Sunday, May 15, 2011

"ಅಪ್ಪೆ ಹುಳಿ" ಮಜಾ ನೆ ಮಜಾ !!! ನಿಮ್ಮನೆಗೆ ಬಂದ್ರೆ "ಅಪ್ಪೆಹುಳಿ " ಕೊಡ್ತೀರ ???


ಹೌದು ಕಳೆದ ರಾತ್ರಿ ಒಳ್ಳೆ ನಿದ್ದೆ ತೆಗೆದು ಇವತ್ತು ಬೆಳಿಗ್ಗೆ ಎದ್ದವನಿಗೆ ಯಾಕೋ?? ಗೊತ್ತಿಲ್ಲ, "ಅಪ್ಪೆ ಹುಳಿ"  ಜ್ಞಾಪಕಕ್ಕೆ ಬರೋದೆ !!!!ಉತ್ತರ ಕನ್ನಡದ ಗೆಳೆಯರಿಗೆ ಬಿಟ್ರೆ ಬೇರೆ ಭಾಗದ ಗೆಳೆಯರಿಗೆ ಇದರ ಪರಿಚಯ ಹೆಚ್ಚಾಗಿ ಇರುವುದಿಲ್ಲ.ಬನ್ನಿ "ಅಪ್ಪೆ ಹುಳಿ " ನನಗೆ ಪರಿಚಯವಾದ ಕಥೆ ಹೇಳ್ತೀನಿ.
ಅಪ್ಪೆ ಹುಳಿ [ ಚಿತ್ರ ಕೃಪೆ  ಮನೆ ಅಡಿಗೆ ಬ್ಲಾಗ್ ]
                               ನಾನು ಆಗ ಶ್ರೀ ರಂಗ ಪಟ್ಟಣದಲ್ಲಿ  ಕರ್ತವ್ಯದಲ್ಲಿದ್ದೆ. ಆಗಷ್ಟೇ ಪರಿಚಯವಾಗಿದ್ದ "ಸುಬ್ಬರಾಯ ಭಟ್" ಮದುವೆ ಆಮಂತ್ರಣ ನೀಡಿ "ಸಾರ್ ನನ್ನ ಮದುವೆಗೆ ಬರಬೇಕು ಅಂದ್ರೂ !!!"    ಅವರು ಕರೆಯುವ ರೀತಿಯಲ್ಲಿ ಪ್ರೀತಿ ಯಿದ್ದರೂ,  ಈ ಬಯಲು ಸೀಮೆ ಜನ  ಅಲ್ಲಿಗೆ ಬಂದಾರೆ??? ಎನ್ನುವ  ಭಾವನೆ ಇದ್ದುದು  ಸುಳ್ಳಲ್ಲಾ . ಸರಿ ನಾನು ನನ್ನ ಗೆಳೆಯರೆಲ್ಲಾ  ಈ ಮದುವೆಗೆ ಹೋಗಿ ಬರೋಣ ಅಂತಾ ತೀರ್ಮಾನಿಸಿ ಹೊರಟೆ ಬಿಟ್ಟೆವು.ಪಯಣ ಸಾಗಿತು, ಶ್ರೀ ರಂಗ ಪಟ್ಟಣ ದಿಂದ ಕಾರಿನಲ್ಲಿ  ಸಂಜೆ ಆರಕ್ಕೆ ಬಿಟ್ಟು  ಕೆ.ಆರ್.ಪೇಟೆ.  ಚನ್ನರಾಯಪಟ್ಟಣ ,ಅರಸೀಕೆರೆ ,ಕಡೂರು, ತರಿಕೆರೆ,ಭದ್ರಾವತಿ, ಶಿವಮೊಗ್ಗ  , ಸಾಗರ, ಸಿದ್ದಾಪುರ , ದಾಟಿ ಶಿರಸಿ ಸೇರಿದಾಗ ಬೆಳಿಗ್ಗೆ ಎಂಟು ಘಂಟೆ ಯಾಗಿತ್ತು.ಮುಂಚೆಯೇ ವಿಚಾರ ಗೊತ್ತಿದ್ದ  ಗೆಳೆಯ ರಾಜ ಕೆ. ಭಟ್   ಹಾಗು ಅವರ ಸ್ನೇಹಿತರು ಆತ್ಮೀಯವಾಗಿ ಬರಮಾಡಿಕೊಂಡು  ಅಲ್ಲಿಯೇ ಇದ್ದ ಐ.ಬಿ ಗೆ ಕರೆದು ಕೊಂಡು ಹೋಗಿ  ನಾವು ವಿಶ್ರಾಂತಿ ಪಡೆಯಲು ತಿಳಿಸಿ ಮುಂದಿನ ಸಿದ್ದತೆ ನಡೆಸಿದ್ದರು.  