Monday, August 1, 2011

ನೀವು ಕುಟುಂಬ ದೊಡನೆ /ಅಥವಾ ಸ್ನೇಹಿತರೊಡನೆ ರಿಲಾಕ್ಸ್ ಮಾಡಲು ಏನುಅನುಕೂಲತೆ ಬೇಕು ????

ಹೌದಲ್ವಾ ಇದೆ ಪ್ರಶ್ನೆ ನನ್ನನ್ನು ಹಲವಾರು ಸರಿ  ಕಾಡುತ್ತಿದೆ. ಎಲ್ಲರಿಗೂ ಗೊತ್ತು ಮನುಷ್ಯನ ಮನಸ್ಸುಹಾಗು ದೇಹ  ದೈನಂದಿನ ದಿನಚರಿ ಯಿಂದ, ಕೆಲಸ ಕಾರ್ಯಗಳ ಒತ್ತಡದಿಂದ , ಪಟ್ಟಣದ ಗದ್ದಲದ ಜಂಜಾಟದ  ವಾತಾವರಣದಿಂದ , ಬಿಡುವಿಲ್ಲದ ದಣಿವಿನಿಂದ  ಮುಕ್ತಿ  ಪಡೆಯಲು  ವಿಶ್ರಾಂತಿ ಪಡೆಯಲು ಬಯಸುತ್ತದೆ. ಸ್ವಲ್ಪ ದಿನ ಈ ಜಂಜಾಟ ಗಳನ್ನು ಮರೆತು ಹಾಯಾಗಿ  ಹೊರಗಡೆ ಎಲ್ಲಾದ್ರೂ ಕುಟುಂಬದೊಡನೆ / ಸ್ನೇಹಿತರೊಡನೆ / ಅಥವಾ ಒಬ್ಬರೇ  ನೆಮ್ಮದಿಯಾಗಿ ಹೋಗಬೇಕೆನ್ನಿಸುತ್ತದೆ. ಈ ರೀತಿಯ ಮಾತುಗಳನ್ನು ನಾವು ಪಡೆ ಪಡೆ ಆಡುತ್ತೇವೆ. "ನನಗಂತೂ ಸಾಕಾಗಿ ಹೋಗಿದೆ  ಎಲ್ಲಾದ್ರೂ ಆಚೆ ಹೋಗಿ ರಿಫ್ರೆಶ್ ಆಗಬೇಕೂ ರೀ "  ಎನ್ನುವ ಮಾತುಗಳು ನಮ್ಮ ಬಾಯಿಂದ ಬರುತ್ತದೆ. ಆದರೆ ಹಲವು ಸಾರಿ ಈ ನಿರೀಕ್ಷೆ ತಪ್ಪಾಗಿ  ಯಾಕಾದ್ರೂ ಹೊರಗೆ ಹೊಫಿದ್ವೋ ಅನ್ನಿಸುತ್ತದೆ. ಇದಕ್ಕೆ ಉತ್ತರ ಕಂಡು ಹಿಡಿಯುವ ಒಂದು ಪ್ರಯತ್ನ ಮಾಡೋಣ ಬನ್ನಿ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.೧] ನೀವುಹೊರಗಡೆ ಕುಟುಂಬ ದೊಡನೆ / ಸ್ನೇಹಿತರೊಡನೆ/ ಒಬ್ಬರೇ ಯಾವ ಜಾಗದಲ್ಲಿ ರಿಲಾಕ್ಸ್ ಮಾಡಲು ಬಯಸುತ್ತೀರಿ? ೨] ನೀವು ಉಳಿಯುವ ಸ್ಥಳದಲ್ಲಿ ನೀವು ನಿರೀಕ್ಷಿಸುವ ಸೌಲಭ್ಯ ಗಳೇನು ??  3 ] ನಿಮ್ಮ ಕಲ್ಪನೆಯ ಪ್ರದೇಶ ಹೇಗಿರ ಬೇಕು ?? ೪] ಯಾವ ಚಟುವಟಿಕೆಯಿಂದ ನಿಮ್ಮ ಮನಸ್ಸು  ಉಲ್ಲಾಸವಾಗಿ ಆ ಜಾಗಕ್ಕೆ ಮತ್ತೊಮ್ಮೆ ಕುಟುಂಬ ದೊಡನೆ / ಸ್ನೇಹಿತರೊಡನ / ಒಬ್ಬರೇ ಹೋಗಬೇಕು ಎನ್ನಿಸುತ್ತದೆ?? ೫]  ಈ ಗಿನ ರೆಸಾರ್ಟ್/ ಹೋಂ ಸ್ಟೇ  ಸಂಸ್ಕೃತಿ ನಿಮಗೆ  ಒಪ್ಪಿಗೆಯಾಗಿದೆಯೇ ??  ನಿಮ್ಮ ಕಲ್ಪನೆಯ ರೆಸಾರ್ಟ್ / ಹೋಂ ಸ್ಟೇ ಹೇಗಿರ ಬೇಕು ?? ಇವುಗಳ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .  ಬನ್ನಿ ಒಂದು ಪ್ರಯತ್ನ ಮಾಡೋಣ!!!

