Friday, February 28, 2014

ಹೆಣ್ಣುಮಕ್ಕಳೇ ಇವಳನ್ನು ಕ್ಷಮಿಸಿಬಿಡಿ ...... !! ಅನ್ನುತ್ತಿತ್ತು ಆ ಮನಸು .






ಇದೇನಪ್ಪಾ ಇವನು ಏನು ಹೇಳೋಕೆ ಹೊರಟಿದ್ದಾನೆ ಅಂತಾ ನಿಮಗೆ ಅನ್ನಿಸಿದ್ದರೆ ಅದು ನಿಜವೇ ಅನ್ನಿ. ನಮ್ಮ ಬ್ಲಾಗ್ ಪ್ರಪಂಚದಲ್ಲಿ , ನಮ್ಮ  ಪ್ರತಿನಿತ್ಯದ ಜೀವನದ ಸುತ್ತಾ ಎಷ್ಟೋ ಹೆಣ್ಣುಮಕ್ಕಳನ್ನು ಕಾಣುತ್ತೇವೆ, ಕೆಲವು ಹೆಣ್ಣುಮಕ್ಕಳ ಸಾಧನೆ ಕಂಡು ಬೆರಗಾಗುತ್ತೇವೆ , ಅವರಲ್ಲಿನ ಒಳ್ಳೆಯ ಹವ್ಯಾಸ , ಒಳ್ಳೆಯ ವಿಚಾರ , ವ್ಯವಸ್ತಿತವಾಗಿ ಅವರು ಒಳ್ಳೆಯ  ಕಾರ್ಯನಿರ್ವಹಣೆ ಮಾಡುವ  ರೀತಿಗೆ ಮನಸು  ಶಹಬ್ಬಾಸ್   ಎನ್ನುತ್ತದೆ. ಯಾವುದೇ ಹೆಣ್ಣುಮಕ್ಕಳಿಗೆ ತೊಂದರೆ ಆದರೆ ಮನಸು ಕುದಿಯುತ್ತದೆ , ಅದನ್ನು ಖಂಡಿಸಿ  ಬಹಳಷ್ಟು ಜನ  ಮಾತಾಡುವುದನ್ನು  ಕಂಡಿದ್ದೇವೆ , ಬಹಳಷ್ಟು  ಪ್ರಕರಣಗಳಲ್ಲಿ  ಹೆಣ್ಣುಮಕ್ಕಳಿಗೆ ಅನುಕಂಪದ ಅವಕಾಶ ದೊರಕುತ್ತದೆ , ಅದಕ್ಕೆ ಅವರು ಅರ್ಹರೂ ಕೂಡ ಆಗಿರುತ್ತಾರೆ. ಆದರೆ ಅಪವಾದವೆಂಬಂತೆ ಇಲ್ಲೊಂದು ಪ್ರಕರಣವಿದೆ ಈ ನೈಜ ಘಟನೆಯನ್ನು  ಬಹಳ ಹತ್ತಿರದಿಂದ ನೋಡಿದ ನಾನು ಇಲ್ಲಿ ಅದಕ್ಕೆ ಕಥೆಯರೂಪ ನೀಡಿ ನಿಮ್ಮ ಮುಂದಿಟ್ಟಿದ್ದೇನೆ . ಆಧುನಿಕ ಪ್ರಪಂಚದ ಯುವ ಪೀಳಿಗೆಯ ಹೆಣ್ಣುಮಗಳು ಮಾಡಿದ ಎಡವಟ್ಟಿಗೆ  ಒಂದು ಗೌರವಾನ್ವಿತ ಕುಟುಂಬ ನರಳುವ ಹಂತ ತಲುಪಿದ್ದು  ಸುಳ್ಳಲ್ಲ . ಬನ್ನಿ ಕಥೆ ಒಮ್ಮೆ ಒದಿ.


ಸೂರ್ಯ  ಅಂದು ಮಂಕಾಗಿದ್ದ  , ಜೀವನದಲ್ಲಿ ಅವನು ನಿರೀಕ್ಷಿಸದೆ ಇದ್ದ ಘಟನೆ ನಡೆದುಹೋಗಿತ್ತು,  ಯೋಚಿಸಿದಷ್ಟೂ  ನಿಘೂಡ ವಾಗುತ್ತಿದೆ  ವಿಚಾರಗಳು ...... ಯಾಕೆ ಹೀಗಾಯ್ತು ಎನ್ನುವ  ಪ್ರಶ್ನೆಗೆ  ಮನದಲ್ಲಿ ಉತ್ತರ ದೊರಕುತ್ತಿಲ್ಲಾ,   ಕಳೆದ  ಮೂರುವಾರಗಳ ಹಿಂದೆ  ಇದ್ದ ಸಂಭ್ರಮ , ಖುಷಿ,  ಹೊಸದಾಗಿ ಕಟ್ಟುತ್ತಿದ್ದ  ಸುಂದರ ಕನಸುಗಳು ಛಿದ್ರ  ಛಿದ್ರ ವಾಗಿದ್ದವು , ಆಯೋ ದೇವ್ರೇ , ನಾನು ಯಾರಿಗೆ ಮೋಸ  ಮಾಡಿದ್ನಪ್ಪ? ಯಾರ ಭವಿಷ್ಯ ಹಾಳುಮಾಡಿದ್ದೆ ? ದೇವರಂತಹ  ನನ್ನ ತಂದೆ ತಾಯಿ ಯಾರಮನಸನ್ನು ನೋಯಿಸಿದವರಲ್ಲಾ, ಅವರಿಗೆ ಯಾಕೆ ಈ ಶಿಕ್ಷೆ ?  ಅವಳು ಯಾಕೆ  ಈ ಬಗ್ಗೆ ಯೋಚಿಸಲಿಲ್ಲ  ..? ಅಲ್ಲಾ  ವಿಧ್ಯೆ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಎಲ್ಲರೂ ಹೇಳುತ್ತಾರೆ , ಇವಳು ಯಾಕೆ  ಹೀಗೆ  ಅಜ್ಞಾನಿ ಯಂತೆ  ತೀರ್ಮಾನ ತೆಗೆದುಕೊಂಡು  ನನ್ನ ಸಂತೋಷಕ್ಕೆ  ಕಲ್ಲು ಹಾಕಿದಳು ? ಅವಳ ತಂದೆ ತಾಯಿ ಸಹ  ಮಗಳ  ಬಗ್ಗೆ ಮರುಗಿದರೂ  ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲುವಂತೆ ಯಾಕೆ ಮಾಡಿದಳು ? ಹೀಗೆ ಪ್ರಶ್ನೆಗಳ  ಸುನಾಮಿ  ಮನದಲ್ಲಿ ಅಪ್ಪಳಿಸುತ್ತಿತ್ತು , ಆದರೆ  ಆ ಸುನಾಮಿಗೆ ಮನದಲ್ಲಿನ ಸಂತಸ  ನಲುಗಿಹೋಗಿತ್ತು .  ಎದುರುಗಡೆ  ಅವಳ  ನಗುವಿನ ಆ ಫೋಟೋ  ಗಹ ಗಹಿಸುತ್ತಾ ನನ್ನ ಈ ಸ್ಥಿತಿ  ನೋಡಿ ಅಣಕಿಸುತ್ತಿತ್ತು .  .........   ಆ ಘಟನೆ ಸೂರ್ಯನ   ಕಣ್ಮುಂದೆ ಮತ್ತೊಮ್ಮೆ  ಬಿಚ್ಚಿಕೊಳ್ಳತೊಡಗಿತು .

ಅಂದು ಅಪ್ಪಾ  ಬೆಂಗಳೂರಿನ ನನ್ನ ರೂಂ ಗೆ   ಬಂದು  "ಸೂರ್ಯ  ಇಂದು ನಿನ್ನ ಕೆಲಸಕ್ಕೆ ರಜೆ ಹಾಕಪ್ಪಾ , ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಅಂದ್ರು" , ನನ್ನ ಅಪ್ಪನ ಸ್ವಭಾವವೇ ಹಾಗೆ  ತಮ್ಮ ಮನಸಿಗೆ ಯಾವುದಾದರು ವಿಚಾರ ಬಂದ್ರೆ  ಮೊದಲು ಅಮ್ಮನಿಗೆ ತಿಳಿಸಿ ನಂತರ ತಡಮಾಡದೆ  ನನ್ನ ಹತ್ತಿರ  ಹೇಳಿಕೊಳ್ಳುತ್ತಾರೆ . ಅಂದೂ ಸಹ ಹಾಗೆ ಆಯಿತು, ಹೆಚ್ಚಿಗೆ ಕೆಲಸವಿಲ್ಲದ ಕಾರಣ ಕಂಪನಿಗೆ  ಗೆ ರಜೆ ಹಾಕಿ ಅಪ್ಪನ  ಜೊತೆಯಲ್ಲಿ ಇದ್ದೆ, ಮೊದಲು ರೂಂ ಹತ್ತಿರವಿದ್ದ  ದೇವಾಲಯದಲ್ಲಿ ದೇವರ ದರ್ಶನ ಮಾಡಿ , ಅಲ್ಲೇ ಇದ್ದ ಹೋಟೆಲ್ ನಲ್ಲಿ ಬೆಳಗಿನ ಉಪಹಾರ  ಸೇವಿಸುತ್ತಾ  ಬಹಳ ಖುಷಿಯಿಂದಾ  ಮಾತನಾಡಿದರು . ಮಾತಿನ ನಡುವೆ ಸೂರ್ಯ  ನಿನ್ನ ವಯಸ್ಸು ಎಷ್ಟು  ಎಂದರು ?
"ಇದೇನಪ್ಪಾ ನಿಮಗೆ ಗೊತ್ತಲ್ಲಾ  ನನಗೆ ಈಗ ಇಪ್ಪತಾರು ವರ್ಷ ಆಲ್ವಾ ಅಪ್ಪಾ, ಮೊನ್ನೆತಾನೆ ನೀವು ಆಶೀರ್ವಾದ ಮಾಡಿ ಗಿಫ್ಟ್  ಕೊಟ್ರಲ್ಲಾ ...."  ಅಂದೇ ನಾನು
.
"ಹೌದು ಕಣಯ್ಯ  ಹಾಳು  ಮರೆವು  ವಯಸ್ಸು  ಆಯ್ತು ನೋಡು "ಇನ್ನೇನಿಲ್ಲಾ  ನಿನ್ನ ಮದುವೆ ಬಗ್ಗೆ ಯೋಚನೆ ಬಂತು , ಅದಕ್ಕೆ ಕೇಳ್ದೆ , ಏನಪ್ಪಾ  ನೀನು ಯಾರನ್ನಾದರೂ ಇಷ್ಟಾ ಪಟ್ಟಿದ್ದೀಯ ?  ಯಾವುದೇ ಸಂಕೋಚ ಬೇಡ  ಧೈರ್ಯವಾಗಿ ಹೇಳು ...? ಹಾಗೇನಾದ್ರೂ ಇದ್ರೆ ನಾನು ನಿನ್ನಮ್ಮ  ಇಬ್ಬರು ಮುಂದೆ ನಿಂತು  ಸೊಸೆಯನ್ನು ಮನೆ  ತುಂಬಿಸಿ ಕೊಳ್ಳುತ್ತೇವೆ ". ಎಂಬ ಪ್ರಶ್ನೆ ಎಸೆದು ನನ್ನ ಕಡೆ ನೋಡಿದರು ಅಪ್ಪಯ್ಯ .


ನಾನು ಒಮ್ಮೆಲೇ  ಬೆಚ್ಚಿಬಿದ್ದೆ ,   ಹೌದು ನನ್ನ ಅಪ್ಪ ಯಾವಾಗಲೂ ಹಾಗೆ , ಚಿಕ್ಕವಯಸ್ಸಿನಿಂದಲೂ  ಪ್ರತೀಯೊಂದು ವಿಚಾರವನ್ನು  ಯಾವುದೇ ಮುಚ್ಚುಮರೆ ಇಲ್ಲದೆ  ಮಾತನಾಡುತ್ತಿದ್ದರು, ಅಮ್ಮನೂ ಸಹ ಹಾಗೆ ಅಪ್ಪನ  ಜೊತೆಗೆ ಸಾಥ್ ನೀಡುತ್ತಿದ್ದಳು  . ಹಾಗಾಗಿ ನಮ್ಮ ಮನೆಯಲ್ಲಿ ಒಬ್ಬರನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು  ಬದುಕುತ್ತಿದ್ದೆವು, ಅಪ್ಪನ ಪ್ರಶ್ನೆಗೆ ನಗು ಬಂದರೂ  , ಸಾವರಿಸ್ಕೊಂಡು  ಇಲ್ಲಾಪ್ಪಾ  ನನಗೆ ಆ ಬಗ್ಗೆ ಯೋಚನೆ ಮಾಡೋ ಅಷ್ಟು ಪುರುಸೊತ್ತೇ ಇಲ್ಲಾ , ನನ್ನ ಕೆಲಸದ  ಒತ್ತಡ ಹಾಗಿದೆ , ಇನ್ನು ಹುಡುಗಿಯನ್ನು  ಇಷ್ಟಾ ಪಡೋದು ದೂರದ ವಿಚಾರ ಅಷ್ಟೇ , ಅಂದು ನನ್ನೊಂದಿಗೆ ಊರಿಗೆ ಬಂದಿದ್ರಲ್ಲಾ  ಆ ಹೆಣ್ಣುಮಕ್ಕಳು  ನನ್ನ   ತಂಗಿಯರಂತೆ  ಅವರ ಬಗ್ಗೆ ಆ ಭಾವನೆ ಇಲ್ಲಾ , ನನ್ನ ಒಡ ಹುಟ್ಟಿದ ತಂಗಿಯರಂತೆ ನನ್ನ ಬಗ್ಗೆ ಕಾಳಜಿ ವಹಿಸುತ್ತಾರೆ ಅವರೆಲ್ಲಾ , ಅವರಲ್ಲಿ ಎಲ್ಲರಿಗೂ ಮದುವೆ  ನಿಶ್ಚಯವಾಗಿದೆ  , ಇನ್ನೇನು ಹೊಸ ಬಾಳಿಗೆ  ಕಾಲಿಡುತ್ತಾರೆ . ಅಪ್ಪ ನ ಪ್ರಶ್ನೆಗೆ  ಯಾವುದೇ ಹುಡುಗಿ ನನ್ನ ಮನಸಿನಲ್ಲಿ ಇಲ್ಲಾ ಎನ್ನುವ ಉತ್ತರ ನೀಡಿದೆ .


"ಅರೆ ಪರವಾಗಿಲ್ಲಾ ಕಣಯ್ಯ  ಇನ್ನು ಹನುಮಂತನ ಭಕ್ತನಾಗೆ ಉಳಿದಿದ್ದಿ ", "ಇನ್ನು ಮುಂದೆ   ರಾಮನಂತೆ  ಗೃಹಸ್ತಾಶ್ರಮ ಕಡೆ ಪಯಣ ಹೊರಡಲು ಸಿದ್ದನಾಗು"  ,   "ನಿನ್ನ ಮದುವೇ  ವಿಚಾರದಲ್ಲಿ ಹಲವಾರು ಕುಟುಂಬಗಳು  ಆಸಕ್ತಿ ತೋರಿವೆ ನೀನು  ಒಪ್ಪಿದರೆ  ಮುಂದುವರೆಯೋಣ " , ಏನಂತೀಯ ?   ಎಂದರು , ನಾನು ಸಹ ಒಪ್ಪಿಗೆ ರೂಪದಲ್ಲಿ ತಲೆ  ಆಡಿಸಿದೆ . ತಕ್ಷಣವೇ ಅವರ ಸ್ನೇಹಿತನಿಗೆ  ಫೋನ್ ಮಾಡಿ "ನೋಡಯ್ಯ  ಮುಂದಿನ ವಾರ ಎರಡುದಿನ ರಜೆ ಇದೆ ನಿಮ್ಮ ಊರಿಗೆ ಬರುತ್ತೇವೆ ಅಲ್ಲಿಗೆ ಅವರನ್ನೂ ಕರೆಸಿಬಿದು, ಅವರು ನಮ್ಮ ಮನೆಗೆ ಬರೋದೂ ಬೇಡ  , ನಾವು ಅವರಮನೆಗೆ ಹೋಗೋದು ಬೇಡ"  ಅಂದರು .

ಕಟ್ ಮಾಡಿದ್ರೆ  ಅಪ್ಪನ ಗೆಳೆಯರ ಊರು "ಚಂದನಪುರ " ದಲ್ಲಿ   ಹುಡುಗಿಯ  ಕುಟುಂಬದ  ಭೇಟಿಯಾಯಿತು, "ನಿಮ್ಮ ಹುಡುಗನ ಬಗ್ಗೆ ನಿಮ್ಮ ಮನೆತನದ ಬಗ್ಗೆ  ನಿಮ್ಮ ಗೆಳೆಯ ಶೇಖರ್ ಎಲ್ಲಾ ಹೇಳಿದ್ದಾರೆ , ನಿಮ್ಮನ್ನು ಭೇಟಿಮಾಡಿದ್ದು ಖುಷಿ ತಂದಿದೆ ಅಂದ್ರು "  ಹುಡುಗಿಯ  ತಂದೆ   . 

"ಬಹಳ ಸಂತೋಷ ಅಯ್ಯೋ ನಮ್ಮದೇನಿದೆ  ಹುಡುಗ ಹುಡುಗಿ ಒಪ್ಪಿದರೆ  ಮುಂದುವರೆಯಲು  ಅನುಕೂಲ , ಈ ವಿಚಾರದಲ್ಲಿ ನಿಮ್ಮ ಮಗಳನ್ನು ಕೇಳಿದ್ದೀರಾ?" ಅಂದ್ರು ನಮ್ಮಪ್ಪ  

"ಅಯ್ಯೋ ನಮ್ಮ ಹುಡುಗಿ  ಚಿನ್ನದಂತಾ ಹುಡುಗಿ ಸ್ವಾಮೀ ", "ಮನೆಕೆಲಸದಲ್ಲಿ ಜಾಣೇ  ಒಳ್ಳೆ ಅಡಿಗೆ ಎಕ್ಸ್ಪರ್ಟ್"  "ಓದಿನಲ್ಲಿ ಬಹಳ ಜಾಣೆ ,'  'ಓದುವಾಗ ಹಲವಾರು ಚಿನ್ನದ ಮೆಡಲ್ ಗಳಿಸಿದ್ದಾಳೆ ',  'ಇನ್ನು ಕೆಲಸದಲ್ಲೂ ಅಷ್ಟೇ  ಅವಳ ಕೆಲಸ ಮೆಚ್ಚಿ ಹೊರದೇಶಕ್ಕೆ  ಕಳುಹಿಸುತ್ತಲೇ ಇರುತ್ತಾರೆ,'' ಅವಳ ಕಂಪನಿಯವರು . ನಿಮ್ಮ ಮಗನ ಬಗ್ಗೆ ತಿಳಿದು ಕೊಂಡಿದ್ದಾಳೆ , ಫೇಸ್ ಬುಕ್ ನಲ್ಲಿ ನಿಮ್ಮ   ಮಗನ ಬಗ್ಗೆ ಇರುವ ವಿಚಾರಗಳನ್ನು ನಮಗೂ ತೋರಿಸಿದ್ದಾಳೆ , ನಿಮ್ಮ ಮಗನೂ ಸಹ ಕಮ್ಮಿಯಿಲ್ಲಾ  ಬಿಡಿ , ಬಹಳ  ಸಾಧನೆ ಮಾಡಿದ್ದಾರೆ , ಅವಳೂ  ಸಾಫ್ಟ್ ವೇರ್ ಫೀಲ್ಡ್ , ನಿಮ್ಮ ಮಗನೂ ಸಾಫ್ಟ್ ವೇರ್ ಫೀಲ್ದು  ಇಬ್ಬರೂ ಒಳ್ಳೆಯ ಜೋಡಿ ಆಗ್ತಾರೆ  ಬಿಡಿ . ನಮ್ಮ ಮನೆಯವರಿಗೆಲ್ಲಾ  ನಿಮ್ಮ ಮನೆತನ ಹಿಡಿಸಿದೆ , ನಿಮ್ಮ ಮಗನ  ಬಗ್ಗೆ ಬಹಳಒಳ್ಳೆಯ  ಅಭಿಪ್ರಾಯ  ಬಂದಿದೆ  ಈ ಮದುವೆ ಗೆ ನಮ್ಮೆಲ್ಲರ ಒಪ್ಪಿಗೆ ಇದೆ  ಅಂದರು ಹುಡುಗಿಯ ತಂದೆ .

ಹೀಗೆ ಪರಸ್ಪರ ಪರಿಚಯದ  ನಡುವೆ ಕಾಣಿಸಿದಳು ಅವಳು  , ಮೊದಲ ನೋಟದಲ್ಲೇ  ಇಷ್ಟವಾದಳು , ಅಯ್ಯೋ ಇದೇನು ನಾನು ನಾವೇ ಮಾತಾಡಿಕೊಳ್ಳುತ್ತಾ  ಇವರಿಬ್ಬರನ್ನು  ಮರೆತೇ ಬಿಟ್ವಿ ಅಂತಾ  ಹಿರಿಯರು  , ನಾವೇನು ಮಾತನಾಡಿದರೂ  ಮುಂದೆ ಸಂಸಾರ ಮಾಡೋರು  ನೀವು, ಮೊದಲು ನೀವಿಬ್ಬರು  ಮಾತನಾಡಿ  ನಂತರನಿಮ್ಮ ನಿರ್ಧಾರ ತಿಳಿಸಿ ಅಂತಾ  ಮನೆಯಮೇಲಿನ ಮಹಡಿಯ  ಒಂದು  ಕೋಣೆಗೆ   ಕಳುಹಿಸಿದರು .

ನಾನು ಸೂರ್ಯ ಅಂತಾ  ...ಜಿ ಜಿ . ಏಂ. ಎನ್ . ಸಿ . ಕಂಪನಿಯಲ್ಲಿ    ಕೆಲ್ಸಾ ಮಾಡ್ತಿದ್ದೀನಿ,  
ಹ ನಾನು  ರಶ್ಮಿ  ಅಂತಾ   ಬಿ ..ಬಿ . ಏಂ. ಎನ್ . ಸಿ . ಕಂಪನಿಯಲ್ಲಿ    ಕೆಲ್ಸಾ ಮಾಡ್ತಿದ್ದೀನಿ,  ನಿಮ್ಮ ಬಗ್ಗೆ ಎಫ್ . ಬಿ . ನಲ್ಲಿ ನೋಡಿದ್ದೇನೆ , ಬಹಳ ಒಳ್ಳೆ  ಹವ್ಯಾಸ ಇದೆ ನಿಮಗೆ , ನೀವು ತೆಗೆಯುವ ಫೋಟೋಗಳನ್ನು  ಇಷ್ಟಾ ಪಟ್ಟಿದ್ದೇನೆ , ಅಂದ ಹಾಗೆ  ನೀವು ಸ್ಮೋಕ್  ಮಾಡ್ತೀರ ? ಡ್ರಿಂಕ್ಸ್   ತಗೋತೀರ ? ನಾನ್ ವೆಜ್  ತಿನ್ತೀರಾ ?  ಅಂದಳು

"ಅಯ್ಯೋ  ಇಲ್ಲಾ ರಶ್ಮಿ  ಆ ಹವ್ಯಾಸಗಳು ಇಲ್ಲಾ ,"   "ಇದೆಲ್ಲಾ  ಮಾಡದ ನಾನೊಬ್ಬ  ಯೂಸ್ಲೆಸ್ " ಅಂತಾರೆ ನನ್ನ ಕೆಲವು ಗೆಳೆಯರು ಅಂದೇ , ಇಬ್ಬರೂ ನಕ್ಕೆವು. ಬಹಳಷ್ಟು ಮಾತನಾಡಿ  ಪರಸ್ಪರ  ವಿಚಾರ ವಿನಿಮಯ ಮಾಡಿಕೊಂಡೆವು , ಕೊನೆಗೆ ಅವಳೇ  ನಿಮ್ಮನ್ನು ಇಷ್ಟ ಪಟ್ಟಿದ್ದೇನೆ  ಅಂದಳು ಮನಸಿಗೆ ಬಹಳ ಖುಷಿಯಾಯಿತು,  ಇಬ್ಬರೂ  ಮೇಲ್ ಐ.ಡಿ . , ಮೊಬೈಲ್  ನಂಬರ್  ವಿನಿಮಯ  ಮಾಡಿಕೊಂಡೆವು  ಇಬ್ಬರೂ ಕೆಳಗೆ ಬಂದು ಹಿರಿಯರಿಗೆ  ನಮ್ಮಿಬ್ಬರ  ಅಭಿಪ್ರಾಯ ತಿಳಿಸಿದೆವು ,

 ಹಿರಿಯರೆಲ್ಲಾ ಹರುಷ ಪಟ್ಟರು , ಮನೆಯಲ್ಲಿ ಸಂತಸದ ಹೊನಲು ಹರಿಯಿತು, ಮುಂದಿನ ತಿಂಗಳು  ನಿಶ್ಚಿತಾರ್ಥ  ಕಾರ್ಯಕ್ರಮ ಅಂತಾ  ತೀರ್ಮಾನವಾಯಿತು, ಹಾಗಿದ್ರೆ  ಸುವರ್ಣ ಪುರದಲ್ಲಿ  ನಿಶ್ಚಿತಾರ್ಥ  ಕಾರ್ಯಕ್ರಮ ಮಾಡಿ ಬಿಡೋಣ  ಅಂತಾ ಎರಡೂ ಕಡೆಯವರು  ತೀರ್ಮಾನ ಮಾಡಿದರು . ಜೀವನಕ್ಕೆ ಒಂದು ತಿರುವು ಸಿಕ್ಕಿತು ಎಂದು ಖುಶಿಪಟ್ಟೆ , ಅವಳ ಆ ನಗು  ನನ್ನ ಮನಸನ್ನು ಸೂರೆಗೊಂಡಿತ್ತು,  ಕನಸುಗಳಿಗೆ ಬಣ್ಣ  ಹಚ್ಚಿತ್ತು . 


ಹೀಗೆ ಬಹಳ ದಿನಗಳು ಕಳೆದೆವು , ಮೆಸೇಜ್ , ಚಾಟ್, ಹೋಟೆಲ್ ನಲ್ಲಿ ಪರಸ್ಪರ ಭೇಟಿ, ದೇವಾಲಯದಲ್ಲಿ ಪೂಜೆ , ಹೀಗೆ ಸಾಗಿದವು ದಿನಗಳು , ನಾವಿದ್ದ ಊರು "ಕಲ್ಯಾಣ ನಗರ"  ಸ್ವರ್ಗ ವಾಗಿತ್ತು. ನಿಶ್ಚಿತಾರ್ಥದ  ಬಟ್ಟೆ , ಒಡವೆ ತೆಗೆಯುವಾಗ  ಅವಳೂ ಬಂದು ತನಗೆ ಇಷ್ಟವಾದ  ಸೀರೆ , ಒಡವೆ  ಆಯ್ಕೆ ಮಾಡಿಕೊಂಡಳು , [ ಆ ಹುಡುಗಿ  ಎಷ್ಟು ಬೆಲೆಯ ಸೀರೆ , ಒಡವೆಗಳನ್ನು ಬೇಕಾದರೂ  ಆಯ್ಕೆ ಮಾಡಿ ಕೊಳ್ಳಲಿ  ಯಾರೂ ಅಡ್ಡಿ ಪಡಿಸ ಬಾರದೆಂದು ಅಪ್ಪನ ಕಟ್ಟಪ್ಪಣೆ ಆಗಿತ್ತು ] ನನಗೆ ಅವು ಬಹಳ ದುಬಾರಿ ಅನ್ನಿಸಿದರೂ  ಅಪ್ಪನ ಅಪ್ಪಣೆಯಂತೆ ಸುಮ್ಮನಿದ್ದೆ. 

ಸುವರ್ಣ ಪುರ  ದಲ್ಲಿ "ನಿಶ್ಚಿತಾರ್ಥ" ದ ದಿನ ಬಂದೆ ಬಿಟ್ಟಿತು, ಎರಡೂ ಕುಟುಂಬದವರ  ಸಂತೋಷಕ್ಕೆ ಪಾರವೇ ಇರಲಿಲ್ಲ, ಬಹಳಷ್ಟು ಬಂಧು ಮಿತ್ರರು  ಆಗಮಿಸಿ ಶುಭ ಕೋರಿದರು ,  ಫೋಟೋ ಗ್ರಾಫಾರ್  ಗಳಂತೂ  ನಮ್ಮಿಬ್ಬರ  ವಿವಿಧ ಬಂಗಿಯ  ನೂರಾರು ಫೋಟೋ ತೆಗೆದು  ನಮ್ಮಿಬ್ಬರನ್ನು ಹೀರೋ ಹೀರೋಯಿನ್  ಎಂಬಂತೆ  ಆಡಿಸಿದ್ದರು, ಅವಳೂ ಸಹ ಬಹಳ ಖುಷಿಯಿಂದ ನನ್ನೊಡನೆ ಫೋಟೋ ತೆಗೆಸಿಕೊಂಡು  ಸಂಭ್ರಮಿಸಿದ್ದಳು . ಅಂದು ಸಂಜೆಯೇ  ಇಬ್ಬರು   ಅಲ್ಲೇ ಇದ್ದ  ಮಲ್ಟಿ ಪ್ಲೆಕ್ಸ್  ನಲ್ಲಿ  ಸಿನೆಮ ನೋಡಿ ಸಂಭ್ರಮ ಪಟ್ಟೆವು . ಮಾರನೆಯ ದಿನ ಅವಳ ಎಫ಼್. ಬಿ . ನಲ್ಲಿ   ಯಂಗೆಜೆಡ್  ಅಂತಾ  ಸ್ಟೇಟಸ್  ಅಪ್ಡೇಟ್ ಆಗಿತ್ತು,  ಆದರೆ ನನ್ನ  ಎಫ಼್. ಬಿ. . ನಲ್ಲಿ ಸ್ಟೇಟಸ್ ಹಾಕಲು  ಹಿಂಜರಿದೆ .


