Friday, August 22, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......06 ಇಕ್ಕೆರಿಯ ಬಸವನ ಮೂಗಿನ ಒಳಗೆ ಕೈ ಬೆರಳು ಇಡೋಣ ಬನ್ನಿ .



ಇಕ್ಕೆರಿಗೆ ಸ್ವಾಗತ 

ನಮಸ್ತೆ ಗೆಳೆಯರೇ  ಬಹಳ ದಿನಗಳ ನಂತರ  ಮತ್ತೆ ಮುಂದುವರೆದಿದೆ ನಮ್ಮ ಈ ಪಯಣ, ಕಳೆದ ಸಂಚಿಕೆಯಲ್ಲಿ  ಕೆಳದಿಯ ಇತಿಹಾಸದ  ಮಹಾಪುರುಷ  ಶ್ರೀಯುತ ಗುಂಡಾ ಜೋಯಿಸರ  ಆಶೀರ್ವಾದ ಪಡೆದು  ಇಕ್ಕೆರಿಯ ಕಡೆ ಹೊರಟೆವು , ನಮ್ಮ ತುಂಟ ಪ್ರಕಾಶಣ್ಣ ನ ಜೊತೆ ಪ್ರವಾಸ ಮಾಡುವುದು ಒಂದು ಒಳ್ಳೆಯ ಸುಯೋಗವೇ ಸರಿ ,  ಮೊದಲು ಮತ್ತೆ ನಮ್ಮ ತುಂಟಾಟ  ಶುರು ಆಯ್ತು , ಅವರ ಜೀವನದ ಎಡವಟ್ಟು ಪ್ರಸಂಗಗಳ ಬಗ್ಗೆ  ನೆನಪಿನ ಹರಟೆ ಕೀಟಲೆ ನಗು ಇವೆಲ್ಲಾ ಇದ್ದವು. 


ಇಕ್ಕೆರಿಗೆ  ಸ್ವಾಗತ

  ಬಾಲಣ್ಣ  ಇಕ್ಕೇರಿ ಬಹಳ ಚೆನ್ನಾಗಿದೆ  ಇಲ್ಲಿನ  ಬಸವನ ಕೀರ್ತಿ ಈ ಊರಿನ  ಸುತ್ತ ಮುತ್ತಾ  ಬಹಳ ಪ್ರಸಿದ್ಧಿ , ಆದರೆ  ಬಾಲಣ್ಣ ..... ! ಅಂತಾ  ಮಾತು ನಿಲ್ಲಿಸಿ  ನಸು ನಕ್ಕರು , ನನಗೆ ಇಲ್ಲಿ ಏನೋ ತುಂಟಾಟ ಇದೆ ಎನ್ನುವ  ವಾಸನೆ  ಸಿಗುತ್ತಿತ್ತು ,  ಉರಿ ಬಿಸಿಲಿನ  ತಾಪದ  ಪ್ರವಾಸದಲ್ಲಿ  ಇಂತಹ ತುಂಟಾಟ ಚಿಮ್ಮಿ  ಜೋರಾಗಿ ನಕ್ಕಾಗ   ಮನಸಿಗೆ  ಖುಷಿಯಾಗಿ ಮುಂದಿನ   ಪ್ರವಾಸದ  ಅನುಭವದ  ಸವಿಯನ್ನು ಅನುಭವಿಸಬಹುದು , ಸರಿ  ನಾನು ಪ್ರಕಾಶಣ್ಣ  ಅದೇನದು ಇಕ್ಕೆರಿಯ ಬಸವನ  ಬಗ್ಗೆ ನಿಮ್ಮ  ಅನಿಸಿಕೆ ಬರಲಿ ಆಚೆಗೆ  ಅಂದೇ .....! 







ಅಯ್ಯೋ   ಬಾಲಣ್ಣಾ  ಒಳ್ಳೆ ಮಜವಾದ ಕಥೆ ಇದೆ ಬನ್ನಿ ಹೇಳ್ತೀನಿ, ಅಂತಾ  ಒಂದು ಕಥೆ ಹೇಳಿದರು , ಕಥೆ ಇಲ್ಲಿದೆ ನೋಡಿ  , 

ಒಮ್ಮೆ ಒಂದು ಶಾಲೆಯ ಮಕ್ಕಳು  ಇಕ್ಕೇರಿ ಪ್ರವಾಸಕ್ಕೆ ಬಂದರು , ಹಾಗೆ  ಇಕ್ಕೆರಿಯ ದರ್ಶನ ಮಾಡುತ್ತಾ ,   ಬಂದ  ಶಾಲಾ ಮಕ್ಕಳು  ಈ ಬಸವನ ಬಳಿ  ಬರುತ್ತಾರೆ , ಶಾಲಾ ಮಕ್ಕಳ ತಂಡದಲ್ಲಿದ್ದ  ಒಬ್ಬ ತುಂಟ ಹುಡುಗ  ಈ ಬಸವನ  ಮೂಗಿನ  ಒಳಗೆ ತನ್ನ  ಕೈ ಬೆರಳನ್ನು  ತೋರಿಸುತ್ತಾನೆ , ಬಸವ ಮೂಗಿನೊಳಗೆ  ಅಡಗಿದ್ದ  ಒಂದು ಸಣ್ಣ ಚೇಳು  ಆತನ ಕೈ ಬೆಳನ್ನು ಕುಟುಕುತ್ತದೆ , ಮೊದಲೇ ತುಂಟ ಹುಡುಗ ,  ಆದರೆ   ತನ್ನ ನೋವನ್ನು ತೋರ್ಪಡಿಸದೆ   , ಕೈ ಬೆರಳು ಹೊರಗೆ ತೆಗೆದು  ಜೋರಾಗಿ ನಗಲು ಶುರು ಮಾಡ್ತಾನೆ   , ಪಕ್ಕದಲ್ಲಿದ್ದ ಅವನ ಗೆಳೆಯರು  , ಯಾಕೋ ಏನಾಯ್ತು  ಅಂತಾ ಕೇಳಿದಾಗ , ಅಯ್ಯಪ್ಪಾ ,  ಹೋಗ್ರೋ  ನಾನು ಹೇಳೋಲ್ಲಾ   ಅನ್ನುತ್ತಾನೆ  , ಆದರೆ  ಇವನ ಮಾತಿಂದ ಕುತೂಹಲ ಹೆಚ್ಚಾಗಿ  ಮಕ್ಕಳು  ಇವನನ್ನು ಪೀಡಿಸಲು  ಶುರು ಮಾಡುತ್ತವೆ , ಆಗ ಆ ತುಂಟ ಹುಡುಗ ,  ನೋಡ್ರೋ  ಬಸವನ ಮೂಗಿಗೆ  ಕೈ ಬೆರಳು ಹಾಕಿದೆ  ಆ ಹಾ  ತಣ್ಣಗೆ  ಐಸ್  ಇದ್ದಂಗೆ  ಆಯ್ತು , ಬಹಳ ಖುಷಿಯಾಯಿತು  ಅನ್ನುತ್ತಾನೆ  , ಇದನ್ನು ಕೇಳಿದ ಮಕ್ಕಳು ನಾ ಮುಂದು   ತಾ ಮುಂದು  ಅಂತಾ  ಬಸವನ  ಮೂಗಿನೊಳಗೆ  ಕೈ ಬೆರಳು ತೋರಿಸಿ  ಚೇಳಿನ ಕೈಲಿ    ಕುಟುಕಿಸಿ ಕೊಂಡರೂ  ಬೇರೆಯವರಿಗೆ ಹೇಳದೆ , ಎಲ್ಲಾ  ಮಕ್ಕಳೂ  ಬಸವನ ಮೂಗಿನೊಳಗೆ  ಕೈ ಬೆರಳು ಹಾಕಲು  ಪ್ರೇರಣೆ ನೀಡುತ್ತಾರೆ ,  ಅವತ್ತಿಂದ ಬಾಲಣ್ಣ , ಇಲ್ಲಿಗೆ  ಯಾರೇ ಬಂದರೂ  ಇಕ್ಕೇರಿ ಬಸವನ  ಮೂಗಿನೊಳಗೆ  ಕೈ ಬೆರಳು ಇಡಬೇಕು , ಅದು ಇಲ್ಲಿನ ಸಂಪ್ರದಾಯ  ಅಂತಾ ನಕ್ಕರು, 



ಇಕ್ಕೆರಿಯ  ಬಸವನ  ಮೂಗಿನ  ಹೊಳ್ಳೆಗಳು 

ನನಗೋ ನಗು ತಡೆಯಲು ಆಗಲಿಲ್ಲ , ಕಾರಿನೊಳಗೆ ಗೊಳ್ಳನೆ  ನಗೆಯ  ಬುಗ್ಗೆ ಚಿಮ್ಮಿತು,  ಅರೆ ಬಂದೆ ಬಿಟ್ಟೆವು  ಇಕ್ಕೆರಿಗೆ , ಇಲ್ಲಿಗೆ ಬಂದು ಮೊದಲು ಬಂದು ನಿಂತಿದ್ದೆ  ಬಸವನ  ಹತ್ತಿರ  , ಸುಂದರ ಬಸವನ   ಬೃಹತ್  ಮೂರ್ತಿ , ನಮ್ಮ ಮೈಸೂರಿನ  ಚಾಮುಂಡಿ ಬೆಟ್ಟದ  ನಂದಿ ಯನ್ನು  ನೆನಪಿಗೆ ತಂದಿತು,  ಆದರೆ  ಈ ಪ್ರಕಾಶಣ್ಣ ಇಟ್ಟಿದ್ದ  ನಗೆಯ ಬಾಂಬ್  ಆ ಮೂರ್ತಿಯ  ಮೂಗಿನ  ಹೊಳ್ಳೆಗಳನ್ನು  ಫೋಟೋ ತೆಗೆಯಲು  ಪ್ರೇರೇಪಿಸಿತ್ತು,  ಆದರೆ  ಕ್ಯಾಮರಾ ಕಣ್ಣಿನಲ್ಲಿ ಅದನ್ನು ನೋಡುತ್ತಿದ್ದರೆ  ನಗು ಬರುತ್ತಿತ್ತೆ  ಹೊರತು, ನನ್ನ ಕೈ ಬೆರಳು  ಫೋಟೋ ಕ್ಲಿಕ್ಕಿಸಲು  ತಡವರಿಸುತ್ತಿತ್ತು . ಬಹುಷಃ  ಅದೂ ಸಹ ಇಕ್ಕೇರಿ ಬಸವನ ಪ್ರಸಾದ ಪಡೆಯಲು ಆಸೆ ಪಡ್ತಾ ಇತ್ತು ಅನ್ನಿಸುತ್ತೆ. 



ಅಂಕಲ್  ಬಸವನ  ಮೂಗಿನೊಳಗೆ ಬೆರಳು ಹೀಗೆ  ಇಡಬೇಕಾ ?




ಈ ಹುಡುಗನ  ಕೈ ಬೆರಳನ್ನು  ಬಸವನ ಮೂಗಿಗೆ  ಹಾಕಿಸ್ಲಾ  

ಬಸವನ ವಿವಿಧ ಬಂಗಿಗಳ ಫೋಟೋ ತೆಗೆಯುತ್ತಾ  ಇರುವಾಗ ಅಲ್ಲಿಗೆ  ಬಂದಾ ಮತ್ತೊಂದು ಹುಡುಗನನ್ನು   ಬಸವನ  ಮೂಗಿನೊಳಗೆ ಕೈ ಬೆರಳು ಇಡುವಂತೆ , ತಿಳಿಸಲು  ಆ ಮಗು ನಗು ನಗುತ್ತಾ  ತನ್ನ ಕೈ ಬೆರಳನ್ನು  ಬಸವನ ಮೂಗಿನೊಳಗೆ  ಹಾಕಿ ಫೋಟೋಗೆ  ಪೋಸ್  ಕೊಟ್ಟಳು . ಅಲ್ಲಿಗೆ ಬಂದ ಮತ್ತೊಬ್ಬ ಹುಡುಗ  ಅಂಕಲ್  ಏನಿದೂ ಅಂದಾ , ಮತ್ತೆ ಅವನಿಗೆ  ಬಸವನ ಮೂಗಿಗೆ ಕೈ ಬೆರಳು ತೋರಿಸಲು  ಹೇಳಿದೆವು ,  ಅವನೂ ಸಹ ಬೆರಳು ತೋರಿಸಿದ , ಈ ಪ್ರಕಾಶ್ ಹೆಗ್ಡೆ ಮಾತನ್ನು ನಂಬಿ  ಪಾಪ   ಇಕ್ಕೇರಿ ಬಸವನ  ಮೂಗಿಗೆ ಕೈ ಬೆರಳು  ತೂರಿಸಿದ  ಮಕ್ಕಳಿಗೆ  ಯಾವುದೇ ಪ್ರಸಾದ ಸಿಕ್ಕಲಿಲ್ಲ , ನಮ್ಮ ಪುಣ್ಯಾ . 


ಇಕ್ಕೇರಿ  ಬಸವನ ಮೂಗಿಗೆ  ಕೈ ಬೆರಳನ್ನು  ತೋರಿಸಿ  ಪ್ರಸಾದ ಪಡೆಯುವ ಬನ್ನಿ 



ಹೀಗೆ ಬಸವನ ಮೂಗಿಗೆ ಕೈ ಬೆರಳು ತೋರಿಸುವ ಆಟಾ ಆಡುತ್ತಾ  ಕಾಲ ಕಳೆದ  ನಾವು  ಇನ್ನು ಸ್ವಲ್ಪ ಹೊತ್ತು ಹಾಗೆ ಮಾಡಿದ್ದರೆ  ಖಂಡಿತಾ  ನಮ್ಮನ್ನು ನೋಡಿದ  ಜನ  ಅದು ಇಲ್ಲಿನ ಸಂಪ್ರದಾಯ  ಎಂದು ತಿಳಿದು  ತಾವು ಸಹ ಬಸವನ ಮೂಗಿಗೆ  ಕೈ ಬೆರಳು ಇಡಲು ಬರ್ತಾ ಇದ್ರೂ  ಅಂತಾ ಕಾಣುತ್ತೆ,  ಊರುಗಳ ಪ್ರವಾಸ ಮಾಡುತ್ತಾ ಇತಿಹಾಸ ಕಲಿಯುತ್ತಾ  ಸಾಗಿದ್ದ ನಾವು  ಇಕ್ಕೆರಿಯ ಬಸವನ ಸನ್ನಿಧಿಯಲ್ಲಿ   ನಮ್ಮ ವಯಸ್ಸನ್ನು ಮರೆತು ತುಂಟ  ಹುಡುಗರಂತೆ  ತುಂಟಾಟ ಮಾಡುತ್ತಾ  ಹೊಟ್ಟೆ ತುಂಬಾ  ನಕ್ಕು  , ಕಾಲ ಕಳೆದೆವು, ಬೆಳಗಿನ  ಆಯಾಸ ನಮ್ಮ ಈ ತುಂಟಾಟದ ನಗುವಿನಲ್ಲಿ ಮಾಯವಾಗಿ  ಹೊಸ ಉತ್ಸಾಹ ಮೂಡಿತ್ತು. 


ಬನ್ನಿ ದೇವನ ಸನ್ನಿಧಿಗೆ 




ಮತ್ತೆ ವಾಸ್ತವಕ್ಕೆ ಬಂದು ದೇವಾಲಯದ ಪ್ರದಕ್ಷಿಣೆ ಹಾಕುತ್ತಾ  ಫೋಟೋ ತೆಗೆಯುತ್ತಾ ಬಂದೆವು , ಅಘೋರೆಶ್ವರ ದೇವಾಲಯದ  ಅರ್ಚಕರು  ಮೆಟ್ಟಿಲು ಹತ್ತುತ್ತಾ  ದೇವಾಲಯಕ್ಕೆ  ಬರುತ್ತಿದ್ದರು . ನಾವು ದೇಗುಲದ ಒಳಗೆ  ಅಘೋರೆಶ್ವರ ದೇವರ ದರ್ಶನ ಪಡೆದು ಇತಿಹಾಸ ತಿಳಿಯಲು  ಸಿದ್ಧರಾದೆವು. ......... ಮುಂದೆ ....!!!













Sunday, July 13, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......05 ಕೆಳದಿಯಲ್ಲಿದೆ ಗುಂಡಾ ಜೋಯಿಸರ ಜ್ಞಾನ ಭಂಡಾರ .


ಕೆಳದಿಯ  ಐತಿಹಾಸಿಕ ದೇವಾಲಯದ ಒಂದು ನೋಟ

ನಮಸ್ತೆ  ಕಳೆದ ಸಂಚಿಕೆಯಲ್ಲಿ  ಕೆಳದಿಯ ಇತಿಹಾಸದ ಒಳಗೆ  ಒಂದು ಇಣುಕು ನೋಟ  ಹರಿಸಿದೆವು,  ಅದರಲ್ಲಿ ನಾ ಹೆಕ್ಕಿ ತೆಗೆದ ಹಲವು  ಐತಿಹಾಸಿಕ ವಿಚಾರಗಳ ಜೊತೆಯಲ್ಲಿ  ತಮ್ಮ  ಬಳಿ  ಇದ್ದ ಮಾಹಿತಿಯನ್ನು  ತಿಳಿಸಿ  ಹಲವು ಓದುಗರು ಸಹಕರಿಸಿದರು  ಎಲ್ಲರಿಗೂ ನನ್ನ ನಮನಗಳು, ಇತಿಹಾಸವೇ  ಹಾಗೆ , ಸರಿಯಾದ ನಿಟ್ಟಿನಲ್ಲಿ ಹೆಜ್ಜೆ ಇಟ್ಟಾಗ  ಹಲವು ಜ್ಞಾನ ಭಂಡಾರ ಗಳಿಂದ  ಮಾಹಿತಿ  ಸಹಜವಾಗಿ ಹರಿದು ಬರುತ್ತದೆ   ಅಮೃತದ ಹಾಗೆ. ತಮ್ಮ ಬಳಿ ಇದ್ದ ಇತಿಹಾಸದ  ಅಮೃತವನ್ನು ನನ್ನ ಮೇಲೆ ಸಿಂಚನ ಮಾಡಿದ  ಹಲವರಿಗೆ ನನ್ನ  ಕೃತಜ್ಞತೆಗಳು . 


ದೇಗುಲದಲ್ಲಿನ   ಮರದ ಕೆತ್ತನೆ


ಅದ್ಯಾಕೋ ಗೊತ್ತಿಲ್ಲ  ಕೆಳದಿಗೆ ಕಾಲಿಟ್ಟ ಗಳಿಗೆ ಚೆನ್ನಾಗಿತ್ತು ಅನ್ಸುತ್ತೆ , ಬಂದೊಡನೆ  ಒಂದು ಖುಷಿಯ ವಾತಾವರಣ  ನಿರ್ಮಾಣವಾಗಿತ್ತು, ಜೊತೆಗೆ ಪ್ರಕಾಶಣ್ಣನ  ಹಾಸ್ಯ ಚಟಾಕಿ  ಸಾಥ್ ನೀಡಿತ್ತು . ಮೊದಲು  ಕೆಳದಿಯ ಇತಿಹಾಸ  ಹೇಳಲು ಬಂದ   "ಗುಲಾಬಿ " , ನಂತರ  ದೇವಾಲಯದ ಆವರಣ ಹೊಕ್ಕಾಗ ಕಂಡ  ವಿವಿಧ ಅದ್ಭುತ  ಕಲಾ ಲೋಕ  ಜೊತೆಗೆ ಗಲಾಟೆ ಇಲ್ಲದ  ನಿಶ್ಯಬ್ಧ  ಇವುಗಳು ನಮ್ಮನ್ನು ಹೆಚ್ಚು ವಿಚಾರ ತಿಳಿಯಲು ಪ್ರೇರಣೆ ನೀಡಿದ್ದವು . ಗುಲಾಬಿಯಿಂದ  ಇತಿಹಾಸ ತಿಳಿದು ದೇವಾಲಯದ  ದರ್ಶನ ಮಾಡಿದೆವು,   ಕೆಳದಿಯ ಈ ಸುಂದರ ದೇಗುಲ  ಸುಮಾರು ಹದಿನಾರನೇ ಶತಮಾನದ  ದೇಗುಲವೆಂದು ತಿಳಿಯುತ್ತದೆ .  ಈ ದೇಗುಲದಲ್ಲಿ ಮೂರು  ಸನ್ನಿಧಿ ಇದ್ದು, ಅವುಗಳು ಕ್ರಮವಾಗಿ,  ವೀರಭದ್ರ, ರಾಮೇಶ್ವರ , ಹಾಗು  ಪಾರ್ವತಿ    ಸನ್ನಿಧಿಗಳಾಗಿವೆ .




