Showing posts with label water. Show all posts
Showing posts with label water. Show all posts

Thursday, June 16, 2016

ಏನಪ್ಪಾ ಕೊನೆಗೂ ಬಂದ್ಯಾ.......? ಅಂದಿತ್ತು ನನ್ನ ಬಾಲ್ಯದ ಗೆಳೆಯ ಕೆರೆ ......!

ಮರೆಯಲೆಂದರೆ   ಮರೆಯಲಿ ಹ್ಯಾಂಗ  ನಿನ್ನನ್ನ 



ಸುಮಾರು  ಒಂದು ವರ್ಷದ ಹಿಂದೆ  ಅನ್ಸುತ್ತೆ,  ಯಾವುದೋ ಒಂದು ಕೆಲಸದ ನಿಮಿತ್ತ    ಬೆಂಗಳೂರಿಗೆ ಹೋಗಿದ್ದೆ,   ವಾಪಸ್ಸು    ಬರುವಾಗ   ಏನೋ ನೆನಪಾಗಿ,     ಮದ್ದೂರಿನ  ಟಿ.ಬಿ. ಸಿರ್ಕಲ್ ನಲ್ಲಿ   ಹಾಗೇ ನಿಂತೇ  ,  ಅಲ್ಲಿಗೆ   ಹೋಗೋದೋ   ಬೇಡವೋ...?  ಅಲ್ಲಿ ಹೋಗಿ   ನನಗೆ ನಾನೇ ಮಾತನಾಡಿ ಕೊಂಡರೆ   ಜೊತೆಯಲ್ಲಿದ್ದವ   ಏನು  ಅಂದುಕೊಂಡಾನೋ...? ಅನ್ನೋ ಭಯ , ಆದ್ರೆ    ಅಲ್ಲಿಗೆ ಹೋಗಲೇ ಬೇಕೂ ಎನ್ನುವ  ಆಸೆ  ತಡೆಯಲಾಗಲಿಲ್ಲ,  ನನ್ನ ಬಾಲ್ಯದಲ್ಲಿ  ಮನಸ್ಸು ಬಿಚ್ಚಿ   ಹೇಳಿದ  ಕಷ್ಟ ಸುಖಗಳಿಗೆ    ಕಿವಿಯಾದ   ಈ ಬಾಲ್ಯದ ಮಿತ್ರನನ್ನು   ನೋಡಲೇ ಬೇಕೆಂಬ   ಹಂಬಲ  ಜಾಸ್ತಿಯಾಗಿತ್ತು,  ಯಾಕಂದ್ರೆ ಅವನನ್ನು  ಭೇಟಿಮಾಡಿ  ಸುಮಾರು 35 ವರ್ಷಗಳಿಗೂ  ಜಾಸ್ತಿಯಾಗಿತ್ತು.  ಒಮ್ಮೊಮ್ಮೆ   ಇವನನ್ನು    ಗೆಳೆಯ ಎನ್ನಬೇಕೋ  ಅಥವಾ   ವಾತ್ಸಲ್ಯ  ತೋರಿ  ನನ್ನ ಮಾತನ್ನು  ಮರುಮಾತನಾಡದೆ  ಕೇಳಿಸಿಕೊಂಡ   ತಾಯಿ ಎನ್ನಬೇಕೋ ತಿಳಿಯುತ್ತಿಲ್ಲ, ಇನ್ನು ಇವನೋ  ನನಗಿಂತಾ ಬಹಳ ಹಿರಿಯ , ನಾನು , ನನ್ನಪ್ಪ ಹುಟ್ಟುವ ಮೊದಲೇ ಇವನು  ಹುಟ್ಟಿದ್ದ,  ಹಾಗಾಗಿ ಇವನನ್ನು  ಅಜ್ಜ, ಅಥವಾ ಅಜ್ಜಿ  ಅನ್ನೋಕೆ   ಭಯ, ಯಾಕಂದ್ರೆ  ಇವನು    ಯಾವತ್ತೂ  ಅಜ್ಜ  ಅಜ್ಜಿಯರಂತೆ   ನನ್ನ   ಬಾಲ್ಯದ  ಅನುಭವಗಳನ್ನು    ಕೇಳಿಸಿಕೊಳ್ಳಲಾಗದ   ಅಸಹಾಯಕನಾಗಿರಲಿಲ್ಲ .   ಹಾಗಾಗಿ  ಇವ ನನಗೆ ಎಲ್ಲವೂ ಆಗಿದ್ದ , ಗಟ್ಟಿ ಮನಸು ಮಾಡಿ  ಅವನನ್ನು ನೋಡಲು  ತೆರಳಿದೆ.


ಕಬ್ಬಿನ  ಗದ್ದೆಯಲ್ಲಿ  ಚಾಮರ ಬೀಸಿತ್ತು ತಂಗಾಳಿ 

ನನ್ನ ಬಾಲ್ಯ ಕಳೆದ  ಊರು , ಮನೆ, ಗದ್ದೆ, ವಿ.ಸಿ. ನಾಲೆ,  ಎಲ್ಲದರ ದರ್ಶನವನ್ನು ತುರ್ತಾಗಿ  ಮಾಡಿದೆ.   ,  ಆದರೆ ನನ್ನ ಮನಸು   ಇವನನ್ನು  ಕಾಣಲು ಹಾತೊರೆಯುತ್ತಿತ್ತು,   ನನ್ನ ಗೆಳೆಯನ ಕಾಣಲು    ಒಂದೇ  ಉಸಿರಿನಲ್ಲಿ  ಓಡಿದೆ . ಜೊತೆಯಲ್ಲಿದ್ದ ಗೆಳೆಯನಿಗೆ  ನನ್ನನ್ನು  ಒಂಟಿಯಾಗಿ  ಬಿಡುವಂತೆ ಕೋರಿ, ಒಬ್ಬನೇ  ನನ್ನ ಗೆಳೆಯನ  ಸನಿಹ ಕುಳಿತೆ. ನನಗೆ ಅರಿವಿಲ್ಲದಂತೆ  ನೆನಪಿನ  ಚಿತ್ರಗಳು  ಮನದಲ್ಲಿ ಮೂಡುತ್ತಿದ್ದವು,  ಬಾಲ್ಯದ  ಚಿತ್ರಗಳನ್ನು  ಕಾಣುತ್ತಾ  ಕಣ್ಣಲ್ಲಿ   ನೀರು ಜಿನುಗಲು ಶುರು ಆಯ್ತು   ಅದು  ಆನಂದ ಕ್ಕೊ  ಅಥವಾ  ನೋವಿಗೋ ಒಂದೂ ತಿಳಿಯಲಿಲ್ಲ.      ಅಲ್ಲೇ ಸನಿಹದಿಂದ  ತಂಗಾಳಿ ಬೀಸಿ  ನನ್ನನ್ನು  ಸಂತೈಸುತ್ತಿತ್ತು.  ದಡದಲ್ಲಿ   ಸದ್ದು ಮಾಡದೆ ಕುಳಿತೇ  ಇದ್ದೆ   ನಾನು ಬಾಲ್ಯದಲ್ಲಿ ಕಂಡ  ಗೆಳೆಯ   ಮೂವತ್ತೈದು  ವರ್ಷಗಳಲ್ಲಿ  ಬಡವಾಗಿದ್ದ, ಮೊದಲಿದ್ದ  ಅಲಂಕಾರ ಇಲ್ಲವಾಗಿತ್ತು,  ಸಾವಿನ ಅಂಚಿನಲ್ಲಿ   ದಿನಗಳನ್ನು ಎಣಿಸುತ್ತಾ  ಇರುವ   ರೋಗಿಯಂತೆ  ಅವನ ದರ್ಶನ  ಆಯಿತು.     ನಾನು ಅವನನ್ನು ನೋಡುತ್ತಾ  ಕುಳಿತೇ ಇದ್ದೆ,  ನಿಶ್ಯಬ್ಧ  ನಿಶ್ಯಬ್ಧ  ನಿಶ್ಯಬ್ಧ   ,.........................   ಎತ್ತಲಿಂದಲೋ   ತೇಲಿಬಂತು    "ಓ   ಹೋ ಕೊನೆಗೂ ಬಂದ್ಯಾ....? "   "ಈಗ ನೆನಪಾದ್ನಾ    ನಾನೂ ...?"     ಎಂಬ ಮಾತು,  ಬೆಚ್ಚಿ ಬಿದ್ದು    ಅತ್ತ ಇತ್ತ ನೋಡಿದೆ, ಯಾರೂ ಇಲ್ಲ .  ಅಲ್ಲೇ ಸನಿಹದಲ್ಲಿ   ನೀರಿನ ಒಳಗಿಂದ   ಒಂದು ಕಪ್ಪೆ  ನನ್ನನ್ನು ನೋಡಿ  ಬಾಯ್ತೆರೆದು  ಕಣ್ಣಗಲಿಸಿ    ಅಣಕಿಸಿತ್ತು .   ಆದರೆ ಯಾರೂ ಇಲ್ಲ .  ಮತ್ತೆ ನಿಶ್ಯಬ್ಧ    ಸ್ವಲ್ಪ ಹೊತ್ತು ಬಿಟ್ಟು   ಮತ್ತದೇ   ಪ್ರಶ್ನೆ ತೇಲಿಬಂತು  .   ಮತ್ತೆ   ಮತ್ತೆ  ಕಣ್ಣುಗಳು  ಸುತ್ತ ಮುತ್ತ ನೋಡಿದರೂ   ಏನೂ ಕಾಣಲಿಲ್ಲ.   ಅಷ್ಟರಲ್ಲಿ    ಕಣ್ಣು ಮುಚ್ಚಿಕೋ.......   ಹಾಗೆ ಮಾತನಾಡೋಣ  ಎನ್ನುವ   ಮಾತು ತಂಗಾಳಿ  ಯೊಡನೆ ತೇಲಿಬಂತು.    ಗೆಳೆಯನ  ಜೊತೆ ಸಂವಾದ ನಡೆಸಲು   ಕಣ್ಣು ಮುಚ್ಚಿ  ಕುಳಿತೆ.

