Saturday, May 28, 2016

ಅಸಹಾಯಕ "ನೀರು ನಾಯಿ " ಗಳು ಕಣ್ಮರೆಯಾಗುತ್ತಿವೆ, ಆದ್ರೆ ನಮಗೆ ಇವು ನಮ್ಮ ನಡುವೆಯೇ ಇದ್ದದ್ದು ಗೊತ್ತೇ ಆಗ್ಲಿಲ್ಲ .....!



  "ನಾನೇ ಕಣ್ರೀ   ನೀರು ನಾಯಿ ಅಂದ್ರೆ " [ ಚಿತ್ರ ಕೃಪೆ   ಅಂತರ್ಜಾಲ  ] 

ಮೊನ್ನೆ ಅಂತರ್ಜಾಲದಲ್ಲಿ   ಬ್ಲಾಗ್   ವೀಕ್ಷಣೆ   ಮಾಡುತ್ತಿದ್ದಾಗ   ಶಿರಸಿಯ   ವಿನಯ್ ಹೆಗ್ಡೆ  ಅವರ ಬ್ಲಾಗ್    "    ಅಘನಾಶಿನಿ "   ಯಲ್ಲಿ    ಶಿರಸಿಯ ಸಮೀಪ  ಹುಟ್ಟಿ ಹರಿಯುವ    "ಅಘನಾಶಿನಿ"    ನದಿಯು   ಶತಮಾನದಲ್ಲಿ    ಇದೆ ಮೊದಲ ಬಾರಿಗೆ    ಬತ್ತುತ್ತಾ   ಇದ್ದು ಆ ನದಿಯಲ್ಲಿ ವಾಸುಸುತ್ತಿದ್ದ   ನೀರುನಾಯಿಗಳು   ಅಪಾಯದ ಅಂಚಿನಲ್ಲಿರುವ ವಿಚಾರದ    ಬಗ್ಗೆ    ಮನಕರಗುವಂತೆ   ಬರೆಯಲಾಗಿತ್ತು.  ಸರಿ ಅಘನಾಶಿನಿ  ಬ್ಲಾಗಿನ  ಲೇಖನವನ್ನು   ನನ್ನ ಫೇಸ್ಬುಕ್  ಪುಟದಲ್ಲಿ  ಹಂಚಿಕೊಂಡೆ  , ಬಹಳಷ್ಟು ಜನ  ಅದನ್ನು ನೋಡಿ  ವಿಚಾರ ತಿಳಿದರು,  ಇನ್ನು ಕೆಲವರು   ನೀರು ನಾಯಿ ಅಂದ್ರೆ ಏನು ...?    ಅದನ್ನು ನಮ್ಮ ಮನೆಗಳಲ್ಲಿ ಸಾಕುವ  ನಾಯಿಗಳ   ಹಾಗೆ   ಸಾಕ ಬಹುದಾ ..?    ನೀರು ನಾಯಿ  ಅಂದ್ರೆ ಹೇಗಿರುತ್ತೆ ...?  ಅದು ಕಳ್ಳರನ್ನು ಹಿಡಿಯುತ್ತಾ  ...?    ಅದನ್ಯಾಕೆ ನೀರು ನಾಯಿ ಅಂತಾರೆ ..?    ಹೀಗೆ   ಪ್ರಶ್ನೆಗಳನ್ನು  ದೂರವಾಣಿ ಮೂಲಕ  ಕೇಳಿದರು .  ಇನ್ನು ನನ್ನ ಮಗನ ಜೊತೆ ಮಾತನಾಡುತ್ತಾ    ನೀರು ನಾಯಿ  ವಿಚಾರ ಹೇಳಿದೆ  , ಅವನು ಅಪ್ಪಾ   ನೀರು ನಾಯಿ ನಾನಂತೂ ನೋಡಿಲ್ಲ ,   ಈ ಬಗ್ಗೆ     ನಾನು ಓದಿದ    ಶಾಲೆ, ಕಾಲೇಜುಗಳ  ಪುಸ್ತಕದಲ್ಲಿ   ವಿಚಾರ ಇರಲಿಲ್ಲ,  ಯಾವುದೇ ಟಿ. ವಿ.  ಇದರ ಬಗ್ಗೆ  ಮಾಹಿತಿ ನೀಡಿಲ್ಲ  , ಯಾವುದೇ    ನ್ಯೂಸ್  ಪೇಪರ್  ನಲ್ಲಾಗಲಿ   ಮ್ಯಾಗಜಿನ್  ಅಲ್ಲಾಗಲಿ   ಓದಿಲ್ಲ,  ಇದೇನೋ   ಹೊಸ ಕಾರ್ಟೂನ್  ಹೆಸರು ಅನ್ನೋ ಹಾಗೆ ಕಾಣ್ತಿದೆ,  ಅಂದ. ಇನ್ನು ನನ್ನ ಕೆಲವು  ಗೆಳೆಯರನ್ನು   ನೀರು ನಾಯಿ ಬಗ್ಗೆ ಕೇಳಿದೆ   "ಅಯ್ಯೋ ಗುರು   ಅದೇ ನಮ್ಮನೆ  ನಾಯಿಗಳನ್ನು   ನೀರಿಗೆ   ಎತ್ತಿಹಾಕಿ ಅವುಗಳನ್ನೇ    ನೀರುನಾಯಿ ಅನ್ನಬೇಕೂ   ಅಷ್ಟೇ....!"  ಅಂತಾ ಹಾಸ್ಯ ಮಾಡಿದರು,  ಅವರಾದರೂ ಏನು ಮಾಡಿಯಾರು  ನಮ್ಮ   ನಾಡಿನ   ದೊಡ್ಡ ದೊಡ್ಡ ಕೆರೆಗಳಲ್ಲಿ,  ನದಿಗಳಲ್ಲಿ,  ಬದುಕಿ  ಬಾಳುತ್ತಿದ್ದ ಇಂತಹ ಒಂದು ಜೀವಿ  ಹೆಚ್ಚು ಕಡಿಮೆ ಅವಸಾನದ  ಅಂಚಿಗೆ ಬಂದು ನಿಂತಿರಲು   ಯಾರಿಗೆ ತಾನೇ ತಿಳಿಯುತ್ತೆ ಇವುಗಳ ಬಗ್ಗೆ .

ನಾವು ಇರೋದು ಹೀಗೆ ಗೊತ್ತಾ ....?  [ ಚಿತ್ರ ಕೃಪೆ   ಅಂತರ್ಜಾಲ ] 

ನಾನು ಬಾಲ್ಯ ಕಳೆದದ್ದು  ಹಳ್ಳಿಯಲ್ಲಿ  ನನ್ನ ಹಳ್ಳಿ   ನೆಲಮಾಕನ ಹಳ್ಳಿಯಿಂದ     ಮಳವಳ್ಳಿ ಪಟ್ಟಣ ದಲ್ಲಿದ್ದ   ಪ್ರಾಥಮಿಕ  ಹಾಗು  ಪ್ರೌಡ ಶಾಲೆಗೇ   ಸುಮಾರು ಐದು   ಕಿಲೋಮೀಟರು  ಬೈಸಿಕಲ್  ಮೂಲಕ   ತೆರಳುತ್ತಿದ್ದೆ,  ಆ  ಹಾದಿಯಲ್ಲಿ ನನಗೆ ಸಿಗುತ್ತಿದ್ದುದೆ   ಮಳವಳ್ಳಿಯ   ದೊಡ್ಡ ಕೆರೆ    ಆಗ  ಕೆಲವು  ಕೆಲವು ಜೀವಿಗಳು  ಗುಂಪು ಗುಂಪಾಗಿ  ನೀರೊಳಗೆ  ಮುಳುಗುತ್ತಾ    ಏಳುತ್ತಾ   ಚಲಿಸುತ್ತಿರುವುದನ್ನು   ಕಾಣುತ್ತಿದ್ದೆ,   ಆ ಸಮಯದಲ್ಲಿ   ಇವುಗಳ ಬಗ್ಗೆ   ತಿಳಿಯುವಷ್ಟು   ಜ್ಞಾನ ಇರಲಿಲ್ಲ,  ಇನ್ನು  ಬೇಸಿಗೆ ರಜೆಗೆ   ಅಜ್ಜಿಯ ತಂಗಿ ಮನೆ   ಮಳವಳ್ಳಿ ತಾಲೂಕಿನ   "ಮಿಕ್ಕೆರೆ "  ಎಂಬ ಗ್ರಾಮಕ್ಕೆ ಹೋದಾಗ , "ಬಾರೋ ನೀರು ನಾಯಿ   ಆಟಾ ಆಡೋದನ್ನು  ತೋರಿಸ್ತೇನೆ"    ಅಂತಾ    ಸಂಜೆ ವೇಳೆ   ಅಲ್ಲಿನ   ಕೆರೆಯ ದಂಡೆಯ ಮೇಲೆ  ಮನೆಯ ಹಿರಿಯರು  ನನ್ನನ್ನು   ಜೊತೆಯಲ್ಲಿ  ಕರೆದುಕೊಂಡು   ವಾಕಿಂಗ್    ಹೋಗುತ್ತಿದ್ದರು  ,    ಆ ಸಮಯದಲ್ಲಿ    ಗ್ರಾಮದ   ವಿಶಾಲವಾದ  ಕೆರೆಯ   ಕೋಡಿ  ಯ ಸಮೀಪ , ಬಹಳ ಹತ್ತಿರ   ಇವುಗಳ ದರ್ಶನ ಆಗುತ್ತಿತು,   ಗುಂಪುಗುಂಪಾಗಿ   ಕೆರೆಯ ಉದ್ದಗಲಕ್ಕೂ   ನೀರಲ್ಲಿ ಆಟವಾಡುತ್ತಾ ,   ತೇಲುತ್ತಾ   ಮುಳುಗುತ್ತಾ   ಇರುತ್ತಿದ್ದವು .  ನನಗಂತೂ  ಅವು ಪಲ್ಟಿ  ಹೊಡೆಯೋದನ್ನು  ನೋಡೋದೇ ಖುಷಿ ಕೊಡ್ತಾ ಇತ್ತು. ಹೇಗೆ   ಅಂದ್ರೆ  ಉದಾಹರಣೆಗೆ     ಡಾಲ್ಫಿನ್  ಗಳು ಸಮುದ್ರದಲ್ಲಿ ಚಿಮ್ಮಿ  ನೀರಿನೊಳಗೆ   ಪಲ್ಟಿ ಹೊಡೆಯೋ ಹಾಗೆ  ಇರುತ್ತಿತ್ತು.   ಅಂದಿನ ದಿನಗಳಲ್ಲಿ   ಸಾಮಾನ್ಯವಾಗಿ   ಕೆರೆಗಳು  ಯಾವುದೇ  ರೀತಿಯ  ಮಾಲಿನ್ಯಕ್ಕೆ   ಒಳಗಾಗಿರಲಿಲ್ಲ . ಕೆರೆಗಳಲ್ಲಿ   ಜೊಂಡು  ಬೆಳೆದಿರಲಿಲ್ಲ,   ಪರಿಶುದ್ದವಾದ   ನೀರು  ಇಂತಹ  ಜೀವಿಗಳಿಗೆ   ಆಸರೆಯಾಗಿತ್ತು.   ಆದರೆ ಇಂದಿನ  ಪರಿಸ್ಥಿತಿ ಬೇರೆ ಬಿಡೀ.  ಇಂದು  ಅವುಗಳು ವಾಸ ಮಾಡುತ್ತಿದ್ದ  ಕೆರೆಗಳು  ಕಣ್ಮರೆಯಾಗಿವೆ, ಇಲ್ಲದಿದ್ದಲ್ಲಿ  ಕೆರೆಗಳ ತುಂಬಾ ಜೊಂಡು ಹುಲ್ಲು   ಬೆಳೆದು  ನೀರಿನ  ಸೆಲೆ ಕಡಿಮೆಯಾಗಿದೆ,   ಕೆರೆಯಲ್ಲಿ ನೀರಿದ್ದರೂ  ಸಹ   ಮಾಲಿನ್ಯಗೊಂಡು  ಇಂತಹ ಜೀವಿಗಳು  ಬದುಕಲಾಗದಂತಹ   ಪರಿಸ್ಥಿತಿ  ನಿರ್ಮಾಣ ಆಗಿದೆ . ಅಪರೂಪಕ್ಕೆ   ಅಲ್ಲಿ ಇಲ್ಲಿ ಕಂಡುಬಂದರೆ  ಇವುಗಳನ್ನು  ಮಾಂಸಕ್ಕಾಗಿ , ಚರ್ಮಕ್ಕಾಗಿ    ಬೇಟೆಯಾಡಿ    ನಿರ್ನಾಮ  ಮಾಡಲಾಗುತ್ತಿದೆ.     ಇಂದು ನಮ್ಮ ಸುತ್ತ ಮುತ್ತಲಿನ    ಹಳ್ಳಿಗಳ   ಕೆರೆಗಳಲ್ಲಿ  ಇವುಗಳು  ನಿರ್ನಾಮವಾಗಿದ್ದು  ಕಾಣಸಿಗುವುದೇ ಇಲ್ಲಾ,   ನಮ್ಮ ನಾಡಿನ  ಕೆಲವು ನದಿಗಳ   ತಟದಲ್ಲಿ  ಇವುಗಳು    ಬಹಳ  ಅಪರೂಪಕ್ಕೆ ವಿರಳವಾಗಿ   ಕಾಣಸಿಗುತ್ತಿವೆ ,

ನಮ್ಮ ಪಾಡಿಗೆ ನಮ್ಮನ್ನು ಬಿಡ್ರಪ್ಪಾ    [ ಚಿತ್ರ ಕೃಪೆ   ಅಂತರ್ಜಾಲ ] 


    ಇನ್ನು ನೀರು ನಾಯಿಯ ಬಗ್ಗೆ ಸ್ವಲ್ಪ ತಿಳಿಯೋಣ    ಬನ್ನಿ ,  ಈ ನೀರು ನಾಯಿಯ   ವರ್ಣನೆ ಬಹಳ  ವಿಚಿತ್ರ ,  ಇದು  ನಮಗೆ ಕಾಣ ಸಿಗುವ  ಮುಂಗುಸಿ,  ಬೆಕ್ಕು,   ಅಳಿಲು,  ನಾಯಿ   ಇವುಗಳ   ಕೆಲವು ಗುಣಗಳನ್ನು ಅಳವಡಿಸಿಕೊಂಡಿರುವ     ಜೀವಿ .   ನೀರಿನ  ಆಶ್ರಯ ಇದು ಬದುಕಲು ಬೇಕೇ ಬೇಕು  ಹಾಗಾಗಿ ಇವು,   ಕೆರೆ,  ನದಿಗಳ ಆಶ್ರಯದಲ್ಲಿ  ಜೀವನ ಮಾಡುತ್ತವೆ,   ನದಿಗಳ ದಡದಲ್ಲಿ  ಶೀತವಿರುವ ಪ್ರದೇಶದಲ್ಲಿ   ಒಡ್ಡುಗಳ ಹತ್ತಿರ, ಮರಗಳ ಗುಂಪಿನ  ನಡುವೆ    ಪೊಟರೆ ಗಳನ್ನ  ನಿರ್ಮಿಸ್ಕೊಂಡು   ಗುಂಪು ಗುಂಪಾಗಿ  ವಾಸಿಸುತ್ತವೆ.  ಇವುಗಳ  ಮುಖವನ್ನು  ಗಮಸಿಸಿದರೆ   ಬೆಕ್ಕಿನ  ಹೋಲಿಕೆ  ಕಂಡುಬರುತ್ತದೆ,  ಮತ್ತೊಂದು ಕೋನದಿಂದ  ನೋಡಿದರೆ  ಮುಂಗುಸಿಯಂತೆ ಕಾಣುತ್ತದೆ,  ಪುಟ್ಟ ಕಿವಿಗಳು,   ಮುಖದ  ಮುಂಭಾಗಕ್ಕೆ  ಕಾಣುವ ಕಣ್ಣುಗಳು, ಮೂಗು,  ಮುಖದಲ್ಲಿ  ಮೀಸೆಯಂತಹ ಉದ್ದನೆಯ ಕೂದಲುಗಳು ,  ನಾಯಿಯ  ಚರ್ಮದಂತಹ   ಚರ್ಮ,  ಮುಂದಿನ ಎರಡೂ ಕಾಲುಗಳು  ದಪ್ಪವಾಗಿ  ಗಿಡ್ಡವಾಗಿದ್ದು  , ಹಿಂದಿನ ಕಾಲುಗಳು   ಮುಂದಿನ   ಕಾಲುಗಳಿಗಿಂತಾ  ಸಣ್ಣವಾಗಿ  ಉದ್ದವಾಗಿವೆ .  ಇನ್ನು ಇದರ ಬಾಲ ಉದ್ದವಾಗಿದ್ದು  ಬಹಳ ಶಕ್ತಿಯುತವಾಗಿವೆ. ಕೆಲವೊಮ್ಮೆ ಇವುಗಳು ಕಾಂಗರೂ ಗಳಂತೆ  ಎರಡು ಕಾಲಿನಲ್ಲಿ  ನಿಲ್ಲುತ್ತವೆ.   ಇವುಗಳ   ಜೀವಿತ  ಅವಧಿ    ಸುಮಾರು   ಹನ್ನೊಂದರಿಂದಾ  ಹದಿನಾರು ವರ್ಷಾ  ಅಷ್ಟೇ ,  ಈ ನೀರುನಾಯಿಗಳು ಸರಾಸರಿ   ನಾಲ್ಕರಿಂದ   ಐದು ಕಿಲೋ  ಗ್ರಾಂ  ತೂಕ  ತೂಗುತ್ತವೆ,  ಇನ್ನು  ನೀರುನಾಯಿಗಳ  ಸಂತಾನದ ವಿಚಾರಕ್ಕೆ ಬಂದ್ರೆ   ಹೆಣ್ಣು ಗರ್ಭ  ದರಿಸೋದು   ಇಪ್ಪತೆಂಟು  ದಿನಗಳಿಂದ  ಮೂವತ್ತು ದಿನಗಳು,   ಸಾಮಾನ್ಯವಾಗಿ  ಎರಡರಿಂದ ಮೂರು ಮರಿಗಳಿಗೆ   ನೀರುನಾಯಿ ಜನ್ಮ ನೀಡುತ್ತದೆ .  ಇನ್ನು  ಹೊಸದಾಗಿ ಜನಿಸಿದ ಮರಿಗಳು  ಐವತ್ತು  ಗ್ರಾಂ ತೂಕ   ಅಷ್ಟೇ , ಇವುಗಳು    ಮೊದಲ ಎರಡು ಅಥವಾ ಮೂರುವಾರ   ತಾಯಿಯ ಆಸರೆಯಲ್ಲೇ  ಆರೈಕೆ   ಮಾಡಿಸಿಕೊಳ್ಳುತ್ತವೆ,  ಬಾಯಲ್ಲಿ ಹಲ್ಲು ಮೂಡಿ,  ಕಣ್ಣು  ಬಿಟ್ಟು  ಓಡಾಡಲು   ನೀರುನಾಯಿಗೆ  ಸುಮಾರು ನಲವತ್ತು ದಿನಗಳು ಬೇಕು ,  ಆ ನಂತರವಷ್ಟೇ   ಈ  ಮರಿಗಳು ಗಟ್ಟಿಯಾದ  ಆಹಾರ ತಿನ್ನಲು  ಶಕ್ತವಾಗುತ್ತವೆ.   ಹದಿನಾಲ್ಕು ವಾರ  ಕಳೆದಾಗ  ನೀರುನಾಯಿಗಳು   ತಮ್ಮ  ಜೀವನ  ತಾವೇ  ನಿರ್ವಹಣೆ  ಮಾಡೋದನ್ನು  ಕಲಿತು ಬಿಟ್ಟಿರುತ್ತವೆ . ಇನ್ನು ಪರಸ್ಪರ   ಸೂಚನೆ ಕೊಡಲು,   ತಮ್ಮದೇ ಆದ ವಿಚಿತ್ರ ಕ್ರಮ ಅನಿಸರಿಸುತ್ತವೆ.  ಇವು ಹನ್ನೆರಡು  ವಿವಿಧ  ಬಗೆಯ  ಶಬ್ಧವನ್ನು  ತಮ್ಮ ಬಾಯಿಂದ  ಹೊಮ್ಮಿಸುತ್ತವೆ,  ಒಂದೊಂದು ರೀತಿಯ ಶಬ್ದಕ್ಕೂ  ಅದರದೇ  ಆದ ಅರ್ಥ ಇರುತ್ತದೆ,  ಇನ್ನೊಂದು ವಿಶೇಷ  ಅಂದ್ರೆ ಈ ಜೀವಿಗಳು ತಮ್ಮ ದೇಹದಿಂದ   ವಿವಿಧ ಬಗೆಯ  ವಾಸನೆ  ಹೊಮ್ಮಿಸುವ ಮೂಲಕ  ಸಂವಹನ   ನಡೆಸೋದು  ಒಂದು ಅಚ್ಚರಿಯ ವಿಚಾರ.  ಇನ್ನು ಇವುಗಳಿಗೆ  ಜಲಚರಗಳೇ ಆಹಾರ ,  ನೀರಿನಲ್ಲಿ  ಸಿಗುವ ವಿವಿಧ ಬಗೆಯ ಮೀನುಗಳು,   ಹೊಲ ಗದ್ದೆಯಲ್ಲಿ   ಸಿಗುವ   ಏಡಿ,  ಕಪ್ಪೆ , ಮುಂತಾದವುಗಳನ್ನು  ಭಕ್ಷಿಸುತ್ತವೆ.  ಇದು ಇವುಗಳ ಬಗ್ಗೆ  ಇರುವ ಮಾಹಿತಿ. ಕನ್ನಡ  ಅಂತರ್ಜಾಲ ತಾಣಗಳಲ್ಲಿ    ಏನೂ  ಮಾಹಿತಿ ಸಿಗದಿದ್ದರೂ    ಆಂಗ್ಲ    ಭಾಷೆಯಲ್ಲಿನ  ಕೆಲವೇ ಕೆಲವು ತಾಣಗಳಲ್ಲಿ   ನೀರುನಾಯಿಗಳ   ಬಗ್ಗೆ   ಸ್ವಲ್ಪ  ಮಾಹಿತಿ ಸಿಗುತ್ತವೆ,  ಈ ನೀರುನಾಯಿಗಳು   ಹಾಗು   ಸಮುದ್ರದಲ್ಲಿ   ಕಂಡುಬರುವ   ಸೀಲ್ [  ಸೀ  ಲಯನ್ ]  ಗಳು   ಹೊರನೋಟಕ್ಕೆ  ಕೆಲವೊಮ್ಮೆ   ಒಂದೇ ರೀತಿ  ಕಂಡು ಬರುತ್ತವೆ.  ಕೆಲವು ವಿಚಾರಗಳಲ್ಲಿ   ಚಿಕ್ಕಪ್ಪ ದೊಡ್ಡಪ್ಪನ   ಮಕ್ಕಳ ಹಾಗೆ  ಸಾಮ್ಯತೆ ಕಂಡು ಬರುತ್ತದೆ .

ನಮ್ಮನು  ಉಳಿಸಿ ಪ್ಲೀಸ್  [ ಚಿತ್ರ ಕೃಪೆ  ಅಂತರ್ಜಾಲ ] 


ಇನ್ನು ನಮ್ಮ   ನಾಡಿನ  ಕಥೆ  ಪುಸ್ತಕಗಳಲ್ಲಿ  ಇವುಗಳ ಉಲ್ಲೇಖ   ಅಷ್ಟಾಗಿ ಕಂಡು ಬರುವುದಿಲ್ಲ  ಆದರೆ  ಕಡಲ ತೀರದ ಭಾರ್ಗವ  ಕಾರಂತಜ್ಜ     ಬರೆದಿರುವ      "ಸ್ವಪ್ನದ  ಹೊಳೆ "   ಕಥೆಯಲ್ಲಿ  ಒಂದು ಸನ್ನಿವೇಶದಲ್ಲಿ  ನೀರುನಾಯಿಗಳ ಬಗ್ಗೆ  ಸ್ವಲ್ಪ ಮಾಹಿತಿ ನೀಡಿದ್ದಾರೆ.  ಉಳಿದಂತೆ   ಬೇರೆ ಕಥೆಗಾರರ ಕಣ್ಣಿಗೆ ಇವು  ಕಂಡಿಲ್ಲ.  ಇನ್ನು ಇವುಗಳು    ಬಹಳ  ಸಾದು  ಜೀವಿಗಳಾದ  ಕಾರಣ ಇವುಗಳನ್ನು  ಬೇಟೆಗಾರರು  ಬಹಳ ಸುಲಭವಾಗಿ   ಕೊಲ್ಲುತ್ತಾರೆ,  ಹಾಗಾಗಿ ಇವುಗಳು ಅಳಿವಿನ ಅಂಚಿನಲ್ಲಿ  ಬಂದು ನಿಂತಿವೆ ,   ಈಗಲಾದರೂ    ನಾವುಗಳು ಎಚ್ಚರ ವಹಿಸಿ  ಇವುಗಳನ್ನು ರಕ್ಷಣೆ ಮಾಡುವ  ನಿಟ್ಟಿನಲ್ಲಿ   ಕಾರ್ಯಕ್ರಮ  ಹಾಕಿಕೊಳ್ಳಬೇಕಾಗಿದೆ , ಇಲ್ಲದಿದ್ದರೆ   ಇವುಗಳ ಚಿತ್ರವನ್ನು ಗೋಡೆಯ ಮೇಲೆ ಅಂಟಿಸಿ  ಮುಂದಿನ ಪೀಳಿಗೆಗೆ   ತೋರಿಸಬೇಕಾಗುತ್ತದೆ.  ದಯಮಾಡಿ ನಿಮ್ಮ   ಊರಿನ ಅಥವಾ ಹಳ್ಳಿಗಳ   ಕೆರೆಗಳಲ್ಲಿ   ಈ ನೀರುನಾಯಿಗಳು ಕಂಡು ಬಂದರೆ   ಅವುಗಳನ್ನು  ಸಂರಕ್ಷಿಸಲು ಪ್ರಯತ್ನಿಸಿ  ಗೆಳೆಯರೇ.

