|
ಶ್ರೀಬಿಳಿಗಿರಿ ರಂಗನಾಥ ಸ್ವಾಮೀ. |
ಕಳೆದ ಸಂಚಿಕೆಯಲ್ಲಿ "ಬಿಳಿಗಿರಿ " ಬೆಟ್ಟಗಳ ಶ್ರೇಣಿಯ ಬಗ್ಗೆ ತಿಳಿದೆವು, ಈ ಸಂಚಿಕೆಯಲ್ಲಿ" ಬಿಳಿಗಿರಿ ರಂಗನಾಥ" ಸ್ವಾಮಿಯ ಬಗ್ಗೆ ಇರುವ ಮಾಹಿತಿಯನ್ನು ತಿಳಿಯುವ.
|
ಶ್ರೀ ಬಿಳಿಗಿರಿ ರಂಗ ಸ್ವಾಮೀ {ಚಿತ್ರ ಕೃಪೆ ಅಂತರ್ಜಾಲ ಚಾಮರಾಜ ನಗರ ಜಿಲ್ಲೆ ವೆಬ್ಸೈಟ್} |
ಪೌರಾಣಿಕ ಹಿನ್ನೆಲೆ :- ಬ್ರಹ್ಮ ಪುತ್ರನಾದ ವಸಿಷ್ಠ ಋಷಿಯು ವಿಶ್ವಾಮಿತ್ರರ ಕೋಪದಿಂದ ಶಾಪ ಗ್ರಸ್ತರಾದ ತನ್ನ ಪುತ್ರರೆಲ್ಲರನ್ನೂ ಕಳೆದುಕೊಂಡು ,ಸಂತಾನ ಅಪೇಕ್ಷೆಯಿಂದ ವೆಂಕಟಾದ್ರಿಯಲ್ಲಿ ಶ್ರೀ ವೆಂಕಟರಮಣ ಸ್ವಾಮಿಯನ್ನು ಪ್ರಾರ್ಥಿಸಲು , ಆ ಸ್ವಾಮಿಯಿಂದ ಸಂದೇಶ ಪಡೆದು ಆಣತಿಯಂತೆ ಕಾವೇರಿ ನದಿಯ ದಕ್ಷಿಣಕ್ಕೆ ಇರುವ ಶ್ವೇತಾದ್ರಿಯಲ್ಲಿ ತಪಸ್ಸನ್ನು ಮಾಡಲು ಬಿಳಿಗಿರಿ ಬೆಟ್ಟ ತಲುಪಿ ಅಲ್ಲಿನ ಉನ್ನತ ಶಿಖರ ದಲ್ಲಿ ಕಂಡುಬಂದ" ಔದುಂಬರ ವೃಕ್ಷದ" ಕೆಳಗೆ ತಪಸ್ಸು ಮಾಡಿ ಶ್ರೀಮನ್ನಾರಾಯಣನ ಅನುಗ್ರಹ ಪಡೆದರೆಂದೂ,ಆ ಅನುಗ್ರಹದಿಂದ "ಶಕ್ತಿ" ಎಂಬ ಮಗನನ್ನು ಪಡೆದು ಧನ್ಯ ರಾದರೆಂದೂ, ಆ ಮಗುವಿನ ಸಂತತಿಯವರೇ ಮುಂದೆ ಮಹಾಭಾರತ ರಚಿಸಿದ "ವ್ಯಾಸ ಮಹರ್ಷಿ " ಗಳೆಂದೂ ತಿಳಿಸುತ್ತಾರೆ ವಸಿಷ್ಠ ಋಷಿಗಳು ಮೇಷ ಮಾಸದ ವಿಶಾಖ ನಕ್ಷತ್ರದಲ್ಲಿ ಶ್ವೇತಾದ್ರಿ ಗಿರಿಯಲ್ಲಿ ಶ್ರೀ ಶ್ರೀನಿವಾಸನ ಪ್ರತಿಷ್ಟಾಪನೆ ಮಾಡಿದರೆಂದೂ ಹೇಳುತ್ತಾರೆ.
