Showing posts with label sirsi. Show all posts
Showing posts with label sirsi. Show all posts

Friday, October 13, 2017

"ಇತಿಹಾಸದ ಮಡಿಲಲ್ಲಿ ಹೀಗೊಂದು ಪ್ರವಾಸ " ....1 ಬನ್ನಿ ಹೋಗೋಣ ಶಿರಸಿಯತ್ತ ....!





ಶಿರಸಿಯ ಮಾರಿಕಾಂಬ ದೇಗುಲ 

ಅದ್ಯಾಕೋ ಗೊತ್ತಿಲ್ಲ  ಶಿರಸಿಗೂ ನನಗೂ  ಬಿಡಲಾರದ  ನಂಟು........!, ಬಾಲ್ಯದಿಂದಲೂ  ನನ್ನ ಕುಟುಂಬದ  ಹಲವರು   ಈ ಊರಿನಲ್ಲಿ  ನೆಲೆಸಿದ್ದರೂ  ಯಾವಾಗಲೋ ಅಪರೂಪಕ್ಕೆ ಒಮ್ಮೆ  ಬಂದು  ಹೋಗುತ್ತಿದ್ದೆ , ನಂತರ  ಹೆಮ್ಮೆಯ  ಬ್ಲಾಗಿಗರಾದ [ ಸಾಗರದಾಚೆಯ  ಇಂಚರ ]   ಗುರುಮೂರ್ತಿ ಹೆಗ್ಡೆ ಯವರ ಆಹ್ವಾನದ ಮೇರೆಗೆನಾಲ್ಕು ವರ್ಷಗಳ ಹಿಂದೆ   ಶಿರಸಿಗೆ ಮೂವತೈದು ವರ್ಷಗಳ ನಂತರ   ಭೇಟಿ  ಅಲ್ಲಿಂದ  ಬಿಡಲಾರದ ನಂಟು ಈ ಊರಿನ ಜೊತೆಗೆ. ಅಂತೆಯೇ  ಶಿರಸಿ ಇತಿಹಾಸದ ಖಣಜ  ಅಥವಾ   ಶಿರಸಿಯ  ಬೆಂಜಮಿನ್  ರೈಸ್   ಶ್ರೀ ಲಕ್ಷ್ಮೀಶ್ ಹೆಗ್ಡೆ  ಯವರ  ಪರಿಚಯ , ಆತ್ಮೀಯತೆ  ಬೆಳೆದು  ಇತಿಹಾಸದ ಬಗ್ಗೆ  ಇಬ್ಬರಿಗೂ ಇರುವ  ಸೆಳೆತ  ಗೆಳೆತನ ಮತ್ತಷ್ಟು  ಬಲವಾಯ್ತು.  ಹೀಗಿರಲು  ಕೆಲವು ವಾರಗಳ ಹಿಂದೆ  ಮೊಬೈಲ್  ಕರೆ ಮಾಡಿ   "ಬಾಲಣ್ಣ  ನಿಮ್ಮನ್ನು  ಅಂದ್ರೆ ನಿಮ್ಮ ಹೆಸರನ್ನು  ಸೋಂದೆ  ಇತಿಹಾಸ ಸಮ್ಮೇಳನದಲ್ಲಿ  ಒಂದು ಗೋಷ್ಠಿಯಲ್ಲಿ  ಭಾಗವಹಿಸಲು  ಹಾಕುತ್ತೇನೆ" ಅಂತಾ  ಹೇಳಿ  ಆಹ್ವಾನ ಪತ್ರಿಕೆಯಲ್ಲಿ   ನನ್ನ ಹೆಸರು ಹಾಕೆ ಬಿಟ್ರು , ಜೊತೆಗೆ  ನನ್ನ ಹೆಸರಿನ  ಜೊತೆಗೆ  "ಇತಿಹಾಸ  ಚಿಂತಕ " ಅನ್ನೋ  ಬಿರುದನ್ನೂ ಸಹ  ದಯಪಾಲಿಸಿ ಬಿಟ್ರೂ , ....ಎಷ್ಟೇ ಆದರೂ  ನರಮನ್ಷಾ  ಆಲ್ವಾ  ಮನಸು  ಜಂಬದಿಂದ  ಉಬ್ಬಿತು,    ಹೆಂಡ್ತೀ  ಹತ್ರಾ   ಜಂಬಾ  ಕೊಚ್ಚಿ ಕೊಳ್ಳೋಕೆ  ತಯಾರಾಗುತ್ತಿದ್ದೆ ,    ಆದ್ರೆ ಮತ್ತೊಂದು  ಯೋಚನೆ  ಈ ಉಬ್ಬುವಿಕೆಯನ್ನು ಪಂಚರ್  ಮಾಡಿಬಿಡ್ತೂ .....!  "ಅಲ್ಲಾ ಕಣೋ     ಮೂರ್ಖಶಿಖಾಮಣಿ    ಇತಿಹಾಸ ಚಿಂತಕ  ಅನ್ನೋ ಬಿರುದು ಹೊತ್ತು ಮೆರೆಯಬೇಡ   ಅತಿಯಾದ   ಜಂಭ  ಒಳ್ಳೆಯದಲ್ಲಾ , ಮೊದ್ಲು  ಮಾತನಾಡ ಬೇಕಾದ ವಿಚಾರದ  ಬಗ್ಗೆ  ಸಿದ್ದತೆ ಮಾಡಿಕೊ"  ಅಂದಿತು, ಹ್ಯಾಪ ಮೊರೆ ಹಾಕಿಕೊಂಡು   ಇತಿಹಾಸ ಸಮ್ಮೇಳನದಲ್ಲಿ  ನನಗೆ ಮೊದಲೇ ನಿಗದಿಪಡಿಸಿದ್ದ   "ಐತಿಹಾಸಿಕ  ಪ್ರವಾಸದಲ್ಲಿ ಯೋಚನೆ ಹಾಗು ಯೋಜನೆ"  ವಿಚಾರದ ಬಗ್ಗೆ  ನನ್ನ ಪ್ರಬಂಧ  ತಯಾರಿಗೆ ಪ್ರಾರಂಭಿಸಿದೆ. ಸೋಮಾರೀತನ, ಅಸಡ್ಡೆ , ಎಲ್ಲದರಿಂದ  ದಿನಗಳು  ಕಳೆದದ್ದು ಗೊತ್ತಾಗಲಿಲ್ಲ,   ಅಂತೂ ಇಂತೂ ಕೊನೆಗೂ  ನನ್ನ ಪ್ರಬಂಧ  ಸಿದ್ದವಾಯ್ತು . ಹೊರಡೋ ದಿನ ಬಂದು ಬಿಡ್ತು.

ಪ್ರೀತಿಯ ಸಹೋದರಿ ರೇಖಾ ರಾಣಿ 


"ಅಣ್ಣಾ  ನನಗೂ ಸ್ವಲ್ಪ  ಬದಲಾವಣೆ ಬೇಕೂ.....  ಸರಿಯಾಗಿ ಎಷ್ಟು ದಿನಾ ಪ್ರವಾಸ   ಅಂತಾ ಹೇಳಿ...?  ನನ್ನ ಕೆಲಸಗಳನ್ನು  ಮುಂದೂಡಿ  ನಾನೂ ಬರ್ತೇನೆ ," ಅಂತಾ ಬೆಂಗಳೂರಿಂದ  ಸಹೋದರಿ  ರೇಖಾ ರಾಣಿ  ನನ್ನ ಪ್ರೀತಿಯ  ಆಹ್ವಾನಕ್ಕೆ  ಒಪ್ಪಿದರು. ನನಗೋ  ಒಮ್ಮೆಲೇ ಖುಷಿ  ಮತ್ತೊಂದು ಕಡೆ ಸ್ವಲ್ಪ  ಆತಂಕ. ಕಳೆದ ಕೆಲವು ವರ್ಷಗಳಿಂದ  ಪುಟ್ಟ  ಜಗಳದಿಂದ  ಫೇಸ್ಬುಕ್ ನಲ್ಲಿ  ಪರಿಚಯವಾದ  ಅದ್ಭತ ಸಹೋದರಿ  ಇವರು.   ನಂತರ  ಒಂದೆರಡು ಸಾರಿ ಅವರ  ಭೇಟಿಮಾಡಿದ್ದೆ ,    ಪತ್ರಿಕಾರಂಗ [ ಲಂಕೇಶ್  ಬದುಕಿದ್ದಾಗ  ಲಂಕೇಶ್ ಪತ್ರಿಯಲ್ಲಿ  ವರದಿ ಹಾಗು   ಅಂಕಣ ಬರೆಯುತ್ತಾ ಇದ್ದರು ], ಚಲನಚಿತ್ರ ರಂಗ, ಕಿರುತೆರೆ  ಎಲ್ಲಾಕಡೆ  ಅಪಾರ ಸಾಧನೆ ಮಾಡಿದ   ಇವರನ್ನು  ಹೇಗಪ್ಪಾ  ಈ ಪ್ರವಾಸಕ್ಕೆ  ಕರೆದುಕೊಂಡು ಹೋಗೋದು ಅನ್ನೋ  ಆತಂಕವನ್ನು  ಅವರೇ  ದೂರ ಮಾಡಿ  "ಅಣ್ಣಾ ನನ್ನ ಬಗ್ಗೆ  ಏನು ಯೋಚನೆ ಮಾಡಬೇಡಿ " , "ನನಗೆ ಎಲ್ಲಾ ತರಹದ  ಪ್ರವಾಸದ   ಅನುಭವ ಆಗಿದೆ  ಅದಕ್ಕೆ   ಹೊಂದಿಕೊಳ್ಳುತ್ತೇನೆ"  "ನಾನು  ಪ್ರವಾಸಕ್ಕೆ  ಬರುತ್ತೇನೆ "  ಅಂದ ತಕ್ಷಣ  ನೆಮ್ಮದಿಯ  ಉಸಿರು ಬಿಟ್ಟೆ .   ಹೊರಡುವ ಹಿಂದಿನ ದಿನ  ಅಣ್ಣಾ  ನಾನು ರೆಡಿ  ಅಂತಾ   ಸಿದ್ದವಾಗೆ ಬಿಟ್ರೂ ...!


ಬೆಂಗಳೂರಿನ  ಮಳೆ  [ ಸಾಂದರ್ಬಿಕ ಚಿತ್ರ  ಗೂಗಲ್ ಕೃಪೆಯಿಂದ ] 



ಮೈಸೂರಿನ ಪ್ರೀತಿಯ  ತಮ್ಮ  ನವೀನನ ಕಾರಿನಲ್ಲಿ   ಜೈ ಅಂತಾ ಬೆಂಗಳೂರಿನತ್ತಾ  ಹೊರಟೇಬಿಟ್ಟೆ,   ಮದ್ದೂರಿನ ಸಮೀಪ ಇದ್ದಾಗ  "ಅಣ್ಣಾ ಮಳೆಯಿದೆ   ಹೇಗೆ ಬರ್ತೀರಾ ....? " ಅಂತಾ ಅಕ್ಕನಿಂದ  ಕರೆ ,  ಅದಕ್ಕೆ  ಪರಿಹಾರವನ್ನೂ ಸಹ ಅವರೇ ಹೇಳಿ "ಅಣ್ಣಾ   ನೈಸ್  ರೋಡ್ನಲ್ಲಿ   ಬನ್ನಿ ಕನಕಪುರ  ಜಂಕ್ಷನ್  ನಲ್ಲಿ  ನಿಮಗೆ ಸಿಗ್ತೇನೆ"  ಅಂದರು .  ಸರಿಯೆಂದು  ಪಯಣ ಮುಂದು ವರೆಸಿದೆ,  ದಾರಿಯಲ್ಲಿ ಸಿಕ್ಕ  ಇಂದ್ರಪ್ರಸ್ಥ  ಹೋಟೆಲ್ ನಲ್ಲಿ    ಹೊಟ್ಟೆಗೆ ಉಪಹಾರ   ಸ್ವಾಹಾ  ಮಾಡಿಸಿ , ನೈಸ್  ರಸ್ತೆಯಲ್ಲಿ  ಹೇಳಿದ್ದ ಜಾಗದಲ್ಲಿ ನಿಂತೇ   ಸ್ವಲ್ಪ ಸಮಯದಲ್ಲೇ  ಸಹೋದರಿಯ  ಆಗಮನವಾಯ್ತು.  ಇತಿಹಾಸ  ದಿಬ್ಬಣದ  ಪಯಣ  ಆರಂಭವಾಯಿತು.    ಯಾವ ಮಾರ್ಗ   ಅನ್ನೋ ಚರ್ಚೆ ನಡೆದು ಅಂತಿಮವಾಗಿ  ಶಿವಮೊಗ್ಗ ಮೂಲಕ ಹೋಗುವ ತೀರ್ಮಾನವಾಯಿತು. ಈ ಹಂತದಲ್ಲೇ  ಪಯಣದಲ್ಲಿ ಒಮ್ಮತ ಮೂಡಿತು. ಬೆಂಗಳೂರಿನಿಂದ ನೆಲಮಂಗಲ, ತುಮಕೂರು ರಿಂಗ್ ರೋಡ್,  ಗುಬ್ಬಿ,  ತಿಪಟೂರು   ದಾಟಿ ಸ್ವಲ್ಪ ಮುಂದೆ  ಬಂದ್ವಿ ಅಷ್ಟೇ.......! 


ಕೈಬೀಸಿ ಕರೆದ ಕಾಫೀ ಡೇ{ ಸಾಂದರ್ಭಿಕ ಚಿತ್ರ  ಕೃಪೆ ಗೂಗಲ್ } 




 ಅರಸೀಕೆರೆ  ತಾಲೂಕಿನ  ಕಲ್ಲನಾಯಕನಹಳ್ಳಿಯಲ್ಲಿ   ಕೈ ಬೀಸಿ   ಕರೆಯಿತು   "ಕಾಫಿ  ಡೇ "  ಪ್ರೀತಿಯ ಅಕ್ಕ  ಮೊದಲ  ಟ್ರೀಟ್  ಕೊಡ್ಸೆ ಬಿಟ್ರೂ ಇಲ್ಲಿ , ಸ್ವಲ್ಪ ವಿಶ್ರಾಂತಿ ಪಡೆದು    ಅರಸೀಕೆರೆ  , ಕಡೂರು  ದಾಟಿ ಬೀರೂರು ಬಂದ ತಕ್ಷಣ  ಪ್ರೀತಿ ಟಿಫಾನಿಸ್  ನಲ್ಲಿ  ದೋಸೆ ತಿನ್ನೋ  ಆಸೆಯಾಗಿ  ಹೋಟೆಲ್ ಹತ್ತಿರ ಹೋದ್ರೆ   "ನೀವ್ ಬಂದ  ಹೊತ್ಗೆಲ್ಲಾ  ದೋಸೆ ಕೊಡೋಕೆ ಆಗಲ್ಲಾ  ಅಂತಾ   ಬೋರ್ಡು  ಸಮಯ ತೋರಿಸಿ  ಅಣಕಿಸಿ ನಕ್ಕಿತ್ತು ", ಪೆಚ್ಚು ಮೊರೆ ಹಾಕಿಕೊಂಡು    ಶಿವಮೊಗ್ಗದ   ಮೀನಾಕ್ಷಿ ಭವನ್  ನಲ್ಲಿ   ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದೆವು. ಪಯಣ ಸಾಗಿತು.ಜೊತೆಗೆ ಪ್ರೀತಿಯ ಸಹೋದರಿ  ರೇಖಾ ರಾಣಿ  ಪಯಣದ ಹಾದಿಯಲ್ಲಿ ಬೇಸರವಾಗದಂತೆ  ಹಲವು ವಿಚಾರಗಳನ್ನು  ಹೇಳುತ್ತಾ ಹೋದರು. ಆ ವಿಚಾರಗಳನ್ನು ವಿಶ್ಲೇಷಣೆ ಮಾಡುತ್ತಾ   ಇಡೀ ದಿನ ದಾರಿ ಸವೆದದ್ದು  ತಿಳಿಯಲಿಲ್ಲ,.




ಬೀರೂರು , ತರಿಕೆರೆ , ಭದ್ರಾವತಿ  ದಾಟಿ  ಶಿವಮೊಗ್ಗಕ್ಕೆ  ಬಂದಾಗ   ಮೀನಾಕ್ಷಿ  ಹೋಟೆಲ್   ಕೈ ಬೀಸಿ ಕರೆದಿತ್ತು. ಒಳಗಡೆ ಹೋಗಿ  ಕುಳಿತೊಡನೆ    ಅಲ್ಲಿದ್ದ    ಒಂದು ಫಲಕ  ಕಣ್ಸೆಳೆಯಿತು  "ನಾವು ಸೇವಿಸುವ ಆಹಾರ ಬೆಳೆವ ರೈತನಿಗೆ  ಧನ್ಯವಾದ  ಹೇಳೋಣ "  ಎಂಬ ಬರಹ   ನೋಡುತ್ತಾ   ಹಸಿವಿನಲ್ಲೂ   ರೈತನಿಗೆ  ಕೃತಜ್ಞತೆ  ಅರ್ಪಿಸಿದೆ. ಅಷ್ಟರಲ್ಲಿ  ಅಪವಾದವೆನ್ನುವಂತೆ   ಹೋಟೆಲ್  ಮಾಣಿ  ಮುಂದೆ ಬಂದು ನಿಂತರು  ಊಟಕ್ಕೆ  ಹೇಳಿ  ಕಾಯುತ್ತಾ ಕುಳಿತೆವು ಅಚ್ಚರಿ ಅಂದ್ರೆ  ಹೇಳಿದ ಕೆಲವೇ  ನಿಮಿಷಗಳಲ್ಲಿ  ಕಣ್ಣ ಮುಂದೆ ಊಟ  ಹಾಜರ್....!, ಬಹಳಷ್ಟು ಸಾರಿ ಈ  ಹಿಂದೆ   ಮೀನಾಕ್ಷಿ ಭವನ್  ಹೋಟೆಲ್ಗೆ  ಬಂದಾಗ  ಒಳಗೆ ಬಂದು ಕುಳಿತ  ಎಷ್ಟೋ ಹೊತ್ತಿಗೆ  ಮಾಣಿ ಬಂದು  ವಿಚಾರಿಸಿ, ನಮಗೆ ಕೊಡಬೇಕಾದ  ತಿಂಡಿ ಕೊಡಲು ಬಹಳ ತಡವಾಗುತ್ತಿತ್ತು, ಇದೆ ವಿಚಾರವನ್ನು  ನನ್ನ ಫೇಸ್ಬುಕ್ ನಲ್ಲಿಯೂ ಸಹ   ಹಿಂದೆ ಪ್ರಸ್ತಾಪ  ಮಾಡಿದ್ದೆ.  ಆದರೆ ಈ ಸಾರಿ   ಅದಕ್ಕೆ  ತದ್ವಿರುದ್ಧವಾಗಿ  ಬೇಗನೆ   ಆಹಾರ ನೀಡಿ  ಹಿಂದಿನ ನನ್ನ ಅನುಭವಗಳು ಸುಳ್ಳು ಅನ್ನೋಹಾಗೆ ಮಾಡಿಬಿಟ್ಟರು. ಊಟ ಮುಗಿಸಿ ಹೊರಗೆ ಬಂದು  ಸಾಗರದ ಕಡೆ ತೆರಳಲು ಸಿದ್ದವಾದೆವು,  ತಕ್ಷಣ  ನೆನಪಾದದ್ದು  ಪಪ್ಪಾಯಿ  ಖರೀದಿಸುವ  ವಿಚಾರ,  ಶಿರಸಿಯಲ್ಲಿರುವ  ನನ್ನ  ನೆಂಟಳಿಗೆ   ಪಪ್ಪಾಯಿ  ತಂದುಕೊಡುವುದಾಗಿ  ಮಾತುಕೊಟ್ಟು , ಕೆಲಸದ ಒತ್ತಡದಲ್ಲಿ  ಮರೆತಿದ್ದು  ಈಗ ಜ್ಞಾಪಕಕ್ಕೆ   ಬಂದಿತ್ತು,  ಸರಿ ಶಿವಮೊಗ್ಗ ಪಟ್ಟಣದ  ಕಾಲೇಜಿನ ಸಮೀಪ   ಒಂದು ಬದಿಯಲ್ಲಿ ಕಾರ್  ನಿಲ್ಲಿಸಿ ಮತ್ತೊಂದು ಬದಿಯಲ್ಲಿದ್ದ  ಪಪ್ಪಾಯಿ ಮಾರಾಟಗಾರನ  ಹತ್ತಿರ  ತೆರಳಿದೆ,  "ಆಹಾ ನಿಜಕ್ಕೂ ಶಿವಮೊಗ್ಗದ  ರಸ್ತೆಗಳನ್ನು  ದಾಟಲು ಭಾರೀ  ಧೈರ್ಯ  ಬೇಕೂ ಕಣ್ರೀ  ,"  ಡಬಲ್ ರಸ್ತೆ ಇದ್ದರೂ ಸಹ  ಹೆಚ್ಚಿನ  ದ್ವಿಚಕ್ರ ವಾಹನಗಳು  ಅಡ್ಡಾ ದಿಡ್ಡಿ ಯಾಗಿ   ಸಂಚಾರಿನಿಯಮಗಳನ್ನು ಅಪಹಾಸ್ಯ ಮಾಡುತ್ತಾ   ಬಿರುಸಿನಿಂದ ಓಡಾಡುತ್ತಿದ್ದವು, ಇದ್ದ ಒಂದಿಬ್ಬರು ಪೊಲೀಸರು  ಇವೆಲ್ಲವನ್ನೂ  ಅಸಹಾಯಕರಾಗಿ  ನೋಡುತ್ತಾ  ನಿಂತಿದ್ದರು. ರಸ್ತೆ ದಾಟುತ್ತಿದ್ದ ನನಗೆ   ಮತ್ತೊಮ್ಮೆ ಚನ್ನರಾಯಪಟ್ಟಣದಲ್ಲಿ ನನಗಾದ  ಅಪಘಾತದ  ನೆನಪು  ಮರುಕಳಿಸಿ  ಜೀವ ಕೈಯಲ್ಲಿ ಹಿಡಿದು  ರಸ್ತೆ ದಾಟಿದೆ, ಅಲ್ಲೇ ಇದ್ದ ಪಪ್ಪಾಯಿ ಮಾರಾಟಗಾರ   ಹೇಳಿದ ಬೆಲೆಗೆ  ಸ್ವಲ್ಪ  "ಬಹಳ ಖುಷಿಯಾಯ್ತು  ನಿಮ್ಮ  ವ್ಯಾಪಾರ  ಚೆನ್ನಾಗಿ ಆಗಲಿ ಅಂದೇ ಅಷ್ಟೇ ......!,  ಈ ಮಾತು ಕೇಳಿ ಅವನ ಮನಸಿನಲ್ಲಿ  ಏನನ್ನಿಸಿತೋ ಕಾಣೆ   " ಸಾರ್ ಬನ್ನಿ ಇಲ್ಲಿ ",  "ನಿಮ್ಮ ಪ್ರೀತಿ ನನಗೆ ಬಹಳ ಇಷ್ಟಾ ಆಯ್ತು,  ಸಾರ್"   ಅಂತಾ    ಹೇಳಿ   "ಸಾರ್  ಇನ್ನೊಂದು ತಗೋಳಿ"  ಅಂತಾ ಮೂರನೆಯ ಪಪ್ಪಾಯಿ ಹಣ್ಣು ಕೊಡಲು ಬಂದಾ ... "ಅಯ್ಯೋ ಬೇಡಪ್ಪಾ  ಜಾಗ ಇಲ್ಲಾ  ಇಷ್ಟೇ ಸಾಕು",  ಅಂದು  ಇನ್ನೇನು ಹೊರಡಲು ಅನುವಾದೆ, "ಸಾ ಈ ಸಾಬ್ರೂ  ಹಂಗೆಲ್ಲಾ  ನಿಮ್ಮನ್ನ     ಬಿಡೋದಿಲ್ಲಾ "  ಅಂತಾ ಹೇಳಿ  ಬೇಡಾ ಬೇಡಾ  ಅಂದ್ರೂ  ಹತ್ತು ರೂಪಾಯಿ ನೀಡಿ  "ನಿಮಗೂ ಒಳ್ಳೆದಾಗಲಿ"  ಅಂತಾ  ಹಾರಿಸಿದ  . ಮನಸು ತುಂಬಿ ಬಂತು.  ನಮ್ಮ ಪಯಣ ಸಾಗರದತ್ತ  ಸಾಗಿತು.


ತಾಳಗುಪ್ಪದ  ಶುಚಿಯಾದ ಒಂದು ಪುಟ್ಟ ಹೋಟೆಲ್ 


ಸಾಗರ ಬಂತಂದ್ರೆ  ನೆನಪಾಗೋದು ಜಿತೇಂದ್ರ ಹಿಂಡುಮನೆ ಸಾರ್, ಅವರನ್ನು  ಮಾತನಾಡಿಸಿ , ತಾಳಗುಪ್ಪ ಬರೋವಷ್ಟರಲ್ಲಿ  ಬಾಯಿ ಚಪಲ  ಏನಾದರೂ ಕುಡಿಯಬೇಕೂ  ಅನ್ನಿಸಿತು, ಅಲ್ಲೇ  ರಸ್ತೆಯಲ್ಲೇ  ವಾಹನ ನಿಲ್ಲಿಸಿ  ಹೋಟೆಲ್ ಶ್ರೀ ಗುರುಪ್ರಸಾದ್    ಗೆ ತೆರಳಿ   ಕಾಫಿ ಗೆ ಆರ್ಡರ್ ಮಾಡಿದ್ವಿ, ಸ್ವಲ್ಪ ಹೊತ್ತಿನಲ್ಲೇ  ಹೋಟೆಲ್  ಮಾಲೀಕರು ಕಾಫಿಯೊಂದಿಗೆ  ಪ್ರೀತಿಯನ್ನು ಬೆರೆಸಿ    ಬಿಸಿಯಾದ  ರುಚಿ ರುಚಿಯಾದ ಕಾಫಿ ನೀಡಿದರು, ಸ್ವಲ್ಪ ಹೊತ್ತು ಮಾತನಾಡಿ  ಜೊತೆಗೆ ಸ್ವಲ್ಪ ಕೀಟಲೆ ಮಾಡುತ್ತಾ  ಹೋಟೆಲ್  ಮಾಲಿಕರೊಂದಿಗೆ  ಹರಟೆ ಹೊಡೆದು  ಸಿದ್ದಾಪುರ  ದಾಟಿ   ದೇವಿಸರದತ್ತ   ಹೊರಟೆವು,  ಸಿದ್ದಾಪುರ ತಾಲೂಕಿನ  ದೇವಿಸರ   ಗ್ರಾಮ  ನನ್ನ ಪ್ರೀತಿಯ ಗೆಳೆಯರಾದ  ಪ್ರಕಾಶ್ ಹೆಗ್ಡೆ   ಹುಟ್ಟಿದ ಊರು,  ಅವರ ಅಣ್ಣ  ನಾಗೇಶ್ ಹೆಗ್ಡೆ  ನನಗೆ
ನಾಗೇಶಣ್ಣ , ನಮ್ಮಿಬ್ಬರಿಗೂ  ಪರಿಚಯವಾದ  ದಿನದಿಂದ  ಏನೂ ಒಂಥರಾ ಪರಸ್ಪರ  ತುಂಟಾಟ  ಮಾಡಿಕೊಳ್ಳುವುದು ವಾಡಿಕೆ , ಅಂತೆಯೇ   ಸಾಗುವ ಹಾದಿಯಲ್ಲಿನ  ಪರಿಸರ ನೋಡಿ ವಿಸ್ಮಯ ಗೊಂಡ ಸಹೋದರಿ ರೇಖಾ ರಾಣಿ   ಅಣ್ಣಾ   ಬಿಸಿಲು ಬಿದ್ದ  ಹಸಿರು ಗುಡ್ಡದ  ಫೋಟೋ ತೆಗೆಯಿರೀ  ಅಂತಾ  ಕೋರಿದರು, ಆದ್ರೆ ಕೈಯಲ್ಲಿ ಕ್ಯಾಮರ ಇಲ್ಲದೆ   ಪೆದ್ದುಪೆದ್ದಾಗಿ  ಅವರತ್ತಾ ನಗುತ್ತಾ  ಏನೂ  ವೇದಾಂತ ಹೇಳಿ ತಪ್ಪಿಸಿಕೊಂಡೆ.ಕೆಲವೊಮ್ಮೆ ಪೆದ್ದುತನವೂ ಅನುಕೂಲಕ್ಕೆ ಬರುತ್ತದೆ  ಅನ್ನೋ ಸತ್ಯದ ಅರಿವಾಯ್ತು.

ನಮ್ಮ ಪ್ರೀತಿಯ ನಾಗೆಶಣ್ಣನ  ತುಂಟಾಟ 



ಸಂಜೆಯ ಮಬ್ಬಿನಲ್ಲಿ    "ದೇವಿ ಸರ " ಗ್ರಾಮ ನಮ್ಮನ್ನು ಸ್ವಾಗತಿಸಿತು, ಊರಿಗೆ ಪ್ರವೇಶ ಮಾಡುತ್ತಿದ್ದಂತೆ   "ದೇವಿ ಸರದ  ವೇಣು ಗೋಪಾಲ"  ಮೂರ್ತಿಯನ್ನು ಕಾಣುವ ಬಯಕೆ ಆಗಿತ್ತು ಆದ್ರೆ  ಸಮಯದ ಅಭಾವ   ಅವಕಾಶ ಕೊಡಲಿಲ್ಲ,  ಪ್ರಕಾಶ್ ಹೆಗ್ಡೆ ಮನೆಗೆ ಅಧಿಕಾರಯುತವಾಗಿ  "ಯಾರಿದ್ದೀರ ....?  ಒಳಗೆ " ಅನ್ನುತ್ತಾ   ನುಗ್ಗಿದೆ,   "ಬಾಲಣ್ಣ.......  ಆರಾಮ"  ಅಂತಾ  ಹೊರಗೆ ಬಂದ್ರು  ಅನ್ನಪೂರ್ಣೆಶ್ವರಿ  ಅನಿತಾ ಅತ್ತಿಗೆ,  ಸ್ವಲ್ಪ ಹೊತ್ತಿಗೆ   ನಾಗೇಶಣ್ಣ  ಸಹ ಬಂದು ಜೊತೆಗೂಡಿದರು,  ಒಂದಷ್ಟು  ತಿಂಡಿಯ  ಸಮಾರಾಧನೆ  ಸಂಕೊಚ ಬಿಟ್ಟು ತಿಂದು  ನಾವೆಲ್ಲಾ  ಮನೆಯವರಂತೆ  ಆಗಿಬಿಟ್ಟೆವು, ನಾಗೇಶಣ್ಣ ತನ್ನ  ಅಪಘಾತದ ಕಥೆ, ಅವರು ಅನುಭವಿಸಿದ ನೋವು , ತೆಗೆದುಕೊಂಡ  ಔಷಧಿ , ಚಿಕಿತ್ಸೆ  , ಎಲ್ಲವನ್ನೂ   ಹಾಸ್ಯವಾಗಿ   ಹೇಳುತ್ತಿದ್ದರೂ ಸಹ ಮನದಲ್ಲಿ  ನೋವಾಗುತ್ತಿತ್ತು.  "ದೇವ್ರೇ  ಇವರಿಗೆ ಒಳ್ಳೆ ಆರೋಗ್ಯ  ಕೊಡಪ್ಪಾ  ಅಂತಾ  ಮನದಲ್ಲೇ ದೇವರನ್ನು ಬೇಡಿಕೊಂಡೆ." ಹೊಸದಾಗಿ  ಬಂದಿದ್ದ ಸಹೋದರಿ ರೇಖಾ ರಾಣಿಯವರಿಗೆ  ಇದೆಲ್ಲಾ  ಹೊಸ ಅನುಭವ , ಮನೆಯವರ  ಆತಿಥ್ಯ ಕಂಡು ಖುಷಿಯಲ್ಲಿ  ಮಿಂದೆದ್ದರು. ನಾಗೇಶಣ್ಣನಿಂದ  ರೇಗಿಸಿಕೊಂಡು  ತುಂಟಾಟ ಮಾಡುತ್ತಾ  ಎಲ್ಲರಿಗೂ ಶುಭ ಕೋರಿ , ಶಿರಸಿಯತ್ತ  ಪಯಣ  ಬೆಳೆಸಿದೆವು,  ನಮ್ಮ  ಪಯಣದಲ್ಲಿನ  ಹುಚ್ಚಾಟ ಕಂಡ  ಕಾರು  ಸ್ವಲ್ಪ  ಕೋಪ ಮಾಡಿಕೊಂಡಿತೂ ಅಂತಾ ಕಾಣುತ್ತೆ,   ಶಿರಸಿಯ  ಹತ್ತಿರ ಬರುತಿದ್ದಂತೆ    ದಾರಿಯ  ನಡುವೆ  ಮುಂದಿನ ಬಲ ಚಕ್ರ  ಪುಸ್ ಅಂತಾ  ಪಂಚರ್ ಆಯಿತು,  ತಮ್ಮ ನವೀನ  ಬೆಳಗ್ಗಿನಿಂದ  ಕಾರು ಚಲಾಯಿಸಿ  ಧಣಿವಾಗಿದ್ದರೂ   ತೋರಿಸಿಕೊಳ್ಳದೆ  ಸರ ಸರನೆ  ಬದಲಿ ಚಕ್ರ  ಹಾಕಿಕೊಂಡ.  ಅಲ್ಲಿಂದ ಮುಂದೆ ನೀಲಕೇಣಿಯಲ್ಲಿ ನ ಒಂದು ಅಂಗಡಿಯಲ್ಲಿ   ಪಂಚರ್ ಹಾಕಿಸಿಕೊಂಡ , ಅಷ್ಟರಲ್ಲಿ  ಶಿರಸಿಯ  ನನ್ನ ಪ್ರೀತಿಯ  ತಮ್ಮ  ಸಚಿನ್ ಗೆ  ಪೋನ್  ಮಾಡಿದ್ದ ಕಾರಣ  ಅವರೂ  ಸಹ ನಾವಿದ್ದಲ್ಲಿಗೆ ಬಂದರು,