ಬೆಳಗಿನ ಕಾರ್ಯಪೂರ್ಣಗೊಳಿಸಿ ಸಿದ್ದವಾದೆವು, ನಾನು ಕೇಳಿದೆ " ರಾಜಾ ಕೆ ಭಟ್  ಅವರೇ ಮದುವೆ ನಡೆಯುವ ಊರಿನ ಹೆಸರು ಏನು?? "  ಅದಕ್ಕೆ ರಾಜಾ ಕೆ. ಭಟ್ :-ಸರ್ ಅದಾ  "ಉಪ್ಪರಿಗಿ"  ಮನೆ ಅಂತಾ   ಸಿರ್ಸಿ ಯಿಂದಾ ಎಲ್ಲಾಪುರ ಕಡೆ ಹೋಗುವ ದಾರಿಯಲ್ಲಿದೆ." ಅಂದ್ರೂ  ನನ್ನ ಮನದಲ್ಲಿ ಈ ಊರು ತಲುಪಲು ಬಹುಷಃ ಬೆಟ್ಟ ಹತ್ತ ಬೇಕೆಂದು ಅಂದು ಕೊಂಡೆ . ಪಯಣ ಸಾಗಿತು. ಸಿರ್ಸಿ ಯಿಂದ ಎಲ್ಲಾಪುರ ರಸ್ತೆಯಲ್ಲಿ ಸಾಗಿದೆವು. ದಾರಿಯಲ್ಲಿ ಒಂದು ಕಡೆ ಕಾರನ್ನು ನಿಲ್ಲಿಸಲು ಹೇಳಿದ ರಾಜಾ.ಕೆ.ಭಟ್  ಬನ್ನಿ  ಊರು  ಹತ್ತಿರ ಬಂದಿದೆ ಇಲ್ಲಿಂದ ನಡೀಬೇಕೂ ಅಂದ್ರೂ. ಸರಿ ಕಾರನ್ನು ಅಲ್ಲೇ ಪರಿಚಯದವರ ಮನೆಯ ಬಳಿ ಬಿಟ್ಟು. ನಡೆದೆವು.  ಇಲ್ಲಿಂದ  ಚಾರಣ ಶುರುವಾಯ್ತು  ಸುಮಾರು ನಾಲ್ಕು ಕಿ.ಮೀ  ಆಳಕ್ಕೆ ಇಳಿದೆವು     ಅಲ್ಲಿ ಒಂದು ಕಡೆ ತೋಟದ ನಡುವೆ ಒಂಟಿ ಮನೆಯಲ್ಲಿ  ಮದುವೆ ಸಡಗರ ನಡೆದಿತ್ತು. ನಾನು "ಅಲ್ಲ್ರಯ್ಯ  ಈ ಊರಿಗೆ ಉಪ್ಪರಿಗೆ ಮನೆ ಅಂತೀರಾ ಆದ್ರೆ ನಾವೀಗ ಬಂದದ್ದು ಪಾತಾಳಕ್ಕೆ ಆಲ್ವಾ ??  ಇದಕ್ಕೆ ಸರಿಯಾದ ಹೆಸರು "ಪಾತಾಳ ಮನೆ"  ಅಂದೇ ಅದಕ್ಕೆ ಅಲ್ಲಿದ ಸ್ನೇಹಿತರು ನಗುತ್ತಾ   ನೀನೆಳೋದೂ ಸರಿನೆ, ಅಂತಾ  ಹೇಳಿದ್ರೂ, ಮದುವೆ ಮನೆಗೆ ಪ್ರವೇಶ ಮಾಡಿದೆವು.  ಬಹು ದೂರದಿಂದ ಬಂದ ನಮಗೆ ಪ್ರೀತಿಯ ಸಿಂಚನದ ಸ್ವಾಗತ ಅಲ್ಲಿನವರಿಂದ , ಯಾರಿಗೂ ನಾವು ಹೊರಗಿನವರೆಂಬ ಭಾವನೆ ಇಲ್ಲ!! ಇಡೀ ವಾತಾವರಣ  ಆನಂದವಾಗಿತ್ತು. ಮದುವೆ ಮುಗಿಸಿ ಗೆಳೆಯರ  ಮನೆಗೆ ನಡೆದೆವು.ಬರುವಾಗ ಸುಲಭವಾಗಿ ಗುಡ್ಡ ಇಳಿದು ಬಂದಿದ್ದ ನಾವು ಮದುವೆ ಊಟ ತುಂಬಿದ್ದ  ಗುಡಾಣಗಳಾಗಿದ್ದ  ಹೊಟ್ಟೆಗಳನ್ನು ಹೊತ್ತುಕೊಂಡು  ಗುಡ್ಡ ಏರಿದೆವು  ಉಸಿರು ಬಾಯಿಗೆ ಬಂದಿತ್ತು !!!