲಿ ಭಾಗವಹಿಸುತ್ತಿದ್ದರು. ಮೊದಲ 8 ದಿನಗಳು  ಶ್ರೀ ಕಂಠೀರವ ನರಸರಾಜ ಒಡೆಯರ್  ರವರು ಬೆಳಿಗ್ಗೆ ಹಾಗು ಸಂಜೆ  ದಿನಕ್ಕೆ ಎರಡು ಸಾರಿಯಂತೆ   ಸಾರ್ವಜನಿಕ  ದರ್ಭಾರ್  ನಡೆಸುತ್ತಿದ್ದರು   ಇದನ್ನು ಮಹಾನವಮಿ ಒಡ್ಡೋಲಗ  ಎಂದು ಕರೆಯಲಾಗುತ್ತಿತ್ತು.      ಶ್ರೀರಂಗಪಟ್ಟಣದ  ಆದಿದೇವರು ಶ್ರೀ ರಂಗನಾಥ ಸ್ವಾಮಿ , ಅರಸರ ಮೆಚ್ಚಿನ  ದೇವರು ಶ್ರೀ ಲಕ್ಷ್ಮಿ ನರಸಿಂಹ ದೇವರುಗಳ   ಉತ್ಸವ ಮೂರ್ತಿಗಳನ್ನು ವೇಧ ಘೋಷಣೆ, ಮಂಗಳ ವಾಧ್ಯಗಳ  ಮೆರವಣಿಗೆ ಮೂಲಕ    ಅರಮನೆಯಾ ದರ್ಭಾರ್  ಸಭಾಂಗಣಕ್ಕೆ  ತಂದು  ಅಲ್ಲಿ  ವಿಶೇಷವಾಗಿ  ರತ್ನಾಭರಣ ಗಳಿಂದ ಅಲಂಕರಿಸಿ  ಇಡಲಾಗುತ್ತಿದ್ದ   ಚಿನ್ನದ ಸಿಂಹಾಸನದಲ್ಲಿ   ಇಡಲಾಗುತ್ತಿತ್ತು.   ಆ ನಂತರ   ದಳವಾಯಿ ಲಿಂಗರಾಜಯ್ಯ  ರಾಜ ಲಾಂಛನದ   ವಸ್ತ್ರಧರಿಸಿ ,   ಪರಾಕು ಹೇಳುವ  ಜನರಿಂದ ಪರಾಕು ಹೇಳಿಸುತ್ತಾ  ಶ್ರೀ ಕಂಠೀರವ ನರಸರಾಜ ಒಡೆಯರ್  ಅವರನ್ನು ಆಹ್ವಾನ ಮಾಡುತ್ತಾ   ಮಹಾನವಮಿಯ ರಾಜ ಒಡ್ಡೋಲಗಕ್ಕೆ   ಕರೆತರುತ್ತಿದ್ದರು,   ಛತ್ರ ಛಾಮರಗಳ  ,   ರಾಜ ಲಾಂಛನ , ರಾಜ ಬಾವುಟಗಳ  ಮರ್ಯಾದೆಯೊಂದಿಗೆ     ಮಂಗಳ ವಾದ್ಯಗಳೊಡನೆ   ಪಲ್ಲಕಿಯಲ್ಲಿ ಆಗಮಿಸಿದ ಶ್ರೀ ಕಂಠೀರವ ನರಸರಾಜ ಒಡೆಯರ್  ರವರು  ಮೊದಲು ಮನೆದೇವರು ತಾಯಿ ಚಾಮುಂಡಿ,  ಶ್ರೀ ರಂಗನಾಥ,  ಲಕ್ಷ್ಮಿ ನರಸಿಂಹ  ದೇವರುಗಳಿಗೆ  ಭಕ್ತಿಯಿಂದ   ಪೂಜಿಸಿ , ಆನಂತರ   ಸಿಂಹಾಸನ ಅಲಂಕಾರ ಮಾಡುತ್ತಿದ್ದರು.   