Tuesday, July 26, 2011

"ದೊಡ್ಡ ಸಂಪಿಗೆ" ಮರದ ವಿಸ್ಮಯ !!!! ಕೆ.ಗುಡಿಯಲ್ಲಿ ಕಳೆಯುವ ಸಮಯ ಆನಂದಮಯ !!!! ಪಯಣ ...08







ಬಿಳಿಗಿರಿಯ ಬನದಲ್ಲಿ ನಮ್ಮ ಕಲ್ಪನೆಗೆ ನಿಲುಕದ ಎಷ್ಟೋ ಕೌತುಕಗಳು ಅಡಗಿವೆ.!! ಅಂತ ಒಂದು ಕೌತುಕದ ಬಗ್ಗೆ ತಿಳಿಯೋಣ ಬನ್ನಿ.ಬಿಳಿಗಿರಿ ರಂಗನ ಬೆಟ್ಟ ಶ್ರೇಣಿಯ ಕಾಡುಗಳು ದಟ್ಟವಾಗಿದ್ದು ವನ್ಯಜೀವಿಗಳಿಂದ ತುಂಬಿದೆ.ಇಂತಹ ಒಂದು ದಟ್ಟ ಕಾನನದ ಮಧ್ಯೆ ಸುಮಾರು ೨೦೦೦ ವರ್ಷ!!![ಅರಣ್ಯ ಇಲಾಖೆಯ ಮಾಹಿತಿಯಂತೆ}ಗಳಿಂದ ಈ  ವಿಸ್ಮಯ ದೊಡ್ಡ ಸಂಪಿಗೆ ಮರ  ಭಾರ್ಗವಿ ನದಿ ತೀರದಲ್ಲಿ  ನಿಂತಿದೆ ,               ಭಾರ್ಗವಿ ನದಿ [ ಈ ಸಣ್ಣ ನದಿ ಕಾವೇರಿಯ ಉಪನದಿ!! ಬಿಳಿಗಿರಿಯ ಬನದ  ಹಲವಾರು ಸಣ್ಣ ಜರಿಗಳು ಸೇರಿ ಆಗಿರುವ   ನದಿ!ಇದು ಕಾವೇರಿ ನದಿಯ ಉಪನದಿಯೂ ಹೌದು ,] ತೀರದಲ್ಲಿ  ಈ ಮರ ಸಂಪಿಗೆ ಸುವಾಸನೆ ಬೀರುತ್ತಿದೆ.ದೊಡ್ಡ ಸಂಪಿಗೆ ಮರದ ವಿಶೇಷ ವೆಂದರೆ ಒಂದೆಮರದಲ್ಲಿ ಕೆಂಪು ಹಾಗು ಹಳದಿ ಬಣ್ಣದ ಹೂ ಗಳನ್ನ ಬೆಳಸುವುದು!!ಈ ಮರದ ಸನಿಹ ಹರಿವ ನದಿ ಜಮದಗ್ನಿ ಮಹರ್ಷಿಯ ಪತ್ನಿ ರೇಣುಕ ದೇವಿಯ ಅವತಾರವೆಂದೂ,ಈ ಪ್ರದೇಶದಲ್ಲೇ ವಾಸಿಸುತ್ತಿದ್ದರೆಂದೂ, ಪ್ರತೀತಿ [ಇದು ಕರ್ನಾಟಕ ಗೆಜೆತೀರ್ನಲ್ಲಿ ದಾಖಲಾಗಿದೆ]ದೊಡ್ಡ ಸಂಪಿಗೆ ಮರದ  ಸುತ್ತ ಲಿಂಗ ಗಳೆಂದು ಪೂಜಿಸುವ ಸುಮಾರು ಒಂದು ನೂರಕ್ಕೂ ಹೆಚ್ಚಿನ ಶಿಲೆಗಳಿದ್ದು ,ಮರದ ಸುತ್ತಳತೆ ೨೦ ಮೀಟರ್ ಇರುತ್ತದೆ!!! ಮರದ ಎತ್ತರ ೧೩೦ ಅಡಿ ಇದ್ದು ಗಗನ ಚುಂಬಿಯಾಗಿದೆ!!ಇಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಕೆ .ಗುಡಿ ಇಂದ ಬಿ.ಆರ್. ಹಿಲ್ಲ್ಸ್ ದಾರಿಯ ಮಧ್ಯೆ ಸಿಗುವ ಅರಣ್ಯ ಇಲಾಖೆಯ ಗೇಂ ರೂಟ್ ನಲ್ಲಿ ಸಾಗಬೇಕು.ದಟ್ಟ ಕಾಡಿನಲ್ಲಿನ ಪ್ರದೇಶ ವಾದ ಕಾರಣ ಆನೆ, ಕಾಟಿ, ಕಾಡು ಹಂದಿ, ,ಹುಲಿ,ಸಾರಂಗ, ಮುಂತಾದ ಜೀವಿಗಳು ಅದೃಷ್ಟವಿದ್ದರೆ ಸಿಗಬಹುದು !!!.            ನೆನಪಿಡಿ ಇದು  ಕಾಡುಗಳ್ಳ ವೀರಪ್ಪನ್  ಓಡಾಡಿದ ಪ್ರದೇಶ !!!.ಇಲ್ಲಿನ ಗಾಳಿ ,ನೀರು ಸಂಪೂರ್ಣ ಶುದ್ದ ವಾಗಿದ್ದು ಮನಸ್ಸಿಗೆ ಉಲ್ಲಾಸ ನೀಡುತ್ತದೆ.ಅವಕಾಶ ಸಿಕ್ಕರೆ ಅರಣ್ಯ ಇಲಾಖೆಯ ಅನುಮತಿ ಪಡೆದು ಹೋಗಿಬನ್ನಿ.

Sunday, July 17, 2011

ಚುಮು ಚುಮು ಚಳಿಯಲ್ಲಿ ಇನ್ನಷ್ಟು ನೋಟ !!! ಸಂಜೆಯಲ್ಲಿ ಅಂತಿಮ ವಿರಾಮ..ಪಯಣ ..07


ಹೌದು  ಕಳೆದ  ಆರು  ಸಂಚಿಕೆಯಿಂದ ಬಿಳಿಗಿರಿ ರಂಗನ ಬೆಟ್ಟ ಪ್ರವಾಸದ ಪಯಣದಲ್ಲಿ ಭಾಗವಹಿಸಿ ಸುಸ್ತಾಗಿದ್ದೀರಿ,  ಈಗಾಗಲೇ ಬೆಟ್ಟದಲ್ಲಿ ನೋಡ ಬೇಕಾದ ಬಹಳಷ್ಟು ಸ್ಥಳಗಳನ್ನು ದರ್ಶಿಸಿದ್ದೀರಿ ,  ಇನ್ನು ಉಳಿದಿರುವ ಕೆಲವೇ ದರ್ಶನ ಯೋಗ್ಯವಾದ ಸ್ಥಳಗಳ ಪರಿಚಯ ಮಾಡಿಕೊಂಡು ಇಲ್ಲಿಂದ ವಿರಮಿಸೋಣ. ಬಿಳಿಗಿರಿ ರಂಗನ ಬೆಟ್ಟದಲ್ಲಿ  ಉಳಿಯಲು ಹಲವಾರು ಇಲಾಖೆಗಳ ವಸತಿ ಗೃಹಗಳು ಇವೆ, ಅವುಗಳು ರಜದ ದಿನಗಳಲ್ಲಿ ಸಿಗುವುದು ಕಷ್ಟ ಅದಕ್ಕೆ ನೀವು ರಜ ಇಲ್ಲದ ದಿನಗಳಲ್ಲಿ ಹೋದರೆ ನಿಮ್ಮ ಪ್ರವಾಸ ಉತ್ತಮವಾಗಿರುತ್ತದೆ.  ಮುಂಜಾವಿನ ಮಬ್ಬಿನಲಿ ವಾಕಿಂಗ್ ಹೊರಟರೆ ನಿಮಗೆ ಆಗುವ ಅನುಭವ , ಮನಸ್ಸಿಗೆ ಆಗುವ ಉತ್ಸಾಹದ ಉಲ್ಲಾಸ ವರ್ಣಿಸಲು ಅಸದಳ.
ಮಂಜಿನ ಮುಸುಕು ಹೊದ್ದ ಪರಿಸರ
ಮಂಜು ಮುಸುಕಿದ ಹಾದಿಯ ನೋಟ

ಮುಂಜಾನೆಯ ಮಂಜಿನ ಮಳೆಯಲ್ಲಿ ನಡಿಗೆ

ಮಂಜಿನ ಲೋಕದಲ್ಲಿ ನಿಮಗೆ ಸುಂದರ ಪ್ರಕೃತಿಯ ದರ್ಶನ ಭಾಗ್ಯ ಲಭಿಸುತ್ತದೆ.   ಹಾಗುಹೀಗೂ ಸೂರ್ಯ ಕಿರಣಗಳು ಮಂಜಿನ ಪರದೆಯನ್ನು ಹರಿದು ಬೆಳಕ ಚೆಲ್ಲಲು ಹೊರಟಾಗ ನಿಮಗೆ ವಿಸ್ಮಯ ಲೋಕದ ದರ್ಶನವಾಗುತ್ತದೆ.
ಮುಂಜಾವಿನ ನೋಟ 
ಮುಂಜಾವಿನ ರಮ್ಯ ನೋಟ.