ಮುಂದಿನ ಒಂದು ವಾರ  ನಮ್ಮಿಬ್ಬರ ನಡುವೆ  ನಿಶ್ಚಿತಾರ್ಥದ  ದಿಂದ ತುಂಟಾಟದ  ಕ್ಷಣಗಳ  ಮೆಲುಕು ಹಾಕುವ  ಕಾರ್ಯ ನಡೆಯಿತು .  ಒಬ್ಬರನ್ನು ಒಬ್ಬರು  ಬಿಟ್ಟಿರಲಾರೆವು  ಎಂಬಂತೆ ಆದೆವು. 


ಅದೊಂದು ದಿನ  ನನಗೆ ಅವಳಿಂದ  ಮೊಬೈಲ್ಗೆ  ಕಾಲ್ ಬಂತು, ಬಹಳ ಅರ್ಜೆಂಟ್ ಆಗಿ  ಅಂದು ಸಂಜೆ  ಕಾಫಿ ಡೆ  ನಲ್ಲಿ ಸಿಗುವಂತೆ  ತಿಳಿಸಿದಳು,  ನಾನೂ ಸಹ  ಅಂದು ಸಂಜೆ ಅಲ್ಲಿಗೆ ಮುಂಚೆ ಹೋಗಿ ಅವಳ ಬರುವಿಗೆ  ಕಾಯುತ್ತಿದ್ದೆ , ದೂರದಲ್ಲಿ ನಡೆದು ಬರುತ್ತಿದ್ದ ಅವಳನ್ನು ನೋಡಿ  ಕನಸುಗಳು  ಅರಳಿದವು .  ಸಾರಿ ಸೂರ್ಯ ನಿಮ್ಮನ್ನು ಕಾಯಿಸಿದ್ದಕ್ಕೆ  ಅಂತಾ  ಬಂದವಳೇ   ಎದರು ಗಡೆ  ಇದ್ದ   ಕುರ್ಚಿಯಲ್ಲಿ  ಕುಳಿತಳು . ಮೌನ , ಮೌನ, ಮೌನ  ಬಹಳ ಹೊತ್ತು  ಮೌನ ,  


ಸೂರ್ಯ ನಿಮ್ಮ  ಹತ್ತಿರ ಒಂದು ಮುಖ್ಯವಾದ  ವಿಚಾರ ತಿಳಿಸಬೇಕಾಗಿತ್ತು,  ಮುಂದಿನ ತಿಂಗಳು  ನಾನು ಯೂ. ಎಸ್. ಗೆ ಹೋಗ್ತಾ ಇದ್ದೀನಿ,  ಈ ಮದುವೆ  ಇನ್ನೆರಡು ವರ್ಷ  ಆಗೋಲ್ಲಾ ,  ನನಗೆ ಕೆರಿಯರ್  ಮುಖ್ಯ  ಅದಕ್ಕೆ ನಮ್ಮ  ಮದುವೆ  ಬೇಡಾ  ಅನ್ನಿಸುತ್ತಿದೆ  , ಸಾರಿ  ಬೇಜಾರು ಮಾಡಿಕೊಳ್ಳಬೇಡಿ ಅಂದಳು, 


ನಾನು ಒಮ್ಮೆಲೇ ಬೆಚ್ಚಿ ಬಿದ್ದೆ,  ತಮಾಷೆ  ಬೇಡ ರಶ್ಮಿ  , ನಾನೂ ಸಹ ಯೂ . ಎಸ್.  ಗೆ ಹೋಗೋ ಪ್ರಾಜೆಕ್ಟ್ ನ ನನ್ನ ಮದುವೇ ಕಾರಣ  ಮುಂದೆ ಹಾಕಿದ್ದೇನೆ , ನೀನೂ ಹಾಗೆ ಮಾಡು ಅಷ್ಟೇ , ಅದಕ್ಯಾಕೆ  ವರಿ   ಮಾಡ್ತೀಯ    ಅಂದೇ,  ಅರೆ ನನ್ನ ಕೆರಿಯರ್ ಪ್ರಶ್ನೆ ಸೂರ್ಯ  ಹಾಗೆಲ್ಲಾ ಮಾಡೋಕೆ ಆಗಲ್ಲ ನಾನು , ಸಧ್ಯಕ್ಕೆ ಎರಡು ವರ್ಷ ಮದುವೇ  ಬೇಡ ಅಷ್ಟೇ  ಎಂದು ನನ್ನ ಪ್ರತಿಕ್ರಿಯೆಗೂ ಕಾಯದೆ  ಹೊರಟೇ  ಹೋದಳು ..... !! ನಾನು  ರಶ್ಮಿ....  ರಶ್ಮಿ ಸ್ವಲ್ಪ ತಾಳು  ಎಂದರೂ  ಮಾತು  ಕೇಳದೆ  ಹೊರಟು ಹೋದಳು,  ಸಂಜೆಯ ಸೂರ್ಯ  ರಶ್ಮಿಯ  ಕಳೆದುಕೊಂಡಿದ್ದ .  ನನಗೋ  ಅವಳ ಬಗ್ಗೆ  ಅಚ್ಚರಿ ನನ್ನದೇನು ತಪ್ಪಿದೆ ಎಂದು ಯೋಚಿಸಿದರೂ ಯಾವ ತಪ್ಪೂ  ಕಾಣಲಿಲ್ಲ, ಅವಳೂ ಹೇಳಲಿಲ್ಲ,  ಮೊಬೈಲ್ ಬೇರೆ ಸ್ವಿಚ್  ಆಫ್ ಆಗಿತ್ತು ಅವಳದು, ನನ್ನ  ಮೇಲ್  ಬಾರದಂತೆ ಬ್ಲಾಕ್ ಮಾಡಿದ್ದಳು,  ಬೇಸರದ ಮುಖ ಹೊತ್ತು, ನನ್ನ ರೂಂ ಗೆ ಬಂದೆ, 

ಅಂದು  ರಾತ್ರಿ  ನಮ್ಮ ಅಪ್ಪ ಅಮ್ಮ,   ಹಾಗು ಅವಳ ಅಪ್ಪಾ , ಅಮ್ಮ ಅವಸರದಲ್ಲಿ  ನನ್ನ ರೂಮಿಗೆ  ಬಂದು  ನಡೆದ ಘಟನೆ ಬಗ್ಗೆ  ಮಾಹಿತಿ ಕೇಳಿದರು , ನಡೆದ ವಿಚಾರ ತಿಳಿಸಿದೆ, ಅವರಿಗೂ ರಶ್ಮಿಯ ಈ ನಿರ್ಧಾರ  ಬೇಸರ ತಂದಿತ್ತು,  ಅವಳ ತಂದೆ ತಾಯಿಯರಿಗೆ ಅವಳ ನಿರ್ಧಾರ  ಆಘಾತ ನೀಡಿತ್ತು, ವಯಸ್ಸಾದ ನಮ್ಮ ಅಪ್ಪನಿಗೆ ಅವರ ಕುಟುಂಬದ ಘನತೆಗೆ  ಬಿದ್ದ ಪೆಟ್ಟು  ನೋವು ತಂದಿತ್ತು, ನಮ್ಮ ಅಮ್ಮನಂತೂ ಹುಚ್ಚಿಯಂತೆ ಅಳುತ್ತಿದ್ದಳು , ಆದರೆ ರಶ್ಮಿ ಯಾರಿಗೂ  ಅರ್ಥವಾಗದಂತಹ  ಒಂದು ನಿರ್ಧಾರ ತೆಗೆದುಕೊಂಡು  ಸೂರ್ಯನಿಂದ  ದೂರವಾಗುತ್ತಿದ್ದಳು, .......  ಅತ್ತಾ ಅಪ್ಪ ಹುಡುಗಿಯ ಮನೆಯವರಿಗೆ  ಬಹಳ ಪ್ರೀತಿಯಿಂದ  ಮಾಡಿಸಿದ್ದೆ ಇವುಗಳನ್ನು  ನನ್ನ ಸೊಸೆ  ಖುಷಿಯಾಗಿರಲಿ ಅಂತಾ , ಆದರೆ ನಮ್ಮ ಸಂತೋಷಕ್ಕೆ ಬೆಂಕಿ ಇಟ್ಟಳು  ಇದನ್ನು ಅವಳಿಗೆ ಕೊಟ್ಟುಬಿಡಿ  , ಈ ಘಟನೆಯ ನೆನಪಿಗೆ  ಅವಳಲ್ಲೇ ಉಳಿಯಲಿ ಇದು   ಎನ್ನುತ್ತಿದ್ದ ಮಾತುಗಳು  ಕೇಳಿ  ಬರುತ್ತಿದ್ದವು.  ನಾನು  ಈ ಜಂಜಾಟ ಗಳಿಂದ ನೊಂದು   ಪಶ್ಚಿಮದ  ಕಡೆ    ರಶ್ಮಿ  ಇಲ್ಲದ  ಸೂರ್ಯನಂತೆ  ನದೆಯುತ್ತಿದ್ದೆ. .......... !!!  ನೊಂದ ಮನಸು  ಓ   ಹೆಣ್ಣುಮಕ್ಕಳೇ  ಇವಳನ್ನು ಕ್ಷಮಿಸಿಬಿಡಿ ...... !!  ಅನ್ನುತ್ತಿತ್ತು ರಶ್ಮಿ ಯಿಲ್ಲದ ಸೂರ್ಯನನ್ನು  ಕಾರ್ಮೋಡಗಳು  ಮುಚ್ಚುತ್ತಿದ್ದವು .




 
ಈ ಕಥೆಯನ್ನು  ಯಾವ ಹೆಣ್ಣುಮಕ್ಕಳನ್ನು ನೋಯಿಸುವ ಉದ್ದೇಶದಿಂದ ಬರೆದಿಲ್ಲ , ಆದರೆ ಒಮ್ಮೊಮ್ಮೆ ಹೀಗೆ ಆದಾಗ  ಗಂಡು ಮಕ್ಕಳಿಗೆ ಆಗುವ ಆಘಾತ ದ ಒಂದು ಚಿತ್ರಣ ನೀಡಿದ್ದೇನೆ . ಇಷ್ಟ ಆದ್ರೆ ನಿಮ್ಮ ಅನಿಸಿಕೆ ಬರಲಿ .













Sunday, February 9, 2014

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...10 ಜ್ಞಾನ ದೀಪದ ದರ್ಶನಮಾಡಿ ಬೆಳಕಿನಲ್ಲಿ ಮಿಂದ ಅನುಭವ ಆಯಿತು


ಜ್ಞಾನ ಹಂಚಲು ವಯಸ್ಸಿನ   ಹಂಗು ಇಲ್ಲ

ಚಿಕ್ಕಮಗಳೂರಿನ  ಗಿರಿಗಳ  ದರ್ಶನ ಮಾಡಿ ಮೈಸೂರಿಗೆ ಬರುವ ಹಾದಿಯಲ್ಲಿ   ಹಿರೆಮಗಳೂರಿನಲ್ಲಿ  "ಚಿನ್ಮೈ ಭಟ್" ಅವರನ್ನು ಮನೆ ತಲುಪಿಸುವ ಕಾರ್ಯಕ್ರಮ  ಇತ್ತು ,  ಹಿರೇಮಗಳೂರಿನ ಅವರ ಮನೆಯ ಬಳಿ ತೆರಳುತ್ತಿದ್ದಂತೆ  ಬನ್ನಿ ಸಾರ್ ' "ಕಣ್ಣನ್ ಮಾಮ"  ಅವರನ್ನು ಭೇಟಿ  ಮಾಡೋರಂತೆ , ಅಂದ ತಕ್ಷಣ  ಮನಸು  ಕುಣಿದಾಡಲು ಶುರುಮಾಡಿತು ,    ನನ್ನ ಜೀವನದ ಕನಸು ನನಸಾಗುವ  ಒಂದು  ಸನ್ನಿವೇಶ ಹತ್ತಿರವಾಗಿತ್ತು. 


ಜ್ಞಾನದ  ಅಮೃತ  ಹಂಚುವ ಕಾಯಕ ನನಗೆ ಇಷ್ಟ


ಬಹಳದಿನಗಳ ಅಲ್ಲಲ್ಲಾ ಬಹಳ ವರ್ಷಗಳ ಕನಸು ನನಸಾಗುವ ಕ್ಷಣ ಅದಾಗಿತ್ತು, ಹೌದು ಜ್ಞಾನ ಶಿಖರದ ಸನ್ನಿಧಿಯಲ್ಲಿ ನಾನು, ಗಿರೀಶ್, ಹಾಗು "ಚಿನ್ಮೈ ಭಟ್" ನಿಂತಿದ್ದೆವು, ನಮ್ಮನ್ನು ಪರಿಚಯ ಮಾಡಿಸಿದರು  "ಚಿನ್ಮೈ  ಭಟ್ " . ನಮ್ಮನ್ನು ಕಂಡಕೂಡಲೇ  ನಗು ಮುಖದಿಂದ  ಬರಮಾಡಿಕೊಂಡ  "ಹಿರೇಮಗಳೂರಿನ ಕಣ್ಣನ್ " ಬಹಳ ವರ್ಷಗಳ ಪರಿಚಿತರಂತೆ ನಮ್ಮನ್ನು ಆತ್ಮೀಯವಾಗಿ ಕಂಡರು . ಜ್ಞಾನ ಅಮೃತ ಸಾಗರದಿಂದ  ಅಮೃತ ಹೀರುವ ಸುಯೋಗ ನಮ್ಮದಾಗಿತ್ತು. 