|
ದೇವರ ಅಭಿಷೇಕಕ್ಕೆ ಮುಂಜಾನೆ ನೀರು ತರುವುದು |
ಆ ಸಮಯದಲ್ಲಿ ದ್ವಜಾರೊಹಣ ಪೂರ್ವಕ ನವಾಹ ಮಹೋತ್ಸವವು ಪ್ರಾರಂಭವಾಗಿ ಈವತ್ತಿನ ವರೆಗೂ ನಡೆದುಕೊಂಡು ಬರುತ್ತಿರುವುದಾಗಿ ತಿಳಿಸಲಾಗಿದೆ. ಸೀತಾನ್ವೇಷಣೆ ಸಮಯದಲ್ಲಿ ಇಲ್ಲಿಗೆ ಶ್ರೀ ರಾಮನ ಆಗಮನವಾಗಿತ್ತೆಂದೂ ಹೇಳುತ್ತಾರೆ."ಮೋಹಿನಿ ಭಸ್ಮಾಸುರ" ಘಟನೆ ನಂತರ ಶಿವನೂ ಸಹ ಇಲ್ಲಿ ನೆಲೆನಿಂತನೆಂದೂ ಅದಕ್ಕೆ ಸಾಕ್ಷಿ ಇಲ್ಲಿರುವ "ಗಂಗಾಧರೇಶ್ವರ" ದೇವಾಲಯವೆಂದೂ ಹೇಳುತ್ತಾರೆ.[ಮಾಹಿತಿ ಕೃಪೆ :-ಶ್ರೀ ಬಿಳಿಗಿರಿ ರಂಗನಾಥ ಸ್ವಾಮೀ ಮಹಾತ್ಮೆ ಬರೆದವರು ಜಿ .ಹೆಚ್ .ಕೃಷ್ಣ ಮೂರ್ತಿ ಮೈಸೂರು]
|
ಶ್ರೀ ಬಿಳಿಗಿರಿ ರಂಗನಾಥ ಸ್ವಾಮೀ ಅಭಿಷೇಕ [ ಕೃಪೆ ಅಂತರ್ಜಾಲ ಚಾಮರಾಜನಗರ ವೆಬ್ಸೈಟ್] |
ಐತಿಹಾಸಿಕ ಹಿನ್ನೆಲೆ :- ಇಲ್ಲಿನ ದೇವಾಲಯದ ಬಗ್ಗೆ ಐತಿಹಾಸಿಕ ಹಿನ್ನೆಲೆಯ ಶಾಸನ ೧೬೬೭ ರ ಮುದ್ದುರಾಜನ ತಾಮ್ರ ಶಾಸನ ವಾಗಿದೆ.ಹಿಂದೆ ಇಲ್ಲಿ ಜೈನ ಮುನಿ ಒಬ್ಬರು ಇಲ್ಲಿ "ಶ್ರವಣ''ಎಂಬ ಹೆಸರಿನಿಂದ ನೆಲೆಸಿದ್ದರೆಂದು ಹೇಳಲಾಗಿದ್ದರೂ ಅದರ ಕುರುಹು ಯಾವುದು ಇಲ್ಲಿ ದೊರೆಯುವುದಿಲ್ಲಾ. ನಂತರ ಶ್ರೀನಿವಾಸನಿಗೆ "ಬಿಳಿಕಲ್ಲು ಶ್ರೀನಿವಾಸ" ಅಥವಾ "ಬಿಳಿಕಲ್ಲು ವೆಂಕಟರಮಣ" ಎಂಬ ಹೆಸರಿನಿಂದ ಕರೆಯುತ್ತಿದ್ದರೆಂದೂ ಆನಂತರ "ಬಿಳಿಗಿರಿ ರಂಗನಾಥ" ಎಂದು ಆಯಿತೆಂದೂ ಹೇಳುತ್ತಾ ಅದಕ್ಕೆ ಒಂದು ಸ್ವಾರಸ್ಯವಾದ ಕಥೆ ಹೇಳುತ್ತಾರೆ . ಒಮ್ಮೆ ಶ್ರೀ ರಂಗ ಪಟ್ಟಣದ "ಟಿಪ್ಪೂ ಸುಲ್ತಾನ" ಬೇಟೆಯಾಡುತ್ತಾ ಇಲ್ಲಿಗೆ ಬಂದ ನೆಂದೂ ಆ ಸಮಯದಲ್ಲಿ ಇಲ್ಲಿನ ಬಗ್ಗೆ ವಿಚಾರಿಸಲಾಗಿ ಶ್ರೀನಿವಾಸನ ದೇವಾಲಯವೆಂದು ಹೇಳಿದರೆ ಅದನ್ನು ನಾಶ ಮಾಡಬಹುದೆಂದೂ ಊಹಿಸಿ,, ಟಿಪ್ಪೂ ಸುಲ್ತಾನನಿಗೆ ರಂಗನಾಥ ಸ್ವಾಮಿಯ ಬಗ್ಗೆ ಇರುವ ಗೌರವ ತಿಳಿದು ಇದನ್ನು" ಬಿಳಿಗಿರಿ ರಂಗನಾಥ ಸ್ವಾಮೀ "ಎಂದು ಹೇಳಿದರೆಂದು ಅಂದಿನಿಂದ ಇಲ್ಲಿ ದೇವರನ್ನು " ಬಿಳಿಗಿರಿ ರಂಗನಾಥ ಸ್ವಾಮೀ" ಎಂದು ಕರೆಯಾಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ [ ಮೈಸೂರು ಗೆಜೆಟ್ ನಲ್ಲಿ ದಾಖಲಿದೆ,]
ಜಾನಪದ ಹಿನ್ನೆಲೆ :-" ಬಿಳಿಗಿರಿ ರಂಗನಾಥನ" ಬಗ್ಗೆ ಇಲ್ಲಿನ ಗಿರಿಜನಕ್ಕೆ ಅಪಾರ ಭಕ್ತಿ.ಇಲ್ಲಿನ ಸೋಲಿಗ ಜನಾಂಗದವರು ಈ ದೇವರನ್ನು ಭಾವ ಎಂದು ಕರೆಯುತ್ತಾರೆ,"ಬಿಳಿಗಿರಿ ರಂಗಯ್ಯ" ಬಿಳಿಗಿರಿ ಕಾಡಿನ ಸೋಲಿಗರ ಹುಡುಗಿಯ ಮೋಹದಲ್ಲಿ ಬಿದ್ದು ಅವಳನ್ನು ಪ್ರೀತಿಸಿ ಮದುವೆಯಾದಬಗ್ಗೆ ಇಲ್ಲಿನ ಕಂಸಾಳೆಯವರು ಹಾಡನ್ನು ಕಟ್ಟಿ ಹಾಡುತ್ತಾರೆ.ಬಿಳಿಗಿರಿಯ ಕಾಡಿನ ಸೋಲಿಗರ ಹಾಡಿ ಹಾಡಿ ಯಲ್ಲೂ ಬಿಳಿಗಿರಿ ರಂಗಪ್ಪನನ್ನು " ಭಾವ" " ಭಾವ" ಎಂದು ಕರೆಯುವ ಜನ ಇಂದಿಗೂ ಇದ್ದಾರೆ.ಮಹದೇಶ್ವರ ರನ್ನು ಬಿಟ್ಟರೆ ಅತೀ ಹೆಚ್ಚು ಜಾನಪದ ಹಾಡುಗಳು ಬಿಳಿಗಿರಿ ರಂಗನಾಥನ ಬಗ್ಗೆ ಇರುವುದು ವಿಶೇಷ.