ಶಿರಸಿಯ  ಒಂದು ಉತ್ತಮ    ವಸತಿ ಗೃಹ [ ಚಿತ್ರ ಕೃಪೆ ಗೂಗಲ್ } 



ಅವರ ಸಹಾಯದಿಂದ  ಯಲ್ಲಾಪುರ  ರಸ್ತೆಯಲ್ಲಿನ  ಮಧುವನ  ಹೋಟೆಲ್ ತಲುಪಿದೆವು,  ವಾರದ ಕೊನೆಯಾದ ಕಾರಣ ರೂಂ  ಸಿಗುವುದು ಕಷ್ಟವಿತ್ತು ಆದರೆ  ನಮ್ಮ ಪುಣ್ಯಕ್ಕೆ   ರೂಂ ಸಿಕ್ಕಿತು, ಬೆಳಗ್ಗಿನಿಂದ  ಬಿಡುವಿಲ್ಲದೆ ವಾಹನ  ಚಲಾಯಿಸಿದ್ದ  ನನ್ನ ತಮ್ಮ  ನವೀನನಿಗೆ  ವಿಶ್ರಾಂತಿ ನೀಡಿದ  ಸಮಾಧಾನ ಸಿಕ್ಕಿತು,  ಸ್ವಲ್ಪ ಹೊತ್ತು  ನಮ್ಮಗಳ ಜೊತೆ ಮಾತನಾಡಿದ ಸಚಿನ್ ನಾಳೆ ಸೊಂದೆಗೆ ಬಂದು ಸಿಗುವುದಾಗಿ ತಿಳಿಸಿ ಮನೆಗೆ ತೆರಳಿದರು,  ನಾವುಗಳು ಇತ್ತ  ನಿದ್ರಾ ದೇವಿಯ  ಮಡಿಲಲ್ಲಿ ಪವಡಿಸಿದೆವು, ....!  ಮುಂದೆ ....?

{ಸ್ವಲ್ಪ ವಿಶ್ರಾಂತಿ ಪಡೆಯಿರಿ  ಎರಡನೇ ಕಂತಿನಲ್ಲಿ ಮತ್ತೆ ಸಿಗೋಣ}








Sunday, July 23, 2017

ಅರಿಯದ ಇತಿಹಾಸ ಒಡಲಲ್ಲಿ ಬಚ್ಚಿಕೊಂಡ ಶಿರಸಿಯ ಬನವಾಸಿಪಕ್ಕದ ಗುಡ್ನಾಪುರ ....!

ಗುಡ್ನಾಪುರ ಬಂಗಾರೇಶ್ವರ ದೇಗುಲ





ನಮ್ಮ ಕನ್ನಡ ನಾಡಿನ  ಇತಿಹಾಸದ  ಸೆಳೆತವೆ ಹಾಗೆ ಒಮ್ಮೆ ಬಲೆಯಲ್ಲಿ ಬಿದ್ದರೆ  ನಿಮ್ಮನ್ನು ಸುಮ್ಮನೆ ಇರಲು ಬಿಡೋದಿಲ್ಲ , ನೀವು ಸುಮ್ಮನಿದ್ದರು  ಸಹ ನಮ್ಮ ನಾಡಿನ ಇತಿಹಾಸ  ನಿಮ್ಮನ್ನು  ಬಡಿದೆಬ್ಬಿಸಿ ತನ್ನ ಒಡಲೊಳಗೆ ಸೆಳೆದುಕೊಂಡು  ಅಪ್ಪಿಕೊಂಡು ಬಿಡುತ್ತದೆ.  ನಮ್ಮ ಹೆಮ್ಮೆಯ ಕನ್ನಡ ನಾಡಿನಲ್ಲಿ   ನಮ್ಮನ್ನು  ಕೆಣಕುವ  ಐತಿಹಾಸಿಕ ತಾಣಗಳು  ಬಹಳಷ್ಟಿವೆ , ನಮ್ಮ ಪ್ರೀತಿಯ ಮನಸನ್ನು ಅವುಗಳೆಡೆಗೆ ಸ್ವಲ್ಪ ತಿರುಗಿಸಿದರೆ ಸಾಕು  ನಮ್ಮ ಹೃದಯ ಸಿಂಹಾಸನದಲ್ಲಿ  ಶಾಶ್ವತವಾಗಿ ನೆಲೆಸಿಬಿಡುತ್ತವೆ  ಈ ಐತಿಹಾಸಿಕ  ತಾಣಗಳು. ನಿಜಾ  ನನ್ನನ್ನು  ಎಡಬಿಡದೆ  ಕಾಡುವ ಐತಿಹಾಸಿಕ  ತಾಣಗಳು   ಬಹಳಷ್ಟಿವೆ, ಅಂತಹ ತಾಣಗಳಲ್ಲಿ  ಇತ್ತೀಚಿನದು  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ  ಬನವಾಸಿ  ಸಮೀಪದ  "ಗುಡ್ನಾಪುರ ".



ಗುಡ್ನಾಪುರ ದ ಸುಂದರವಾದ ಕೆರೆ 




ಎರಡುವರ್ಷಗಳ ಹಿಂದೆ  ಶಿರಸಿಯ ಇತಿಹಾಸ  ಸಮ್ಮೇಳನಕ್ಕೆ  ಬಂದಿದ್ದಾಗ  ಕೆಲವು ಗೆಳೆಯರೊಡನೆ ಚರ್ಚಿಸುವಾಗ  ನಮ್ಮ  "ಶಿರಸಿ ಸಿರಿ"  ಪತ್ರಿಕೆಯ  "ಸಚಿನ್"      ಸಾರ್  ಹೇಗೂ ಬನವಾಸಿಗೆ ಹೋಗ್ತೀರಲ್ಲಾ  ಅಲ್ಲೇ ಹತ್ತಿರದಲ್ಲೇ ಗುಡ್ನಾಪುರ   ಅಂತಾ  ಒಂದು ತಾಣ ಇದೆ , ಬಹುಷಃ  ನಿಮಗೆ  ಇಷ್ಟಾ ಆಗುವ ತಾಣ ಅದು ಅಂತಾ   ಆಸೆ ಹುಟ್ಟಿಹಾಕಿದರು . ಇನ್ನೇನು  ಬನವಾಸಿಗೆ ಹೋಗ್ತೀವಲ್ಲಾ  ಗುಡ್ನಾಪುರಕ್ಕೂ  ಹೋಗೋಣಾ ಅಂದ್ರು ಜೊತೆಯಲ್ಲಿದ್ದವರು , ಹೊರಟಿತು ಸವಾರಿ   ಗುಡ್ನಾಪುರಕ್ಕೆ, ಶಿರಸಿಯಿಂದ  ಬನವಾಸಿ ರಸ್ತೆಯಲ್ಲಿ ಕ್ರಮಿಸಿದರೆ   ನಡುವೆ ಸುಮಾರು 18 ಕಿಲೋಮೀಟರು ದೂರದಲ್ಲಿ  ಎಡಕ್ಕೆ ತಿರುಗಿ  ಸ್ವಲ್ಪ ದೂರ ಮಣ್ಣಿನ  ಹಾದಿಯಲ್ಲಿ ಸಾಗಿದರೆ ನಿಮಗೆ ಗುಡ್ನಪುರದ  ಐತಿಹಾಸಿಕ  ತಾಣ ತಲುಪಬಹುದು . ತನ್ನ ಒಡಲಲ್ಲಿ  ಸುಂದರವಾದ ಹಾಗು ವಿಶಾಲವಾದ ಕೆರೆಯನ್ನು  ಅಡಗಿಸಿಕೊಂಡು , ಆ ಕೆರೆಯ ಸುತ್ತಾ  ರಚಿತವಾಗಿರುವ  ಒಂದು ಐತಿಹಾಸಿಕ  ಮಹತ್ವ ಪಡೆದಿರುವ  ಈ ಗುಡ್ನಾಪುರ. ಗುಡ್ನಾಪುರದ  ನಿಸರ್ಗದ  ವಿಶೇಷ ಅಂದ್ರೆ   ಒಂದು ಸುಂದರವಾದ  ವಿಶಾಲವಾದ  ಕೆರೆಯನ್ನು ಹೊಂದಿರುವುದು  , ಅದರ ಸುತ್ತ ಮುತ್ತ  ಹಸಿರಿನ ಗದ್ದೆಗಳು,   ಕೆರೆ ಮತ್ತು ಹಸಿರನ್ನು  ನಂಬಿ ಬದುಕುವ  ಹಲವು ಬಗೆಯ ಪಕ್ಷಿಗಳು . ಕೆರೆಯ ದಂಡೆಯ ಮೇಲೆ   ಆಧುನಿಕ ಶೈಲಿಯ    ಬಂಗಾರೇಶ್ವರ  ದೇವಾಲಯ ಕಂಡು ಬರುತ್ತದೆ.








ಬಂಗಾರೇಶ್ವರ ಸ್ವಾಮಿ ಮೂರ್ತಿ 



ಗುಡ್ನಾಪುರದ ಕೆರೆಯ ದಡದಲ್ಲಿ  ಬಂಗಾರೇಶ್ವರ, ಕರಿಯಮ್ಮ, ಮರಿಯಮ್ಮ  ಎಂಬ ಮೂರು   ದೇಗುಲಗಳು ಕಂಡುಬರುತ್ತವೆ ಸುತ್ತಮುತ್ತಲಿನ   ಗ್ರಾಮದ    ಗ್ರಾಮಸ್ಥರು / ಅದರಲ್ಲೂ  ಹೆಣ್ಣುಮಕ್ಕಳು  ತಮ್ಮ ಮನೆಯಲ್ಲಿ  ಸಂತಾನ ಪ್ರಾಪ್ತಿಯಾಗದಿದ್ದರೆ  ಈ ದೇಗುಲಗಳಿಗೆ  ತಮ್ಮ ಕುಟುಂಬದಲ್ಲಿ  ಸಂತಾನ ಪ್ರಾಪ್ತಿಯಾದರೆ   ತೊಟ್ಟಿಲನ್ನು ಅರ್ಪಿಸುವ  ಬಗ್ಗೆ  ಹರಕೆ  ಹೊತ್ತುಕೊಳ್ಳುತ್ತಾರೆ  ,    ಹಾಗು ಅದರಂತೆ ಭಕ್ತಿಯಿಂದ  ನಡೆದುಕೊಳ್ಳುವುದಾಗಿ ತಿಳಿದು ಬಂತು. ಈ ಮೂರೂ ದೇವಾಲಯಗಳು  ಗ್ರಾಮದ  ಜನಜೀವನದ ಅಂಗವಾಗಿವೆ. ಇಂತಹ  ಗ್ರಾಮಕ್ಕೆ ಬಂದ ನಮ್ಮನ್ನು  ಕೆಲವು ಗ್ರಾಮಸ್ಥರು  ಪ್ರೀತಿಯಿಂದ  ಬರಮಾಡಿಕೊಂಡರು . ಮೈಸೂರಿ ನವರು ಎಂಬುದನ್ನು ತಿಳಿದು  ಮತ್ತಷ್ಟು  ಆದರದಿಂದ  ನಮ್ಮನ್ನು  ಐತಿಹಾಸಿಕ ಜಾಗಕ್ಕೆ ಕರೆದುಕೊಂಡು ಹೋದರು.



ಗುಡ್ನಾಪುರದ  ಪರಿಸರ 


ಇವನ್ಯಾವ್ನ್ರೀ  ಅದ್ಯಾವ್ದೋ  ಇತಿಹಾಸ ಅಂತಾ  ಯಾವ್ದೋ "ಗುಡ್ನಾಪುರ"   ಅನ್ನೋ  ಹಳ್ಳಿಗೆ ಹೋಗಿ   ಬೊಗಳೆ ಹೊಡೀತಾನೆ  ಅನ್ನಬಹುದು ಕೆಲವರು,  ನಿಜಾ ಸಾರ್  ಮೊದಲು ನಾನೂ ಹಾಗೆ ಅನ್ಕೊಂಡಿದ್ದೆ , ಆದ್ರೆ ಈ ಊರಿನ ಬಗ್ಗೆ ಕೆದಕುತ್ತಾ  ಹೋದಾಗ  ಅಚ್ಚರಿ ಎಂಬ  ಇತಿಹಾಸ ಎದ್ದುಬಂತು.   ಬನ್ನಿ ಈ ಊರಿನ ಬಗ್ಗೆ ಸ್ವಲ್ಪ ತಿಳಿಯೋಣ

ಶಿರಸಿ ತಾಲೂಕಿನಲ್ಲಿ  ಇತಿಹಾಸ ಅಂದ್ರೆ  ಬನವಾಸಿ ಅನ್ನೋದು ವಾಡಿಕೆಯಾಗಿತ್ತು, ಸೋಂದಾ , ಶಿರಸಿ, ಸಹಸ್ರಲಿಂಗ , ಮುತ್ತಿನಕೆರೆ,   ಮಂಜುಗುಣಿ, ಯಾಣ, ಕೊಳಗಿ ಬೀಸ್  ಮುಂತಾದ    ತಾಣಗಳು ಐತಿಹಾಸಿಕ ಪುರಾವೆಯನ್ನು ಬಹುಬೇಗ ಪ್ರಕಟಮಾಡಿಕೊಂಡು ಜನರ ಗಮನ ಸೆಳೆದಿದ್ದವು, ಆದರೆ  ಬನವಾಸಿ ಯಿಂದ ಕೇವಲ ಮೂರು ನಾಲ್ಕು ಕಿಲೋಮೀಟರು  ದೂರವಿದ್ದ ಗುಡ್ನಾಪುರ   1988 ರವರೆಗೆ  ತನ್ನ ಇತಿಹಾಸದ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ.  ಬೆಳಗಾವಿ ಜಿಲ್ಲೆಯ  ಖಾನಾಪುರ  ತಾಲೂಕಿನ  ಹಲಸಿಯಲ್ಲಿ   ಗುಡ್ನಾಪುರದ  ಇತಿಹಾಸದ ಬಗ್ಗೆ ಸಿಕ್ಕ  ಕೆಲವು ಆಧಾರಗಳ ಮೇಲೆ  1988  ರಲ್ಲಿ   ಕೇಂದ್ರ ಪ್ರಾಚ್ಯ ವಸ್ತು ಸಂರಕ್ಷಣಾ  ಇಲಾಖೆಯವರು  ಹಾಗು ಕೆಲವು ವಿಧ್ವಾಂಸರು ಇತ್ತ ಗಮನಹರಿಸಿ  1988 ರಿಂದ 1992 ರ ವರೆಗೆ  ಉತ್ಕನನ  ನಡೆಸಿ ,  ಈ ಊರಿನ ಇತಿಹಾಸಕ್ಕೆ ಒಂದು ರೂಪ ಕೊಡುತ್ತಾರೆ,  ಸಂಶೋಧನೆ ಸಮಯದಲ್ಲಿ  ಕಂಡುಬಂದ  ಒಂದು ಶಾಸನ ಸ್ಥಂಬ ಹಾಗು  ಕೆಲವು  ಕಟ್ಟಡಗಳ ಅವಶೇಷಗಳು  ಬನವಾಸಿ ಕದಂಬರ  ಇತಿಹಾಸದ  ಬಗ್ಗೆ ಹೆಚ್ಚಿನ  ಬೆಳಕು ಚೆಲ್ಲಿವೆ.