ಆ ದರ್ಭಾರ್  ಸಭಾಂಗಣದಲ್ಲಿ  ವಿವಿಧ ಬಗೆಯ  ಪ್ರಮುಖ   ರಾಜರು,  ಅಧಿಕಾರಿಗಳು, ವಿದ್ವಾಂಸರು, ಕಲಾವಿದರು, ಇನ್ನು ಮುಂತಾದವರ  ಗೌರವಕ್ಕೆ ಚ್ಯುತಿ ಬಾರದಂತೆ  ಆಸನ ವ್ಯವಸ್ಥೆ  ಮಾಡಲಾಗಿರುತ್ತಿತ್ತು.  ವಿವಿಧ   ರಾಜ್ಯಗಳ / ಸೀಮೆಯ     ಗೆಳೆಯರ ಅಥವಾ ಸಾಮಂತ  ರಾಜರುಗಳಿಂದ ಉಡುಗೊರೆ ಅಥವಾ ಕಪ್ಪ ಕಾಣಿಕೆಗಳ ಸಮರ್ಪಣೆ   ಆಗುತ್ತಿತ್ತು, ಮೊದಲ ದಿನದ ಕಾರ್ಯ  ಪರಸ್ಪರ ಪರಿಚಯ ಹಾಗು  ಕಪ್ಪ ಕಾಣಿಕೆಗಳ  ಸಮರ್ಪಣೆ  ಇದರ ಜೊತೆಗೆ ಮನರಂಜನೆ  ಕಾರ್ಯಕ್ರಮಗಳು  ಇವುಗಳಲ್ಲೇ ಕಳೆದು ಹೋಗುತ್ತಿತ್ತು. ರಾತ್ರಿವೇಳೆಯಲ್ಲಿ   ಅರಮನೆ ಹಾಗು ಶ್ರೀರಂಗಪಟ್ಟಣ  ನಗರವನ್ನು    ಲಕ್ಷಾಂತರ  ಕಂದಿಲುಗಳಿಂದ, ಪಂಜುಗಳಿಂದ ,  ವಿವಿಧ ಬಗೆಯ  ಎಣ್ಣೆ ದೀಪಗಳಿಂದ    ಅಲಂಕಾರ ಮಾಡಲಾಗುತ್ತಿತ್ತು, ಶ್ರೀ ರಂಗಪಟ್ಟಣ  ಅರಮನೆ   ಅಂದು  ದೀಪಗಳ ಬೆಳಕಿನ   ರಂಗಿನೊಡನೆ  ಹೊಸ  ರಂಗು ಪಡೆದು   ದೀಪಗಳ  ದ್ವೀಪವಾಗಿ  ಕಂಗೊಳಿಸುತ್ತಿತ್ತು. 


ನಂತರದ ದಿನಗಳಲ್ಲಿ    ಸೈನಿಕ ಕವಾಯತು, ಗಜ ಪಡೆಯ ಮಾವುತರು, ವಿವಿಧಬಗೆಯ  ಯುದ್ದ ದಳಗಳಗಳಿಂದ , ನಾಯಕರುಗಳಿಂದ  ಗೌರವ  ಸಮರ್ಪಣೆ, ಮಲ್ಲರುಗಳಿಂದ ಕುಸ್ತಿ ಕಾಳಗ, ಮಹಾನ್ ಜಟ್ಟಿಗಳಿಂದ  ಜೋಡಿ ಕಾಳಗ, ಗಜಗಳ  ಕಾಳಗ, ಮದ್ದಾನೆಗಳೊಂದಿಗೆ ,  ಕೆರಳಿದ  ಹುಲಿಗಳೊಂದಿಗೆ  ಹಾಗು ಕರಡಿಗಳೊಂದಿಗೆ  ವೀರ ಜನರ  ಕಾಳಗ,    ದೊಣ್ಣೆ ವರೆಸೆ, ಕತ್ತಿ ವರೆಸೆ,  ಕೊಲಾಟ, ದೊಡ್ಡಾಟ,  ದೊಂಬರ  ಆಟಗಳು, ಇಂದ್ರ ಜಾಲ,  ವಿವಿಧ  