| ಸಂಗೀತವಿಲ್ಲದ ಸ್ಥಳ ಯಾವುದೂ ಇಲ್ಲ |
ಮೊನ್ನೆ ಹಾಗೆ ನನ್ನ ಹಳೆಯ ಚಿತ್ರಗಳ ಸರಣಿಯನ್ನು ನೋಡುತ್ತಾ ಇದ್ದೆ , ಕೆಲವು ಚಿತ್ರಗಳು ನೆನಪಿನ ಲೋಕಕ್ಕೆ ಕರೆದೊಯ್ದವು , ಅಷ್ಟರಲ್ಲಿ ಎಲ್ಲಿಂದಲೋ ತೇಲಿ ಬಂತು '' ಏಳು ಸ್ವರವೂ ಸೇರಿ ಸಂಗೀತವಾಯಿತು, ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು" ಎಂಬ ಹಾಡು. ಯಾವುದೋ ಲೋಕಕ್ಕೆ ಕರೆದುಕೊಂಡು ಹೋಯಿತು, ಅರೆ ಹೌದಲ್ವಾ, ಸಂಗೀತಕ್ಕೆ ಏಳು ಸ್ವರ ಬೇಕೇ ಬೇಕು, ಇನ್ನು ವೈಜ್ಞಾನಿಕ ನಿಯಮಗಳ ರೀತ್ಯ ಬಿಳಿಯ ಬಣ್ಣ ದೊಳಗೆ ಏಳು ಬಣ್ಣಗಳು ಮಿಳಿತಗೊಂಡಿವೆ , ನಮ್ಮ ಸುತ್ತ ಮುತ್ತ ನಡೆಯುವ ಸಾಮಾನ್ಯ ಕ್ರಿಯೆಗಳು ನಮ್ಮ ಅರಿವಿಗೆ ಬರುವುದಿಲ್ಲ , ಆದರೆ ಒಬ್ಬ ಗೀತ ರಚನೆ ಕಾರ ಇವನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ಹಾಡನ್ನು ರಚನೆ ಮಾಡಿ ಸಾಮಾನ್ಯ ಜನರಿಗೆ ತಲುಪಿಸುತ್ತಾನೆ . ಇಂತಹ ಗೀತೆಗಳಿಗೆ ಸಂಗೀತದ ಅಲಂಕಾರ ಮಾಡಿದಾಗ ಜನರ ಮನಸಿನಲ್ಲಿ ಅವು ಅತೀ ಹೆಚ್ಚುಕಾಲ ಚಿರಾಯುವಾಗಿ ಉಳಿದು ಬಿಡುತ್ತವೆ . ಈ ಹಾಡಿನಲ್ಲಿ ಹೇಳುವಂತೆ ಸಪ್ಥ ಸ್ವರಗಳು ಅಂದ್ರೆ ಏನೂ ಅಂತಾ ಕೇಳುತ್ತೇವೆ ಹೊರತು ಅದರ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ ,
| ಪುರಾತನ ದೇಗುಲಕ್ಕೆ ನಿತ್ಯ ಸಂಗೀತದ ಅಭಿಷೇಕ |
ಬನ್ನಿ ಸಪ್ತಸ್ವರ ಗಳ ವಿಚಾರ ತಿಳಿಯೋಣ, ಮೊದಲನೆಯದಾಗಿ ಸ್ವರ ಅಂದ್ರೆ ಮನುಷ್ಯನ ಬಾಯಿಂದ ಗಾಳಿಯ ರೂಪದಲ್ಲಿ ಹೊರಡುವ ಶಬ್ಧ ತರಂಗದ ಏರಿಳಿತಗಳ ಒಂದು ಸ್ವರೂಪ ಅಷ್ಟೇ. ಅವು ಕಣ್ಣಿಗೆ ಕಾಣಲಾರವು ಆದರೆ ಕೇಳಿ ಅನುಭವಿಸಬೇಕಷ್ಟೇ . ಬಹಳ ಹಿಂದೆಯೇ ಹೀಗೆ ಹೊರಡಿಸುವ ಶಬ್ಧಗಳ ಸ್ವರೂಪ ಏಳು ಬಗೆಯದ್ದಾಗಿದೆ ಎಂಬ ವಿಚಾರವನ್ನು ತಿಳಿದು, ಅವುಗಳಿಗೆ ವಿವಿಧ ರೂಪದ ಕಟ್ಟುಪಾಡುಗಳನ್ನು ಹಾಕಿ ನಿಯಮ ಬದ್ದವಾಗಿ ಸ್ವರಗಳಿಗೆ ಮನುಷ್ಯನ ಉಸಿರಿನ ಏರಿಳತಗಳ ಸಂಯೋಜನೆ ಮಾಡಲಾಗಿದೆ. ಆ ನಿಯಮ ಬದ್ದ್ದ ಸ್ವರಗಳು ಏಳು ಬಗೆಯದ್ದಾಗಿದ್ದು ಅವುಗಳನ್ನು ಸಂಕ್ಷಿಪ್ತವಾಗಿ ಸ.ರಿ.{ಅಥವಾ ರೆ}, ಗ. ಮ.ಪ. ಧ. ನಿ. ಎನ್ನುತ್ತಾರೆ ಈ ಏಳೂ ಸ್ವರಗಳ ವಿಸ್ತೃತ ಹೆಸರು ಕ್ರಮವಾಗಿ 1] "ಸ. " ಎಂದರೆ ಷಡ್ಜ, 2] "ರಿ" ಅಂದರೆ ರಿಶಭ , 3] " ಗ " ಎಂದರೆ ಗಾಂಧಾರ 4] " ಮ " ಎಂದರೆ ಮಧ್ಯಮ 5] "ಪ " ಎಂದರೆ ಪಂಚಮ 6] "ಧ" ಎಂದರೆ ದೈವತ್ ಹಾಗು 7] "ನಿ " ಎಂದರೆ ನಿಶದ್ ಎಂದು ಕರೆಯುತ್ತಾರೆ, ಕರ್ನಾಟಕ ಸಂಗೀತದಲ್ಲಿ "ರಿ" ಎಂದು ಬಳಸುವ ಸ್ವರವನ್ನು ಹಿಂದುಸ್ತಾನಿ ಸಂಗೀತದಲ್ಲಿ "ರೆ " ಎಂದು ಬಳಸುತ್ತಾರೆ , ಉಳಿದಂತೆ ಎಲ್ಲಾ ಸ್ವರಗಳ ಉಚ್ಚಾರಣೆ ಒಂದೇ ತೆರನಾಗಿರುತ್ತವೆ . ಏಳು ಸ್ವರಗಳಿಗೂ ಪ್ರಾಣಿ ಪಕ್ಷಿಗಳ ಹಾಗು ದೇವತೆಗಳ ನಾಮಕರಣ ಮಾಡಲಾಗಿದ್ದು, ಕ್ರಮವಾಗಿ 1] " ಸ " ಅಂದರೆ "ನವಿಲು " ಹಾಗು ಸ್ವರ ದೇವತೆ "ಗಣಪತಿ" 2] "ರಿ" ಅಂದರೆ "ಗೂಳಿ" ಹಾಗು ಸ್ವರ ದೇವತೆ "ಅಗ್ನಿ" 3] " ಗ " ಎಂದರೆ "ಮೇಕೆ " ಸ್ವರ ದೇವತೆ "ರುದ್ರ" 4] "ಮ" ಎಂದರೆ "ಪಾರಿವಾಳ " ಸ್ವರ ದೇವತೆ "ವಿಷ್ಣು" 5] "ಪ" ಎಂದರೆ ಕೋಗಿಲೆ ಸ್ವರ ದೇವತೆ "ನಾರದ" 6] "ಧ " ಎಂದರೆ "ಕುದುರೆ" ಸ್ವರ ದೇವತೆ "ಸದಾ ಶಿವ" 7] " ನಿ" ಎಂದರೆ "ಆನೆ" ಸ್ವರ ದೇವತೆ "ಸೂರ್ಯ" ಈ ಸಪ್ತ ಸ್ವರಗಳಿಗೆ ಎಷ್ಟೊಂದು ವಿಶೇಷ ಇದೆ ಆಲ್ವಾ ...! ಈ ದೇಶದಲ್ಲಿ ನಾವು ಕೇಳುವ ಎಲ್ಲಾ ಬಗೆಯ ಸಂಗೀತಗಳು ಈ ಸಪ್ತ ಸ್ವರಗಳ ಅಡಿಪಾಯದ ಮೇಲೆ ನಿರ್ಮಿತವಾದವು ಎಂಬ ಮಾತು ಸುಳ್ಳಲ್ಲ.