ಕೆಳದಿ ದೇಗುಲದ  ಒಂದು ನೋಟ


ಈ ದೇಗುಲವು ಹೊಯ್ಸಳ ಹಾಗು ದ್ರಾವಿಡ  ಶೈಲಿಯನ್ನು  ಹೋಲುತ್ತದೆ .  ಬೂದುಬಣ್ಣದ  ಪದರದ ಶಿಲೆಗಳಿಂದ  ನಿರ್ಮಾಣಗೊಂಡಿರುವುದು ಕಂಡು ಬರುತ್ತದೆ.  ಈ ದೇವಾಲಯಕ್ಕೆ  ಸುಂದರವಾಗಿ  ಮುಖ ಮಂಟಪ,  ಪ್ರದಕ್ಷಿಣ ಪಥ , ಅಂತರಾಳ, ಗರ್ಭಗೃಹ , ಗಳು ನಿರ್ಮಾಣ ಗೊಂಡು  ಸೌಂದರ್ಯ ಹೆಚ್ಚಿಸಿವೆ . ಈ ದೇಗುಲಕ್ಕೆ ಮೂರು  ಪ್ರವೇಶ ದ್ವಾರಗಳಿದ್ದು, ಅವು ಉತ್ತರ, ಪೂರ್ವ ಹಾಗು ದಕ್ಷಿಣ  ದಿಕ್ಕಿಗೆ ಮುಖ ಮಾಡಿ  ನಿಂತಿವೆ .  ಹೊರ ಆವರಣದಲ್ಲಿ  ಗರುಡ,  ವಿವಿಧ ಸಂಗೀತ  ಸಾಧನಗಳನ್ನು ನುಡಿಸುವ ಸಂಗೀತಗಾರರು , ವಾಸ್ತು ಪುರುಷ , ಹರಿಹರ  ಮುಂತಾದ   ಸುಂದರ ಕೆತ್ತನೆಯನ್ನು   ಕಾಣಬಹುದು,ನವರಂಗದಲ್ಲಿ   ನಿಮಗೆ ಐದು  ಕಂಬಗಳು ಕಾಣಸಿಗುತ್ತವೆ  ಅವುಗಳಲ್ಲಿ   ಚಾಲುಕ್ಯರ ಶೈಲಿ ಹೋಲುವ  ಕೆತ್ತನೆ ಹೋಲುವ  ಮೂರ್ತಿಗಳನ್ನು ಗಮನಿಸ ಬಹುದು .  ದೇಗುಲದ  ಸ್ವಲ್ಪ  ಭಾಗ   ಮೇಲ್ಚಾವಣಿಯು  ಮರದ ಕೆತ್ತನೆ ಇಂದ ಅಲಂಕಾರ ಗೊಂಡಿದ್ದು  ಮೋಹಕವಾಗಿವೆ,  ಮತ್ತೆ ಕೆಲವು ಕಡೆ  ಕಲ್ಲಿನ ಮೇಲ್ಚಾವಣಿ  ಯಲ್ಲಿ ಅದ್ಭುತ ಕಲಾಕೃತಿಗಳು ಕಂಗೊಳಿ ಸಿವೆ. 


ಗಂಡ ಬೇರುಂಡ


ದೇವಾಲಯದ  ಅಂದ ಸವಿಯುತ್ತಾ ಬರುತ್ತಿದ್ದ ನನ್ನನ್ನು  ಚಾವಣಿಯಲ್ಲಿನ ಈ ಗಂಡ ಬೇರುಂಡ  ಪಕ್ಷಿ  ಕೆತ್ತನೆ  ತನ್ನತ್ತ ಸೆಳೆ ಯಿತು.   ಗಂಡ ಬೇರುಂಡ ಪಕ್ಷಿಯ  ಸುಂದರ ಕಲ್ಪನೆ  ಇಲ್ಲಿ ಅನಾವರಣ ಆಗಿತ್ತು,  ಎರಡು ತಲೆಯ  ದೈತ್ಯ ಪಕ್ಷಿ,  ಎರಡೂ ತಲೆಯ ಕೊಕ್ಕಿನಲ್ಲಿ  ಎರಡು ಸಿಂಹಗಳನ್ನೂ,  ಕಾಲಿನ  ಪಂಜಗಳಲ್ಲಿ  ಎರಡು ಆನೆಗಳನ್ನು  ಹಿಡಿದಿರುವ ನೋಟ  ಇಲ್ಲಿ ಕಾಣ ಸಿಗುತ್ತದೆ . ನಿಮಗೆ ತಿಳಿದಿರಲಿ ಮೈಸೂರು  ಯದುವಂಶದ  ಅರಸರ   ಲಾಂಛನ ವೂ ಸಹ ಈ ಗಂಡಬೇರುಂಡ   ಪಕ್ಷಿಯೇ ಆಗಿತ್ತು,  ಜೊತೆಗೆ  ವಿಜಯನಗರ  ಅರಸರ ಕಾಲದ ನಾಣ್ಯದ  ಮೇಲೆ ಈ  ಗಂಡ ಬೇರುಂಡ  ಪಕ್ಷಿಯ ಲಾಂಛನ   ಇರುತ್ತಿತ್ತು,  ಹಾಲಿ ನಮ್ಮ ಕರ್ನಾಟಕ  ರಾಜ್ಯದ  ರಾಜ್ಯ ಲಾಂಛನ  ಈ ಗಂಡ ಬೇರುಂಡ  ಪಕ್ಷಿಯೇ  ಆಗಿದೆ.  ಹಾಗಾಗಿ ಈ  ಲಾಂಛನ ಕ್ಕೆ   ೫೦೦ ವರ್ಷಗಳ ಇತಿಹಾಸ ವಿದೆ .  ಬಹುಷಃ  ಮೈಸೂರು ಅರಸರು  ಈ ದೇಗುಲದ   ಲಾಂಛನ ನೋಡಿ   ತಾವು ಗಂಡ ಬೇರುಂಡ  ಲಾಂಛನ  ಆರಿಸಿಕೊಂಡರೆ ಎನ್ನುವುದು   ಸಂಶೋದನಾ  ಯೋಗ್ಯ  ವಿಚಾರವಾಗಿದೆ. 


ನಾಗ  ಮಂಡಲ
ದಕ್ಷ ಪ್ರಜಾಪತಿ




ಹಾಗೆ ಮುಂದು ವರೆದು  ಅಲ್ಲಿಯೇ ಪಕ್ಕದಲ್ಲಿ  ನಾಗ ಮಂಡಲ ಕೆತ್ತನೆಯನ್ನು  ಕಣ್ತುಂಬಿ ಕೊಂಡೆ , ಅದರ ಪಕ್ಕದಲ್ಲಿ ನವಗ್ರಹಗಳ ಸುಂದರ ಕೆತ್ತನೆ  ಇನ್ನು ಮುಂತಾದವುಗಳು   ಮನಸನ್ನು ಉಲ್ಲಾಸ ಗೊಳಿಸಿದವು.  ಅಲ್ಲೇ ಸನಿಹದಲ್ಲಿ ದಕ್ಷ  ಪ್ರಜಾಪತಿಯ ಶಿಲ್ಪ ಮನಸೆಳೆಯಿತು . ಟಗರಿನ  ಮುಖ ಹೊತ್ತು ಭಕ್ತಿಯಿಂದ   ನಿಂತಿರುವ   ಆ ಅಪರೂಪದ  ವಿಗ್ರಹ   ಇತರ ದೇಗುಲದಲ್ಲಿ ಕಂಡುಬರುವುದು ಅಪರೂಪವೇ ಸರಿ. 




ಕೆಳದಿ ವೀರಭದ್ರೆಶ್ವರ  ಸನ್ನಿಧಿ


 ಕೆಳದಿ  ವೀರಭದ್ರೇಶ್ವರ   ಸನ್ನಿಧಿಯಲ್ಲಿ   ಬಾಗಿಲ ಕಂಡಿಯಿಂದ ದರ್ಶನ ಮಾಡಿ   ಅಲ್ಲಿಯೇ ಸುಮಾರು ಹೊತ್ತು ಕುಳಿತು   , ಪ್ರಕಾಶಣ್ಣ ಹಾಗು ನಾನು ಹರಟಿದೆವು,   ಅಚ್ಚರಿ ಎಂದರೆ  ಪ್ರಕಾಶಣ್ಣನ  ಮನೆ ದೇವರು ಕೆಳದಿ  ವೀರಭದ್ರ.   ತಮ್ಮ ಮನೆತನಕ್ಕೂ  ಈ ದೇವರಿಗೂ ಹೇಗೆ  ಸಂಬಂಧ   ಎಂಬ ಬಗ್ಗೆ  ಗೆಳೆಯ ಪ್ರಕಾಶ್ ಹೆಗ್ಡೆ  ತಿಳಿದು ಕೊಳ್ಳುವ  ಆಸಕ್ತಿ  ಮೂಡಿತ್ತು, ಇದಕ್ಕಾಗಿ   ಅವರ ಮನಸು ಚಡಪಡಿಸುತ್ತಿತ್ತು, ಅಲ್ಲಿಂದ ಹೊರಗೆ ಬಂದೆವು,  ಆದರೆ ನನ್ನ ಕಣ್ಣುಗಳು ಅಲ್ಲಿ ದೊರೆಯಬಹುದಾದ  ಶಾಸನಗಳ ಬಗ್ಗೆ  ಹುಡುಕಾಟ  ನಡೆಸಿತ್ತು, ದೇವಾಲಯದ  ಆವರಣದ ಸುತ್ತಾ , ಹೊರಗಡೆ  ಆವರಣದಲ್ಲಿ  ಎಲ್ಲಾ ಕಡೆ ಸುತ್ತಿದರೂ  ಯಾವುದೇ ಶಿಲಾ ಶಾಸನ  ಕಣ್ಣಿಗೆ ಬೀಳಲಿಲ್ಲ,  ಅಷ್ಟರಲ್ಲಿ  ಪ್ರಕಾಶಣ್ಣ   ಬಾಲಣ್ಣ  ಇಲ್ಲಿ ಕೆಳದಿ ಇತಿಹಾಸ ಗೊತ್ತಿರುವ ಒಬ್ಬರು ಇದ್ದಾರೆ ಬನ್ನಿ ಅಂತಾ  ಕರೆದು ಕೊಂಡು  ಹೋದರು . 