ಬಗೆಯ ಸಂಗೀತ  ವಿದ್ವಾಂಸರಿಂದ  ಸಂಗೀತ  ಗಾಯನ, ಸಂಗೀತ  ಸ್ಪರ್ಧೆ , ನೃತ್ಯಗಾರರಿಂದ  ಬಗೆ ಬಗೆಯ ನೃತ್ಯ ಪ್ರದರ್ಶನ,   ಪೌರಾಣಿಕ  ನಾಟಕಗಳ   ಪ್ರದರ್ಶನ,  ಕವಿಗಳ  ಪಾಂಡಿತ್ಯ ಪ್ರದರ್ಶನ,    ಹೀಗೆ ಬಗೆ ಬಗೆಯ  ಕಾರ್ಯಕ್ರಮಗಳು  ಮಹಾನವಮಿಯ  8  ದಿನಗಳು  ನಡೆಯುತ್ತಿದ್ದವು, ನಂತರ  ಪ್ರತಿಭಾವಂತರನ್ನು  ಅವರ ಪ್ರತಿಭೆಗೆ  ತಕ್ಕಂತೆ    ಅರಮನೆ  ಆಸ್ಥಾನದ   ಮರ್ಯಾದೆಯೊಂದಿಗೆ   ಫಲ, ತಾಂಬೂಲ, ಭಕ್ಷಿಸು, ಉಡುಗೊರೆ, ಇವುಗಳಿಂದ  ಸನ್ಮಾನ ಮಾಡಲಾಗುತ್ತಿತ್ತು




ಶ್ರೀ ರಂಗಪಟ್ಟಣದ  ಲಕ್ಷ್ಮಿ ನರಸಿಂಹ  ದೇವಾಲಯದಲ್ಲಿರುವ  ಶ್ರೀ ಕಂಠೀರವ ನರಸರಾಜ ಒಡೆಯರ್  ಪ್ರತಿಮೆ 



ಮಹಾನವಮಿಯ  9 ನೆಯ ದಿನ   ಆಯುಧ ಪೂಜೆ ಕಾರ್ಯಕ್ರಮ  ಅಲಂಕಾರ ಮಾಡಲಾದ  ಆಯುಧ ಶಾಲೆಯಲ್ಲಿ    ಕತ್ತಿ, ಗುರಾಣಿ,  ಖಡ್ಗ , ಈಟಿ, ಬಿಲ್ಲು ಬಾಣಗಳು,  ರಥಗಳು,  ಅಶ್ವಗಳು, ಗಜಗಳು, ಇವುಗಳನ್ನು ಶುಚಿಗೊಳಿಸಿ, ಅಲಂಕಾರ ಮಾಡಿ,  ವ್ಯವಸ್ಥಿತವಾಗಿ  ಸಿದ್ದತೆ ಮಾಡಿಕೊಂಡು    ಅರಮನೆಯ   ಆಯುಧ ಪೂಜೆಯ ಮಂಟಪಕ್ಕೆ  ಮೆರವಣಿಗೆ ಮೂಲಕ ತರಲಾಗುತ್ತಿತ್ತು , ಶ್ರೀ ಕಂಠೀರವ ನರಸರಾಜ ಒಡೆಯರ್   ರವರು  ಆಯುಧ   ಪೂಜೆ ಮಂಟಪಕ್ಕೆ  ಆಗಮಿಸಿ   ಆಯುಧಗಳಿಗೆ , ಗಜಗಳಿಗೆ, ಅಶ್ವಗಳಿಗೆ    ಗೌರವದಿಂದ ಪೂಜೆ   ಸಲ್ಲಿಸುತ್ತಿದ್ದರು. ತದನಂತರ  ದುರ್ಗಾ ಜಪ, ಚಂಡಿಕಾ ಹೋಮ, ನಡೆದು  , ಸಂಗೀತ ನೃತ್ಯ  ಕಾರ್ಯಕ್ರಮಗಳಿಂದ   ಆ ದಿನ  ಸಂಪನ್ನವಾಗುತ್ತಿತ್ತು. 