ಅಜ್ಞಾನ ದಿಂದ  ಸುಜ್ಞಾನದ ಹಾದಿಯಲ್ಲಿ  ನಮ್ಮನ್ನು ಕರೆದೊಯ್ದ ನಡೆಸಿದ ಆ ಕ್ಷಣ

ಕಲೆ, ಸಾಹಿತ್ಯ , ಕ್ಯಾಮರ , ಇತಿಹಾಸ , ಪುರಾಣ , ಹಲವಾರು ಮಹನೀಯರ ವಿಚಾರದಲ್ಲಿ ಅವರ ಮಾತುಗಳು ವಸ್ತು ನಿಷ್ಠ ವಾಗಿದ್ದವು , ಎಷ್ಟು ಕೇಳಿದರೂ ಕೇಳಬೇಕೆಂಬ  ಮಾತುಗಳು ಅವು. ಶ್ರೀರಂಗಪಟ್ಟಣದ ಅನುಭವವನ್ನು ಮುಕ್ತವಾಗಿ ಹಂಚಿ ಕೊಂಡರು .  ಸಾಹಿತ್ಯದ ಬಗ್ಗೆ, ಇತಿಹಾಸದ ಬಗ್ಗೆ, ವಿಜ್ಞಾನದ ಬಗ್ಗೆ , ಸಂಸ್ಕೃತಿಯ ಬಗ್ಗೆ, ನೀವು ಯಾವುದೇ ವಿಷಯ ಕೊಡಿ ಅದರಬಗ್ಗೆ  ಅಧಿಕೃತವಾಗಿ ಮಾತನಾಡಬಲ್ಲ ಜ್ಞಾನ ಭಂಡಾರ ನನ್ನೆದುರು ತೆರೆದುಕೊಂಡಿತ್ತು,  ಆ ಜ್ಞಾನ ಭಂಡಾರ ಕಂಡು ವಿಸ್ಮಿತನಾಗಿ ನನ್ನನ್ನೇ ನಾನು ಮರೆತು, ಅವರ ಜ್ಞಾನಕ್ಕೆ ಶರಣಾಗಿದ್ದೆ,. 



ನಗುವಿನಲ್ಲಿ  ಅಮೃತ ಬೆರತಿತ್ತು

ವಯಸ್ಸಿನ ಬೇದವಿಲ್ಲದೆ , ಅಪರಿಚಿತರೆಂಬ ಭಾವನೆಯಿಲ್ಲದೆ ನಿಷ್ಕಲ್ಮಶವಾಗಿ  ಪ್ರೀತಿಯಿಂದ ಮಾತನಾಡುತ್ತಾ  "ಕಣ್ಣನ್ ಮಾಮ "  ನಮ್ಮ ಹೃದಯದಲ್ಲಿ ನೆಲೆಸಿಬಿಟ್ಟರೂ ,  ಅವರ ನಾಲಿಗೆಯ ಮೇಲೆ ಸರಸ್ವತಿ ನಲಿದಾಡುತ್ತಿದ್ದಳು , ಮಾತುಗಳಲ್ಲಿ ಜೇನಿನ ಸಿಹಿಯಿತ್ತು, ಕಣ್ಣಿನಲ್ಲಿ ವಾತ್ಸಲ್ಯ ವಿತ್ತು, ನಗುವಿನಲ್ಲಿ  ಅಮೃತಬೆರೆತಿತ್ತು , ಅದನ್ನು ಕೇಳುತ್ತಾ  ನಮ್ಮ ಆ ಕ್ಷಣಗಳು ಜೀವನದ ಅಮೂಲ್ಯ ಕ್ಷಣಗಳಾಗಿ   ರೂಪಗೊಂಡು ಅಮರತ್ವ ಹೊಂದಿದವು ..


ಜೀವನ  ಇಷ್ಟೇನೆ

ಸುಮಾರು ಎರಡು ತಾಸು ಅವರ ಸನ್ನಿಧಿಯಲ್ಲಿ ಕಳೆಯುವ ಭಾಗ್ಯ ನಮ್ಮದಾಗಿತ್ತು, ಊರಿಗೆ ಹೋಗುವ ಯೋಚನೆ ಮರತೆಹೊಗಿತ್ತು, ಕನ್ನಡ ನಾಡಿನಲ್ಲಿ ಒಂದು ಜೀವ ಕನ್ನಡ ಭಾಷೆಯ ರಾಯಭಾರಿಯಾಗಿ ಇಷ್ಟೊಂದು ಸಮರ್ಥವಾಗಿ ಹೆಮ್ಮೆಯಿಂದ  ನಮ್ಮೊಡನೆ ಇರುವುದು ನಮ್ಮ ಕನ್ನಡ ತಾಯಿಯ ಪುಣ್ಯ ಎನ್ನುವ ಭಾವನೆ ಮೂಡಿತ್ತು . ಇವರ ಕಾಲದಲ್ಲಿ ನಾವು ಜೇವಿಸಿದ್ದೆವಲ್ಲಾ  ಎನ್ನುವ ಹೆಮ್ಮೆ  ನಮ್ಮದಾಗಿತ್ತು.


ಕನ್ನಡ ಪೂಜಾರಪ್ಪನ ಖಡಕ್ ಮಾತುಗಳು

ತಮ್ಮನ್ನು ಕನ್ನಡ ಪೂಜಾರಯ್ಯ  ಎಂದು ಕರೆದುಕೊಳ್ಳುವ , ಮಾತುಗಳನ್ನು ನೇರವಾಗಿ  ಹೇಳುತ್ತಾ  ಹಿರೇಮಗಳೂರಿನಲ್ಲಿ ನೆಲೆಗೊಂಡು  ಕೋದಂಡ ರಾಮನ ಸೇವೆ ಮಾಡುತ್ತಾ , ಕನ್ನಡ ಡಿಂಡಿಮವ ಅನವರತ ಭಾರಿಸುತ್ತಾ  ಹೆಮ್ಮೆಯ ಕನ್ನಡ ಮಗನಾಗಿ , ಕನ್ನಡ ತಾಯಿಯ ಕಿರೀಟದ ಅನರ್ಘ್ಯ ರತ್ನವಾಗಿ ಪ್ರಕಾಶಿಸುತ್ತಾ  ಇರುವ ಈ ಚೇತನದ ದರ್ಶನ ನಮ್ಮ ಬಾಳಿನ ಪುಣ್ಯ ಎಂದು  ಬೀಗುತ್ತಾ , ಹೊರಡಲು ಅಪ್ಪಣೆ ಬೇಡಿದೆವು,


ಜ್ಞಾನ  ಭಂಡಾರ  

ಓ ಹೌದಲ್ವಾ , ನೀವು ಮೈಸೂರಿಗೆ ಹೋಗಬೇಕು ಎನ್ನುತ್ತಾ  ಪ್ರೀತಿಯಿಂದ  ಒಂದು  ಕನ್ನಡ ಪುಸ್ತಕದ ಕಾಣಿಕೆ ನೀಡಿದರು , ಆ ಪುಸ್ತಕದಲ್ಲಿ  ಹಸ್ತಾಕ್ಷರ ನೀಡಿ ನಮ್ಮನ್ನು ಹರಸಿದರು,  ಆಸೆಯಿಂದ  ಅವರು ಬರೆದಿದ್ದು ಏನು  ಅಂತಾ ನೋಡಿದರೆ  ''ಇತಿಹಾಸ ಪ್ರಿಯನಿಗೆ  ಕನ್ನಡ ಪೂಜಾರಿಯ  ಕಾಣಿಕೆ " ಎಂಬ ವಾಕ್ಯ . ಒಂದು ಕ್ಷಣ  ತಬ್ಬಿಬ್ಬಾದೆ ,  ಇತಿಹಾಸದ ಮಹಾ ಸಾಗರದಲ್ಲಿ ಒಂದು ಚಮಚ ಇತಿಹಾಸ  ಕುಡಿದ ನನ್ನನ್ನು  ಇತಿಹಾಸಕಾರ  ಎಂದು ಕರೆದ ಮಹನೀಯರಿಗೆ  ಹೇಗೆ ಕೃತಜ್ಞತೆ ಅರ್ಪಿಸಬೇಕೆಂದು  ತಿಳಿಯದಾಯಿತು. ಅಷ್ಟರಲ್ಲಿ  ಸವಿನೆನಪಿಗಾಗಿ  "ಕಣ್ಣನ್ ಮಾಮ" ಅವರ ಒಂದಷ್ಟು ಚಿತ್ರಗಳನ್ನು ಕ್ಲಿಕ್ಕಿಸುವ ಸೌಭಾಗ್ಯ ನನ್ನದಾಯಿತು.



ಕನ್ನಡ ಹೃದಯದ ಭಾಷೆ  

ಕಾಣುವ ಕನಸು ಕನ್ನಡದ್ದೆ

ಬನ್ನಿ ಕನ್ನಡಿಗರಾಗಿ

ಕಳೆದ ೦೯ ಸಂಚಿಕೆಯಿಂದ  ಈ ಪ್ರವಾಸದ ಅನುಭವವನ್ನು ನಿಮ್ಮೊಡನೆ ಹಂಚಿಕೊಂಡ ನಾನು  ಈ ಸಂಚಿಕೆಯಲ್ಲಿ ನಾ ಕಂಡ ಮಹನೀಯರೊಬ್ಬರ ಬಗ್ಗೆ ಈ ಸಂಚಿಕೆಯಲ್ಲಿ ಬರೆಯುವ ಸಂತಸ  ಹೇಳಲು ಅಸಾಧ್ಯವಾಗಿದೆ, ಹಾಸನ ,ಚಿಕ್ಕಮಗಳೂರು ಜಿಲ್ಲೆಯ  ಪ್ರವಾಸದಲ್ಲಿ  ಈ ಅನುಭವ ನನ್ನ ಜೀವಮಾನದ  ಅತ್ಯಂತ ಅಮೂಲ್ಯವಾದದ್ದು , ಹಿರೇಮಗಳೂರು ಕಣ್ಣನ್   ಅವರ ಜ್ಞಾನ ಎಲ್ಲರಿಗೂ ಅನವರತ ಸಿಗಲಿ ಎಂಬ ಹಾರೈಕೆ ಯೊಂದಿಗೆ ನನ್ನ  ಪ್ರವಾಸ ಸರಣಿಯ  ಕೊನೆಯ ಸಂಚಿಕೆ  ಮುಕ್ತಾಯ ಮಾಡುತ್ತೇನೆ , ಈ ಪಯಣದ  ಹಾದಿಯಲ್ಲಿ ಜೊತೆಯಾಗಿ ಬಂದ ನಿಮ್ಮೆಲ್ಲರಿಗೂ  ಪ್ರೀತಿಯ ಶುಭ ಕಾಮನೆಗಳು



















Sunday, January 26, 2014

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...9 ಬಾರಪ್ಪಾ ಬಾ ಎಂದು ಕರೆದಿತ್ತು ಬಾ ಬಾ ಬುಡನ್ ಗಿರಿ .!

ಹೊನ್ನಮ್ಮ ದೇವಿ


ಕಳೆದ ಸಂಚಿಕೆಯಲ್ಲಿ ಮುಳ್ಳಯ್ಯನ ಗಿರಿ , ಸೀತಾಳ ಮಲ್ಲಿಕಾರ್ಜುನ  ಬೆಟ್ಟಕ್ಕೆ ಹೋಗಿದ್ದು ನಿಮಗೆ ಗೊತ್ತು, ಬನ್ನಿ ನಮ್ಮ ಮುಂದಿನ ಪಯಣಕ್ಕೆ ಸಿದ್ದರಾಗಿ , ಮುಂದೆ ಹೊರಟ   ನಾವು ತಲುಪಿದ್ದು "ಹೊನ್ನಮ್ಮನ ಹಳ್ಳ"  ಎಂಬ ಸಣ್ಣ ಜಲಪಾತ ದ ದರ್ಶನಕ್ಕೆ , ಮುಳ್ಳಯ್ಯನ  ಗಿರಿಯಿಂದ ಬಾ ಬಾ ಬುಡನ್ ಗಿರಿಗೆ ತೆರಳುವ ದಾರಿಯಲ್ಲಿ ಅತ್ತಿಗುಂಡಿ ಎಂಬ ಊರು ಸಿಗುತ್ತದೆ , ಅದರ ಸನಿಹದಲ್ಲೇ ಇದೆ ಈ "ಹೊನ್ನಮ್ಮನ ಹಳ್ಳ"  ಜಲಪಾತ , ಸಾಮಾನ್ಯವಾಗಿ ಚಿಕ್ಕ ಮಗಳೂರಿನ  ಪ್ರೇಕ್ಷಣೀಯ  ಸ್ಥಳ   ವಿವರವಾಗಿ ನೋಡಲು  ಪ್ರತೀ ಸ್ಥಳಕ್ಕೂ  ದಿನಗಳೇ ಬೇಕಾಗುತ್ತದೆ , ನಮಗೆ ಇದ್ದ ಅಲ್ಪ ಸಮಯದಲ್ಲೇ   ಇವುಗಳನ್ನು ನೋಡಬೇಕಾದ ಕಾರಣ ಹೆಚ್ಚು ವಿಚಾರ ಕೆದಕಲು ಆಗಲಿಲ್ಲ ಹಾಗು ನೋಡಲೂ ಸಹಾ  ಅವಕಾಶ ಸಿಗಲಿಲ್ಲ . 



ಹೊನ್ನಮ್ಮನ ಹಳ್ಳ  ಸೇತುವೆ



ಹೊನ್ನಮ್ಮ ದೇವಿ ದರ್ಶನ



"ಹೊನ್ನಮ್ಮನ ಹಳ್ಳ " ಪಶ್ಚಿಮ ಘಟ್ಟದ ಬೆಟ್ಟ  ಗುಡ್ಡ ಗಳಿಂದ ಹರಿದು ಬರುವ ಜರಿ ಗಳಿಂದ ಹರಿದು ಬರುವ ಜಲಧಾರೆ ಅಷ್ಟೇ , ಪ್ರತೀ ಪ್ರದೇಶಕ್ಕೂ , ಅದು ಕಾನನವೇ  ಆಗಿರಲಿ ಅಥವಾ ನಾಡೆ ಆಗಿರಲಿ , ಅಲ್ಲಿನ ಜನರ ನಂಬಿಕೆಗೆ  ತಕ್ಕಂತೆ ಅಲ್ಲಿ ಒಂದು ಶಕ್ತಿ ದೇವತೆ  ಇರುವುದನ್ನು ಕಾಣಬಹುದು , ಈ ಪ್ರದೇಶದಲ್ಲಿ ಅಲ್ಲಿನ ಸ್ಥಳೀಯ ಜನರ ಆರಾಧ್ಯ ದೇವತೆ ಹೊನ್ನಮ್ಮ  ಅದರಂತೆ ಅಲ್ಲಿ ದುಮ್ಮಿಕ್ಕುವ ಜಲಪಾತಕ್ಕೆ  ಹೊನ್ನಮ್ಮನ  ಹಳ್ಳ ಎಂದು  ಕರೆದಿದ್ದಾರೆ . ನಿಸರ್ಗದಿಂದ  ಬರುವ ಈ  ಜಲಪಾತದ ನೀರನ್ನು ಸಾರ್ವಜನಿಕರು  ದಾಟಿ ಓಡಾಡಲು ಅಂದಿನ ಮೈಸೂರು ಸರ್ಕಾರ  ಇಲ್ಲಿ ಒಂದು ಸೇತುವೆ ನಿರ್ಮಾಣ ಮಾಡಿದೇ .