ಬಾಲ್ಯದ  ನೆನಪುಗಳ  ಸಾಕ್ಷಿ  ಇವೆಲ್ಲಾ 


 "ಓ   ಹೋ ಕೊನೆಗೂ ಬಂದ್ಯಾ....? "   "ಈಗ ನೆನಪಾದ್ನಾ    ನಾನೂ ...?"  ಅಂತೂ ಇಂತೂ  ಬಂದ್ಯಲ್ಲಪ್ಪ  ಖುಷಿಯಾಯ್ತು ,  ಹೇಗಿದ್ದೀಯ  ...?

ನಾನು :-     "ಹೌದು ಬಹಳ ವರ್ಷಗಳ   ನಿನ್ನ ನೆನಪು ಕಾಡಿತ್ತು   ನಿನ್ನ ನೋಡಲು ಬಂದೆ ,   ನನ್ನ ಹಳೆಯ  ಬಾಲ್ಯದ ನೆನಪುಗಳ  ಸಾಕ್ಷಿ   ಆಲ್ವಾ ನೀನು ಅದಕ್ಕಾಗಿ   ಓಡಿ  ಬಂದೆ . ದಯವಿಟ್ಟು ಕ್ಷಮಿಸಿ ಬಿಡೂ   ಬಹಳ ವರ್ಷಗಳಿಂದ   ನಿನ್ನನ್ನು ನೋಡಲು  ಜೀವನ ಜಂಜಾಟದ   ಕಾರಣ ಬರಲಾಗಲಿಲ್ಲ. "

ಅವನು :- "ಅಯ್ಯೋ ಕ್ಷಮೆಯಾಕೆ ಕೇಳ್ತೀಯ ...?  ಹೋಗಲಿ ಬಿಡೂ,  ಎಷ್ಟೋ  ಜನ  ನಿನ್ನ ಹಾಗೆ ನನ್ನ ಬಳಿಯಲ್ಲಿ  ಬಾಲ್ಯದ ನೆನಪಿನ  ಗಂಟನ್ನು  ಬಿಟ್ಟಿದ್ದರೂ  ಇಲ್ಲಿಯವರೆಗೆ  ಅದನ್ನು  ಹುಡುಕಿಕೊಂಡು  ಯಾರೂ ಬಂದಿಲ್ಲ,  ಬರುವುದಿಲ್ಲಾ ಕೂಡ,  ಆದರೆ ನೀನು   ಹಾಗೆ ಮಾಡಲಿಲ್ಲ  ,  ನನ್ನ  ಜೀವಿತಾವದಿಯಲ್ಲಿ   ಗೆಳೆತನ ಹುಡುಕಿಕೊಂಡು  ಒಬ್ಬನಾದರೂ   ಬಂದನಲ್ಲ  ಅದೇ ಖುಷಿ ನನಗೆ. "

ನಾನು :-  "ಅಯ್ಯೋ  ಅದರಲ್ಲಿ ನನ್ನ ದೊಡ್ಡಸ್ತಿಕೆ  ಏನೂ ಇಲ್ಲಾ,  ನಿನಗೆ ಗೊತ್ತಲ್ಲಾ   ನಿನ್ನ ಬಳಿ  ನಾನು  ಅತ್ಯಂತ ಖುಷಿಯ  ಹಾಗು  ಅತ್ಯಂತ  ನೋವಿನ  ಕ್ಷಣಗಳನ್ನು ಹಂಚಿ ಕೊಂಡಿದ್ದೇನೆ . ನಾನು ಸಂತೋಷ ಗೊಂಡಾಗ  ನಲಿದು,  ನಾನು ಸಂಕಟದಿಂದ  ನರಳಿದಾಗ  ಕರುಣೆಯಿಂದ   ಸಂತೈಸಿದವ   ನೀನು. ಪ್ರತಿನಿತ್ಯ  ಶಾಲೆಗೆ  ಹೋಗುವಾಗ    ಹಾಗು ಬರುವಾಗ   ನನ್ನ ಸೈಕಲ್  ನಿಲ್ಲಿಸಿ   ನಿನ್ನ  ಹತ್ತಿರ ಕೂರುತ್ತಿರಲಿಲ್ಲವ ನಾನು...?  ಕೆಲವೊಮ್ಮೆ   ಹಾಗೆ ಕುಳಿತು ನನಗೆ ನಾನೇ ಮಾತನಾಡುವುದನ್ನು  ಕಂಡ ಕೆಲವು  ಜನರು    ಲೇ  ಹುಡುಗ   ಯಾಕೋ ಅಲ್ಲಿ ಕುಳಿತಿದ್ದೀಯ ...?  ಕಾಲು ಜಾರಿ ನೀರಿಗೆ ಬಿದ್ದೀಯ  .....!   ಮೊದ್ಲು    ಅಲ್ಲಿಂದ  ಎದ್ದು  ಮನೆಗೆ ಹೋಗು ಅಂತಾ  ಗದರಿಸಿ ಹೇಳ್ತಾ ಇದ್ರೂ ,  ಅದಕ್ಕೆ ಸೊಪ್ಪು ಹಾಕಿರಲಿಲ್ಲ.   ಈ ವಿಚಾರ ನನ್ನಪ್ಪನಿಗೂ ಗೊತ್ತಾಗಿ  ಒಂದೆರಡು  ಏಟು  ಬಹುಮಾನ   ಕೊಟ್ಟು ಅಲ್ಲಿಗೆ ಹೋಗಿ ಕೂರದಂತೆ   ತಾಕೀತು   ಮಾಡಿದ್ದರು . ಆದರೆ  ನಾನು    ನಿನ್ನ ಹತ್ತಿರ ಕುಳಿತು  ಮಾತನಾಡುವುದನ್ನು ಮಾತ್ರ ಬಿಡಲಿಲ್ಲ.  ಸುಮಾರು ಹತ್ತು ವರ್ಷ ನಿನ್ನೊಡನೆ  ಮಾತು ಕಥೆ  ನಡೆಸಿದ ನೆನಪು ನನಗೆ ಹೌದಲ್ವಾ ...? "

ಅವನು :-) "ಹ ನಿಜ  ನಿಜ ,  ನನಗೆ ನೆನಪಿದೆ,   ನಿನ್ನ ಈ ಎಲ್ಲಾ  ನಡವಳಿಕೆ ,  ನಿನ್ನ ಮೊದಲ ಭೇಟಿ   ಹೇಗಾಯ್ತು ಗೊತ್ತಾ ...?  ಹೇಳ್ತೀನಿ ಕೇಳು.  ನೀನು ಬಹುಷಃ  ಆರನೇ ತರಗತಿ ಇರಬೇಕು,  ಒಂದು ದಿನ ಸಂಜೆ   ಶಾಲೆ ಮುಗಿಸಿ   ನಿನ್ನ ಮನೆಯ ಕಡೆ ಹೊರಟಿದ್ದೆ,  ಜಿಟಿ  ಜಿಟಿ ಮಳೆ ಬರ್ತಾ ಇತ್ತು, ಆದರೆ  ನಿನ್ನ  ಉತ್ಸಾಹಕ್ಕೆ   ಕೊರತೆ ಇರಲಿಲ್ಲ,  ಬಾಯಿಗೆ ಬಂದಂತೆ ಹಾಡುತ್ತಾ  ಜೋರಾಗಿ ಸೈಕಲ್  ತುಳಿಯುತ್ತಾ    ಬರ್ತಾ  ಇದ್ದೆ.  ನಿನಗೆ ಗೊತ್ತಲ್ಲ...?   ಆಗಿನ ರಸ್ತೆ ಈಗಿರುವಷ್ಟು ದೊಡ್ಡದಾಗಿ ಇರಲಿಲ್ಲ.   ನಿನ್ನ ಎದುರುಗಡೆ    ವೇಗವಾಗಿ  "ಉದಯರಂಗ"  ಬಸ್ ಬರ್ತಾ  ಇತ್ತು,  ನೀನು ಆ ಬಸ್ಸಿನ  ರಭಸಕ್ಕೆ  ಬೀಸಿದ     ಗಾಳಿಯಿಂದ  ಆಯತಪ್ಪಿ ಸೈಕಲ್ಲಿನಿಂದ ಬಿದ್ದೆ, ನಿನ್ನ ಪುಣ್ಯ ಚೆನ್ನಾಗಿತ್ತು   ಅಲ್ಲೇ ಇದ್ದ  ತಡೆ ಕಲ್ಲಿಗೆ ನಿನ್ನ ಸೈಕಲ್ ಗುದ್ದಿ ನಿಂತಿತು. ಹಾಗು ನಿನ್ನನ್ನು ಸಹ ನನ್ನೊಳಗೆ ಬೀಳದಂತೆ ತಡೆಯಿತು.  ನಿನ್ನ ಬಲಕಾಲಿನ  ಮಂಡಿಯಲ್ಲಿ   ಗಾಯವಾಗಿ ರಕ್ತ  ಸೋರುತ್ತಿತ್ತು,  ಅಷ್ಟರಲ್ಲಿ  ಬಂದ ಯಾರೋ ಒಬ್ಬರು  ನಿನ್ನನ್ನು ಅಲ್ಲೇ ಕೂರಿಸಿ,  ಅಲ್ಲೇ ಇದ್ದ ತುಂಬೆ ಗಿಡದ   ಎಲೆಗಳನ್ನು  ಕಿತ್ತು ತಂದು  ಅವುಗನ್ನು  ಕೈಗಳಲ್ಲಿ  ಉಜ್ಜಿ ಹಿಂಡಿ  ರಸ ತೆಗೆದು  ನಿನ್ನ ಗಾಯಕ್ಕೆ ಹಾಕಿದರು, ಅಲ್ಲೇ ಸ್ವಲ್ಪ  ಹೊತ್ತು ತುಂತುರು ಮಳೆಯಲ್ಲೇ  ನೆನೆಯುತ್ತಾ  ನನ್ನ ಬಳಿ  ಕುಳಿತಿದ್ದೆ  ನೀನು,   ಆ ದಿನ  ಶುರು ಆದ ನಿನ್ನ ನನ್ನ ಗೆಳೆತನ   ಮಾತನಾಡುವ  ಮಟ್ಟಕ್ಕೆ  ಬಂದಿತ್ತು." "