ನಮ್ಮ ನಾಡಿನ ಕೆಳದಿ ಇತಿಹಾಸ ಭಂಡಾರ


ಕಟ್ ಮಾಡಿದ್ರೆ  ನಾವು ಆ  ಮಹಾನ್ ವ್ಯಕ್ತಿಯ  ಮನೆಯಲ್ಲಿದೆವು,  ಅವರನ್ನು ಕಂಡ ನಮ್ಮ ಕಣ್ಣುಗಳು  ಧನ್ಯವಾದವು , ನಮ್ಮನ್ನು ಕಂಡೊಡನೆ ಪರಿಚಯಕ್ಕೆ ಮೊದಲೇ ನೀವು ಯಾರೇ ಆಗಿರಿ ಮೊದಲು  ಪಾನಕ ಕುಡಿಯಿರಿ ಅಂತಾ  ಹೇಳುತ್ತಾ  ಪ್ರೀತಿಯಿಂದ ಸ್ವಾಗತ   ನೀಡಿತು  ಈ ಹಿರಿಯ  ಚೇತನ .  ನನಗೋ ಈ ವ್ಯಕ್ತಿ ಯಾರೂ ಎಂಬ ಕುತೂಹಲ  , ಪ್ರಕಾಶಣ್ಣ ನನ್ನನ್ನು ಉದ್ದೇಶಿಸಿ   ಬಾಲಣ್ಣ ಇವರೇ  ಕೆಳದಿಯ ಗುಂಡಾ  ಜೋಯಿಸ್  ಎಂದರೂ  ಈ ಪೆದ್ದು ತಲೆಗೆ  ಸರಿಯಾಗಿ  ಅರ್ಥ ಆಗಲಿಲ್ಲ.   


ಬಿಸಿಲಿನಲ್ಲಿ  ಬಳಲಿ ಬಂದ  ನಮ್ಮನ್ನು ಪ್ರೀತಿಯಿಂದ  ಪಾನಕ ನೀಡಿ  ಆದರಿಸಿ , ನಮ್ಮ ಪರಿಚಯ , ಬಂದ ಉದ್ದೇಶ  ಇವುಗಳನ್ನು   ತಿಳಿದುಕೊಂಡರು , ಪ್ರಕಾಶಣ್ಣ ನ  ಪ್ರಶ್ನೆಗೆ  ಇಲ್ಲಿ ಉತ್ತರ ಸಿಕ್ಕಿತು. ಜೊತೆಗೆ ಕೆಳದಿ ಇತಿಹಾಸದ ಹಲವು  ವಿಚಾರಗಳನ್ನು  ತಿಳಿಸಿಕೊಟ್ಟರು . ಹಾಗೆ ಕೇಳುತ್ತಾ ಇವರ ಪುಸ್ತಕ ಏಲ್ಲೊ ಓದಿದ ನೆನಪಾಗಿ  ಜ್ಞಾಪಿಸಿಕೊಂಡೆ  ಅರೆ ಹೌದು   ತಮಿಳು ನಾಡಿನ  ಕನ್ನಡ ಮಂತ್ರಿ  ಗೋವಿಂದ  ದೀಕ್ಷಿತರ  ಬಗ್ಗೆ   ಪುಸ್ತಕ ಬರೆದ ಮಹನೀಯರು  ಇವರೇ ಅಂತಾ ತಿಳಿದು ಬಂದು ಮನಸಾ  ವಂದಿಸಿದೆ . 

ಗುಂಡಾ ಜೋಯಿಸರ ಬಗ್ಗೆ ಒಂದು ಇಣುಕು ನೋಟ  ಇಲ್ಲಿದೆ  ನೋಡಿ ,  ೨೭-೦೯ -೧೯೩೧ ರಲ್ಲಿ ಕೆಳದಿಯಲ್ಲಿ ಜನಿಸಿದ ಇವರು  ಅನೇಕ ಸಾಧನೆ ಮಾಡಿದ್ದಾರೆ , ಬಾಲ್ಯದ ಬಗ್ಗೆ ಹೆಚ್ಚಿನ ವಿವರ ತಿಳಿದು ಬರುವುದಿಲ್ಲ,  ಆದ್ರೆ ಅವರ ಸಾಧನೆ ಕಂಡು ಬೆರಗಾದೆ . ಗುಂಡಾ ಜೋಯಿಸರು ಬಹಳ ಜ್ಞಾನಿಗಳು   ಮೈಸೂರು ವಿಶ್ವವಿಧ್ಯಾಲಯದಲ್ಲಿನ   ಎಮ್. ಎ ., ಸಂಸ್ಕೃತದಲ್ಲಿ ಆಗಮ ಪರ್ವ ಪರೀಕ್ಷಾ , ಕನ್ನಡ ಸಾಹಿತ್ಯ ಪರಿಷತ್  ನಡೆಸುವ ಕನ್ನಡ ರತ್ನ , ಪದವಿಗಳು  ಇವರ ಜ್ಞಾನ ಬತ್ತಳಿಕೆಗೆ  ಸೇರಿವೆ , ಈಗ ಸುಮಾರು ಎಂಭತ್ತಮೂರು  ವರ್ಷ ಇರಬಹುದು, ಕೆಳದಿಯ  ಐತಿಹಾಸಿಕ  ವಸ್ತು  ಸಂಗ್ರಹಾಲಯದ  ಸ್ಥಾಪಕ  ಹಾಗು ಗೌರವ ಕಾರ್ಯದರ್ಶಿ,  ೧೯೬೨ ರಿಂದ ೧೯೭೫ ರವರೆಗೆ  ಮೈಸೂರು ಹಾಗು ಧಾರವಾಡ ದ ವಿಶ್ವವಿಧ್ಯಾಲಯ ಗಳಲ್ಲಿ  ಇತಿಹಾಸದ ಪ್ರಾಧ್ಯಾಪಕರು ,  ೧೯೮೦ ರಿಂದ ೧೯೮೫ ರವರೆಗೆ  ಕರ್ನಾಟಕ ಇತಿಹಾಸ  ದಾಖಲೆ  ಸಂಶೋದನಾ  ಸಮಿತಿಯ ಸದಸ್ಯರು,  ಹಾಗು  ಅಮೇರಿಕಾ  ಸೇರಿದಂತೆ ಹಲವಾರು ದೇಶ  ವಿದೇಶಗಳಲ್ಲಿ  ತಮ್ಮ ಸಂಶೋದನಾ ಪ್ರಬಂಧಗಳನ್ನು  ಮಂಡಿಸಿ  ಕನ್ನಡ  ತಾಯಿಯ ಕೀರ್ತಿ  ಕಿರೀಟಕ್ಕೆ  ಮೆರುಗುತಂದಿದ್ದಾರೆ . ೧೯೯೪ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಅರಸಿ ಬಂದಿದೆ,  ಹಲವಾರು ಧಾರ್ಮಿಕ  ಸಂಸ್ಥಾನಗಳು ಇವರನ್ನು  ಗೌರವಿಸಿವೆ . 

ಗುಂಡಾ ಜೋಯಿಸರ  ಜೊತೆ ಪ್ರಕಾಶ್ ಹೆಗ್ಡೆ


 ಇಂತಹ  ಮಹನೀಯರ  ಸಾಧನೆಯ ಹಿಮಾಲಯ ದ ಮುಂದೆ ನಾವೆಲ್ಲಾ ಸಣ್ಣ ಮಣ್ಣಿನ ಕಣಗಳು ಎಂದರೆ ತಪ್ಪಾಗಲಾರದು, ಇನತಹವರ ಭೇಟಿ ನನ್ನ ಜನ್ಮದ ಪುಣ್ಯವೆಂದು ಅನ್ನಿಸಿತು, ಇಂತಹ ಮಹನೀಯರು  ನಮ್ಮ ಕನ್ನಡ ತಾಯಿಯ ಅನರ್ಘ್ಯ  ರತ್ನಗಳು . ಇಂತಹ ಜ್ಞಾನ ಭಂಡಾರ  ದರ್ಶನ ಪಡೆದು  , ಅವರ ಆಶೀರ್ವಾದ ಪಡೆದು ಪ್ರಕಾಶ್ ಹೆಗ್ಡೆ ಹಾಗು ನಾನು  ಕೆಳದಿಯ ಮ್ಯೂಸಿಯಂ ಸಂದರ್ಶಿಸಿ,  ಹೊಸ  ಉತ್ಸಾಹದೊಡನೆ  ನಮ್ಮ ಪಯಣ ಮುಂದು ವರೆಸಿದೆವು. ........  ಇಕ್ಕೆರಿಯ ಕಡೆಗೆ .




Sunday, July 6, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......04 ಕೆಳದಿಯ ಮಡಿಲಲ್ಲಿ ಇತಿಹಾಸ ಬರೆದಳು ಸಂಬಾರ ರಾಣಿ .