[ ಸೂಚನೆ :-) ಈ ಲೇಖನದಲ್ಲಿನ  ಚಿತ್ರಗಳನ್ನು  ಅಂತರ್ಜಾಲದ ಸಹಾಯದಿಂದ  ಕೃತಜ್ಞತಾ ಪೂರ್ವಕವಾಗಿ  ಪಡೆದಿದ್ದೇನೆ, ಚಿತ್ರಗಳ ಹಕ್ಕು ಮೂಲ  ಛಾಯಚಿತ್ರಗಾರರದು , ಮಾಹಿತಿಯನ್ನು  ವಿವಿಧ ಪುಸ್ತಕಗಳು, ಅಂತರ್ಜಾಲದ ಸಹಾಯದಿಂದ  , ಕೆಲವು  ಪಶು ವೈಧ್ಯರಿಂದ   ಕೃತಜ್ಞತಾ ಪೂರ್ವಕವಾಗಿ  ಪಡೆದು  ಸಂಗ್ರಹಿಸಿ  ಇಲ್ಲಿ ಬಳಸಿಕೊಳ್ಳಲಾಗಿದೆ .   ನೀರುನಾಯಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ  ಆ ಮಾಹಿತಿಯನ್ನು   ನಿಮ್ಮ ಅನಿಸಿಕೆಯಲ್ಲಿ   ಹಾಕಿದರೆ ಉಳಿದವರಿಗೆ ಅನುಕೂಲ ಆಗುತ್ತದೆ . ]


 

Sunday, May 22, 2016

ಇದು ಹೀಗೆ ಆಗಬಾರದಿತ್ತು ಅಂದ್ರು ಹಲವರು, ಬದುಕಿ ಬಂದು ಥ್ಯಾಂಕ್ಸ್ ಹೇಳಿದ್ದಕ್ಕೆ ಖುಷಿ ಪಟ್ರು ಡಾಕ್ಟ್ರು ......!ನನ್ ಕಥೆ ಭಾಗ ....03

 
ನೊಂದ ಮನಸಿಗೆ  ಒಳ್ಳೆಯ ಮಾತುಗಳು  ಪುಷ್ಪಗುಚ್ಚದಂತೆ  ಮುದನೀಡುತ್ತವೆ 


ಆಸ್ಪತ್ರೆಯಲ್ಲಿ ಚಿಕಿತ್ಸೆ    ಪದೆದದ್ದಾಯಿತು,  ವೈಧ್ಯರು  ಮನೆಯಲ್ಲಿ   ವಿಶ್ರಾಂತಿ ಪಡೆಯಲು  ಸೂಚಿಸಿದ ಮೇರೆಗೆ  ನನ್ನ ವಿಶ್ರಾಂತಿ   ಪರ್ವ ಆರಂಭವಾಯಿತು. ನನಗೆ ಅಪಘಾತ ಆದ ವಿಚಾರ  ನನ್ನ ಗೆಳೆಯರಿಗೆ  ನೆಂಟರಿಗೆ   ತಿಳಿಯಲು  ತಡಾ ಆಗಲಿಲ್ಲ,    ದಾವಿಸಿಬಂದರು ಸಂತೈಸಲು........! ಕಂಬನಿ  ಮಿಡಿದವರು  ಹಲವರು, ಕೆಲವರು ಹಾರೈಸಿದರು  ಮತ್ತೆ ಕೆಲವರು .....? ಪತ್ತೆದಾರರಂತೆ  ......ಪ್ರಶ್ನೆ    ಕೇಳಿ  ಎಡವಟ್ಟು ಮಾಡಿಕೊಂಡರು     ಮುಂದೆ ....?    ಹಾಗೆ  ನಡೆಯಿತು , ಪ್ರತಿನಿತ್ಯ  ಕನಿಷ್ಠ   ಹತ್ತರಿಂದ ಇಪ್ಪತ್ತು ಜನ   ಮನೆಗೆ ಬಂದು  ತಮ್ಮ ಪ್ರೀತಿ ತೋರಿದರು ಬಹಳಷ್ಟು ಮಂದಿ. ಅಚ್ಚರಿ ಅಂದ್ರೆ  ಫೇಸ್ಬುಕ್ ನಲ್ಲಿ   ಪರಿಚಯ  ಆಗಿ ಮುಖವನ್ನೇ ನೋಡದ ಕೆಲವರು  ಅದು ಹೇಗೋ  ನನ್ನ ವಿಳಾಸ  ಪತ್ತೆಮಾಡಿ  ಮನೆಗೆಬಂದು  ತಮ್ಮ ಪ್ರೀತಿ ತೋರಿದರು . ಬಹಳಷ್ಟ್ ಜನ   ಹಣಕಾಸು ಸಹಾಯ   ಮಾಡಲು ಮುಂದೆ ಬಂದರು ,  ಆದರೆ ಅದನ್ನು  ನಯವಾಗಿ ನಿರಾಕರಿಸಿದೆ,  ತೀರಾ ಆತ್ಮೀಯರು  ಕೆಲವರು  ನನ್ನ ಬೆನ್ನ ಹಿಂದೆ ನಿಂತರು , ಪ್ರತಿನಿತ್ಯ   ಆಗಮಿಸುವ  ನೆಂಟರು , ಗೆಳೆಯರುಗಳ ಜೊತೆ ಮಾತು ಕಥೆ  ಇವುಗಳ  ಜೊತೆಗೆ  ದೂರವಾಣಿ  ಕರೆಗಳನ್ನು ಸ್ವೀಕರಿಸುವುದೇ  ನಮ್ಮ ಮನೆಯಲ್ಲಿ  ಒಂದು ಹೊಸ ದಿನಚರಿ ಆಯ್ತು,    ಮೊದಮೊದಲು ನನಗೆ  ಮಾತನಾಡಲು, ಎದ್ದು  ಕುಳಿತು  ಮಾಡುವುದು   ಸಾಧ್ಯವಾಗದ   ಕಾರಣ   ನನ್ನ ಮನೆಯವರುಗಳೇ   ನನ್ನ ಪರವಾಗಿ   ಈ ಕಾರ್ಯವನ್ನು  ಮಾಡಿದರು.    ದೇಹದಲ್ಲಿ ಶಕ್ತಿ ಇಲ್ಲದೆ, ನೋವನ್ನು ಅನುಭವಿಸುತ್ತಾ ,  ಮಾತ್ರೆ, ಔಷಧಿ,  ನಿದ್ದೆ, ಊಟ ,  ಎಲ್ಲಕ್ಕೂ   ಆಸರೆ ಪಡೆಯುತ್ತಾ   ದಿನಗಳನ್ನು  ಕಳೆಯುತ್ತಿದ್ದೆ.  ಒಮ್ಮೊಮ್ಮೆ ನಾನು  ಜೀವವಿರುವ  ಅಸಹಾಯಕ  ದೇಹದ  ಯಜಮಾನ   ಎಂಬ ಭಾವನೆ  ಬರುತ್ತಿತ್ತು. ಓದಲು ಆಗುತ್ತಿರಲಿಲ್ಲ , ಎದ್ದುಕುಳಿತರೆ   ತಲೆ ಚಕ್ಕರ್  ಹೊಡೆಯೋದು, ಟಿ. ವಿ. ನೋಡಲು  ಆಗುತ್ತಿರಲಿಲ್ಲ, ತಲೆ ನೋವು ಬರುತಿತ್ತು,  ಇವುಗಳ ಜೊತೆಗೆ  ಹೆಣಗಾಡುತ್ತಾ  ಕೆಲವು  ವಾರಗಳು ಕಳೆದವು,  ನಿಧಾನವಾಗಿ   ದೇಹಕ್ಕೆ   ಚೈತನ್ಯ   ಬರುತ್ತಿತ್ತು, ಬಂದವರೊಡನೆ  ಮಾತನಾಡುವಷ್ಟು   ಶಕ್ತಿ ಬಂತು.   ಬರುವ ನೆಂಟರು , ಗೆಳೆಯರು  ಬರುತ್ತಲೇ ಇದ್ದರು, ಇಂತಹ ವೇಳೆ ಬಂದರು  ಒಬ್ಬ  ಆತ್ಮೀಯರು .





ಶೀರ್ಷಿಕೆ ಸೇರಿಸಿ



ಮನೆಗೆ ಬಂದವರೇ   ಬಹಳ ಆತ್ಮೀಯವಾಗಿ   ಹತ್ತಿರ ಬಂದು  ತಲೆ ಸವರಿದರು, ಮನೆಯವರೆಲ್ಲರ  ಜೊತೆ  ಮಾತು ಕಥೆ ಆಯಿತು,  ನಂತರ  ಅಲ್ಲಿದ್ದ ಕೆಲವರಿಗೆ ಇವರನ್ನು   ಸ್ವಲ್ಪ   ಜಾಸ್ತಿ ಹೊಗಳಿ  ಪರಿಚಯ ಮಾಡಿಕೊಟ್ಟೆ . ಅಲ್ಲೇ  ಆಗಿತ್ತು ತಪ್ಪು.  ಅಲ್ಲಿದ್ದವರ ಪರಿಚಯ ಮಾಡಿಕೊಂಡು    ನನ್ನ ಹತ್ತಿರ ಬಂದು ಕುಳಿತರು,  ಮತ್ತೆ ವಿಶೇಷ ಏನಪ್ಪಾ ....?  ಅಪಘಾತ  ಹೇಗೆ  ಆಯ್ತು ....?  ಅಂದರು   ನಾನು ನನಗೆ  ಗೊತ್ತಿದ್ದ ,  ನನಗಾದ  ಅಪಘಾತದ  ವಿಚಾರವನ್ನು   ಅವರಿಗೆ  ಹೇಳಿದೆ.  ನಂತರ   ಶುರು ಆಯ್ತು ಅವರ  ಪ್ರಶ್ನೆಗಳ ಸುರಿಮಳೆ,   ಅಲ್ಲಾ    ಈ ತುದಿಯಿಂದ   ನೀನು ರಸ್ತೆ    ದಾಟುತ್ತಿದ್ದರೆ... ಆ ಬೈಕಿನವರು   ಈ  ಆಂಗಲ್  ನಲ್ಲಿ  ನಿನಗೆ ಗುದ್ದಿರಬೇಕು,    ಹೀಗೆ ಗುದ್ದಿದರೆ  ನಿನಗೆ   ಇಲ್ಲಿ ಪೆಟ್ಟಾಗಿರಬೇಕು ,  ಆದರೆ  ನಿನಗೆ   ಆಗಿರೋದು   ಬೇರೆ ತರಹ  ಇದೆ  ಇದು ಹ್ಯಾಗೆ ಸಾಧ್ಯ  ...?   ಅಂದರು,  ನನಗೆ   ಇನ್ನೂ    ನನ್ನ ಅಪಘಾತದ   ವಿವರ ತಿಳಿದಿರಲಿಲ್ಲ,  ಅಪಘಾತ  ಆದ ತಕ್ಷಣ   ಪ್ರಜ್ಞೆ ಹೋಗಿತ್ತು,  ಹೀಗಿರುವಾಗ   ಇಂತಹ ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ   ತರಲಿ. ಇರುವ ವಿಚಾರ   ಹೇಳಿದೆ   ಆ ಯಪ್ಪಾ   ಯಾವುದೇ ಕೆಟ್ಟ  ಉದ್ದೇಶ  ಇಲ್ಲದೆ ಇದ್ದರೂ   ಸುಮ್ಮನೆ   ಸುರಿಮಳೆ   ಹಾಕುತ್ತಲೇ ಇದ್ದರು . ಒಂದು ಕಡೆ  ಗಾಯದ ನೋವು,  ತಲೆಯಲ್ಲಾ  ಸುತ್ತುತ್ತಿರುವ  ಅನುಭವ , ದೇಹದಲ್ಲಿ  ತ್ರಾಣವಿಲ್ಲದ   ಅಸಹಾಯಕ ಸ್ಥಿತಿ ,  ಅವರಿಗೆ ತಿಳಿ ಹೇಳಲು  ಹೋದರೆ  ಅವರಿಗೆಲ್ಲಿ ನೋವು ಆಗುತ್ತದೆಯೋ  ಎಂದು  ನಮ್ಮ ಮನೆಯವರಿಗೆ   ಸಂಕೋಚ ,  ಈ ಪರಿಸ್ಥಿತಿ   ನಿಜಕ್ಕೂ ಬಯಸದೆ ಬಂದ   ನೋವಾಗಿತ್ತು,    ಇದೆಲ್ಲವನ್ನೂ    ನೋಡುತ್ತಾ   ಕುಳಿತಿದ್ದ   ನನ್ನ ಗೆಳೆಯರೊಬ್ಬರ    ಪತ್ನಿ,     ಸಾರ್   ಸುಮ್ಮನಿರಿ,   ಅವರ ಪಾಡಿಗೆ ಅವರು ನೋವು ತಿನ್ನುತ್ತಾ  ನರಳುತ್ತಾ ಇದ್ದಾರೆ , ನೀವು    ಸುಮ್ನೆ ಪ್ರಶ್ನೆ ಹಾಕ್ತಾ   ಅವರ ನೋವನ್ನು ಮತ್ತಷ್ಟು ಜಾಸ್ತಿ ಮಾಡ್ತಾ   ಇದೀರ,  ಅಪಘಾತ  ಆದಾಗ ಅವರಿಗೆ ಜ್ಞಾನ  ಹೋಗಿದ್ದಾಗ  ಹೇಗೆ  ಹೇಳುತ್ತಾರೆ  ಏನು ನಡೆಯಿತೆಂದು , ಅದನ್ನು ಯಾರಾದ್ರೂ  ವೀಡಿಯೊ  ಮಾಡಿದ್ರೆ ನಿಮ್ಮ ಪ್ರಶ್ನೆಗಳಿಗೆ   ಉತ್ತರ ಕೊಡಬಹುದು,  ರೀ ಬಾಲೂ   ಮೊದಲು ರೂಂ  ಒಳಗೆ ಹೋಗಿ, ರೆಸ್ಟ್ ಮಾಡಿ  ಪ್ರತಿನಿತ್ಯ  ಹೀಗೆ ಬಂದವರೆಲ್ಲಾ   ಪ್ರಶ್ನೆ  ಕೇಳಿ  ಹಿಂಸೆ ಮಾಡಿದ್ರೆ   ನಿಮ್ಮ ಆರೋಗ್ಯ  ಸುಧಾರಿಸೋದು ಕಷ್ಟ  ಆಗುತ್ತೆ  , ಅಂತಾ ಹೇಳಿ ಬಲವಂತವಾಗಿ   ಒಳಗೆ  ಕಳುಹಿಸಿದರು,   ಇದನ್ನು ನಿರೀಕ್ಷಿಸದೆ ಇದ್ದ   ಆ ಆತ್ಮೀಯರು ಒಂದು ಕ್ಷಣ   ಅವಕ್ಕಾದರು ....!  ತನ್ನ ತಪ್ಪು ಅರಿವಾಯಿತು ಅನ್ನ್ಸುತ್ತೆ  "ಸಾರಿ ಕಣಯ್ಯ  ಪರಿಸ್ಥಿತಿಯ  ಅರಿವಿಲ್ಲದೆ    ಏನೇನೋ ಪ್ರಶ್ನೆ ಕೇಳಿದೆ"   ಅಂತಾ  ಹೇಳಿ    ಅಲ್ಲಿಂದ ನಿರ್ಗಮಿಸಿದರು .   ನಾವು ಕೆಲವೊಮ್ಮೆ   ರೋಗಿಗಳನ್ನು ಕಾಣಲು ಹೋದಾಗ   ಮಾತನ್ನು  ಎಷ್ಟು ಮಿತವಾಗಿ  ಆಡಬೇಕು,  ಹಾಗು ಅವರ ಮನಸಿಗೆ ಘಾಸಿಯಾಗದಂತೆ  ನಡೆದುಕೊಳ್ಳಬೇಕು  ಎಂಬ   ವಿಚಾರ   ನನ್ನ ಅರಿವಿಗೆ  ವೈಜ್ಞಾನಿಕವಾಗಿ ಅರ್ಥ ಆಯ್ತು.





ಯಾವ ಜನ್ಮದ  ಮೈತ್ರಿ  ಈ ಹುಡುಗನಿಗೆ ಹಾಗು ನನಗೆ 



ಹೀಗೆ   ಕೆಲವು  ತಿಂಗಳು ಕಳೆದವು   ದೇಹಕ್ಕೆ ಚೈತನ್ಯ   ಬರಲು ಶುರು ಆಯ್ತು,  ಮನಸಿನಲ್ಲಿ  ನನ್ನ ಪ್ರಾಣ ಉಳಿಸಿದ   ಜಗದೀಶ್, ಹಾಗು ವೈಧ್ಯರನ್ನು ಕಾಣುವ ಬಯಕೆ  ಜಾಸ್ತಿಯಾಯ್ತು,  ಸರಿ ಒಂದು ದಿನ  ನನ್ನ  ಹುಡುಗನ ಕಾರಿನಲ್ಲಿ  ಚನ್ನರಾಯಪಟ್ಟಣಕ್ಕೆ  ಹೊರಟೇಬಿಟ್ಟೆ,  ಜಗದೀಶ್  ಸಿಕ್ಕೆಬಿಟ್ಟರು  ಆನಂದಕ್ಕೆ ಪಾರವಿಲ್ಲ,  ಕೃತಜ್ಞತೆ  ತುಂಬಿದ ಮನ  ಆ ತಮ್ಮನಂತಹ  ಹುಡುಗನನ್ನು ತಬ್ಬಿಕೊಳ್ಳಲು  ಹಾತೊರೆಯುತ್ತಿತ್ತು ,  ಜೀವ ಉಳಿಸಿದ  ವ್ಯಕ್ತಿಯನ್ನು ಕಣ್ಣಾರೆ ಕಾಣುವ ಭಾಗ್ಯ  ಒದಗಿ  ಬಂದಿತ್ತು,  ಗೌರವ ಹಾಗು ಪ್ರೀತಿಯಿಂದ ಅಪ್ಪಿಕೊಂಡೆ ,  ಮಾತುಗಳು  ಹೊರಬರಲು ತಿಣುಕಾಡಿದವು ,  ಬಹಳ ಆತ್ಮೀಯವಾಗಿ  ಮಾತನಾಡಿ   ಜಗದೀಶ್  ನಿಮ್ಮ ಈ ಉಪಕಾರಕ್ಕೆ   ಬೆಲೆ ಕಟ್ಟಲಾರೆ   ಎಂದು ಹೇಳುತ್ತಾ   ಸಿಹಿ  ತಿಂಡಿಯ  ಪೊಟ್ಟಣ  ನೀಡಿದೆ,  ಆ ಹುಡುಗನಿಗೂ   ಖುಷಿಯಾಗಿತ್ತು,  ಅಪಘಾತದ    ವಿವರ  ತಿಳಿಸುವಂತೆ  ಕೋರಿದೆ,  ಬನ್ನಿ ಸಾರ್  ಅಂತಾ ಹೇಳಿ ನನಗೆ ಅಪಘಾತ   ಆದ  ವಿವರ   ನೀಡುತ್ತಾ   ಇದೆ ನೋಡಿ ಸಾರ್  ನಿಮಗೆ  ಆಕ್ಸಿಡೆಂಟ್  ಆದ ಜಾಗ  ಅನ್ನುತ್ತಾ    ಜಾಗ ತೋರಿಸಿದರು ,




ಅಪಘಾತ  ಆದ ಸ್ಥಳ 


  ರಾಷ್ಟ್ರೀಯ ಹೆದ್ದಾರಿಯಲ್ಲಿ   ನನಗೆ ಅಪಘಾತ ನಡೆದಿತ್ತು,  ಅಂದು ಪುಣ್ಯಕ್ಕೆ  ಯಾವುದೇ  ಹೆಚ್ಚಿನ  ವಾಹನ ಸಂಚಾರ ಇರಲಿಲ್ಲ, ಇಲ್ಲಿಂದಾನೆ ಸಾರ್    ಆಪೆ ಆಟೋದಲ್ಲಿ  ಹಾಕಿಕೊಂಡು  ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು , ಅಂದರು ,  "ಜಗದೀಶ್  ನನಗೆ  ಟ್ರೀಟ್ಮೆಂಟ್  ನೀಡಿದ ಡಾಕ್ಟರ್  ಸಿಗುತ್ತಾರ...?" ಅಂದೇ , ಅದಕ್ಕೇನಂತೆ  ಬನ್ನಿ ಹೋಗೋಣ ಅಂತಾ  ಹೇಳಿ    ಸರ್ಕಾರಿ ಆಸ್ಪತ್ರೆಗೆ    ಕರೆದುಕೊಂಡು   ಹೋದರು,  ನನಗೆ ಪ್ರಾಥಮಿಕ  ಚಿಕಿತ್ಸೆ ನೀಡಿ,  ಮುಖದಲ್ಲಿ  ಮೂರು ಕಡೆ ಹೋಳಿಗೆ ಹಾಕಿ ರಕ್ತಸ್ರಾವ  ನಿಲ್ಲಲು  ಕಾರಣರಾಗಿದ್ದ ವೈಧ್ಯರು ಇವರು ,  ಕೊನೆಗೆ ಅವರನ್ನು  ಹುಡುಕಿ,  ಭೇಟಿಮಾಡಿದೆವು, ,





ಚಿಕಿತ್ಸೆ  ನೀಡಿ ಪ್ರಾಣ ಉಳಿಸಿದ  ಸರ್ಕಾರಿ ವೈಧ್ಯರಾದ   ಶ್ರೀನಿವಾಸ್  ಅವರು 



ಯಾರು ನೀವು ಅಂದರು  ಆ ವೈಧ್ಯರು ...?  ಅಪಘಾತದ   ನೆನಪನ್ನು ಹೇಳಿದಾಗ   ಓ   ಗೊತ್ತಾಯ್ತು ಗೊತ್ತಾಯ್ತು  ಎಂದು ಹೇಳಿ  ಅಂದಿನ ಘಟನೆಯನ್ನು   ಸ್ಮರಿಸಿಕೊಂಡರು . ಅವರಿಗೆ ಕೃತಜ್ಞತೆ  ಅರ್ಪಿಸಿ  ಸಿಹಿಯ ಪ್ಯಾಕೆಟ್   ನೀಡಲು , ಅವರಿಗೆ ಅಚ್ಚರಿಯಾಯ್ತು,  ಅಲ್ಲಾ ಸಾರ್ ನನ್ನ ಕರ್ತವ್ಯ ನಾನು ಮಾಡಿದೆ ಅಷ್ಟೇ  ಅಂದರು.  ಮುಂದುವರೆದು,  ಇಲ್ಲಿ ಅಪಘಾತ ಆಗ್ತಾ  ಇರುತ್ತೆ   ನೂರಾರು ಜನರಿಗೆ ತುರ್ತು  ಚಿಕಿತ್ಸೆ  ನೀಡಿದ್ದೇನೆ ,  ಚಿಕಿತ್ಸೆ  ಪಡೆದವರು  ಒಮ್ಮೆ ಹೋದರೆ ಮತ್ತೆ ಬರುವುದಿಲ್ಲ,  ಅದನ್ನು ನಾವು ನಿರೀಕ್ಷೆನೂ  ಮಾಡೋದಿಲ್ಲ , ಆದರೆ ನನಗೆ ಅಚ್ಚರಿ ಅಂದ್ರೆ  ಅಪಘಾತದ ಬಗ್ಗೆ  ಚಿಕಿತ್ಸೆ ಪಡೆದು   ನಂತರ  ಬಂದು  ನನಗೆ ಕೃತಜ್ಞತೆ  ಹೇಳಿದ ಮೊದಲನೇ  ವ್ಯಕ್ತಿ ನೀವು,  ನನ್ನ  ಹುದ್ದೆಯ ಬಗ್ಗೆ ಹೆಮ್ಮೆ ಪಡುವಂತೆ  ಮಾಡಿದ್ರೀ  ಅನ್ನುತ್ತಾ ಪ್ರೀತಿಯ  ಮಾತನಾಡಿದರು. ಅವರಿಂದ  ಬೀಳ್ಕೊಂಡು  ಜಗದೀಶ್  ಜೊತೆ ಚನ್ನರಾಯಪಟ್ಟಣದಲ್ಲಿ   ಊಟ ಮಾಡಿ  , ವಾಪಸ್ಸು  ಹೊರಡುವ ಮೊದಲು . ಜಗದೀಶ್  ನನ್ನ ಚಿಕಿತ್ಸೆಗೆ   ನೀವು ಖರ್ಚು   ಮಾಡಿದ ಹಣ   ಎಷ್ಟು   ಹೇಳಿ ದಯವಿಟ್ಟು ಅಂದೇ .  ಆದರೆ ಆ ಹುಡುಗ   ಏ  ಎನ್ ಸಾರ್ ನನಗೆ   ದುಡ್ಡುಕೊಟ್ಟು   ಅವಮಾನ ಮಾಡ್ತೀರ  ಅನ್ದುಬಿಡೋದೇ , ನನಗೆ ದಿಕ್ಕು ತೋಚಲಿಲ್ಲ .   ಅವರಿಗೆ ಮತ್ತೊಮ್ಮೆ   ಕೃತಜ್ಞತೆ  ಹೇಳಿ ಮನೆಯ ಹಾದಿ ಹಿಡಿದೇ ,  ದಾರಿಯಲ್ಲಿ   ಹಲವಾರು ಪ್ರಶ್ನೆಗಳು  ಕಾಡತೊಡಗಿದವು. ೧]  ಈ ಹುಡುಗ ಯಾರು,     ೨] ನನ್ನನ್ನು ಉಳಿಸ ಬೇಕು  ಅಂತಾ  ಇವನಿಗೆ  ಯಾಕೆ ಅನ್ನಿಸಿತು, ೩ ] ಈ ಹುಡುಗ ನನ್ನ ನೆಂಟನಲ್ಲ, ಒಡ ಹುಟ್ಟಿದವನಲ್ಲಾ  ಆದರೂ  ಈ ತರಹದ ಪ್ರೀತಿ ಯಾಕೆ ಬಂತು ..?  ನನ್ನಿಂದ   ತಾನು ಖರ್ಚು ಮಾಡಿದ  ಹಣವನ್ನೂ  ಸಹ  ತೆಗೆದುಕೊಳ್ಳಲಿಲ್ಲ   ಯಾಕೆ ..?   ಆ ಸರ್ಕಾರಿ ವೈಧ್ಯರೇಕೆ  ಅಷ್ಟು  ಉತ್ತಮವಾಗಿ  ಪ್ರಥಮ  ಚಿಕಿತ್ಸೆ ನೀಡಿದರು ...?   ಈ  ಅಪರಿಚಿತನಿಗೆ   ಈ ಊರಿನಲ್ಲಿ  ಎಷ್ಟೆಲ್ಲಾ   ಉಪಕಾರ  ಸಿಗಲು  ಹೇಗೆ ಸಾಧ್ಯಾ ...?  ಯಾರ ಶುಭ ಹಾರೈಕೆ  ನನ್ನನ್ನು ಬದುಕಿಸಿತು, ..? ಹೀಗೆ   ಪ್ರಶ್ನೆಗಳ ಪ್ರವಾಹ ಬಂದವು , ಯಾವುದಕ್ಕೂ   ನನ್ನ ಬಳಿ  ಉತ್ತರವಿರಲಿಲ್ಲ,   ಹಾಗೆ ಆಲೋಚಿಸುತ್ತಾ   ನಿದ್ದೆಗೆ ಜಾರಿದೆ,   ಸಾರ್ ಮನೆ ಬಂತು ಇಳಿಯಿರಿ  ಅಂದಾ ನಮ್ಮ ಹುಡುಗ ನವೀನ.