ಸ್ವಲ್ಪ ವಿಶ್ರಾಂತಿ ಪಡೆದು  ಮತ್ತೆ ಗುಡ್ಡ  ಬೆಟ್ಟಗಳನ್ನು ಹತ್ತಿ ಇಳಿದು  ಹಲವರ ಮನೆಗಳಿಗೆ ಭೇಟಿ ಕೊಟ್ಟೆವು ಎಲ್ಲರ ಮನೆಯಲ್ಲಿಯೂ ಹಲಸಿನ ಸಿಹಿ ,ಖಾರ ತಿನಿಸುಗಳ ಸಮಾರಾಧನೆ . ಸಂಜೆಯ ಹೊತ್ತಿಗೆ  ರಾಜಾ ಕೆ.ಭಟ್ ಮನೆಗೆ ಬಂದರೆ  ಮೈ ಕೈ ಎಲ್ಲಾ ನೋವು  ಸುಸ್ತು ರಾತ್ರಿ ಊಟ ಮಾಡಲು ಮನಸ್ಸಿಲ್ಲದಿದ್ರೂ  ಹೊಟ್ಟೆ ಹಸಿವು ಕಾಡುತ್ತಿತ್ತು.  ರೀ ರಾಜು ಯಾಕೋ ಮೈಕೈ ಎಲ್ಲಾ ನೋವು ನಿದ್ದೆ ಬರೋಲ್ಲ ಅಂತಾ ಕಾಣ್ತಿದೆ ಕಣ್ರೀ" ಅಂದೇ, ಆಗ ರಾಜು "ಸಾರ್ ನೀವೇನು ಯೋಚಿಸಬೇಡಿ ಒಳ್ಳೆ ನಿದ್ದೆ ಬರುತ್ತೆ ಮೈಕೈ ನೋವು ಹೋಗುತ್ತೆ ಅದಕ್ಕೆ ಮದ್ದು ಕೊಡ್ತೀನಿ ಈಗ  ಊಟ ಮಾಡಿ "ಅಂತಾ ಹೇಳಿ ಒಂದು ಲೋಟದಲ್ಲಿ  ತಿಳೀ ಸಾರಿನಂತಾ  ದ್ರವ ತಗೊಂಡು ಬಂದು  "ಸರ್ ಇದನ್ನು ಕುಡೀರಿ" ಅಂದ್ರೂ." ಏನ್ರೀ ಇದು ಅಂದೇ ಇದು "ಅಪ್ಪೆ ಹುಳಿ" ಅಂತಾ ಒಳ್ಳೆ ನಿದ್ದೆ ಬರುತ್ತೆ ಕುಡೀರಿ" ಅಂತಾ  ಏನೇನೋ ಹೇಳಿದ್ರು .ಸ್ವಲ್ಪ ಕುಡಿದೆ ರುಚಿಯಾಗಿತ್ತು  ಪೂರ್ತಿ ಕುಡಿದೆ  ಮಜವಾಗಿತ್ತು , ಕಟ್ ಮಾಡಿದ್ರೆ ನಾನು ನಿದ್ರಾ ದೇವಿಯ ಲೋಕದೊಳಗೆ ಲೀನವಾಗಿದ್ದೆ ' "ಸಾರ್ ಎದ್ದೇಳಿ  ಮಾಗೋಡು ಫಾಲ್ಸಿಗೆ  ಹೋಗೋಣ!!" ಅಂತಾ ಯಾರೋ ಕೂಗಿದ ಹಾಗೆ ಕೇಳಿಸಿತು ಎಚ್ಚರವಾಗಿ ನೋಡಿದ್ರೆ "ಏನ್ ಸಾರ್  ನಿನ್ನೆ  ರಾತ್ರಿ  ಎಂಟು ಘಂಟೆಗೆ ಮಲಗಿ ಇವತ್ತು   ಹನ್ನೊಂದು ಘಂಟೆಗೆ ಎದ್ದಿದ್ದೀರಾ!!!" ಅಂದ್ರು. ಆ ಅಂತಾ  ವಾಚ್   ನೋಡಿದ್ರೆ  ಹನ್ನೊಂದು ಅಂತಾ ಸಮಯ ತೋರಿಸಿ ವಾಚು "ಲೋ ಸೋಮಾರಿ" ಅಂತಾ  ನಕ್ಕಂತೆ ಅನ್ನಿಸಿತು.   