 ಕೆಳದಿಯ  ಇತಿಹಾಸದ ಸಾಕ್ಷಿ  ಈ  ದೇಗುಲ 

ಅಯ್ಯೋ  ಇದೇನ್ರೀ  ಪಯಣದ  ಕಥೆ ಬರೆಯಲು ಶುರು ಮಾಡಿ ಅರ್ಧಕ್ಕೆ ಓಡಿ  ಹೋದ ..... !  ಅಂತಾ  ಬೈಯ್ಕೋ  ಬೇಡಿ, ಬಹಳ ದಿನಗಳ ನಂತರ ಮತ್ತೆ ಬಂದಿದ್ದೇನೆ, ಹೌದು ಬಿಡುವಿಲ್ಲದ  ದಿನಚರಿ , ಜೊತೆಗೆ  ರಜಾದಿನಗಳಲ್ಲಿ ಬಂದ  ಹಲವು  ಅನಿವಾರ್ಯದ ಕಾರ್ಯಕ್ರಮಗಳು ಈ ಬರವಣಿಗೆಗೆ ಸ್ವಲ್ಪ ಅಡಚಣೆ ಉಂಟು ಮಾಡಿದ್ದು ನಿಜ.  ಬನ್ನಿ ಕೆಳದಿಯ  ಬಗ್ಗೆ ಸ್ವಲ್ಪ ವಿಚಾರ  ತಿಳಿಯೋಣ .

 ಬಹಳ ಹಿಂದೆ  ಚಂದ್ರಗುತ್ತಿ ರಾಜ್ಯದ  ವ್ಯಾಪ್ತಿಯಲ್ಲಿ ಕೆಳದಿ ತಾಲೂಕು ಆಗಿತ್ತು , ಆ ತಾಲೂಕಿಗೆ ಸೇರಿದ  ಹಳೆ ಬಯಲು ಎಂಬ ಊರಿನಲ್ಲಿ   ಚೌಡೇಗೌಡ , ಭದ್ರೇಗೌಡ  ಎಂಬ ಇಬ್ಬರು ಅಣ್ಣ ತಮ್ಮಂದಿರು ಇದ್ದರು ,  ಆ ಕಾಲಕ್ಕೆ ಅವರು ಒಂದು ತರಹ ಜಮೀನ್ದಾರರು ಅಥವಾ ಪಾಳೆಗಾರರು  ಇರಬಹುದು , ಅವರ  ಬಳಿ ಇದ್ದ ಜಮೀನಿನ  ವ್ಯವಸಾಯದ  ಕೆಲಸವನ್ನು ಯಾದವ ಹಾಗು ಮುರಾರಿ ಎಂಬ ಇಬ್ಬರು ಆಳುಗಳು  ಮಾಡುತ್ತಾ  ಬಹಳ ನಿಷ್ಠೆಯಿಂದ  ಇದ್ದರು.  ಒಮ್ಮೆ ಅವರು ಯಜಮಾನರ  ಜಮೀನಿನಲ್ಲಿ ವ್ಯವಸಾಯದ   ಕೆಲಸ ಮಾಡುವಾಗ  ಒಂದು ಹಸು  ಹುತ್ತದ  ಬಳಿ  ಹಾಲನ್ನು ಎರೆಯುತ್ತಿರುವುದನ್ನು  ಕಂಡು ಆ ವಿಚಾರವನ್ನು ತನ್ನ ಯಜಮಾನರಿಗೆ ತಿಳಿಸುತ್ತಾರೆ , ತನ್ನ ಯಜಮಾನರ  ಆದೇಶ ಪಡೆದು ಆ ಜಾಗವನ್ನು  ಅಗೆಯುತ್ತಾರೆ, ಅಲ್ಲಿ  ಅವರಿಗೆ ಒಂದು "ಲಿಂಗ " ದೊರೆಯುತ್ತದೆ  ಆ ಜಾಗದಲ್ಲಿ ಯಜಮಾನ   ಚೌಡೇಗೌಡ  ಒಂದು ದೇವಾಲಯ ಕಟ್ಟಿಸುತ್ತಾನೆ ಆ ದೇಗುಲವೇ  ಕೆಳದಿಯ ಮೂಲ ದೇವಾಲಯ . ನಂತರ  ಸ್ವಲ್ಪ ದಿನಕ್ಕೆ ಒಂದು ಖಡ್ಗ  ಆ ಜಾಗದಲ್ಲಿ ದೊರೆಯುತ್ತದೆ ಆದನ್ನು ಚೌಡೇಗೌಡ  ಸಂರಕ್ಷಿಸುತ್ತಾನೆ , ಒಮ್ಮೆ ಕನಸಿನಲ್ಲಿ ಅವನಿಗೆ   ಮನುಷ್ಯರನ್ನು    ಬಲಿ  ನೀಡಿದರೆ  ಅಪಾರ ನಿಧಿ  ದೊರೆಯುವುದಾಗಿ  ಪ್ರೇರಣೆ ಆಗುತ್ತದೆ,  ಈ ಬಗ್ಗೆ  ಯೋಚಿಸುತ್ತಿರಲು,  ಅವನ ನಂಬಿಕೆಯ  ಇಬ್ಬರು  ಬಂಟರಾದ   ಯಾದವ ಹಾಗು ಮುರಾರಿ ಸ್ವಯಂ ಇಚ್ಚೆಯಿಂದ  ಮಂದೆಬಂದು  ತಮ್ಮನ್ನು   ಬಲಿ  ಗೆ ಅರ್ಪಣೆ ಮಾಡಿ ಕೊಳ್ಳುತ್ತಾರೆ . ಅವರ ಶಿರವನ್ನು   ಭೂಮಿಯಲ್ಲಿ  ಸಿಕ್ಕ ನಾಗಮುರಿ  ಖಡ್ಗದಿಂದ  ಕಡಿಯಲಾಗುತ್ತದೆ.  ಈ ರೀತಿ ದೊರೆತ ಸಂಪತ್ತಿ ನ  ಸಹಾಯದಿಂದ ತಮ್ಮ ರಾಜ್ಯ ಕಟ್ಟುತ್ತಾರೆ  . ಒಂದು ಸಣ್ಣ  ಸೈನಿಕ ಪಡೆ ಕಟ್ಟಿ ಸುತ್ತಮುತ್ತಲಿನ  ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಾರೆ . ಈ ವಿಚಾರ  ತಿಳಿದ  ವಿಜಯನಗರ  ಅರಸರ ಪಡೆ ಇವರನ್ನು  ಬಂಧಿಸಿ ವಿಜಯನಗರಕ್ಕೆ ಕರೆದೊಯ್ಯುತ್ತದೆ . ಕಾಲಾನಂತರ ಇವರನ್ನು   ವಿಜಯನಗರ ಅರಸರ  ಪ್ರತಿನಿಧಿ ಗಳೆಂದು ಗುರುತಿಸಿ ವಿಜಯನಗರ ಅರಸರ  ಮೊಹರು ನೀಡಿ ಬಿಡುಗಡೆ ಮಾಡುತ್ತಾರೆ .

ಕೆಳದಿಯ ದೇಗುಲದ ಒಂದು ನೋಟ

ವಿಜಯನಗರ ಅರಸರ   ಪ್ರತಿನಿಧಿಗಳಾಗಿ  ಕೆಳದಿರಾಜ್ಯ  ಸ್ಥಾಪಿಸುತ್ತಾರೆ , ಆಗಲೇ ಪ್ರಸಿದ್ದ ಕೆಳದಿ  ರಾಮೇಶ್ವರ  ದೇವಾಲಯ  ನಿರ್ಮಾಣದ ಬಗ್ಗೆ ಕಾರ್ಯ ಆರಂಭವಾಗುತ್ತದೆ . ಕೆಳದಿಯಲ್ಲಿ  ರಾಮೇಶ್ವರ ಹಾಗು ವೀರಭದ್ರ  ದೇಗುಲಗಳು  ಹೊಯ್ಸಳ ಹಾಗು ದ್ರಾವಿಡ  ಶೈಲಿಯಲ್ಲಿರುತ್ತವೆ .  ತಾಳಿ ಕೋಟೆ  ಯುದ್ದದ ನಂತರ ವಿಜಯನಗರ  ಅರಸರಿಂದ  ಬೇರ್ಪಟ್ಟ  ಕೆಳದಿ ನಾಯಕರು  ಸ್ವತಂತ್ರ ಕೆಳದಿ ಸಾಮ್ರಾಜ್ಯ ಕಟ್ಟುತ್ತಾರೆ  , ಕೆಳದಿಯಲ್ಲಿ ಶಿವಪ್ಪ ನಾಯಕ ಹಾಗು ಕೆಳದಿಯ ಚೆನ್ನಮ್ಮ ಆಳ್ವಿಕೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ . ನಂತರ  ಈ ಕೆಳದಿ ರಾಜ್ಯ  ಮೈಸೂರು ಸಂಸ್ಥಾನಕ್ಕೆ   ಹೈದರ್ ಅಲಿ ಕಾಲದಲ್ಲಿ  ಸೇರಿಕೊಳ್ಳುತ್ತದೆ.