 ದಿನವೂ  ಶಾಲೆಗೇ ಹೋಗ್ತಾ ಇದ್ದ  ರಸ್ತೆ 

ನಾನು :-    "ನಿಜ, ನೀನು ಹೇಳಿದ್ದು,  ನೋಡು ಅವತ್ತು ಆದ ಗಾಯದ ಗುರುತು ಇಂದಿಗೂ ಹಾಗೆ ಇದೆ, ಅದ್ಯಾಕೋ ಗೊತ್ತಿಲ್ಲ, ಆ ಘಟನೆ ಆದ ಮಾರನೆಯ ದಿನ  ಮತ್ತೆ  ಶಾಲೆಗೇ ಹೊರಟೇ, ಮನೆಯಲ್ಲಿ ಅಮ್ಮಾ   ಲೋ ನಿನ್ನೆ ತಾನೇ  ಮಳೆಯಲ್ಲಿ ನೆನೆದು  ಬಂದೆ,  ರಾತ್ರಿಯೆಲ್ಲಾ   ಮೈ ಬಿಸಿ ಇತ್ತು   ಇವತ್ತು ಶಾಲೆ ಬೇಡ ಮನೆಯಲ್ಲಿ ಇರು ಅಂದ್ರೂ ಕೇಳದೆ . ಸೈಕಲ್ಲಿನಲ್ಲಿ  ಹೊರಟೆ,  ದಾರಿಯಲ್ಲಿ  ನಿನ್ನ ಹತ್ತಿರ ಬಂದ ತಕ್ಷಣ  ನಾನು ಬಿದ್ದ ಸ್ಥಳವನ್ನು   ಹುಡುಕಿ, ಅಲ್ಲಿ ನಿಂತೇ,  ಮನದಲ್ಲಿ  ಸ್ವಲ್ಪ ಹೆದರಿಕೆ ಇತ್ತು,  ನಿನ್ನ ಸಮೀಪ ಸ್ವಲ್ಪ ಹೊತ್ತು  ಮೌನವಾಗಿ ಕುಳಿತು,  ಶಾಲೆಗೇ ಹೊರಟೆ , ಮತ್ತೆ   ವಾಪಸ್ಸು  ಬರುವಾಗ   ಮಳವಳ್ಳಿಯ ಪರಿಮಳ ಬೇಕರಿಯಲ್ಲಿ   "ದಿಲ್ ಪಸಂದ್ " ಅನ್ನೋ  ತಿಂಡೀ  ಹಾಗು ಖಾರ  ಪಕೋಡ  ಖರೀದಿಸಿ  ನಿನ್ನ  ಬಳಿ ಬಂದು   ಕುಳಿತೆ,  ತಿಂಡೀ ತಿನ್ನುವ ಮೊದಲು   ಸ್ವಲ್ಪ  ಮುರಿದು  ನಿನಗೆ  ಕೊಟ್ಟೆ , ನೀನು ನನಗೆ ಥ್ಯಾಂಕ್ಸ್ ಸಹ ಹೇಳಲಿಲ್ಲ.  ಹಾಗೆ ಕೊಟ್ಟ ತಿಂಡಿಯನ್ನು  ಗುಳುಂ ಮಾಡಿದೆ.   ನಂತರ ನಿನ್ನೊಡನೆ ಮಾತನಾಡುತ್ತಾ   ಗಾಯದ ನೋವಿನ ಬಗ್ಗೆ   ಹೇಳಿಕೊಂಡೆ. ಬೇಗನೆ ಗಾಯ ವಾಸಿಮಾಡು  ಅಂತಾ ನಿನ್ನಲ್ಲಿ ಕೇಳಿಕೊಂಡ  ನೆನಪು.  ಮರೆತಿಲ್ಲ  ಮಿತ್ರ".


ಗೆಳೆಯನ ಇಂದಿನ ಪರಿಸ್ಥಿತಿ 


ಅವನು :-  "ಪ್ರತೀ ಶನಿವಾರ   ಶಾಲೆಯಿಂದ ವಾಪಸ್ಸು ಬರುವಾಗ   ನೀನು  ಮಸಾಲೆ ದೋಸೆ  ತಂದು  ನನ್ನ ಜೊತೆ ಹಂಚಿಕೊಂಡು  ತಿನ್ನುತ್ತಿದ್ದೆಯಲ್ಲ  ಅದನ್ನು ಮರೆತಿಲ್ಲಾ  ಕಣಪ್ಪ, ಜೊತೆಗೆ  ನಿನ್ನ ಶಾಲೆಯಲ್ಲಿ  ಶಿಕ್ಷಕರು  ಬೈದಾಗ , ಹೊಡೆದಾಗ  ಅಂದು  ಅಳುತ್ತಾ  ನನ್ನೊಡನೆ  ನೋವನ್ನು  ಹಂಚಿಕೊಳ್ತಾ  ಇದ್ದೆ.  ನನಗೂ ಅಯ್ಯೋ ಅನ್ನಿಸುತ್ತಿತ್ತು, ಪ್ರತೀ ವರ್ಷ  ಶಾಲೆಯಲ್ಲಿ ನಿನ್ನ ಫಲಿತಾಂಶ  ಬಂದಾಗ  ಖುಷಿಯಿಂದ ಬಂದು ಸಿಹಿ  ನೀಡಿ   ನಿನ್ನ ಸಾಧನೆ ಬಗ್ಗೆ  ಜಂಭ  ಕೊಚ್ಚಿ ಕೊಳ್ತಾ  ಇದ್ದೆ ನೀನು. ಒಮ್ಮೆಯಂತೂ  ಒಂದು ಹಾವು  ಕಪ್ಪೆಯನ್ನು ತಿನ್ನಲು ಬಂದಾಗ   ಅದಕ್ಕೆ ಕಲ್ಲು ಹೊಡೆದು , ಕಪ್ಪೆ  ತಿನ್ನಲು ಅವಕಾಶ ಕೊಡಲಿಲ್ಲ ನೀನು,  ನಂತರ   ಆ ಹಾವು  ನಿನ್ನನ್ನು  ಅಟ್ಟಿಸಿಕೊಂಡು ಬಂದಾಗ   ನಿನ್ನ ಸೈಕಲ್  ಏರಿ ಓಟ ಕಿತ್ತಿದ್ದೆ,  ಆ ಹಾವಿಗೆ ಹೆದರಿ ನೀನು ಎರಡುದಿನ ಬರಲಿಲ್ಲ  . ಇನ್ನೊಂದು ದಿನ  ಮೀನು ಹಿಡಿಯುವ  ಹುಡುಗರು  ಮೀನು ಹಿಡಿಯಲು ಬಂದಾಗ ,   ಗಾಳಕ್ಕೆ  ಕಟ್ಟಲು  ಅವರು ತಂದಿದ್ದ  ಎರೆಹುಳುಗಳನ್ನು   ಅಪಹರಿಸಿ   ಅವರಿಂದ  ಗೂಸ ತಿಂದೆ , ಆದರೆ ಏನ್ ಮಾಡಲಿ  ನಾನು ಅಸಹಾಯಕನಾಗಿ ಇದನ್ನೆಲ್ಲಾ   ನೋಡ್ತಾ ಇದ್ದೆ.   ಮತ್ತೊಮ್ಮೆ  ಏಡಿ  ಹಿಡಿಯಲು ಬಂದ  ಕೊಕ್ಕರೆಗೆ ಹೊಡೆದ ಕಲ್ಲು  ಯಾರಿಗೋ ಬಿದ್ದು  ಅವರಿಂದಲೂ ಸಹ  ನಿನಗೆ ಗೂಸ  ಸಿಕ್ಕಿತ್ತು   ಆದರೆ ಘಟನೆಗಳು  ನಡೆದ ಸಂಜೆಯೇ   ನೀನು ಅಳುತ್ತಾ  ಅ ಹುಡುಗರು  ಮೀನನ್ನು ಹಿಡಿದು ಸಾಯಿಸುತ್ತಿರುವುದಾಗಿ  ನನ್ನ  ಬಳಿ ಅಳುತ್ತಾ  ಸಂಕಟ ಪಟ್ಟೆ. ಇಷ್ಟೆಲ್ಲಾ  ಆದ್ರೂ  ನೀನೇನು  ಬಹಳ ಒಳ್ಳೆಯವನಲ್ಲಾ ಬಿಡೂ  ಒಮ್ಮೊಮ್ಮೆ   ನನ್ನ ಒಡಲಿಗೆ  ಮೂತ್ರ  ಸಿಂಚನ  ಮಾಡುತ್ತಾ ಇದ್ದೆ , ಆದರೆ ನಿನ್ನ ಮೇಲಿನ ಪ್ರೀತಿಯಿಂದ ಅದನ್ನೂ ಸಹ ಸಹಿಸಿಕೊಂಡಿದ್ದೆ   ಗೊತ್ತಾ ನಿನಗೆ . "