ಹಿಂದಿನ ದಿನದ ಆಯಾಸ ಎಲ್ಲಾ ಪರಿಹಾರವಾಗಿ  ಮೈಯೆಲ್ಲಾ ಹಗುರವಾಗಿ  ಹೊಸ ಉಲ್ಲಾಸ ತುಂಬಿತ್ತು!!! ಹೊಸ ಚೈತನ್ಯ ದೊಡನೆ  ತಡಬಡಾಯಿಸಿ   ಎದ್ದು  ನೋಡಿದ್ರೆ ನನ್ನ ಗೆಳೆಯರ ಕಥೆಯೂ ಅಷ್ಟೇ ಆಗಿತ್ತು. ಮನೆಯಲ್ಲಿ ಹಬ್ಬದ ದಿನಗಳಲ್ಲಿ "ಗಸಗಸೆ  ಪಾಯಸ" ಕುಡಿದು  ನಿದ್ದೆ ತೆಗೆಯುತ್ತಿದ್ದವನಿಗೆ  ಈ "ಅಪ್ಪೆ ಹುಳಿ"   ನಾನು  "ಗಸಗಸೆ  ಪಾಯಸದ ಅಪ್ಪಾ" ಅಂತಾ ಪ್ರೂವ್ ಮಾಡಿತ್ತು. ಈ ರೀತಿ ಪರಿಚಯವಾದ "ಅಪ್ಪೆಹುಳಿ"   ಇವತ್ತಿಗೂ ನನ್ನ ಮೆಚ್ಚಿನ ಪಾನೀಯ ವಾಗಿದೆ. ಆನಂತರ ರೀ ರಾಜು ಈ ಅಪ್ಪೆ ಹುಳಿ ಮಾಡೋದು ಹೇಗ್ರೀ ಅಂದೇ ಅಂದು ಅವರು ಹೇಳಿದ್ದು ನನಗೂ ಸರಿಯಾಗಿ ಅರ್ಥ ಆಗಿರಲಿಲ್ಲ.
ಹಾಗೆ ಇವತ್ತು "ಇಟ್ಟಿಗೆ ಸಿಮೆಂಟ್ "  ಬ್ಲಾಗ್ ನ  ಪ್ರಕಾಶ್ ಹೆಗ್ಡೆ ಕೆಣಕಿದರೆ  ಅದರ ಇತಿಹಾಸವನ್ನೇ ಹೇಳಿದ್ರೂ ಬನ್ನಿ ಅದನ್ನು ಹೇಳ್ತೀನಿ. ಉತ್ತರ ಕನ್ನಡ ದ ಹವ್ಯಕರ  ಅತೀ ಪ್ರಿಯ ವಾದ  ಒಂದು ವಿಶೇಷ ಇದು,  ಅಪ್ಪೆ ಹುಳಿ ಕುಡಿಯದೆ ಬೆಳೆದ ಒಬ್ಬನೇ ಒಬ್ಬ ಹವ್ಯಕರನ್ನು ನೀವು ಕಾಣಲಾರಿರಿ. ಅಪ್ಪೆ ಹುಳಿಯಲ್ಲಿ  ಎರಡು ತರವಿದ್ದು ೧] ತೆಳ್ಳನ ಅಪ್ಪೆ ೨] ಮಂದನ ಅಪ್ಪೆ  ಎರಡೂ ಸಹ ಒಳ್ಳೆಯ ರುಚಿ ಹೊಂದಿದ  ಪೇಯಗಳೇ!!! ಅಪ್ಪೆ ಮಾವಿನಲ್ಲೂ ಎರಡು ಬಗೆ ಇದ್ದು ೧] ರಣ ಅಪ್ಪೆ ಕಾಯಿ ೨] ಕಂಚು ಅಪ್ಪೆ ಕಾಯಿ ಎಂದು ಕರೆಯುತ್ತಾರೆ. ಇವೆರಡೂ ಸಹ "ಅಪ್ಪೆ ಹುಳಿ"  ಮಾಡಲು ಹೇಳಿ ಮಾಡಿದ ಮಾವಿನ ಕಾಯಿ ತಳಿಗಳು .ಇನ್ನೊಂದು ವಿಶೇಷ ಗೊತ್ತ ?? ಪ್ರತೀ ಹಳ್ಳಿಯಲ್ಲೂ " ನಾರಾಯಣ ಭಟ್ಟನ ಅಪ್ಪೆ ಮಾವಿನ ಮರ"  ಇರೋದು , ಇದರ ಹಿಂದೆ ಒಂದು ಕಥೆ ಇದ್ಯಂತೆ !!,  ಹಿಂದೆ ನಾರಾಯಣ ಭಟ್ಟ ಎಂಬ ಒಬ್ಬರು ಅಪ್ಪೆ ಮಾವಿನ ಮರದಿಂದ ಕಾಯಿ ಕೀಳಲು ಹೋಗಿ  ಮರದಿಂದ ಬಿದ್ದು  ಮರಣ  ಹೊಂದಿದ್ದರ  ನೆನಪಿಗಾಗಿ ಪ್ರತೀ  ಊರಲ್ಲೂ   ನಾರಾಯ ಭಟ್ಟರ ಗೌರವಾರ್ಥ  ಒಂದು ಮರ ಬಿಟ್ಟು ಅದಕ್ಕೆ ನಾರಾಯಣ ಭಟ್ಟರ ಮರ ಅಂತಾ ಕರೆಯುತ್ತಾರೆಂದು ತಿಳಿದು ಬಂತು. ಸ್ವಾಮೀ ಅಪ್ಪೆ ಹುಳಿಯ ಮಹಾತ್ಮೆ ಹೆಂಗಿದೆ ಅಂದ್ರೆ  ಆರ್ಕುಟ್ ನಲ್ಲಿ  "ಅಪ್ಪೆ ಹುಳಿ ಫ್ಯಾನ್ ಕ್ಲಬ್" ಇದೆ ಕಣ್ರೀ ಇದೆ ತೋರ್ಸುತ್ತೆ ಅಪ್ಪೆ ಹುಳಿ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪಾನಿಯಾ ಅಂತಾ .ಬಾಯಲ್ಲಿ ನೀರು ಬಂತಾ???   [ ಚಿತ್ರ ಕೃಪೆ ಅಂತರ್ಜಾಲ  ]                                                                                                                                                             ಬನ್ನಿ  ಅದನ್ನು ಮಾಡೋ ವಿಧಾನ ತಿಳಿಯಲು ಇಲ್ಲಿದೆ ಲಿಂಕು http://maneadige.blogspot.com/2008/09/maavinakai-appe-huli-raw-mango-gravy.html ,                               http://cuisineindia.wordpress.com/2010/04/15/appe-huli-saru-raw-mango-soup/        http://cuisineindia.wordpress.com/2010/04/15/appe-huli-saru-raw-mango-soup/             ಅಂದಾಗೆ ಇವತ್ತು   ಪ್ರಕಾಶ್ ಹೆಗ್ಡೆ ಮನೇಲಿ ಏನೂ ಗೊತ್ತಾ ವಿಶೇಷ ????  ಅದೇ ರೀ " ಅಪ್ಪೆ ಹುಳಿ "  ಸಾರ್ ಬರ್ಲಾ ಅಂದೇ ಬೇಡಾ ಸಾರ್  ಮತ್ತೊಮ್ಮೆ ನೋಡುವಾ ಅಂದ್ರೂ. ಬೇಜಾರಾಯ್ತು. ಅದಕ್ಕೆ ನಿಮ್ಮ ಮನೆಗೆ ಬರೋಣ ಅಂತಾ  ನಿಮ್ಮ ಮನೆಗೆ ಬಂದ್ರೆ ಪ್ಲೀಸ್ "ಅಪ್ಪೆ ಹುಳಿ" ಕೊಡ್ತೀರಾ???  