|
ಹಂಬಿನಿಂದ ಸಿದ್ದಗೊಳ್ಳುತ್ತಿರುವ ರಥದ ನೋಟ |
ಇಲ್ಲಿನ ರಥೋತ್ಸವ ದಲ್ಲಿ ಸ್ಥಳೀಯ ಸೋಲಿಗರು ಕಾಡಿನಿಂದ ಹಂಬನ್ನು ತಂದು ಭಕ್ತಿ ಇಂದ "ಭಾವ" "ಭಾವ" ಎನ್ನುತ್ತಾ ತೇರನ್ನುಅಲಂಕರಿಸಿ ಸಿದ್ದ ಪಡಿಸುತ್ತಾರೆ ತೇರನ್ನು ಸಿದ್ದ ಪಡಿಸಲು ಇಲ್ಲಿ ಇವತ್ತಿಗೂ ದಾರ ಉಪಯೋಗಿಸುವುದಿಲ್ಲ , "ಬಿಳಿಗಿರಿ ರಂಗನ ಸೋಲಿಗ ಹುಡುಗಿ ಪರಿಣಯದ" ಬಗ್ಗೆ ತಂಬೂರಿ ದಾಸರು, ಕಾಡು ಗೊರವರು , ಕಂಸಾಳೆ ಪದದವರು, ಪದಗಳನ್ನು ಕಟ್ಟಿ ಹಾಡುವುದನ್ನು ಕೇಳಿಯೇ ಅನುಭವಿಸಬೇಕು.ಹಾಗಾಗಿ ಈ ದೇವರು ಸರ್ವ ಭಕ್ತ ಪ್ರಿಯನಾಗಿದ್ದಾನೆ.ಬನ್ನಿ ದೇವಾಲಯ ವೀಕ್ಷಣೆಗೆ , ಈ ದೇವಾಲಯವನ್ನು ಒಂದು ಬೃಹದ್ ಬಿಳಿಯ ಬಂಡೆಯ ಮೇಲೆ ಕಟ್ಟಲಾಗಿದ್ದು ಅತಿ ಎತ್ತರದ ಸ್ಥಳದಲ್ಲಿ ಇದೆ.
|
ಬಿಳಿಗಿರಿ ದೇವಾಲಯವಿರುವ ಬೆಟ್ಟದ ಬಿಳಿಕಲ್ಲು ಭಂಡೆ |
ಒಳಗಡೆ ವಿಶಾಲ ಪ್ರಾಕಾರ ವಿದ್ದು ಸುತ್ತಲೂ ರಕ್ಷಣಾ ಗೋಡೆ ಇದೆ.ದೇವಾಲಯದ ಮುಖ್ಯ ದ್ವಾರ ಮರದಿಂದ ಮಾಡಲಾಗಿದ್ದು ಉತ್ತಮ ಕಲಾಕೃತಿ ಹೊಂದಿದೆ.ದೇವಾಲಯದ ನವರಂಗ ದಲ್ಲಿ ಇರುವ ಕಂಬಗಳ ಮೇಲೆ ವಿಷ್ಣುವಿನ ದಶಾವತಾರ ಹಾಗು ವೈಷ್ಣವ ಕಲಾಕೃತಿಗಳನ್ನು ಸುಂದರವಾಗಿ ಕೆತ್ತಲಾಗಿದೆ . ಗರ್ಭಗೃಹದಲ್ಲಿರುವ" ಬಿಳಿಗಿರಿ ರಂಗನಾಥ ಸ್ವಾಮಿಯ" ವಿಗ್ರಹ ವಸಿಷ್ಠ ಋಷಿಯಿಂದ ಸ್ಥಾಪಿಸಲ್ಪಟ್ಟು ಒಂದು ಮೀಟರ್ ಗಿಂತಲೂ ಎತ್ತರವಿದ್ದು,ಶಂಖ, ಚಕ್ರ, ಅಭಯ ಹಾಗು ವರದ ಹಸ್ತ ಮುದ್ರೆಗಳನ್ನು ಹೊಂದಿದೆ. ನವರಂಗದ ದಕ್ಷಿಣ ಭಾಗದಲ್ಲಿ ಮೂರು ಸನ್ನಿಧಿ ಇದ್ದು ಇದರಲ್ಲಿ ಕ್ರಮವಾಗಿ ಶ್ರೀನಿವಾಸ, ,ಹನುಮಂತಾ ಹಾಗು ಮನವಲಮಹಾಮುನಿ [ ಶ್ರೀವೈಷ್ಣವ ಪಂಥ ದ ಒಬ್ಬ ಆಚಾರ್ಯರು]ವಿಗ್ರಹಗಳು ಇವೆ.ರಂಗನಾಥ ನ ಸನ್ನಿಧಿಯ ಪಕ್ಕದಲ್ಲಿ ಮತ್ತೊಂದು ಹಜಾರವಿದ್ದು ಅಲ್ಲಿ "ಅಲಮೇಲು ರಂಗನಾಯಕಿ " ದೇವಿಯ ಸನ್ನಿಧಿ ಇದೆ.ಇದೆ ನವರಂಗದಲ್ಲಿ ನೀವು ಗಮನವಿಟ್ಟು ನೋಡಿದರೆ ವೈಷ್ಣವ ಆಳ್ವಾರರುಗಳ ಹಾಗು, ಶ್ರೀ ನಿವಾಸ, ಭೂದೇವಿ, ಶ್ರೀದೇವಿ, ಮೂರ್ತಿಗಳನ್ನು ಕಾಣಬಹುದು.ದೇವರ ದರುಶನ ಪಡೆದು ಹೊರ ಬಂದರೆ ದೇವಾಲಯದ ಉತ್ತರಕ್ಕೆ ಮತ್ತೊಂದು ಸಣ್ಣ ಬಾಗಿಲು ಸಿಗುತ್ತದೆ ಅದನ್ನು ಹೊಕ್ಕು ನಡೆದರೆ ಕಾಡಿನ ಪ್ರಕೃತಿಯನ್ನು ಸವಿಯುತ್ತಾ ನಿಲ್ಲ ಬಹುದು.
|
ದೇವಾಲಯದ ಬಂಡೆಯ ಮೇಲಿನಿಂದ ಕಾಣುವ ಕಾಡಿನ ವೈಭವ |
ಇಲ್ಲಿ ಪ್ರತಿ ನಿತ್ಯ ದೇವಾಲಯದ ವತಿಯಿಂದ ಅನ್ನ ದಾಸೋಹ ನಡೆಸಲಾಗುತ್ತಿದೆ.ಇಲ್ಲಿ ಪ್ರತೀವರ್ಷ ದೊಡ್ಡ ರಥೋತ್ಸವ ಹಾಗು ಜಾತ್ರೆ ವೈಶಾಖ ಮಾಸದ ಚೌತಿಯ ಹುಣ್ಣಿಮೆಯಂದು ನಡೆಯುತ್ತದೆ.
.ಬಿಳಿಗಿರಿ ರಂಗನ ಪಾದರಕ್ಷೆ :-ಬಿಳಿಗಿರಿ ರಂಗ ನ ದರುಶನಕೆ ಬರುವ ಭಕ್ತರು ಇಲ್ಲಿ ದೇವರ ಪಾದುಕೆ ಯಿಂದ ಆಶೀರ್ವಾದ ಪಡೆಯಲು ಮುಗಿ ಬೀಳುತ್ತಾರೆ. ಇದು ಇಲ್ಲಿಯ ವಿಸ್ಮಯ ಸಹ ಹೌದು. ಇಲ್ಲಿನವರ ನಂಬಿಕೆಯಂತೆ ರಂಗನಾಥ ಸ್ವಾಮೀ ಕಾಡಿನಲ್ಲಿ ಪ್ರತಿ ರಾತ್ರಿ ಸಂಚಾರ ಮಾಡುತ್ತಾ ಲೋಕವನ್ನು ರಕ್ಷಿಸುತ್ತಾನೆ ಎಂಬ ನಂಬಿಕೆ ಇದೆ.