ನಾನು :-" ಅರೆ ಇದೆಲ್ಲಾ  ನೀನು ಮರೆತೇ ಇಲ್ವಾ ...? ಹೌದಯ್ಯ    ಆಗ ತಿಳುವಳಿಕೆ ಇರಲಿಲ್ಲ  ಕೆಲವೊಮ್ಮೆ ವಯಸ್ಸಿನ ಸಹಜ  ಹುಡುಗಾಟ ಆಡಿದ್ದೆ  ನಿನ್ನ ಜೊತೆ , ಈಗ ಇದನ್ನೆಲ್ಲಾ ನೆನೆದಾಗ  ಕೆಲವೊಮ್ಮೆ ನೋವಾಗುತ್ತದೆ.   ಹೌದಪ್ಪಾ  ಅ ದಿನಗಳು ಸ್ವರ್ಗದ  ದಿನಗಳು ಕಣಪ್ಪಾ,  ನೋಡು  ನೀರು  ತುಂಬಿಕೊಂಡು  ಜೋರಾಗಿ  ಎತ್ತರವಾದ ಅಲೆಗಳನ್ನು ಎಬ್ಬಿಸಿ   ದಡಕ್ಕೆ ಅಪ್ಪಳಿಸಿ  ನೀರನ್ನು  ರಸ್ತೆಗೆ  ಚೆಲ್ಲಾಡುತ್ತಿದೆ, ಆಗಂತೂ ನೀನು ಸಮುದ್ರ   ಎನ್ನುವಂತೆ  ಭಾವನೆ ಬರ್ತಾ ಇತ್ತು,  ಮಳೆಗಾಲದಲ್ಲಿ  ಮಳೆಯಲ್ಲಿ  ನೆನೆಯುತ್ತಾ   ನಿನ್ನನ್ನು  ನೋಡ್ತಾ ಇದ್ದರೆ ಅದರ ಮಜವೇ ಮಜಾ ಬಿಡೂ ,    ನಿನ್ನಲ್ಲಿ ಬಿದ್ದ ಮಳೆ ಹನಿಗಳು  ಚಕ್ಕುಲಿಯಂತೆ  ಚಿತ್ತಾರ ಬಿಡಿಸುತ್ತಿದ್ದವು.  ಇನ್ನು ಚಳಿಗಾಲ ಬಂದರೆ ನಿನ್ನಲ್ಲಿ  ನೂರಾರು  ಹಕ್ಕಿಗಳ  ಕಲರವ  ತುಂಬಿದ  ಆಟ  ಕಾಣುತ್ತಿತ್ತು, ದೂರದಲ್ಲಿ ನೀರು ನಾಯಿಗಳು  ನೆಗೆದಾಡುತ್ತಾ  ತೇಲುತ್ತಿದ್ದವು.  ಬೇಸಿಗೆಯಲ್ಲೂ ಸಹ ನಿನ್ನ ಅಂದ  ಕೆಡುತ್ತಿರಲಿಲ್ಲ, ಅಷಾಡ ಮಾಸದ  ಬಿರುಸಾದ ಗಾಳಿಗೆ  ನನ್ನ ಸೈಕಲ್  ನೆಟ್ಟಗೆ ಓಡಿಸಲು ಆಗ್ತಾ ಇರಲಿಲ್ಲ.  ಆದರು ಓರೆ ಕೊರೆಯಾಗೆ  ಸೈಕಲ್ಲನ್ನು ಓಡಿಸಿಕೊಂಡು ನಿನ್ನ ಬಳಿ   ಬರ್ತಾ ಇದ್ದೆ.   ಇನ್ನು ಮುಸ್ಸಂಜೆಯಲ್ಲಿ   ಸುಂದರ  ಸೂರ್ಯಾಸ್ತ  ನೋಡುತ್ತಿದ್ದ  ಆ  ಖುಷಿಯೇ  ಬೇರೆ  ಬಿಡೂ.    ನಿನ್ನ ಬಗ್ಗೆ ಯಾಕೆ ಹೆಮ್ಮೆ ಗೊತ್ತಾ....?  ನಾನೂ ನೀನು ಗೆಳೆಯರಾಗಿದ್ದ  ಸಮಯದಲ್ಲಿ  ನೀನು ಯಾರಿಗೂ  ತೊಂದರೆ ಕೊಡಲಿಲ್ಲ,  ಒಂದು ದಿನವೂ ನಿನ್ನಲ್ಲಿ ಅಪಘಾತದಿಂದ  ವಾಹನಗಳು  ಬಿದ್ದ ಬಗ್ಗೆಯಾಗಲಿ,  ಜನಗಳು ಸತ್ತ ಬಗ್ಗೆಯಾಗಲಿ  ವರದಿ ಆಗಲಿಲ್ಲ. ಸುತ್ತ ಮುತ್ತ ಇದ್ದ  ಗದ್ದೆಗಳ  ರೈತರಿಗೆ , ಅವರ ಬೆಳೆಗೆ  ಜೀವ ನೀಡುತ್ತಿದ್ದೆ ನೀನು,  ಇನ್ನು   ಎರಡೂ  ಕೊನೆಯಲ್ಲಿ ಇದ್ದ ಎರಡು ಕೊಡಿಗಳು  ತುಂಬಿ ಜಲಪಾತದಂತೆ  ಹರಿದಾಗ   ಅವೇ ನಮಗೆ ಗಗನ ಚುಕ್ಕಿ , ಭರಚುಕ್ಕಿ  ಜಲಪಾತ ವಾಗುತ್ತಿದ್ದವು. ಆ ರಮಣೀಯ   ದೃಶ್ಯ  ನೋಡೋ ಭಾಗ್ಯ ಈಗಿಲ್ಲಾ ಬಿಡೂ.   ಆ ಕೋಡಿಯಲ್ಲಿ  ಮನೆಯವರಿಗೆ ಗೊತ್ತಿಲ್ಲದಂತೆ  ಸ್ನಾನ ಮಾಡುತ್ತಿದ್ದುದು ಮರೆತಿಲ್ಲಾ ಕಣಯ್ಯ ."

ಅಸ್ಥಮಿಸುವ   ಸೂರ್ಯನೂ   ಕೆಂಪಗೆ 



ಅವನು :-" ನೋಡು ಹಳೆಯ  ನೆನಪನ್ನು  ಜ್ಞಾಪಿಸ ಬೇಡ  ಸಂಕಟ ಆಗುತ್ತೆ.  ನನ್ನ ಕಥೆ ಇರಲಿ ಇದೇನಯ್ಯ  ನೀನು  ಏನು  ಹೀಗೆ ಆಗಿದ್ಯಾ,.....?  ಚಿಕ್ಕ ವಯಸ್ಸಿನಲ್ಲಿ ಒಳ್ಳೆ ಹೀರೋ  ತರಹ ಇದ್ದವನು  ಈಗ  ವಿಲ್ಲನ್  ತರಹ ಆಗಿದ್ದೀ ...?  ಯಾಕೆ  ಜೀವನದಲ್ಲಿ ಖುಶಿ ಇಲ್ವಾ ...?"