18 comments:

Dr.D.T.Krishna Murthy. said...

ಬಾಲೂ ಸರ್;ಇಲ್ಲಿ ಎಲ್ಲಾ ಹವ್ಯಕರ ವಿಶೇಷ ಸಮಾರಂಭಗಳಲ್ಲಿ ಅಪ್ಪೆ ಹುಳಿ ಇದ್ದೆ ಇರುತ್ತೆ.ಒಳ್ಳೆಯ ಲೇಖನ ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು.

Ittigecement said...

ಬಾಲೂ ಸರ್...

ಇವತ್ತು ಭಾನುವಾರ..
ಗೆಳೆಯರು ಅಮ್ಮನನ್ನು ಮಾತನಾಡಿಸಲು ಬಂದಿದ್ದರು..
ಎಲ್ಲಿಗೋ ಹೊರಗಡೆ ಊಟಕ್ಕೆ ಹೋಗಬೇಕಿದ್ದವನು..ಕಾರ್ಯಕ್ರಮವೆಲ್ಲ ಬದಲಾಯಿತು..
ಮನೆಯಲ್ಲೇ ಉಳಿದೆ..
ನನ್ನಾಕೆಗೆ
"ಇವತ್ತು ಚೆನ್ನಾಗಿ ನಿದ್ದೆ ಮಾಡಬೇಕು..
ಅಪ್ಪೆಹುಳಿ ಮಾಡು" ಅಂತ ಕಂಪ್ಯೂಟರ್ ಮುಂದೆ ಬಂದು ಕುಳಿತರೆ...
ಇಲ್ಲಿಯೂ ಅಪ್ಪೆಹುಳಿ...!!

ಅಪ್ಪೆಹುಳಿಯ ಸೊಗಸನ್ನು ಸವಿದವನೇ.. ಬಲ್ಲ...

ನಿಮ್ಮ ಸೊಗಸಾದ ಅನುಭವ ಖುಷಿಕೊಟ್ಟಿತು..