ಕೆಲವೊಮ್ಮೆ ನೀವೇ ಸ್ವರ್ಗ ಲೋಕದಲ್ಲಿ ರುವ ಭಾವನೆ ಮೂಡುತ್ತದೆ ನೀವು ಛಾಯಾಗ್ರಾಹಕರಾಗಿದ್ದರಂತೂ ನಿಮ್ಮ ಕ್ಯಾಮರಾಗೆ ಈ ಸುಂದರ ನೋಟ ಕ್ಲಿಕ್ಕಿಸುವ ಅವಕಾಶ ಖಂಡಿತ ಸಿಗುತ್ತದೆ . ಬನ್ನಿ ಇಲ್ಲೇ ಹತ್ತಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮೀ ಸನ್ನಿಧಿ ಇದೆ ಅಲ್ಲಿಗೆ ಹೋಗೋಣ.ಈ ರಾಘವೇಂದ್ರ ಸ್ವಾಮೀ ಆಲಯವನ್ನು 12 -07 - 1975  ರಲ್ಲಿ  ಸೋಸಲೆ ಶ್ರೀ ಗಳು ಪ್ರತಿಷ್ಟಾಪಿಸಿದರೆಂದು ತಿಳಿಯುತ್ತದೆ
ರಾಘವೇಂದ್ರ ಸ್ವಾಮೀ ಆಲಯ 

ಸುಂದರ ದೇವಾಲಯ ಸುಂದರ ಮೂರ್ತಿಗಳು, ಹಾಗು ನಿಶ್ಯಬ್ದ ವಾತಾವರಣ  ನಿಮ್ಮನ್ನು ಶಾಂತ ಚಿತ್ತರನ್ನಾಗಿ ಮಾಡುತ್ತವೆ. ದರ್ಶನ  ಮುಗಿಸಿ ಹೊರಬನ್ನಿ , ಇಲ್ಲೇ ಸಮೀಪದಲ್ಲೇ ಇದೆ ಗಂಗಾಧರೇಶ್ವರ ದೇವಾಲಯ 
ಗಂಗಾಧರೇಶ್ವರ ದೇವಾಲಯ.

ಭಸ್ಮಾಸುರ ನಿಂದ ಪೀಡಿತನಾದ  ಶಿವನು ವಿಷ್ಣು ವಿನ ಅನುಗ್ರಹದಿಂದ ಮುಕ್ತ ನಾಗಿ  ವಿಷ್ಣುವನ್ನು ಪೂಜಿಸುತ್ತಾಬಿಳಿಗಿರಿರಂಗನ ಬೆಟ್ಟದಲ್ಲಿ  ನೆಲೆಸಿದನೆಂದುಹೇಳುವ ಈ ದೇವಾಲಯ ಇಲ್ಲಿದೆ.  ಇಷ್ಟನ್ನು ನೋಡಿ ಹೊಟ್ಟೆ ಚುರುಗುತ್ತಿದೆ ಅಲ್ವೇ . ಬನ್ನಿ ಬಿಳಿಗಿರಿ ರಂಗನ ಬೆಟ್ಟದಲ್ಲಿ  ಹಲವು ವರ್ಷಗಳಿಂದ  ಯಾತ್ರಿಗಳಿಗೆ ಹಸಿವು ತಣಿಸುವ "ಗಿರಿ ದರ್ಶಿನಿ" ಹೋಟೆಲಿಗೆ ಹೋಗೋಣ.
ಗಿರಿ ದರ್ಶಿನಿ ಹೋಟೆಲ್
ಈ ಹೋಟೆಲಿನಲ್ಲಿ ಕಡಿಮೆ ಬೆಲೆಯಲ್ಲಿ ಶುಚಿಯಾದ ರುಚಿಯಾದ ಊಟ ತಿಂಡಿ ಯನ್ನು ಯಾತ್ರಿಗಳಿಗೆ ನೀಡುತ್ತಾರೆ , ಮಾಲೀಕ ಶಂಕರಪ್ಪ ರವರು ಬಹಳ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಸೇವೆಗೆ ಮಕ್ಕಳಾದ ವಾಸು , ಹಾಗು ಗುರು ಸಾತ್ ನೀಡಿದ್ದಾರೆ . ಸೌದೆ ವಲೆಯಲ್ಲಿ ತಯಾರಾಗುವ ಊಟ ತಿಂಡಿ ಗಳು ಆರೋಗ್ಯ ಕರವಾಗಿ  ನಿಮ್ಮ ಹಸಿವನ್ನು ನೀಗಿಸುತ್ತವೆ . ಈ ಪ್ರದೇಶ ಗಿರಿ ಧಾಮ ಆಗಿರುವ ಕಾರಣ ನೀವು ಪ್ರತಿ ನಿತ್ಯ ತೆಗೆದುಕೊಳ್ಳುವ ಆಹಾರಕ್ಕಿಂತ ಜಾಸ್ತಿಯಾಗಿ  ತಿನ್ನುವುದಂತೂ ನಿಜ ,   ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದರೆ ಗಿರಿ ದರ್ಶಿನಿಯಲ್ಲಿ ತಿಂಡಿ, ಊಟ ಮಾಡದೆ ಬರಬೇಡಿ .  ಊಟವಾಯಿತೇ ಬನ್ನಿ ಸ್ವಲ್ಪ ವಿಶ್ರಾಂತಿ ಪಡೆದು , ವಿರಮಿಸೋಣ.  ಅದ್ಸರಿ ನೀವು ಇಲ್ಲಿ ಜೇನುತುಪ್ಪ ಸವಿದಿದ್ದೀರಾ  ಅರೆ ಬನ್ನಿ ಬನ್ನಿ ಬಿಳಿಗಿರಿಯ ಜೇನು, ಸೊಗದೆ  ಬೇರಿನ ಶರಬತ್ತು,  ಸೀಗೆ ಪುಡಿ,  ನೆಲ್ಲಿಕಾಯಿ , ಚಕ್ಕೋತ ಹಣ್ಣು, ಕೆಂಡ ಸಂಪಿಗೆ ಹೂವು  ಪ್ರಸಿದ್ಧಿ  ಇಲ್ಲಿಗೆ ಬಂದ ನೆನಪಿಗೆ  ನಿಮಗೆ ಬೇಕಾದದ್ದನ್ನು ಖರೀದಿಸಿರಿ  ಗಿರಿಜನ ಕೇಂದ್ರ,    "ಗಿರಿ ದರ್ಶಿನಿ"  ಹಾಗು ಹಲವು ಕಡೆ ಯಲ್ಲಿ  ಸಿಗುತ್ತದೆ.  ಸಂಜೆಯನ್ನು  ಹತ್ತಿರದಲ್ಲಿರುವ ಕೆರೆಯಲ್ಲಿ ಕಳೆಯೋಣ ಸುಂದರ ಸೂರ್ಯಾಸ್ತ ದೃಶ್ಯವನ್ನು ನೋಡೋಣ. 