ಗುಡ್ನಾಪುರ ಇತಿಹಾಸದ ಒಂದು ಅವಶೇಷ 


ನಮಗೆಲ್ಲಾ  ತಿಳಿದಂತೆ  ಮಯೂರ ಶರ್ಮ / ಮಯೂರ ವರ್ಮ  ನಿಂದ ಸ್ಥಾಪಿತವಾದ   ಬನವಾಸಿಯ  ಕದಂಬ  ರಾಜವಂಶ  ಕ್ರಿಸ್ತ  ಶಕ  345–565  ರವರೆಗೆ  ಮೆರೆದದ್ದು    ಇತಿಹಾಸ , ಇದೆ ಅವಧಿಯಲ್ಲಿ  ರಾಜಧಾನಿ  ಬನವಾಸಿಯಾಗಿದ್ದರೂ ಸಹ   ಹಲಸಿ, ಹಾಗು ಗುಡ್ನಾಪುರಗಳೂ ಸಹ   ಆಡಳಿತದಲ್ಲಿ  ಪ್ರಾಮುಖ್ಯತೆ ಪಡೆದ ತಾಣಗಳಾಗಿದ್ದವು, ಜೊತೆಗೆ  ಬನವಾಸಿ ಕದಂಬರ ಕಾಲದಲ್ಲಿ  ಸ್ಥಳೀಯವಾಗಿ  ಬಳಕೆಯಲ್ಲಿದ್ದ  ಕನ್ನಡವನ್ನು  ಆಡಳಿತ ಭಾಷೆ ಯನ್ನಾಗಿ  ಅಳವಡಿಸಿಕೊಳ್ಳಲಾಯಿತು,  ಹಾಗಾಗಿ  ಪ್ರಪ್ರಥಮವಾಗಿ  ಆಡಳಿತ ಭಾಷೆಯನ್ನಾಗಿ ಕನ್ನಡವನ್ನು  ಜಾರಿಗೆ ತಂದವರು ಬನವಾಸಿ ಕದಂಬರು  ಮಾತ್ರ. ಜೊತೆಗೆ ಸಂಸೃತ  ಇದ್ದಿತಾದರೂ  ಹೆಚ್ಚಾಗಿ ಬಳಕೆಯಲ್ಲಿದ್ದುದು  ಕನ್ನಡ ಭಾಷೆ.     ಕದಂಬರ ಕಾಲದಲ್ಲಿ ಅತೀ ಪ್ರಾಮುಖ್ಯತೆ  ಪಡೆದ ಎರಡು ಧರ್ಮಗಳು  ಹಿಂದೂ ಹಾಗು ಜೈನ  ಧರ್ಮಗಳು . ಹಾಗಾಗಿ ಕದಂಬರ ಕಾಲದಲ್ಲಿ ನಮಗೆ ಕಂಡು ಬರುವುದು ದೇವಾಲಯಗಳು ಹಾಗು ಜೈನ ದೇಗುಲಗಳು, ಬಸದಿಗಳು ಇತ್ಯಾದಿ. ಅಂತೆಯೇ ಗುಡ್ನಾಪುರದ ಇತಿಹಾಸ   ಬನವಾಸಿ ಕದಂಬರ  ಕಾಲಕ್ಕೆ  ಸರಿಯಾಗಿ  ಹೊಂದಾಣಿಕೆ ಆಗಿದೆ. ಕದಂಬರ ಇತಿಹಾಸ ತಿಳಿಯಲು ನಮಗೆ  ಶಿವಮೊಗ್ಗ ಜಿಲ್ಲೆಯ ತಾಳಗುಂಡ, ಗುಂಡನೂರು, ಚಿತ್ರದುರ್ಗ ಸಮೀಪದ  ಚಂದ್ರವಳ್ಳಿ,  ಬೆಳಗಾವಿ ಜಿಲ್ಲೆಯ  ಹಲಸಿ,  ಹಾಗು ಹಾಸನ ಜಿಲ್ಲೆಯ ಹಲ್ಮಿಡಿ  ಶಾಸನಗಳು  ಮಾತ್ರ ಸಹಾಯ ಮಾಡುತ್ತವೆ, ಈ ಸ್ಥಳಗಳು ಕದಂಬರ ಆಡಳಿತ ಕಾಲದಲ್ಲಿ  ಹೆಚ್ಚಿನ ಮಹತ್ವ ಪಡೆದ   ಆಡಳಿತಾತ್ಮಕ  ಸ್ಥಳಗಳೆಂದು  ತಿಳಿಯಬಹುದಾಗಿದೆ. 



ಗುಡ್ನಪುರ ಜೈನ ಮಂದಿರ ಹಾಗು ಅರಮನೆ  ಇದ್ದ ಪ್ರದೇಶಗಳ ಅವಶೇಷ 

  
ದೇಗುಲದ ಒಳಗೆ ಕಂಡುಬರುವ  ಜೈನ ಮೂರ್ತಿ 
ದೇಗುಲದ ಒಳಗೆ ನೆಲಕ್ಕೆ ಒರಗಿರುವ ಮೂರ್ತಿ 

ಶಿಥಿಲಗೊಂಡ   ರತಿ ಮನ್ಮಥ  ಮೂರ್ತಿ

.
ಶಿಥಿಲ ಗೊಂಡ ಗಣಪತಿ .





ದೇಗುಲದ ಒಳಗೆ ಕಲಾತ್ಮಕ  ಕಂಬ 





ಯಾವ  ಐತಿಹಾಸಿಕ ಘಟನೆಯ ಸಾಕ್ಷಿಯೋ   ಮೂಲೆ ಸೇರಿದೆ. 



ಕದಂಬ  ಅರಸರ  ಪೀಳಿಗೆಯ ಮೊದಲ ದೊರೆ ಮಯೂರ ಶರ್ಮ  ಹಾಗು ಕೊನೆಯ ದೊರೆ  ಕೃಷ್ಣ  ವರ್ಮ ಅಂದರೆ  ಕದಂಬರ ಆಳ್ವಿಕೆ ಕಾಲ ಕ್ರಿಸ್ತ  ಶಕ  345–565  ರವರೆಗೆ ನಡೆಯಿತು,  ಕ್ರಿಸ್ತ ಶಕ  345  ಕ್ರಮವಾಗಿ, ಮಯೂರಶರ್ಮ , ಬಗಿತರ್ಹ ,ರಘು, ಕಕುತ್ಸವರ್ಮ , ಶಾಂತಿವರ್ಮ , ಮ್ರಿಗೇಶವರ್ಮ , ಶಿವಮಂದತಿ ವರ್ಮ, ರವಿವರ್ಮ , ನಂತರ  ತ್ರಿಪರ್ವತ  ಶಾಖೆಯಿಂದ , ಕೃಷ್ಣ ವರ್ಮ 1, ವಿಷ್ಣುವರ್ಮ, ಸಿಂಹ ವರ್ಮ,  ನಂತರ   ಕದಂಬ ವಂಶದ ಕೊನೆಯ  ದೊರೆ ಕೃಷ್ಣ ವರ್ಮ2  ಮೊದಲು  ಹಿಂದೂ ಧರ್ಮ ಪಾಲಿಸಿದ ಕದಂಬರ ಅರಸರುಗಳು  ನಂತರ   ಜೈನ ಧರ್ಮಕ್ಕೆ ಕೂಡಾ ಪ್ರೋತ್ಸಾಹ ಕೊಟ್ಟಿರುವುದು  ಇತಿಹಾಸದ ದಾಖಲೆಗಳಿಂದ ತಿಳಿದು ಬರುತ್ತದೆ .     ಈ ನಡುವೆ  ಕ್ರಿಸ್ತ ಶಕ 485  ರಿಂದ 519 ರವರೆಗೆ  ಬನವಾಸಿಯಲ್ಲಿ ಆಡಳಿತ ನಡೆಸಿದ  ಕದಂಬ ರವಿವರ್ಮ  ಗುಡ್ನಾಪುರದಲ್ಲಿ  ಜೈನ  ಧರ್ಮಕ್ಕೆ ಸೇರಿದಂತೆ ಮನ್ಮಥ ದೇವಾಲಯವನ್ನು ಕಟ್ಟಿಸಿರುವುದಾಗಿ ತಿಳಿದು ಬರುತ್ತದೆ, ಜೊತೆಗೆ ಅದೇ ಕಾಲದಲ್ಲಿ  ದೇವಾಲಯದ ಜೊತೆಗೆ  ರಾಜರ  ಅರಮನೆ  ಸಹ ಇದ್ದಿತೆಂದು ತಿಳಿದು ಬರುತ್ತದೆ , ಇದನ್ನು  ಪುಷ್ಟೀಕರಿಸುವ  ಸಾಕ್ಷಿಗಳನ್ನು ಇಂದಿಗೂ ಸಹ ನಾವು ಕಾಣಬಹುದು, ಶಿವಮಂದತಿ ವರ್ಮ ಹಾಗು ಆನಂತರ   ರವಿವರ್ಮ   ಜೈನ ಧರ್ಮವನ್ನು ಪಾಲಿಸಿರುವುದು   ಕಂಡುಬರುತ್ತದೆ.  ಹಾಗಾಗಿ  ಗುಡ್ನಾಪುರದಲ್ಲಿ  ಜೈನ ಧರ್ಮಕ್ಕೆ   ಅನುಗುಣವಾಗಿ   ಬೆಳವಣಿಗೆಗಳು ಕಂಡುಬಂದಿವೆ.  ಈ ದೇಗುಲವನ್ನು   ಗುರುತಿಸುವ ಬಗ್ಗೆ   ಎರಡುಬಗೆಯ ದ್ವಂದ್ವ  ಕಂಡುಬರುತ್ತದೆ.  ಈ ದೇಗುಲವನ್ನು ರತಿ   ಮನ್ಮತ ದೇಗುಲವೆಂದು ಕರೆಯುತ್ತಿದ್ದರೆಂದೂ  ಹೇಳಲಾಗುತ್ತದೆ, ಅದಕ್ಕೆ ಪೂರಕವಾಗಿ ಇಲ್ಲಿ ವಸಂತೋತ್ಸವ  ಹಬ್ಬದ ಆಚರಣೆ ಇತ್ತೆಂದು  ಹೇಳುವ ಒಂದು ವಾದವಿದೆ, ಇನ್ನೊಂದು ವಾದ  ಮನ್ಮಥ ಅಂದರೆ ಜೈನ ಧರ್ಮದಲ್ಲಿ  ಬಾಹುಬಲಿ ಎಂಬ ಅರ್ಥ ವಿದೆ  ಹಾಗಾಗಿ ಇದು  ಮನ್ಮಥ  ಮಂದಿರ ಅಂದರೆ ಬಾಹುಬಲಿ ಗೆ ಅರ್ಪಿತವಾದ ಮಂದಿರ ಎನ್ನಲಾಗುತ್ತಿದೆ. ಇದರಲ್ಲಿ ಯಾವುದು ಸರಿ ಯಾವುದು ತಪ್ಪು  ಎಂಬ ಬಗ್ಗೆ ಸ್ಪಷ್ಟ  ಚಿತ್ರಣ ಸಿಗಬೇಕಿದೆ. ನಂತರ  ಇದೆ ಪ್ರದೇಶದಲ್ಲಿ  ರವಿವರ್ಮನ  ಕಾಲದ ಬ್ರಾಹ್ಮೀ ಲಿಪಿಯ ಐತಿಹಾಸಿಕ ಶಾಸನ ಕಂಡು ಬರುತ್ತದೆ. 





ರವಿವರ್ಮನ ಶಾಸನ ಸ್ಥಂಬ


  ಬ್ರಾಹ್ಮಿ  ಲಿಪಿಯ ಶಾಸನ 



ಗ್ರಾಮಸ್ಥರ  ನೆರವಿನೊಂದಿಗೆ ಗುಡ್ನಾಪುರದ ಐತಿಹಾಸಿಕ  ಸ್ಥಳಕ್ಕೆ ಬಂದ ನಮಗೆ  ಮೊದಲು ದರ್ಶನ ಕೊಟ್ಟಿದ್ದು  ಒಂದು ಶಾಸನ ಸ್ತಂಭ , ಶಿಥಿಲವಾಗಿದ್ದ ಅದಕ್ಕೆ  ರಕ್ಷಣೆಗಾಗಿ  ನಿಲ್ಲಿಸಿದ  ಕಬ್ಬಿಣದ  ಸರಳುಗಳು  ಹಾಗು ಸ್ಮಾರಕಕ್ಕೆ  ನೆರಳು ನೀಡಲು  ಒಂದು ಶೀಟಿನ  ಚಾವಣಿ .  ಹತ್ತಿರ  ನಡೆದು ನೋಡಿದಾಗ   ಗೋಚರಿಸಿದ್ದು ಸ್ಥಂಬದ  ನಾಲ್ಕೂ ಬದಿಯಲ್ಲಿ  ಚಪ್ಪಟೆ ಆಕಾರದ  ಜಾಗದಲ್ಲಿ  ಶಾಸನ ರಚನೆ , ಮತ್ತಷ್ಟು ಹತ್ತಿರ ಹೋಗಿ ನೋಡಿದಾಗ  ಆ ಶಾಸನದ ಕೆಲವು ಸಾಲುಗಳು, ಅಕ್ಷರಗಳು ವಿರೂಪವಾಗಿದ್ದವು.  ನಂತರ ನನ್ನ ಕ್ಯಾಮರದಲ್ಲಿ ಕೆಲವು ಚಿತ್ರಗಳನ್ನು ತೆಗೆದು  ಐತಿಹಾಸಿಕ  ದಾಖಲೆಗಳ  ಪರಿಶೀಲನೆ   ಮಾಡಿದಾಗ  ಕದಂಬ ದೊರೆ ರವಿವರ್ಮನು  ಚೈತ್ರಮಾಸದಲ್ಲಿ ಜರುಗಿದ   ಮನ್ಮತೋತ್ಸವದ  ಅಥವಾ ವಸಂತೋತ್ಸವದ  ಸಂದರ್ಭ ದಲ್ಲಿ  ಮನ್ಮತ ದೇಗುಲವನ್ನು ನಿರ್ಮಾಣ ಮಾಡಿದನೆಂದು ತಿಳಿಸಿ, ಹಲವು ಧಾರ್ಮಿಕ ಕಾರ್ಯಕ್ರಮಗಳಿಗಾಗಿ  ನೀಡಿದ ದತ್ತಿಯನ್ನು,  ಗುಡ್ನಾಪುರದ [ ಅಂದಿನ ಗುಡ್ಡ ತಟಾಕ ] ಕೆರೆಯನ್ನು ಕಟ್ಟಿಸಿದ ಬಗ್ಗೆ  ಹಾಗು  ಕದಂಬರ ವಶಾವಳಿಯ ಉಲ್ಲೇಖ ವಿರುವುದಾಗಿ ತಿಳಿದುಬರುತ್ತದೆ. ಈ ಶಾಸನದ ಅಚ್ಚರಿಯೆಂದರೆ  ಗುಡ್ನಾಪುರದ  ಕೆರೆಯನ್ನು   ಕದಂಬರ ಆಳ್ವಿಕೆಕಾಲದಲ್ಲಿ  ಗುಡ್ಡದ ತಟಾಕ  ಎನ್ನುತ್ತಿದ್ದುದು. ಜೊತೆಗೆ  ಆ ಕೆರೆ ಕದಂಬರ  ಬಳುವಳಿ ಎಂಬುದು  ಸಹ  ಹೆಮ್ಮೆಯ ವಿಚಾರ.   ಆದಿ ಕವಿ ಪಂಪನೂ  ಸಹ ತನ್ನ ಕಾವ್ಯಗಳಲ್ಲಿ   ವಸಂತೋತ್ಸವದ  ಬಗ್ಗೆ ಉಲ್ಲೇಖ ಮಾಡಿದ್ದು,   ಈ ತಾಣ  ಬನವಾಸಿಯ ಬಹಳ ಸಮೀಪವೇ ಇರುವ  ಕಾರಣ, ಗುಡ್ನಾಪುರಕ್ಕೂ  ಪಂಪನ   ಆಗಮನವಾಗಿತ್ತು ಎಂಬುದು ನಿರ್ವಿವಾದ.  