ನಮ್ಮನೆಗೆ ಬನ್ನಿ ಅಪ್ಪೆಹುಳಿ ಊಟಮಾಡೋಣ..
ಜೈ ಹೋ !

ಮನಸು said...

ಒಳ್ಳೆ ನಿದ್ರೆ ಬರೋ ಔಷಧಿ ಕೊಟ್ಟರಲ್ಲ ಮೈಕೈ ನೋವು ಹೋಗಿರಬೇಕು ಹಹಹಹ... ಶಿರಸಿ ಕಡೆ ಮನೆಗಳು ಹಾಗೆ ಇರುತ್ತವೆ.. ತುಂಬಾ ಪ್ರೀತಿಯಿಂದ ಬಂದ ಅತಿಥಿಗಳಿ ಸತ್ಕಾರ ನೀಡುತ್ತಾರೆ ನಮಗೂ ತುಂಬಾ ಅನುಭವವಿದೆ... ಅಲ್ಲಿ ಹಲಸಿನ ಅಪ್ಪಳ, ಸೊಂಡಿಗೆ, ಚಿಪ್ಸ್ ಇಂತಹ ತಿಂಡಿಗಳು ಬಹಳ ಫೇಮಸ್.. ಅಲ್ಲವೇ ಸರ್

ದಿನಕರ ಮೊಗೇರ said...

naaninnU kuDidilla... kuDiyabEkinuttide..

ಸವಿಗನಸು said...

baayalli niru bartaa ide...

ಮಂಜುಳಾದೇವಿ said...

ಬಾಲುರವರೆ,
ನಿಮ್ಮ ಲೇಖನವೂ ಅಪ್ಪೆಹುಳಿಯಷ್ಟೇ ಚೆನ್ನಾಗಿದೆ

Harsha Hegde said...

sir lekhana chennag bandide........

Ambika said...

Appehuli lekhana tumba chennagide..

shivu.k said...

ಸರ್,
ನಮ್ಮನೆಗೆ ಬಂದರೆ ನಿಮಗೆ ಅಪ್ಪೆಹುಳಿ ಖಂಡಿತ ಸಿಗುತ್ತೆ. ನಮ್ಮ ಮನೆಗೆ ಸಿರಸಿ ಗೆಳೆಯರ ಸಹವಾಸದಿಂದಾಗಿ ಅದನ್ನು ಮಾಡುವ ವಿಧಾನವನ್ನು ನಾವು ಚೆನ್ನಾಗಿ ಕಲಿತಿದ್ದೇವೆ. ಇದರೊಂದಿಗೆ ನಿಮಗೆ ಸೀಜನಲ್ ತಂಬುಳಿಯನ್ನು ಕೊಡುತ್ತೇವೆ.[ಸದ್ಯ ಮಾವಿನಕಾಯಿ ತಂಬುಳಿ].
ಅಪ್ಪೆ ಹುಳಿಯ ಸವಿಯನ್ನು ಬಲ್ಲವನೇ ಬಲ್ಲ. ಅದರ ನಿದ್ರೆಯನ್ನು ತಡೆಯುವವರಾರು?

ಸುಬ್ರಮಣ್ಯ said...

ಇತ್ತೀಚೆಗೆ ನಮ್ಮಕಡೆ ಮಲೆನಾಡಿನಲ್ಲೂ ಅಪ್ಪೆಸಾರು ಅಲ್ಲಲ್ಲಿ ಮಾಡುತ್ತಾರೆ.

shridhar said...

ಬಾಲು ಸಾರ್ ,
ನಿನ್ನೆ ಅಷ್ಟೆ ಊರಿಂದ ಬಂದಿದ್ದೇನೆ , ಅಪ್ಪೆ ಮಾವಿನಕಾಯಿಯನ್ನು ತಂದಿದ್ದೇನೆ .. ಬನ್ನಿ ನಮ್ಮನೆಗೆ .. ಸೂಪರ್ ಅಪ್ಪೆಹುಳಿ ಮಾಡಿಸ್ತೇನೆ. :)

ಒಳ್ಳೆಯ ಲೇಖನ .. ಮಾವಿನ season ಅಲ್ಲಿ ..ಅಪ್ಪೆ ಹುಳಿ ಇಲ್ಲದಿದ್ದರೆ ನಮಗೆ ಊಟ ಮಾಡಿದಂತೆ ಆಗುವುದೇ ಇಲ್ಲ .