Monday, July 11, 2011

ಅಂದಹಾಗೆ ಸೋಲಿಗರು ಅಂದ್ರೆ ಯಾರು.???? ಪಯಣ 06

ಬಿಳಿಗಿರಿರಂಗನ ಬೆಟ್ಟ ಅಂದೊಡನೆ ಸಾಮಾನ್ಯವಾಗಿ ಕೇಳಿಬರುವ ಹೆಸರು "ಸೋಲಿಗರು" , ಹಲವರಿಗೆ ಈ ಹೆಸರಿನ ಪರಿಚಯ ಇಲ್ಲದ ಕಾರಣ ಸೋಲಿಗರ ಬಗ್ಗೆ ತಿಳಿಯಬೇಕೆಂಬ ಆಸೆ ಆಗುತ್ತದೆ. ನನಗೂ ಸಹ ಇಲ್ಲಿಗೆ ಹಲವಾರು ಸಾರಿ ಬಂದಾಗ ಇವರ ಬಗ್ಗೆ ತಿಳಿಯ ಬೇಕೆಂಬ ಹಂಬಲ ಇತ್ತು. ಬನ್ನಿ ಸೋಲಿಗರ ಪರಿಚಯ ಮಾಡಿಕೊಡುತ್ತೇನೆ."ಸೋಲಿಗ" ಎಂದರೆ  ಬಿದಿರಿನ ಮಕ್ಕಳೂ ಅಂತ ಅರ್ಥ!!! ಈ ಜನರಲ್ಲಿ  ತಮ್ಮ ಜನಾಂಗದ ಮೊದಲ ಮನುಷ್ಯ ಬಿದಿರಿನಿಂದ  ಉದ್ಭವಿಸಿದ ಎಂಬ ನಂಬಿಕೆ ಇದೆ. ಹಾಗಾಗಿ ಇವರು ತಮ್ಮನ್ನು  "ಸೋಲಿಗ" ಅಥವಾ "ಬಿದಿರಿನ ಮಕ್ಕಳು"  ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ  ಈ ಸೋಲಿಗ ಜನರು "ಮಲೆ ಮಹದೇಶ್ವರ ಬೆಟ್ಟ ಶ್ರೇಣಿ," "ಬಿಳಿಗಿರಿ ರಂಗನ ಬೆಟ್ಟ ಶ್ರೇಣಿ " ಹಾಗು "ಬಂಡೀಪುರ ಅರಣ್ಯ ಶ್ರೇಣಿ"  ಯಲ್ಲಿ ಮಾತ್ರ ಕಂಡುಬರುತ್ತಾರೆ. ಇನ್ನೆಲ್ಲಿಯೂ ಇವರ ಅಸ್ತಿತ್ವ ಇರುವುದನ್ನು ನೀವು ಕಾಣಲಾರಿರಿ .ಇವರ ನಂಬಿಕೆಗಳು  ಪರಿಸರ ಅಭಿವೃದ್ದಿಗೆ ಪೂರಕವಾಗಿದ್ದು  ಅಚ್ಚರಿ ಮೂಡಿಸುತ್ತದೆ.
ಸೋಲಿಗರ ವ್ಯವಸಾಯ
1 ] ಒಬ್ಬ ಸೋಲಿಗ ವ್ಯಕ್ತಿ  ಎಂದಿಗೂ  ಮರದಲ್ಲಿ ಹಣ್ಣಾಗದ    ಕಾಯಿ ಅಥವಾ ದೊರು ಹಣ್ಣನ್ನು ಕೀಳಲಾರ, ಮರ/ ಗಿಡ ದಲ್ಲಿಯೇ ಪೂರ್ಣವಾಗಿ ಹಣ್ಣಾಗಿರುವ ಹಣ್ಣುಗಳನ್ನು ಮಾತ್ರಾ ಕಿತ್ತು ತಿನ್ನುತ್ತಾನೆ,  ಇದರಿಂದ ಇತರೆ ಪ್ರಾಣಿ ಪಕ್ಷಿಗಳಿಗೂ  ಹಣ್ಣನ್ನು ತಿನ್ನುವ ಅವಕಾಶ ದೊರೆಯುತ್ತದೆ.   2 ] ತಾನು ವ್ಯವಸಾಯ ಮಾಡುವ ಭೂಮಿಯನ್ನು  ಕೇವಲ 06 ರಿಂದ 07  ವರ್ಷ ಮಾತ್ರ ಉಳುಮೆಮಾಡಿ ಬೆಳೆತೆಗೆದು  ನಂತರ ಸುಮಾರು  60 ರಿಂದ 70 ವರ್ಷ ಆ ಭೂಮಿಯನ್ನು ವ್ಯವಸಾಯ ಮಾಡದೆ ಹಾಗೆ ಬಿಡುತ್ತಾನೆ. ಇದರಿಂದ ಭೂಮಿಯ ಸಾರ ಕಡಿಮೆಯಾಗುವುದು ತಪ್ಪಿ  ಭೂಮಿ ಫಲವತ್ತತೆ ಉಳಿಯುತ್ತದೆ. 3 ] ಬೇಸಿಗೆಯಲ್ಲಿ ಕುಡಿಯಲು ನೀರಿಗೆ  ತೊಂದರೆ ಯಾದಲ್ಲಿ ಕಾಡಿನ ಮರವನ್ನು ಪ್ರಾರ್ಥಿಸಿ  ಅದಕ್ಕೆ ಪೊಟರೆ[ ತೂತು]   ಕೊರೆದು  ಮರಕ್ಕೆ ಹಾನಿಯಾಗದಂತೆ  ಮರದಿಂದ ಸಾಕಷ್ಟು ನೀರನ್ನು ತೆಗೆಯುತ್ತಾರೆ. ಇದು ನಾಗರೀಕರಾದ ನಮಗೆ ತಿಳಿಯದ ವಿಧ್ಯೆ ಯಾಗಿದೆ.