ಹೊನ್ನಮ್ಮನ ಹಳ್ಳದ  ನೋಟ



ನೀರಲ್ಲಿ ಮಿಂದು ಪುನೀತರಾಗಿ

ಪಯಣದ  ಹಾದಿಯಲ್ಲಿ  ಈ ಜಲಪಾತದಲ್ಲಿ ಮಿಂದು  ಆಯಾಸ ಪರಿಹರಿಕೊಳ್ಳಲು ಈ ಸ್ಥಳ  ಒಳ್ಳೆಯದು , ಈ ಹಾದಿಯಲ್ಲಿ ಪಯಣಿಸುವ ಪ್ರವಾಸಿಗಳು  ಇಲ್ಲಿ ಇಳಿಯದೆ ಮುಂದೆ ಹೋಗಲು ಸಾಧ್ಯವೇ ಇಲ್ಲ. ಹಸಿರ ಸಿರಿಯ ನಡುವೆ ಹಿತವಾದ  ವಾತಾವರಣ ಇರಲು ಹೊನ್ನಮ್ಮನ ಹಳ್ಳ ಜಲಪಾತ  ನಿಮಗೆ ಸೌಂದರ್ಯದ  ದರ್ಶನ ಮಾಡಿಸುತ್ತದೆ . ನಾವಿಲ್ಲಿ ಸ್ವಲ್ಪ ಸಮಯ ಕಳೆದು ಉಲ್ಲಾಸದಿಂದ   ಬಾ ಬಾ ಬುಡನ್ ಗಿರಿಯ ನೋಡಲು ತೆರಳಿದೆವು,



ರಸ್ತೆಯಲ್ಲದ  ರಸ್ತೆ
ಹದಗೆಟ್ಟ  ಹಾದಿಯಲ್ಲಿ ಬಸವಳಿದ ವಾಹನಗಳು



ಬಾ ಬಾ   ಬುಡನ್ ಗಿರಿ ಕಡೆಗೆ ಹೊರಟ ರಸ್ತೆ ನಮಗೆ ಕಾರಿನಲ್ಲಿ ಕುಲುಕಾಡುತ್ತಾ ಸಾಗುವ ಅವಕಾಶ ನೀಡಿತು, ಹೌದು ಸರ್ ಹದಗೆಟ್ಟ  ರಸ್ತೆ ನಮ್ಮ  ದೇಹದ ಪ್ರತೀ ಭಾಗವನ್ನೂ  ಕುಲುಕಾಡುತ್ತಾ ತನ್ನ ಪ್ರತಾಪ ಮೆರೆದಿತ್ತು, ಹದಗೆಟ್ಟ  ಹಾದಿಯಲ್ಲಿ ಏಗಲಾರದೇ  ಬಸವಳಿದು  ಕೆಟ್ಟು ನಿಂತ ಹಲವಾರು ವಾಹನಗಳು  ಯಾರನ್ನೋ ಶಪಿಸುತ್ತ  ನಿಂತಿದ್ದವು . ಹಸಿರ ಹೊದ್ದ ಬೆಟ್ಟಗಳ  ನಡುವೆ  ಸಾಗಿದ್ದ  ಹದಗೆಟ್ಟ  ರಸ್ತೆಯಲ್ಲಿ  ಬಾ ಬಾ  ಬುಡನ್ ಗಿರಿ  ನೋಡುವ ಉತ್ಸಾಹ ಕರಗಿಹೊಗುತ್ತಿತ್ತು.



ಹಸಿರ  ನಡುವೆ  ಹಾದಿಯ ಚೆಲುವು




ಈ ಚಿತ್ರ ಹೇಗಿದೆ ...?

ಇಲ್ಲಿ ನಾವೆಲ್ಲ ಹೀರೋಗಳೇ

ಅಂತೂ ಇಂತೂ  ಹಾದಿಯ ಮದ್ಯದಲ್ಲಿ ಒಂದು ಕಡೆ ನಿಂತೆವು, ಹ ಹೌದು ಇಲ್ಲಿಂದ ಮುಂದೆ ರಸ್ತೆ ದುರಸ್ತಿ ನಡೆಯುತ್ತಿದ್ದ  ಕಾರಣ , ನಮ್ಮ ವಾಹನ ಅಲ್ಲೇ ಬಿಟ್ಟು,  ಮುಂದಕ್ಕೆ  ಅಲ್ಲಿನ ಸ್ಥಳೀಯರು  ಪ್ರವಾಸಿಗಳನ್ನು ಕರೆದೊಯ್ಯಲು  ಏರ್ಪಡಿಸಿದ್ದ  ಬೈಕ್  ಗಳಲ್ಲಿ ಅಥವಾ  ಜೀಪು ಗಳಲ್ಲಿ  ತೆರಳಬೇಕಾಗಿತ್ತು ,ನಾವು ಅಲ್ಲಿಗೆ ತಲುಪಿದಾಗ ಸಿಕ್ಕ ಒಂದು ಬೈಕ್  ನಲ್ಲಿ   ಆಗಲೇ ಒಬ್ಬರು ತೆರಳಿದ್ದರು,  ಅಗ ಅ ಬೈಕ್ ನವರು  ಸರ್ ಹಾಗೇ  ಬರ್ತಾ ಇರಿ ನಾನು  ಇವರನ್ನು ಬಿಟ್ಟು ಮತ್ತೊಂದು ಬೈಕ್ ಜೊತೆ ಬರುವೆ ಎಂದು ಹೇಳಿದ  ಮಾತನ್ನು ಕೇಳಿ ಸ್ವಲ್ಪ ದೂರ ನಡೆಯಲು ಶುರು ಮಾಡಿದೆವು, ಸಾಗುತ್ತಿರುವ  ಹಾದಿಯಲ್ಲಿ  ಫೋಟೋ ಕ್ಲಿಕ್ಕಿಸುತ್ತ  , ಕ್ಲಿಕ್ಕಿಸಿದ  ಫೋಟೋಗಳ  ಬಗ್ಗೆ ತೃಪ್ತಿ ಪಡುತ್ತಾ   ಹೋಗುತ್ತಿದ್ದೆವು,  ದಾರಿಯಲ್ಲಿ ಎದುರು ಬಂದ ಒಂದುಜೀಪಿನಲ್ಲಿ  ಸುಮಾರು ಇಪ್ಪತ್ತು ಜನ  ಬರುತ್ತಿದ್ದರು, ಒಂದಷ್ಟು ಜನರು  ತಾವು ಯಾರಿಗೂ ಕಮ್ಮಿ ಇಲ್ಲಾ  ಅಂತ  ಜೀಪಿನ ಮೇಲ್ಭಾಗದಲ್ಲಿ  ,ಬಾನೆಟ್  ಮೇಲೆಲ್ಲಾ  ಕುಳಿತು  ಬರುತ್ತಿದ್ದರು,  ಸ್ವಲ್ಪ ಎಡವಟ್ಟು ಅದರೂ  ಇವರ ಕಥೆ ಗೋವಿಂದ ಆಗ್ತಿತ್ತು, ಕೆಲವೊಮ್ಮೆ  ನಾವು ಯಾಕೆ ಹೀಗೆ ಆಡ್ತೀವಿ ಎನ್ನುವ  ಪ್ರಶ್ನೆ ಹುಟ್ಟಿತು,  ಆದರೆ   ಮನಸು  ಅವರ ಇಷ್ಟಾ , ಅವರ ಕಥೆ  ನೀನ್ಯಾರು ಕೇಳೋಕೆ  ಅಂತ ಬುದ್ದಿ ಹೇಳಿತು , ಬುದ್ದಿ ಹೇಳಿದ್ರೆ ಕೇಳುವವರು ಯಾರು ?   ನಸು ನಕ್ಕು ಮುಂದೆ ಹೋದೆ , ಅಷ್ಟರಲ್ಲಿ ನಮ್ಮನ್ನು  ಕರೆದೊಯ್ಯಲು  ಎರಡು ಬೈಕ್ ಗಳು ಬಂದವು,   ಅವುಗಳನ್ನು ಹತ್ತಿ ತಲುಪಿದ್ದು  ದತ್ತ ಪೀಠದ ಬಳಿ .


ಬಾ ಬಾ ಬುಡನ್ ಗಿರಿ  ಯಲ್ಲಿನ  ನೋಟ

ಶೀರ್ಷಿಕೆ ಸೇರಿಸಿ


ದತ್ತ ಪೀಠದ ಬಗ್ಗೆ ಎಲ್ಲರಿಗೂ ಗೊತ್ತು,  ಇದು ಹಿಂದೂ ಹಾಗು ಮುಸಲ್ಮಾನರು  ಇಬ್ಬರಿಗೂ  ನಂಬಿಕೆಯ ತಾಣ . ಬಾ ಬಾ ಬುಡನ್ ಗಿರಿ  ಗಿರಿ ಶ್ರೇಣಿ ಉತ್ತರದ  ಹಿಮಾಲಯ ಹಾಗು  ದಕ್ಷಿಣದ ನೀಲಗಿರಿ ನಡುವೆ  ಬಹು  ಎತ್ತರದ ಗಿರಿ ಧಾಮ , ಇದು  ಸಮುದ್ರ ಮಟ್ಟದಿಂದ  ೬೩೧೭  ಅಡಿ ಎತ್ತರದಲ್ಲಿದೆ  , ಇಲ್ಲಿರುವ ಗುಹೆಗಳಲ್ಲಿ ಸಾಧು  ಸಂತರು ತಪಸ್ಸು ಮಾಡುತ್ತಿದ್ದರೆಂದು   ನಂಬಲಾಗಿದೆ . ನಮ್ಮ ದೇಶಕ್ಕೆ ಕಾಫಿ  ಬೀಜದ  ಆಗಮನ ಇಲ್ಲಿಂದಲೇ ಅಯಿತೆಂಬ  ಹೆಗ್ಗಳಿಕೆ ಇದೆ, ಕೆಲವು ಧಾರ್ಮಿಕ  ಕಾರಣಗಳ  ಬಗ್ಗೆ  ಗೊಂದಲ ಇರುವ ಕಾರಣ , ಪ್ರವಾಸಿಗಳನ್ನು  ಹತ್ತಿರ ಹೋಗಲು ಬಿಡಲಿಲ್ಲ, ದೂರದಲ್ಲೇ ನೋಡಿ ಬರಬೇಕಾಯಿತು,   ಅಲ್ಲೇ ಇದ್ದ ಒಂದು ಜೀಪನ್ನು  ಬಾಡಿಗೆಗೆ ಪಡೆದು ಮಾಣಿಕ್ಯ ಧಾರಾ  ಜಲಪಾತ ನೋಡಲು  ಹೊರಟೆವು .


ಮಾಣಿಕ್ಯ ಧಾರಾ ಕಡೆಗೆ ತೆರಳುವ ಹಾದಿ

ವೀಕ್ಷಣ  ಗೋಪುರ

ಸೂಚನೆಗೆ  ಬೆಲೆ ಎಲ್ಲಿ

ಮಾಣಿಕ್ಯ ದಂತೆ  ಬೀಳುತ್ತಿತ್ತು  ಜಲಪಾತ

ಗಿಡ ಮೂಲಿಕೆ


ಮತ್ತೆ ಅದೇ ಹಸಿರ ಹೊದ್ದ ಬೆಟ್ಟಗಳ ದರ್ಶನ , ನಡುವೆ ಸಾಗಿದ್ದ  ಕಚ್ಚಾ  ಹಾದಿಯಲ್ಲಿ ಅಡ್ಡಾ  ದಿಡ್ಡಿ ಚಲಿಸಿದ್ದ   ಜೀಪು,  ಆಗಲೇ ಮುಸ್ಸಂಜೆಯ ಮಬ್ಬು ಕವಿಯುತ್ತಿತ್ತು,   ಬೇಗ ಬೇಗ  ಗಡಿಬಿಡಿಯಿಂದ ತೆರಳಿದ ನಾವು ಮಾಣಿಕ್ಯ ಧಾರಾ  ಜಲಪಾತಕ್ಕೆ  ಓಡಿದೆವು , ನಮಗಿಂತಾ ವೇಘವಾಗಿ ಕತ್ತಲೆ ಕವಿಯುತ್ತಿತ್ತು, ಅದರೂ ಮಾಣಿಕ್ಯ ಧಾರಾ  ಜಲಪಾತ  ನೋಡೇ ಬಿಟ್ಟೆವು,  ಅಲ್ಪ ಸ್ವಲ್ಪ ಉಳಿದಿದ್ದ ಮಬ್ಬು ಬೆಳಕಿನಲ್ಲಿ  ಜಲಪಾತದ  ಚಿತ್ರ ತೆಗೆದು, ಜಲಪಾತದ ನೀರನ್ನು ಸ್ಪರ್ಶಿಸಿ  ಖುಷಿಪಟ್ಟೆವು, ಮುಖಕ್ಕೆ ನೀರನ್ನು ಹಾಕಿ ತೊಳೆದೊಡನೆ ನವ ಚೈತನ್ಯ ಬಂತು , ನಮ್ಮ ಪ್ರವಾಸದ  ಎರಡನೇ ದಿನದ  ಅಂತಿಮ  ಸ್ಥಳ ಇದಾಗಿತ್ತು . ಮೆಟ್ಟಿಲು ಹತ್ತಿಮೇಲೆ ಬಂದ ನಾವು  ಮರಳಿ ಜೀಪಿಗೆ ಬರುವ  ಹಾದಿಯಲ್ಲಿ  ಕಂಡ ಗಿಡ ಮೂಲಿಕೆಗಳ ಅಂಗಡಿ  ಕೈ  ಬೀಸಿ ಕರೆದಿತ್ತು, ಆದರೆ  ಅದನ್ನು ನೋಡುವ ತಾಳ್ಮೆ ಇಲ್ಲದೆ   ವಾಪಸ್ಸು ಬರಬೇಕಾಯಿತು,



ಮತ್ತೆ ಜೀಪಿನಲ್ಲಿ ಸ್ವಸ್ಥಾನ ಸೇರಿ ನಮ್ಮ ಕಾರನ್ನು  ಸೇರಿಕೊಂಡು  ಚಿಕ್ಕಮಗಳೂರಿಗೆ  ಬಂದು ತಲುಪಿದೆವು, ಅಲ್ಲಿಂದ ಮೈಸೂರಿಗೆ ಬರುವ ಹಾದಿಯಲ್ಲಿ   ಹಿರೆಮಗಳೂರಿನಲ್ಲಿ  ಚಿನ್ಮೈ ಭಟ್ ಬಿಡುವ  ಕಾರ್ಯಕ್ರಮ  ಇತ್ತು,  ಅಲ್ಲೇ ಕಾದಿತ್ತು, ನನ್ನ ಜೀವನದ ಕನಸು ನನಸಾಗುವ  ಒಂದು  ಸನ್ನಿವೇಶ ......... !!?

































