ಮಾವಿನಕಾಯಿ ಅಪ್ಪೆಹುಳಿಯಂತೆ .. ಕಂಚಿಕಾಯಿ [ಲಿಂಬೆಯಂತೆ ದೊಡ್ಡದಾಗಿರುತ್ತದೆ] ಅಪ್ಪೆಹುಳಿಯೂ ಸಹ ಕುಡಿಯಲು ಸೂಪರ್
ಆಗಿರಿತ್ತದೆ ...

ಸೀತಾರಾಮ. ಕೆ. / SITARAM.K said...

appe huli nenasidiri. ii sarti duraviruvadarinda appe midi tinno bhaagyavilla.
shirisi kade aatitya adbhutavaadaddu. naanu Bigod -nalli kaadinalli geology survey maaduvaaga havyakara mane hokku aathitya nitya sweekarisuttiddevu. aparichita hosabaraada namage utavannu haakuttiddaru tindi, trushe wahh adbhut!
iga hegideyo gottilla...

Sandeep K B said...

ಸರ್ ನಿಮ್ಮ ಲೇಖನ ಓದಿದರೆ ,
ನೀವು ನಮ್ಮ ಮುಂದೆ ನಿಂತು ಮಾತಾಡೋ ತಾರಾ ಇದೆ .
ಮಾವಿನ ಕಾಯಿ ಅಂದ್ರೆ ಬಾಯಲ್ಲಿ ನೀರು ಬರದೆ ಇರುತ್ತಾ ........
ನೀವು ಯಾರ ಮನೆಗಾದ್ರು ಅಪ್ಪೆಹುಳಿ ಕುಡಿಯೋಕೆ ಹೋದ್ರೆ , ನನ್ನನ್ನು ಕರೆಯಿರಿ ..

balasubramanya said...

ಪ್ರೀತಿಯಿಂದ ಸವಿ ಮಾತು ಬರೆದು ಮೆಚ್ಚಿದ ಎಲ್ಲಾ ಆತ್ಮೀಯ ಬ್ಲಾಗ್ ಮಿತ್ರರಿಗೆ ಥ್ಯಾಂಕ್ಸ್.

samanvaya bhat said...

sooper gi bardiddera sir.... nammanellidaily appehuli madtini... banni uta madona..

Unknown said...

ಬನ್ನಿ ಬಾಲಣ್ಣ ..ಹವ್ಯಕ ಸ್ಪೆಷಲ್ ಅಪ್ಪೆಹುಳಿ ನಾ ನಿಮ್ಗಾಗಿ ಮಾಡಿ ಕೊಡ್ತೀವಿ :)
ಆದ್ರೂ ನೀವಿವತ್ತು ಇದ್ನ ಓದೋ ತರ ಮಾಡಿ ನಮ್ ಹೊಟ್ಟೆ ಉರ್ಸಿದ್ದು ಎಷ್ಟು ಸರಿ :)
ಅಪ್ಪೆ ಹುಳಿ ಬೇಕಿತ್ತು ಈಗ ಅನ್ನಿಸ್ತಿದೆ..
ಸೊಗಸಾಗಿ ನಿರೂಪಿಸಿದ್ದೀರ ..ಹಾಗೇ ಪ್ರಕಾಶಣ್ಣನ ಅಪ್ಪೆಹುಳಿ ಮೂಲದ ಕಥೆಯೂ ಸೂಪರ್

Unknown said...
This comment has been removed by the author.
Badarinath Palavalli said...

ಅಪ್ಪೆ ಹುಳಿ ಹೀಗಾದರೂ ಸಿಕ್ಕಿತಲ್ಲಾ ಸಾರ್.