ಕೆಳದಿಯ ಚೆನ್ನಮ್ಮ [ ಚಿತ್ರ ಕೃಪೆ  ಅಂತರ್ಜಾಲ  ಗೂಗಲ್ ಸರ್ಚ್ ]



 ಕೆಳದಿಯ  ಚೆನ್ನಮ್ಮ  ೧೬೭೭ ರಿಂದ  ೧೬೮೯ ರ ವರೆಗೆ  ಕೆಳದಿ ಸಾಮ್ರಾಜ್ಯದ   ಆಡಳಿತ ಚುಕ್ಕಾಣಿ ಹಿಡಿದು ಆಳುತ್ತಾಳೆ . ಬಹಳ ಸುಂದರ ಚೆಲುವಿ ಆಕೆ, ಅವಳ ಸೌಂದರ್ಯದ  ಬಗ್ಗೆ ಹಲವಾರು ಕಥೆಗಳು  ಆ ಭಾಗದಲ್ಲಿ  ಹರಡಿವೆ . ಕೆಳದಿಯ ಚೆನ್ನಮ್ಮನ  ಹುಟ್ಟೂರು  ಕುಂದಾಪುರ   ಅಲ್ಲಿನ ಸಿದ್ದಪ್ಪಶೆಟ್ಟಿ  ಎಂಬುವರ ಮಗಳು ಆಕೆ.   ಕೆಳದಿಯ ರಾಜ ಸೋಮಶೇಖರ ನಾಯಕನನ್ನು  ವಿವಾಹವಾಗುತ್ತಾಳೆ , ಕೆಳದಿಯ   ರಾಜ ಸೋಮಶೇಖರ  ಅಪಾರ ಸೌಂದರ್ಯವತಿ   ಚೆಮ್ಮನನ್ನು  ಪ್ರೀತಿಸಿ  ವಿವಾಹವಾಗುತ್ತಾನೆ . ೧೬೭೭  ರಲ್ಲಿ ರಾಜ ತೀರಿಕೊಂಡ  ನಂತರ  ಚೆನ್ನಮ್ಮ  ಕೆಳದಿಯ ಆಡಳಿತದ ಚುಕ್ಕಾಣಿ   ಹಿಡಿಯುತ್ತಾಳೆ .  ಹನ್ನೆರಡು ವರ್ಷದಲ್ಲಿ  ಉತ್ತಮ ಆಡಳಿತ ನೀಡಿ  ಪ್ರಖ್ಯಾತಿಯಾಗುತ್ತಾಳೆ   ಕನ್ನಡ ಮಣ್ಣಿನಲ್ಲಿ  , ಕೆಳದಿ ಸಾಮ್ರಾಜ್ಯ ಆಕ್ರಮಿಸಲು  ಬಂದ ಮೊಗಲ್  ರಾಜ  ಔರಂಗ್ ಜೇಬ್ ನ ಸೈನಿಕರನ್ನು ಎದುರಿಸಿ  ಮಣ್ಣು ಮುಕ್ಕಿಸುತ್ತಾಳೆ .   ಮರಾಟ ರಾಜ್ಯದ ಛತ್ರಪತಿ ಶಿವಾಜಿಯ ಮಗ ರಾಜಾರಾಂ ಛತ್ರಪತಿ  ಮೊಗಲರ  ಆಕ್ರಮಣಕ್ಕೆ ಹೆದರಿ ಇವಳ ಬಾಲಿ ಆಶ್ರಯ  ಪಡೆಯುತ್ತಾನೆ . ವಿದೆಶಿಯರೊಂದಿಗೆ ಅಂದಿನ ಕಾಲಕ್ಕೆ  ವ್ಯಾಪಾರ  ವ್ಯವಹಾರ ನಡೆಸಿದ ಧೀರ ಮಹಿಳೆ ಈ ಚೆನ್ನಮ್ಮ,  ಪೋರ್ಚುಗೀಸರು  ಚೆನ್ನಮ್ಮನ ಆಡಳಿತದ   ಅತ್ಯಂತ ಆತ್ಮೀಯ  ವ್ಯವಹಾರಿಕ  ಗೆಳೆಯರಾಗಿದ್ದರು . ಚೆನ್ನಮ್ಮನನ್ನು  "ಸಂಬಾರ  ರಾಣಿ " [ spice  queen ]  ಎಂದು ಕರೆಯುತ್ತಿದ್ದರು .  ಇಂತಹ  ವಿಶೇಷ  ಹೊಂದಿದ  ಕೆಳದಿಯ  ಸಾಮ್ರಾಜ್ಯಕ್ಕೆ ಒಮ್ಮೆ ಜೈ ಎನ್ನೋಣ .  ಮುಂದೆ .......    ಇತಿಹಾಸದ ನಿಧಿ .... ಈ ಪುಣ್ಯ ಪುರುಷರು ..... ?



Thursday, June 19, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......03 ಕೆಳದಿಯ ಇತಿಹಾಸವನ್ನು ಗುಲಾಬಿ ಹೇಳಲು ಬಂದಿತ್ತು !!

ಚಿತ್ರ ಕೃಪೆ ಅಂತರ್ಜಾಲ




 ಸಂಚಿಕೆಯಲ್ಲಿ ವರದ ಹಳ್ಳಿಯ   ಬರೆದಿದ್ದೆ,ಸುಂದರ ಅನುಭವದ ಮೂಟೆ ಹೊತ್ತು ಸಂತ್ರುಪ್ತನಾಗಿ ವಾಪಸ್ಸು ನಮ್ಮ ಕಾರಿನ ಬಳಿ ಬರುವ  ಹಾದಿಯಲ್ಲಿ ಕಣ್ಣಿಗೆ  ಬಿತ್ತು , ಆ ಬನವಾಸಿ  ಸೂಪರ್  ಬಸ್ಸು  ,  ಕೀಟಲೆಯ  ಮನಸು ಜಾಗೃತವಾಯಿತು,  ಪ್ರಕಾಶಣ್ಣ  ಇಲ್ಲಿ ನೋಡಿ ಅಂದೇ  '' ರಾತ್ರಿ ಡಿಮ್ ಡಿಪ್  ಕೊಡು ಮಗಾ''  ಎಂಭ ಘೋಷ ವಾಕ್ಯ ,  ನಮ್ಮ  ಪಟ್ಟಣ ಗಳಲ್ಲಿ ಇರಬೇಕಾದ  "ಡಕೋಟಾ   ಎಕ್ಸ್ಪ್ರೆಸ್ "   ಸ್ವಚ್ಚಂದ  ಪರಿಸರ ಇರುವ ಇಲ್ಲಿಗ್ಯಾಕೆ ಬಂತೂ  ಅಂತಾ   ಜೋರಾಗಿ ನಕ್ಕೆವು.  ಇಂತಹ ಸಮಯದಲ್ಲಿಯೂ   ನಮ್ಮ ಮುಖದಲ್ಲಿ ನಗು ಅರಳಿಸಿದ ಈ ಬಸ್ಸಿಗೆ ಥ್ಯಾಂಕ್ಸ್ ಹೇಳುತ್ತಾ , ಸಾಗರ ಪಟ್ಟಣಕ್ಕೆ  ವಾಪಸ್ಸು  ಹೊರಟೆವು . ಸಾಗರ ತಾಲೂಕು  ಕೇಂದ್ರ ,

 ವರದಹಳ್ಳಿ ಇಂದ ವಾಪಸ್ಸು ಬರುವಾಗ  ಸಾಗರ ಪಟ್ಟಣದಲ್ಲಿ  ಇರುವ ಬ್ಲಾಗ್ ಮಿತ್ರ  ಜಿತೇಂದ್ರ ಹಿಂಡುಮನೆ  ಯವರನ್ನು ಭೇಟಿ ಮಾಡಿ ಖುಷಿ ಪಟ್ಟೆವು,  ಅವರಿಂದ ಪ್ರಕಾಶಣ್ಣ ಹಾಗು ನನಗೆ ಮನೆಗೆ ಬರಲು ಆತ್ಮೀಯ  ಆಮಂತ್ರಣ ಸಿಕ್ಕಿತು.  ಅವಕಾಶ ಸಿಕ್ಕಲ್ಲಿ ಖಂಡಿತಾ ಬರುವುದಾಗಿ ಅವರಿಗೆ  ತಿಳಿಸಿದೆವು .


ಸಾಗರ ಪಟ್ಟಣದಲ್ಲಿನ  ಮಾರಿಕಾಂಬ ದೇಗುಲ

ಅವರಿಂದ ಬೀಳ್ಕೊಂಡು  ಸಾಗರ ಪಟ್ಟಣದ ಒಳಗೆ  ನಮ್ಮ ಪಯಣ ಸಾಗಿತು.  ಅರೆ  ಊರಿನ ಒಳಗೆ  ಕಂಡ ಒಂದು ಸುಂದರ ದೇಗುಲ  ಮನ ಸೆಳೆಯಿತು,  ಅಲ್ಲೇ ನಿಂತು ನೋಡಿದರೆ  ಶಿರಸಿಯ  ಮಾರಿಕಾಂಬಾ  ದೇವಾಲಯದಂತೆ  ಸಾಗರದಲ್ಲಿಯೂ  ಒಂದು ಮಾರಿಕಾಂಬೆ  ದೇವಾಲಯ ಇರುವುದು  ತಿಳಿಯಿತು . ದೇವಾಲಯದ  ಬಾಗಿಲು  ಮುಚ್ಚಿದ್ದ ಕಾರಣ, ತಡಮಾಡದೆ  ಕೆಳದಿಯ ಕಡೆ  ಹೊರಟೆವು . ಕೆಳದಿಯ ಬಗ್ಗೆ ಹೆಚ್ಚು  ಗೊತ್ತಿಲ್ಲದ ನನಗೆ  ಅಲ್ಲಿ ಏನು ನೋಡಬೇಕೆಂಬ  ಕಲ್ಪನೆ ಇರಲಿಲ್ಲ, ಜೊತೆಗೆ  ಅಲ್ಲಿ ಇರುವುದೇನು  ಎಂಬುದೂ  ತಿಳಿದಿರಲಿಲ್ಲ . ಸಾಗರದಿಂದ  ಆರು ಕಿ. ಮೀ . ದೂರದಲ್ಲಿ  ಕೈಬೀಸಿ ಕರೆಯುತ್ತಿತ್ತು  ಐತಿಹಾಸಿಕ ಕೆಳದಿ