|
ದೇವರ ಪಾದ ರಕ್ಷೆ ಆಶೀರ್ವಾದ[ ಚಿತ್ರ ಕೃಪೆ ಅಂತರ್ಜಾಲ ] |
ಅದಕಾಗಿ ಇಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಚರ್ಮದ ಪಾದ ರಕ್ಷೆಗಳನ್ನು ದೇವರಿಗೆ ಜಾತ್ರೆ ಸಮಯದಲ್ಲಿ ಇದೆ ಕಾಡಿನಲ್ಲಿನಲ್ಲಿರುವ "ಬೂದಿತಿಟ್ಟು" [ಯಳಂದೂರ್ ತಾಲೂಕ] ಗ್ರಾಮದ ಆದಿ ಜಾಂಬವ ಮನೆತನದವರು ಅರ್ಪಿಸುತ್ತಾರೆ. ಈ ಕಾಯಕ ತಲೆ ತಲಾಂತರದಿಂದ ನಡೆದು ಬಂದಿರುವುದಾಗಿ ತಿಳಿಸುತ್ತಾರೆ.. ಆ ಮನೆತನದವರೂ ಸಹ ಇದನ್ನು ಭಕ್ತಿಯಿಂದ ಮಾಡುತ್ತಿದ್ದಾರೆ. ಜಾತ್ರೆಗೆ ಮೊದಲು ಆ ಮನೆಯವರು ಎರಡು ತಿಂಗಳ ಕಾಲ ಮಾಂಸ ಮಧ್ಯ ಎಲ್ಲವನ್ನೂ ವರ್ಜಿಸಿ , ಪ್ರತಿನಿತ್ಯ ಸ್ನಾನ ಮಾಡುತ್ತಾ ಮಡಿಯಾಗಿ ಈ ಕಾರ್ಯ ಮಾಡುವುದಾಗಿ ಸ್ಥಳೀಯರು ಹೇಳುತ್ತಾರೆ.ಮೊದಲು ಕಾನನಕ್ಕೆ ಹೋಗಿ ಪ್ರಾರ್ಥಿಸಿ ಅಲ್ಲಿ ದೊರೆಯುವ ಕಾಡು ಪ್ರಾಣಿಯ ಚರ್ಮವನ್ನು ತಂದು ಹದ ಮಾಡಿ ದೇವರಿಗೆ ಪಾದರಕ್ಷೆ ತಯಾರು ಮಾಡುತ್ತಾರೆಂದು ಹೇಳುತ್ತಾರೆ. ಈ ರೀತಿ ಅರ್ಪಿತವಾದ ಪಾದರಕ್ಷೆಗಳನ್ನು ದೇವಾಲಯಕ್ಕೆ ಮೆರವಣಿಗೆ ಯಲ್ಲಿ ತಂದು ಪೂಜಿಸಿ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಭದ್ರಪಡಿಸಿ ರಾತ್ರಿ ದೇವಾಲಯದ ಕೋಣೆಯನ್ನು ಸೀಲ್ ಮಾಡಿ ತೆರಳುವುದಾಗಿಯೂ, ಪ್ರತೀ ರಾತ್ರಿ ಹೀಗೆ ಮಾಡಿದರೂ ಒಂದು ದಿನ ಈ ಪಾದ ರಕ್ಷೆಯಲ್ಲಿ ಮಣ್ಣು ಮೆತ್ತಿರುವ , ಅಥವಾ ಸ್ವಲ್ಪಪಾದ ರಕ್ಷೆ ಸ್ವಲ್ಪ ಹರಿದು ಹೋಗಿರುವುದನ್ನು ಗಮನಿಸಲಾಗುವುದೆಂದೂ, ಈ ಗುರುತು ಕಂಡ ನಂತರ ಇದನ್ನು ಭಕ್ತಾದಿಗಳಿಗೆ ಆಶೀರ್ವಾದ ಮಾಡಲು ಉಪಯೋಗಿಸಲಾಗುವುದೆಂದೂ ತಿಳಿಸುತ್ತಾರೆ.