Sunday, July 3, 2011

ಬಿ.ಆರ್ .ಹಿಲ್ಸ್ . ಅಂದ್ರೆ ಡಾಕ್ಟರ್ ಸುದರ್ಶನ್ ನೆನಪಿಗೆ ಬರ್ತಾರೆ!!!!! ಪಯಣ ..5

ಡಾಕ್ಟರ್ ಸುದರ್ಶನ್
ನಮ್ಮಲ್ಲಿ   ಬಹಳಷ್ಟು ಜನ ಡಾಕ್ಟರ್ ಗಳು ಇದ್ದಾರೆ ಅವರು ತಮ್ಮದೇ ದಾರಿಯಲ್ಲಿ ನಡೆದು ಜಗತ್ತಿಗೆ ಸೇವೆಸಲ್ಲಿಸಿ ನಕ್ಷತ್ರಗಳಾಗಿ ಪ್ರಕಾಶಿಸುತ್ತಾರೆ. ಅಂತಹ ಒಬ್ಬ ವ್ಯಕ್ತಿ ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಂಡುಬರುತ್ತಾರೆ . ರಾಮಕೃಷ್ಣ ಪರಮಹಂಸ ಹಾಗು ವಿವೇಕಾನಂದರ  ಪ್ರಭಾವಕ್ಕೆ ಒಳಗಾಗಿ ಕಾಡಿನಲ್ಲಿ ನೆಲೆಸಿ  ಕಾನನದ ಮಕ್ಕಳಿಗೆ ದಾರಿ ದೀಪವಾಗಿ  ಅವರ ಜೊತೆಯೇ ನೆಲೆಸಿ ಕಾನನ ಸುಮವಾಗಿ ಸುವಾಸನೆ ಬೀರಿದ್ದಾರೆ. ಅವರೇ ಡಾಕ್ಟರ್ ಸುದರ್ಶನ್.ಬನ್ನಿ ಇವರ ಬಗ್ಗೆ ತಿಳಿಯೋಣ.  ಡಾಕ್ಟರ್ ಸುದರ್ಶನ್ ಹುಟ್ಟಿದ ಊರು ಬೆಂಗಳೂರು ಸಮೀಪದ ಹೊರವಲಯದ ಯೆಮಲೂರು ಗ್ರಾಮದಲ್ಲಿ 1950 ರ ಡಿಸೆಂಬರ್  30 ರಂದು ಜನಿಸಿದ್ದಾರೆ. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿ 1973 ರಲ್ಲಿ ಡಾಕ್ಟರ್ ಆಗಿ ಹೊರಬರುತ್ತಾರೆ .ಆನಂತರ ರಾಮಕೃಷ್ಣ ಮಿಶನ್ ಸೇರಿ ಅಲ್ಲಿ ಸೇವಾಭಾವದಿಂದ  ಕಾರ್ಯ ನಿರ್ವಹಿಸುತ್ತಾರೆ. ವಿವಿಧ ಹಂತದಲ್ಲಿ ಕರ್ತವ್ಯ ನಿರ್ವಹಿಸಿ  
1981  ರಲ್ಲಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದು ನೆಲೆಸಿ "ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ"  ಸ್ಥಾಪಿಸಿ ನೆಲೆಸುತ್ತಾರೆ. ಗಿರಿಜನರ ಸೇವೆ ಮಾಡುವ ಬಗ್ಗೆ ಆಸಕ್ತಿಯಿಂದ ಶ್ರಮ ವಹಿಸಿ ಗಿರಿಜನರ ಮನೆ ಬಾಗಿಲಿಗೆ ವೈಧ್ಯಕೀಯ ಸೌಲಭ್ಯ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಂಡು ಉತ್ಸಾಹಿ ವೈಧ್ಯರ ಒಂದು ತಂಡ ರಚಿಸಿ  ಯಶಸ್ವಿಯಾದರು 1986 ರಲ್ಲಿ ಕರುಣಾ ಟ್ರಸ್ಟ್ ಸ್ಥಾಪಿಸಿ  ಗ್ರಾಮೀಣಾಭಿವೃದ್ಧಿ  ಕಾರ್ಯಗಳನ್ನು ಹಮ್ಮಿಕೊಂಡು ಗಿರಿಜನರ ಶ್ರೇಯೋಭಿವೃದ್ಧಿಗೆ  ನಾಂದಿ ಹಾಡಿದರು. ಗಿರಿಜನರ ಹಾಡಿಯಲ್ಲಿ  ಇವರು ರೂಪಿಸಿದ ಕಾರ್ಯಕ್ರಮಗಳು  ಕರುಣಾಳು ವಾಗಿ ಬಂದ ಬೆಳಕಿನಂತೆ  ಬೆಳಕಾಗಿ ಗಿರಿಜನರ ಮುಖದಲ್ಲಿ ಮಂದಹಾಸ ಮೂಡಿಸಲು ಸಫಲವಾಯಿತು .   

Sunday, June 26, 2011

ಬಿಳಿಗಿರಿ ಕಾನನದಲ್ಲಿ ಮೌನವಾಗಿ ಇದ್ದರು !!!! ಇವರೇ ಸ್ವಾಮಿ ಅಲ್ಲದ ಸ್ವಾಮಿ ನಿರ್ಮಲಾನಂದ !!!!!!! ಪಯಣ ...4



ಅರೆ ಇದೇನು ಸ್ವಾಮೀಜಿಯಬಗ್ಗೆ ಅಂತೀರಾ !!!! ಹೌದು ಇವಾಗ ಎಲ್ಲೆಲ್ಲೂ ಸ್ವಾಮಿಜಿಗಳದ್ದೆ ಸುದ್ದಿ.ಆದರೆ ಇಲ್ಲೊಬ್ಬ ಸ್ವಾಮಿಜೀ ಮೌನವಾಗಿ ಇದ್ದು  ಶಿಷ್ಯರಿಲ್ಲದೆ ಬರೀ ಗೆಳೆಯರೊಡನೆ ಸಂಪರ್ಕ ಇಟ್ಟುಕೊಂಡು , ಅಂತರಾಷ್ಟ್ರೀಯ ಮಟ್ಟದಲ್ಲಿ ಮೌನವಾಗಿಯೇ ಸುದ್ದಿ ಮಾಡಿ ವನಸುಮದಂತೆ ಇದ್ದು ಮರೆಯಾದರು.ಇವರು ಮನಸ್ಸು ಮಾಡಿದ್ದರೆ ಬೇರೆ ಸ್ವಾಮಿಜಿಗಳಂತೆ ಮೆರೆಯ ಬಹುದಿತ್ತು ಆದರೆ ತನ್ನದೇ ಹಾದಿಯಲ್ಲಿ ಕಾಡಿನೊಳಗೆ ಇದ್ದುಕೊಂಡೇ ಸಾಧಿಸಿ ಮರೆಯಾದರು.                                                                       
ಸ್ವಚ್ಛವಾದ  ಪರಿಸರದ ಸ್ವಾಗತ ನಿಮಗೆ.

ಬನ್ನಿ ನಮ್ಮ ಪಯಣದ ಇಂದಿನ ಭೇಟಿ ಒಂದು ಆಶ್ರಮಕ್ಕೆ ಅಲ್ಲಿಗೆ  ಹೋಗೋಣ. ನಾನು ಬಹಳಷ್ಟು ಸಾರಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದರೂ ಇಲ್ಲಿಗೆ ಬಂದಿರಲಿಲ್ಲ . ದಾರಿಯಲ್ಲಿ ಆಶ್ರಮದ ಬಾಗಿಲು ಕಂಡರೂ ಆಸಕ್ತಿ ಯಿಲ್ಲದೆ ಇಲ್ಲಿಗೆ ಬಾರದೆ ಹೊರಟು ಬಿಡುತ್ತಿದ್ದೆ . ಒಮ್ಮೆ ಗೆಳೆಯರೊಬ್ಬರು ಬಲವಂತವಾಗಿ ಇಲ್ಲಿಗೆ ಕರೆದುಕೊಂಡು ಬಂದರು  ನಾನು ಇಲ್ಲಿಗೆ ಬರುವ ವೇಳೆಗಾಗಲೇ ಸ್ವಾಮೀ ನಿರ್ಮಲಾನಂದ ಇಹ ಲೋಕದಿಂದ ಹೊರಟು ಹೋಗಿದ್ದರು . ಆದರೆ ಇಲ್ಲಿನ ಪರಿಸರದ ಚಿತ್ರ ಕ್ಲಿಕ್ಕಿಸುತ್ತಾ ಸುಮ್ಮನೆ ಅಡ್ಡಾಡಿದ ಅನುಭವ ಮೊದಲನೆಯದು. ನಂತರ ಇಲ್ಲಿನ ನಿಶಬ್ದ ವಾತಾವರಣಕ್ಕೆ ಮನಸೋತು ಹಲವು ಬಾರಿ ಬಂದಾಗ ಇಲ್ಲಿನ ವಿಸ್ಮಯದ ಬಗ್ಗೆ ಆಸಕ್ತಿ ಮೂಡಿ ವಿಚಾರ ತಿಳಿಯಿತು . ಬನ್ನಿ ಸ್ವಾಮೀ,                                 "ನಿರ್ಮಲಾನಂದ ಸ್ವಾಮೀ "ಯಾರು ಎಂದು ತಿಳಿಯೋಣ.                                             