Wednesday, April 27, 2016

ಅನಾಥವಾಗಿ ಸಾವಿನ ಕದ ತಟ್ಟಿದ ಸಮಯ.........!!! ನನ್ ಕಥೆ ಭಾಗ ....02

 ಅದೃಷ್ಟ  ಇದ್ದರೆ  ಯಾರೋ ದಿಕ್ಕು ನಮಗೆ , ಇಲ್ಲದಿದ್ರೆ ....?



ಶ್ರೀಕಾಂತ್ ಕಾರು ಬೆಂಗಳೂರಿನ ಕಡೆ  ಹೊರಟಿತ್ತು  ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು,  ಮಸುಕು ಮಸುಕಾಗಿ   ಒಂದು ಬೈಕ್  ಕಂಡಿತ್ತು,   ಕಣ್ಣು  ಮುಚ್ಚಿತ್ತು,  ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,   ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,   ಮಾತನಾಡಲು   ಒಣಗಿದ  ಬಾಯಿಯಲ್ಲಿ  ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................! ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .   ಆಮೇಲೆ   ಕಣ್ ತೆರೆದಾಗ   ಸುತ್ತಲೂ    ಬಿಳಿ   ಬಣ್ಣದ ಪರದೆಗಳ   ದರ್ಶನ,   ಏನೋ ಸಪ್ಪಳ ಕೇಳುತ್ತಿತ್ತು,  ಕಣ್ಣು ಬಿಟ್ಟರೆ   ಕಂಡಿದ್ದು,  ನನ್ನ ತಾಯಿ ಹಾಗು ಪತ್ನಿ ಯ ಭಯಗೊಂಡ  ಮುಖಗಳು, ಅರೆ ಇಲ್ಯಾಕೆ ಬಂದ್ರು ಇವರು  ಅಂತಾ   ಎದ್ದೇಳಲು  ಪ್ರಯತ್ನಿಸಿದೆ , ಊ   ಹೂ    ಆಗಲಿಲ್ಲ, ಎಡಗಣ್ಣು ಮಾತ್ರ ಕಾಣುತ್ತಿತ್ತು,   ಬಲ ಕಣ್ಣಿನ ಮೇಲೆ ಬ್ಯಾಂಡೇಜ್  ಕಟ್ಟಿದ್ದರು,  ಯಾಕೋ ಮೈಎಲ್ಲಾ   ನೋವಾದ ಅನುಭವ ,  ಡ್ರಿಪ್ಸ್   ಹಾಕಿದ್ದರು , ಪ್ಲಾಸ್ಟಿಕ್   ನಾಳದಿಂದ  ಔಷಧಿ ಹನಿ ಹನಿಯಾಗಿ ದೇಹ ಸೇರುತ್ತಿತ್ತು.  ಪಕ್ಕದಲ್ಲಿ ಬೆಡ್ ಪ್ಯಾನ್  ಇಟ್ಟಿದ್ದರು, ನರ್ಸ್  ಹೇಳ್ತಾ ಇದ್ರೂ  ಅವರಿಗೆ ಅಗತ್ಯವಾದಾಗ   ಇದನ್ನು ಕೊಡಿ ಅಂತಾ  ಹೇಳ್ತಾ ಇದ್ರೂ , ಯಾವುದೋ ಯಾತನಾ ಮಯ  ನರಕದ ಅನುಭವ , ಅಮ್ಮಾ  ಎಂದು   ಸಣ್ಣಗೆ ಕೀರಲಿದೆ    ನನ್ನ ಅಮ್ಮಾ  ಏನಪ್ಪಾ   ಹೆದರ  ಬೇಡ ಮಗು ಒಳ್ಳೆದಾಗುತ್ತೆ  ಅಂದ್ರು,  ಪಕ್ಕದಲ್ಲಿದ್ದ ಪತ್ನಿ ಹಣೆ ಮುಟ್ಟಿ  ಬಿಕ್ಕಳಿಸಿದಳು .  ಸಧ್ಯ ಇಷ್ಟಕ್ಕೆ ಆಯ್ತು  ಹೆದರ ಬೇಡಿ  ಅಂತಾ  ಒಳಗೆ  ಬಂದರೂ  ಡಾಕ್ಟರ್  , "ನನಗೆ ಏನಾಗಿದೆ   ಡಾಕ್ಟರ್?" ಅಂದೇ   "ನಿಮಗೆ ಆಕ್ಸಿಡೆಂಟ್   ಆಗಿದೆ ಮಾತಾಡ ಬೇಡಿ ರೆಸ್ಟ್   ಮಾಡಿ" ಅಂದ್ರು ..... "   ಅಷ್ಟರಲ್ಲಿ   ಪಾಪ  ಆ ಜಗಧೀಶ್  ಗೆ  ಥ್ಯಾಂಕ್ಸ್ ಹೇಳಬೇಕು ಅನ್ನುತ್ತಾ ಇದ್ದರು ಅಲ್ಲಿ ಕೆಲವರು ,  ಪಾಪ ಆ ಹುಡುಗ ಬಹಳ ಸಹಾಯ ಮಾಡಿ  ಇಲ್ಲಿಗೆ ಕರೆದು ತಂದಾ  ಅನ್ನುವ ಮಾತುಗಳು   ಕೇಳಿಬಂದವು . ಆ   ನನಗೆ   ಆಕ್ಸಿಡೆಂಟ್ ಆಗಿದ್ಯಾ .....? "  ಅನ್ನುತ್ತಾ    ಹಾಗೆ    ಕಣ್ಣು ಮುಚ್ಚಿದೆ .   ಹಾಗಿದ್ರೆ    ವಾಸ್ತವವಾಗಿ  ಅಪಘಾತ ಹೇಗಾಯ್ತು, ನನಗೆ ಜೀವ  ಉಳಿಸಲು  ಹೆಣಗಾಡಿದವರು ಯಾರು ಯಾರು ಅನ್ನೋದು   ತಿಳಿದಿರಲಿಲ್ಲ,   ದೇಹಕ್ಕೆ ಚೈತನ್ಯ  ಬಂದ ಮೇಲೆ ಚನ್ನರಾಯ ಪಟ್ಟಣಕ್ಕೆ   ಹೋಗಿ    ಜಗಧೀಶ್ ಭೇಟಿ ಮಾಡಿ  ಮಾಹಿತಿ ಕಲೆಹಾಕಿ  ನನ್ನ ಅಪಘಾತದ  ಕಥೆ  ಹೇಗಿತ್ತು ಅನ್ನೋದನ್ನು ಅರಿತೆ,  ಬನ್ನಿ   ಅಪಘಾತ ಹೇಗಾಯ್ತು   ತಿಳಿಯೋಣ.


ಆಪತ್ತಿಗಾದ  ಪುಷ್ಪಕ ವಿಮಾನ 


ಚನ್ನರಾಯ ಪಟ್ಟಣದ  ಬಸ್ ನಿಲ್ಧಾಣದ   ಮುಂದೆ   ಹಾದುಹೋಗುವ   ಹಾಸನ  ಬೆಂಗಳೂರು   ರಾಷ್ಟ್ರೀಯ   ಹೆದ್ದಾರಿಯಲ್ಲಿ    ಮಧ್ಯಾಹ್ನ  ಸುಮಾರು ನಾಲ್ಕು ವರೆ  ಸಮಯದಲ್ಲಿ , ಒಬ್ಬ ವ್ಯಕ್ತಿ  ಬಸ್ ನಿಲ್ಧಾಣಕ್ಕೆ ಬರಲು  ರಸ್ತೆ  ದಾಟುತ್ತಿದ್ದಾನೆ,   ರಸ್ತೆಯಲ್ಲಿ   ಹೆಚ್ಚಿನ   ವಾಹನ ಸಂಚಾರ ಇರಲಿಲ್ಲ ,   ರಸ್ತೆ ಮಧ್ಯದಲ್ಲಿ   ಡಿವೈಡರ್   ಸಮೀಪ ಬರುತ್ತಿದ್ದಂತೆ    ಮೂರುಜನ  ಕುಳಿತಿದ್ದ ಯಾವುದೋ ಬೈಕ್ ಅಡ್ಡಾದಿಡ್ಡಿಯಾಗಿ   ರಾಂಗ್ ಸೈಡ್  ನಲ್ಲಿ ಚಲಿಸುತ್ತಾ ಬಂತು  ಹಿಂದಿನಿಂದ  ಗುದ್ದಿ ಸ್ವಲ್ಪ ದೂರ  ಎಳೆದು ಕೊಂಡು ಹೋಗಿದೆ.  ಅಷ್ಟರಲ್ಲಿ  ಜನರ ಗುಂಪು ಸೇರಿದೆ . ಅಲ್ಲೇ ಸ್ವಲ್ಪ ದೂರದಲ್ಲಿದ್ದ  ಮೊಬೈಲ್  ಶಾಪ್ ನಿಂದ   ಬಂದ   ಜಗಧೀಶ್  ಜನರ ಗುಂಪಿನೆಡೆಗೆ ಹೋಗಿ ನೋಡಿದಾಗ     ಯಾರೋ ಒಬ್ಬ  ರಕ್ತ   ಕಾರಿಕೊಂಡು ರಸ್ತೆಯಲ್ಲಿ   ಬಿದ್ದಿರುವುದು ಕಂಡು ಬಂದಿದೆ,   ತಕ್ಷಣವೇ   ಅಂಗಡಿಗೆ ಬಂದು      "ಗುರು ಯಾರೋ ಕುಡಿದು ಬಿದ್ದು    ಅಪಘಾತಕ್ಕೆ  ಒಳಗಾಗಿದ್ದಾನೆ  ವಿಪರೀತ   ರಕ್ತ  ಹೋಗ್ತಾ ಇದೆ   ಬದುಕೋದು ಕಷ್ಟಾ   ಅನ್ಸುತ್ತೆ"  ಅಂತಾ ಹೇಳಿ    ಅವರ ಗೆಳೆಯನಿಂದ  ಐದು ಸಾವಿರ ರುಪಾಯಿ  ಪಡೆದು   ಮತ್ತೆ  ಅಪಘಾತ ನಡೆದ ಸ್ಥಳಕ್ಕೆ  ಬಂದು  ಅಲ್ಲೇ ಸಿಕ್ಕ  ಒಂದು ಸರಕು ಸಾಗಣೆ ಆಪೆ ಆಟೋ  ನಿಲ್ಲಿಸಿ,   ಅಪಘಾತಕ್ಕೆ ಒಳಗಾದ  ವ್ಯಕ್ತಿಯನ್ನು   ಕೆಲವರ ಸಹಾಯದಿಂದ   ವಿಳಂಭ ಮಾಡದೆ   ಆಟೋ ದಲ್ಲಿ ಹಾಕಿ ಕೊಂಡು  ಚನ್ನರಾಯ ಪಟ್ಟಣದ   ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ . ತಕ್ಷಣವೇ ಸ್ಪಂದಿಸಿದ   ವೈಧ್ಯರು   ಪರೀಕ್ಷೆ ಮಾಡಿ   ಸಿ. ಟಿ. ಸ್ಕ್ಯಾನ್   ಮಾಡಿಸಲು   ಹೇಳಿದ್ದಾರೆ,  ಅಲ್ಲೇ ಇದ್ದ  ಸ್ಕಾನಿಂಗ್  ಸೆಂಟರ್ ನಲ್ಲಿ   ಅಪಘಾತದ ವ್ಯಕ್ತಿಯ   ದೇಹವನ್ನು ಸಂಪೂರ್ಣವಾಗಿ   ಸ್ಕ್ಯಾನ್ ಮಾಡಿಸಿ   ಅದರ  ವರಧಿಯ   ಆಧಾರದ ಮೇಲೆ  ಪ್ರಾಥಮಿಕ  ಚಿಕಿತ್ಸೆ ನೀಡಿ ,  ಮುಖದಲ್ಲಿ   ರಕ್ತ   ಸೋರುತ್ತಿದ್ದ  ಜಾಗಗಳಿಗೆ   ಹೊಲಿಗೆ ಹಾಕಿದ್ದಾರೆ .



ಚನ್ನರಾಯ ಪಟ್ಟಣದಿಂದ ಮೈಸೂರಿಗೆ   ನನ್ನನ್ನು ಸಾಗಿಸಿದ ಆಂಬುಲೆನ್ಸ್ 



ಹೊಲಿಗೆ ಹಾಕಿದ ನಂತರ    ಜಗಧೀಶ್    ಹಾಗು ಅವರ ಮತ್ತೊಬ್ಬ ಗೆಳೆಯ   ಅಪಘಾತಕ್ಕೆ ಒಳಗಾದ  ವ್ಯಕ್ತಿ ಅರೆ ಪ್ರಜ್ಞಾವಸ್ಥೆ ಯಲ್ಲಿ ನೀಡಿದ ಮಾಹಿತಿಯಂತೆ   ದೂರವಾಣಿಯಲ್ಲಿ  ಅಪಘಾತಕ್ಕೆ ಒಳಗಾದ   ವ್ಯಕ್ತಿಯ  ಮನೆಯವರು , ಹಾಗು ಗೆಳೆಯರನ್ನು ಸಂಪರ್ಕಿಸಿ  ಮೈಸೂರಿನ   ಕಾಮಾಕ್ಷಿ   ಆಸ್ಪತ್ರೆಗೆ   ಚನ್ನರಾಯ ಪಟ್ಟಣ ದಿಂದ  ಆಂಬುಲೆನ್ಸ್  ನಲ್ಲಿ   ಸಾಗಿಸುತ್ತಾರೆ. ವಾಹನ ಚಲಿಸುವಾಗ  ಅರೆ ಪ್ರಜ್ಞಾವಸ್ತೆಯಲ್ಲಿದ್ದ   ವ್ಯಕ್ತಿ   ಕತ್ತು  ನೋವು ಅಂದ ಕಾರಣ  ಚನ್ನರಾಯ ಪಟ್ಟಣ ದಿಂದ ಮೈಸೂರಿನ ವರೆಗೂ   iodex  ನಿಂದ ಮಸಾಜ್  ಮಾಡುತ್ತಾ  ಮೈಸೂರಿನವರೆಗೆ   ಸಾಗಿಸಿದ್ದಾರೆ,  ಮೈಸೂರಿಗೆ ತಲುಪಿದ ಕೂಡಲೇ  ಕಾಮಾಕ್ಷಿ ಆಸ್ಪತ್ರೆಯಲ್ಲಿ   ಮೊದಲೇ ಕಾಯುತ್ತಿದ್ದ   ಕೆಲವರು ತುರ್ತು  ಚಿಕಿತ್ಸಾ ಘಟಕಕ್ಕೆ  ಆ ವ್ಯಕ್ತಿಯನ್ನು ಸಾಗಿಸುತ್ತಾರೆ.    ರಾತ್ರಿಯೆಲ್ಲಾ ಅಲ್ಲೇ ಕಾದಿದ್ದ  ಜಗಧೀಶ್  ಹಾಗು ಅವರ ಗೆಳೆಯರು    ಬೆಳಿಗ್ಗೆ  ವಾಪಸ್ಸು   ಚನ್ನರಾಯ ಪಟ್ಟಣ   ತಲುಪುತ್ತಾರೆ.


ಪ್ರಾಣ ಉಳಿಸಿದ   ಜಗಧೀಶ್ ಇವರೇ 



ಇದು ಜಗಧೀಶ್   ಹೇಳಿದ  ಅಪಘಾತದ ಕಥೆ , ನಂತರ  ಮೈಸೂರಿಗೆ ಬಂದಾಗ   ಆದ ಕಥೆ ಕೇಳಿ,  ನನಗೆ ಅಪಘಾತ ಆದಾಗ  ಚನ್ನರಾಯ ಪಟ್ಟಣದಿಂದ  ಮೈಸೂರಿಗೆ ಕರೆತರುವ ಮೊದಲು ಅಲ್ಲಿನ ವೈಧ್ಯರು   ನಾನು ಅರೆ ಪ್ರಜ್ಞಾವಸ್ಥೆಯಲ್ಲಿ ನೀಡಿದ ಮೊಬೈಲ್  ನಂಬರ್  ಗೆ ಫೋನ್ ಮಾಡಿ  ನನ್ನ ಗೆಳೆಯ  ಅನಿಲ್ ಹಾಗು ಅವನ ಅಲ್ಲಲ್ಲ   ನನ್ನ  ತಂಗಿ  ಡಾಕ್ಟರ್  ಸ್ನೇಹ ಶ್ರೀ  ಜೊತೆ ಸಮಾಲೋಚಿಸಿ  ಆಂಬುಲೆನ್ಸ್ ನಲ್ಲಿ  ಕಳುಹಿಸಿದ್ದಾರೆ.   ಆಂಬುಲೆನ್ಸ್ ಮೈಸೂರಿಗೆ   ಬರುವಷ್ಟರಲ್ಲಿ   ನನ್ನ ಪ್ರೀತಿಯ  ಈ ತಂಗಿ    ಕಾಮಾಕ್ಷಿ ಆಸ್ಪತ್ರೆಗೆ   ಬಂದು    ನ್ಯೂರೋ ಸರ್ಜನ್ , ಇ. ಎನ್. ಟಿ. ಸ್ಪೆಷಲಿಸ್ಟ್ , ಹಾರ್ಟ್  ಸರ್ಜನ್ , ಮುಂತಾದವರನ್ನು  ದೂರವಾಣಿ ಮೂಲಕ   ಸಂಪರ್ಕಿಸಿ, ರಾತ್ರೋ ರಾತ್ರಿಯೇ ಕರೆಸಿ  ಒಂದು ಕ್ಷಣವೂ   ವ್ಯರ್ಥವಾಗದಂತೆ    ನನಗೆ  ಚಿಕಿತ್ಸೆ  ದೊರಕಲು  ಸಹಕರಿಸಿ,  ರಾತ್ರಿಯೆಲ್ಲಾ   ನನಗೆ ಚಿಕಿತ್ಸೆ ಕೊಡಿಸಲು  ಓಡಾಡಿದ್ದಾಳೆ .

ಡಾಕ್ಟರ್   ಸ್ನೇಹಶ್ರೀ 



ತನ್ನ ಆನಾರೋಗ್ಯವನ್ನೂ   ಲೆಕ್ಕಿಸದೆ   ತಂಗಿಯ ಜೊತೆ ಬಂದಿದ್ದ ಅನಿಲ್ 



ಯಾವ ಜನ್ಮದ  ಋಣಾನುಬಂಧವೋ   ಕಾಣೆ  ಬಹಳಷ್ಟು ಸಹಾಯ ಮಾಡಿ     ಮರಳಿ ಜೀವದಾನ  ಮಾಡಿದರು ಎಲ್ಲರೂ ಸೇರಿ .  ಒಂದೆರಡು ದಿನ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು   ಡಿಸ್ಚಾರ್ಜ್  ನಂತರ ವೈಧ್ಯರ  ಸಲಹೆಯಂತೆ    ವಿಶ್ರಾಂತಿಗಾಗಿ ಮನೆಗೆ ಬಂದೆ ,  ಏಳಲು ಓಡಾಡಲು  ದೇಹದಲ್ಲಿ  ತ್ರಾಣ ವಿಲ್ಲ ,  ಎದ್ದು ನಿಂತರೆ ತಲೆಯೆಲ್ಲಾ   ಚಕ್ಕರ್  ಹೊಡೆಯೋದು ,  ಹಾಸಿಗೆಯೆ ನನ್ನ ಸಾಮ್ರಾಜ್ಯ ಆಯ್ತು.  ಓದಲು  ಆಗುತ್ತಿಲ್ಲ,  ಬರೆಯಲು ಆಗುತ್ತಿಲ್ಲ,   ಕಂಪ್ಯೂಟರ್  ಮುಂದೆ ಕೂರಲು   ಆಗುತ್ತಿಲ್ಲ, ಟಿ.ವಿ. ನೋದುವನ್ತಿಲ್ಲಾ ,   ಇಲ್ಲಾ  ಇಲ್ಲಾ   ಏನೂ     ಮಾಡುವಂತಿಲ್ಲ, ಅಂದ್ರೆ ಒಂತರಾ  ಬದುಕಿದ್ದೂ  ಪ್ರಯೋಜನ ಇಲ್ಲ ವೇನೋ ಅನ್ನಿಸಿತ್ತು,   ಆದರೆ ಮನದಲ್ಲಿ  ನನ್ನನ್ನು  ಉಳಿಸಿದ  ಜಗಧೀಶ್ ಗೆ  ಕೃತಜ್ಞತೆ ತಿಳಿಸಲು   ಆಗುತ್ತಿಲ್ಲಾ   ಎಂಬ ಕೊರಗು ಇತ್ತು,  ಅದೊಂದು ದಿನ    ಕಷ್ಟ ಪಟ್ಟು  ಕುಳಿತು,  ತಲೆ ನೋವಿದ್ದರೂ    ಲೆಕ್ಕಿಸದೆ  ನನ್ನ ಫೇಸ್ಬುಕ್  ಪುಟದಲ್ಲಿ  ಜಗಧೀಶ್ ಮಾಡಿದ  ಉಪಕಾರದ ಬಗ್ಗೆ ಬರೆದು ಕೃತಜ್ಞತೆ ಅರ್ಪಿಸಿದೆ . ಮೊಬೈಲ್ ನಲ್ಲಿ ಕರೆ ಮಾಡಿ  ಮಾತನಾಡಿ   ದೇಹಕ್ಕೆ ಚೈತನ್ಯ ಬಂದಮೇಲೆ ಬಂದು ಭೇಟಿ ಮಾಡುವುದಾಗಿ   ಹೇಳಿದೆ. ಆದರೂ  ಈ ಜಗಧೀಶ್ ಗೆ ನನ್ನನ್ನು  ಉಳಿಸಬೇಕೂ  ಅಂತಾ   ಯಾಕೆ ಅನ್ನಿಸಿತು ..?  ಎಂಬ ಪ್ರಶ್ನೆ    ಕಾಡುತ್ತಿತ್ತು.


ನನಗೆ ಅಪಘಾತ ಆದ ವಿಚಾರ  ನನ್ನ ಗೆಳೆಯರಿಗೆ  ನೆಂಟರಿಗೆ   ತಿಳಿಯಲು  ತಡಾ ಆಗಲಿಲ್ಲ,    ದಾವಿಸಿಬಂದರು ಸಂತೈಸಲು........! ಕಂಬನಿ  ಮಿಡಿದವರು  ಹಲವರು, ಕೆಲವರು ಹಾರೈಸಿದರು  ಮತ್ತೆ ಕೆಲವರು .....? ಪತ್ತೆದಾರರಂತೆ  ......ಪ್ರಶ್ನೆ    ಕೇಳಿ  ಎಡವಟ್ಟು ಮಾಡಿಕೊಂಡರು     ಮುಂದೆ ....?









Sunday, April 24, 2016

ಸರ್ ಜಿ ನಾಳೆ ಚನ್ನರಾಯಪಟ್ಟಣಕ್ಕೆ ನೀವ್ ಬರ್ತೀರಾ ಅಷ್ಟೇ ..........!!! ನನ್ ಕಥೆ ಭಾಗ ....01

ಎಲ್ಲರಿಗೂ ನಮಸ್ಕಾರ , ಸುಮಾರು ಆರು ತಿಂಗಳ ನಂತರ  ಬ್ಲಾಗ್ ಬರಹ  ಶುರುಮಾಡಿದ್ದೇನೆ , ನನ್ನದೇ ಆದ ವೈಯಕ್ತಿಕ  ಕಾರಣಗಳು,  ಬ್ಲಾಗ್ ಬರೆಯಲು  ಆಸೆ ಇದ್ದರೂ ಬರೆಯಲಾಗದ   ಅನಿವಾರ್ಯತೆ , ಇತ್ಯಾದಿಗಳ   ಕಾರಣದ ಜೊತೆಗೆ ಸೋಮಾರಿತನ ,  ಹಾಗಾಗಿ ಫೆಸ್ ಬುಕ್ ಲೋಕದಲ್ಲೇ  ಮುಳುಗಿ ಹೋಗಿದ್ದೆ , ಅಂತೂ ಇಂತೂ ಬರೆಯಲು  ಮನಸು  ಬಂದು ಬರೆಯಲು ಶುರು ಮಾಡಿದ್ದೇನೆ . ಮನಸ್ಸು  ವ್ಯಸನ ಮುಕ್ತವಾಗಿ   ಪಕ್ಷಿ ಯಂತೆ   ಗರಿಬಿಚ್ಚಿ   ಹಾರಾಡಿ   ಬರೆಯಲು ಪ್ರೇರಣೆ ನೀಡಿದೆ.