ಹತ್ತನೆಯ ದಿನವೇ  ವಿಜಯದಶಮಿ , ಆ ದಿನ  ಶ್ರೀ ಕಂಠೀರವ ನರಸರಾಜ ಒಡೆಯರ್   ರವರು  ನಸುಕಿನಲ್ಲಿಯೇ ಎದ್ದು, ತಮ್ಮ  ಪ್ರಾತಃ  ಕರ್ಮಗಳನ್ನು ಮುಗಿಸಿ , ವಿವಿಧ  ಪುಣ್ಯ ಕ್ಷೇತ್ರಗಳ ಪುಣ್ಯ  ನದಿಗಳಿಂದ   ತರಲಾಗಿದ್ದ  ಜಲತೀರ್ಥದಿಂದ   ಸ್ನಾನ ಮಾಡಿ, ಶ್ರೀ ರಂಗನಾಥ , ಶ್ರೀ ಲಕ್ಷ್ಮಿ ನರಸಿಂಹ   ದೇವರುಗಳನ್ನು    ಪೂಜಿಸಿ      ಸಾಮ್ರಾಜ್ಯದ ವಿವಿಧ  ನದಿಗಳಿಂದ   ತರಲಾಗಿದ್ದ  ಜಲ ತೀರ್ಥವನ್ನು ಸ್ವೀಕರಿಸಿ ,   ನಂತರ  ವೇದಘೋಶಗಳಿಂದ  ಚಂಡಿಕಾ  ಪೂಜೆ  ಮಾಡಿ   ಕುಂಬಳಕಾಯಿ  ಒಡೆದು ಪೂಜೆಯನ್ನು  ಅಂತಿಮ ಗೊಳಿಸಲಾಗುತ್ತಿತ್ತು. ಅಂದು ಮಹಾರಾಜರು  ಶ್ರೀರಂಗಪಟ್ಟಣದ  ರಾಜ ಬೀದಿಯಲ್ಲಿ    ಸಾರ್ವಜನಿಕವಾಗಿ  ಜಂಬೂ ಸವಾರಿ ಮೆರವಣಿಗೆ  ಮೂಲಕ  ತೆರಳಿ ಅಂದು ಸಂಜೆ    ಶಮಿಪೂಜೆ  ನೆರವೆರಿಸಬೇಕಾದ  ದಿನ. ಅದರ  ಉಸ್ತುವಾರಿ ಹಾಗು ನಿರ್ವಹಣೆ   ಶ್ರೀ ರಂಗಪಟ್ಟಣದ  ರಾಜ ಪ್ರಮುಖ  ಅಥವಾ ಮೇಯರ್  ಲಿಂಗೇಗೌಡರದು.   ,     ರಾಜಧಾನಿ ಶ್ರೀ ರಂಗಪಟ್ಟಣದ   ಗಡಿಯ ಹೊರಗೆ ಪೂರ್ವಕ್ಕೆ  ಮೂರು ಮೈಲು  ದೂರದಲ್ಲಿ  ಇದ್ದ   ಶಮಿ ಮರದ   ಬಳಿ  ರಾಜರು ಶಮಿ[ ಬನ್ನಿ ಮರ ]  ಪೂಜೆಮಾಡಲು  ಅಲಂಕೃತ  ಮಂಟಪ ನಿರ್ಮಿಸಲಾಗುತ್ತಿತ್ತು.  ಅಂದು    ವಿಜಯ ದಶಮಿ ಪೂಜೆ ಯನ್ನು   ಅರಮನೆಯಲ್ಲಿ  ಮುಗಿಸಿ  ಅಂದು ಮದ್ಯಾಹ್ನ  ಮಹಾನವಮಿ ಜಂಬೂ ಸವಾರಿ ಮೆರವಣಿಗೆಗೆ  ಸಿದ್ದತೆ ಮಾಡಿಕೊಳ್ಳಲಾಗುತ್ತಿತ್ತು,   ನಂತರ ಜಂಬೂಸವಾರಿ  ಮೆರವಣಿಗೆ ರಾಜ ಬೀದಿಯಲ್ಲಿ  ಸಾಗುವ ಮುನ್ನ ಪರಿಶೀಲನೆ ನಡೆಸಿ, ಜಂಬೂಸವಾರಿ ಮೆರವಣಿಗೆಯನ್ನು ಪ್ರಾರಂಭಿಸಲಾಗುತ್ತಿತ್ತು.  