                                                 
1924 ರ ಡಿಸೆಂಬರ್ ನಲ್ಲಿ ಕೇರಳದಲ್ಲಿ ಬಾಲಕೃಷ್ಣನ್[ಸ್ವಾಮೀ ನಿರ್ಮಲಾನಂದರ ಮೊದಲ ಹೆಸರು ] ಎಂಬ ಮಗುವಿನ ಜನನವಾಗುತ್ತದೆ, ಬಾಲ್ಯ ಕಳೆದ ಆ ಜೀವ  ಇಪ್ಪತ್ತು ವರ್ಷ ಕ್ಕೆ ಕಾಲಿಟ್ಟ ಆ ಸಮಯದಲ್ಲಿ  ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ  1943 ರಲ್ಲಿ  ಸೈನಿಕರಾಗಿ ಸೇರುತ್ತಾರೆ ಅಲ್ಲಿನ ಸೈನಿಕ ಅಂಚೆ ಇಲಾಖೆಯ ಸೇವೆ ಇವರದು,ಎರಡನೇ ಮಹಾಯುದ್ದ ನಡೆದಾಗ ಇವರ ಸೇವೆ ನಾಲ್ಕು ವರುಷಗಳ  ಕಾಲ ಯೂರೋಪ್ ನಲ್ಲಿ ಮುಂದುವರೆಯಿತು. ಎರಡನೇ ಮಹಾಯುದ್ದದ ಭೀಕರತೆ ,ರಕ್ತಪಾತ ವನ್ನು ಹತ್ತಿರದಿಂದ ಕಂಡ ಇವರು ಶಾಂತಿ ಜೀವನದತ್ತ ಮುಖ ತಿರುಗಿಸಲು ಪ್ರೇರಣೆಯಾಗುತ್ತದೆ. ಭಾರತಕ್ಕೆ ಬಂದ ಇವರು ಅಧ್ಯಯನ ಮುಂದುವರೆಸಿ "ಟಾಲ್ ಸ್ಟಾಯ್", "ತೋರೋ", "ಮಹಾತ್ಮಾ ಗಾಂಧೀ" "ರಾಮಕೃಷ್ಣ ಪರಮ ಹಂಸ" "ವಿವೇಕಾನಂದ"  ಇವರ ಬದುಕು ಬೋದನೆಗಳ ಪ್ರಭಾವಕ್ಕೆ  ಮನಸ್ಸು ಕೊಡುತ್ತಾರೆ ಹಾಗು ಇವುಗಳಿಂದ ಪ್ರಭಾವಿತರಾಗುತ್ತಾರೆ.ನಂತರ ಭಾರತದ ಉದ್ದಗಲಕ್ಕೂ ಸಂಚರಿಸಿ ದೇಶವನ್ನು  ಅರಿತುಕೊಳ್ಳುವ  ಕಾರ್ಯ ಮಾಡುತ್ತಾರೆ.ಈ ವೇಳೆಯಲ್ಲಿ ಹಲವಾರು ಸಾಧು , ಸಂತರು, ಕ್ರಿಶ್ಚಿಯನ್ ಪಾದ್ರಿಗಳು, ಫಕೀರರು, ಗಳ ಪರಿಚಯವಾಗಿ ಅವರ ವಿಚಾರ ಧಾರೆ   ಅರಿತುಕೊಳ್ಳುತ್ತಾರೆ. "ವಿನೋಬಾ ಭಾವೆ  'ಯವರ "ಭೂಧಾನ"ಚಳುವಳಿಯಲ್ಲಿ ಭಾಗವಹಿಸಿ     ತಮ್ಮತನ   ಮೆರೆಯುತ್ತಾರೆ. ಇದಾದ ಮೇಲೆ 1959 ರಿಂದ 1964 ವರೆಗೆ ಮತ್ತೊಮ್ಮೆ ಯೂರೋಪ್ , ಮಧ್ಯ ಪ್ರಾಚ್ಯ ,ಅಮೇರಿಕಾ ಜಪಾನ್ ರಾಷ್ಟ್ರಗಳಿಗೆ ಪ್ರವಾಸ ಮಾಡುತ್ತಾರೆ. ಆ ಸಮಯದಲ್ಲಿ ವಿಶ್ವದ ಹಲವಾರು ದೇಶಗಳಲ್ಲಿ   ಚಾಲ್ತಿಯಲ್ಲಿದ್ದ ಹಲವು ಧರ್ಮಗಳ,ಬಗ್ಗೆ , ದಾರ್ಶನಿಕರ  ಬಗ್ಗೆ ಅರಿತುಕೊಳ್ಳುತ್ತಾರೆ . ನಂತರ ವಾಪಸ್ಸು ತಾಯ್ನಾಡಿಗೆ ಬಂದುನೆಲೆಸಲು ನಿರ್ಧರಿಸಿ 1964 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರಿಗೆ ಬಂದು ಅಲ್ಲಿ ಪ್ರಸಿದ್ದ  ಸ್ವಾತಂತ್ರ ಹೋರಾಟಗಾರ '' ತಗಡೂರು ಶ್ರೀ ರಾಮಚಂದ್ರ ರಾಯ" ರನ್ನು ಭೇಟಿ ಮಾಡಿ ಕೆಲ ಕಾಲ ಅಲ್ಲಿಯೇ ನೆಲೆಸುತ್ತಾರೆ.ನಂತರ ಅಂದು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಜ್ಜನರಾಗಿದ್ದ" ಶ್ರೀ  ಬಿ .ರಾಚಯ್ಯ " ರವರ ಸಹಕಾರದಿಂದ  ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆನಿಂತು  ಆಶ್ರಮ ಕಟ್ಟುತ್ತಾರೆ .                                          
ಶೀರ್ಷಿಕೆ ಸೇರಿಸಿ
   ಮುಂದಿನ ಹಾದಿ  ನಿಶಬ್ದವಾಗಿ ನಿರಂತರ ಹನ್ನೊಂದು ವರುಷಗಳ ಮೌನ ವ್ರತ ಆಚರಣೆ . ಮೌನವಾಗಿಯೇಇವರು ಪತ್ರಗಳ ಮೂಲಕ ಜಗತ್ತಿನ  ಪ್ರಮುಖ ವ್ಯಕ್ತಿಗಳ ಒಡನಾಟ ಇಟ್ಟು ಕೊಂಡಿದ್ದರು. ಅಂತರಾಷ್ಟ್ರೀಯ ಮುಖಂಡರಾಗಿದ್ದ  ಹಲವಾರು ದೇಶಗಳ  ಮುಖಂಡರೊಂದಿಗೆ  ಪತ್ರ ವ್ಯವಹಾರ ಇತ್ತು. ತನ್ನ ಆಶ್ರಮದಲ್ಲಿ , ಟಿ.ವಿ. ,ಟೆಲೆಫೋನ್,  ಯಾವುದೇ ಸಂಪರ್ಕ ವಿಲ್ಲದೆ  ಬರಿ ಪತ್ರ ಬರೆಯುವ ಮೂಲಕ  ಹೊರ ಪ್ರಪಂಚದ ಸಂಪರ್ಕ ಇಟ್ಟುಕೊಂಡಿದ್ದರು. ಈ ಸಮಯ ದಲ್ಲಿ ಹಲವಾರು ಪುಸ್ತಕಗಳನ್ನು ಬರೆದ ಇವರು ಜಗತ್ತಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.ಇವರು ಬರೆದ ಪುಸ್ತಕ ಗಳಲ್ಲಿ   "  A GARLAND OF FOREST FLOWERS "   ಪುಸ್ತಕ  ಜಗತ್ತಿನಲ್ಲಿ ಪ್ರಸಿದ್ದಿ ಪಡೆದು ಅಂತರಾಷ್ಟ್ರ್ರೀಯ  ಮನ್ನಣೆ ಪಡೆದಿದೆ.  ಇವರ ಈ  ಕಾರ್ಯ ವನ್ನು ಗುರುತಿಸಿರುವ ವಿಶ್ವ ಇವರಿಗೆ 
1] 10 th edition 'international who's who of intellectuals" award  2] 15 th 'men of achivements 3] ' international man of the year 1990-91  4] 4 th edition 'Distinguished leadership award " in religion and spirituality 5] 1 st edition  'The most admired men and women of the year '