ನಾನು : -  "ಹೌದು ಕಣಯ್ಯ   ಜೀವನ ಪಯಣದಲ್ಲಿ ಆದ ಬದಲಾವಣೆ  ಇದು.  ಜೀವನ ಮಾಗಿದಂತೆ ದೇಹವೂ ಮಾಗುತ್ತದೆ ಆಲ್ವಾ ..?"
 ನಂತರ   ಸ್ವಲ್ಪ ಕೋಪ ಬಂದು   "ಓ.......   ಹೋ ....   ನೀನೇನು  ಈಗ ಸುರಸುಂದರಾಂಗನ ತರಹ  ಇದ್ದೀಯ  ಅದಕ್ಕೆ ನನ್ನನ್ನು ಕಿಚ್ಹಾಯಿಸುತ್ತಿದ್ದೀಯ ಆಲ್ವಾ ...?  ನಿನ್ನ ಅವಸ್ತೆ ನೋಡಿಕೋ  ಹೇಗಿದೆ  ಅಂತಾ ..? " ಅಂದೇ

ಅವನು :-  "ನಿಜ  ಕಣಪ್ಪಾ  ನಾನು ಇಂದು ಕುರೂಪಿಯೇ , ಇಂದು ನನ್ನ ಒಡಲಲ್ಲಿ ವಿಷ ಇದೆ,  ಯಾವ ಜೀವಿಯೂ ಬದುಕಲಾಗದಷ್ಟು  ನನ್ನ ಒಡಲು ಬಂಜರಾಗಿದೆ , ನೋಡು ನಾನು  ಹೇಗಿದ್ದೇನೆ,  ಜೊಂಡು  ಹುಲ್ಲು, ತಾವರೆ ಗಿಡಗಳು,  ನಾನೇ ನಿರಡಿಕೆಯಿಂದ  ಕೆಲವೊಮ್ಮೆ  ನೀರು ಸಿಗದೇ   ನರಳುತ್ತೇನೆ,   ಹಕ್ಕಿ ಪಕ್ಷಿಗಳು  ಹೆಚ್ಚು ಬರುತ್ತಿಲ್ಲ,   ಏಡಿಗಳು, ಮೀನುಗಳು, ನೀರು ಹಾವುಗಳು  , ನೀರು ನಾಯಿಗಳು   ಎಲ್ಲಾ ನನ್ನನ್ನು ತ್ಯಜಿಸಿವೆ.  ಹೊಸ ರಸ್ತೆಯಾದ ನಂತರ   ನನ್ನೊಳಗೆ  ಬೀಳುವ  ವಾಹನ , ಜನ  ಜಾಸ್ತಿಯಾಗುತ್ತಿದ್ದು,   ಅದರ ಕೆಟ್ಟ ಹೆಸರು ನನಗೆ ಬರ್ತಾ ಇದೆ.  ಪಕ್ಕದ ಗದ್ದೆಗಳ ರೈತರು  ನನ್ನನ್ನು  ನನ್ನ ಸಂಕಟವನ್ನು ಅರಿಯದೆ   ಬೈಯ್ಯುತ್ತಾರೆ .  ಇನ್ನೆಷ್ಟು ದಿನ  ಇಂತಹ  ಜೀವನವೋ  ನಾ ಕಾಣೆ, ಕೊನೆಯ ಉಸಿರನ್ನು  ಎಳೆಯಲು  ಯಾತನಾಮಯ  ದಿನಗಳನ್ನು ಎಣಿಸುತ್ತಾ ಇದ್ದೇನೆ.   ಬೇಗ  ನನಗೆ ಸಾವು ಬರಲಿ  ಅಂತಾ     ಹಾರೈಸು  ಗೆಳೆಯ ."

ನಾನು :-) ಗೆಳೆಯನ ಮಾತನ್ನು ಕೇಳಿ   ಅದುರಿಹೋದೆ,  ಮೈ ಎಲ್ಲಾ  ಕಂಪಿಸುತ್ತಿತ್ತು,  "ಗೆಳೆಯ ನೀ ಸಾಯ ಬೇಡ..........  ನೀ ಸಾಯ ಬೇಡ ದಯವಿಟ್ಟು  ಅನ್ನುತ್ತಾ  ಜೋರಾಗಿ  ಕಿರುಚುತ್ತಿದ್ದೆ,  ಅಯ್ಯಾ    ನಿನ್ನ ಚಿತ್ರಗಳನ್ನು   ತೆಗೆಯಲೇ...?  " ಅಂದೇ.

    ಅವನು :- ಏನಯ್ಯ  ಯಾರಾದ್ರೂ   ಸಾಯೋ ಕ್ಷಣಗಳನ್ನು  ಎಣಿಸುತ್ತಿರುವ   ಮಂದಿಯ  ಅಥವಾ   ಹೆಣದ   ಚಿತ್ರ  ತೆಗೀತಾರ ...? ನಿನಗೆಲ್ಲೂ ಹುಚ್ಚು,   ಏನೂ ಬೇಡ ನಡ್ ನಡೀ ಅಂದ,

ನಾನು  :- ಏ ಸುಮ್ನಿರಪ್ಪಾ  ನಿನ್ನ ನೆನಪಿಗಾದ್ರೂ   ಕೆಲವು ಚಿತ್ರ ತೆಗೀತೀನಿ  ಅಂದೇ    ಅವನ ಸ್ಥಿತಿ ನೋಡಿ ನನ್ನ ಕರುಳು  ಚುರುಕ್  ಅಂದಿತ್ತು. ಮನದಲ್ಲಿ ಹೇಳಲಾಗದ   ಸಂಕಟ  ಶುರು ಆಯ್ತು .

ಅವನು :-   ,ಅಂತೂ ಇಂತೂ ಸಾಯುವವನಿಗೂ  ಒಮ್ಮೊಮ್ಮೆ   ಇಂತಹ ಸಂತಸ ಪಡುವ ಯೋಗ ಬರುತ್ತೆ ಕಣಯ್ಯ  ಅನ್ನುತ್ತಾ ನಕ್ಕ, [ ನನ್ನ ಕರುಳು  ಕಿವುಚಿದಂತೆ ಆಯ್ತು  ]  ಏನಾದರೂ ಮಾಡ್ಕೊಂಡು   ಹಾಳಾಗ್ ಹೋಗು . , ನಾನು   "ಏ  ನೀನು  ಮಾತ್ರ ದಯವಿಟ್ಟು ಸಾಯ ಬೇಡ ಕಣಯ್ಯ  "  ಅನ್ನುತ್ತಾ   ಚಿತ್ರಗಳನ್ನು   ಕ್ಲಿಕ್ಕಿಸುತ್ತಿದ್ದೆ

ಅಷ್ಟರಲ್ಲಿ ,  ನಮ್ಮ ಹುಡುಗ  "ಸಾರ್ ಸಾರ್   ಇದೇನ್  ಸಾರ್  ಇದು   ಇಲ್ಲಿ ಕುಳಿತು,  ನಿನಗೆ ನೀವೇ ಮಾತಾಡ್ತಾ  ಇದ್ದೀರಿ,  ಸುಮಾರು  ಜನರು   ನಿಮ್ಮನ್ನು ನೋಡಿಕೊಂಡು   ನಗುತ್ತ  ಹೋಗ್ತಿದ್ರು. ನಡೀರಿ ಹೊತ್ತಾಯ್ತು "  ಅಂತಾ ಹತ್ತಿರ ಬಂದ  . ಏ ಗೆಳೆಯ  ಮತ್ತೊಮ್ಮೆ ಬರ್ತೀನಿ   ಅಂತಾ ಹೇಳಿ ಅಲ್ಲಿಂದ  ನಮ್ಮೂರಿಗೆ   ಹೊರಟೆ. ಮನದ ತುಂಬಾ ಅವನೇ ಆವರಿಸಿಕೊಂಡಿದ್ದಾ  ಕಣ್ಣಲ್ಲಿ ಸಂಕಟದ  ನೀರು  ಬರ್ತಾ  ಇತ್ತು.

ಸೌಂದರ್ಯ  ವಲ್ಲದ ಸೌಂದರ್ಯ  ಇದು  ಪ್ರಕೃತಿಯ ಮಾಯಾಜಾಲ 

ಅರೆ ಕ್ಷಮಿಸಿ  ನನ್ನ ಗೆಳೆಯನ  ಪರಿಚಯ   ಮಾಡಿಕೊಡಲಿಲ್ಲ ನಿಮಗೆ   , ಇಷ್ಟೆಲ್ಲಾ  ಪುರಾಣ  ಯಾರ ಬಗ್ಗೆ ಅಂದ್ರಾ   ನನ್ನ ಬಾಲ್ಯದಲ್ಲಿ  ಪ್ರಮುಖ ಪಾತ್ರ ವಹಿಸಿದ    "ಮಳವಳ್ಳಿ ಕೆರೆ " ಯ ಬಗ್ಗೆ  ಹೇಳಿದ್ದು.  ಹೌದು  ಜನುಮದಲ್ಲಿ ಮರೆಯಲಾರದ  ತುಂಟ ನೆನಪುಗಳ   ನೆನಪಿಸುವ  ತಾಕತ್ತು ಈ ಕೆರೆಗೆ ಇದೆ .   ಈ ಕೆರೆಗೆ ನನ್ನ ಪ್ರೀತಿಯ   ನಮನಗಳು . 

Saturday, May 28, 2016

ಅಸಹಾಯಕ "ನೀರು ನಾಯಿ " ಗಳು ಕಣ್ಮರೆಯಾಗುತ್ತಿವೆ, ಆದ್ರೆ ನಮಗೆ ಇವು ನಮ್ಮ ನಡುವೆಯೇ ಇದ್ದದ್ದು ಗೊತ್ತೇ ಆಗ್ಲಿಲ್ಲ .....!