ಮನಸೆಂಬ  ಪಕ್ಷಿ  ಗರಿಬಿಚ್ಚಿದೆ 


ಈ ಬ್ಲಾಗ್ ಲೋಕವೇ ಹಾಗೆ  ಬರೆಯುವ ಕಿಚ್ಚನ್ನು  ಸದಾ ಹೊತ್ತಿಸಿಯೇ  ಇರುತ್ತದೆ, ಅದಕ್ಕೆ ತಕ್ಕಂತೆ  ತಿದ್ದಿ ತೀಡುವ   ಬ್ಲಾಗ್ ಗೆಳೆಯರ   ದಂಡು,  ಇನ್ನು ಇವರೋ   ನಮ್ಮ  ಒಡಹುಟ್ಟಿದವರಲ್ಲಾ, ಜೊತೆಯಲ್ಲಿ ಓದಿದವರಂತೂ  ಅಲ್ಲವೇ ಅಲ್ಲಾ , ಕೆಲಸದಲ್ಲಿನ   ಗೆಳೆಯರೇ  ಉ  ಹೂ  ಅದೂ ಅಲ್ಲಾ  , ಆದರೆ   ಅಕ್ಷರದ ಮೂಲಕ   ಬ್ಲಾಗ್ ಲೋಕದಲ್ಲಿ ಪರಿಚಿತರಾಗಿ    ನನ್ನ ಹೃದಯದಲ್ಲಿ   ನೆಲೆಸಿ   ನಮ್ಮವರೇ   ಆಗಿಬಿಟ್ಟಿದ್ದಾರೆ,  ಒಬ್ಬರೇ ಇಬ್ಬರೇ   ಹೇಳುತ್ತಾ ಹೋದರೆ  ಹನುಮನ   ಬಾಲವಾದೀತು ,   ಆದರೂ ಎಲ್ಲರೂ   ಒಂದಲ್ಲಾ  ಒಂದು ರೀತಿ ನನ್ನ ಜೀವನಕ್ಕೆ ಸ್ಪೂರ್ತಿ  ತುಂಬಿರುವುದಂತೂ ನಿಜಾ .

ಇಂತಹ ಗೆಳೆಯರ ಲಿಸ್ಟ್  ನಲ್ಲಿ ಒಬ್ಬರಾದ   ನಮ್ಮ ಶ್ರೀ ಕಾಂತ್  ಮಂಜುನಾಥ್     ಅಂದು ರಾತ್ರಿ ದೂರವಾಣಿ ಮೂಲಕ  ಕರೆದಿದ್ದರು   "ಸರ್ ಜಿ   ನಾಳೆ ಚನ್ನರಾಯಪಟ್ಟಣಕ್ಕೆ  ನೀವ್ ಬರ್ತೀರಾ   ಅಷ್ಟೇ ..........!!!"   "ನಾಳೆ ಬೆಳಿಗ್ಗೆ  ೯ ಘಂಟೆಗೆ  ನಿಮ್ಮ ಮನೆಗೆ ಬರ್ತೇನೆ  ರೆಡಿ ಇರೀ, "  "ಅಲ್ಲಿಂದ  ನನ್ನ ಕಾರ್  ನಲ್ಲಿ ಚನ್ನರಾಯಪಟ್ಟಣಕ್ಕೆ  ಹೋಗೋಣ ", "ನೀವು ಸಪ್ಪಗೆ ಇರೋದನ್ನು ನೋಡೋಕೆ ಆಗ್ತಾ ಇಲ್ಲಾ  ," "ಕಳೆದ ವಾರ ನಿಮ್ಮನ್ನ ಭೇಟಿಯಾದಾಗ  ನೀವು  ಸಹಜವಾಗಿ ಇರಲಿಲ್ಲ ", "ಯಾಕೋ ನನಗೂ ನಿಮ್ಮ ನಗು  ಮಿಸ್ ಆಗ್ತಾ ಇತ್ತು, " "ಅದಕ್ಕೆ  ಅನ್ನಿಸಿತು ಫೋನ್ ಮಾಡಿದೆ , ನಾಳೆ ಹೇಗೂ ಸೆಕಂಡ್ ಸಾಟರ್ಡೆ , ರಜಾ ಇದೆ ನೀವು ಬನ್ನಿ ಒಂದು ಚೇಂಜ್  ಇರುತ್ತೆ   ನಿಮ್ಮ ಮನಸಿಗೂ ಹಿತವಾಗುತ್ತೆ"ಅಂತಾ  ಪ್ರೀತಿಯ ಆಹ್ವಾನ ನೀಡಿದರು,  ಯಾರಿಗೂ ಹೇಳದ  ನನ್ನ ನೋವನ್ನು  ಅವರು ಗಮನಿಸಿದ್ದು   ಅಚ್ಚರಿಯಾಯ್ತು,


ಚಿತ್ರ  ಕೃಪೆ  ಪ್ರದೀಪ್ ರಾವ್ 


 ಈ ನಮ್ಮ ಶ್ರೀಕಾಂತ್ ಮಂಜುನಾಥ್ ಹಾಗೆ  ಒಮ್ಮೆ ಗೆಳೆತನ  ಶುರು ಆದ್ರೆ ನಿಮ್ಮ ಮನಸನ್ನು ಸೀದಾ  ಹೊಕ್ಕಿಬಿಡುವ   ಸಹೃದಯಿ,   ಎಷ್ಟು ಹೊಗಳಿದರೂ   ಕಡಿಮೆ  ಇವರ ಬಗ್ಗೆ,  ಇನ್ನು ಈ ಯಪ್ಪನ  ಮಾತು ಕೇಳದೆ ಹೋದ್ರೆ   ನನ್ನ ಹುಟ್ಟಿದ ಹಬ್ಬಕ್ಕೆ ಯಾವ್ದಾದ್ರೂ  ದೇವರನ್ನು  ಕರೆದುಕೊಂಡು  ಬಂದು  ಲ್ಯಾಪ್ಟಾಪ್ , ಮೊಬೈಲ್ ಫೋನ್ , ಹೀಗೆ  ಏನಾದರೂ ಕೈಗೆ ಕೊಟ್ಟು, ಆ ದೇವರುಗಳ ಬಾಯಲ್ಲಿ  ನನ್ನ ಗುಣಗಾನ   ಮಾಡಿಸಿ    ಸೇಡು ತೀರಿಸಿಕೊಳ್ಳುವ   ಭೀತಿ ಕಾಡಿ ,  ಸರಿ ಶ್ರೀಕಾಂತ್ , ಬರ್ತೀನಿ ಆದ್ರೆ ಒಂದು ಕಂಡಿಶನ್   ನೀವು ಮೈಸೂರಿಗೆ ಬರೋದು ಬೇಡ , ನಾನೇ ಮೈಸೂರಿನಿಂದ   ಚನ್ನರಾಯ ಪಟ್ಟಣಕ್ಕೆ   ಬರುತ್ತೇನೆ  ಅಂತಾ   ಪೂಸಿ  ಹೊಡೆದು  ಒಪ್ಪಿಸಿದೆ. ಕಟ್ ಮಾಡಿದ್ರೆ  ಮಾರನೆಯದಿನ   ಮೈಸೂರಿನಿಂದ   ಚನ್ನರಾಯ ಪಟ್ಟಣದ  ಬಸ್ ಹತ್ತಲು   ಬಸ್ ನಿಲ್ದಾಣಕ್ಕೆ  ಬಂದಿದ್ದೆ.

ನನ್ನನ್ನು  ಚನ್ನರಾಯ ಪಟ್ಟಣಕ್ಕೆ  ಕರೆದುಕೊಂಡು  ಹೋದ  ಕೆಂಪು ಬಸ್ಸು 


ಯಾರ್ರೀ   ಚನ್ನರಾಯಪಟ್ಟಣ   ಅಂತಾ  ಕಂಡಕ್ಟರ್  ಕೂಗ್ತಾ ಇದ್ದರು,  ಆದರೂ ಈ ಬಸ್ಸು ಹತ್ತಲು ಮನ ಹಿಂಜರಿಯುತ್ತಿತ್ತು,  ಬೇರೆ ಯಾವ್ದಾದ್ರೂ   ಬಸ್ಸು ಇದ್ಯಾ ಅಂತಾ   ವಿಚಾರಿಸಿದೆ, ಸಧ್ಯಕ್ಕೆ   ಯಾವ್ದೂ  ಇಲ್ಲಾ  ಅಂದರು  ಅಲ್ಲಿದ್ದ ಟೀ.ಸಿ. , ಇನ್ನೇನು  ಬಸ್ಸು ಹತ್ತಿ ಮಲಗಿ ಬಿಡೋಣ ಅಂತಾ ಲೆಕ್ಕ ಹಾಕಿ    ಟಿಕೆಟ್  ಪಡೆದು ಬಸ್ಸು  ಹತ್ತಿ ಕಿಟಕಿ ಪಕ್ಕ ಕುಳಿತೆ,  ಮೈಸೂರು   ಬಸ್ ನಿಲ್ದಾಣ ಬಿಟ್ಟ ಬಸ್ಸು   ಸ್ವಲ್ಪ ದೂರ  ಬಂದಿತ್ತು, ಸಂತ  ಫಿಲೋಮಿನ  ಚರ್ಚ್  ಸಮೀಪದ ಸರ್ಕಲ್   ತಿರುವಿ ಬಲಕ್ಕೆ  ಹೊರಟಿತ್ತು ಅಷ್ಟೇ   ಧಡ್ ಅಂದ ಶಬ್ದ   , ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದ   ಡ್ರೈವರ್ , ನಾವೆಲ್ಲರೂ ಇಳಿದು ನೋಡಿದ್ರೆ  ರಸ್ತೆ  ಪಕ್ಕದಲ್ಲಿ ನಿಲ್ಲಿಸಿದ್ದ    ಒಂದು ಸಿಟಿ ಬಸ್ಸು  ಈ ಬಸ್ಸು ಬರುವುದನ್ನು ಗಮನಿಸದೆ    ಚಲಿಸಿ,  ನಮ್ಮ ಬಸ್ಸಿನ  ಹಿಂಭಾಗದ  ಎಡ ಪಾರ್ಶ್ವಕ್ಕೆ  ಗುದ್ದಿತ್ತು, ಒಂದೆರಡು ಕ್ಷಣ ಮುಂಜೆ  ಈ ಬಸ್ಸು ಚಲಿಸಿದ್ದರೆ   ನಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ   ತೊಂದ್ರೆ   ಆಗ್ತಾ ಇತ್ತು,   ಬಸ್ಸಿನಿಂದ ಇಳಿದು   ವಾಪಸ್ಸು ಹೊರತು ಹೋಗೋಣಾ  ಅಂತಾ  ಮನಸಾಯಿತು, ಆದ್ರೆ  ಇನ್ನೊಂದು ಮನಸು   ಅಯ್ಯೋ  ವಿಚಿತ್ರ ಕಣಯ್ಯ  ನೀನು  ಇಂತಹ ಸಣ್ಣ ಪುಟ್ಟ ಘಟನೆ ಆಗ್ತಾ ಇರುತ್ತೆ  ಇದನ್ನೆಲ್ಲಾ ಅಪಶಕುನಾ  ಅಂತಾ  ಭಾವಿಸಿದರೆ  ಜೀವನ ನಡೆಸೋದೆ ಕಷ್ಟಾ  ,  ನಡೀ. ನಡೀ, ಬಸ್ಸು ಹತ್ತು ಅಂತಾ ಪ್ರೇರೇಪಿಸಿಯ್ತು, ಅಷ್ಟರಲ್ಲಿ   ಎರಡೂ ಬಸ್ಸಿನವರು ರಾಜಿಯಾಗಿ  ನಮ್ಮ ಪಯಣ ಸಾಗಿತು.  ಬಸ್ಸಿನಲ್ಲಿ  ನಿದ್ದೆ ಹೊಡೆಯೋಣ  ಅಂದ್ರೆ ಕಿಟಕಿ ಗಾಜಿನ  ಗಡ   ಗಡ  ಸದ್ದಿಗೆ    ಸಾಧ್ಯವೇ ಆಗಲಿಲ್ಲ,  ಒಂದು ಕಡೆ ಬಿಸಿಲಿನ  ತಾಪ ಸಹ  ಕಾಡಿತ್ತು,  ಪ್ರಯಾಣ ಪ್ರಯಾಸವಾಗಿ ಚನ್ನರಾಯ ಪಟ್ಟಣ  ತಲುಪಿದೆ,

ಚನ್ನರಾಯ ಪಟ್ಟಣ  ಮುಖ್ಯ ರಸ್ತೆ 

 ಚನ್ನರಾಯ ಪಟ್ಟಣ  ಬಸ್ ನಿಲ್ದಾಣದಿಂದ  ಶ್ರೀ ಕಾಂತ್ ಗೆ  ಫೋನ್ ಮಾಡಿದ್ರೆ  , "ಸರ್ ಜಿ  ಇಲ್ಲೇ ಇದ್ದೇನೆ   ಬಸ್ ನಿಲ್ದಾಣದ ಮುಂದಿನ ಆಟೋ ಸ್ಟಾಂಡ್ ಬಳಿ ಬನ್ನಿ" ಅಂದ್ರು .   ಹೊರಗೆ ಬಂದ್ರೆ   ಮಾಲಿಕನ ಜೊತೆ ritz ಕಾರು ನಗುತ್ತಾ ನಿಂತಿತ್ತು.   ನಮ್ಮಿಬ್ಬರ ಪಯಣ  ಶುರು  ಆಯ್ತು, ಕಾರು  ಚನ್ನರಾಯ ಪಟ್ಟಣದ  ಕಡೆಯಿಂದ    ಹಾಸನ   ರಸ್ತೆಯಲ್ಲ್ಲಿ  ಸಾಗಿತ್ತು,  ಹೊಟ್ಟೆ   ಹಸಿವಾದ ಕಾರಣ   ದಾರಿಯಲ್ಲಿ  ಸಿಕ್ಕ   ಕಾಮತ್ ಹೋಟೆಲ್ ನಲ್ಲಿ ಭರ್ಜರಿ  ಊಟದ  ಬ್ಯಾಟಿಂಗ್  ನಡೆಸಿ ,  ಶ್ರೀಕಾಂತ್  ಕಸಿನ್   ಅವರ   ಆಶ್ರಮದ    ತೋಟಕ್ಕೆ   ಹೋದೆವು

.
ಭೂಮಿತಾಯಿಯ   ಹಸಿರ ಮಡಿಲಲ್ಲಿ  ಜ್ಞಾನಿಯ ಜೊತೆ 



ದಾರಿಯುದ್ದಕ್ಕೂ  ಈ ಕೀಟಲೆ ಶ್ರೀಕಾಂತ್  ಅವರ ಕಸಿನ್ ಗೆ  ಫೋನ್ ಮಾಡಿ ನಾನು ಒಬ್ಬನೇ ಬರ್ತಾ ಇರೋದಾಗಿ ಹೇಳ್ತಾ ಇದ್ದರು,     , ಕೊನೆಗೆ    ಶ್ರೀಕಾಂತ್   ನನ್ನ ಜೊತೆ  ಇಳಿದದ್ದನ್ನು ಕಂಡು  ಅವರ ಕಸಿನ್ ಅವರಿಗೆ ಬಹಳ ಖುಷಿಯಾಯಿತು,  ಪ್ರೀತಿಯ ಸ್ವಾಗತ , ಪರಸ್ಪರ ಪರಿಚಯ  ಆಯಿತು.  ಸಾಕಷ್ಟು ಮಾತು ಕಥೆ, ಅಲ್ಲಿ ನಡೆದಿದ್ದ   ದಾರ್ಮಿಕ ಚಟುವಟಿಕೆಗಳು ಹಾಗು ಕೃಷಿ ಚಟುವಟಿಕೆಗಳ  ಪರಿಚಯ ಮಾಡಿಕೊಟ್ಟರು . ನಾವೂ ಸಹ ಖುಷಿಯಿಂದ  ಇಡೀ ಜಮೀನಿನಲ್ಲಿ ಓಡಾಡಿದೆವು , ತೆಂಗಿನ  ಗಿಡಗಳಿಗೆ  ನೀರು ಹಾಯಿಸಲು  ಖುಷಿಯಿಂದ  ಹೊರಟೆವು. ಹಾಗೂ ಹೀಗೂ   ಸುಮಾರು ಹೊತ್ತು ಕಳೆದೆವು,  ಶ್ರೀಕಾಂತ್  ಕಸಿನ್ ಅವರಿಂದ  ಪ್ರೀತಿಯಿಂದ  ಬೀಳ್ಕೊಟ್ಟು   ಮತ್ತೆ ಚನ್ನರಾಯ ಪಟ್ಟಣಕ್ಕೆ ಬಂದೆವು,.   "ಸರ್ಜಿ    ಮೈಸೂರಿಗೆ  ಬಂದು ನಿಮ್ಮನ್ನು ಬಿಟ್ಟು ಬೆಂಗಳೂರಿಗೆ ಹೋಗ್ತೇನೆ"  ಅಂತಾ  ಶ್ರೀಕಾಂತ್   ಒತ್ತಾಯ ಶುರು ಮಾಡಿದ್ರು    ಆದರೆ ಮತ್ತೆ  ನನ್ನಿಂದ  ನಯವಾದ ನಿರಾಕರಣೆ,   ಹಾಗು ಹೀಗೂ ಹಗ್ಗ ಜಗ್ಗಾಡಿ ಒಲ್ಲದ ಮನಸಿನಿಂದ   ನನ್ನನ್ನು ಚೆನ್ನರಾಯ ಪಟ್ಟಣದ  ಬಸ್ ನಿಲ್ದಾಣದ  ಮುಂಭಾಗ  ರಸ್ತೆಯಲ್ಲಿ  ಇಳಿಸಿದರು, ಮತ್ತೊಮ್ಮೆ ಶ್ರೀಕಾಂತ್ ಗೆ  ಪ್ರೀತಿಯ  ಹಾರೈಕೆ  ಹೇಳಿದೇ , ಶ್ರೀಕಾಂತ್ ಕಾರು ಬೆಂಗಳೂರಿನ ಕಡೆ  ಹೊರಟಿತ್ತು  ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ, .............!!!  ಅಷ್ಟರಲ್ಲಿ        ...........!!!


 
 ಜೀವನದ  ದೋಣಿ  ಹೊಡೆತಕ್ಕೆ ಸಿಕ್ಕಿ   ಅಲುಗಾಡುತ್ತಿತ್ತು, ...........!


Thursday, October 15, 2015

ಮನಸುಗಳನ್ನು ಅರ್ಥ ಮಾಡಿಕೊಳ್ಳದ ನೀವು ಹೋಗಿ ಬನ್ನಿ ನಿಮಗೆ ಶುಭವಾಗಲಿ ......!

ಜೀವನದ ಅಜ್ಞಾನದ  ಕತ್ತಲಿಗೆ  ಜ್ಞಾನ ಹಾಗು  ಪ್ರೀತಿ ವಿಶ್ವಾಸದ  ಬೆಳಕಿನ ಅಗತ್ಯ ಇದೆ

ಸಾಮಾಜಿಕ ತಾಣಗಳಲ್ಲಿ  ಬಹಳಷ್ಟು ಜನ ಸಿಗುತ್ತಾರೆ  ಆದರೆ  ಕೆಲವರು ಮಾತ್ರ  ತಮ್ಮ ಸನ್ನಡತೆಯ ಕಾರಣ  ನಮಗೆ ಬಹಳ ಹತ್ತಿರವಾಗುತ್ತಾರೆ ,   ಇವರನ್ನು ನಾವು ನಮ್ಮ ಮನೆಯ ಜನಗಳು ಎಂಬಂತೆ  ಭಾವಿಸಿ  ವಿಶೇಷ ಸ್ಥಾನ  ನೀಡುತ್ತೇವೆ, ಅವರ ಕಷ್ಟ ಸುಖಗಳಲ್ಲಿ  ಭಾಗಿಯಾಗುತ್ತೇವೆ ಸಹ.  ಇಂತಹವರಲ್ಲೂ ಕೂಡ  ಕೆಲವರು  ನಿಷ್ಕಲ್ಮಶ  ಪ್ರೀತಿಯನ್ನು   ಅರ್ಥ ಮಾಡಿಕೊಳ್ಳದೆ ಸಹೋದರ  ಪ್ರೀತಿಗೆ  ಬೆಂಕಿ ಹಚ್ಚಿ   ದೂರಸರಿದು  ತಾವು ಮಹಾ  ಜ್ಞಾನಿಗಳು ಎಂಬಂತೆ  ನಡೆದುಕೊಳ್ಳುತ್ತಾರೆ . ನನ್ನ ಗೆಳೆಯರಿಗೆ  ಅನುಭವಕ್ಕೆ ಬಂದ ಒಂದೆರಡು ಉದಾಹರಣೆ ಇಲ್ಲಿದೆ ನೋಡಿ.

ಘಟನೆ ೧ :-)  ನನ್ನ ಗೆಳೆಯರೊಬ್ಬರು  ನಿಜಕ್ಕೂ   ಪ್ರೀತಿ ವಿಶ್ವಾಸಕ್ಕೆ  ಹೆಸರುವಾಸಿ,  ನಿಜಕ್ಕೂ  ಅಜಾತ ಶತ್ರುವೇ ಈತ , ಸಾಮಾಜಿಕ ತಾಣದಲ್ಲಿ  ಇವರನ್ನು ಇಷ್ಟಪಡದೆ ಇರಲು ಸಾಧ್ಯವೇ ಇಲ್ಲಾ, ಎಲ್ಲರೊಡನೆ ನಗು ನಗುತ್ತಾ ಬೆರೆತು  ಪ್ರೀತಿ ವಿಶ್ವಾಸ ದಿಂದ ಸಹೋದರ  ಪ್ರೀತಿಗೆ ಹೊಸ ಭಾಷ್ಯ ಬರೆದ  ಮಹನೀಯ,  ಅವರ ಪತ್ನಿ ಹಾಗು ಮಕ್ಕಳೂ ಸಹ  ಇದಕ್ಕೆ ಒತ್ತಾಸೆ ನೀಡುತ್ತಿದ್ದಾರೆ ,   ಸಾಮಾಜಿಕ ತಾಣದ ಹಲವು ಹೆಣ್ಣು ಮಕ್ಕಳು  ಇವರ ಮನೆಯ  ಅಕ್ಕ ತಂಗಿಯರೇ ಆಗಿ ಹೋಗಿದ್ದಾರೆ ,   ಇನ್ನು ಆ ಹೆಣ್ಣುಮಕ್ಕಳು  ಪಟ್ಟಣದ  ಒತ್ತಡದ ಬದುಕಿಗೆ ಹರುಷ ತುಂಬಲು  ನನ್ನ  ಗೆಳೆಯನ ಕುಟುಂಬದೊಡನೆ  ಭೇಟಿ ನೀಡಿ  ಖುಷಿಯಿಂದ ಕಾಲ ಕಳೆದು  ತೆರಳುತ್ತಿದ್ದರು,  ಒಬ್ಬ  ತಂಗ್ಯವ್ವ  ಕೂಡ ಇವರಲ್ಲಿ ಒಬ್ಬಳು  , ಅವಳಿಗೆ ಆರೋಗ್ಯ ಸರಿ ಇಲ್ಲದಾಗ   ತಮ್ಮ ಮನೆಯಲ್ಲಿಯೇ  ಇರಿಸಿಕೊಂಡು  ವೈಧ್ಯಕೀಯ  ಶುಶ್ರೂಷೆ  ಕೊಡಿಸಿ , ಅವಳ ಆರೋಗ್ಯ ಸರಿಹೊಗುವವರೆಗೂ   ಅವಳ ಜೊತೆಯಾಗಿ ನಿಂತು  ತಮ್ಮ ಮಗಳಂತೆ  ಉಪಚಾರ  ಮಾಡಿದ್ದರು , ಯಾವುದೋ ದೂರದ ಊರಿನಿಂದ  ಬಂದಿದ್ದ ಆಕೆ  ಇವರ  ಈ ಕಾರ್ಯಕ್ಕೆ  ಬಹಳ  ಹರುಷ ಗೊಂಡಿದ್ದಳು, ನನ್ನ ಗೆಳೆಯನ ಪತ್ನಿಯನ್ನು ತನ್ನ ತಾಯಿಯಂತೆ ಅನ್ನುತ್ತಾ  ಹೋಗಳಿದ್ದಳು, ಆದರೆ  ಇದ್ದಕಿದ್ದಂತೆ  ಅಚ್ಚರಿ ಎಂಬಂತೆ   ಕಳೆದ  ಕೆಲವು ತಿಂಗಳಿಂದ   ಪಡೆದ ಉಪಕಾರವನ್ನು  ಮರೆತು  , ತನಗೂ ಈ ಮನೆಗೂ  ಯಾವುದೇ  ಸಂಬಂಧವೇ  ಇರಲಿಲ್ಲ ಎನ್ನುವರೀತಿ ನಡೆದುಕೊಳ್ಳುತ್ತಾ  ಇದ್ದಾಳೆ .