 ಮುಂತಾದ ಪ್ರಶಸ್ತಿಗಳನ್ನು   ಪ್ರಧಾನ ಮಾಡಿ  ಗೌರವಿಸಿದೆ. ಇಷ್ಟೆಲ್ಲಾ ಸಾಧನೆ ಮಾಡಿ ಎಲ್ಲಾ ಧರ್ಮಗಳ ಬಗ್ಗೆ  ಗೌರವ ಯುತವಾಗಿ  ಪ್ರವಚನ ಮಾಡಿ ನಿಜವಾದ ವಿಶ್ವ ಮಾನವನಾಗಿ ,  ಶಿಷ್ಯರನ್ನು ಬೆಳಸದೆ , ಭಕ್ತರನ್ನು ಬೆಳೆಸದೆ  ಅಭಿಮಾನಿಗಳನ್ನೂ, ಸ್ನೇಹಿತರನ್ನೂ ಸಂಪಾದಿಸಿ  " ವಿಶ್ವ ಶಾಂತಿನಿಕೇತನ "  ಆಶ್ರಮ ಕಟ್ಟಿ  ವಿಶ್ವ ಮಾನವತಾವಾದಿಯಾಗಿ  ಕಾನನದ ಸುಮವಾಗಿ  ಮೌನದಿಂದಲೇ ಸಾಧಿಸಿ ಬದುಕಿದರು  1997  ರ ಜನವರಿ 10   ರಂದು  ಇಹ ಲೋಕ ದಿಂದ ಪ್ರಯಾಣ ಬೆಳೆಸಿದರು .  1997 ರಲ್ಲಿ ಇವರ ದೇಹ ತ್ಯಾಗದ ಬಗ್ಗೆ  ಒಂದು  ದೊಡ್ಡ ಚರ್ಚೆಯೇ  ಪತ್ರಿಕೆಗಳಲ್ಲಿ ಹಾಗು ಸಮಾಜದಲ್ಲಿ  ಆಗ ದೇಶಾದ್ಯಂತ ನಡೆದು ಹೋಗಿತ್ತು.  ಬನ್ನಿ ಆಶ್ರಮದ ಒಳಗಡೆ ಕೆಲವು ದೃಶ್ಯಗಳನ್ನು  ನೋಡೋಣ.


ಆಶ್ರಮದ ಒಳಗಡೆ  ಇರುವ  ಸ್ವಾಮೀ ನಿರ್ಮಲಾನಂದರ  ಸಮಾಧಿ
ಸಮಾಧಿಯ ಮುಂಭಾಗ
ಸಮಾಧಿಯ ಒಂದು ಪಾರ್ಶ್ವದಲ್ಲಿ ನ  ನೋಟ

ಸಮಾಧಿಯ ಹಿಂಭಾಗದಲ್ಲಿನ  ಬರಹ
ಸಮಾಧಿಯ ಮತ್ತೊಂದು ಪಾರ್ಶ್ವದಲ್ಲಿನ ಬರಹ.

Sunday, June 19, 2011

"ಬಿಳಿಗಿರಿ" ಕಾನನದ ಒಡೆಯ ರಂಗನ ಕಾಣುವ ಬನ್ನಿರಿ!!!ಸ್ವಲ್ಪ ಪುರಾಣ, ಇತಿಹಾಸ ,ಜಾನಪದ ಎಲ್ಲದರ ರಸಾಯನ ಸವಿಯಿರಿ!!!!ಪಯಣ..3


 ಶ್ರೀಬಿಳಿಗಿರಿ ರಂಗನಾಥ ಸ್ವಾಮೀ.
ಕಳೆದ ಸಂಚಿಕೆಯಲ್ಲಿ "ಬಿಳಿಗಿರಿ " ಬೆಟ್ಟಗಳ ಶ್ರೇಣಿಯ ಬಗ್ಗೆ ತಿಳಿದೆವು, ಈ ಸಂಚಿಕೆಯಲ್ಲಿ" ಬಿಳಿಗಿರಿ ರಂಗನಾಥ" ಸ್ವಾಮಿಯ ಬಗ್ಗೆ ಇರುವ ಮಾಹಿತಿಯನ್ನು ತಿಳಿಯುವ.                                                   
ಶ್ರೀ  ಬಿಳಿಗಿರಿ ರಂಗ ಸ್ವಾಮೀ {ಚಿತ್ರ ಕೃಪೆ ಅಂತರ್ಜಾಲ ಚಾಮರಾಜ ನಗರ ಜಿಲ್ಲೆ ವೆಬ್ಸೈಟ್}
                                                                                                         ಪೌರಾಣಿಕ ಹಿನ್ನೆಲೆ :- ಬ್ರಹ್ಮ ಪುತ್ರನಾದ ವಸಿಷ್ಠ ಋಷಿಯು ವಿಶ್ವಾಮಿತ್ರರ ಕೋಪದಿಂದ  ಶಾಪ ಗ್ರಸ್ತರಾದ ತನ್ನ ಪುತ್ರರೆಲ್ಲರನ್ನೂ ಕಳೆದುಕೊಂಡು ,ಸಂತಾನ  ಅಪೇಕ್ಷೆಯಿಂದ ವೆಂಕಟಾದ್ರಿಯಲ್ಲಿ ಶ್ರೀ ವೆಂಕಟರಮಣ ಸ್ವಾಮಿಯನ್ನು ಪ್ರಾರ್ಥಿಸಲು , ಆ ಸ್ವಾಮಿಯಿಂದ  ಸಂದೇಶ ಪಡೆದು ಆಣತಿಯಂತೆ  ಕಾವೇರಿ ನದಿಯ ದಕ್ಷಿಣಕ್ಕೆ ಇರುವ ಶ್ವೇತಾದ್ರಿಯಲ್ಲಿ ತಪಸ್ಸನ್ನು ಮಾಡಲು ಬಿಳಿಗಿರಿ ಬೆಟ್ಟ ತಲುಪಿ ಅಲ್ಲಿನ ಉನ್ನತ ಶಿಖರ ದಲ್ಲಿ ಕಂಡುಬಂದ" ಔದುಂಬರ ವೃಕ್ಷದ" ಕೆಳಗೆ ತಪಸ್ಸು ಮಾಡಿ ಶ್ರೀಮನ್ನಾರಾಯಣನ ಅನುಗ್ರಹ ಪಡೆದರೆಂದೂ,ಆ ಅನುಗ್ರಹದಿಂದ "ಶಕ್ತಿ" ಎಂಬ ಮಗನನ್ನು ಪಡೆದು ಧನ್ಯ ರಾದರೆಂದೂ, ಆ ಮಗುವಿನ ಸಂತತಿಯವರೇ ಮುಂದೆ ಮಹಾಭಾರತ ರಚಿಸಿದ "ವ್ಯಾಸ ಮಹರ್ಷಿ " ಗಳೆಂದೂ ತಿಳಿಸುತ್ತಾರೆ ವಸಿಷ್ಠ ಋಷಿಗಳು  ಮೇಷ ಮಾಸದ ವಿಶಾಖ ನಕ್ಷತ್ರದಲ್ಲಿ  ಶ್ವೇತಾದ್ರಿ ಗಿರಿಯಲ್ಲಿ ಶ್ರೀ ಶ್ರೀನಿವಾಸನ ಪ್ರತಿಷ್ಟಾಪನೆ  ಮಾಡಿದರೆಂದೂ  ಹೇಳುತ್ತಾರೆ.                                     