Sunday, January 12, 2014

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...8 ಮುಳ್ಳಯ್ಯನ ಗಿರಿ ಕಂಡ ಮನ ಹಿಗ್ಗಿತು ಹಿರಿ ಹಿರಿ

ಕಾಫಿ ತೋಟದ ನಡುವೆ ಸಾಗಿದ ರಸ್ತೆ



ಚಿಕ್ಕಮಗಳೂರಿನಲ್ಲಿ   ಈ ಟೌನ್ ಕ್ಯಾಂಟೀನ್  ತನ್ನದೇ ಆದ   ಹೆಗ್ಗಳಿಕೆ ಹೊಂದಿದೆ , ಇಲ್ಲಿನ  ತಿಂಡಿ ತಿನಿಸಿನ ಬಗ್ಗೆ ಅಂತರ್ಜಾಲದಲ್ಲಿ ಬಹಳಷ್ಟು ಜನ  ಬರೆದಿದ್ದಾರೆ , ಇಲ್ಲಿನ  ವಿವಿಧ ಬಗೆಯ ದೊಸೆಗಳಿಗೆ  ಬಹಳ ಜನ ಅಭಿಮಾನಿಗಳಿದ್ದಾರೆ, ಆದರೂ ಟೌನ್ ಕ್ಯಾಂಟೀನ್ ತನ್ನದೇ  ರೀತಿಯಲ್ಲಿ ಸದ್ದಿಲ್ಲದೇ  ಇಲ್ಲಿಗೆ ಬರುವ ಪ್ರವಾಸಿಗಳಿಗೆ  ಒಳ್ಳೆಯ ತಿಂಡಿ ತಿನಿಸು ನೀಡುತ್ತಿದೆ . ನಾನಂತೂ ಚಿಕ್ಕಮಗಳೂರಿಗೆ ಬಂದ್ರೆ  ಇಲ್ಲಿಗೆ ಬರದೆ ಹೋಗೋದಿಲ್ಲ, ಇಲ್ಲಿ ಗೆ  ಬಂದ ನಾವು ಹೊಟ್ಟೆ ತುಂಬಾ  ಉಪಹಾರ ಮೈಯ್ದು , ಪಾರ್ಸೆಲ್  ಮಾಡಿಸಿಕೊಂಡು   ಮುಂದಿನ ಪಯಣಕ್ಕೆ ಸಜ್ಜಾದೆವು ... ನಮ್ಮ  ಪಯಣ ಸಾಗಿತು 'ಮುಳ್ಳಯ್ಯನ ಗಿರಿ''  ಕಡೆಗೆ . ....!!! ಮತ್ತೊಂದು ವಿಚಾರ  ಚಿಕ್ಕಮಗಳೂರಿನಲ್ಲಿ  ನಮಗೆ ಪರಿಚಯವಾದ ಚಿನ್ಮಯ್ ಭಟ್ ಗೆಳೆಯ "ದರ್ಶನ್" ನಮ್ಮ ಜೊತೆಗೂಡಿದರು , ಪ್ರವಾಸಕ್ಕೆ ಮತ್ತಷ್ಟು ಕಳೆ  ಬಂದಿತು.


ಹಸಿರ ಹೊದ್ದ  ಭೂರಮೆ

ಚಿಕ್ಕಮಗಳೂರಿನಿಂದ   ಮುಳ್ಳಯ್ಯನ ಗಿರಿಗೆ  ೨೨ ಕಿಲೋಮೀಟರ್ ದೂರವಿದೆ, ಕಡೂರು ರಸ್ತೆಯಲ್ಲಿ ಸಾಗಿ ಮುಂದೆ ದೊರೆಯುವ ಒಂದು  ಕವಲು  ರಸ್ತೆಯಲ್ಲಿ  ಎಡಕ್ಕೆ ಚಲಿಸಿದರೆ   ಮುಳ್ಳಯ್ಯನ ಗಿರಿಗೆ ಕರೆದೊಯ್ಯುತ್ತದೆ , ಕಿರಿದಾದ  ರಸ್ತೆ ಕಾಫಿ ತೋಟದ ನಡುವೆ  ಸಾಗುತ್ತದೆ , ಜೊತೆಯಲ್ಲೇ ಸುಂದರ  ದೃಶ್ಯಗಳ ಸರಮಾಲೆ ಎಲ್ಲರನ್ನೂ     ಸ್ವಾಗತಿಸುತ್ತದೆ .. ನಮ್ಮ ಕ್ಯಾಮರ  ಹಸಿದ  ಹುಲಿಯಂತೆ  ಕಂಡ ಸುಂದರ ದೃಶ್ಯಗಳನ್ನು ಸೆರೆಹಿಡಿತು  ಹೊಟ್ಟೆಗೆ   ತುಂಬಿಕೊಳ್ಳುತ್ತಿತ್ತು .


ರಸ್ತೆ  ತುಂಬಾ ಬರುವ  ಇವರನ್ನು ದಾಟುವುದು ಹೇಗೆ


ಸದ್ದಿಲ್ಲದೇ ನಮ್ಮ ಪಯಣ ಸುಂದರ ಗಿರಿ ಪಂಗ್ತಿಗಳ  ನಡುವೆ ಸಾಗಿತ್ತು, ಕಿರಿದಾದ ರಸ್ತೆಯಲ್ಲಿ  ಎದುರುಗಡೆ  ಭಾರಿವಾಹನ ಬಂದಾಗ ನಮ್ಮ ಕಾರಿನ  ಚಾಲಕ ಚಾಕಚಕ್ಯತೆ ಕಾರನ್ನು   ಪಕ್ಕಕ್ಕೆ ಸರಿಸಿ   ನುಗ್ಗಿಸಿ  ಬಿಡುತ್ತಿದ್ದ , ಕೆಲವೊಮ್ಮೆ ಎರಡೂ ವಾಹನಗಳೂ ತಾವೇ  ಹಿಂದೆ ತಾವೇ  ಮುಂದೆ ಸರಿದು ಅನುಸರಣೆ ಮಾಡಿಕೊಂಡು ಚಲಿಸುತ್ತ   ಮುಂದೆ ಹೋಗುತ್ತಿದ್ದವು


ಯಾವ  ಕಲೆಗಾರನ  ಕೈಚಳಕ  ಇದು

ಹಸಿರ ಮಡಿಲಲ್ಲಿ  ಗಿರೀಶ್

ಪಯಣ ಸಾಗುತ್ತಾ   ಮುಳ್ಳಯ್ಯನ  ಗಿರಿ ಕಾಣುವ  ಅಸೆ  ಹೆಚ್ಚುತ್ತಿತ್ತು .  ನಾವೋ  ಒಳ್ಳೆಯ ದೃಶ್ಯ ಕಂಡೊಡನೆ  ಕಾರು ನಿಲ್ಲಿಸಿ   ಸ್ವಲ್ಪ ಕಣ್ಣು ತಂಪು ಮಾಡಿಕೊಂಡು , ಫೋಟೋ ಕ್ಲಿಕ್ಕಿಸಿ  ಮುಂದು ವರೆಯುತ್ತಿದ್ದೆವು,ಕೆಲವೊಮ್ಮೆ ಬಹಳ ಹೊತ್ತು ನಿಲ್ಲುವ  ಆಸೆ ಆಗುತ್ತಿತ್ತು,  ಆದರೆ ಹಸಿರ ಬೆಟ್ಟಗಳ  ಸವರಿಕೊಂಡು  ಬರುತ್ತಿದ್ದ ತಣ್ಣನೆ ಗಾಳಿ  ಮನಸನ್ನು ಪುಳಕ ಗೊಳಿಸುತ್ತಿತ್ತು,  ಶುದ್ದ ಗಾಳಿಯನ್ನು  ಸೇರಿಸಿಕೊಂಡ  ದೇಹ  ಉತ್ಸಾಹದಿಂದ ಪುಟಿಯುತ್ತಿತ್ತು,  ಜೊತೆಗೆ  ಕುರುಕಲು ತಿಂಡಿಯ  ರುಚಿ  ನಾಲಿಗೆ  ಯ ಮೇಲೆ ನರ್ತನ  ಮಾಡುತ್ತಿತ್ತು .


ಸುಂದರ ಅತೀ ಸುಂದರ

ಒಂದು ಸುಂದರ  ನೋಟ

ಮತ್ತೆ ಮುಂದೆ ಹೋದ ನಮಗೆ   ಶಿಖರದ  ಮೇಲೆ ಮೇಲೆ ಹೋದಂತೆ   ಪ್ರಕೃತಿಯ  ಚಿತ್ರ ಬದಲಾಗುತ್ತಿತ್ತು ,  ಹಸಿರು ಗಿರಿ, ಕೆಂಪು ಮಣ್ಣಿನ  ನೋಟ , ಕೆಂಪು ಮಣ್ಣಿನ  ರಂಗೋಲಿ,  ನೀಲಿಯ ಅಗಸ , ಜೊತೆಗೆ  ನಲಿಯುತ್ತ ಸಾಗಿದ್ದ ಕೆಲವು ಪ್ರವಾಸಿಗರು  ಇವುಗಳು ಒಳ್ಳೆಯ  ದರ್ಶನ ನೀಡಿತು , ಇಂತಹ ಪರಿಸರದಲ್ಲಿ  ಯಾರ ಮನಸು  ಸಂತಸದಿಂದ  ಅರಳೋಲ್ಲ ಹೇಳಿ,  ನಾವೂ ಸಹ ನಮ್ಮ ವಯಸನ್ನು ಮರೆತು  ನಲಿದಾಡಿದೆವು .



ಮುಳ್ಳಯ್ಯನ  ಗಿರಿ ದರ್ಶನ

ಮುಳ್ಳಯ್ಯನ  ಗಿರಿಯ ಮತ್ತೊಂದು ನೋಟ


ಅಗೋ ಅಲ್ಲೇ ಕಾಣಿಸಿತು ಮುಳ್ಳಯ್ಯನ  ಗಿರಿ , ಹ ..... ಹೌದು  ಮುಳ್ಳಯ್ಯನ ಗಿರಿಗೆ ಬಂದೆ ಬಿಟ್ಟೆವು,  ಕಾರ್  ಇಳಿದರೆ ದೂರದಿಂದ  ಒಳ್ಳೆಯ ನೋಟ ಸಿಕ್ಕಿತು,  ಪ್ರವಾಸಕ್ಕೆಂದು ಬಂದ ಜನರು ಇರುವೆಗಳ ಹಾಗೆ  ಬೆಟ್ಟವನ್ನು  ಹತ್ತುತ್ತಿದ್ದರು, ಕೆಲವರು ಇಳಿಯುತ್ತಿದ್ದರು, ಹಸಿರ ಹೊದ್ದ ಗಿರಿಯ ಮೇಲೆ ಬಣ್ಣ ಬಣ್ಣ ದ ಬಟ್ಟೆ ತೊಟ್ಟ ಜನರು   ಬಣ್ಣದ ರಂಗು   ಬಳಿದಿದ್ದರು . ಗಿರಿಯ ಮೇಲೆ ಕಲ್ಲಿನಿಂದ  ನಿರ್ಮಿತವಾದ ಒಂದು ಕೋಟೆಯ ಗೋಡೆ ಕಾಣುತ್ತಿತ್ತು . ಮೆಟ್ಟಿಲುಗಳನ್ನು ಹತ್ತುವ ಮೊದಲು ಕ್ಯಾಮರ  ಲೆನ್ಸ್  ಜೋಪಾನ ಪಡಿಸುತ್ತಾ  , ಮೆಟ್ಟಿಲುಗಳ ಬಳಿ ಸಾಗಿದೆವು,


ಗಿರಿಯ ಮೇಲೆ  ವಿಶ್ರಾಂತಿ ಗೋವುಗಳಿಗೂ  ಪ್ರೀತಿ


ನಮ್ಮ ಕರುನಾಡ  ಚೆಲುವು

ಮೆಟ್ಟಿಲು ಹತ್ತುತ್ತಾ , ಸುಂದರ್ ಪ್ರಕೃತಿಯನ್ನು   ಅಸ್ವಾದಿಸುತ್ತಾ , ನಡೆದೆವು ಅಲ್ಲೇ ಸನಿಹದಲ್ಲಿ ಗಿರಿಯ ಮೇಲೆ ಒಂದಷ್ಟು ಹಸುಗಳ ಗುಂಪು ವಿಶ್ರಾಂತಿ ಪಡೆದಿತ್ತು,  ಪಕ್ಕದಲ್ಲೇ  ಹಸಿರ ಹೊದ್ದ ಬೆಟ್ಟಕ್ಕೆ   ನೀಲಿಯ  ಅಗಸ  ಹಿನ್ನೆಲೆ ನೀಡಿತ್ತು, ಯಾವುದೇ   ಕಸ ವಿಲ್ಲದೆ  ಶುಭ್ರವಾದ ಪರಿಸರ ಮನ ಸೂರೆಗೊಂಡಿತ್ತು




ಮಂಟಪ ದೊಳಗೆ ಕುಳಿತ  ಬಸವ



ಗುಹೆಯೊಳಗೆ  ಗೆಳೆಯರು



ಗುಹೆಯ ಒಂದು ನೋಟ




ಮುಳ್ಳಯ್ಯನ  ಗಿರಿಯ  ತುದಿಯ ತಲುಪಿದ ನಾವು ಅಲ್ಲಿನ ಗದ್ದುಗೆ  ಮಂಟಪದಲ್ಲಿನ  ಬಸವ , ಗುಹೆ ಇವುಗಳನ್ನು ದರ್ಶನ ಮಾಡಿದೆವು, ಇಲ್ಲಿರುವುದು ಒಂದು ಶೈವ  ಸಮುದಾಯಕ್ಕೆ ಸೇರಿದ ಒಂದು ಗದ್ದುಗೆ , ಹೆಚ್ಚಿನ ವಿಚಾರ ಎಲ್ಲಿಯೂ ದಾಖಲಾಗಿಲ್ಲ ಇತಿಹಾಸದ ಪುಟ ತಿರುವಿ ಹಾಕಿದರೂ ಮಹಿತಿ ದೊರಕಲಿಲ್ಲ, ಯಾವುದೇ ಶಾಸನ ದರ್ಶನ್ ಆಗಲಿಲ್ಲ , ಮಂಜಿನ ತೆರೆ  ಬಿಸಿಲಿನ ಜೊತೆ ಆಟ ಆಡುತ್ತಿತ್ತು,  ಸುಂದರ ಪರಿಸರದಲ್ಲಿ ಎಷ್ಟು ಹೊತ್ತು ಕಳೆದರೂ ತರು ಅಸೆ ಪೂರ್ತಿಯಾಗದು , ಆದ್ರೆ ಮತ್ತಷ್ಟು  ನೋಡ್ ಬೇಕಿತ್ತು, ಒಲ್ಲದ ಮನಸಿನಿಂದ  ಹೊರಟೆವು