ಅರಮನೆಯಿಂದ   ಶಮಿಪೂಜೆ ಮಾಡುವ  ಸ್ಥಳದ ವರೆಗಿನ  ಬೀದಿಗಳಲ್ಲಿ ಎರಡೂ ಬದಿಯಲ್ಲಿ  ಕಿಕ್ಕಿರಿದ  ಜನ ಸಾಗರದ ನಡುವೆ   ಅದ್ದೂರಿಯ ಜಂಬೂ ಸವಾರಿ ಸಾಗುತ್ತಿತ್ತು.  ವಿಜಯ ದಶಮಿಯ ಸಂಪ್ರದಾಯದಂತೆ  ಅರಮನೆಯ  ಜ್ಯೋತಿಷಿಗಳು  ನಿರ್ಧಾರ ಮಾಡಿದ  ಪುಣ್ಯ ಕಾಲದಲ್ಲಿ       ಶ್ರೀ ರಂಗನಾಥ  ಸ್ವಾಮಿ, ಹಾಗು  ಶ್ರೀ ನರಸಿಂಹ  ಸ್ವಾಮಿಗಳ ಉತ್ಸವ ಮೂರ್ತಿಗಳನ್ನು  ಸಕಲ ಗೌರವಗಳೊಂದಿಗೆ   ಮೆರವಣಿಗೆ ಮೂಲಕ ಶಮಿ ಮಂಟಪಕ್ಕೆ   ಒಯ್ಯಲಾಗುತ್ತಿತ್ತು. ನಂತರ ಶ್ರೀ ಕಂಠೀರವ ನರಸರಾಜ ಒಡೆಯರ್ ರವರು ಜಂಬೂ ಸವಾರಿ ಮೂಲಕ  ಶಮಿ ಪೂಜೆಗೆ ತೆರಳುತ್ತಿದ್ದರು.   ಮೈಸೂರು ಸಮ್ರಾಜ್ಯದ   ರಾಜ ಲಾಂಛನ, ಬಾವುಟಗಳು,  ಸೈನಿಕ ಕವಾಯತು, ಕುದುರೆ ಸಾಲು, ಆನೆ ಸಾಲು, ವಿವಿಧ ಬಗೆಯ ರಥಗಳು, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಪಲ್ಲಕ್ಕಿ,  ಮುಂತಾದವುಗಳೊಂದಿಗೆ   ಮಿತ್ರ ರಾಜರು, ಸಾಮಂತ  ರಾಜರು,  ನಾಯಕರು, ಪಾಳೆಯ ಗಾರರು , ಮಂತ್ರಿಗಳು,  ರ ಸಮೇತವಾಗಿ   ರಾಜ ಗಾಂಭೀರ್ಯದ  ದೊಡ್ಡ ಆನೆಯ   ಅಂಬಾರಿಯಲ್ಲಿ  ಕುಳಿತು ಶ್ರೀ ಕಂಠೀರವ ನರಸರಾಜ ಒಡೆಯರ್ ರವರು    ಪ್ರಜೆಗಳೆಲ್ಲರ ಗೌರವ ಸ್ವೀಕರಿಸುತ್ತಾ    ಶಮಿ ಪೂಜೆಗೆ  ಜಂಬೂ ಸವಾರಿ ಹೋಗುತ್ತಿದ್ದರು. ಶಮಿ ಮಂಟಪದಲ್ಲಿ  ಇಷ್ಟ ದೇವತೆಗಳಾದ ರಂಗನಾಥ ಸ್ವಾಮಿ, ನರಸಿಂಹ ಸ್ವಾಮಿ  ಗಳಿಗೆ ಗೌರವ ಸಮರ್ಪಿಸಿ  ಶಮಿ ಪೂಜೆ  ಅಂದರೆ ಬನ್ನಿ ಮರದ ಪೂಜಾ ಕಾರ್ಯ  ನೆರವೇರಿಸಿ     ರಂಗನಾಥ ಸ್ವಾಮಿ, ನರಸಿಂಹ ಸ್ವಾಮಿ, ಉತ್ಸವ ಮೂರ್ತಿಗಳು ಹಾಗು ಬನ್ನಿ ಮರಕ್ಕೆ   ಕರ್ಪೂರ ಮಂಗಳಾರತಿಗಳನ್ನು  ಮಾಡಲಾಗುತ್ತಿತ್ತು. . ನಂತರ ಸೈನಿಕ  ತುಕುಡಿಗಳ  ವಿಸರ್ಜನೆಗೆ   ದಳವಾಯಿಗೆ   ಆದೇಶ ಮಾಡಲಾಗುತ್ತಿತ್ತು.  