ಘಟನೆ ೨ :-) ಇನ್ನು ಮತ್ತೊಬ್ಬ ತಂಗ್ಯವ್ವನ ಕಥೆಯೂ ಇದೆ,  ಈ ಹೆಣ್ಣುಮಗಳು  ಬಹಳ  ದೂರದ  ಊರಿನವಳು , ಬೆಂಗಳೂರಿಗೆ ಬಂದಾಗ ನನ್ನ ಗೆಳೆಯನ ಕುಟುಂಬದ  ಭೇಟಿ ಅವಳ  ತವರು ಮನೆಯಷ್ಟೇ  ಹಿತನೀಡುತ್ತಿತ್ತು , ಮನೆಯವರೆಲ್ಲರೂ ಅವಳನ್ನು ಮನೆಯ ಮಗಳೆಂದು ಭಾವಿಸಿದ್ದರು , ತಮ್ಮ ಕುಟುಂಬದ ಎಲ್ಲರೂ ಆ ಹುಡುಗಿಯ ಜೊತೆ  ಚಿತ್ರವನ್ನು  ತೆಗೆಸಿಕೊಂಡು  ಮನೆಗೆ ಬಂದವರಿಗೆ ತಮ್ಮ ಹೆಮ್ಮೆಯ ಮಗಳೆಂದು  ಹೇಳಿಕೊಳ್ಳುತ್ತಿದ್ದರು , ಕೆಲವೊಮ್ಮೆ ಪ್ರವಾಸಕ್ಕೆ ತಮ್ಮೊಡನೆ ಕರೆದು ಕೊಂಡು ಹೋಗುತ್ತಿದ್ದರು , ಹಾಗೆ ಬರುವಾಗ ಎಷ್ಟೇ ತಡರಾತ್ರಿಯಾದರೂ ಸರಿಯೇ  ಆ ಹುದುಗಿಯನ್ನು  ಅವಳು ಓದುತ್ತಿದ್ದ  ಊರಿನ ಮನೆಗೆ  ಸುರಕ್ಷಿತವಾಗಿ ಬಿಟ್ಟುಬರುತ್ತಿದ್ದರು , ಕೆಲವೊಮ್ಮೆ ನನ್ನ ಗೆಳೆಯ ತನ್ನ ಕುಟುಂಬದೊಡನೆ  ಇದಕ್ಕಾಗಿ ರಾತ್ರಿಯಿಡೀ  ಕಾರನ್ನು ಚಲಾಯಿಸಿಕೊಂಡು  ಹೋಗಿ  ಆ ಮಗಳನ್ನು  ಬಿಟ್ಟು ಬಂದಿದ್ದಾನೆ , ವಾರಕ್ಕೆ ಒಂದೆರಡು ಬಾರಿ ಅವಳು ಫೋನ್ ಮಾಡದೆ ಇದ್ದರೆ  ಏನಾಯ್ತೋ ಎಂಬಂತೆ ಆ ಕುಟುಂಬ ತಾವೇ ಫೋನ್  ಮಾಡಿ ಅವಳ ಯೋಗಕ್ಷೇಮ  ವಿಚಾರಿಸಿದ್ದು ಸಹ ಉಂಟು,   ಅವಳ ತಮ್ಮನಿಗೆ  ಮತ್ತೊಂದು ಊರಿನಲ್ಲಿ  ದೊರೆತ ಸನ್ಮಾನದ  ಕಾರ್ಯಕ್ರಮದ   ವೀಡಿಯೊ  ಸಿ.ಡಿ  ದೊರಕಿಸಿಕೊಡಲು , ಅವಳ ಕೋರಿಕೆಯ ಮೇರೆಗೆ  ನೂರಾರು ಮೈಲು ಕಾರು ಮಾಡಿಕೊಂಡು  ಹೋಗಿ ಸಾಹಸ ಪಟ್ಟು ವೀಡಿಯೊ  ಸಿ.ಡಿ ಗೆ ತಾನೇ ಹಣ ಪಾವತಿಸಿ  ಅವಳಿಗೆ ತಲುಪಿಸಿದ್ದಾನೆ ,     ಆದರೆ ಇದೂ  ಸಹ ಅದೇ  ರಾಗ ಆಯ್ತು  ಈಕೆಯೂ ಸಹ   ಸಹೋದರ ಪ್ರೀತಿ ಹಾಗು ಒಂದು ಕುಟುಂಬದ  ವಿಶ್ವಾಸವನ್ನು  ಧಿಕ್ಕರಿಸಿ  , ತನಗೂ ಆ ಕುಟುಂಬಕ್ಕೂ  ಪರಿಚಯವೆ  ಇಲ್ಲ ಅನ್ನುವಂತೆ  ಇದ್ದಾಳೆ.




ಮೇಲಿನ ಎರಡು ಘಟನೆಗಳು  ನಿಜಕ್ಕೂ ಅಚ್ಚರಿ ಮೂಡಿಸಿದ  ವಿಚಾರಗಳು , ಸಾಮಾಜಿಕ ತಾಣದಲ್ಲಿನ   ಇಂತಹ  ವ್ಯಕ್ತಿಗಳು ಹೀಗೇಕೆ ?   ಎಂಬ ಪ್ರಶ್ನೆಗೆ ಉತ್ತರ  ಸಹ ದೊರೆಯುತ್ತಿಲ್ಲ,  ಇನ್ನು ನನ್ನ ಗೆಳೆಯನ ನಡತೆ ಬಗ್ಗೆ ಎರಡು ಮಾತಿಲ್ಲ ಅದು  ನನ್ನ ಗೆಳೆಯರ ಬಳಗದಲ್ಲಿರುವ  ನೂರಾರು  ಸಹೋದರ ಸಹೋದರಿಯರಿಗೆ ಗೊತ್ತಿರುವ ವಿಚಾರ . ಅವರೆಲ್ಲರೂ ಸಹ ಈ ವಿಚಾರದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ  ಇದೆಲ್ಲದರ ನಡುವೆಯೂ  ಸಾಮಾಜಿಕ ತಾಣದಲ್ಲಿ ದೊರೆತ  ಸಹೋದರಿಯರ  ವಿಚಾರದಲ್ಲಿ  ನನ್ನ ಗೆಳೆಯನ  ಪ್ರೀತಿ ವಾತ್ಸಲ್ಯ ಕಡಿಮೆಯಾಗಿಲ್ಲ , .    ಯಾಕ್ರೀ ಹೀಗೆ ಅಂತಾ ಕೇಳಿದ್ರೆ ಅದೇ ನಗುವಿನ ಉತ್ತರ   ಸಹೃದಯ ಪ್ರೀತಿಗೆ  ಸಾವಿಲ್ಲಾ   ಸರ್ಜಿ ,  ಅವರ ಮೇಲೆ ನಿಜಕ್ಕೂ ಕೊಪವಿಲ್ಲಾ  ಆದರೆ  ಮನಸಿನಲ್ಲಿ  ಒಂದೆಡೆ ನೋವಿರುತ್ತೆ ಅದಕ್ಕೆ  ವೆಂಗ್ಯದ  ನಗೆ ನಕ್ಕು ನನ್ನ ಕೆಲಸ ಮುಂದುವರೆಸುವೆ ಅಷ್ಟೇ ,  ಪ್ರೀತಿ ವಾತ್ಸಲ್ಯ  ಬಯಸಿದಾಗ ಕೊಡೋದು ತಪ್ಪಲ್ಲ , ಆದರೆ ಉಳಿಸಿಕೊಳ್ಳೋದು  ನಮ್ಮ  ನಮ್ಮ ಅರಿವಿಗೆ ಬಿಟ್ಟ ವಿಚಾರ ಅಂದರು .  ನನಗಂತೂ  ಪ್ರೀತಿಯ ಗೆಳೆಯನ  ಹೃದಯ ವೈಶಾಲ್ಯತೆಯ  ದರ್ಶನ ಆಯ್ತು .  ನನ್ನೊಳಗಿನ ಮನಸು   ಕೂಗಿ ಕೂಗಿ ಹೇಳ್ತಾ  ಇತ್ತು   ," ಸಾಮಾಜಿಕ ತಾಣದ ಮಹಾನ್  ಗೆಳೆಯರೇ   ನೀವು ಯಾರೇ ಆಗಿರಿ ಮೊದಲು ಪ್ರೀತಿ ವಾತ್ಸಲ್ಯಕ್ಕೆ  ಗೌರವಕೊಟ್ಟು ವಿಶ್ವಾಸ  ಉಳಿಸಿಕೊಳ್ಳಿ,  ಇಲ್ಲದಿದ್ದಲ್ಲಿ ಮನಸುಗಳನ್ನು ಅರ್ಥ  ಮಾಡಿಕೊಳ್ಳದ  ನೀವು ಹೋಗಿ ಬನ್ನಿ  ನಿಮಗೆ ಶುಭವಾಗಲಿ ......! "  ಈ ಮಾತು ಎಷ್ಟು ನಿಜಾ ಆಲ್ವಾ,



Saturday, July 18, 2015

ಹೇಳು ಗೆಳತಿ ಈ ಪ್ರೀತಿಗೆ ಏನೆಂದು ಕರೆಯೋಣ ...? ದಿನಕರ್ ಮೊಗೆರ ಅವರ ಮುಂದುವರೆದ ಎರಡನೆ ಭಾಗ ನಿನಗಾಗಿ .....!


ಹೇಳು  ಗೆಳತಿ  ಈ ಪ್ರೀತಿಗೆ  ಏನೆಂದು ಕರೆಯೋಣ ...? 
 

ಇವತ್ಯಾಕೋ  ಎಲ್ಲೋ ಹೋಗಲು ಮನಸಾಗಲಿಲ್ಲ , ಹೊರಗಡೆ  ತುಂತುರು ಮಳೆ,   ಹೊರಗಡೆಯ ಎಲ್ಲಾ ಕೆಲಸಕ್ಕೆ ತಡೆಹಾಕಿ ಮನೆಯೊಳಗೇ ಕುಳಿತೆ,  
"ಚಿನ್ನು   ಇವತ್ತು  ಮನೇಲೆ ಇರ್ತೇನೆ  ಏನಾದ್ರೂ ಸ್ಪೆಶಲ್  ಮಾಡೇ ", ಅಂದೇ ,   
"ಏನು ರಾಯರು  ಇವತ್ತು  ಬಹಳ ಹರುಷದಲ್ಲಿ ಇದ್ದೀರಾ  ಏನ್ ಸಮಾಚಾರ   , ಹೊರಗಡೆಯ  ತುಂತುರು ಮಳೆಯ   ಸಿಂಚನದ  ಸೂಚನೆ ಮನೆಯೊಳಗೂ ಕಾಣೋ  ಹಾಗಿದೆ ,   ಹುಶಾರಪ್ಪಾ   ಒಳಗಡೆ ವಾತಾವರಣ  ಈಗ ಇರೋ ಹಾಗೆ ಇರಲಿ   ಯಾವುದೇ  ಬದಲಾವಣೆ ಬೇಡ"  ಅಂತಾ  ಪ್ರೀತಿ ತುಂಬಿದ  ಎಚ್ಚರಿಕೆ  ನೀಡಿ  ಒಳಗಡೆ  ಪಾತ್ರೆಗೆ  ಮೊಗಚೋಕೈ ಯನ್ನು  ಟಣ್ ಟಣ್  ಅಂತಾ  ಬಡಿದಳು .
 ನನ್ನ  ಮಡದಿಯ ಸ್ವಭಾವವೇ ಹಾಗೆ  ಮನೆಯಲ್ಲಿ ಶಿಸ್ತಿನ  ಕಾನೂನು  ತರುವ ಮೊದಲು  ಹೀಗೆ ಸೂಚನೆ ನೀಡುತ್ತಾಳೆ .   ಕಳೆದ ಇಪ್ಪತೈದು ವರ್ಷದಿಂದ ಅವಳ ಜೊತೆ  ಬಾಳ ಪಯಣ ಸಾಗಿಸಿದ ನನಗೆ  ಅವಳು  ಅಂದರೆ ನನ್ನ ಮಡದಿ  ರೇವತಿ  ನನ್ನ ಜೀವನದ  ನ್ಯಾಯಾಧೀಶೆಯೂ ಹೌದು  ನನ್ನ  ಪ್ರೀತಿಯ  ಸಾಮ್ರಾಜ್ಯದ  ಒಡತಿಯೂ ಹೌದು ...   ಸಾವರಿಸಿಕೊಂಡ  ನಾನು  "ನೋಡು ಚಿನ್ನ  ಅಪರೂಪಕ್ಕೆ  ಮನೆಯಲ್ಲಿರುವ  ಅವಕಾಶ ವರುಣದೇವ  ಕರುಣಿಸಿದ್ದಾನೆ  ಇವತ್ತಾದರೂ   ಜೊತೆ ಜೊತೆಯಾಗಿ  ಹಾಯಾಗಿ  ಯುಗಳ ಗೀತೆ  ಹಾಡೋಣ ಬಾ  ಅಂದೇ ,

"ತಕ್ಷಣ  ಅಡಿಗೆ ಮನೆಯಿಂದ   ಟಣ್ ಟಣ್ ,ಟಣ್ ಟಣ್ ,ಟಣ್ ಟಣ್  ಅಂತಾ  ಸೂಚನೆ ನೀಡಿ ,  "ಅಯ್ಯೋ ರಾಮ ವಯಸ್ಸಾಯಿತು  ಚಪಲಾ ಮಾತ್ರ  ಬಿಡೋಲ್ಲಾ  ನೀವು ಅಂತಾ  , ಸಧ್ಯಕ್ಕೆ   ಒಬ್ಬರೇ ಹಾಡಿಕೊಳ್ಳಿ ,"   ಅಂತಾ  ನಸು ನಕ್ಕು ,  ನಕ್ಕೋ ನಕ್ಕೋ ಅಂದ್ಲೂ ,

ಇಂಗು ತಿಂದ  ಮಂಗನಂತೆ  ನಾನು ಹೋಗ್ಲಿ  ಬಿಡೂ  ಚಿನ್ನೂ  ಅಂತಾ   ಹೇಳಿ ,
ಥೂ  ಹಾಳಾದ  ಮಳೆ ಅಂತಾ  ಶಪಿಸುತ್ತಾ  ಪಕ್ಕದಲ್ಲೇ ಇದ್ದ   ಸಿ. ಡಿ . ಪ್ಲೇಯರ್  ಹಾಕಿದರೆ  ಇದು ಯಾರು ಬರೆದ  ಕಥೆಯೋ ಅಂತಾ  ಹಾಡು ಶುರು ಆಯ್ತು,   ಕೋಪದಿಂದ  ಅರೆ ಇಸ್ಕಿ  ಅಂತಾ   ಸಿ. ಡಿ . ಪ್ಲೇಯರ್  ನೋಡಿದೆ , ಆದರೆ ಪ್ರಯೋಜನ ಆಗಲಿಲ್ಲ .   ಮತ್ತೆ ನನ್ನ ಮೆಚ್ಚಿನ   ಸಿ. ಡಿ .   ಹಾಕಿ  ಹಳೆಯ ಪ್ರೇಮ ಗೀತೆಗಳನ್ನು ಕೇಳುತ್ತಾ   ಮರೆತುಹೋಗಿದ್ದ  ಕನಸುಗಳಿಗೆ  ಮತ್ತೊಮ್ಮೆ  ಬಣ್ಣ  ತುಂಬುತ್ತಾ  ಕುಳಿತೆ.
ಅಪ್ಪಾ  ಅಪ್ಪಾ  ಅಂತಾ  ಬಂದ  ಮಗ  ಸೂರ್ಯ ,   ಏನಯ್ಯಾ  ಇವತ್ತು   ಹೋಗಲಿಲ್ವಾ   ಮಗನೇ ಆಫೀಸ್ ಗೆ ಅಂದೇ  ,
"ಅಪ್ಪಾ   ನಿಮ್ಮ ಹತ್ತಿರ  ಒಂದು  ವಿಚಾರ ಮಾತನಾಡಬೇಕು  ಅದಕ್ಕೆ ಬೇಗ ಬಂದೆ ,  ಕಳೆದ ಒಂದುವಾರದಿಂದ  ಈ ವಿಚಾರ ತಿಳಿಸಲು   ನನಗೆ ಅವಕಾಶ  ಸಿಕ್ಕಿರಲಿಲ್ಲ  ಅದಕ್ಕೆ ಇವತ್ತು  ನಿಮ್ಮ ಬಳಿ  ಬಂದೆ"  ಅನ್ನುತ್ತಾ   ನನ್ನ ಭುಜದ ಮೇಲೆ ಕೈ ಹಾಕಿ  ಅಪ್ಪಿಕೊಂಡ ,

 ಈ ನನ್ನ ಮಗ ಸೂರ್ಯನೇ ಹಾಗೆ   ಬಹಳ ವಿಚಿತ್ರದ ಹುಡುಗ , ಒಮ್ಮೊಮ್ಮೆ ಇವನು ನನಗೆ ಮಗನೋ ಅಥವಾ  ನಾನು ಇವನ ಮಗನೋ ಎನ್ನುವ ಹಾಗೆ ಮಾಡಿಬಿಡುತ್ತಾನೆ ,  ಅಂದು ಬರುತ್ತಿದ್ದ  ಕಡಿಮೆ ಆದಾಯಕ್ಕೆ  ಹೆಚ್ಚು ಮಕ್ಕಳು ಬೇಡ ಅಂತಾ  ಅಂದುಕೊಂಡು  ಹೆಣ್ಣಾಗಲಿ ಗಂಡಾಗಲಿ  ಒಂದೇ ಮಗು ಸಾಕು  ಎಂದು ತೀರ್ಮಾನಿಸಿದ ನನ್ನ ಹಾಗು ನನ್ನ ಮಡದಿ  ರೇವತಿಯ   ದಾಂಪತ್ಯದ    ಸಾಕ್ಷಿಯಾಗಿ  ಜನಿಸಿದ  ಮಗು ಇದು , ಇಂದು ನನ್ನನ್ನು  ಮೀರಿ ಬೆಳೆದು   ನನ್ನನ್ನು ತನ್ನ ಪ್ರೀತಿಯ  ಬಲೆಯಲ್ಲಿ   ಬಂಧಿಸಿ  ಮಗನಿಗಿಂತ  ಹೆಚ್ಚಾಗಿ ಗೆಳೆಯನಾಗಿ   ನನ್ನ ಕಣ್ಮಣಿ ಯಾಗಿದ್ದಾನೆ . ನಮ್ಮ ಕುಟುಂಬದಲ್ಲಿ   ಅಪ್ಪಾ, ಅಮ್ಮಾ  ಮಗ ಎನ್ನುವ  ಗಡಿಮೀರಿ  ಎಲ್ಲಾ ವಿಚಾರಗಳು  ಚರ್ಚೆಯಾಗುತ್ತವೆ .
"ಲೇ ಸೂರ್ಯ  ಬಾರೋ ಅದೇನು ವಿಚಾರ ಹೇಳಯ್ಯ " ಅಂದೇ,  ಪ್ರೀತಿಯಿಂದ  ಅವನ ಮುಖ  ನೋಡುತ್ತಾ ,
"ಏನಿಲ್ಲಾ  ಅಪ್ಪಾ  ನಾನು  ನಾನು   ಮದುವೇ ಆಗೋಣಾ ಅಂತಾ
ತೀರ್ಮಾನಿಸಿದ್ದೇನೆ  ,"   ಅನ್ನುತ್ತಾ   ....... ನಗುತ್ತಾ  ನಿಂತಾ .

 ನನಗೆ ಅಚ್ಚರಿ  "ಅಲ್ಲಯ್ಯ  ಮೊನ್ನೆ ತಾನೇ  ಮದುವೇ  ಆಗಲ್ಲಾ  ಅಂತಾ  ಉಪನ್ಯಾಸ  ಕೊಟ್ಟೆ  ಅದೇನಪ್ಪಾ  ಇಷ್ಟು ಬೇಗ ಬದಲಾವಣೆ ",  
"ಲೇ  ಚಿನ್ನು  ನೋಡೇ ನಿನ್  ಮಗಾ  ಮದುವೇ  ಆಗ್ತಾನಂತೆ"  ಅಂದೇ ,
 ಆ  ಹೌದೇನೋ ರಾಜಾ  ಅಂತಾ ಓಡಿಬಂದಳು  ರೇವತಿ ,
ಹೌದಮ್ಮಾ  ಮದುವೇ  ಆಗ್ತೀನಿ  ಅಂದಾ , ಸೂರ್ಯ    

 ಸರಿ  ಬಿಡೂ  ಹಾಗಿದ್ರೆ  ಹುಡುಗಿ ಹುಡುಕಲು ಶುರು ಮಾಡ್ತೇವೆ  ನಾಳೆಯಿಂದಲೇ  ಅಂತಾ  ನಾನು  ಅನ್ನುವಷ್ಟರಲ್ಲಿ,   ರೇವತಿ ರೀ ಸುಮ್ಮನೆ ಇರ್ರೀ   ಈ ಕಾಲದಲ್ಲಿ ಅಷ್ಟು ಸುಲಭ ಅಲ್ಲಾ  ಹೆಣ್ಣುಮಕ್ಕಳು ಸಿಗೋದು  ಸರಿಯಾಗಿ ನೋಡಿ ತರೋಣ  ಅಂದಳು ,

"ಅಯ್ಯೋ ಅಪ್ಪಾ  ಅಮ್ಮ ಸರಿಯಾಗಿ ಕೇಳಿ  , ನಿಮ್ಮಿಬ್ಬರಿಗೂ ಎಷ್ಟು ಪ್ರೀತಿಯಿದೆ ನನ್ನ ಮೇಲೆ ಅಂತಾ  ಗೊತ್ತು  ಅದಕ್ಕೆ  ಈ ಮನೆಗೆ  ಸರಿಯಾಗಿ ಹೊಂದಿಕೊಳ್ಳಲು  ಸೂಕ್ತವಾದ  ಹುಡುಗಿಯನ್ನು ನಾನೇ ಆಯ್ಕೆ ಮಾಡಿಕೊಂಡಿದ್ದೇನೆ ನಿಮ್ಮ ಒಪ್ಪಿಗೆ ಮಾತ್ರ ಬೇಕು"  ಅಂದಾ ಸೂರ್ಯ ,

ಒಂದು ಕ್ಷಣಕ್ಕೆ  ನಾನು ಹಾಗು ರೇವತಿ  ಬೆಚ್ಚಿಬಿದ್ದೆವು,  ಆದರೆ ಏನೂ ಮಾಡುವ ಹಾಗಿಲ್ಲಾ , ಈ ವಿಚಾರ ವಿರೋಧ ಮಾಡಿದ್ರೆ  ಇಂದಿನ ಮಕ್ಕಳು  ತಾವೇ  ಯಾರನ್ನು ಲೆಕ್ಕಿಸದೆ  ಮುಂದುವರೆಯುತ್ತವೆ  ಎಂಬ ಸತ್ಯದ  ಮನವರಿಕೆ ಆಗಿ  ಕಣ್ಣಲ್ಲೇ ಮಾತನಾಡಿಕೊಂಡು  ,  "ನೋಡಯ್ಯ  ಸೂರ್ಯ ಮೊದಲು ಹುಡುಗಿಯನ್ನು ಕರೆದುಕೊಂಡು  ಬಾ  ಒಮ್ಮೆ ಅವಳ ಜೊತೆ ಮಾತನಾಡುತ್ತೇವೆ  ನಂತರ  ಮುಂದಿನ ಮಾತು" ಅಂದೆವು, 

 ಮಗ  ಅಯ್ಯೋ ಅಪ್ಪಾ ಅಮ್ಮಾ  ತಾಳಿ ಒಂದು ನಿಮಿಷ ಅಂತಾ  ಹೇಳಿ , ತನ್ನ ಕಾರಿನತ್ತ ಹೋಗಿ   ಒಂದು ಹುಡುಗಿಯನ್ನು  ಮನೆಗೆ ಕರೆತಂದ ,  ಒಳಗೆ ಬಂದ  ಆ ಹುಡುಗಿ  ತನ್ನ ಶಿರ ಭಾಗಿಸಿ  ನಮ್ಮಿಬ್ಬರ  ಪಾದ  ಸ್ಪರ್ಶಿಸಿ  ಆಶೀರ್ವಾದ ಬೇಡಿದಳು .  ಅಣ್ಣಾ  ಹಾಗು ಅಮ್ಮಾ  ನನ್ನ ಹೆಸರು ಪ್ರಿಯದರ್ಶಿನಿ  ಅಂದಳು   ಯಾಕೋ ಗೊತ್ತಿಲ್ಲಾ  ಆ ಹುಡುಗಿ ನೋಡಿದ ತಕ್ಷಣ  ಈ ಹುಡುಗಿ ನಮ್ಮ ಮನೆಯವಳೇ ಎಂಬ ಭಾವನೆ  ಮೂಡಿತು .  ಪಾದರಸದಂತೆ  ಮನೆಯೆಲ್ಲಾ  ಓಡಾಡಿದ  ಆ ಹುಡುಗಿ ಯಾಕೋ ಗೊತ್ತಿಲ್ಲಾ  ನನ್ನ ಹಾಗು ರೇವತಿಯ  ಮನಗೆದ್ದುಬಿಟ್ಟಳು .