  "ನಾನೇ ಕಣ್ರೀ   ನೀರು ನಾಯಿ ಅಂದ್ರೆ " [ ಚಿತ್ರ ಕೃಪೆ   ಅಂತರ್ಜಾಲ  ] 

ಮೊನ್ನೆ ಅಂತರ್ಜಾಲದಲ್ಲಿ   ಬ್ಲಾಗ್   ವೀಕ್ಷಣೆ   ಮಾಡುತ್ತಿದ್ದಾಗ   ಶಿರಸಿಯ   ವಿನಯ್ ಹೆಗ್ಡೆ  ಅವರ ಬ್ಲಾಗ್    "    ಅಘನಾಶಿನಿ "   ಯಲ್ಲಿ    ಶಿರಸಿಯ ಸಮೀಪ  ಹುಟ್ಟಿ ಹರಿಯುವ    "ಅಘನಾಶಿನಿ"    ನದಿಯು   ಶತಮಾನದಲ್ಲಿ    ಇದೆ ಮೊದಲ ಬಾರಿಗೆ    ಬತ್ತುತ್ತಾ   ಇದ್ದು ಆ ನದಿಯಲ್ಲಿ ವಾಸುಸುತ್ತಿದ್ದ   ನೀರುನಾಯಿಗಳು   ಅಪಾಯದ ಅಂಚಿನಲ್ಲಿರುವ ವಿಚಾರದ    ಬಗ್ಗೆ    ಮನಕರಗುವಂತೆ   ಬರೆಯಲಾಗಿತ್ತು.  ಸರಿ ಅಘನಾಶಿನಿ  ಬ್ಲಾಗಿನ  ಲೇಖನವನ್ನು   ನನ್ನ ಫೇಸ್ಬುಕ್  ಪುಟದಲ್ಲಿ  ಹಂಚಿಕೊಂಡೆ  , ಬಹಳಷ್ಟು ಜನ  ಅದನ್ನು ನೋಡಿ  ವಿಚಾರ ತಿಳಿದರು,  ಇನ್ನು ಕೆಲವರು   ನೀರು ನಾಯಿ ಅಂದ್ರೆ ಏನು ...?    ಅದನ್ನು ನಮ್ಮ ಮನೆಗಳಲ್ಲಿ ಸಾಕುವ  ನಾಯಿಗಳ   ಹಾಗೆ   ಸಾಕ ಬಹುದಾ ..?    ನೀರು ನಾಯಿ  ಅಂದ್ರೆ ಹೇಗಿರುತ್ತೆ ...?  ಅದು ಕಳ್ಳರನ್ನು ಹಿಡಿಯುತ್ತಾ  ...?    ಅದನ್ಯಾಕೆ ನೀರು ನಾಯಿ ಅಂತಾರೆ ..?    ಹೀಗೆ   ಪ್ರಶ್ನೆಗಳನ್ನು  ದೂರವಾಣಿ ಮೂಲಕ  ಕೇಳಿದರು .  ಇನ್ನು ನನ್ನ ಮಗನ ಜೊತೆ ಮಾತನಾಡುತ್ತಾ    ನೀರು ನಾಯಿ  ವಿಚಾರ ಹೇಳಿದೆ  , ಅವನು ಅಪ್ಪಾ   ನೀರು ನಾಯಿ ನಾನಂತೂ ನೋಡಿಲ್ಲ ,   ಈ ಬಗ್ಗೆ     ನಾನು ಓದಿದ    ಶಾಲೆ, ಕಾಲೇಜುಗಳ  ಪುಸ್ತಕದಲ್ಲಿ   ವಿಚಾರ ಇರಲಿಲ್ಲ,  ಯಾವುದೇ ಟಿ. ವಿ.  ಇದರ ಬಗ್ಗೆ  ಮಾಹಿತಿ ನೀಡಿಲ್ಲ  , ಯಾವುದೇ    ನ್ಯೂಸ್  ಪೇಪರ್  ನಲ್ಲಾಗಲಿ   ಮ್ಯಾಗಜಿನ್  ಅಲ್ಲಾಗಲಿ   ಓದಿಲ್ಲ,  ಇದೇನೋ   ಹೊಸ ಕಾರ್ಟೂನ್  ಹೆಸರು ಅನ್ನೋ ಹಾಗೆ ಕಾಣ್ತಿದೆ,  ಅಂದ. ಇನ್ನು ನನ್ನ ಕೆಲವು  ಗೆಳೆಯರನ್ನು   ನೀರು ನಾಯಿ ಬಗ್ಗೆ ಕೇಳಿದೆ   "ಅಯ್ಯೋ ಗುರು   ಅದೇ ನಮ್ಮನೆ  ನಾಯಿಗಳನ್ನು   ನೀರಿಗೆ   ಎತ್ತಿಹಾಕಿ ಅವುಗಳನ್ನೇ    ನೀರುನಾಯಿ ಅನ್ನಬೇಕೂ   ಅಷ್ಟೇ....!"  ಅಂತಾ ಹಾಸ್ಯ ಮಾಡಿದರು,  ಅವರಾದರೂ ಏನು ಮಾಡಿಯಾರು  ನಮ್ಮ   ನಾಡಿನ   ದೊಡ್ಡ ದೊಡ್ಡ ಕೆರೆಗಳಲ್ಲಿ,  ನದಿಗಳಲ್ಲಿ,  ಬದುಕಿ  ಬಾಳುತ್ತಿದ್ದ ಇಂತಹ ಒಂದು ಜೀವಿ  ಹೆಚ್ಚು ಕಡಿಮೆ ಅವಸಾನದ  ಅಂಚಿಗೆ ಬಂದು ನಿಂತಿರಲು   ಯಾರಿಗೆ ತಾನೇ ತಿಳಿಯುತ್ತೆ ಇವುಗಳ ಬಗ್ಗೆ .

ನಾವು ಇರೋದು ಹೀಗೆ ಗೊತ್ತಾ ....?  [ ಚಿತ್ರ ಕೃಪೆ   ಅಂತರ್ಜಾಲ ] 