ದೇವರ ಅಭಿಷೇಕಕ್ಕೆ ಮುಂಜಾನೆ  ನೀರು ತರುವುದು
ಆ ಸಮಯದಲ್ಲಿ    ದ್ವಜಾರೊಹಣ ಪೂರ್ವಕ ನವಾಹ ಮಹೋತ್ಸವವು ಪ್ರಾರಂಭವಾಗಿ  ಈವತ್ತಿನ ವರೆಗೂ ನಡೆದುಕೊಂಡು ಬರುತ್ತಿರುವುದಾಗಿ ತಿಳಿಸಲಾಗಿದೆ. ಸೀತಾನ್ವೇಷಣೆ ಸಮಯದಲ್ಲಿ ಇಲ್ಲಿಗೆ ಶ್ರೀ ರಾಮನ ಆಗಮನವಾಗಿತ್ತೆಂದೂ ಹೇಳುತ್ತಾರೆ."ಮೋಹಿನಿ ಭಸ್ಮಾಸುರ" ಘಟನೆ ನಂತರ  ಶಿವನೂ ಸಹ ಇಲ್ಲಿ ನೆಲೆನಿಂತನೆಂದೂ ಅದಕ್ಕೆ ಸಾಕ್ಷಿ ಇಲ್ಲಿರುವ "ಗಂಗಾಧರೇಶ್ವರ" ದೇವಾಲಯವೆಂದೂ ಹೇಳುತ್ತಾರೆ.[ಮಾಹಿತಿ ಕೃಪೆ :-ಶ್ರೀ ಬಿಳಿಗಿರಿ ರಂಗನಾಥ ಸ್ವಾಮೀ ಮಹಾತ್ಮೆ ಬರೆದವರು ಜಿ .ಹೆಚ್ .ಕೃಷ್ಣ ಮೂರ್ತಿ ಮೈಸೂರು]
                                                                 
ಶ್ರೀ ಬಿಳಿಗಿರಿ  ರಂಗನಾಥ ಸ್ವಾಮೀ ಅಭಿಷೇಕ [ ಕೃಪೆ ಅಂತರ್ಜಾಲ ಚಾಮರಾಜನಗರ ವೆಬ್ಸೈಟ್]
                                                                                        ಐತಿಹಾಸಿಕ ಹಿನ್ನೆಲೆ :- ಇಲ್ಲಿನ ದೇವಾಲಯದ ಬಗ್ಗೆ ಐತಿಹಾಸಿಕ ಹಿನ್ನೆಲೆಯ ಶಾಸನ ೧೬೬೭ ರ ಮುದ್ದುರಾಜನ  ತಾಮ್ರ ಶಾಸನ ವಾಗಿದೆ.ಹಿಂದೆ ಇಲ್ಲಿ ಜೈನ ಮುನಿ ಒಬ್ಬರು ಇಲ್ಲಿ "ಶ್ರವಣ''ಎಂಬ ಹೆಸರಿನಿಂದ ನೆಲೆಸಿದ್ದರೆಂದು ಹೇಳಲಾಗಿದ್ದರೂ  ಅದರ ಕುರುಹು ಯಾವುದು ಇಲ್ಲಿ ದೊರೆಯುವುದಿಲ್ಲಾ. ನಂತರ ಶ್ರೀನಿವಾಸನಿಗೆ  "ಬಿಳಿಕಲ್ಲು ಶ್ರೀನಿವಾಸ" ಅಥವಾ "ಬಿಳಿಕಲ್ಲು ವೆಂಕಟರಮಣ"  ಎಂಬ ಹೆಸರಿನಿಂದ ಕರೆಯುತ್ತಿದ್ದರೆಂದೂ  ಆನಂತರ  "ಬಿಳಿಗಿರಿ ರಂಗನಾಥ" ಎಂದು ಆಯಿತೆಂದೂ ಹೇಳುತ್ತಾ ಅದಕ್ಕೆ ಒಂದು ಸ್ವಾರಸ್ಯವಾದ ಕಥೆ ಹೇಳುತ್ತಾರೆ . ಒಮ್ಮೆ ಶ್ರೀ ರಂಗ ಪಟ್ಟಣದ  "ಟಿಪ್ಪೂ ಸುಲ್ತಾನ"  ಬೇಟೆಯಾಡುತ್ತಾ ಇಲ್ಲಿಗೆ ಬಂದ ನೆಂದೂ ಆ ಸಮಯದಲ್ಲಿ  ಇಲ್ಲಿನ ಬಗ್ಗೆ ವಿಚಾರಿಸಲಾಗಿ  ಶ್ರೀನಿವಾಸನ ದೇವಾಲಯವೆಂದು ಹೇಳಿದರೆ ಅದನ್ನು ನಾಶ ಮಾಡಬಹುದೆಂದೂ  ಊಹಿಸಿ,, ಟಿಪ್ಪೂ ಸುಲ್ತಾನನಿಗೆ ರಂಗನಾಥ ಸ್ವಾಮಿಯ ಬಗ್ಗೆ ಇರುವ ಗೌರವ ತಿಳಿದು ಇದನ್ನು" ಬಿಳಿಗಿರಿ ರಂಗನಾಥ ಸ್ವಾಮೀ "ಎಂದು ಹೇಳಿದರೆಂದು ಅಂದಿನಿಂದ ಇಲ್ಲಿ ದೇವರನ್ನು " ಬಿಳಿಗಿರಿ ರಂಗನಾಥ ಸ್ವಾಮೀ" ಎಂದು ಕರೆಯಾಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ [ ಮೈಸೂರು ಗೆಜೆಟ್ ನಲ್ಲಿ ದಾಖಲಿದೆ,]