ಅದು ಇದೂ ಮಾತನಾಡುತ್ತಾ   ನಿಮ್ಮ ಅಪ್ಪಾ ಅಮ್ಮಾ  ಎಲ್ಲಿದ್ದಾರೆ  ಕರೆದುಕೊಂಡು ಬಾರಮ್ಮಾ  ಅಂದೆವು, ಅಯ್ಯೋ ಅಣ್ಣಾ  ಇವತ್ತೇ ಸಂಜೆ ನಿಮ್ಮ ಮನೆಗೆ ಬರ್ತಾ ಇದ್ದಾರೆ  ತಾಳಿ ಈಗಲೇ  ಫೋನ್ ಮಾಡ್ತೀನಿ  ಅಂತಾ ಹೇಳಿ  ಬಹಳ ಖುಷಿಯಿಂದ  ನಮ್ಮಿಬ್ಬರ ಬಗ್ಗೆ ತನ್ನ ಅಪ್ಪಾ ಅಮ್ಮನಿಗೆ ಹೇಳಿ   ಬೇಗ ಬರುವಂತೆ   ಹೇಳಿದಳು,  ಮನೆಯಲ್ಲಿ   ಸಂಜೆಗೆ ಸಿದ್ದತೆ ನಡೆಯುತ್ತಿತ್ತು ,  ರೇವತಿಯ ಜೊತೆ ಪ್ರಿಯದರ್ಶಿನಿ ಕೂಡ  ಸೇರಿಕೊಂಡು   ಅಡಿಗೆಮನೆಯಲ್ಲಿ  ತಿನಿಸಿನ  ತಯಾರಿಕೆ  ನಡೆಸಿದರು,  ಅಡಿಗೆ ಮನೆಯಿಂದ  ನಗುವಿನ ಅಲೆ  ತೇಲಿಬರುತ್ತಿತ್ತು,  ಇತ್ತ ಮಗ    ಯಾವುದೋ ಕಾಲ್ ಇದೆ ಅಂತಾ  ತನ್ನ  ಕೋಣೆಯಲ್ಲಿ  ಲಾಪ್ಟಾಪ್  ಹಿಡಿದು ಕುಳಿತ ,
ಬೇಗ ಕೆಲಸ ಮುಗಿಸಿದ ಪ್ರಿಯ ದರ್ಶಿನಿ   ತಾನೂ ಸಹ ಸೂರ್ಯನ  ಕೋಣೆ  ಸೇರಿ  ಅವನ  ಕಾರ್ಯ ನೋಡುತ್ತಾ ಕುಳಿತಳು  ಹಾಸ್ಯದ  ಪಿಸು ಪಿಸು ಮಾತುಗಳು   ಅಲೆ ಅಲೆಯಾಗಿ   ಕೋಣೆಯೊಳಗೆ ಸುಳಿದಾಡುತ್ತಿದ್ದವು,   ಇತ್ತಾ   ನನ್ನ ಪಕ್ಕದ  ಸಿ. ಡಿ . ಪ್ಲೇಯರ್  ನಿಂದ  ಹೊಸ ಬೆಳಕು ಮೂಡುತಿದೆ ಅಂತಾ  ರಾಜಕುಮಾರ್  ಹಾಡುತ್ತಿದ್ದರು.


  ಸಂಜೆ  ಪ್ರಿಯದರ್ಶಿನಿಯ  ಅಪ್ಪಾ ಅಮ್ಮನ  ಸ್ವಾಗತಕ್ಕೆ ನಾವೆಲ್ಲಾ  ಸಿದ್ದರಾದೆವು,  ಅಂದುಕೊಂಡಂತೆ  ನಿಗದಿತ ಸಮಯ  ಆರು ಘಂಟೆಗೆ  ಮನೆಯ ಮುಂದೆ ಕಾರ್  ಬಂತು  ,  ಅದರಿಂದ  ಇಬ್ಬರು  ಮಧ್ಯ ವಯಸ್ಕ ದಂಪತಿಗಳು  ಇಳಿದರು,  ಹೇಳಿ ಮಾಡಿಸಿದ ಜೋಡಿ ದೂರದಲ್ಲಿ ನಡೆದು ಬರುತ್ತಿತ್ತು,  ನನ್ನವಳು  ಬಹಳ ಸಂತೋಷದಿಂದ ಅವರನ್ನು ಬರಮಾಡಿಕೊಂಡಳು ,  ಮನೆಯೊಳಗೇ ಬಂದು  ಕುಳಿತರು    ಪ್ರಿಯದರ್ಶಿನಿಯ  ಅಪ್ಪ ಅಮ್ಮ ,    ಯಾಕೋ ಮನದಲ್ಲಿ ದುಗುಡ  ಹೇಳಿಕೊಳ್ಳದ   ಅನುಭವ  ಆಗಲು ಶುರು ಆಯ್ತು, 
ಪ್ರಿಯದರ್ಶಿನಿ  ತನ್ನ ತಂದೆಯನ್ನು ಪರಿಚಯಿಸುತ್ತಾ  ಅಣ್ಣ  ಇವರು ನನ್ನ  ತಂದೆ  ಸಂಜೀವರಾಯರು  , ಅಂದಳು  ಅವರ ಕೈಯನ್ನು ಪ್ರೀತಿಯಿಂದ  ಕುಲುಕಿದೆ ,  ನಂತರ ಅಣ್ಣಾ  ಇವರು ನನ್ನ ಅಮ್ಮಾ   "ಯಶಸ್ವಿನಿ "  ಅಂದಳು   ನಮಸ್ಕಾರ ಎನ್ನುತ್ತಾ  ಪ್ರಿಯದರ್ಶಿನಿ ಅಮ್ಮನ ಕಡೆ ನೋಡಿದೆ , ನನ್ನ ಎದೆ ದಸಕ್  ಎಂದಿತು , ಯಾಂತ್ರಿಕವಾಗಿ ಕೈಮುಗಿದು    ನನ್ನ  ಕುರ್ಚಿಯಲ್ಲಿ  ಆಸಿನನಾದೆ.   ಯಾಂತ್ರಿಕವಾಗಿ  ಮಾತು ಕಥೆಗಳು ನಡೆದವು  , ಮತ್ತೊಮ್ಮೆ ಎಲ್ಲರೂ ಸೇರಿ ಮಾತನಾಡೋಣ ಎನ್ನುತ್ತಾ  ಎಲ್ಲರೂ ಪರಸ್ಪರ  ಮೊಬೈಲ್ ಫೋನ್ ನಂಬರ್ಗಳನ್ನು  ವಿನಿಮಯ ಮಾಡಿಕೊಂಡೆವು,   ಪ್ರಿಯದರ್ಶಿನಿ  ಹಾಗು ಅವರ ಮನೆಯವರು  ಹೊರಟರು .

ಒಬ್ಬನೇ ಕುಳಿತೆ   ಯಾಕೋ ಹಿತವೆನಿಸಲಿಲ್ಲ    ನನ್ನಲ್ಲಿ ಯಾರಿಗೂ ಹೇಳಿಕೊಳ್ಳಲಾಗದ  ಸಂಕಟ  ಶುರುಆಗಿತ್ತು ಮಹಡಿಯ ಮೇಲೆ ನನ್ನ   ಕೋಣೆಗೆ  ಬಂದು  ಬಾಗಿಲು  ಹಾಕಿಕೊಂಡು  ಕುಳಿತೆ ,  ಜೀವನದಲ್ಲಿ  ಕಳೆದುಕೊಂಡು  ಚೂರಾಗಿದ್ದ   ಕನಸುಗಳು  ಮತ್ತೊಮ್ಮೆ  ಬಣ್ಣ  ಬಳಿದುಕೊಂಡು  ನನ್ನ ಸುತ್ತಾ  ಗಿರಕಿ ಹೊಡೆಯಲು  ಶುರು ಮಾಡಿದವು,  ಅರೆ ಅವಳು  ಯಾಕೆ ಮತ್ತೆ ಬಂದಳು ,   ಅಯ್ಯೋ ದೇವ್ರೇ  ಎಂತಹ  ಪರೀಕ್ಷೆ  ತಂದು  ಬಿಟ್ಟೆಯಪ್ಪಾ ,  ಅಲ್ಲಾ  ಅವಳಿಗಾದರೂ  ಬುದ್ದಿ ಬೇಡವಾ , ಇವತ್ತು  ನನ್ನ ಪರಿಚಯವೇ ಇಲ್ಲದಂತೆ  ನಾಟಕ ಮಾಡಿಬಿಟ್ಟಳಲ್ಲ,  ಅಂತಾ ಯೋಚಿಸುತ್ತಾ   ಹಾಸಿಗೆ ಮೇಲೆ  ಉರುಳಿಕೊಂಡೆ  ,


ಕಾಲೇಜಿನ ದಿನದಲ್ಲಿ   ಯಶಸ್ವಿನಿ  ಎಂಬ  ಹುಡುಗಿಯ ಜೊತೆ   ನಡೆದ ಪ್ರೇಮ ಪ್ರಸಂಗ  ನೆನಪಾಯ್ತು,  ಅ ದಿನಗಳು   ನನ್ನ ಪಾಲಿನ  ಸುಂದರ  ಕನಸುಗಳೇ  ಸರಿ  ಓದುತ್ತಾ  ಓದುತ್ತಾ   ಕಾಲೇಜಿನಲ್ಲಿ  ಅಂಕ ಗಳಿಸುವಲ್ಲಿ ಪೈಪೋಟಿ  ನಡೆಸಿ  ಒಟ್ಟಿಗೆ    ಅಧಿಕಾರಿಗಳಾಗಿ  ಒಂದೇ ಸಂಸ್ಥೆಗೆ   ಸೇರಿಕೊಂಡೆವು,  ಆದರೆ  ಕೆಲಸದಲ್ಲಿಯೂ ಕೂಡ ಅದೇ ಪೈಪೋಟಿ  ಮುಂದುವರೆದು    ಇಬ್ಬರು ಉನ್ನತ ಸ್ಥಾನ ಪಡೆದೆವು,   ಇಬ್ಬರೂ ಜೊತೆಯಾಗಿ ಕೆಲಸ ಮಾಡುವಾಗ   ಅಷ್ಟಾಗಿ  ಹತ್ತಿರವಾಗದ ನಾವು   ಬೇರೆಡೆಗೆ  ವರ್ಗ ಆದಾಗ  ಸಂಕಟ ಪಟ್ಟೆವು, ಆ  ವಿದಾಯದ  ಸಮಯದಲ್ಲಿ  ಓಡಿಬಂದ  ಯಶಸ್ವಿನಿ   ತನ್ನ ಪ್ರೀತಿಯನ್ನು  ಹೇಳಿಕೊಂಡಳು , ನಾನೂ ಸಹ  ಒಪ್ಪಿಕೊಂಡು  ನನ್ನ ಬಾಳ  ಸಂಗಾತಿಯನ್ನಾಗಿ ಮಾಡಿಕೊಳ್ಳುವ  ನಿರ್ಧಾರ ಮಾಡಿದ್ದೆ ,  ಒಂದೆರಡು  ವರ್ಷ ನಮ್ಮಿಬ್ಬರ  ಪ್ರೇಮ ಕಾವ್ಯದ ದಿನಗಳು ಸ್ವರ್ಗವನ್ನು  ನಾಚಿಸಿದ್ದವು ,  ನಮ್ಮಿಬ್ಬರ ಪ್ರೇಮ ಪಯಣದಲ್ಲಿ  ಪ್ರೀತಿ ಎಂಬ ಸೂರ್ಯನ ಕಿರಣಗಳು   ಆಸೆ ಎಂಬ ಮಂಜಿನ ಹನಿಯ   ಬಯಕೆಯನ್ನು ನೀಗಿಸಿದ್ದವು, ಇಬ್ಬರೂ ಒಟ್ಟಾಗಿ  ಸಪ್ಥವರ್ಣಗಳ  ಕಾಮನಬಿಲ್ಲಿನ  ಒಡೆಯರಾಗಿ , ಸಪ್ತಪದಿ ತುಳಿಯಲು  ಕಾತರಿಸುತ್ತಿದ್ದೆವು . ......! ಆದರೆ .........?

    ಆದರೆ   ವಿಧಿ ಲಿಖಿತ  ಬೇರೆಯೇ ಆಗಿತ್ತು,  ಅವಳ ಅಪ್ಪಾ  ತೀರಿಕೊಂಡು   ಅವಳ ಅಮ್ಮ ಅನಾರೋಗ್ಯಕ್ಕೆ ಒಳಗಾದ ಕಾರಣ  ಅವರ   ನೆರವಿಗೆ ದಾವಿಸಿದಳು,   ಇಂತಹ ಸಮಯದಲ್ಲಿ   ನಬ್ಬಿಬ್ಬರ ವಿವಾಹದ ಬಗ್ಗೆ ಚರ್ಚೆ ಬೇಡವೆಂದು ಸುಮ್ಮನಾದೆ  ಅಂದು ,

ಕಾಕತಾಳಿಯ ಎಂಬಂತೆ  ಇತ್ತ  ನನ್ನ ಅಪ್ಪ   ಅನಾರೋಗ್ಯಕ್ಕೆ ಒಳಗಾದರು   ಅಪ್ಪನ   ಅನಾರೋಗ್ಯದ ಕಾರಣ  ಕೆಲಸಕ್ಕೆ ರಜಾ  ಹಾಕಿ ಊರು ಸೇರಿದೆ ,   ಅಪ್ಪನ   ಆರೋಗ್ಯ  ಸುಧಾರಿಸಲು    ಬಹಳ  ತಿಂಗಳೇ ಬೇಕಾಯ್ತು ,  ನನ್ನ ಹಾಗು   ಯಶಸ್ವಿನಿ  ಸಂಪರ್ಕವೇ ಇರಲಿಲ್ಲ    ಊರಿನಿಂದ ರಜಾ ಮುಗಿಸಿ ಬರುವ ವೇಳೆಗೆ  ಯಶಸ್ವಿನಿ  ಮದುವೆಯಾಗಿದ್ದಳು ,  ನಂತರ ತಿಳಿದಿದ್ದು   ಅವಳ ಅಮ್ಮನ ಜೀವ ಉಳಿಸಿದ  ವೈಧ್ಯರೊಬ್ಬರು  ಅವಳನ್ನು  ಮದುವೆಯಾದ  ವಿಚಾರ ,  ಮದುವೆಯ ನಂತರ  ಕೆಲಸಕ್ಕೆ ರಾಜಿನಾಮೆ ನೀಡಿ   ಯಶಸ್ವಿನಿ   ಹೊರಟುಹೋದಳು ,  ಹೋಗುವ ಮೊದಲು  "ನೋಡು    ಸಂದೇಶ್   ನಮ್ಮಿಬ್ಬರ   ಬದುಕು  ನಮಗೆ ಇಷ್ಟಾ ಇಲ್ಲದಿದ್ದರೂ   ಹೇಗೆ ತಿರುವುಪಡೆದುಕೊಂಡಿತು , ನಿನ್ನ ತಪ್ಪಿಲ್ಲಾ  ನಮ್ಮಿಬ್ಬರ  ಪ್ರೇಮ ಕಾವ್ಯದಲ್ಲಿ , ಇಷ್ಟುದಿನ  ನಾವು ಕಳೆದ   ಸುಂದರ  ದಿನಗಳನ್ನು ಇಲ್ಲಿಯೇ ಮರೆತು ಬಿಡೋಣ  , ಯಾವತ್ತಿಗೂ ನನ್ನ ನೆನೆದು ನಿನ್ನ ಜೀವನ   ವ್ಯರ್ಥ  ಮಾಡಿಕೊಳ್ಳಬೇಡ, ನೀನು ಮತ್ತಷ್ಟು  ಸಾಧಿಸು  ಅದೇ ನೀನು ನನಗೆ  ಹಾಗು ನನ್ನ ಪ್ರೇಮಕ್ಕೆ ಕೊಡುವ  ಕಾಣಿಕೆ" ಎಂದು ನನ್ನ ಕೈಗೆ  ಮುತ್ತಿಟ್ಟು  ಹೊರಟು  ಬಿಟ್ಟಳು.

   ಅಂದು ಬಹಳಷ್ಟು ತೊಳಲಾಡಿದ ನಾನು   ಒಂದು ಹಂತದಲ್ಲಿ    ಜೀವ ಕಳೆದುಕೊಳ್ಳುವ  ಹಂತ ತಲುಪಿದ್ದೆ, ಆದರೆ ನನ್ನ ಕೈಮೆಲಿದ್ದ   ಅವಳ ಮುತ್ತುಗಳ ನೆನಪು   ಜೀವನ ಮುಂದುವರೆಸಲು  ಪ್ರೇರಣೆ ನೀಡಿತ್ತು .  ನನ್ನ ಜೀವನದಲ್ಲೂ ಬದಲಾವಣೆಯಾಗಿ   ಅಪ್ಪನ ಆಶಯದಂತೆ   ರೇವತಿಯನ್ನು  ಬಾಳ  ಸಂಗಾತಿಯನ್ನಾಗಿ ಸ್ವೀಕರಿಸಿ  ಹೊಸ ಜೀವನ ಶುರುಮಾಡಿದೆ .  ರೇವತಿ ನನ್ನ ಬಾಳ  ಸಂಗಾತಿಯಾಗಿ   ಬಾಳ  ಕಾರ್ಮೊಡ ಗಳನ್ನು   ಚೆದುರಿಸಿ  ಹೊಸ ಬೆಳಕನ್ನು ನೀಡಿ  , ಯಶಸ್ವಿನಿಯ ಮುತ್ತುಗಳ ನೆನಪನ್ನು ತೊಡೆದು ಹಾಕಿದ್ದಳು .

ನಿಧಾನವಾಗಿ  ಅಂದು ಈ ಕೈಗೆ ಮುತ್ತು ನೀಡಿ ಹೊರಟು  ಹೋದ  ಯಶಸ್ವಿನಿ  ಇಂದು ಹೀಗೆ  ಮತ್ತೆ ಬಂದು ನನ್ನ ಜೀವನದಲ್ಲಿ  ಬಿರುಗಾಳಿ ಎಬ್ಬಿಸಬೇಕಿತ್ತೆ  ಅಂತಾ , ಯೋಚಿಸುತ್ತಾ    ತೊಳಲಾಡಿದೆ ,  ಪಕ್ಕದಲ್ಲಿನ  ಮೊಬೈಲ್  ನಲ್ಲಿ  ಎಂದೆಂದೂ  ನಿನ್ನನು ಮರೆತು  ಬದುಕಿರಲಾರೆ   ಅಂತಾ   ರಿಂಗ್ ಆಯಿತು,  ಮೊಬೈಲ್ ತೆಗೆದು ಹಲ್ಲೋ  ಅಂದೇ,  "ನಾನು ಸಂದೇಶ್ ಅವರೇ  ಪ್ರಿಯದರ್ಶಿನಿ ತಾಯಿ ಯಶಸ್ವಿನಿ  ಅಂತು ಆ ಕಡೆಯಿಂದ ದ್ವನಿ . ಹೇಳಿ ಅಂದೇ ನಿಮ್ಮ ಬಳಿ  ಮಾತನಾಡ ಬೇಕು  ನನ್ನ ಮಗಳ  ಮದುವೇ  ಬಗ್ಗೆ  ದಯವಿಟ್ಟು ಇಲ್ಲಾ ಅನ್ನದೆ ನಾಳೆ  ಅಮರಪ್ರೇಮಿ ಹೋಟೆಲ್ ನಲ್ಲಿ  ಬೆಳಿಗ್ಗೆ ಹತ್ತು ಘಂಟೆಗೆ  ಸಿಕ್ಕಿ "ಅಂದು ಫೋನ್ ಕಟ್  ಮಾಡಿದಳು,  ಹಾಗೆ ಯೋಚಿಸುತ್ತಾ  ನಿದ್ದೆಗೆ ಜಾರಿದೆ,

 ಮಾರನೆಯ ದಿನ  ಬೆಳಿಗ್ಗೆ ಹತ್ತು ಘಂಟೆಗೆ  ಅಮರಪ್ರೇಮಿ ಹೋಟೆಲ್ನಲ್ಲಿ  ಕಾಯುತ್ತಾ ಕುಳಿತೆ,    ಎಲ್ಲಿಂದಲೋ ತೇಲಿಬಂತು   "ಈ ಭೂಮಿ ಬಣ್ಣದ  ಬುಗುರಿ    ಶಿವನೆ ಚಾಟಿ ಕಣೋ"ಈ ಬಾಳು  ಸುಂದರ ನಗರಿ  ನೀನಿದರಾ  ಮೇಟಿ ಕಣೋ "     ಎಂಬ  ಹಾಡು ......  ಸುಮಾರು  ವರ್ಷಗಳ ಹಿಂದೆ ಇವಳಿಗಾಗಿ ಕಾಯುತ್ತಾ ಕುಳಿತ ಸನ್ನಿವೇಶಗಳು  ನೆನಪಿಗೆ ಬಂದವು,  ಸುಮಾರು ಒಂದು ಘಂಟೆ  ವಿಳಂಭವಾಗಿ  ಬಂದಳು,   ಹೋಟೆಲ್ನಲ್ಲಿ  ವಿಶಾಲವಾದ   ಆವರಣದಲ್ಲಿ   ಬಹಳ ವಿರಳವಾಗಿ ಜನರಿದ್ದರು   , ಯಾವುದೇ ಅದೇ ತಡೆ ಇರಲಿಲ್ಲ  , "ಕ್ಷಮಿಸಿ  ಸಂದೇಶ್  ನಿಮ್ಮನ್ನು ಕಾಯೋ ಹಾಗೆ ಮಾಡಿಬಿಟ್ಟೆ ಅಂದಳು,  ಸ್ವಲ್ಪ ಹೊತ್ತು ಮೌನ  ,   ಸುಮ್ಮನೆ ಒಬ್ಬರನ್ನು ಒಬ್ಬರು ನೋಡುತ್ತಾ  ಕುಳಿತೆವು,  ಕಣ್ಣಂಚಿನಲ್ಲಿ  ಹರಿದ  ಕಣ್ಣೀರ ಹನಿಗಳು  ಹೇಳಲಾಗದ  ಸಾವಿರ ಕಥೆಗಳನ್ನು ವಿನಿಮಯ ಮಾಡಿಕೊಂಡವು ,  ಬಹಳ ಹೊತ್ತು  ಕುಳಿತು, ಅಲ್ಲೇ ಸನಿಹದಲ್ಲಿದ್ದ  ನದಿಯ ಸಮೀಪ ಬಂದೆವು  

 ಯಶಸ್ವಿನಿ  ಮಾತನಾಡಿ "ನೋಡಿ ಸಂದೇಶ್ ನಮ್ಮಿಬ್ಬರದು ಎಂತಹ  ವಿಚಿತ್ರ ಸಂದಿಗ್ಧ  ಪರಿಸ್ಥಿತಿ  , ಮೊದಲೇ ನಾವಿಬ್ಬರು  ಪ್ರೇಮಿಗಳಾಗಿ ಕನಸು ಕಂಡವರು , ಕನಸ ನನಸು ಮಾಡಲು ಆಗದೆ   ಬಳಲಿ  ಹೊಸದಾರಿಯಲ್ಲಿ ಸಾಗಿ  ಹಳೆಯದನ್ನು ಮರೆತು ಬದುಕು ಸಾಗಿಸೋಣ ಎಂದರೆ  ನಮ್ಮ ಮಕ್ಕಳು   ಪ್ರೇಮಿಗಳಾಗಿ  ಈಗ ಬಾಳ  ಸಂಗಾತಿಗಳಾಗಲು  ಹೊರಟಿದ್ದಾರೆ ...!ಇವರು   ನನ್ನ ಹಾಗು ನಿಮ್ಮ ದೃಷ್ಟಿಯಲ್ಲಿ  ಗಂಡ ಹೆಂಡಿರೆಂದು ಕಲ್ಪಿಸಿಕೊಳ್ಳೋದು  ಹೇಗೆ , ?ನನಗೆ ಅರ್ಥಾ ಆಗುತ್ತಿಲ್ಲಾ   ಅದರಿಂದಾ ಈ ಸಮಸ್ಯೆ  ಹೇಗೆ ಬಗೆ ಹರಿಸೋದು ಹೇಳಿ "ಅಂದಳು ...

ನಾನು ಯೋಚಿಸುತ್ತಾ  "ಹೌದು ಯಶಸ್ವಿನಿ  ನನಗೂ ಅರ್ಥಾ  ಆಗುತ್ತಿಲ್ಲಾ ... ಇವರಿಬ್ಬರ ಈ ಪ್ರೀತಿಯ   ಸಂಬಂಧಕ್ಕೆ  ಏನು ಕರೆಯೋದು ಗೊತ್ತಾಗುತ್ತಿಲ್ಲಾ ... ??  ಮದುವೇ ಮಾಡಿದರೆ   ನಮ್ಮ ಮನಸುಗಳು   ಬೇಡ ಬೇಡ  ಈ ಸಂಬಂಧ  ಎಂದು ಕೂಗಿ ಕೂಗಿ ಹೇಳುತ್ತವೆ,   ಮಾಡದಿದ್ದರೆ  ಆ  ಹರೆಯದ  ಜೀವಗಳು  ನರಳಿ ನರಳಿ ಸಾಯುತ್ತವೆ .    ನೀನೆ ದಾರಿ ತೋರಿಸು  ಯಶಸ್ವಿನಿ  ನಿನ್ನ ಮಗಳ ಹಾಗು ನನ್ನ  ಮಗನ  ಪ್ರೀತಿಗೆ  ಏನೆಂದು ಕರೆಯೋಣ ...  ? " ಎನ್ನುತ್ತಾ    ಅವಳ ಕಡೆ ನೋಡಿದೆ .




ಮಂದಿನ ಕಥೆ .........?

  ಹೇಳಿ  ಓದುಗರೇ  ಈ ಕಥೆಯಲ್ಲಿನ ಯುವ ಪ್ರೇಮಿಗಳ  ಪ್ರೀತಿಗೆ ಯಾವ ಸಂಬಂಧ  ಕಲ್ಪಿಸೋಣ,   ಈ ಕಥೆಯ ಮುಂದುವರೆಸಲು     ನಮ್ಮ ಮೆಚ್ಚಿನ ಕಥೆಗಾರ ದಿನಕರ ಮೊಗೆರ   ಅವರಿಗೆ ಕೊಕ್  ಕೊಟ್ಟಿದ್ದೇನೆ  ......!!   ಬಹಳ  ತಿಂಗಳುಗಳ ನಂತರ  ಮತ್ತೆ ಕಥೆ ಬರೆಯುವ ಕೊಕ್ಕೋ ಆಟ ಶುರು ಆಯ್ತು . ಮುಂದಿನ ಸರದಿ ನಮ್ಮ ದಿನಕರ ಮೊಗೆರ  ಅವರದು

ದಿನಕರ ಮೊಗೆರ ಅವರ ಮುಂದುವರೆದ ಕಥೆ ಇಲ್ಲಿದೆ ನೋಡಿ

ನಿನಗಾಗಿ....!!!