ಕದಂಬರ ಕೊಡುಗೆ ಈ ಸುಂದರವಾದ  ಗುಡ್ನಾಪುರದ ಕೆರೆ 


 ಶಾಸನ  ಸ್ತಂಭ ನೋಡಿಕೊಂಡು ಮುಂದೆ ಬಂದ ನಮಗೆ ಗೋಚರಿಸಿದ್ದು , ವಿಶಾಲವಾದ ಪ್ರದೇಶದಲ್ಲಿ  ಹರಡಿದ್ದ ಐತಿಹಾಸಿಕ  ಅರಮನೆ ಹಾಗು   ದೇಗುಲದ  ಅವಶೇಷಗಳು . ದಪ್ಪನಾದ  ಇಟ್ಟಿಗೆ , ಗಡುಸಾದ ಮಣ್ಣು,   ಅಂದಿನ ಕಾಲದಲ್ಲಿ  ತಯಾರಾಗುತ್ತಿದ್ದ  ಗಾರೆ ಗಚ್ಚು  ಗಳನ್ನೂ ಬಳಸಿ  ಕಟ್ಟಿದ್ದ  ಈ ಅರಮನೆ ಹಾಗು ದೇಗುಲ  ಗತಕಾಲದ  ತಾಂತ್ರಿಕತೆಯ  ಕೌಶಲದ  ಗುಟ್ಟನ್ನು ತನ್ನೊಳಗೆ  ಅಡಗಿಸಿಕೊಂಡಿವೆ. 





ದೇಗುಲದ ದರ್ಶನ 


ಅವಶೇಷಗಳನ್ನು ದಾಟಿಕೊಂಡು  ಒಂದು ಎತ್ತರದ  ಜಾಗದಲ್ಲಿದ್ದ  ದೇಗುಲವನ್ನು  ಪ್ರವೇಶ ಮಾಡಿದೆವು,  ದೇಗುಲದ ಒಳಗೆ ನಮಗೆ ಜೈನ ಧರ್ಮದ  ಹಾಗೂ  ಹಿಂದೂ ಧರ್ಮದ  ಶಿಥಿಲಗೊಂಡ   ಮೂರ್ತಿಗಳು ಕಂಡುಬರುತ್ತವೆ.  ಮೊದಲು ಈ ದೇಗುಲ ಜೈನ ದೇಗುಲವಾಗಿದ್ದು ಕಾಲಾನಂತರ ವೀರಭದ್ರ ದೇವಾಲಯವಾಗಿ  ಪರಿವರ್ತಿತಗೊಂಡಿರುವುದು  ಕಾಣಸಿಗುತ್ತದೆ. ಆ ದೇಗುಲದಲ್ಲಿ    ಗರ್ಭಗೃಹ, ಅರ್ಧಮಂಟಪ, ನವರಂಗ , ಕಾಣಸಿಕ್ಕರೂ  ಎಲ್ಲೆಡೆಯೂ  ಶಿಥಿಲವಾದ  ಮೂರ್ತಿಗಳಿಂದ   ತನ್ನ ಅಂದ ಕಳೆದುಕೊಂಡಿವೆ,  ದೇಗುಲದ ಒಳಗಡೆ ಸುಂದರ ಕಂಬಗಳೂ ಸಹ  ತಮ್ಮ ಅಂದ ಕಳೆದುಕೊಳ್ಳುತ್ತಾ ಇವೆ. ಎತ್ತರದ ತ್ರದೆಶದಲ್ಲಿರುವ ದೇವಾಲಯದಿಂದ  ಹೊರಬಂದರೆ ನಿಮಗೆ ದೇವಾಲಯದ ಸುತ್ತಾ  ಅರಮನೆ ಇದ್ದ ಬಗ್ಗೆ  ಅವಶೇಷಗಳು ಗೋಚರಿಸುತ್ತವೆ. ಅಂದಿನ ದಿನಗಳಲ್ಲಿ ಕದಂಬರ  ಆಡಳಿತದ  ಭಾಗವಾಗಿದ್ದ ಈ ಅರಮನೆ  ಎಷ್ಟು ಸುಸಜ್ಜಿತವಾಗಿತ್ತು ಎಂಬ ಬಗ್ಗೆ ಕಲ್ಪಿಸಿಕೊಂಡರೆ  ನಿಜಕ್ಕೂ ಅಚ್ಚರಿಯಾಗುತ್ತದೆ. 





ಅರಮನೆಯ ಅವಶೇಷ ..1



ಗುಡ್ನಾಪುರದ ಕೆರೆಯ ದಂಡೆಯ ಮೇಲಿತ್ತು ಅರಮನೆ 




ಹೌದು ಕದಂಬರ ಕಾಲದಲ್ಲಿ ಬನವಾಸಿಗೆ ಎಷ್ಟು ಪ್ರಾಮುಖ್ಯತೆ  ಇತ್ತೋ ಅಷ್ಟೇ ಪ್ರಾಮುಖ್ಯತೆ   ಗುಡ್ನಾಪುರಕ್ಕೂ ಇತ್ತೆಂದು ಕಾಣುತ್ತದೆ,  ಬನವಾಸಿಯಿಂದ  ಕೇವಲ ಮೂರು ಕಿಲೋಮೀಟರು  ಇರುವ ಈ ಪ್ರದೇಶ  ಕದಂಬರ  ಆಡಳಿತ ಕೇಂದ್ರ ಆಗಿರುವ ಎಲ್ಲ ಸಾಧ್ಯತೆಗಳನ್ನು  ಕಡೆಗಣಿಸುವಂತಿಲ್ಲ, ಹಾಗಾಗಿ ಇಲ್ಲಿ  ಗುಡ್ನಾಪುರ  ಕೆರೆಯ   ದಡದಲ್ಲಿ  ವಸಂತೋತ್ಸವ  ದ ಅಂಗವಾಗಿ  ರತಿ ಮನ್ಮಥ  ದೇವಾಲಯ ನಿರ್ಮಾಣ ಮಾಡಿದ್ದ ಕದಂಬರು  ಗುಡ್ನಾಪುರದಲ್ಲಿ   ಆಡಳಿತದ  ಅಂಗವಾಗಿ   ಅರಮನೆ ಕಟ್ಟಿದ್ದರೆಂಬುದು  ಇಲ್ಲಿನ ಅವಶೇಷಗಳ  ವಿವರಗಳನ್ನು  ಐತಿಹಾಸಿಕ ದಾಖಲೆಗಳೊಂದಿಗೆ  ತಾಳೆಮಾಡಿದಲ್ಲಿ  ಕಂಡುಬರುತ್ತದೆ.






 ಶತಮಾನಗಳ  ಇತಿಹಾಸದ  ಸಾಕ್ಷಿ ಈ ಹಳೆಯ ಮರ  ಹಾಗು ಅದರ ಪಕ್ಕದಲ್ಲಿ ಕಾಣುವ  ಕೆರೆ. 


ಆದರೆ ಕಾಲಾನಂತರ  "ಗುಡ್ನಾಪುರದ ಇತಿಹಾಸ"  ತನ್ನ ಗತ ವೈಭವಗಳನ್ನು ಕಳೆದುಕೊಂಡು , ಬನವಾಸಿಯ ಸನಿಹ ಇದ್ದರೂ  ಬನವಾಸಿಯಂತೆ  ಮೆರೆದಾಡದೆ  , ಸದ್ದಿಲ್ಲದೇ   ಮರೆಯಾಗಿಬಿಟ್ಟಿತು.  ಇಂದಿಗೂ   ತನ್ನ ಗತ ವೈಭವಕ್ಕೆ ಆದ ಗಾಯವನ್ನು  ವಾಸಿಮಾಡಿಕೊಳ್ಳಲು ಆಗದೆ  ನಿಟ್ಟುಸಿರು ಬಿಡುತ್ತಾ   ಮಲಗಿಬಿಟ್ಟಿದೆ.  ನಿಜಾ  ಈ ಎಲ್ಲಾ  ಇತಿಹಾಸದ ಸಾಕ್ಷಿಯಾಗಿ  ಗುಡ್ನಾಪುರದ ಕೆರೆ ,   ಇದನ್ನೆಲ್ಲಾ  ಕಾಣುತ್ತಾ  ಒಮ್ಮೆಲೇ ಯಾವುದೋ ನೋವಿನ  ಲೋಕದೊಳಗೆ   ಮುಳುಗಿ ಹೋಗಿದ್ದ    ನಾನು  ಎಚ್ಚರ ಗೊಂಡಿದ್ದು,  ಆ ಹಳ್ಳಿಗರ  ಮಾತಿಗೆ . 




ಬೇಲಿ ಹಾಕಿದ  ಇತಿಹಾಸಕ್ಕೆ  ಪ್ರೀತಿಯ ಕಾವಲು ನಿಂತ ಗ್ರಾಮಸ್ಥರು 


ಸಾರ್ ಬಹಳ  ದೂರದಿಂದ ಬಂದಿದ್ದೀರಿ ನಮಗೆ  ತುಂಬಾ  ಸಂತೋಷ ಆಯ್ತು , ಎನ್ನುತ್ತಾ  ನಮ್ಮ  ತಂಡವನ್ನು   ಐತಿಹಾಸಿಕ ಪ್ರದೇಶದ  ಪ್ರವೇಶ ದ್ವಾರದ ವರೆಗೂ ಬಂದು   ಪ್ರೀತಿಯಿಂದ  ಬೀಳ್ಕೊಟ್ಟರು.  ನನಗೋ  ಒಂದೆಡೆ  ಐತಿಹಾಸಿಕ   ಪ್ರದೇಶ ನೋಡಿದ  ಸಂತಸ ಮತ್ತೊಂದೆಡೆ ನರಳುತ್ತಿರುವ ಇತಿಹಾಸಕ್ಕೆ  ಸಾಂತ್ವನ ಹೇಳಲಾಗದ  ಸಂಕಟ.  ಭಾರವಾದ  ಹೃದಯದೊಡನೆ ನಿಟ್ಟುಸಿರು ಬಿಡುತ್ತಾ    ಅಲ್ಲಿಂದ ಹೊರಡಲು  ಸಿದ್ಧನಾದೆ , ದೂರದಲ್ಲಿ ಬೇಲಿ ಹಾಕಿದ  ಇತಿಹಾಸಕ್ಕೆ  ಪ್ರೀತಿಯ ಕಾವಲು ನಿಂತ ಗ್ರಾಮಸ್ಥರು  ಇತಿಹಾಸದ ಕಣ್ಣೀರು ಒರೆಸಲಾರದೆ    ನಿಟ್ಟುಸಿರು ಬಿಡುತ್ತಾ   ನಿಂತರು.  ನಿಜವಾಗಿಯೂ  ಇತಿಹಾಸವನ್ನು  ನಿರ್ಲಕ್ಷಿಸದೆ  ಉಳಿಸಿಕೊಂಡಲ್ಲಿ   ನಮ್ಮ ನಾಡಿನ ಸಂಸ್ಕೃತಿ  ಮತ್ತಷ್ಟು ಹೆಚ್ಚುತ್ತದೆ  , ಅದರ ಅರಿವು ಮೂಡಿಸುವ ಕಾರ್ಯ   ಹೆಮ್ಮೆಯ ಕನ್ನಡಿಗರಾದ  ಎಲ್ಲರಿಂದಲೂ ಆಗಲಿ ಎಂಬ  ಆಸೆಯೊಡನೆ,  ಅಲ್ಲಿಂದ ತೆರಳಿ ಬನವಾಸಿಯಲ್ಲಿ  ಸ್ವಲ್ಪ ಸಮಯ ಕಳೆದು   ತರಾತುರಿಯಿಂದ    ಶಿರಸಿಯತ್ತ  ಮುಖ ಮಾಡಿದೆ.  ಕಟ್  ಮಾಡಿದ್ರೆ  ಶಿರಸಿಯ  ಸತ್ಕಾರ್ ಹೋಟೆಲ್ನಲ್ಲಿ     ಮುಂದೆ ಕುಳಿತ ಮಸಾಲೆ ದೋಸೆ  ನನ್ನ ಇತಿಹಾಸ ಅಜ್ಞಾನವನ್ನು ಕಂಡು ಅಣಕಿಸಿ  ಕಿಸಿಕ್ ಅಂತೂ .........! 
   [ ಈ ಲೇಖನ ಬರೆಯುವಾಗ   ದಾಖಲೆ ಪರಿಶೀಲನೆ ವೇಳೆಯಲ್ಲಿ ಉಂಟಾದ ಹಲವಾರು  ಅನುಮಾನಗಳನ್ನು  ಶ್ರೀ ಲಕ್ಷ್ಮೀಶ್ ಹೆಗ್ಡೆ ಸೋಂದ  ಅವರ  ನೆರವಿನೊಂದಿಗೆ ಪರಿಹರಿಸಿಕೊಂಡಿದ್ದೇನೆ,  ಸಲಹೆ ಹಾಗು ಮಾರ್ಗ ದರ್ಶನ  ನೀಡಿದ ಲಕ್ಷ್ಮೀಶ್ ಹೆಗ್ಡೆ ಅವರನ್ನು ಕೃತಜ್ಞತೆಯಿಂದ   ಸ್ಮರಿಸಿಕೊಳ್ಳುತ್ತೇನೆ ] 





Sunday, January 8, 2017

ಶಿರಸಿಯಲ್ಲೊಬ್ಬ ಆಧುನಿಕ ಬಿ.ಎಲ್. ರೈಸ್..................! ಸದ್ದಿಲ್ಲದೇ ಇತಿಹಾಸದ ಬೆನ್ನು ಹತ್ತಿದ ಸಾಹಸಿ.



ಶ್ರೀ  ಲಕ್ಷ್ಮೀಶ್ ಹೆಗ್ಡೆ  ಶಿರಸಿಯಲ್ಲೊಬ್ಬ  ಆಧುನಿಕ  ಬಿ.ಎಲ್. ರೈಸ್   



ನನಗೆ   ಒಬ್ಬರನ್ನು ಅನವಶ್ಯಕವಾಗಿ  ಹೊಗಳೋದು  ಆಗಿಬರಲ್ಲಾ,  ಹಾಗಾಗಿ  ಆದಷ್ಟು  ವ್ಯಕ್ತಿಗಳ  ಬಗ್ಗೆ  ನನ್ನ ಬ್ಲಾಗ್ನಲ್ಲಿ  ಬರಹಗಳು ಕಡಿಮೆ ಇರುತ್ತದೆ. ಆದರೂ  ಕೆಲವೊಮ್ಮೆ  ಕೆಲವು ಮಹನೀಯರು  ತಮ್ಮ   ಸಾಧನೆಗಳಿಂದ  ನನ್ನ  ಮನಸಿನಲ್ಲಿ  ನಿಂತುಬಿಡುತ್ತಾರೆ. ಇನ್ನು ಅಂತಹವರ   ಜ್ಞಾನ  ಭಂಡಾರ  ಕಂಡು ನಾನು  ಮೂಕ ವಿಸ್ಮಿತನಾಗಿಬಿಡುತ್ತೇನೆ  . ಅಂತಹ ಒಬ್ಬ   ಅಪರೂಪದ   ವ್ಯಕ್ತಿಯನ್ನು  ನನ್ನ ಬ್ಲಾಗಿನ  ಆವರಣಕ್ಕೆ ಕರೆ   ತಂದು ಅವರ ಪರಿಚಯ   ಮಾಡಿಕೊಡಲು  ನಿಜಕ್ಕೂ   ಸಂತಸ ಪಡುತ್ತೇನೆ.