ನಾನು ಬಾಲ್ಯ ಕಳೆದದ್ದು  ಹಳ್ಳಿಯಲ್ಲಿ  ನನ್ನ ಹಳ್ಳಿ   ನೆಲಮಾಕನ ಹಳ್ಳಿಯಿಂದ     ಮಳವಳ್ಳಿ ಪಟ್ಟಣ ದಲ್ಲಿದ್ದ   ಪ್ರಾಥಮಿಕ  ಹಾಗು  ಪ್ರೌಡ ಶಾಲೆಗೇ   ಸುಮಾರು ಐದು   ಕಿಲೋಮೀಟರು  ಬೈಸಿಕಲ್  ಮೂಲಕ   ತೆರಳುತ್ತಿದ್ದೆ,  ಆ  ಹಾದಿಯಲ್ಲಿ ನನಗೆ ಸಿಗುತ್ತಿದ್ದುದೆ   ಮಳವಳ್ಳಿಯ   ದೊಡ್ಡ ಕೆರೆ    ಆಗ  ಕೆಲವು  ಕೆಲವು ಜೀವಿಗಳು  ಗುಂಪು ಗುಂಪಾಗಿ  ನೀರೊಳಗೆ  ಮುಳುಗುತ್ತಾ    ಏಳುತ್ತಾ   ಚಲಿಸುತ್ತಿರುವುದನ್ನು   ಕಾಣುತ್ತಿದ್ದೆ,   ಆ ಸಮಯದಲ್ಲಿ   ಇವುಗಳ ಬಗ್ಗೆ   ತಿಳಿಯುವಷ್ಟು   ಜ್ಞಾನ ಇರಲಿಲ್ಲ,  ಇನ್ನು  ಬೇಸಿಗೆ ರಜೆಗೆ   ಅಜ್ಜಿಯ ತಂಗಿ ಮನೆ   ಮಳವಳ್ಳಿ ತಾಲೂಕಿನ   "ಮಿಕ್ಕೆರೆ "  ಎಂಬ ಗ್ರಾಮಕ್ಕೆ ಹೋದಾಗ , "ಬಾರೋ ನೀರು ನಾಯಿ   ಆಟಾ ಆಡೋದನ್ನು  ತೋರಿಸ್ತೇನೆ"    ಅಂತಾ    ಸಂಜೆ ವೇಳೆ   ಅಲ್ಲಿನ   ಕೆರೆಯ ದಂಡೆಯ ಮೇಲೆ  ಮನೆಯ ಹಿರಿಯರು  ನನ್ನನ್ನು   ಜೊತೆಯಲ್ಲಿ  ಕರೆದುಕೊಂಡು   ವಾಕಿಂಗ್    ಹೋಗುತ್ತಿದ್ದರು  ,    ಆ ಸಮಯದಲ್ಲಿ    ಗ್ರಾಮದ   ವಿಶಾಲವಾದ  ಕೆರೆಯ   ಕೋಡಿ  ಯ ಸಮೀಪ , ಬಹಳ ಹತ್ತಿರ   ಇವುಗಳ ದರ್ಶನ ಆಗುತ್ತಿತು,   ಗುಂಪುಗುಂಪಾಗಿ   ಕೆರೆಯ ಉದ್ದಗಲಕ್ಕೂ   ನೀರಲ್ಲಿ ಆಟವಾಡುತ್ತಾ ,   ತೇಲುತ್ತಾ   ಮುಳುಗುತ್ತಾ   ಇರುತ್ತಿದ್ದವು .  ನನಗಂತೂ  ಅವು ಪಲ್ಟಿ  ಹೊಡೆಯೋದನ್ನು  ನೋಡೋದೇ ಖುಷಿ ಕೊಡ್ತಾ ಇತ್ತು. ಹೇಗೆ   ಅಂದ್ರೆ  ಉದಾಹರಣೆಗೆ     ಡಾಲ್ಫಿನ್  ಗಳು ಸಮುದ್ರದಲ್ಲಿ ಚಿಮ್ಮಿ  ನೀರಿನೊಳಗೆ   ಪಲ್ಟಿ ಹೊಡೆಯೋ ಹಾಗೆ  ಇರುತ್ತಿತ್ತು.   ಅಂದಿನ ದಿನಗಳಲ್ಲಿ   ಸಾಮಾನ್ಯವಾಗಿ   ಕೆರೆಗಳು  ಯಾವುದೇ  ರೀತಿಯ  ಮಾಲಿನ್ಯಕ್ಕೆ   ಒಳಗಾಗಿರಲಿಲ್ಲ . ಕೆರೆಗಳಲ್ಲಿ   ಜೊಂಡು  ಬೆಳೆದಿರಲಿಲ್ಲ,   ಪರಿಶುದ್ದವಾದ   ನೀರು  ಇಂತಹ  ಜೀವಿಗಳಿಗೆ   ಆಸರೆಯಾಗಿತ್ತು.   ಆದರೆ ಇಂದಿನ  ಪರಿಸ್ಥಿತಿ ಬೇರೆ ಬಿಡೀ.  ಇಂದು  ಅವುಗಳು ವಾಸ ಮಾಡುತ್ತಿದ್ದ  ಕೆರೆಗಳು  ಕಣ್ಮರೆಯಾಗಿವೆ, ಇಲ್ಲದಿದ್ದಲ್ಲಿ  ಕೆರೆಗಳ ತುಂಬಾ ಜೊಂಡು ಹುಲ್ಲು   ಬೆಳೆದು  ನೀರಿನ  ಸೆಲೆ ಕಡಿಮೆಯಾಗಿದೆ,   ಕೆರೆಯಲ್ಲಿ ನೀರಿದ್ದರೂ  ಸಹ   ಮಾಲಿನ್ಯಗೊಂಡು  ಇಂತಹ ಜೀವಿಗಳು  ಬದುಕಲಾಗದಂತಹ   ಪರಿಸ್ಥಿತಿ  ನಿರ್ಮಾಣ ಆಗಿದೆ . ಅಪರೂಪಕ್ಕೆ   ಅಲ್ಲಿ ಇಲ್ಲಿ ಕಂಡುಬಂದರೆ  ಇವುಗಳನ್ನು  ಮಾಂಸಕ್ಕಾಗಿ , ಚರ್ಮಕ್ಕಾಗಿ    ಬೇಟೆಯಾಡಿ    ನಿರ್ನಾಮ  ಮಾಡಲಾಗುತ್ತಿದೆ.     ಇಂದು ನಮ್ಮ ಸುತ್ತ ಮುತ್ತಲಿನ    ಹಳ್ಳಿಗಳ   ಕೆರೆಗಳಲ್ಲಿ  ಇವುಗಳು  ನಿರ್ನಾಮವಾಗಿದ್ದು  ಕಾಣಸಿಗುವುದೇ ಇಲ್ಲಾ,   ನಮ್ಮ ನಾಡಿನ  ಕೆಲವು ನದಿಗಳ   ತಟದಲ್ಲಿ  ಇವುಗಳು    ಬಹಳ  ಅಪರೂಪಕ್ಕೆ ವಿರಳವಾಗಿ   ಕಾಣಸಿಗುತ್ತಿವೆ ,

ನಮ್ಮ ಪಾಡಿಗೆ ನಮ್ಮನ್ನು ಬಿಡ್ರಪ್ಪಾ    [ ಚಿತ್ರ ಕೃಪೆ   ಅಂತರ್ಜಾಲ ] 


    ಇನ್ನು ನೀರು ನಾಯಿಯ ಬಗ್ಗೆ ಸ್ವಲ್ಪ ತಿಳಿಯೋಣ    ಬನ್ನಿ ,  ಈ ನೀರು ನಾಯಿಯ   ವರ್ಣನೆ ಬಹಳ  ವಿಚಿತ್ರ ,  ಇದು  ನಮಗೆ ಕಾಣ ಸಿಗುವ  ಮುಂಗುಸಿ,  ಬೆಕ್ಕು,   ಅಳಿಲು,  ನಾಯಿ   ಇವುಗಳ   ಕೆಲವು ಗುಣಗಳನ್ನು ಅಳವಡಿಸಿಕೊಂಡಿರುವ     ಜೀವಿ .   ನೀರಿನ  ಆಶ್ರಯ ಇದು ಬದುಕಲು ಬೇಕೇ ಬೇಕು  ಹಾಗಾಗಿ ಇವು,   ಕೆರೆ,  ನದಿಗಳ ಆಶ್ರಯದಲ್ಲಿ  ಜೀವನ ಮಾಡುತ್ತವೆ,   ನದಿಗಳ ದಡದಲ್ಲಿ  ಶೀತವಿರುವ ಪ್ರದೇಶದಲ್ಲಿ   ಒಡ್ಡುಗಳ ಹತ್ತಿರ, ಮರಗಳ ಗುಂಪಿನ  ನಡುವೆ    ಪೊಟರೆ ಗಳನ್ನ  ನಿರ್ಮಿಸ್ಕೊಂಡು   ಗುಂಪು ಗುಂಪಾಗಿ  ವಾಸಿಸುತ್ತವೆ.  ಇವುಗಳ  ಮುಖವನ್ನು  ಗಮಸಿಸಿದರೆ   ಬೆಕ್ಕಿನ  ಹೋಲಿಕೆ  ಕಂಡುಬರುತ್ತದೆ,  ಮತ್ತೊಂದು ಕೋನದಿಂದ  ನೋಡಿದರೆ  ಮುಂಗುಸಿಯಂತೆ ಕಾಣುತ್ತದೆ,  ಪುಟ್ಟ ಕಿವಿಗಳು,   ಮುಖದ  ಮುಂಭಾಗಕ್ಕೆ  ಕಾಣುವ ಕಣ್ಣುಗಳು, ಮೂಗು,  ಮುಖದಲ್ಲಿ  ಮೀಸೆಯಂತಹ ಉದ್ದನೆಯ ಕೂದಲುಗಳು ,  ನಾಯಿಯ  ಚರ್ಮದಂತಹ   ಚರ್ಮ,  ಮುಂದಿನ ಎರಡೂ ಕಾಲುಗಳು  ದಪ್ಪವಾಗಿ  ಗಿಡ್ಡವಾಗಿದ್ದು  , ಹಿಂದಿನ ಕಾಲುಗಳು   ಮುಂದಿನ   ಕಾಲುಗಳಿಗಿಂತಾ  ಸಣ್ಣವಾಗಿ  ಉದ್ದವಾಗಿವೆ .  ಇನ್ನು ಇದರ ಬಾಲ ಉದ್ದವಾಗಿದ್ದು  ಬಹಳ ಶಕ್ತಿಯುತವಾಗಿವೆ. ಕೆಲವೊಮ್ಮೆ ಇವುಗಳು ಕಾಂಗರೂ ಗಳಂತೆ  ಎರಡು ಕಾಲಿನಲ್ಲಿ  ನಿಲ್ಲುತ್ತವೆ.   ಇವುಗಳ   ಜೀವಿತ  ಅವಧಿ    ಸುಮಾರು   ಹನ್ನೊಂದರಿಂದಾ  ಹದಿನಾರು ವರ್ಷಾ  ಅಷ್ಟೇ ,  ಈ ನೀರುನಾಯಿಗಳು ಸರಾಸರಿ   ನಾಲ್ಕರಿಂದ   ಐದು ಕಿಲೋ  ಗ್ರಾಂ  ತೂಕ  ತೂಗುತ್ತವೆ,  ಇನ್ನು  ನೀರುನಾಯಿಗಳ  ಸಂತಾನದ ವಿಚಾರಕ್ಕೆ ಬಂದ್ರೆ   ಹೆಣ್ಣು ಗರ್ಭ  ದರಿಸೋದು   ಇಪ್ಪತೆಂಟು  ದಿನಗಳಿಂದ  ಮೂವತ್ತು ದಿನಗಳು,   ಸಾಮಾನ್ಯವಾಗಿ  ಎರಡರಿಂದ ಮೂರು ಮರಿಗಳಿಗೆ   ನೀರುನಾಯಿ ಜನ್ಮ ನೀಡುತ್ತದೆ .  ಇನ್ನು  ಹೊಸದಾಗಿ ಜನಿಸಿದ ಮರಿಗಳು  ಐವತ್ತು  ಗ್ರಾಂ ತೂಕ   ಅಷ್ಟೇ , ಇವುಗಳು    ಮೊದಲ ಎರಡು ಅಥವಾ ಮೂರುವಾರ   ತಾಯಿಯ ಆಸರೆಯಲ್ಲೇ  ಆರೈಕೆ   ಮಾಡಿಸಿಕೊಳ್ಳುತ್ತವೆ,  ಬಾಯಲ್ಲಿ ಹಲ್ಲು ಮೂಡಿ,  ಕಣ್ಣು  ಬಿಟ್ಟು  ಓಡಾಡಲು   ನೀರುನಾಯಿಗೆ  ಸುಮಾರು ನಲವತ್ತು ದಿನಗಳು ಬೇಕು ,  ಆ ನಂತರವಷ್ಟೇ   ಈ  ಮರಿಗಳು ಗಟ್ಟಿಯಾದ  ಆಹಾರ ತಿನ್ನಲು  ಶಕ್ತವಾಗುತ್ತವೆ.   ಹದಿನಾಲ್ಕು ವಾರ  ಕಳೆದಾಗ  ನೀರುನಾಯಿಗಳು   ತಮ್ಮ  ಜೀವನ  ತಾವೇ  ನಿರ್ವಹಣೆ  ಮಾಡೋದನ್ನು  ಕಲಿತು ಬಿಟ್ಟಿರುತ್ತವೆ . ಇನ್ನು ಪರಸ್ಪರ   ಸೂಚನೆ ಕೊಡಲು,   ತಮ್ಮದೇ ಆದ ವಿಚಿತ್ರ ಕ್ರಮ ಅನಿಸರಿಸುತ್ತವೆ.  ಇವು ಹನ್ನೆರಡು  ವಿವಿಧ  ಬಗೆಯ  ಶಬ್ಧವನ್ನು  ತಮ್ಮ ಬಾಯಿಂದ  ಹೊಮ್ಮಿಸುತ್ತವೆ,  ಒಂದೊಂದು ರೀತಿಯ ಶಬ್ದಕ್ಕೂ  ಅದರದೇ  ಆದ ಅರ್ಥ ಇರುತ್ತದೆ,  ಇನ್ನೊಂದು ವಿಶೇಷ  ಅಂದ್ರೆ ಈ ಜೀವಿಗಳು ತಮ್ಮ ದೇಹದಿಂದ   ವಿವಿಧ ಬಗೆಯ  ವಾಸನೆ  ಹೊಮ್ಮಿಸುವ ಮೂಲಕ  ಸಂವಹನ   ನಡೆಸೋದು  ಒಂದು ಅಚ್ಚರಿಯ ವಿಚಾರ.  ಇನ್ನು ಇವುಗಳಿಗೆ  ಜಲಚರಗಳೇ ಆಹಾರ ,  ನೀರಿನಲ್ಲಿ  ಸಿಗುವ ವಿವಿಧ ಬಗೆಯ ಮೀನುಗಳು,   ಹೊಲ ಗದ್ದೆಯಲ್ಲಿ   ಸಿಗುವ   ಏಡಿ,  ಕಪ್ಪೆ , ಮುಂತಾದವುಗಳನ್ನು  ಭಕ್ಷಿಸುತ್ತವೆ.  ಇದು ಇವುಗಳ ಬಗ್ಗೆ  ಇರುವ ಮಾಹಿತಿ. ಕನ್ನಡ  ಅಂತರ್ಜಾಲ ತಾಣಗಳಲ್ಲಿ    ಏನೂ  ಮಾಹಿತಿ ಸಿಗದಿದ್ದರೂ    ಆಂಗ್ಲ    ಭಾಷೆಯಲ್ಲಿನ  ಕೆಲವೇ ಕೆಲವು ತಾಣಗಳಲ್ಲಿ   ನೀರುನಾಯಿಗಳ   ಬಗ್ಗೆ   ಸ್ವಲ್ಪ  ಮಾಹಿತಿ ಸಿಗುತ್ತವೆ,  ಈ ನೀರುನಾಯಿಗಳು   ಹಾಗು   ಸಮುದ್ರದಲ್ಲಿ   ಕಂಡುಬರುವ   ಸೀಲ್ [  ಸೀ  ಲಯನ್ ]  ಗಳು   ಹೊರನೋಟಕ್ಕೆ  ಕೆಲವೊಮ್ಮೆ   ಒಂದೇ ರೀತಿ  ಕಂಡು ಬರುತ್ತವೆ.  ಕೆಲವು ವಿಚಾರಗಳಲ್ಲಿ   ಚಿಕ್ಕಪ್ಪ ದೊಡ್ಡಪ್ಪನ   ಮಕ್ಕಳ ಹಾಗೆ  ಸಾಮ್ಯತೆ ಕಂಡು ಬರುತ್ತದೆ .