 

  



 
ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು...ಎದುರುಗಡೆ ಕುಳಿತ ಆಕೆಯ ಮುಖ ನೋಡಿದೆ... " ನಾನು ಹೇಳುವುದನ್ನು ಗಮನವಿಟ್ಟು ಕೇಳು.. ನಿನ್ನ ಮಗಳು ಸೊಸೆಯಾಗಿ ಬಂದರೂ ಸಹ ನನಗೆ ಮಗಳಾಗಿಯೇ ಇರುತ್ತಾಳೆ.. ನನ್ನ ಮಗನೂ ಸಹ ನಿನಗೆ ಅಳಿಯನಾಗಿ ಅಲ್ಲ ಮಗನಾಗಿಯೇ ಇರಲಿ... ಅವರಿಬ್ಬರ ಸಂಬಂಧ ಅವರಿಗಿಷ್ಟ ಬಂದ ಹಾಗಿರಲಿ... ಅದನ್ನೂ ನಾವೇ ನಿರ್ಧಾರ ಮಾಡುವುದು ಬೇಡ.. ನಾವು ಒಪ್ಪಿಗೆ ಕೊಡೋಣ.. ಅದ್ಯಾವ ಕೆಟ್ಟ ಗಳಿಗೆಯಲ್ಲಿ ದೇವರು ನಿನ್ನನ್ನು ನನ್ನಿಂದ ದೂರ ಮಾಡಿದನೋ, ಅದೇ ದೇವರು ಆದ ತಪ್ಪನ್ನು ತಿದ್ದಿಕೊಂಡು ನಿನ್ನನ್ನು ನನ್ನ ಹತ್ತಿರ ಕಳಿಸಿದ್ದಾನೆ ಎಂದುಕೋ... ಮಕ್ಕಳ ಖುಶಿಯಲ್ಲಿ ನಮ್ಮ ಖುಶಿ ಕಾಣೋಣ... ಈ ನೆವದಿಂದಾದರೂ ನಾವು ಹತ್ತಿರವಾಗೋಣ.." ಎಂದೆ ಸ್ವಲ್ಪ ರಸಿಕತನದಿಂದ... ಅವಳಿಗೂ ಸಹ ಇದೇ ಬೇಕಿತ್ತು ಎನಿಸುವ ಹಾಗೆ " ಹೂಂ.." ಎಂದಳು ತಲೆ ಕೆಳಗೆ ಹಾಕಿ... ಅವಳ ನಾಚಿಕೆ ನನಗೆ ಖುಶಿ ತಂದಿತ್ತು... ರೂಮ್ ಬಾಯ್ ತಂದಿಟ್ಟಿದ್ದ ಈರುಳ್ಳಿ ಬಜೆಯನ್ನು ಅವಳಿಗೆ ಕೊಟ್ಟೆ.. ಅವಳ ಇಷ್ಟದ ತಿಂಡಿ ಅದು... ನನಗೂ ಒಂದು ತುಂಡು ಕೊಟ್ಟಳು... ಟೀ ಕುಡಿದು ಅಲ್ಲಿಂದ ಬೀಳ್ಕೊಟ್ಟೆ...

   ಮನೆಗೆ ಬಂದಾಗ ನನ್ನ ಮೂಡೇ ಬದಲಾಗಿತ್ತು... ನನ್ನ ಹೆಂಡತಿಯ ಊಹೆಗೆ ಸಿಗದ ನನ್ನ ನಡವಳಿಕೆ ಅವಳಿಗೆ ಅಚ್ಚರಿ ಮೂಡಿಸಿತ್ತು... " ಏನು ಮಗನ ಮದುವೆಯ ದಿನ ಹತ್ತಿರ ಬಂದ ಹಾಗೆ ನೀವೂ ಸಿಂಗಾರಗೊಳ್ಳುತ್ತಿರುವ ಹಾಗಿದೆ... " ಎಂದು ಕಿಚಾಯಿಸಿದಳು... ನಾನೂ ಸುಮ್ಮನಿರಬೇಕಲ್ಲ..." ನನ್ನ ಮಗನ ಮದುವೆ ನಡೆದ ಚಪ್ಪರದಲ್ಲೇ ನನ್ನ ಮರುಮದುವೆಯೂ ನಡೆಯುವುದಿದೆ.." ಎಂದೆ ಮಾರ್ಮಿಕವಾಗಿ.... " ಏನೊಪ್ಪ, ನಿಮ್ಮನ್ನ ನೋಡಿದ್ರೆ ಅದಕ್ಕೂ ರೆಡಿ ಇರುವ ಹಾಗಿದೆ " ಎಂದಳು.. ನಾನು ಅನಂತ್ ನಾಗ್ ನಗೆ ನಕ್ಕು ಒಳ ಹೋದೆ... ರೂಮಿನ ಚಿಲಕ ಸಿಕ್ಕಿಸಿ, ನನ್ನ ಹಳೆಯ ಸೂಟ್ ಕೇಸಿನ ಚಾವಿ ಹುಡುಕಿದೆ... ಅದರಲ್ಲಿನ ನನ್ನ ಹಳೆಯ ಡೈರಿ ಓದ ಬೇಕಿತ್ತು ನನಗೆ... ನನ್ನ ಹೆಂಡತಿಯಿಂದ ಮುಚ್ಚಿಟ್ಟ ಏಕೈಕ ವಸ್ತು ಅದು.. ಅವಳೂ ಸಹ ಅದರಲ್ಲಿ ಆಸಕ್ತಿ ತೋರಿಸಿರಲಿಲ್ಲ... ಸೂಟಕೇಸಿನ ಚಾವಿ ಸಿಕ್ಕಿತ್ತು... ರೂಮಿನ ಬಾಗಿಲು ತಟ್ಟುತ್ತಿದ್ದ ಮಗರಾಯ... ಚಾವಿ ಕಿಸೆಯಲ್ಲಿ ಹಾಕಿಕೊಂಡು ಬಾಗಿಲು ತೆರೆದೆ... ” ಅಪ್ಪ , ಮದುವೆ ದಿನ ಗೊತ್ತುಮಾಡಬೇಕು, ಪುರೋಹಿತರ ಹತ್ತಿರ ಹೋಗೋಣ ಬನ್ನಿ. ತಯಾರಾಗಿ.." ಎಂದವನೇ ಅಮ್ಮನ ಹತ್ತಿರ ಹೊರಟ.. ನನ್ನ ಕಾಲಿಗೆ ರೆಕ್ಕೆ ಬಂದಂತಾಗಿತ್ತು... ಲಗುಬಗೆಯಲಿ ನಾನೂ ರೆಡಿಯಾದೆ... ಹಳೆಯ ಸೂಟ್ ಕೇಸಿನ ಚಾವಿ ನನ್ನ ಕಿಸೆಯಲ್ಲೇ ಉಳಿಯಿತು...

  ಪುರೋಹಿತರ ಬಳಿ ಕೂಡ ತುಂಬಾ ಹತ್ತಿರದ ದಿನಾಂಕ ಗೊತ್ತು ಮಾಡಲು ಹೇಳಿದೆ... ಮಗ, ನನ್ನ ಆತುರ ನೋಡುತ್ತಾ ಬೆರಗಾಗಿದ್ದ... ಹತ್ತೇ ದಿನದಲ್ಲಿ ಆಗುವ ಮದುವೆಯನ್ನು ಆತನೂ ಎಣಿಸಿರಲಿಕ್ಕಿಲ್ಲ.... ಆತನೂ ಖುಶಿಯಾದ, ನಾನು ಖುಶಿಯಾದ ಕಾರಣ ಆತನಿಗೆ ತಿಳಿಯಲಿಲ್ಲ... ಮನೆಗೆ ಬಂದಾಗ ಊಟದ ಹೊತ್ತು.... ಊಟ ಮಾಡಿ ನನಗೆ ಹಳೆಯ ಡೈರಿ ಓದಲಿಕ್ಕಿತ್ತು... "ನನಗೆ ಗಡದ್ದಾಗಿ ನಿದ್ದೆ ಬರ್ತಾ ಇದೆ, ಸ್ವಲ್ಪ ಹೊತ್ತು ನಂಗೆ ಡಿಸ್ಟರ್ಬ್ ಮಾಡಬೇಡ" ಎಂದು ನನ್ನಾಕೆಗೆ ಹೇಳಿ ರೂಮಿನ ಬಾಗಿಲು ಜಡಿದೆ... ಸೂಟ್ ಕೇಸಿನಲ್ಲಿದ್ದ ಹಳೆಯ ಡೈರಿ ತೆರೆಯುವಾಗ ಎದೆ ಡವ ಡವ... ಈ ವಯಸ್ಸಲ್ಲೂ ಈ ರೀತಿ ಆಗತ್ತೆಂತ ಕನಸ್ಸಲ್ಲೂ ಎಣಿಸಿರಲಿಲ್ಲ.... ನಮ್ಮ ಪ್ರೀತಿ ಉತ್ತುಂಗದ ದಿನಗಳಲ್ಲಿನ ದಿನಗಳ ಬಗ್ಗೆ ಓದಬೇಕೆನಿಸಿತು... ಎಲ್ಲರ ಹಾಗೆ ದಿನಾ ಡೈರಿ ಬರೆದಿರಲಿಲ್ಲ ನಾನು... ಉತ್ತಮ ದಿನಗಳ ಮತ್ತು ಕೆಟ್ಟ ದಿನಗಳ ಬಗ್ಗೆ ತಾರೀಖು ನಮೂದಿಸಿ ಬರೆಯುತ್ತಿದ್ದೆ.... ಅದೂ ಸಹ ಯಾರದೇ ಹೆಸರು ನಮೂದಿಸದೇ... ಬೇರೆಯವರು ಯಾರೇ ಓದಿದರೂ ಸಹ ಕಥೆ, ಲೇಖನದ ರೀತಿ ಇರುತ್ತಿತ್ತು... ಹಾಳೆ ತಿರುವುತ್ತಿದ್ದವನಿಗೆ ಫೆಬ್ರುವರಿ ಹದಿನಾಲ್ಕರ ದಿನ ಬರವಣಿಗೆ ಓದಬೇಕೆನಿಸಿತು... ಪುಟ ತಿರುವಿ ಓದಿದೆ....


    " ಅವಳಿಗಾಗಿ ಕೊಂಡು ಬಂದಿದ್ದ ಚಿನ್ನದ ಬಳೆಯನ್ನು ನೋಡಿ ಅವಳ ಸಂತೋಷವನ್ನು ಊಹಿಸಿಯೇ ಮನ ಮಿಡಿಯುತ್ತಿದೆ... ಬಳೆಯ ನಡುವಿನಲ್ಲಿದ್ದ ಲವ್ ಮಾರ್ಕ್ ನೋಡಿಯೇ ಅದನ್ನು ಖರೀದಿಸಿದ್ದೆ... ಸರಿಯಾದ ಸಮಯಕ್ಕೆ ಬಂದ ಆಕೆ ನನ್ನ ಪಕ್ಕವೇ ಕುಳಿತಳು . ಪರಸ್ಪರ ಪ್ರೀತಿಸುವ  ಬಗ್ಗೆ ಹೇಳಿಕೊಂಡು ತುಂಬಾ ಸಮಯವಾಗಿದ್ದರೂ ನಮ್ಮ ಪ್ರತೀ ಭೇಟಿಯೂ ಮೊದಲ ಭೇಟಿಯ ಹಾಗೆ ಇರುತ್ತಿದೆ... ಪಾರ್ಕ್ ನಲ್ಲಿ ತುಂಬಾ ಜನ ಇದ್ದರೂ ಸಹ ನನಗೆ ಕಾಣುತ್ತಿದ್ದುದು ಇವಳೇ ಆಗಿದ್ದಳು... ನನ್ನವಳ ಗಲ್ಲ  ಗುಲಾಬಿಯಾಗಿದ್ದು ಅವಳು ಧರಿಸಿದ್ದ ಗುಲಾಬಿ ಬಣ್ಣದ ಚುಡಿದಾರದಿಂದಲಾ ಅಥವಾ ನನ್ನನ್ನು ನೋಡಿಯಾ ತಿಳಿಯಲಿಲ್ಲ... ತಡ ಮಾಡದೇ " ಹ್ಯಾಪಿ ವೆಲಂಟೈನ್ಸ್ ಡೇ ಡಿಯರ್.. ಐ ಲವ್ ಯು..." ಎಂದವನೇ ಕೈಯಲ್ಲಿದ್ದ ಚಿನ್ನದ ಬಳೆ ಕೊಟ್ಟೆ... ಅವಳ ಕಣ್ಣಲ್ಲಿ ಬಣ್ಣದ ಚಿಟ್ಟೆಗಳು.. ಅವಳೂ ಸಹ ದುಡಿಯುತ್ತಿದ್ದರೂ ಕೈತುಂಬಾ ಸಂಬಳ ಎಣಿಸುತ್ತಿದ್ದರೂ ನಾನು ಕೊಟ್ಟ ಉಡುಗೊರೆ ಅವಳಿಗೆ ಖುಷಿ ನೀಡಿದ್ದು ಅವಳ ಕಣ್ಣಲ್ಲೇ ತಿಳಿಯುತ್ತಿತ್ತು... " ಐ ಲವ್ ಯು ಟೂ.." ಎಂದವಳೇ ಸುತ್ತಮುತ್ತಲಿದ್ದವನ್ನೂ ಕಡೆಗಣಿಸಿ ತಬ್ಬಿಕೊಂಡಳು... ಈ ಮುಂಚೆ ತಬ್ಬಿಕೊಂಡಿದ್ದರೂ ಇವತ್ತಿನ ಖುಶಿಯ ಪರಿ ಬೇರೆಯದಿತ್ತು... ”
   ಓದುತ್ತಾ ಹೋದಂತೆಲ್ಲಾ  ಇಂಥಹದೇ ಬಿಡಿ ಬಿಡಿ ಬರಹಗಳು.. ಒಂದೊಂದು ಸಹ ಮೈ ಪುಳಕಿತಗೊಳ್ಳುವ ಘಟನೆಗಳೇ ಆಗಿದ್ದವು... ಅಷ್ಟರಲ್ಲಿ ಮೊಬೈಲ್ ರಿಂಗಾಯಿತು... " ಅಬ್ಭಾ ನಿನ್ನದೇ ನೆನಪಿನಲ್ಲಿದ್ದೆ, ನಿನ್ನದೇ ಫೋನ್... ಹೇಗಿದ್ದೀಯಾ... ತಯಾರಿ ಜೋರಾಗಿ ನಡೆಯುತ್ತಿದೆಯಾ...? ಬೇಗನೇ ಬಂದು ಬಿಡು ನನ್ನ ಮನೆಗೆ... ಮನೆ ತುಂಬಿಸಿಕೊಳ್ಳುತ್ತೇನೆ.." ಆ ಕಡೆಯಿಂದ ಮುಸಿ ಮುಸಿ ನಗು..." ಮನೆ ತುಂಬಿಸಿಕೊಳ್ಳುವುದು ನನ್ನನ್ನಲ್ಲ, ನನ್ನ ಮಗಳನ್ನ" ಎಂದಳು ಮುಗುಮ್ಮಾಗಿ... ದನಿಯಲ್ಲಿನ ಸಿಹಿ ಇನ್ನೂ ಕಡಿಮೆಯಾಗಿರಲಿಲ್ಲ... " ಈಗ ನಿಮ್ಮ ಮನೆಗೆ ಬರುತ್ತಾ ಇದ್ದೇವೆ ನನ್ನ ಯಜಮಾನರೂ ಬರುತ್ತಾರೆ.. ಕೆಲವೊಂದು ವಸ್ತುಗಳ ಖರಿದಿ ಬಗ್ಗೆ ಮಾತನಾಡಬೇಕು ಅದಕ್ಕೆ " ಎಂದಳು... " ನಾನೇನೋ ನನ್ನನ್ನ ನೋಡಲಿಕ್ಕೆ ಬರ್ತಾ ಇದೀಯಾ ಅಂದುಕೊಂಡೆ" ಅಂದೆ ರಸಿಕತೆಯಿಂದ... " ಯಾವುದೋ ಒಂದು ನೆವ ಅಷ್ಟೇ.." ಅಂದು ಫೋನ್ ಕಟ್ ಮಾಡಿದಳು.. ನನ್ನನ್ನು ನೋಡೋದು ನೆವವೋ, ಇಲ್ಲಿಗೆ ಬರೋದು ನೆವವೋ ಹೇಳಲಿಲ್ಲ.. ಅವಳು ಯಾವಾಗಲೂ ಹಾಗೇನೇ... ಅವಳು ಬರುವ ಮೊದಲೇ ನಾನು ರೆಡಿಯಾಗಿ ಬಾಗಿಲಲ್ಲೇ ಕಾದೆ... ಮನೆಯಾಕೆಗೂ ವಿಷ್ಯ ತಿಳಿಸಿದ್ದರಿಂದ ಸಂಜೆಯ ಚಾ ತಿಂಡಿ ರೆಡಿ ಮಾಡುತ್ತಿದ್ದಳು...

   ಮನೆ ಮುಂದೆ ನಿಂತ ಕಾರಿಂದ ಆಕೆ ನಡೆದು ಬರುತ್ತಿದ್ದರೆ ಈ ವಯಸ್ಸಲ್ಲೂ ಓಡಿ ಹೋಗಿ ತಬ್ಬಿ ಬಿಡಲೆ ಎನಿಸುತ್ತಿತ್ತು.. ಅವಳೇ ಮುಂದೆ ಬಂದು ’ ನಮಸ್ತೆ’ ಎಂದಳು... ಪ್ರತಿಯಾಗಿ ನಾನು ’ನಮಸ್ತೆ’ ಎಂದೆ.. ಅವಳ ಗಂಡನ ಕೈ ಕುಲುಕಿ ಒಳ ಕರೆದುಕೊಂಡು ಬಂದೆ... ಅವರ ಕೈ ತಣ್ನಗಿತ್ತು... ಸ್ವಲ್ಪ ಡಲ್ ಇದ್ದರು... ’ ಇವರಿಗೇನಾದರೂ ಗೊತ್ತಿದೆಯಾ ನಮ್ಮ ವಿಷ್ಯ’ ಎನಿಸಿತು...  ವಿಷ್ಯ ಗೊತ್ತಾದರೂ ಏನಾಗತ್ತೆ,? ನಮ್ಮದೇನೂ ಓಡಿ ಹೋಗುವ ವಯಸ್ಸಲ್ಲಾ ಇದು.." ಎಂದಿತು ಹುಂಬ ಮನಸ್ಸು... ಮಗನಿಗೆ ಚಿನ್ನದ ಸರ ಮತ್ತು ಬ್ರಾಸ್ ಲೆಟ್ ಮಾಡಿಸುವ ಮಾತಾದಾಗ " ನನಗಾಗಿ ಏನೂ ಇಲ್ಲವಾ,? ಎಲ್ಲಾ ಅಳಿಯ ದೇವರಿಗೆ ಮಾತ್ರವಾ..? " ಎಂದೆ ಹುಡುಗಾಟದ ದನಿಯಲ್ಲಿ... "ನನ್ನ ಮಗಳನ್ನು ನಿಮ್ಮ ಮಗಳಾಗಿ ಕೊಡ್ತಾ ಇದೀನಿ.." ಎಂದಳು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆಕೆ... " ಏನೂ ಹೆದರಬೇಡಿ, ನಿಮ್ಮ ಮಗಳಲ್ಲ ಅವಳು , ನಮ್ಮ ಮಗಳೇ... ನನಗೂ ಹೆಣ್ಣು ಮಕ್ಕಳಿಲ್ಲ, ನಿಮಗೂ ಗಂಡು ಮಗುವಿಲ್ಲ... ಇಬ್ಬರ ಕೊರತೆಯೂ ನೀಗಿದ ಹಾಗಾಯಿತು ಒಂದೇ ಸಂಬಂಧದಲ್ಲಿ " ಎಂದಳು ನನ್ನ ಪತ್ನಿ... ನಾನು ಆಕೆಯ ಮುಖ ನೋಡಿದೆ... ತುಂಟತನದಲಿ ಕಣ್ಣು ಹೊಡೆದೆ.. ಆಕೆಯ ಕೆನ್ನೆ ಕೆಂಪಗಾಯ್ತು ಈ ವಯಸ್ಸಲ್ಲೂ.... ಅವರನ್ನು ಬೀಳ್ಕೊಟ್ಟು ಸ್ವಲ್ಪ ಹೊತ್ತಲ್ಲೇ ಮಗ ಬಂದ.. ಆತನೂ ಸಹ ಮದುವೆಯ ಖರೀದಿ ಮುಗಿಸಿ ಬಂದಿದ್ದ..

   ಮದುವೆಯಂತೂ ನನ್ನಲ್ಲಿ ಹೊಸ ಹುಮ್ಮಸ್ಸು ತಂದಿತ್ತು... ಮದುವೆಯ ದಿನ ನಾನು ಆಕೆಯ ಸುತ್ತಲೇ ಗಿರಕಿ ಹೊಡೆಯುತ್ತಿದ್ದೆ... ಅವಳೂ ಸಹ ತುಂಬಾ ಖುಶಿಯಿಂದಿದ್ದಳು... ಮದುವೆಯ ಫೋಟೊ ತೆಗೆದುಕೊಳ್ಳುವಾಗ ಸಹ ಅವಳ ಸಾಮಿಪ್ಯ ಸಿಗುವ ಹಾಗೆ ನೋಡಿಕೊಂಡೆ... ನನ್ನಲ್ಲಿ ಇಪ್ಪತ್ತರ ಯುವಕನ ತಾರುಣ್ಯ ತುಂಬಿತ್ತು... ಮದುವೆ ಮುಗಿದು ಮಗಳನ್ನು ಬೀಳ್ಕೊಡುವಾಗ ಅವಳು ಬಿಕ್ಕಳಿಸಿ ಬಿಕ್ಕಳಿಸಿ ಅತ್ತ ರೀತಿ ನೋಡಿ ನನ್ನ ಕಣ್ಣಲ್ಲೂ ನೀರು ಜಿನುಗಿತ್ತು... ಅವಳ ಕೈಹಿಡಿದು ಸಮಧಾನ ಮಾಡಿದ್ದೆ... " ನಿನ್ನ ಮಗಳನ್ನು ನಿನಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತೇನೆ.. ನಿನ್ನ ನೆನಪೇ ಬಾರದ ಹಾಗೆ ನಡೆಸಿಕೊಳ್ಳುತ್ತೇನೆ" ಎಂದಾಗ ಆಕೆ ಹಗುರಾಗಿದ್ದಳು... ನನ್ನ ಹೆಂಡತಿ ’ಹೌದು’ ಎಂದು ದನಿಗೂಡಿಸಿದ್ದರೂ ಅವಳಿಗೆ ಮುಂದೆ ಬರುವ ಬಿರುಗಾಳಿಯ ಸುಳಿವು ಇರಲಿಲ್ಲ...

    ಮದುವೆ ಮುಗಿದು ಮಗ ಸೊಸೆ ಮಧುಚಂದ್ರಕ್ಕೆ ಹೊರಟಿದ್ದೂ ಆಯ್ತು... ಹದಿನೈದು ದಿನದ ಅವರ ಪ್ರವಾಸವನ್ನು  ವಾರಕ್ಕೇ ಮೊಟಕುಗೊಳಿಸಿ ಬಂದಿದ್ದರು... ಸೊಸೆಯ ಅಪ್ಪನ ಆರೋಗ್ಯ ತುಂಬಾ ಬಿಗಡಾಯಿಸಿ ಆತನನ್ನ ಆಸ್ಪತ್ರೆಗೆ ಸೇರಿಸಿದ್ದರು.. ನನ್ನ ಮಗ ಹೇಳುವವರೆಗೂ ನನಗೆ ತಿಳಿದಿರಲಿಲ್ಲ... ಅವರಿಗೆ ಬ್ಲಡ್ ಕ್ಯಾನ್ಸರ್ ಇತ್ತೆಂದು.... ಮಗಳನ್ನು ನೋಡಿದ ಆತ ಘಂಟೆಯಲ್ಲೇ ತೀರಿಕೊಂಡಿದ್ದರು... ಅವರ ಅಂತ್ಯ ಸಂಸ್ಕಾರಕ್ಕೆ ನಾನು ಹೋಗಿದ್ದೆನಾದರೂ ಆಕೆಯನ್ನು ನೋಡುವ ಧೈರ್ಯವಾಗಲಿಲ್ಲ... ನಮ್ಮದೇನೂ ಅಕ್ರಮ ಸಂಬಂಧವಲ್ಲವಾದರೂ , ಆಕೆಯ ಗಂಡನ ಅಗಲಿಕೆಯ ಬೆಲೆ ತೆತ್ತು, ಆಕೆಯ ಸನಿಹ ಕೋರಿರಲಿಲ್ಲ... ಯಾಕೋ, ಆಕೆಯನ್ನು ಖಾಲೀ ಹಣೆಯಲ್ಲಿ ನೋಡುವ ಧೈರ್ಯ, ಮನಸ್ಸು ಎರಡೂ ಇರಲಿಲ್ಲ... ಮಗ-ಸೊಸೆ ಒಂದು ವಾರ ಅಲ್ಲೇ ಉಳಿದು ಬಂದಿದ್ದರು.. ಕೆಲಸಕ್ಕೆ ಹಾಕಿದ್ದ ರಜೆ ಮುಗಿದ ಕಾರಣ ಅವರು ಇಲ್ಲಿಗೆ ಬಂದಿದ್ದರು... ಆಕೆಯ ಮನೆಯಲ್ಲಿ ಕೆಲಸದಾಕೆ ಬಿಟ್ಟರೆ ಬೇರೆ ಯಾರೂ ಇರಲಿಲ್ಲ... ಆಕೆಯ ನೋವು ನಾನು ಹಂಚಿಕೊಳ್ಳುವ ಆಸೆ ಇದ್ದರೂ ಪರಿಸ್ಥಿತಿ ಹಾಗಿರಲಿಲ್ಲ... ನನ್ನ ಮನೆಗೂ ಅವಳ ಮನೆಗೂ ಒಂದು ರಾತ್ರಿ ಪ್ರಯಾಣದ ದೂರ... ಒಮ್ಮೆ ಫೋನ್ ಮಾಡಿ ನಮ್ಮ ಮನೆಗೆ ಬಂದು ಇರಲು ಹೇಳಿದೆ...
    