ಮುಳ್ಳಯ್ಯನ  ಗಿರಿಯಲ್ಲಿ ತೆಗೆದ ಕೊನೆಯ ಚಿತ್ರ


ಮುಂದಿನ ಪಯಣ   ಸೀತಾಳ ಮಲ್ಲಿಕಾರ್ಜುನ  ಬೆಟ್ಟಕ್ಕೆ  ನಮ್ಮ ತಂಡ  ಚಲಿಸಿತು ,  ಹಾದಿಯುದ್ದಕ್ಕೂ  ಮತ್ತೊಮ್ಮೆ ಹಸಿರ ಗಿರಿಯ ಸುಂದರ ದರ್ಶನ , ಮುಳ್ಳಯ್ಯನ ಗಿರಿಯ ನೋಟಗಳ ಚಿತ್ರ ನೆನಪು ಮಾಡಿಕೊಳ್ಳುತ್ತಾ , ಒಬ್ಬರನ್ನು ಒಬ್ಬರು  ತಮಾಷೆ ಮಾಡುತ್ತಾ  ತೆರಳಿದೆವು , ಸೀತಾಳ ಮಲ್ಲಿಕಾರ್ಜುನ ಸ್ವಾಮೀ ದೇಗುಲದ ಸಮೀಪ ನಮ್ಮ  ಕಾರು  ನಿಂತಿತು,



ದೇಗುಲ ದರ್ಶನ
 ಶ್ರೀ ಸೀತಾಳ ಮಲ್ಲಿಕಾರ್ಜುನ ಸ್ವಾಮಿ


ಇಲ್ಲಿ ಬೇರೆಯದೇ ಪರಿಸರ ಬೇರೆ ಇತ್ತು, ಮುಳ್ಳಯ್ಯನ ಗಿರಿಗಿಂತ ಕೆಳ ಪ್ರದೇಶದಲ್ಲಿ  ಇರುವ ಈ ದೇಗುಲ ನೋಡಲು  ಯಾವುದೊ  ಯೂರೋಪಿನ    ಕಟ್ಟಡದಂತೆ  ಕಂಡರೂ ಎರಡು ಗೋಪುರಗಳು ಇದು ದೇವಾಲಯ ಎಂಬುದನ್ನು   ಸಾರುತ್ತವೆ . ಸುತ್ತಲಿನ  ಹಸಿರ ಗಿರಿಗಳ   ಕೋಟೆಯ ನಡುವೆ  ಇಲ್ಲಿ  ಶ್ರೀ ಸೀತಾಳ ಮಲ್ಲಿಕಾರ್ಜುನ ದೇವಾಲಯವಿದೆ , ದರ್ಶನ ಪಡೆದ  ನಾವು  ಹೊರಗೆ ಬಂದೆವು,  ಹೊಟ್ಟೆ ಚುರುಗುಟ್ಟಿತ್ತು ,  ನಮ್ಮ  ಮಧ್ಯಹ್ನ ದ  ಆಹಾರ  ಸೇವನೆ ಸನಿಹದಲ್ಲೇ ಇದ್ದ ಒಂದು ಗುಡ್ಡದ  ಮೇಲೆ ಆಯಿತು,   ಟೌನ್ ಕ್ಯಾಂಟೀನ್ ನಿಂದ  ಪಾರ್ಸೆಲ್  ಮಡಿಸಿಕೊಂಡು ತಂದಿದ್ದ  ತಿಂಡಿ ತಿಂದು  , ಸ್ವಲ್ಪ ವಿಶ್ರಾಂತಿ ಪಡೆದೆವು, ....    ಹೊರಡೋಣ  ಮುಂದಕ್ಕೆ ಲೇಟ್  ಆಗುತ್ತೆ ಎಂದು ಗಿರೀಶ್ ಹೇಳಿದಾಗ  ಗಡಿಬಿಡಿ ಯಿಂದ ಸಿದ್ದರಾಗಿ ಮುಂದೆ ಹೊರಟೆವು,


ಹಾದಿಯಲ್ಲಿ  ಸಿಕ್ಕ  ಸ್ಥಳೀಯ  ಜನರು 


ಮುಂದಿನ ಪಯಣಕ್ಕೆ ಶುಭ ಕೋರುವಂತೆ  ಸಾಗಿತ್ತು, ಕಾಫಿ ತೋಟದ  ಕಾರ್ಮಿಕರ   ಒಂದು  ಗುಂಪು , ತಮ್ಮದೇ ಲೋಕದಲ್ಲಿ ವಿಹರಿಸುತ್ತಾ  ತೆರಳಿದ್ದ  ಅ ಜನರ  ಗುಂಪು ಚಿಕ್ಕಮಗಳೂರಿನ    ಜನರ ದರ್ಶನ ಮಾಡಿಸಿತ್ತು , ನಮ್ಮ ಪಯಣ  .... ಹೊನ್ನಮ್ಮನ  ಹಳ್ಳದ ಕಡೆಗೆ  ಹೊರಟಿತ್ತು . .......... !
 

Tuesday, December 31, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...7 ಬನ್ನಿ ಹಿರೆಮಗಳೂರಿಗೆ ಜ್ಞಾನ ತಾಣದ ಸನ್ನಿಧಿಗೆ

ಬೆಳವಾಡಿಯ ಶ್ರೀ  ವೀರ ನಾರಾಯಣ ಸ್ವಾಮಿ

ಕಳೆದ ಸಂಚಿಕೆಯಲ್ಲಿ ಬೆಳವಾಡಿ ದರ್ಶನ ಮಾಡಿದ  ನಂತರ ಈ ಸಂಚಿಕೆಯಲ್ಲಿ   ಮುಂದೆ ತೆರಳೋಣ  ಬನ್ನಿ,   ಬೆಳವಾಡಿ ದೇಗುಲದ ಸುಂದರ ನೆನಪನ್ನು ಹೊತ್ತು  ಮುಂದೆ ಹೊರಟಿತು , ನಮ್ಮ ತಂಡ . ಬೆಳವಾಡಿಯ  ಸುಂದರ  ಶ್ರೀ  ವೀರ ನಾರಾಯಣ ಸ್ವಾಮಿ  ಮೂರ್ತಿ ಮನದಲ್ಲಿ  ತುಂಬಿಹೋಗಿತ್ತು ..... ! ನಮ್ಮ ತಂಡ  ಹಿರೇಮಗಳೂರಿನ  ಕಡೆಗೆ  ಹೊರಟಿತು .....  ಅಲ್ಲಿ ಕನ್ನಡ ಪೂಜಾರಿ  ಶ್ರೀ ಹಿರೇಮಗಳೂರು  ಕಣ್ಣನ್  ಅವರ  ದರ್ಶನಕ್ಕಾಗಿ  ಮನ  ಹಾತೊರೆಯುತ್ತಿತ್ತು. ....... !!!


ಯಾರ ಕಲ್ಪನೆಯ  ಚಿತ್ರ ಇದು

ನಿಸರ್ಗ ಚಿತ್ತಾರ


ಬೆಳವಾಡಿ ಇಂದ   ಹಿರೇಮಗಳೂರಿಗೆ   ತೆರಳುವ ಹಾದಿಯಲ್ಲಿ    ಬೆಳವಾಡಿಯ ಕೆರೆಯ ದಂಡೆಯ ಮೇಲೆ ಕಾರು ತೆರಳುತ್ತಿತ್ತು, ಬೆಳವಾಡಿಯ  ಕೆರೆಯಲ್ಲಿ ಕಾಣ ಸಿಕ್ಕ ದೃಶ್ಯಗಳು  ಮನಸೆಳೆದವು , ಅಲ್ಲಿನ ಕೆರೆಯಲ್ಲಿ ಆಹಾರಕ್ಕಾಗಿ ನೆಲೆಸಿದ್ದ  ಪಕ್ಷಿಗಳು  , ಅಲ್ಲಿದ್ದ  ಗಿಡಗಳು ಸೃಷ್ಟಿಸಿದ್ದ  ಚಿತ್ತಾರ , ರೇಖಾಗಣಿತದ  ಹಲವು  ಕೋನಗಳ  ದರ್ಶನ  ಮಾಡಿಸಿತ್ತು . ಶಿಲ್ಪ ಲೋಕದಿಂದ  ನಿಸರ್ಗ ಲೋಕದೊಳಗೆ  ವಿಹರಿಸಿದ ಮನ ಹಸಿರಾಯಿತು .  ದಾರಿಯಲ್ಲಿ   "ಕಳಸಾಪುರ " ಗ್ರಾಮ ಸಿಕ್ಕಿತು,  ಅ ಊರಿನ  ಸಣ್ಣ ಪರಿಚಯ ಗಿರೀಶ್ ಮಾಡಿ ಕೊಟ್ಟರು,  ಈ ಊರಿನಲ್ಲಿ  "ಬಂಗಾರದ ಮನುಷ್ಯ" "ಭೂತಯ್ಯನ ಮಗ ಅಯ್ಯು "  ಚಲನ  ಚಿತ್ರಗಳ  ಚಿತ್ರೀಕರಣ ಆಗಿತ್ತೆಂದು ತಿಳಿದು ಬಂತು ,ಹಾಗು  ಕಳಸಾ ಪುರದ  ಹುಡುಗರು ಚಿತ್ರದ  ಚಿತ್ರ ಕಥೆ  ಬರೆದವರು ಈ ಊರಿನ್ವ್ರೆಂದು ತಿಳಿದು ಬಂತು [ ಮಾಹಿತಿ ನೀಡಿದ  ಶ್ರೀಕಾಂತ್ ಮಂಜುನಾಥ್ ರವರಿಗೆ ಧನ್ಯವಾದಗಳು ] ಹೌದು ಈ ಊರಿನ ಪರಿಸರ  ಚಿತ್ರೀಕರಣಕ್ಕೆ ಒಳ್ಳೆಯ ತಾಣವಾಗಿದೆ .  ಅದೂ ಇದು ಮಾತನಾಡುತ್ತಾ  ಹಿರೆಮಗಳೂರಿಗೆ ಬಂದೆ ಬಿಟ್ವಿ .

ಇಲ್ಲಿ ಶ್ರೀ ರಾಮನಿಗೆ ಪರಶುರಾಮ ಶರಣಾಗಿದ್ದಾನೆ



ಸಾರ್ ಹಿರೇಮಗಳೂರು ಬಂತು ಅಂದರು  ಗಿರೀಶ್ , ಹಿರೆಮಗಳೂರಿಗೆ ಬರಬೇಕೆಂಬ ಬಹಳ ವರ್ಷಗಳ ಆಸೆ ಇಂದು ಕೈಗೂಡಿತ್ತು,  ಹಿರೇಮಗಳೂರು ಚಿಕ್ಕಮಗಳೂರು ಪಟ್ಟಣದ   ಒಂದು ಭಾಗವಾಗಿದೆ, ಈ ಊರಿಗೆ ಚಿಕ್ಕಮಗಳೂರಿನ ಇತಿಹಾಸವೇ ಅನ್ವಯವಾಗುತ್ತದೆ , ಮೊದಲು ಈ ಊರು ಕಡೂರು ಜಿಲ್ಲೆಗೆ ಸೇರಿತ್ತು, ೧೮೬೫ ರಲ್ಲಿ   ಕಡೂರು ಜಿಲ್ಲಾ ಕೇಂದ್ರವನ್ನು ಚಿಕ್ಕಮಗಳೂರಿಗೆ ಸ್ಥಳಾಂತರಿಸಲಾಯಿತು ."ಪರಶುರಾಮ" ಇಲ್ಲಿ ವಾಸವಿದ್ದ ಕಾರಣ "ಭಾರ್ಗವ ಪುರಿ"ಎಂದು ಕರೆಯಲಾಗುತ್ತಿತ್ತೆಂದು ಹೇಳುತ್ತಾರೆ, ದಂತ ಕಥೆ ಗಳು ಹೇಳುವ ರೀತಿ ಚಿಕ್ಕಮಗಳೂರು ಹಾಗು ಹಿರೇಮಗಳೂರು  ಪರಿಸರದಲ್ಲಿ  ಒಂಭತ್ತು ಸಿದ್ದರು ನೆಲೆಸಿ ತಪಸ್ಸು  ಮಾಡಿದ್ದರೆಂದೂ  ಸಹ ಹೇಳುತ್ತಾರೆ .

ಕಾಳಿಂಗ ಮರ್ಧನ , ನಾರಸಿಂಹ , ಮಹಾಲಕ್ಷ್ಮಿ  ದೇವಾಲಯ


ಹಿರೇಮಗಳೂರು  ಹಾಗು ಚಿಕ್ಕ ಮಗಳೂರು  ಎಂಬ ಹೆಸರು ಬರಲು ಇರುವ ಕಾರಣ ಹುಡುಕಿದರೆ ನಿಮಗೆ ಒಂದು ಕಥೆ ಇಲ್ಲಿ ತಿಳಿದುಬರುತ್ತದೆ .ಚಿಕ್ಕಮಗಳೂರು ಮೊದಲು ಹೊಯ್ಸಳ  ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು.ಮೊದಲು ಈ ಊರು ಕಿರಿಯ ಮುಗಳಿ ಎಂಬ ಅಗ್ರಹಾರ ಹಾಗು ಇದರ ಪಕ್ಕದಲ್ಲಿ ಮತ್ತೊಂದು ಪಿರಿಯ ಮುಗಳಿ ಎಂಬ ಅಗ್ರಹಾರ ವಿತ್ತು  ಎರಡೂ ಅಗ್ರಹಾರವನ್ನು ಮದುವೆಯ  ಉಡುಗೊರೆಯಾಗಿ ಮಕ್ಕಳಿಗೆ ನೀಡಲಾಯಿತೆಂದು ಹೇಳುತ್ತಾರೆ.ಹೆಚ್ಚಿಗೆ ವಿಚಾರ ತಿಳಿದುಬರುವುದಿಲ್ಲ .ನಂತರ ಕಿರಿಯ ಮುಗಳಿ  ಚಿಕ್ಕ ಮುಗಳಿ ಯಾಗಿ,ಪೆರಿಯ  ಮುಗಳಿ ಹಿರೆ ಮುಗಳಿ ಯಾಗಿ ಕರೆಯಲಾಗಿದೆ.ಕಾಲಾನಂತರ ಇಂದು ಚಿಕ್ಕ ಮುಗಳಿ ಚಿಕ್ಕಮಗಳೂರು, ಹಿರೆ ಮುಗಳಿ ಹಿರೇಮಗಳೂರು ಎಂದೂ ಚಾಲ್ತಿಗೆ ಬಂದು ಇಂದು ಎರಡೂ ಊರುಗಳು ಸೇರಿ ಜಿಲ್ಲಾ ಕೇಂದ್ರವಾಗಿದೆ.