ಆಗಿನ್ನೂ ಶಿರಸಿಗೆ  ಬಹಳ ವರ್ಷಗಳ ನಂತರ  ಹೊರಟ ಸಮಯ ,  ಶಿರಸಿ ಸಮೀಪದ  ಕೊಳಗಿ ಬೀಸ್  ನಲ್ಲಿ   ಶ್ರೀ ಗುರುಮೂರ್ತಿ  ಹೆಗ್ಡೆ  ಅವರ ಸಹೋದರನ  ವಿವಾಹಕ್ಕೆ   ಆಮಂತ್ರಣವಿತ್ತು, ಹೊರಡುವ ಮುಂಚೆ ಆಪ್ತ  ಮಿತ್ರ  ಪ್ರಕಾಶ್   ಹೆಗ್ಡೆ ಯವರಿಗೆ  ಶಿರಸಿ ಇತಿಹಾಸ  ತಿಳಿದವರ   ಬಗ್ಗೆ  ಮಾಹಿತಿ ಕೊಡುವಂತೆ  ಪೀಡಿಸಿದೆ , ಪಾಪ  ಅವರೂ ಸಹ   ತಮಗೆ ತಿಳಿದ  ಹಲವಾರು   ವ್ಯಕ್ತಿಗಳ  ವಿವರ ಕೊಟ್ಟರು ಆದರೆ  ಆ ಸಮಯದಲ್ಲಿ  ಶಿರಸಿ  ಮಾರಿಕಾಂಬೆ ಜಾತ್ರೆ  ಇದ್ದ ಕಾರಣ,  ನನಗೂ ಸಮಯ ಕಡಿಮೆ  ಇದ್ದ  ಕಾರಣ, ಮತ್ತೊಬ್ಬ  ಪ್ರೀತಿಯ ತಮ್ಮ  ಹರ್ಷಹೆಗ್ಡೆ  ಜೊತೆ  ಅಲೆದಾಡಿ  ಶಿರಸಿ  ಸುತ್ತ  ಮುತ್ತ  ಅಲೆದಾಡಿ ಸಾಕಷ್ಟು ಛಾಯಾಚಿತ್ರಗಳು  ಹಾಗು  ಸಿಕ್ಕಷ್ಟು   ಮಾಹಿತಿ   ದೋಚಿಕೊಂಡು  ಬಂದಿದ್ದೆ, ಆಗಿನ್ನೂ  ಶಿರಸಿಯ ಬಗ್ಗೆ ಬ್ಲಾಗ್ ನಲ್ಲಿ ಬರೆಯುವ ಮನಸು ಮಾಡಿರಲಿಲ್ಲ. ಒಂದು ದಿನ ಬ್ಲಾಗ್  ಬರಹಕ್ಕೆ ಏನೂ ವಿಚಾರ ಸಿಗದಿದ್ದಾಗ  ಶಿರಸಿಯ ಛಾಯಾಚಿತ್ರಗಳನ್ನು ನೋಡುತ್ತಾ  ಕುಳಿತೆ. ಸಹಸ್ರಲಿಂಗದ ಛಾಯಾಚಿತ್ರ ನೋಡುತ್ತಾ  ಈ ಪ್ರಾಂತದಲ್ಲಿ  ಏನೋ ವಿಶೇಷ ಇದೆ ಅನ್ನಿಸಿತು. ಅದರಂತೆ ಹುಡುಕಾಟ ನಡೆಸಿ, ಹಳೆ  ಗೆಝೆಟಿಯರ್ ಗಳನ್ನೂ ತಿರುವು ಹಾಕತೊಡಗಿದೆ. ಆಹಾ ಇಷ್ಟೆಲ್ಲಾ ಮಾಹಿತಿ ಇದೆಯಾ ಅನ್ನಿಸಿತು.  ಆದರೂ  ಸ್ಥಳೀಯ ವ್ಯಕ್ತಿಗಳ ಮಾಹಿತಿ ಇದ್ದರೆ ಚೆನ್ನ  ಅನ್ನಿಸಿ  ಹುಡುಕಾಟ ನಡೆಸುತ್ತಿದ್ದಾಗ  ನನಗೆ ಬಹುಮಾನವಾಗಿ ಸಿಕ್ಕವರೇ   ಶ್ರೀ  ಲಕ್ಷ್ಮೀಶ್ ಹೆಗ್ಡೆ  ಅವರು,  ಹೇಗೋ ಸಿಕ್ಕ  ಅವರ  ಮೊಬೈಲ್  ನಂಬರ್ ಗೆ ಕರೆ ಮಾಡಿದಾಗ  ಆತ್ಮೀಯವಾಗಿ ಪರಿಚಯ ಮಾಡಿಕೊಂಡು  ಶಿರಸಿ ಇತಿಹಾಸದ  ಬಗ್ಗೆ ಮೈಸೂರಿನಿಂದ  ಕರೆ  ಮಾಡಿದ್ದಕ್ಕೆ ಹರುಷ  ವ್ಯಕ್ತ ಪಡಿಸಿ.  ಕೆಲವು ಮಾಹಿತಿ ನೀಡಿದರು.  ಅಲ್ಲಿಂದ  ನಮ್ಮಿಬ್ಬರ  ಪರಿಚಯ ಆರಂಭವಾಯಿತು. ಹಲವಾರು ಸಾರಿ  ಶಿರಸಿಗೆ ಬಂದ್ರೂ  ಅವರ ಭೇಟಿಮಾಡಲು ಆಗಿರಲಿಲ್ಲ. 



ಇತಿಹಾಸ   ಜಾತ್ರೆಯ  ಮೆರವಣಿಗೆಗೆ   ಶಿರಸಿ ಮಾರಿಕಾಂಬೆ ಆಶೀರ್ವಾದ 


ಶಿರಸಿಯ  ಹಲವಾರು ವಿಚಾರಗಳ ಬಗ್ಗೆ  ಮಾಹಿತಿ  ತಿಳಿಯಲು ಇವರನ್ನು ಬಹಳಷ್ಟು ಸಾರಿ ಫೋನ್ ಮೂಲಕ ನಾನು ಕಾಡಿಸಿದ್ದರೂ  ಬೇಸರ ಮಾಡಿಕೊಳ್ಳದೆ, ಇತಿಹಾಸದ  ಮಾಹಿತಿ ನೀಡುತ್ತಿದ್ದ ಇವರನ್ನು ಭೇಟಿಯಾಗುವ ಹಂಬಲ  ಶುರುವಾಯ್ತು. ಅದಕ್ಕೆ ಕಾಲ ಕೂಡಿಬಂದಿದ್ದೆ  ಶಿರಸಿಯಲ್ಲಿ  ಜರುಗಿದ  ರಾಜ್ಯಮಟ್ಟದ  ಇತಿಹಾಸ ಸಮ್ಮೇಳನದಲ್ಲಿ. ನಿಜಕ್ಕೂ ಶಿರಸಿಯಂತಹ  ಒಂದು ತಾಲೂಕು ಕೇಂದ್ರದಲ್ಲಿ  ಒಂದು  ರಾಜ್ಯಮಟ್ಟದಲ್ಲಿ   ಜರುಗುವ  ಕಾರ್ಯಕ್ರಮಕ್ಕಿಂತ  ಶಿಸ್ತು ಬದ್ದವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ  ಆಯೋಜಿಸಿ  ನಿರ್ವಹಣೆ ಮಾಡಿದ್ದು  ಲಕ್ಷ್ಮೀಶ್ ಹೆಗ್ಡೆಯವರ  ಸಾಹಸಕ್ಕೆ ಸಾಕ್ಷಿ,


ನನಗೂ ಇಷ್ಟಾ  ಶಿರಸಿಯ  ಇತಿಹಾಸ  ಅಂದ್ರೂ ಕಮಲಾ ಹಂ  ಪ. ನಾ . 


ಶಿರಸಿಯ ಸುತ್ತಮುತ್ತ  ಬಹಳಷ್ಟು ಐತಿಹಾಸಿಕ ತಾಣಗಳಿವೆ, ಪ್ರಕೃತಿಯ ಮಡಿಲಲ್ಲಿ   ಅನೇಕ  ಇತಿಹಾಸದ  ಕುರುಹುಗಳನ್ನು ಬಚ್ಚಿಟ್ಟುಕೊಂಡು  ಶಿರಸಿ  ಇತಿಹಾಸಕಾರರಿಗೆ  ಸವಾಲಾಗಿ ನಿಂತಿದೆ. ಇಂತಹ ಇತಿಹಾಸದ ಚಕ್ರವ್ಯೂಹ ಭೇದಿಸುತ್ತ , ರಾಜ್ಯಮಟ್ಟದ ಇತಿಹಾಸ  ಜಾತ್ರೆ  ಏರ್ಪಡಿಸುತ್ತ   ಹಲವಾರು  ದಿಗ್ಗಜರ  ಸಮಕ್ಷಮದಲ್ಲಿ   ನೋಡ್ರಪ್ಪ  ನಮ್ಮೂರ ಇತಿಹಾಸದ ತಾಕತ್ತು ಇದು ಅಂತಾ ತೋರಿಸುವ  ಶ್ರೀ ಲಕ್ಷ್ಮೀಶ್ ಹೆಗ್ಡೆ  ರ    ಛಲಕ್ಕೆ  ಯಾರಾದ್ರೂ ಸೈ  ಅನ್ನಲೇಬೇಕು.  ಶಿರಸಿಯ ಇತಿಹಾಸ  ಹೇಳುವ  ಇವರ ಇತಿಹಾಸ   ಏನೂ ಅಂತಾ  ಕೆದಕಿದಾಗ   ಸಿಕ್ಕಿದ್ದು  ಮತ್ತೊಂದು ಇತಿಹಾಸ .

ಇತಿಹಾಸಕಾರ  ಹಾಗು ಅವರ ಅಂತರಂಗ      {ಚಿತ್ರ ಕೃಪೆ ಲಕ್ಷ್ಮೀಶ್ ಹೆಗ್ಡೆ. }



 




ಹೌದ್ರೀ  ಇತಿಹಾಸಕಾರನಿಗೂ ಒಂದು ಇತಿಹಾಸ  ಇರುತ್ತೆ,   ಬನ್ನಿ ಬನ್ನಿ ಹೀಗೆ ...! ಅದೊಂದು ದಿನ   ದಿನಾಂಖ  18 ಫೆಬ್ರವರಿ  1984  ರಂದು ಶಿರಸಿಯ  ಸೋಂದೆ ಸಮೀಪದ  ಬಾಡ್ಲಾ ಕೊಪ್ಪದ    ಶ್ರೀ ರಾಮಚಂದ್ರ ಹೆಗ್ಡೆ  ಹಾಗು ಮಮತಾ ಹೆಗ್ಡೆ ಯವರ ಮನೆಯಲ್ಲಿ  ಸಂಭ್ರಮವೋ ಸಂಭ್ರಮ.  ಅಂದು  ಒಂದು ಗಂಡು ಮಗು  ಅಳುತ್ತಾ  ಅಳುತ್ತಾ  ಐತಿಹಾಸಿಕ  ಸೋಂದಾ  ಪ್ರದೇಶದಲ್ಲಿ  ತನ್ನ ಜನ್ಮ ಪಡೆದಿತ್ತು. ಮನೆಯಲ್ಲಿನ ಹಿರಿಯರ ಪ್ರಭಾವವೋ ಅಥವಾ ಆ ಮಗು ಜನಿಸಿದ  ಮಣ್ಣಿನ  ಗುಣವೋ ಕಾಣೆ  ಆ ಮಗು ಬೆಳೆಯುತ್ತಾ  ಬೆಳೆಯುತ್ತಾ   ಇತಿಹಾಸದ ಕಡೆ  ಆಕರ್ಷಿತನಾಗಿ  ಶಿರಸಿ ಸುತ್ತ ಮುತ್ತಲಿನ    ದೇವಾಲಯ, ವೀರಗಲ್ಲು, ಮಾಸ್ತಿ ಕಲ್ಲು,  ಶಾಸನಗಳು,  ಸ್ಮಾರಕಗಳನ್ನು  ಪ್ರೀತಿಸತೊಡಗಿತು.ಆ ಮಗುವೇ  ಇಂದಿನ ಶ್ರೀಯುತರಾದ  ಲಕ್ಷ್ಮೀಶ್ ಹೆಗ್ಡೆಯವರು.      ಬಿ. ಎ . ಮುಗಿಸಿದ  ನಂತರ ಪುರಾತತ್ವ ಶಾಸ್ತ್ರ , ಇತಿಹಾಸದಲ್ಲಿ ಎಂ. ಎ . ಮಾಡಿ ನಂತರ ಎಂ. ಫಿಲ್.  ಮಾಡಿದರು, ನಂತರ ಇತಿಹಾಸಕ್ಕೆ ಶಾಸನಗಳೇ ಭದ್ರ ಬುನಾದಿ ಎಂದು ತಿಳಿದು  ಶಾಸನ ಶಾಸ್ತ್ರದಲ್ಲಿ ಡಿಪ್ಲಮೋ[ Diplama in  epigraphy] ಮಾಡಿ ಹೆಚ್ಚಿನ ಜ್ಞಾನ ಸಂಪಾದಿಸುತ್ತಾರೆ. ಇನ್ನೇನು ಇಷ್ಟೆಲ್ಲಾ ಮಾಡಿದ ಮೇಲೆ ಕೆಲ್ಸಾ ಸಿಗೋಲ್ವೆ  ಅನ್ನೋಹಾಗೆ   ಸೋಂದೆ  ಸ್ವರ್ಣವಲ್ಲಿ  ಸಂಸ್ಥಾನ ಮಠ ಕ್ಕೆ ಸೇರಿದ  ಶ್ರೀನಿಕೇತನ  ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆ  ಜೊತೆಗೆ   ಆಡಳಿತಾಧಿಕಾರಿ  ಹುದ್ದೆ  ಲಭಿಸುತ್ತದೆ. ವೃತ್ತಿ ಯಾವುದಾದ್ರೇನು ಪ್ರವೃತ್ತಿ ಗೆ ನ್ಯಾಯ ದೊರಕಬೇಕಲ್ಲ.  ಶಿರಸಿ  ಸುತ್ತಮುತ್ತಲಿನ  ಇತಿಹಾಸದ   ಸೆಳೆತ  ಇವರನ್ನು ಆವರಿಸಿದ ಕಾರಣ,  ಪ್ರವೃತ್ತಿಯನ್ನೇ  ವೃತ್ತಿ ಮಾಡಿಕೊಳ್ಳುತ್ತಾರೆ  ಶಿರಸಿಯ  ಇತಿಹಾಸಕ್ಕೆ ಏನಾದರೂ ಕೊಡುಗೆ ನೀಡುವ  ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೆ..



ಸೋಂದಾ ಅರಸರ ಕಾಲ್ಪನಿಕ  ಚಿತ್ರ. 


  2007 ರಲ್ಲಿ ಉತ್ತರ ಕನ್ನಡ  ಜಿಲ್ಲೆ ಅದರಲ್ಲೂ ವಿಶೇಷವಾಗಿ  ಶಿರಸಿಯ ಸುತ್ತ ಮುತ್ತ ಐತಿಹಾಸಿಕ  ಬನವಾಸಿ, ಸುಧಾಪುರ ಅಥವಾ ಸೋಂದೆಯ  ಅರಸು ಮನೆತನ , ಒಂದೇ ಎರಡೇ  ಬಗೆದಷ್ಟು  ಇತಿಹಾಸದ  ಅಚ್ಚರಿಗಳು, ಮಾಹಿತಿ ಸಿಗುತ್ತವೆ, ಲಕ್ಷ್ಮೀಶ್ ಹೆಗ್ಡೆ  ಅವರು ಶಿರಸಿ ಸುತ್ತ ಮುತ್ತ ಶಾಸನ, ವೀರಗಲ್ಲುಗಳ   ಅಧ್ಯಯನ,       ಐತಿಹಾಸಿಕ   ಸೋಂದೆ ಅರಸರುಗಳ  ಬಗ್ಗೆ ಅವರ  ಕೋಟೆಗಳ , ಬಗ್ಗೆ ಸಂಶೋಧನೆ , ಬನವಾಸಿಯ  ಚಾಲುಕ್ಯರ  ಬಗ್ಗೆ  ಸಂಶೋಧನೆ  ಮಾಡುತ್ತಾ ಮಾಡುತ್ತಾ   ಹಳೆ ಮೈಸೂರು ಸಂಸ್ಥಾನದಲ್ಲಿ   ಬೆಂಜಮಿನ್  ಲೆವಿಸ್  ರೈಸ್  ಅವರು ಮಾಡಿದ  ಐತಿಹಾಸಿಕ  ಸಂಶೋಧನೆಗಳಿಗೆ ಸರಿ ಸಮಾನವಾಗಿ  ಇತಿಹಾಸದ ವಿಚಾರಗಳನ್ನು ಹೆಕ್ಕಿ ತೆಗೆದು  ಜನರ ಮುಂದಿಡುತ್ತಾರೆ.  ನಂತರ ಅಮೇರಿಕಾದ ಮಿಚಿಗನ್  ವಿಶ್ವವಿದ್ಯಾಲಯದ   ಸಂಶೋಧಕರಾದ "ಎಲಿಜಬತ್ ಬ್ರಡ್ಜಸ್ "  ರವರ  ಜೊತೆಯಲ್ಲಿ  ಇಕ್ಕೇರಿ ಹಾಗು ಕೆಳದಿ   ಸಂಶೋಧನೆಯಲ್ಲಿ  ಕಾರ್ಯನಿರ್ವಹಿಸಿ, ವಿದೇಶಿಯರು  ಹೇಗೆ  ಐತಿಹಾಸಿಕ  ವಿಚಾರಗಳನ್ನು ಸಂಶೋಧನೆ ಮಾಡುತ್ತಾರೆ ಎಂಬುದನ್ನು  ತಿಳಿದುಕೊಳ್ಳುತ್ತಾರೆ. ಅನುಭವ  ಮಾಗಿದಂತೆ  ಬರೆಯುವ ಕೈಗಳು  ಬರೆಯುತೊಡಗುತ್ತವೆ.  ಈ ಬರವಣಿಗೆಯಿಂದ  ಒಂಬತ್ತು  ಐತಿಹಾಸಿಕ ಕೃತಿಗಳು, ಹತ್ತು  ಐತಿಹಾಸಿಕ  ನಾಟಕಗಳು  ಉದಯವಾಗುತ್ತವೆ. ಐತಿಹಾಸಿಕ ನಾಟಕಗಳ  ಪಾತ್ರಗಳಿಗೆ  ಜೀವಕೊಡಲು  "ರಂಗ ಚರಿತ " ಎಂಬ  ರಂಗ ಸಂಘಟನೆಯನ್ನು  ಹುಟ್ಟುಹಾಕುತ್ತಾರೆ. ಈ ಮೂಲಕ  ಸಮಾಜಕ್ಕೆ ಇತಿಹಾಸದ  ಬಗ್ಗೆ ತಿಳುವಳಿಕೆ  ನೀಡಲು  ಹಾದಿ ಕಂಡುಕೊಳ್ಳುತ್ತಾರೆ.