ಕೆಳದಿಯ  ಐತಿಹಾಸಿಕ  ರಾಮೇಶ್ವರ  ದೇವಾಲಯ



 ಕೆಳದಿಯ  ನೆಲ  ಸ್ಪರ್ಶ ಮಾಡುತ್ತಿದಂತೆ  ಇಲ್ಲಿ ಏನೋ ಮಹತ್ವವಾದ ವಿಚಾರ ಇದೆ ಎಂದು ನನ್ನ ಮನಸು ಹೇಳುತ್ತಿತ್ತು, ಆದರೆ ಕೇಳುವುದು ಯಾರನ್ನು,  ನಮಗೆ ಇಲ್ಲಿನ ವಿಚಾರ ತಿಳಿಸಲು  ಯಾರೂ ಇರಲಿಲ್ಲ,  ನಮ್ಮ  ಎದುರಿಗೆ  ಕೆಳದಿ ರಾಮೇಶ್ವರ  ದೇವಾಲಯ ಎಂಬ ಬೋರ್ಡ್  ಇತ್ತು,  ಆದರೆ ದೇವಾಲಯದ  ರೂಪದ ಯಾವ  ಕಟ್ಟಡ ಸಹ ನನಗೆ ಮೊದಲ ನೋಟಕ್ಕೆ ಕಾಣಲಿಲ್ಲ,  ಸುತ್ತಲೂ ಇಟ್ಟಿಗೆಯ ಕಾಂಪೌಂಡ್  ಹಾಕಿದ್ದು ನಡುವೆ  ಬಹುಶ ಹಳೆಯಕಾಲದ ಜಮೀನು ದಾರರ  ಮನೆ ಅಥವಾ ಅರಮನೆ ಯಂತಹ ಒಂದು ಕಟ್ಟಡ  ಕಾಣಲು ಸಿಕ್ಕಿತು, ಇದು ಕೆಳದಿ ಚೆನ್ನಮ್ಮನ  ಅರಮನೆ ಇರಬಹುದೇ ಎಂಬ  ಅನುಮಾನ ಬಂದಿತ್ತು,




ಇದು ದೇಗುಲವೋ  ಅಥವಾ ಅರಮನೆಯೂ



ನಂದಿ ವಾಹನ ಸಹಿತ ಹರ ದಂಪತಿಗಳು


ಹತ್ತಿರ ಹೋಗಿ ನೋಡಿದರೆ  ಒಂದು ಹಳೆಯಕಾಲದ ದೊಡ್ಡ ಮನೆಯನ್ನು ನವೀಕರಿಸಿದಂತೆ ಕಂಡಿತು, ಮನೆಯ ಮುಂದೆ ವಿಶಾಲವಾದ  ಹಸಿರಿನ ಪಾರ್ಕ್, ಹತ್ತಿರ ಹೋಗುತ್ತಿದಂತೆ ಕಾಣುವ ಸುಂದರವಾದ  ಮರದ ಕಂಬಗಳು, , ಒಳಗೆ ಬರುವಂತೆ  ಪ್ರೇರೇಪಿಸುವ ಮೆಟ್ಟಿಲುಗಳನ್ನು  ದಾಟಿ ಒಳಗೆ  ಬಂದರೆ ನಿಮಗೆ ದರ್ಶನ ನೀಡಲು  ನಂದಿ ವಾಹನ ಸಹಿತ ಹರ ದಂಪತಿಗಳು ಕಾಯುತ್ತಿರುವಂತೆ ಅನ್ನಿಸುತ್ತದೆ . ಸುಂದರ ಕಲಾಕೃತಿಯನ್ನು  ನೋಡದೆ ನೀವು ದೇಗುಲದ ಒಳಗೆ ಪ್ರವೇಶಿಸುವುದು ಸಾಧ್ಯವೇ ಇಲ್ಲ.

ಕೆಳದಿಯ ಇತಿಹಾಸ ಹೇಳಲು  ಬಂದ  ದಿಟ್ಟೆ ಗುಲಾಬಿ


ಒಳಗೆ ಪ್ರವೇಶಿಸಿದ ನಮಗೆ ಅಲ್ಲೊಂದು ಪುರಾತನ ದೇವಾಲಯ ಇರುವುದು ಕಾಣ ಸಿಕ್ಕಿತು,  ಸುತ್ತಲೂ  ನಿರ್ಮಾಣ ಗೊಂಡ  ಒಳಜಗುಲಿ ಹೊಂದಿದ ಪ್ರದೇಶದ ನಡುವೆ  ರಾಮೇಶ್ವರ ದೇಗುಲ ನಿರ್ಮಾಣ  ಗೊಂಡಿದೆ . . ಪ್ರವೇಶಿಸಿದ ನಾವು, ಸುತ್ತಲೂ ನೋಡಿದೆವು, ಅಲ್ಲಿನ ವಿವರ ನೀಡಲು ಯಾರೂ ಇರಲಿಲ್ಲ, ನಮ್ಮ ಪಾಡಿಗೆ ಅಲ್ಲಿನ  ದೇಗುಲದ ವಿವರಗಳನ್ನು  ಫೋಟೋ ತೆಗೆಯುತ್ತಿದ್ದೆವು, ಅಲ್ಲೇ ಕಾಣ ಸಿಕ್ಕರು  ಒಬ್ಬ ಹೆಂಗಸು , ಅಲ್ಲಿನ ಆವರಣವನ್ನು ಶುಚಿ  ಮಾಡುತ್ತಿದ್ದರು, ಆ  ಬಿಸಿಲಿನಲ್ಲಿ  ಬಂದು ಫೋಟೋ ತೆಗೆಯುತ್ತಿದ್ದ ನಮ್ಮನ್ನು  ಕಂಡು ಹತ್ತಿರ ಬಂದರು,  ಏನಮ್ಮಾ  ಇಲ್ಲಿನ  ವಿವರ ನೀಡಲು ಯಾರೂ ಇಲ್ವಾ?   ಅಂತಾ ವಿಚಾರಿಸಿದೆವು , ಇಲ್ಲಾ ಸಾರ್ ಇಷ್ಟು ಹೊತ್ತಿನಲ್ಲಿ ಯಾರೂ ಇರಲ್ಲಾ, ಅನ್ನುತ್ತಾ  ಬನ್ನಿ ಸಾರ್ ನಾನೇ ಹೇಳ್ತೀನಿ ಅಂತಾ ತನಗೆ ತಿಳಿದಿದ್ದ ವಿಚಾರವನ್ನು  ನಮಗೆ  ಹೇಳಿದರು, ನಗು ನಗುತ್ತಾ  ತನ್ನದೇ ರೀತಿಯಲ್ಲಿ  ಅಲ್ಲಿನ ದೇಗುಲದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾ ಹೋದರು, ಪಾಪ  ತಾನು ಕೆಲಸ ಮಾಡುವ  ಪ್ರದೇಶವನ್ನು  ನೋಡಲು ಬಂದ  ಪ್ರವಾಸಿಗಳನ್ನು ನಿರಾಸೆ ಗೊಳಿಸಬಾರದು ಎಂಬ   ಆ ಹೆಂಗಸಿನ  ಆ ತುಡಿತಕ್ಕೆ  ನಿಜಕ್ಕೂ ಅಭಿಮಾನ  ಬಂತು . ಪ್ರಕಾಶಣ್ಣ ಹಾಗು ನಾನು ನಗುತ್ತಾ  ಅಮ್ಮ ನಿಮ್ಮ ಹೆಸರೇನು ಅಂತಾ ಕೇಳಿದೆವು  ಸಾರ್ ನಾನ್ ಇಲ್ಲೇ ಕೆಲ್ಸಾ ಮಾಡೋದು ,  ನನ್ ಹೆಸರು "ಗುಲಾಬಿ" ಅಂತಾ  ಅಂದರು .

ಕೆಳದಿಯ  ಇತಿಹಾಸ ಹೇಳಲು ಬಂದ  "ಗುಲಾಬಿ "


ಒಮ್ಮೆಲೇ ಬೆಚ್ಚಿ ಬಿದ್ದೆ , ಆ ನಿಮ್ಮ ಹೆಸರು ಏನೂ? ಅಂದೇ ಸಾರ್ "ಗುಲಾಬಿ " ಅಂತಾ ಅಂದ್ರೂ, ಜನುಮದಲ್ಲಿ ಮೊದಲ ಸಾರಿ ಒಬ್ಬ ಮಹಿಳೆ  "ಗುಲಾಬಿ"  ಎಂಬ ಹೆಸರನ್ನು  ಇಟ್ಟುಕೊಂಡ  ಬಗ್ಗೆ  ಕಂಡಿದ್ದು . ಯಾವ ಯಾವ್ದೋ  ಹೆಸರನ್ನು ಇಟ್ಟುಕೊಳ್ಳುವ  ನಮ್ಮ ಜನ  ಗುಲಾಬಿ, ತಾವರೆ, ಸಂಪಿಗೆ, ಮಲ್ಲಿಗೆ , ಜಾಜಿ, ಸೇವಂತಿಗೆ, ಮುಂತಾದ ಹೆಸರನ್ನು  ಯಾಕೆ ಮರೆತಿದ್ದಾರೆ ಅನ್ನಿಸಿತು, ಈ ಮಹಿಳೆ ತನ್ನ ಹೆಸರನ್ನು "ಗುಲಾಬಿ " ಎಂದು ಇಟ್ಟುಕೊಂಡು   ತನ್ನ ಮುಖದಲ್ಲಿನ ನಗುವಿನಲ್ಲಿ ನಿಜಕ್ಕೂ  ಆ ಹೂವಿನ  ಹೆಸರನ್ನು ಸಾರ್ಥಕ ಗೊಳಿಸಿದ್ದರು .



ಚಿತ್ರ ಕೃಪೆ ಅಂತರ್ಜಾಲ



ಮತ್ತೊಂದು ವಿಚಾರ  ಅಷ್ಟಾಗಿ ವಿಧ್ಯೆ ಇಲ್ಲದ  ಈ  ಹೆಂಗಸು  ತಾನು ಕೆಲಸ ಮಾಡುವ  ದೇವಾಲಯದ  ಬಗ್ಗೆ  ಅಲ್ಲಿ ಇಲ್ಲಿ ಕೇಳಿದ, ಹಾಗು ಹಿರಿಯರಿಂದ  ತಿಳಿದ ವಿಚಾರಗಳನ್ನು ಸಂಕೋಚವಿಲ್ಲದೆ  ಹೆಮ್ಮೆಯಿಂದ  ಹೇಳುವ ವಿಧಾನ ಇಷ್ಟಾ ಆಯಿತು. ಇತಿಹಾಸ ವೆಂದರೆ  ಮೂಗುಮುರಿಯುವ  ಇಂದಿನ ಪೀಳಿಗೆ  ಯಾವುದೇ  ಪ್ರತಿಫಲದ  ಆಸೆ ಇಲ್ಲದೆ  ಕಾರ್ಯ ನಿರ್ವಹಿಸುವ  ಇಂತಹವರನ್ನು ನೋಡಿ  ಕಲಿಯಬೇಕಾಗಿದೆ . ಪ್ರೀತಿಯಿಂದ  ಇತಿಹಾಸ ಹೇಳಲು ಬಂದ  ನಗು ಮುಖದ "ಗುಲಾಬಿ" ಗೆ ಮನದಲ್ಲಿ  ಸಲಾಂ ಹೇಳಿದೆವು .