    " ನನಗೆ ಒಬ್ಬಳೇ ಇರಬೇಕು ಅನಿಸುತ್ತಿದೆ.. ನಿನ್ನನ್ನ ಕಳೆದುಕೊಂಡ ನಂತರವೂ ನಾನು ಒಬ್ಬಳೇ ಇರಲು ನಿರ್ಧಾರ ಮಾಡಿದ್ದೆ.. ಅಮ್ಮನ ಒತ್ತಾಯಕ್ಕೆ ಮದುವೆ ಆಗಿದ್ದೆ... ನನ್ನ ಗಂಡನಿಗೂ ಸಹ ನನ್ನ ಪ್ರೇಮದ ಬಗ್ಗೆ ಗೊತ್ತಿತ್ತು... ಅದಕ್ಕೆ ಅವರೂ ಸಹ ನನ್ನ ಏಕಾಂತಕ್ಕೆ ಭಂಗ ತರುತ್ತಿರಲಿಲ್ಲ... ಮದುವೆಯಾಗಿ ಐದು ವರ್ಷದ ವರೆಗೂ ನಾನು ಅವರ ಸಾಮಿಪ್ಯ ಬೇಡಿರಲಿಲ್ಲ... ಯಾವಾಗ ಅವರಿಗೆ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಯಿತೋ ಮತ್ತು ಅವರ ಆಯುಷ್ಯದ ಅವಧಿ ಗೊತ್ತಾಯಿತೋ ನಾನು ಅಧೀರಳಾದೆ... ಗಂಡನ ನಂತರ ನನ್ನ ಜೊತೆಗೆ ಯಾರು ಎನ್ನುವ ಪ್ರಶ್ನೆ ನನ್ನನ್ನ ಕಾಡುತ್ತಿತ್ತು... ಅದೊಂದೇ ಕಾರಣಕ್ಕೆ ಅವರ ಸಾಮಿಪ್ಯ ಬಯಸಿ ಅವರಿಂದ ಒಂದು ಮಗು ಪಡೆದೆ... ಎಲ್ಲಾ ಕಾಲದಲ್ಲೂ ನಿನ್ನ ನೆನಪಿಸುತ್ತಲೇ ಇದ್ದೆ... ನೀನು ಮಾತ್ರ ಆರಾಮಾಗಿ ಇದ್ದೆ... ಡೆಲಿವರಿಯ ಸಮಯದಲ್ಲಿ   ಮಾತ್ರ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ ಕಣೋ.. ನೀನೇ ಬೇಕಾಗಿತ್ತು ನನಗೆ ಆ ಟೈಮ್ ನಲ್ಲಿ... ಆದ್ರೆ ನೀನೆಲ್ಲಿದ್ದೆಯೋ ನನಗೆ ತಿಳಿದಿರಲಿಲ್ಲ... ಕ್ರಮೇಣ ನಿನ್ನ ಬಿಟ್ಟು ಇರೋದು, ದೈಹಿಕವಾಗಿ ನನ್ನ ಗಂಡನಿಂದ ದೂರ ಇರೋದು ಎಲ್ಲಾ ರೂಡಿಯಾಯಿತು... ನನ್ನ ಗಂಡ ಅಗಲಿದಾಗಲೂ ನನಗೆ ಅಂಥಹ ನೋವಾಗುತ್ತಿಲ್ಲ ..ಯಾಕೆ ಗೊತ್ತಾ..? ನನ್ನ ಜೀವವಾಗಿರುವ ನನ್ನ ಮಗಳು ನಿನ್ನ ಮಡಿಲಿಗೆ ಹಾಕಿದ್ದೇನೆ ಅದಕ್ಕೆ... ಇನ್ನು ಮುಂದೆ ನೀನೇ ಅವಳನ್ನು ನೋಡಿಕೊಳ್ಳಬೇಕು..." ನನ್ನ ಕಣ್ಣಲ್ಲಿ ನೀರು ಬರ್ತಾ ಇತ್ತು... ಅವಳೂ ಸಹ ಅಳುತ್ತಿದ್ದಳು...ಅಷ್ಟರಲ್ಲಿ ’ ಕಳಕ್ " ಎನ್ನುವ ಶಬ್ಧ... ನಾನು ನನ್ನ ರೂಮಿನಲ್ಲಿ ಕುಳಿತು ಮಾತನಾಡುತ್ತಿದ್ದೆ... ಹಾಲ್ ನಲ್ಲಿರುವ ಇನ್ನೊಂದು ಫೋನ್ ನಿಂದ ಯಾರೋ ಕೇಳಿಸಿಕೊಳ್ಳುತ್ತಿದ್ದರು ಎನಿಸತ್ತೆ... ಎದೆ ಬಡಿತ ಜೋರಾಯಿತು....

    ಸ್ವಲ್ಪ ಹೊತ್ತಲ್ಲೇ ಬಾಗಿಲು ಬಡಿದ ಶಬ್ಧ... " ಕಮ್ ಇನ್" ಎಂದೆ.. ಸೊಸೆ ಇದ್ದಳು.. " ಮಾವಾ, ನಾನು ಈಗ ಕೇಳಿಸಿಕೊಂಡಿದ್ದೆಲ್ಲಾ ಸತ್ಯವಾ...?  ಅಮ್ಮನಿಗೆ ಫೋನ್ ಮಾಡೋಣ ಅಂತ ಫೋನ್ ತೆಗೆದುಕೊಂಡವಳಿಗೆ ಅಮ್ಮನದೇ ಧ್ವನಿ ಕೆಳಿಸಿಕೊಂಡಾಗ ಜೊತೆಗೆ ನಿಮ್ಮ ದನಿ ಕೇಳಿದೆ... ಇದೆಲ್ಲಾ ನಿಜವಾ ಮಾವಾ..? ನಿಮ್ಮ ಸಲುವಾಗಿ ಅಮ್ಮ ಜೀವನವಿಡೀ ಕಾದಳಾ..? ಎಂದೂ ಅಮ್ಮನನ್ನು ಕಾರಣ ಕೇಳದ ನಾನು ಇವತ್ತಿಗೂ ಕೇಳಲ್ಲ... ಆದ್ರೆ..??? " ಸೊಸೆಯ ಮಾತಿನ್ನೂ ಮುಗಿದಿರಲಿಲ್ಲ... " ಹೌದಮ್ಮಾ, ನೀನು ಕೇಳಿಸಿಕೊಂಡಿದ್ದು ನಿಜ.. ನಾನು ನಿಮ್ಮಮ್ಮ ಪ್ರೀತಿಸಿದ್ದೂ ನಿಜ.. ಕಾರಣಾಂತರದಲ್ಲಿ ಬೇರೆ ಆದದ್ದೂ ನಿಜ... ಪರಸ್ಪರ ಎಲ್ಲಿದ್ದೇವೆ ಅಂತ ಗೊತ್ತಿಲ್ಲದೇ ಬದುಕಿದೆವು... ಬಾಳಿದೆವು ಬೇರೆ ಬೇರೆ.. ಈಗ ನಿನ್ನ ಮೂಲಕ ಭೇಟಿಯಾಗಿದ್ದೇವೆ... ಇದೆಲ್ಲ ಮುಗಿದು ಹೋದ ಕಥೆ... ಈಗ ಇದನ್ನು ಬೆಳೆಸುವ ಇರಾದೆ ನಿಮ್ಮಮ್ಮನಿಗೂ ಇಲ್ಲ... ನನಗೂ ಇಲ್ಲ.. ಆದರೆ ನಾನು ಅವಳ ಖುಶಿ ಆಶಿಸುತ್ತೇನೆ.. ಮತ್ತೆ ಅವಳೂ ಕೂಡ ನನ್ನ ಖುಶಿ ಹಾರೈಸುತ್ತಾಳೆ... ” ಇನ್ನೂ ಮಾತನಾಡುತ್ತಲೇ ಇದ್ದೇ..... ಅಷ್ಟರಲ್ಲೇ ಬಾಗಿಲು ಹಾಕಿ ಹೊರಟು ಹೋದಳು... ’ ಅಯ್ಯೋ ದೇವರೇ, ನಾನು ಯಾವತ್ತೂ ಮೊಬೈಲ್ ನಲ್ಲಿ ಮಾತನಾಡುವವನು , ಇವತ್ಯಾಕೆ ಲ್ಯಾಂಡ್ ಲೈನ್ ನಿಂದ ಫೋನ್ ಮಾಡಿದೆ " ಎಂದು ಹಳಹಳಿಸಿದೆ..  ’ದೇವ್ರೇ, ಈ ವಿಷ್ಯ ನನ ಹೆಂಡತಿ ಮತ್ತು ಮಗನಿಗೆ ಹೇಳದೇ ಇರಲಿ... ಅವರಿಬ್ಬರ ದ್ರಷ್ಟಿಯಲ್ಲಿ ನಾನು ಕುಬ್ಜನಾಗುವುದು ಇಶ್ಟವಿರಲಿಲ್ಲ... ಇದೆಲ್ಲದರಿಂದ ಸ್ವಲ್ಪ ಶಾಂತಿ ಸಿಗಲಿ ಎಂದು ನಾನು ರೆಡಿಯಾಗಿ ದೇವಸ್ಥಾನದ ಕಡೆ ಹೊರಟೆ..
   
     ವಾಪಸ್ ಮನೆಗೆ ಬರುವುದು ಕತ್ತಲಾಗಿತ್ತು... ಹೆಂಡತಿ ಬಾಗಿಲಲ್ಲೇ ಕುಳಿತಿದ್ದಳು... ಏನೂ ತಿಳಿಯದ , ತಿಳಿಯಲು ಆಶೆಯೂ ಪಡದ ಮುಗ್ಧ ಜೀವಿಗೆ ನಾನು ಮೋಸ ಮಾಡ್ತಾ ಇದೀನಾ ಎನ್ನುವ ಭಾವ ಕೂಡ ಕಾಡಿತು... ಮುಖ ತೊಳೆದು ಡೈನಿಂಗ್ ಟೇಬಲ್ ಮೇಲೆ ಕುಳಿತಾಗ ಮಗ ಸೊಸೆ ಕೂಡ ಬಂದರು... ” ಊಟಕ್ಕೆ ನಾನೇ ಬಡಿಸುತ್ತೇನೆ " ಎಂದು ಸೊಸೆ ಹೇಳಿದಾಗ ನಾನು ಸ್ವಲ್ಪ ಗೆಲುವಾದೆ... ಸೊಸೆಗೆ ಕಣ್ಣಲ್ಲೇ ಧನ್ಯವಾದ ಹೇಳಿದೆ... ಮಗ, ಸೊಸೆ, ಹೆಂಡತಿ ಜೊತೆ ಕುಳಿತು ಊಟ ಮಾಡಿ ಸಂತ್ರಪ್ತಿಯಿಂದ ಮಲಗಲು ಹೋದೆ... ಹೆಂಡತಿ ಸಹ ಹಿಂದೆ ಹಿಂದೆ ಬಂದಳು... " ರೀ, ನನಗೆ ಈವತ್ತು ತುಂಬಾ ಸಂತೋಷ ಆಗ್ತಾ ಇದೆ... ಮಗ, ಸೊಸೆ ಎಲ್ಲರ ಜೊತೆ ಖುಶಿ ಖುಷಿಯಾಗಿರುವ ಎಷ್ಟು ಕುಟುಂಬ ಇದೆ ಜಗತ್ತಲ್ಲಿ..? ನಮಗೆ ಸಿಕ್ಕಿದೆಯಲ್ವಾ.. ಅದೇ ಖುಷಿ... ನಿಲ್ಲಿ ತಾಂಬೂಲ ತರ್ತೇನೆ" ಅಂತ ಗ್ರೌಂಡ್ ಫ್ಲೋರನಲ್ಲಿದ್ದ ಅಡಿಗೆ ಮನೆಗೆ ಹೋಗುತ್ತಿದ್ದವಳನ್ನು ನಿಲ್ಲಿಸಿ " ಇವತ್ತು ನಾನು ತರ್ತೇನೆ... ನೀನು ರೂಮಿಗೆ ಹೋಗು.. " ಎಂದು ಹೇಳಿ ತಾಂಬೂಲ ತರಲು ಹೋದೆ... ಒಳ್ಳೆಯದೊಂದು ಊಟ ಮಾಡಿದ ದಿನ ಪಾನ್ ಹಾಕುವ ಅಭ್ಯಾಸ ನನಗೂ ಇದೆ, ನನ್ನ ಹೆಂಡತಿಗೂ ಇದೆ.. ಫ್ರಿಡ್ಜ್ ತೆರೆದರೆ ಅಲ್ಲೇ ಇತ್ತು ಕಟ್ಟಿ ಇಟ್ಟ ಪಾನ್... 

  "ತಗೋ ಪಾನ್, ಹೆಚ್ಚಿಗೇನೂ ಮಾತಾಡದೆ ಸುಮ್ಮನೇ ತಿನ್ನು... ನಾಳೆ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಬೇಕು.. ಬೇಗ ರೆಡಿಯಾಗು " ಎಂದು ಹೇಳಿ ನಾನು ಮಲಗಿದೆ... ಮಲಗುವ ಮೊದಲು ಆಕೆಯನ್ನೊಮ್ಮೆ ನೆನಸಿದೆ... ಪಾಪ, ಏನು ಮಾಡ್ತಾ ಇದ್ದಾಳೋ ಏನೋ... ಇಲ್ಲೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು... ಎನಿಸಿ ಪಿಚ್ಚೆನಿಸಿತು.... ಹೆಂಡತಿಯೂ ಸಹ ಪಾನ್ ತಿಂದು ಸ್ವಲ್ಪ ಹೊತ್ತಲ್ಲೇ ಮಲಗಿದಳು.... ನಾನು ನಿಸಾರ್ ಅಹಮ್ಮದರ ಎರಡು ಕವನ ಓದಿ ಮಲಗಿದೆ....


   ಎಂದಿನಂತೆ ಬೆಳಿಗ್ಗೆ ಆರಕ್ಕೆ ಎದ್ದು ಪಾರ್ಕ್ ಹೋಗಿ ಎರಡು ಸುತ್ತು ನಡೆದೆ... ಸೂರ್ಯ ನಮಸ್ಕಾರ, ಒಂದೆರಡು ಯೋಗ ಮುಗಿಸಿ ಮನೆಗೆ ಬರುವಾಗ ಎಂಟು ಗಂಟೆ... ಮನೆಯ ಮುಂದೆ ಅಂಬುಲನ್ಸ್... ಗಾಬರಿ ಆಯ್ತು... ಮಗ ಓಡುತ್ತಾ ಬಂದ... " ಅಪ್ಪಾ , ನಿಮ್ಮ ಮೊಬೈಲ್ ಯಾಕೆ ತೆಗೆದುಕೊಂಡೂ ಹೋಗಿಲ್ಲ..? ಅಮ್ಮ ಮಾತನಾಡುತ್ತಿಲ್ಲ... ಬೆಳಿಗ್ಗೆಯಿಂದ ಏಳದ ಅಮ್ಮನ ಸಲುವಾಗಿ ನಾನೇ ರೂಮಿಗೆ ಹೋಗಿ ಏಳಿಸಲು ಹೋದೆ... ಅಮ್ಮ ಮಾತನಾಡಲಿಲ್ಲ.. ಮೂಗಲ್ಲಿ ಸ್ವಲ್ಪ ರಕ್ತ ಬಂದಿತ್ತಪ್ಪಾ.. ಡಾಕ್ಟರ್ ಬಂದಿದ್ದಾರೆ... ನೋಡ್ತಾ ಇದ್ದಾರೆ... " ಎನ್ನುತ್ತಾ ಇರುವಾಗಲೇ ಡಾಕ್ಟರ್ ಹೊರಗೆ ಬಂದರು.. " ಐ ಆಮ್ ಸಾರಿ ಸೂರ್ಯ... ಅಮ್ಮನಿಗೆ ಸೀವಿಯರ್ ಹಾರ್ಟ್ ಆಟ್ಯಾಕ್ ಆಗಿದೆ... ಬಹುಷಃ ಪ್ರಾಣ ಹೋಗಿ ನಾಲ್ಕೈದು ಘಂಟೆಗಳಾಗಿದೆ... " ಎಂದರು.. ನನ್ನೆದೆ ಝಲ್ ಎಂದಿತು... ನನ್ನ ಕಿವಿ ನಾನೆ ನಂಬದಾದೆ... ಕುಸಿದು ಅಲ್ಲೇ ಕುಳಿತೆ....  ಮಗ ಅಂಬುಲನ್ಸ್ನಲ್ಲಿ ಹೋದ...

   ಪೋಸ್ಟ್ ಮಾರ್ಟಮ್ ಮಾಡಿದ ಡಾಕ್ಟರ್ ದೇಹವನ್ನು ನಮಗೆ ಒಪ್ಪಿಸಿದ್ದು ಸುಮಾರು ಮಧ್ಯಾನ್ಹದ ಹೊತ್ತಿಗೆ... ಅಂತಿಮ ಕಾರ್ಯ ಮುಗಿಸಿ ಮನೆಗೆ ಬಂದವನಿಗೆ ಮಗ ಕೇಳಿದ್ದು.. " ಅಪ್ಪಾ, ಅಮ್ಮ ಕೊನೆಯ ಬಾರಿ ಏನು ತಿಂದಿದ್ದರು...? ನೀವು ಮತ್ತೆ ಅಮ್ಮ ಜಗಳವಾಡಿದ್ರಾ..?"ನಾನು ಅವಾಕ್ಕಾದೆ.. ಸೊಸೆ ಅವನ ಹಿಂದೆಯೇ ನಿಂತಿದ್ದಳು... ಅವಳ ಕಣ್ನಲ್ಲೂ ಪ್ರಶ್ನೆಗಳಿದ್ದವು... ನಾನು ನನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡೆ...
    ಯಾರೇ ಸಾಯಲಿ, ಯಾರೇ ಬದುಕಲಿ ಜೀವನ ಸಾಗಲೇ ಬೇಕು... ಉಸಿರು ಬಿಡಲೇ ಬೇಕು... ಹೊಟ್ಟೆ ತುಂಬಲೇ ಬೇಕು... ಹೆಂಡತಿ ತೀರಿ ಹೋದ ಮೇಲೆ ನನ್ನನ್ನು ನಿಜಕ್ಕೂ ಸಮಾಧಾನ ಪಡಿಸಿದವಳು ಆಕೆಯೇ ಆಗಿದ್ದಳು... ಅಮ್ಮನ ಕೆಲಸಕ್ಕೆ ಸೊಸೆಯ ತಕರಾರೂ ಇರಲಿಲ್ಲ... ಆಕೆಗೆ ಅವಳ ಮನೆಯಲ್ಲಿ ಒಬ್ಬಳೇ ಇರಬೇಕಾಗಿತ್ತು... ಕೆಲಸವಳೂ ಸಹ ಅನಾರೋಗ್ಯದ ಕಾರಣ ಹೇಳಿ ಊರಿಗೆ ಹೋಗಿದ್ದಳು... ಹೊತ್ತು ಹೋಗದ ಕಾರಣ ಆಕೆ ನನ್ನ ನೋಡುವ ಸಲುವಾಗಿ ಇಲ್ಲಿಗೆ ಬರುತ್ತಾ ಇದ್ದಳು...  ಈಗೀಗ ಅವಳ ಆರೋಗ್ಯ ಕೈ ಕೊಡುತ್ತಿತ್ತು... ಸ್ವಲ್ಪ ದಿನ ಇಲ್ಲಿದ್ದು ನಂತರ ತನ್ನ ಮನೆಗೆ ಹೋಗುತ್ತಿದ್ದಳು..
   ಬದುಕು ಸಾಗಿತ್ತು... ಯಾರ ನಿರ್ಧಾರಕ್ಕೂ ಕಾಯದೇ... ಯಾರ ಮರ್ಜಿಗೂ ಕೇಳದೇ... ಹೀಗಿರಲು ಒಂದು ದಿನ ಮಗನಿಗೆ ಹೊರದೇಶದಲ್ಲಿ ಕೆಲಸ ಸಿಕ್ಕಿತು.. ಸೊಸೆಗೂ ಸಹ ಅಲ್ಲೇ ಕೆಲಸ ಸಿಗುವ ಹಾಗಿತ್ತು.... ಹಾಗಾಗಿ ಮಗ ಹೊರ ದೇಶಕ್ಕೆ ಹೋಗಲು ತಯಾರಾಗುತ್ತಿದ್ದ... ನಾನು ಅವರ ಭವಿಷ್ಯದ ಬಗ್ಗೆ ನಿರ್ಧಾರ ತಾಳದಾಗಿದ್ದೆ... ಅವರವರ ಭವಿಷ್ಯ ಅವರೇ ತಾನೇ ರೂಪಿಸಿಕೊಳ್ಳುವುದು..? ಅದಕ್ಕೆ ನನ್ನ ಅನುಮತಿ ಯಾಕೆ ಬೇಕು ಎಂದು ನಾನೇ ಸಮಾಧಾನ ಮಾಡಿಕೊಂಡೆ... ನನ್ನ ಬದುಕು ಇನ್ನು ಎಷ್ಟು ದಿನ...? ಅದಕ್ಯಾಕೆ ಇವರು ಒಳ್ಳೆಯ ಅವಕಾಶ ಹಾಳು ಮಾಡಿಕೊಳ್ಳಬೇಕು...? ಹೀಗೆಲ್ಲಾ ಯೋಚಿಸಿ ನಾನು ಅವರನ್ನು ಬೀಳ್ಕೊಡಲು ತಯಾರಾದೆ... ನನ್ನ ಮನಸ್ಸನ್ನು ಓದಿಯೋ ಏನೋ ಮಗ ನನ್ನನ್ನು ಒಂದೂ ಮಾತು ಕೇಳಲಿಲ್ಲ... ಅವರು ಹೊರಡುವ ಮೊದಲ ದಿನ ನನ್ನಲ್ಲಿ ಒಂದು ಯೋಚನೆ ಬಂತು... ಸಮಾಧಾನವಾಗಿ ಯೋಚಿಸಿದಂತೆಲ್ಲಾ ಅದು ಸರಿ ಎನಿಸಿತು.... ಸಮಯ ಕಳೆದಂತೆ ಗಟ್ಟಿಯಾಯ್ತು ಕೂಡ...

    ನಾಳೆ ಬೆಳಿಗ್ಗೆ ಮಗ ಸೊಸೆ ಹೋಗುವವರಿದ್ದರು... ಹಿಂದಿನ ದಿನ  ರಾತ್ರಿ ಊಟ ಕ್ಕೆ ಕುಳಿತಾಗ ನಾನೇ ಮಾತನಾಡಿದೆ... " ನೋಡು ಸೂರ್ಯ... ಬದುಕು ನಮ್ಮನ್ನು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗತ್ತೆ... ನಾವು ಏನು ಆಸೆ ಪಡುತ್ತೇವೋ ಅದು ದೊರಕಲ್ಲ... ಸಿಗದ ಪ್ರೀತಿಗೆ, ಹುದ್ದೆಗೆ ಅಲೆದಾಡುತ್ತೇವೆ... ಕೆಲವೊಮ್ಮೆ ಅದೇ ಪ್ರೀತಿ, ಹುದ್ದೆ ನಮ್ಮನ್ನು ಹುಡುಕುತ್ತಾ ಇರತ್ತೆ... ನೀವು ನಿಮ್ಮ ಅವಕಾಶ ಹಾಳುಮಾಡಿಕೊಳ್ಳದಿರಿ.. ನನ್ನ ಬಗ್ಗೆ ಬಿಡಿ .. ಎಷ್ಟು ದಿನ ಬದುಕಬಹುದು... ಹೆಚ್ಚೆಂದರೆ ಹತ್ತು ವರ್ಷ...?? ಹೇಗೋ ಬದುಕುತ್ತೇನೆ ಬಿಡು.. ಆದರೆ ನನಗೆ ಚಿಂತೆ ಇರೋದು ನಿನ್ನ ಹೆಂಡತಿಯ ಅಮ್ಮನದು... ಅದಕ್ಕೆ ನಾನೊಂದು ನಿರ್ಧಾರ ಮಾಡಿದ್ದೇನೆ... ನಾನು ಅವರನ್ನ ಮದುವೆಯಾಗುತ್ತೇನೆ... ಅವರ ಜೊತೆ ನಾನೇ ಮಾತನಾಡುತ್ತೇನೆ.. ಅದರ ಬಗ್ಗೆ ನಿಮಗೆ ತಲೆಬಿಸಿ ಬೇಡ... ನನಗೆ ನಿಮ್ಮ ಅಭಿಪ್ರಾಯ ಬೇಕು ಅಷ್ಟೆ..." ಎಂದೆ ... 


ಮಗ ನನ್ನ ಮುಖ ನೋಡಿದ......  

ಮುಂದಿನ ಸರದಿ ಪ್ರಕಾಶ್ ಹೆಗ್ಡೆ ಅವರದು