ಬನ್ನಿ ಇತಿಹಾಸ  ತಿಳಿಯೋಣ

ಇತಿಹಾಸದೆಡೆಗೆ  ತುಡಿಯುತ್ತಿದ್ದ  ಶ್ರೀ ಲಕ್ಷ್ಮೀಶ್ ಹೆಗ್ಡೆ  ಸುಮ್ಮನೆ ಕೂರುವ  ವ್ಯಕ್ತಿಯಲ್ಲ  ಜನರಲ್ಲಿ ಇತಿಹಾಸ ಪ್ರೀತಿ  ಬೆಳಸಲು, ರಾಜ್ಯ ಮಟ್ಟದ ಇತಿಹಾಸದ   ಜಾತ್ರೆಯನ್ನು  ಕಳೆದ ಎರಡು ವರ್ಷಗಳಿಂದ  "ಉತ್ತರ ಕನ್ನಡ  ಜಿಲ್ಲಾ ಚರಿತ್ರಾ  ಅಭಿಯಾನ" ಎಂಬ   ಹೆಸರಿನಲ್ಲಿ  ಕಾರ್ಯಕ್ರಮ  ಮಾಡುತ್ತಿದ್ದಾರೆ  , ಸುಮಾರು ಒಂದೂವರೆ ತಾಸು  ಇತಿಹಾಸದ ಹಲವು ವಿಚಾರಗಳ ಬಗ್ಗೆ  ವಿದ್ವಾಂಸರಿಂದ   ವಿಚಾರ ಮಂಡನೆ  , ಉಪನ್ಯಾಸ, ನಂತರ  ದೃಶ್ಯ ಮಾಧ್ಯಮದ ಮೂಲಕ,  ಪ್ರಹಸನಗಳ ಮೂಲಕ  , ಉತ್ತರ ಕನ್ನಡ ಜಿಲ್ಲೆಯ,   ಇತಿಹಾಸದ ವಿಚಾರಗಳನ್ನು    ಜನರಿಗೆ  ಮನಮುಟ್ಟುವಂತೆ   ತಿಳಿಸಿಕೊಡುತ್ತಿದ್ದಾರೆ.  

 
ಇತಿಹಾಸ ತಿಳಿಯಲು ಬಂದ  ಮನಸುಗಳು 


ಹರಿಯುವ ನದಿಯನ್ನು ನಿಲ್ಲಿಸಲು ಸಾಧ್ಯವೇ,   ಹರಿಯುತ್ತಲೇ ಇರುತ್ತದೆ  ಹಾಗೆಯೇ  ಇವರ ಇತಿಹಾಸದ ಅಭಿಯಾನ  ಮುಂದುವರೆದು ಕಳೆದ ನಾಲ್ಕು  ವರ್ಷಗಳಿಂದ   " ನಮ್ಮ ನೆಲದ ಕಥೆ " ಎನ್ನುವ ಅಂಕಣದ ಮೂಲಕ  ಜನರಿಗೆ ಇತಿಹಾಸದ ಕೌತುಕಮಯ ವಿಚಾರಗಳನ್ನು  ತಿಳಿಸಿಕೊಡುತ್ತಿದ್ದಾರೆ.   ಇದನ್ನು ಓದಿದ ಯಾರಾದ್ರೂ   ಅಚ್ಚರಿಯಿಂದ   "ಆಹಾ  ನಮ್ಮೂರಿನಲ್ಲಿ ಹೀಗೂ ಉಂಟಾ.....?  "   ಅನ್ನಲೇಬೇಕು ಹಾಗಿರುತ್ತವೆ    ಮಾಹಿತಿ.  ಯಾರಿಗೆ ತಾನೇ  ತಮ್ಮ ಊರಿನ ಇತಿಹಾಸದ ಬಗ್ಗೆ ಹೆಮ್ಮೆ ಇರೋಲ್ಲಾ   ಹೇಳಿ,  ಹಾಗಾಗೇ   ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರು  ತಮ್ಮ ಸುತ್ತಮುತ್ತಲಿನ ಸ್ಥಳೀಯ ಇತಿಹಾಸ   ಕುರಿತು ಗಂಭೀರ  ಚಿಂತನೆ ನಡೆಯುವಂತಾಗಲು    ರಾಜ್ಯ ಮಟ್ಟದ  ಇತಿಹಾಸ ಸಮ್ಮೇಳನ   ಆಯೋಜನೆಗೆ ಮುಂದಾಗುತ್ತಾರೆ.  ಜೊತೆಗೆ   ಇತಿಹಾಸದ  ಪಯಣದಲ್ಲಿ ಕಾಣಸಿಗುವ ಸಾಧಕರನ್ನು ಗೌರವಿಸಲು ಸೋದೆ ಸದಾಶಿವರಾಯ  ಪ್ರಶಸ್ತಿಯನ್ನು   ಪ್ರತಿಷ್ಠಾಪಿಸುತ್ತಾರೆ  . ಕಳೆದ ಎರಡು ವರ್ಷಗಳಿಂದ   ಅದ್ಭುತವಾದ  ಯಶಸ್ಸನ್ನು   ಈ  ಇತಿಹಾಸ ಸಮ್ಮೇಳನ  ಗಳಿಸಿ ಶಿರಸಿ  ಊರಿನ   ಗೌರವಕ್ಕೆ  ಇತಿಹಾಸದ  ಹೆಮ್ಮೆಯ ಕಿರೀಟ  ತೊಡಿಸಿದೆ.  ನಾಡಿನ ಹಲವಾರು  ಪ್ರಖ್ಯಾತ  ಇತಿಹಾಸಕಾರರು   ಇದರಲ್ಲಿ ಭಾಗವಹಿಸಿ   ಶಿರಸಿಯ  ಇತಿಹಾಸದ  ಗೌರವವನ್ನು ಹೆಚ್ಚಿಸಿದ್ದಾರೆ.
ಅರೆ ಇತಿಹಾಸದ  ಸಮ್ಮೇಳನಕ್ಕೆ  ಇಷ್ಟು ಜನ ಬರ್ತಾರಾ...?


ಇತಿಹಾಸದ ಹುಚ್ಚನ್ನು ಹತ್ತಿಸಿಕೊಂಡವರು ಸುಮ್ಮನಿರಲು ಸಾಧ್ಯವೇ ...? ಮುಂದಿನ ಪೀಳಿಗೆಯವರು  ಇತಿಹಾಸದ ತೇರನ್ನು ಎಳೆಯ ಬೇಕಲ್ಲವೇ ...? ಅದಕ್ಕಾಗಿ  ತಮ್ಮ ಸಂಸ್ಥೆ   ಶ್ರೀ ನಿಕೇತನದ   ಮಕ್ಕಳಿಗೆ   ಇತಿಹಾಸದ ರುಚಿ ಹತ್ತಿಸಲು  ಶ್ರಮಿಸುತ್ತಿದ್ದಾರೆ, ಹಾಗಾಗಿ ಮಕ್ಕಳಿಂದಲೇ  ಇತಿಹಾಸದ ವಿಚಾರಗಳನ್ನು  ಅಧ್ಯಯನ  ಹಾಗು ಸಂಶೋಧನೆ ಮಾಡಿಸಿ  ನಾಡಿನ  ಐತಿಹಾಸಿಕ  ಸ್ಥಳ ಬನವಾಸಿಯ ಬಗ್ಗೆ  ಮಕ್ಕಳಿಂದಲೇ ಗ್ರಂಥ ರಚನೆ  ಮಾಡಿಸಿದ್ದು   ನಿಜಕ್ಕೂ ಹೆಮ್ಮೆ ಪಡುವ   ವಿಚಾರ.  ೨೦೧೩ ರಲ್ಲಿ  ಆ ಇತಿಹಾಸ ಕಾರರ  ಬಗ್ಗೆ ವಿಚಾರ ತಿಳಿದು ಇವರ ಸಂಶೋಧನಾ ಸಾಹಿತ್ಯಕ್ಕಾಗಿ   ಡಾಕ್ಟರ್ ಎಂ.ಎಂ. ಕಲಬುರ್ಗಿಯವರಿಂದ  " ಬಸವರಾಜ ಕಟ್ಟೇಮನಿ  ರಾಜ್ಯ ಪ್ರಶಸ್ತಿ"  ನೀಡಿ  ಗೌರವಿಸಲಾಗಿದೆ.


ಬನವಾಸಿಯ ಮೂಲ ಮಧುಕೇಶ್ವರ ದೇವಾಲಯ. 


ಇತಿಹಾಸವನ್ನೇ  ಉಸಿರಾಡುತ್ತಿರುವ  ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರ ಸಾಧನೆಯನ್ನು ಯಾರೂ ಗುರುತಿಸಲಿಲ್ವೇ  ಅಂತಾ  ಅಂದುಕೊಂಡಿರಾ ...?  ನಿಜ   ಇಂತಹ ಸಾಧನೆಗಳನ್ನು  ಗುರುತಿಸುವವರು ಬಹಳ ಕಡಿಮೆ, ಜೊತೆಗೆ  ಇಂತಹ  ಅದ್ಭುತ  ವ್ಯಕ್ತಿಗಳು  ಪ್ರಚಾರ ಪ್ರಿಯರಲ್ಲಾ, ಸದ್ದಿಲ್ಲದೇ  ತಮ್ಮ ಪಾಡಿಗೆ   ತಾವು  ತಮ್ಮ ಕರ್ತವ್ಯ ಮಾಡುತ್ತಿರುತ್ತಾರೆ.  "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ  " ಎನ್ನುವ ಕವಿತೆಗೆ   ಅನ್ವರ್ಥವಾಗಿ  ಬದುಕುವ  ಈ ಇತಿಹಾಸಕಾರನನ್ನು  ಕನ್ನಡ ನಾಡಿಗೆ ಕೊಡುಗೆ ನೀಡಿದ "ಶಿರಸಿ"  ಗೆ  ಅಲ್ಲಿನ ಇತಿಹಾಸಕ್ಕೆ  ಒಮ್ಮೆ ಜೈ ಅಂದುಬಿಡೋಣ.



Wednesday, April 15, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......12 ಮಂಜುಗುಣಿಯ ಶ್ರೀನಿವಾಸನ ಮಡಿಲಲ್ಲಿ



ಮಂಜುಗುಣಿ  ದೇವಾಲಯದ  ಪ್ರವೇಶ ದ್ವಾರ
ಕಳೆದ ಸಂಚಿಕೆಯಲ್ಲಿ ನಮ್ಮ ಪುಟ್ಟ ತಂಗಿ ಸಂಧ್ಯಾ ಭಟ್  ಮದುವೆಯ ನಿಶ್ಚಿತಾರ್ಥ  ಬರೆದದ್ದು ನಿಮಗೆ ಗೊತ್ತಿದೆ, ಅಲ್ಲಿಂದ  ಹೋರಟ ನಾನೂ ಹಾಗು ಪ್ರಕಾಶ್ ಹೆಗ್ಡೆ   ಅಂದುಕೊಂಡಿದ್ದ  ಮೊದಲಿನ  ಕಾರ್ಯಕ್ರಮದಂತೆ  ಯಾಣ  ನೋಡಲು ಹೋಗಬೇಕಿತ್ತು,  ಆದರೆ  ಸಂಧ್ಯಭಟ್  ಮನೆಯಲ್ಲಿ ಕಾರ್ಯಕ್ರಮದ ವೇಳೆ  ಸನಿಹದಲ್ಲೇ  ಮಂಜುಗುಣಿ ಇದೆ  ಅದನ್ನು ನೋಡಿ ಬಹಳ ಚೆನ್ನಾಗಿದೆ ಎಂಬ ಸಲಹೆಗಳನ್ನು ಹಲವರು ನೀಡಿದರು .ನಮಗೂ ಅಚ್ಚರಿ  ಸರಿ ನೋಡೇ ಬಿಡುವ  ಎಂದು   ಸನಿಹದಲ್ಲೇ ಇದ್ದ ಮಂಜುಗುಣಿ ಕ್ಷೇತ್ರದಕಡೆ ತೆರಳಿದೆವು .



ನಮ್ಮ ಕನ್ನಡ ನಾಡೆ ಹಾಗೆ   ನಿಮಗೆ ಅರಿವಿಲ್ಲದಂತೆ  ಹಲವು ಕೌತುಕಗಳನ್ನು  ಒಳಗೊಂಡಿರುತ್ತದೆ ,  ನಮಗೆ ಇಲ್ಲಿ ಆದದ್ದೂ ಇದೆ,  ನನ್ನ ಜೀವಿತಾವಧಿಯಲ್ಲಿ  ಒಮ್ಮೆಯೂ ಈ ಕ್ಷೇತ್ರದ ಬಗ್ಗೆ ಕೇಳಿರಲಿಲ್ಲ,  ಆದರೆ ಇಲ್ಲಿಗೆ ಬಂದ ಮೇಲೆ ಪರಿಚಯವಾದ ಕ್ಷೇತ್ರವಿದು,  ಮೊದಲ  ಭೇಟಿಯಲ್ಲೇ ಯಾಕೋ ಇಲ್ಲಿನ  ಪ್ರಶಾಂತತೆ  ಮನಕ್ಕೆ ಮುದ ನೀಡಿತು . ಹಾಗೆ ದೇವಾಲಯದ ಒಳಗೆ ಹೋಗಿ  ದೇವರ ದರ್ಶನ ಪಡೆದು ಪುನೀತರಾದೆವು, ಜೊತೆಯಲ್ಲಿ ಮನದಣಿಯ ಕ್ಯಾಮರದಿಂದ ಚಿತ್ರಗಳನ್ನು  ಕ್ಲಿಕ್ಕಿಸಿ  ಖುಷಿಪಟ್ಟೆವು . ನಂತರ ಮನೆಗೆ ಬಂದು ಈ ಕ್ಷೇತ್ರದ ಬಗ್ಗೆ ಅಂತರ್ಜಾಲದಲ್ಲಿ ನೋಡಿದರೆ  ......  ಇಲ್ಲಿಯೂ ಲೊಟ್ಟೆ  ಯಾವ ಮಾಹಿತಿಯೂ ಸಹ ಇಲ್ಲಾ,  ಆದರೆ ಛಲ ಬಿಡದೆ  ಹಳೆಯ ಗೆಜೆತೀರ್ ಗಳನ್ನೂ ಹುಡುಕಲು ಹಲವಾರು ಮಾಹಿತಿ ದೊರಕಿತು.