ಹಿರೇಮಗಳೂರಿನ ಶ್ರೀ  ಕೋದಂಡ ರಾಮ[ ಚಿತ್ರ ಕೃಪೆ ವಿಕಿ ಪಿಡಿಯ ]



ಹಿರೇಮಗಳೂರಿನ  ಶ್ರೀ  ಕೋದಂಡ ರಾಮನ ದರುಶನ ಮಾಡೋಣ ಬನ್ನಿ  ಈ ದೇವಾಲಯ ಮೂರು ಹಂತಗಳಲ್ಲಿ ರಚಿತವಾಗಿದ್ದು, ಹೊಯ್ಸಳ ಹಾಗು ದ್ರಾವಿಡ  ಶೈಲಿಯ  ರಚನೆಗಳನ್ನು ಗಮನಿಸ ಬಹುದು , ಮೂಲ ದೇವಾಲಯದಲ್ಲಿ ಶ್ರೀ ರಾಮನ ಬಲಭಾಗದಲ್ಲಿ ಸೀತೆ, ಎಡಭಾಗದಲ್ಲಿ ಲಕ್ಷ್ಮಣ ವಿಗ್ರಹ ಗಳ ರಚನೆ ಇದೆ , ಪರಶುರಾಮರ  ಕೋರಿಕೆಯಂತೆ ಶ್ರೀ ರಾಮನು ಬಲಭಾಗದಲ್ಲಿ, ಸೀತೆ  ಹಾಗು ಎಡಭಾಗದಲ್ಲಿ ಲಕ್ಷ್ಮಣ  ಇರುವಂತೆ ದರ್ಶನ ನೀಡಿದ್ದಾಗಿ , ತಿಳಿದು ಬರುತ್ತದೆ,  ಸ್ಥಳ  ಮಹಿಮೆ ತಿಳಿದು ಬಂದಿದ್ದು ಹೀಗೆ, .

ಸನ್ಮಾನ್ಯ ಹಿರೇಮಗಳೂರು ಕಣ್ಣನ್ ಅವರು ನಡೆಸಿದ್ದ ಪೂಜಾ ನೋಟ


ಶ್ರೀ ಸತ್ಯನಾರಾಯಣ  ಸ್ವಾಮಿಗೆ  ಬೆಳಗಿದ  ಮಂಗಳಾರತಿ  ಸಾಲು

ನಾವುಗಳು ದೇವಾಲಯ ಆವರಣ ಪ್ರವೇಶ ಮಾಡಿದಾಗ  ಸನ್ಮಾನ್ಯ ಹಿರೇಮಗಳೂರು ಕಣ್ಣನ್ ರವರು  ಭಕ್ತರ ಜೊತೆಯಲ್ಲಿ ಶ್ರೀ ಸತ್ಯನಾರಾಯಣ  ವ್ರತವನ್ನು  ಆಚರಿಸುತ್ತಿದ್ದರು, ಕನ್ನಡ ಪದಗಳ   ಅರ್ಚನೆ  ನೋಡಲು  ಸುಂದರ ಹಾಗೂ  ಕೇಳಲು  ಸುಶ್ರಾವ್ಯ ವಾಗಿತ್ತು. ಕನ್ನಡದಲ್ಲಿ ಪೂಜೆ ಮಾಡುವ ವಿಧಾನ ನೋಡುವ ಸೌಭಾಗ್ಯ ನಮ್ಮದಾಗಿತ್ತು,  ಅವರು ಹೇಳುವ  ಪ್ರತಿ ಪದಗಳೂ ನಾವೇ ದೇವರಿಗೆ ಹೇಳುತ್ತಾ ಪ್ರಾರ್ಥನೆ ಸಲ್ಲಿಸಿದಂತೆ ಭಾಸವಾಗುತ್ತಿತ್ತು . ಬೇರೆಲ್ಲೂ ಸಿಗದ ಅಪೂರ್ವ ಅನುಭವ ನಮ್ಮದಾಗಿತ್ತು,  ಕನ್ನಡ ಜಯ ಘೋಶದೊಡನೆ  ಮಂಗಳಾರತಿ ಬೆಳಗಿದ್ದು   ವಿಶೇಷವಾಗಿತ್ತು ಅರ್ಥವಾಗುವ ಭಾಷೆಯಲ್ಲಿ  ಪೂಜಿಸಿದರೆ ಸಿಗುವ ಅನುಭವ ವರ್ಣಿಸಲು ಅಸಾಧ್ಯ ಅಂತೂ ಹೌದು, ಅಪರೂಪದ  ಘಟನೆ ನಮ್ಮೆದುರು ಅನಾವರಣವಾಗಿ ಮನಸು  ಪ್ರಸನ್ನವಾಯಿತು.



ಮಂಗಳಾರತಿ ಹಾಗು ಪ್ರಾರ್ಥನೆ  ಹೀಗಿದ್ದರೆ ಚೆನ್ನ



ಕನ್ನಡದಲ್ಲಿ ಪೂಜೆ ಮಾಡೋಣ ಬನ್ನಿ



ನಮಸ್ಕಾರ ಮಾಡುವಾಗ  ಹೀಗೆ ಹೇಳಿ



ಕನ್ನಡದಲ್ಲಿ   ನೈವೇಧ್ಯ  ಹಾಗು ತಾಂಬೂಲ ಸಮರ್ಪಿಸಿ

ನಮ್ಮ ಮನದಲ್ಲಿ  ಇದು ಇರುವುದು ಸುಳ್ಳಲ್ಲ

ಪ್ರವಾಸಿಗರಿಗೆ ಮಾಹಿತಿ ಇಲ್ಲಿದೆ

ದೇವಾಲಯದಲ್ಲಿ  ವಿಶೇಷ ನೋಡುವ ಆಸೆಯಿಂದ ಆವರಣದಲ್ಲಿ  ಪ್ರದಕ್ಷಿಣೆ ಹಾಕುತ್ತ ಬರಲು ಕಣ್ಣಿಗೆ ಕಂಡ ಫಲಕಗಳು  ಅಚ್ಚರಿ ಮೂಡಿಸಿದವು, ಇತರೆ ದೇವಾಲಯಗಳಲ್ಲಿ ಕಾಣುವ  ಫಲಕಗಳಿಗಿಂತ  ಬಿನ್ನವಾಗಿ ಮನಸೆಳೆದವು, ದೇವರಿಗೆ ಕನ್ನಡದಲ್ಲಿ ಪೂಜೆ ಮಾಡಲು ಪ್ರೇರಣೆ ನೀಡುವ ಸಂದೇಶ ಅವುಗಳು ಸಾರುತ್ತಿದ್ದವು, ಪ್ರತಿಯೊಂದು ಫಲಕವನ್ನು ಓದುತ್ತ ಮುನ್ನಡೆದೆ , ಇದೊಂದು ಜನಪರ ದೇಗುಲ ಎಂಬ ಭಾವನೆ ಮೂಡಿತು, ಸ್ವಲ್ಪ ಮುಂದೆ ಬಂದು ಇವುಗಳ ಚಿತ್ರ ತೆಗೆಯುತ್ತ ಸಾಗಿದೆ. ಅಲ್ಲೇ ಇದ್ದ  ಒಂದು ಸಂದೇಶ ಮನ ಸೆಳೆಯಿತು  " ದೇಗುಲಕೆ ಬರುವುದು ತಪ್ಪು ಹುಡುಕುವುದಕ್ಕಲ್ಲ ದೇವರಿಗೆ ತಪ್ಪು ಒಪ್ಪಿಸುವುದಕ್ಕೆ" ಎಂಬ ವಾಕ್ಯ ಮನಸೆಳೆಯಿತು ಇಂತಹ ತಪ್ಪನ್ನು ನಾವು ಮಾಡುವುದು ನಿಜ ಎಂಬ ಸತ್ಯದ ದರ್ಶನ ವಾಯಿತು.  ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರು ಹೇಗೆ  ತಮ್ಮ  ಪ್ರವಾಸದ    ಕಾರ್ಯಕ್ರಮ  ಹಮ್ಮಿಕೊಳ್ಳಬಹುದು  ಎಂಬ ಬಗ್ಗೆ  ಒಳ್ಳೆಯ  ಮಾರ್ಗ ಸೂಚಿ  ಹಾಕಿ ಪ್ರವಾಸಿಗರ ಪಯಣದ  ದಾರಿ ದೀಪವಾಗಿದ್ದಾರೆ  ಇಲ್ಲಿನ  ದೇಗುಲದ  ಆಡಳಿತಗಾರರು


ಚಿನ್ಮೈ ಭಟ್ ಪ್ರಥಮ ಭೇಟಿ


ಹಾಗೆ ಕನ್ನಡ ದೇಗುಲದ  ವಿವರಗಳನ್ನು ನೋಡುತ್ತಾ ಬರುತ್ತಿದ್ದೆ,  ನಮ್ಮ ಗಿರೀಶ್  ಬಾಲೂ ಸರ್  ಇವ್ರು  "ಚಿನ್ಮೈ ಭಟ್ " ಅಂತಾ  ಎಂದು ಒಬ್ಬರನ್ನು ಪರಿಚಯ  ಮಾಡಿಸಿದರು ,  ಅಚ್ಚರಿಯಾಯಿತು  ನನ್ನ ಬ್ಲಾಗ್ ಓದುತ್ತ  ತಮ್ಮ ಅನಿಸಿಕೆ ತಿಳಿಸುತ್ತ ಇದ್ದ " ಚಿನ್ಮೈ ಭಟ್ "  ಇಲ್ಲಿ ಪ್ರತ್ಯಕ್ಷ ಆಗಿದ್ದರು, ಸಂತಸದಿಂದ  ಪರಸ್ಪರ ಖುಷಿಯಿಂದ  ಪರಿಚಯ ಮಾಡಿಕೊಂಡು  ಮುಂದಿನ ಪಯಣಕ್ಕೆ  ನಮ್ಮ ಜೊತೆ ಬರುವಂತೆ  ಕೇಳಿದ್ದಕ್ಕೆ , ಖುಷಿ ಯಾಗಿ  ಜೊತೆಗೂಡಿ ಬಂದರು , ಇಲ್ಲಿಂದ ಮುಂದೆ ನಮ್ಮ ನೆಚ್ಚಿನ ತಮ್ಮ  ಚಿನ್ಮೈ ಭಟ್   ಜೊತೆಯಲ್ಲಿ ಪ್ರವಾಸ ಮತ್ತಷ್ಟು  ಮೆರುಗು ಪಡೆಯಿತು, ಮುಂದುವರೆದ ನಮ್ಮ ತಂಡ   ಚಿಕ್ಕ ಮಗಳೂರಿನ  ಟೌನ್ ಕ್ಯಾಂಟೀನ್   ತಲುಪಿತು.



ಟೌನ್ ಕ್ಯಾಂಟೀನ್


 ಚಿಕ್ಕಮಗಳೂರಿನಲ್ಲಿ   ಈ ಟೌನ್ ಕ್ಯಾಂಟೀನ್  ತನ್ನದೇ ಆದ   ಹೆಗ್ಗಳಿಕೆ ಹೊಂದಿದೆ , ಇಲ್ಲಿನ  ತಿಂಡಿ ತಿನಿಸಿನ ಬಗ್ಗೆ ಅಂತರ್ಜಾಲದಲ್ಲಿ ಬಹಳಷ್ಟು ಜನ  ಬರೆದಿದ್ದಾರೆ , ಇಲ್ಲಿನ  ವಿವಿಧ ಬಗೆಯ ದೊಸೆಗಳಿಗೆ  ಬಹಳ ಜನ ಅಭಿಮಾನಿಗಳಿದ್ದಾರೆ, ಆದರೂ ಟೌನ್ ಕ್ಯಾಂಟೀನ್ ತನ್ನದೇ  ರೀತಿಯಲ್ಲಿ ಸದ್ದಿಲ್ಲದೇ  ಇಲ್ಲಿಗೆ ಬರುವ ಪ್ರವಾಸಿಗಳಿಗೆ  ಒಳ್ಳೆಯ ತಿಂಡಿ ತಿನಿಸು ನೀಡುತ್ತಿದೆ . ನಾನಂತೂ ಚಿಕ್ಕಮಗಳೂರಿಗೆ ಬಂದ್ರೆ  ಇಲ್ಲಿಗೆ ಬರದೆ ಹೋಗೋದಿಲ್ಲ, ಇಲ್ಲಿ ಗೆ  ಬಂದ ನಾವು ಹೊಟ್ಟೆ ತುಂಬಾ  ಉಪಹಾರ ಮೈಯ್ದು , ಪಾರ್ಸೆಲ್  ಮಾಡಿಸಿಕೊಂಡು   ಮುಂದಿನ ಪಯಣಕ್ಕೆ ಸಜ್ಜಾದೆವು ... ನಮ್ಮ  ಪಯಣ ಸಾಗಿತು 'ಮುಳ್ಳಯ್ಯನ ಗಿರಿ''  ಕಡೆಗೆ . ....!!!


ಗಿರಿ ಶಿಖರಗಳ ಒಡಲಿಗೆ  ತೆರಳಿದ ಹಾದಿ

ಗೆಳೆಯರೇ ಈ  ಬ್ಲಾಗ್ 30 -12 - 2007 ರಂದು ಜನಿಸಿ  ಐದು ವರ್ಷ  ಪೂರೈಸಿದೆ  ಆರನೇ ವರ್ಷಕ್ಕೆ ಕಾಲಿಟ್ಟ  ಈ ಕಂದಮ್ಮನಿಗೆ  ನಿಮ್ಮ ಶುಭ ಹಾರೈಕೆ ಇರಲಿ , ನಿಮ್ಮ ಪ್ರೀತಿಯ ಅನಿಸಿಕೆ ಹರಿಯುತ್ತಾ  ಏನೇ ತಪ್ಪು ಒಪ್ಪು ಇದ್ದರೂ ಅದನ್ನು  ಸರಿಪಡಿಸಿ ಈ ಅಜ್ಞಾನಿಯ   ಜ್ಞಾನವನ್ನು  ಹೆಚ್ಚಿಸಲು  ಪ್ರೇರಣೆ ನೀಡುತ್ತಾ  ಸದಾ ನನ್ನೊಂದಿಗೆ ನಿಮ್ಮ  ಗೆಳೆತನ ಇರಲಿ ಎಂಬ  ಆಸೆ ನನ್ನದು, ನನ್ನ ಆಸೆಯ ಗಿಡಕ್ಕೆ ನೀರೆರೆದು ಪೋಷಿಸುವ ಹೊಣೆ ನಿಮ್ಮದು . ಧನ್ಯವಾದಗಳು