ಈ ರೀತಿ ಚರ್ಮದ ಪಾದ ರಕ್ಷೆಯಿಂದ ಆಶೀರ್ವಾದ ಪಡೆದ ಹಲವು ರಾಷ್ಟ್ರೀಯ, ಅಂತರಾಷ್ಟ್ರ್ರೀಯ ಗಣ್ಯರ ಸಾಲು ಸಾಲು ಹೆಸರುಗಳನ್ನೂ ಹೇಳುತ್ತಾರೆ. ಸಾಮಾನ್ಯವಾಗಿ ವಿಷ್ಣು ದೇವಾಲಯದಲ್ಲಿ ಮರದ ಪಾದುಕೆ, ಅಥವಾ ಬೆಳ್ಳಿಯ ಪಾದುಕೆಗಳ ಮೂಲಕ ಆಶೀರ್ವಾದ ಮಾಡುವುದು ವಾಡಿಕೆ ಆದರೆ ಇಲ್ಲಿ ಚರ್ಮದ ಪಾದರಕ್ಷೆಯಲ್ಲಿ ಆಶೀರ್ವಾದ ಮಾಡುವುದು ಹಾಗು ಭಕ್ತರುಗಳು ಇದಕ್ಕಾಗಿ ಆಸೆ ಪಡುವುದು ವಿಸ್ಮಯವೇ ಸರಿ . ನಾನು ನೋಡಿದ ಬಹಳಷ್ಟು ದೇವಾಲಯಗಳಲ್ಲಿ ಇಲ್ಲಿ ಮಾತ್ರ ಕಾಣಸಿಗುತ್ತದೆ.ಬಹುಷಃ ನಮ್ಮ ದೇಶದಲ್ಲಿ ಇದೊಂದೇ ಇರಬಹುದು. [ ಒಂದು ವೇಳೆ ಇಂತಹ ರಿವಾಜು ಬೇರೆಡೆ ಇದ್ದಲ್ಲಿ ಯಾರಾದರೂ ತಿಳಿಸಿದಲ್ಲಿ ಒಳ್ಳೆಯದು]
ಇದಿಷ್ಟು "ಬಿಳಿಗಿರಿ ರಂಗಸ್ವಾಮಿ"ಯ ದೇಗುಲದ ಪರಿಚಯನಿಮ್ಮೆಲ್ಲರಿಗೂ ದೇವರ ಆಶೀರ್ವಾದ ಲಭಿಸಲಿ. ನಮಸ್ಕಾರ ಮುಂದಿನ ಸಂಚಿಕೆಯಲ್ಲಿ , ಇಲ್ಲಿನ ಮತ್ತೊಂದು ಸ್ಥಳದ ಪರಿಚಯ ಮಾಡಿಕೊಳ್ಳೋಣ..
8 comments:
ನಾವೇ ಹೋಗಿ ಬಂದಂತಾಯ್ತು ಬಾಲು ಅಣ್ಣ
thank you sir. most meaningful article. pl write about others places of karnatak temples.
wow... nice place sir... naavu hogbeku anta annusta ide.
ಮಾಹಿತಿ-ಚಿತ್ರಣ, ಉತ್ತಮ ಚಿತ್ರಗಳೂ ಸೇರಿ ಮನಸೂರೆಗೊಳ್ಳುತ್ತವೆ. ಅಭಿನ೦ದನೆಗಳು ಸರ್.
ಅನ೦ತ್
ಬಾಲು ಸರ್,
ಬಿಳಿರಂಗನ ಬೆಟ್ಟದ ಚಿತ್ರಗಳ ಜೊತೆಗೆ ಅದರ ಇತಿಹಾಸವನ್ನು ವಿವರಿಸಿದ್ದರಿಂದ ನಮಗೆ ನಿಮ್ಮ ಜೊತೆಯಲ್ಲೇ ಎಲ್ಲವನ್ನು ನೋಡಿದ ಅನುಭವವಾಗುತ್ತಿದೆ..
ಒಳ್ಳೆಯ ಮಾಹಿತಿ. ಧನ್ಯವಾದಗಳು
""ಬಿಳಿಗಿರಿ" ಕಾನನದ ಒಡೆಯ ರಂಗನ ಕಾಣುವ ಬನ್ನಿರಿ!!!ಸ್ವಲ್ಪ ಪುರಾಣ, ಇತಿಹಾಸ ,ಜಾನಪದ ಎಲ್ಲದರ ರಸಾಯನ ಸವಿಯಿರಿ!!!!ಪಯಣ..3" ರಲ್ಲಿ ಜೊತೆಗೂಡಿ ಪಯಣಿಸಿ ಮೆಚ್ಚಿ ಪ್ರೀತಿಯ ಅನಿಸಿಕೆಗಳನ್ನು ಬರೆದ ಎಲ್ಲಾ ಆತ್ಮೀಯರಿಗೆ ನಮನಗಳು.
ದೇವಾಲಯ ದರ್ಶನಕ್ಕಾಗಿ ಧನ್ಯವಾದಗಳು .. ಬಹಳ ಸುಂದರ ಮಾಹಿತಿ
Post a Comment