ಬನ್ನಿ ನಿಮಗೆ ಸ್ವಾಗತ

ಬನ್ನಿ ಮಂಜುಗುಣಿಯ  ವಿಚಾರ ತಿಳಿಯೋಣ , ಮೊದಲಿಗೆ  ಉತ್ತರ ಕನ್ನಡ ಜಿಲ್ಲೆಯಲ್ಲಿ  ಎರಡು ಮಂಜುಗುಣಿ  ಎಂಬ ಊರುಗಳು ಇವೆ , ಮೊದಲನೆಯದು  ಅಂಕೋಲಾ  ತಾಲೂಕಿನ  ಗಂಗಾವಳಿ  ನದಿಯ ದಡದಲ್ಲಿರುವ  ಮಂಜುಗುಣಿ , ಇಲ್ಲಿಯೂ ಸಹ ಗಣಪತಿ, ಜಟ್ಟಿಗ  ಹಾಗು   ಕಣ್ಣಮ್ಮ  ದೇಗುಲಗಳು ಇವೆ ,  ಅಲ್ಲಿರುವ ಬೆಟ್ಟದ ಮೇಲೆ  ಗೆರುಸೊಪ್ಪೆಯ ಅರಸ ಕ್ರಿಷ್ಣ ದೇವರಸನ  ಶಾಸನವಿದೆ , ಇದು ಹದಿನಾರನೇ ಶತಮಾನದ್ದೆಂದು ತಿಳಿದು ಬರುತ್ತದೆ .

ನಂತರ ಎರಡನೆಯ  ಮಂಜುಗುಣಿ  ಶಿರಸಿ   ತಾಲ್ಲೂಕಿನದು , ಶಿರಸಿಯಿಂದ ೨೬   ಕಿಲೋಮೀಟರು  ದೂರದಲ್ಲಿದೆ , ಶಿರಸಿ ಕುಮಟ   ಮುಖ್ಯ  ರಸ್ತೆಯಲ್ಲಿ ಸಾಗಿದರೆ  ನಿಮಗೆ ೨೨ ಕಿಲೋಮೀಟರು  ನಂತರ  ಒಂದು  ಸೂಚನೆಕಲ್ಲು ಸಿಗುತ್ತದೆ ಅಲ್ಲಿಂದ ಒಳಗಡೆ  ಬಲಕ್ಕೆ ತಿರುಗಿ ಸಾಗಿದರೆ ೪ ಕಿಲೋಮೀಟರು ನಂತರ  ನಿಮಗೆ ಸಿಗುವ ಕ್ಷೇತ್ರವೇ ಈ  ಮಂಜುಗುಣಿ .


 ಅಮೂಲ್ಯವಾದ ತೀರ್ಥ  ಪ್ರಬಂಧ   ಈಗ ತಟ್ಟೆ ರೂಪದಲ್ಲಿ  ಬಂದಿದೆ

ಉತ್ತರಕನ್ನಡದ  ಶಿರಸಿಯ ಸೋಂದಾ   ಶ್ರೀ ಮದ್ ವಾಧಿರಾಜರು ನೆಲಸಿದ್ದ ಪುಣ್ಯ ಕ್ಷೇತ್ರ ,   ಅವರು ತಾವು ಸಂದರ್ಶನ ಮಾಡಿದ ಪುಣ್ಯ ಕ್ಷೇತ್ರಗಳ  ವಿವರ ನೀಡಿ  ಅಲ್ಲಿನ ವಿಶೇಷತೆಗಳನ್ನು ಹೊಗಳಿ  ರಚಿಸಿದ ಕೃತಿಯೇ  "ತೀರ್ಥ ಪ್ರಬಂಧ " . ವಾಧಿರಾಜರು     ತಾವು ನೆಲಸಿದ್ದ ಪ್ರದೇಶದಿಂದ ನಾಲ್ಕೂ   ದಿಕ್ಕುಗಳಿಗೂ  ಪ್ರವಾಸ ಕೈಗೊಂಡು  ಹಲವಾರು ಪುಣ್ಯ ಕ್ಷೇತ್ರಗಳನ್ನು ಸಂದರ್ಶನ ಮಾಡುತ್ತಾರೆ ,  ಆ ಸಮಯದಲ್ಲಿ  ತಮಗೆ ಕಂಡು ಬಂದ  ಅನುಭವಗಳ  ಮಾಲಿಕೆಯನ್ನು   ತೀರ್ಥ ಪ್ರಬಂಧ  ಎಂಬ ಹೆಸರಿನಿಂದ   ಬರೆದು ಲೋಕದ ಮುಂದಿಟ್ಟಿದ್ದಾರೆ . ಅಚ್ಚರಿ ಎಂದರೆ   ಬನವಾಸಿ, ಶಾಲ್ಮಲಾ ನದಿ, ವರದ ನದಿ, ಮಂಜುಗುಣಿ , ಯಾಣ  ಮುಂತಾದ ಪ್ರದೇಶಗಳ ಬಗ್ಗೆ   ಹಲವು ಶತಮಾನಗಳ  ಹಿಂದೆಯೇ ದಾಖಲೆ ಮಾಡಿದ್ದಾರೆ . ಹಾಗೆಯೇ  ಮಂಜುಗುಣಿಯ ವೆಂಕಟೇಶ  ಕೈಯಲ್ಲಿ ಬಿಲ್ಲು ಬಾಣ ಹಿಡಿದವನು , ಮೃಗಗಳ  ಬೇಟೆಗಾಗಿ  ಇಲ್ಲಿಗೆ ಬಂದವನು ಎನ್ನತ್ತಾರೆ .

ಸುಂದರ ದೇವಾಲಯ ದರ್ಶನ


ಲಭ್ಯವಾದ  ಪುರಾಣಿಕ ಮಾಹಿತಿ ಪ್ರಕಾರ ತಿರುಪತಿಯಿಂದ  ವೆಂಕಟರಮಣ  ಬೇಟೆಯಾಡುತ್ತಾ , ವಿಹಾರ ಮಾಡುತ್ತಾ  ಈ ಮಂಜುಗುಣಿ ಕ್ಷೇತ್ರಕ್ಕೆ ಬಂದು ನೆಲೆಸಿದನೆಂದು  ಹೇಳಲಾಗುತ್ತದೆ . ಹಾಗಾಗಿ ಈ ದೇವರನ್ನು ಬೇಟೆ ವೆಂಕಟರಮಣ ಎಂದೂ ಸಹ ಕರೆಯಲಾಗಿದೆ. ಚಳಿಗಾಲದಲ್ಲಿ ಇಲ್ಲಿ ದಟ್ಟನೆಯ  ಮಂಜು ಮುಸುಕುವ ಕಾರಣ  ಈ ಪ್ರದೇಶಕ್ಕೆ ಮಂಜುಗುಣಿ  ಎಂದು ಕರೆಯಲಾಗಿದೆ . ಈ ದೇವಾಲಯವು  ವಿಜಯನಗರ  ಶೈಲಿಯಲ್ಲಿದ್ದು   ಅಂದಿನ ಕಾಲದ್ದು ಎಂದು  ನಿಖರವಾಗಿ ಹೇಳಲು  ಯಾವುದೇ ಶಾಸನ ಆಧಾರಗಳು ಇಲ್ಲ , ವಾದಿರಾಜರು  ಈ ಕ್ಷೇತ್ರಕ್ಕೆ ಭೇಟಿಕೊಟ್ಟು  ಈ ದೇವಾಲಯದ ಬಗ್ಗೆ ಹೇಳಿರುವ ಕಾರಣ  ಈ ದೇವಾಲಯ ವಿಜಯನಗರ  ಕಾಲಕ್ಕೂ ಬಹಳ ಹಿಂದಿನದು ಎಂದು  ತಿಳಿಯಬಹುದಾಗಿದೆ . ಸೋಂದಾ ಅರಸರು ಈ ದೇವಾಲಯವನ್ನು  ದುರಸ್ತಿ ಮಾಡಿದ ಬಗ್ಗೆ ಹೇಳಲಾಗುತ್ತದೆ ಆದರೂ  ಹೆಚ್ಚಿನ ಮಾಹಿತಿ ಲಭ್ಯವಿಲ್ಲ .


ಕಲ್ಲಿನಲ್ಲಿ  ಚಂದದ  ಚಿತ್ತಾರದೊಡನೆ  ಮಾಹಿತಿ 


ದೇವಾಲಯದ ಮುಂದೆ ಕಂಡುಬರುವ ಗರುಡ ದೇವ



ದೇವಾಲಯ ಸುಂದರವಾಗಿದ್ದು  ಮುಖಮಂಟಪ, ನವರಂಗ, ಆರಾಧನ ಮಂಟಪ, ಹಾಗು ಗರ್ಭಗೃಹ ಗಳನ್ನೂ ಹೊಂದಿದೆ .  ನವರಂಗ , ಆರಾಧನ ಮಂಟಪ , ಗರ್ಭಗೃಹಗಳು  ಮೊದಲೇ ಇದ್ದವೆಂದೂ  ನಂತರ   ಮುಖಮಂಟಪ  ನಂತರ ನಿರ್ಮಾಣ ವಾಯಿತೆಂದೂ   ಹೇಳಲಾಗಿದೆ . ಮುಖ ಮಂಟಪದ  ಕಂಬಗಳ ಮೇಲೆ ವಿಷ್ಣು ಭಕ್ತರ  ಹಾಗು ಸಂತರ   ಕೆತ್ತನೆ ಕಾಣ ಬಹುದಾಗಿದೆ , ಹಾಗು ನವರಂಗದ ಹೊರಗಡೆ ಕಲ್ಲಿನ ಗೋಡೆಗಳಲ್ಲಿ  ರಾಮಾಯಣದ   ಸುಂದರ ದೃಶ್ಯಗಳನ್ನು,  ಶೇಷಶಯನ , ಗೋಪಾಲಕೃಷ್ಣ , ಗಣಪತಿ,  ನರಸಿಂಹ , ಮಾರುತಿ, ಮುಂತಾದ  ದೇವರುಗಳ ರೂಪಗಳನ್ನು  ಕೆತ್ತಲಾಗಿದೆ . ನವರಂಗದ  ಪ್ರವೇಶ ದ ಹಾದಿಯಲ್ಲಿ  ಗರುಡ ಹಾಗು ಹನುಮನ  ಮೂರ್ತಿಗಳನ್ನು ಕಡೆಯಲಾಗಿದೆ .


ಮಂಜುಗುಣಿ  ವೆಂಕತರಮಣ
ತಿರುಮಲ  ಯೋಗಿಗಳು
 ಇನ್ನು ಬನ್ನಿ ಮೂಲ  ಮೂರ್ತಿಯ ದರ್ಶನ ಮಾಡೋಣ  ಸಾಮಾನ್ಯವಾಗಿ ವೆಂಕಟೇಶ್ವರನ  ಬೃಹದ್ ಮೂರ್ತಿಯ  ದರ್ಶನ ಮಾಡಿರುವವರಿಗೆ , ಇಲ್ಲಿನ ಮುದ್ದಾದ  ಪುಟ್ಟ ಮೂರ್ತಿ  ವಿಸ್ಮಯವೇ ಸರಿ . ಕಪ್ಪು ಶಿಲೆಯಲ್ಲಿ ಮುದ್ದಾಗಿ ನಿರ್ಮಿಸಲಾಗಿದೆ,  ನಾಲ್ಕು ಕೈಗಳಲ್ಲಿ  ಮೇಲಿನ ಎರಡು ಕೈಗಳಲ್ಲಿ  ಶಂಖ , ಚಕ್ರ, ಕೆಳಭಾಗದ  ಎರಡು ಕೈಗಳಲ್ಲಿ  ಬಿಲ್ಲು ಭಾಣ  ಧರಿಸಿದ ಮೂರ್ತಿ ಇದು, ಪೌರಾಣಿಕವಾಗಿ ಈ ಮೂರ್ತಿಯ ಪ್ರತಿಷ್ಟಾಪನೆಯನ್ನು  ಶ್ರೀ ತಿರುಮಲ ಯೋಗಿಗಳು  ಮಾಡಿದರೆಂದು  ತಿಳಿದುಬರುತ್ತದೆ.  ವೆಂಕಟರಮಣನ  ಗುಡಿಯ ನೈಋತ್ಯ  ದಿಕ್ಕಿನಲ್ಲಿ  ಸುಂದರವಾದ   ಪದ್ಮಾವತಿ ಅಮ್ಮನವರ ಗುಡಿ ಇದೆ .


ನನ್ನನ್ನು ಒಮ್ಮೆ ನೋಡಿಬಿಡಿ


ರಥ ದರ್ಶನ

ಗುಡಿಯ ದರ್ಶನ ಮಾಡುತ್ತಾ ಯಾವುದೋ ಲೋಕ ಹೊಕ್ಕಂತೆ ಆಯಿತು, ದೇಗುಲದ ಹೊರಗೆ  ಬಂದ ನಮಗೆ .  ದೇವಾಲಯದ  ಮುಂಭಾಗ  ಕಲ್ಲಿನ ಆಮೆಯ ದರ್ಶನ ಆಯಿತು , ಹಾಗೆ ಮುಂದೆ ಬಂದರೆ  ಸುಂದರವಾದ ರಥ ದರ್ಶನ ಆಯಿತು, ಚೌಕಾಕ್ರುತಿಯ ರಥದಲ್ಲಿ ವಿಷ್ಣುವಿನ ವಿವಿಧ ಅವತಾರಗಳ ದರ್ಶನ ಕಾಣುತ್ತದೆ . ನಾವು ಹೋಗಿದ್ದ  ದಿನಕ್ಕೆ ಸ್ವಲ್ಪ  ಹತ್ತಿರದಲ್ಲೆ ಮಂಜುಗುಣಿ ಯ  ರಥೋತ್ಸವ  ಇರುವುದಾಗಿ ತಿಳಿದು ಬಂತು ,

ಆದಿ ಮಂಜುಗುಣಿಯ  ಕೊಳ

ದೇವಾಲಯದ ಪಕ್ಕದಲ್ಲಿ  ಇರುವ ಕೊಳ


ಮಂಜುಗುಣಿಯಲ್ಲಿ ಎರಡು  ಸುಂದರವಾದ ಪುಷ್ಕರಿಣಿಗಳು ಇವೆ , ಬಹಳ ಸ್ವಚ್ಚವಾಗಿ  ನಿರ್ವಹಣೆ ಮಾಡಲಾಗಿದೆ, ಆದಿ ಮಂಜುಗುಣಿ  ಎಂದು ಕರೆಯುವ ಸ್ಥಳದಲ್ಲಿ  ಇರುವ ಒಂದು ಪುಷ್ಕರಿಣಿ ಬಹಳ ದೊಡ್ಡದಿದ್ದು ಸುಂದರವಾಗಿದೆ, ಇಲ್ಲಿ  ಒಂದು ಮಾರುತಿ ದೇವಾಲಯ ಇದೆ. ಅಘನಾಶಿನಿ ನದಿ  ಇಲ್ಲಿ  ಹುಟ್ಟುತ್ತದೆ ಎಂದು ಹೇಳುತ್ತಾರೆ . ಪ್ರತೀವರ್ಷ ಚೈತ್ರ ಪೂರ್ಣಿಮೆಯಲ್ಲಿ  ಮಂಜುಗುಣಿಯಲ್ಲಿ    ರಥೋತ್ಸವ  ನಡೆಸಲಾಗುತ್ತದೆಂದು ತಿಳಿದು  ಬಂತು . . ಈ  ಕ್ಷೇತ್ರ  ದರ್ಶನ ದಿಂದ ಹೊಸ ವಿಚಾರ ತಿಳಿದು ಬಂತು  , ನಾವು  ಇಲ್ಲಿಗೆ ಬಾರದೆ ಹಾಗೆ ಮುಂದೆ ಹೋಗಿದ್ದರೆ ನಮಗೆ  ಒಂದು ಪ್ರದೇಶದ ಪರಿಚಯ ಆಗುತ್ತಿರಲಿಲ್ಲ .  ಇದಕ್ಕಾಗಿ ಸಲಹೆ ನೀಡಿ  ನಮ್ಮನ್ನು ಇಲ್ಲಿಗೆ ಕಳುಹಿಸಿದ  ಎಲ್ಲರಿಗೂ ಮನದಲ್ಲಿ ವಂದಿಸುತ್ತಾ   ನಮ್ಮ ಪಯಣ  ಮುಂದು ವರೆಸಿದೆವು .   ಮುಂದಿನ ಪಯಣ  .........       "ಅಣ್ಣಾ  ಇದು ಯಾಣ  ಕಣಣ್ಣಾ  "