ಅಲ್ಲಿಗೆ    ಹತ್ತುದಿನಗಳ ಕಾಲ ನಡೆದ ವೈಭವದ  ಮಹಾನವಮಿ    ಉತ್ಸವಕ್ಕೆ  ಅಧಿಕೃತವಾಗಿ   ತೆರೆ ಬೀಳುತ್ತಿತ್ತು.    ಬನ್ನಿ ಮರದ ಪೂಜೆಯ ನಂತರ   ತಡ ರಾತ್ರಿ   ಮಹಾರಾಜರು    ಅರಮನೆಗೆ   ವಾಪಸ್ಸು ಬಂದು  ವಿಶ್ರಾಂತಿ ಪಡೆಯುತ್ತಾ ಇದ್ದರು.  ನಂತರ ಮಾರನೆಯ ದಿನ ರಾಜಾಜ್ಞೆಯಂತೆ    ವಿವಿಧ  ರಾಜರುಗಳ  ಸಂಸ್ಥಾನದಿಂದ ಆಗಮಿಸಿ ಮಹಾನವಮಿಯಲ್ಲಿ ಭಾಗವಹಿಸಿದ  ಕಲಾವಿದರು, ಜಟ್ಟಿಗಳು, ಕವಿಗಳು, ಕೋವಿದರು, ಸೈನಿಕರು, ನಾಯಕರು, ವಿದ್ವಾಂಸರುಗಳು  ಇನ್ನೂ ಹಲವಾರು ಬಗೆಯ  ಗಣ್ಯರನ್ನು  ಮೈಸೂರು  ಸಾಮ್ರಾಜ್ಯದ   ಸಂಪ್ರದಾಯದಂತೆ   ಅರಮನೆಯ  ವತಿಯಿಂದ  ಗೌರವಿಸಿ   ಬೀಳ್ಕೊಡಲಾಗುತ್ತಿತ್ತು.    ಸಂತೃಪ್ತಿ ಹೊಂದಿದ   ಎಲ್ಲರೂ ಶ್ರೀ ಕಂಠೀರವ ನರಸರಾಜ ಒಡೆಯರ್  ರವರ  ಗುಣಗಾನ ಮಾಡುತ್ತಾ  ಮಹಾನವಮಿ ಹಬ್ಬವನ್ನು ಕೊಂಡಾಡುತ್ತಾ  ರಾಜಧಾನಿ  ಶ್ರೀ ರಂಗಪಟ್ಟಣ ದಿಂದ  ನಿರ್ಗಮಿಸುತ್ತಿದ್ದರು.  ಅಲ್ಲಿಗೆ  ಮೈಸೂರು ಸಾಮ್ರಾಜ್ಯದ  ಮಹಾನವಮಿ  ಆಚರಣೆ  ಮುಕ್ತಾಯಗೊಳ್ಳುತ್ತಿತ್ತು.  ಆ ನಂತರ   ನಡೆದ  ಮಹಾನವಮಿ  ಹಬ್ಬದ ಆಚರಣೆಯಲ್ಲಿ ಕಾಲಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆ ಕಂಡಿದೆ. 





ಮೈಸೂರು ಸಾಮ್ರಾಜ್ಯದ  ರಾಜಧಾನಿ ಶ್ರೀ ರಂಗ ಪಟ್ಟಣದ  ದಸರಾ ಆಚರಣೆಯ  ಒಂದು ನೋಟ ತಮ್ಮ ಮುಂದೆ  ನನಗೆ ಲಭ್ಯವಾದ  ಮಾಹಿತಿಗಳ ಆಧಾರದಲ್ಲಿ  ಮಂಡಿಸಿದ್ದೇನೆ. ಇತಿಹಾಸದ ಈ ಪಯಣದಲ್ಲಿ ಜೊತೆ ಗೂಡಿದ ತಮಗೆಲ್ಲಾ  ವಂದಿಸಿ ನನ್ನ ಈ  ಮಾಹಿತಿ ಮುಗಿಸುತ್ತೇನೆ ವಂದನೆಗಳು.  .  ನಿಮ್ಮ ಅನಿಸಿಕೆಗಳನ್ನು  ನನಗೆ ತಿಳಿಸಿ ಪ್ರೋತ್ಸಾಹಿಸಿ.