ನಮ್ಮನು  ಉಳಿಸಿ ಪ್ಲೀಸ್  [ ಚಿತ್ರ ಕೃಪೆ  ಅಂತರ್ಜಾಲ ] 


ಇನ್ನು ನಮ್ಮ   ನಾಡಿನ  ಕಥೆ  ಪುಸ್ತಕಗಳಲ್ಲಿ  ಇವುಗಳ ಉಲ್ಲೇಖ   ಅಷ್ಟಾಗಿ ಕಂಡು ಬರುವುದಿಲ್ಲ  ಆದರೆ  ಕಡಲ ತೀರದ ಭಾರ್ಗವ  ಕಾರಂತಜ್ಜ     ಬರೆದಿರುವ      "ಸ್ವಪ್ನದ  ಹೊಳೆ "   ಕಥೆಯಲ್ಲಿ  ಒಂದು ಸನ್ನಿವೇಶದಲ್ಲಿ  ನೀರುನಾಯಿಗಳ ಬಗ್ಗೆ  ಸ್ವಲ್ಪ ಮಾಹಿತಿ ನೀಡಿದ್ದಾರೆ.  ಉಳಿದಂತೆ   ಬೇರೆ ಕಥೆಗಾರರ ಕಣ್ಣಿಗೆ ಇವು  ಕಂಡಿಲ್ಲ.  ಇನ್ನು ಇವುಗಳು    ಬಹಳ  ಸಾದು  ಜೀವಿಗಳಾದ  ಕಾರಣ ಇವುಗಳನ್ನು  ಬೇಟೆಗಾರರು  ಬಹಳ ಸುಲಭವಾಗಿ   ಕೊಲ್ಲುತ್ತಾರೆ,  ಹಾಗಾಗಿ ಇವುಗಳು ಅಳಿವಿನ ಅಂಚಿನಲ್ಲಿ  ಬಂದು ನಿಂತಿವೆ ,   ಈಗಲಾದರೂ    ನಾವುಗಳು ಎಚ್ಚರ ವಹಿಸಿ  ಇವುಗಳನ್ನು ರಕ್ಷಣೆ ಮಾಡುವ  ನಿಟ್ಟಿನಲ್ಲಿ   ಕಾರ್ಯಕ್ರಮ  ಹಾಕಿಕೊಳ್ಳಬೇಕಾಗಿದೆ , ಇಲ್ಲದಿದ್ದರೆ   ಇವುಗಳ ಚಿತ್ರವನ್ನು ಗೋಡೆಯ ಮೇಲೆ ಅಂಟಿಸಿ  ಮುಂದಿನ ಪೀಳಿಗೆಗೆ   ತೋರಿಸಬೇಕಾಗುತ್ತದೆ.  ದಯಮಾಡಿ ನಿಮ್ಮ   ಊರಿನ ಅಥವಾ ಹಳ್ಳಿಗಳ   ಕೆರೆಗಳಲ್ಲಿ   ಈ ನೀರುನಾಯಿಗಳು ಕಂಡು ಬಂದರೆ   ಅವುಗಳನ್ನು  ಸಂರಕ್ಷಿಸಲು ಪ್ರಯತ್ನಿಸಿ  ಗೆಳೆಯರೇ.

[ ಸೂಚನೆ :-) ಈ ಲೇಖನದಲ್ಲಿನ  ಚಿತ್ರಗಳನ್ನು  ಅಂತರ್ಜಾಲದ ಸಹಾಯದಿಂದ  ಕೃತಜ್ಞತಾ ಪೂರ್ವಕವಾಗಿ  ಪಡೆದಿದ್ದೇನೆ, ಚಿತ್ರಗಳ ಹಕ್ಕು ಮೂಲ  ಛಾಯಚಿತ್ರಗಾರರದು , ಮಾಹಿತಿಯನ್ನು  ವಿವಿಧ ಪುಸ್ತಕಗಳು, ಅಂತರ್ಜಾಲದ ಸಹಾಯದಿಂದ  , ಕೆಲವು  ಪಶು ವೈಧ್ಯರಿಂದ   ಕೃತಜ್ಞತಾ ಪೂರ್ವಕವಾಗಿ  ಪಡೆದು  ಸಂಗ್ರಹಿಸಿ  ಇಲ್ಲಿ ಬಳಸಿಕೊಳ್ಳಲಾಗಿದೆ .   ನೀರುನಾಯಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ  ಆ ಮಾಹಿತಿಯನ್ನು   ನಿಮ್ಮ ಅನಿಸಿಕೆಯಲ್ಲಿ   ಹಾಕಿದರೆ ಉಳಿದವರಿಗೆ ಅನುಕೂಲ ಆಗುತ್ತದೆ . ]