ನಂತರ ಅವರಿಂದ  ಬೀಳ್ಕೊಂಡು  ದೇವಾಲಯದ ಒಳಗಡೆ ಪ್ರವೇಶಿಸಿದೆವು .  ಅರೆ ಕೆಳದಿಯ  ವಿಚಾರ ನಿಮಗೆ  ತಿಲಿಸಲಿಲ್ಲಾ ಅಲ್ವೇ ಕ್ಷಮಿಸಿ,  ಕೆಳದಿಯ ಬಗ್ಗೆ  ಹೇಳದಿದ್ದರೆ  ನಮಗೆ  ಈ ಊರಿನ ಇತಿಹಾಸದ ಬಗ್ಗೆ ಅರಿವಾಗದು, ಮುಂದಿನ ಸಂಚಿಕೆಯಲ್ಲಿ  ಕೆಳದಿಯ ಬಗ್ಗೆ ತಿಳಿಯೋಣ
























Tuesday, June 10, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......02 ವರದಹಳ್ಳಿಯ ಅವದೂತನ ಸನ್ನಿಧಿಯಲ್ಲಿ .

ಅವದೂತ  ಶ್ರೀಧರ ಸ್ವಾಮಿಗಳು


ಕಳೆದ  ಸಂಚಿಕೆಯಲ್ಲಿ   ಬೆಂಗಳೂರಿನಿಂದ  ಸಾಗರದ ವರೆಗಿನ ಪಯಣದ  ಅನುಭವ ದಾಖಲಾಗಿತ್ತು, ಮುಂದಿನ ಪಯಣ  ವರದ ಹಳ್ಳಿಯ  ಅವದೂತನ ಸನ್ನಿಧಿಗೆ  ಸಾಗುತ್ತಿತ್ತು. ಬನ್ನಿ ವರದಹಳ್ಳಿಯ ಬಗ್ಗೆ  ತಿಳಿಯೋಣ . ವರದಹಳ್ಳಿ  ಒಂದು ಸಣ್ಣ ಹಳ್ಳಿ  ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕಿಗೆ  ಸೇರಿದೆ . ಸಾಗರ ಪಟ್ಟಣದಿಂದ  ಆರು ಕಿ.ಮಿ  ದೂರದಲ್ಲಿದೆ .  ಅವದೂತ ಶ್ರೀಧರ ಸ್ವಾಮಿಗಳು  ನೆಲೆಗೊಂಡು  ತಮ್ಮದೇ ಆದ  ವಿಶಿಷ್ಟತೆ ಮೆರೆದ ಪುಣ್ಯ  ಕ್ಷೇತ್ರ ಇದು .



ಸರ್ವರಿಗೂ ಶುಭವಾಗಲಿ


ಬನ್ನಿ ಶ್ರೀಧರ ಸ್ವಾಮಿಗಳ  ಜೀವನದ  ಇತಿಹಾಸ ನೋಡೋಣ . ಕನ್ನಡ ನಾಡಿನ  ಮಣ್ಣಿನಲ್ಲಿ  ಹಲವು  ಐತಿಹಾಸಿಕ  ಪುಣ್ಯ ಪುರುಷರು ಜನಿಸಿದ್ದಾರೆ.  ಹಾಗೆಯೇ ಶ್ರೀಧರ ಸ್ವಾಮಿಗಳ ಜನನ  ಕರ್ನಾಟಕದ  ಗುಲಬರ್ಗ  ಜಿಲ್ಲೆಯ  ಆಳಂದ್ ತಾಲೂಕಿನ  ಲಾಡ್  ಚಿಂಚೋಳಿ  ಎಂಬ  ಹಳ್ಳಿಯಲ್ಲಿ  ಆಯಿತು.  ೧೯೦೮ ರ  ಡಿಸೆಂಬರ್  ೦೭ ರಂದು  ನಾರಾಯಣ್ ರಾವ್  ಹಾಗೂ ಕಮಲಾಬಾಯಿ ದೇಗುಲ್ಕರ್  ದಂಪತಿಗಳ  ಮಗನಾಗಿ ಜನಿಸಿದರು . ಈ ಬಾಲಕ  ಮೂರು ವರ್ಷದವನಿದ್ದಾಗ   ತನ್ನ  ತಂದೆ ತಾಯಿಯವರನ್ನು ಕಳೆದು  ಕೊಳ್ಳುತ್ತಾನೆ . ಮನೆಯ ಹಿರಿಮಗ   ತ್ರಿಂಬಕ್ ಮನೆಯ ಜವಾಬ್ಧಾರಿ ಹೊರುತ್ತಾರೆ . ಬಾಲಕ ಶ್ರೀಧರರನ್ನು   ಪ್ರಾಥಮಿಕ ಶಾಲೆಗೇ  ಹೈದರಾಬಾದಿನಲ್ಲಿ  ಸೇರಿಸುತ್ತಾರೆ. , ನಂತರ ಅನಾರೋಗ್ಯದ ಕಾರಣ,  ಅವರ ವಿಧ್ಯಾಭ್ಯಾಸ  ಗುಲಬರ್ಗ  ನಂತರ ಪುಣೆಯಲ್ಲಿ  ಸಾಗುತ್ತದೆ.   ಪುಣೆಯಲ್ಲಿರುವಾಗ  ಅಲ್ಲಿನ  ಪಲ್ನಿಟ್ಕರ್   ಎಂಬುವರು  ಈ ಬಾಲಕನ  ಆಧ್ಯಾತ್ಮಿಕ  ಲಕ್ಷಣಗಳನ್ನು ಗುರುತಿಸಿ "ಸಜ್ಜನಘಡ್ " ಎಂಬಲ್ಲಿಗೆ ಕಳುಹಿಸುತ್ತಾರೆ . ಸಂತ  ಶ್ರೀ ರಾಮದಾಸ್  ಅವರು  ನೆಲಸಿ  ಸಾಧನೆಯ ಶಿಖರ ಏರಿದ    ಜಾಗ  ಆ "ಸಜ್ಜನ್ ಘಡ್ " [ ಮಹಾರಾಷ್ಟ್ರ  ರಾಜ್ಯ] . ಆ ಜಾಗದಲ್ಲಿ  ಸಂತ ರಾಮದಾಸರ  ವಿಚಾರಗಳಿಗೆ  ಮನಸೋತು , ಅಲ್ಲಿಯೇ ಬಹುಕಾಲ ನೆಲಸಿ ಅವರ ಅನುಯಾಯಿಯಾಗಿ  ಸಾಧನೆಗೆ ತೊಡಗುತ್ತಾರೆ  ಶ್ರೀಧರ ಸ್ವಾಮಿಗಳು .  ಈ ಅವಧಿಯಲ್ಲಿ ಸಂತ ರಾಮದಾಸರ  ಪ್ರೇರಣೆಯಂತೆ  ದಕ್ಷಿಣ  ಭಾರತದ ಹಲವು ಪುಣ್ಯ ಕ್ಷೇತ್ರಗಳ  ದರ್ಶನ ಮಾಡಿ , ೧೯೪೨ ರಲ್ಲಿ  ಉತ್ತರ ಕನ್ನಡ  ಜಿಲ್ಲೆಯ  ಶೀಗೆ ಹಳ್ಳಿಯಲ್ಲಿ  ಸ್ವಾಮಿ ಶಿವಾನಂದರ  ಸಮ್ಮುಖದಲ್ಲಿ  ಸನ್ಯಾಸ ಧೀಕ್ಷೆ ಪಡೆಯುತ್ತಾರೆ .  ೧೯೪೨ ರಿಂದ ೧೯೬೭  ಸುಮಾರು ಇಪ್ಪತೈದು ವರ್ಷಗಳ  ಕಾಲ  ಭಾರತ ದೇಶದ ಹಲವು  ಪ್ರದೇಶಗಳಲ್ಲಿ  ತಮ್ಮದೇ ಹಾದಿಯಲ್ಲಿ  ಸಾಧನೆ ಮಾಡುತ್ತಾ , ೧೯೬೭ ರಲ್ಲಿ ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕಿನ  "ವರದ ಹಳ್ಳಿ" ಗೆ ಬಂದು  ನೆಲೆ ನಿಲ್ಲುತ್ತಾರೆ.   ೧೯೬೭ ರಿಂದ  ೧೯೭೩ ರ ವರೆಗೆ   ವರದ  ಹಳ್ಳಿಯಲ್ಲಿ ನೆಲೆಸಿ   ಇಲ್ಲಿನ ಸುತ್ತಮುತ್ತಲಿನ ಜನರಿಗೆ   ಆರಾಧ್ಯ ದೈವವಾಗಿ   ಪ್ರಕಾಶಿಸಿ  ೧೯ ಏಪ್ರಿಲ್ ೧೯೭೩ ರಲ್ಲಿ ದೇಹ ತ್ಯಾಗ ಮಾಡುತ್ತಾರೆ .


ವರದಹಳ್ಳಿಯ  ಒಂದು ನೋಟ


ಇಂತಹ  ಇತಿಹಾಸ ಉಳ್ಳ ಮಹನೀಯರ ಬಗ್ಗೆ ಹಲವರು ಹೇಳುವುದನ್ನು ಕೇಳಿದ್ದೆ  ಇಂದು ಆ ಜಾಗವನ್ನು  ನೋಡುವ ಅವಕಾಶ ಸಿಕ್ಕಿತ್ತು. ವರದ ಹಳ್ಳಿಯನ್ನು  ಪ್ರವೇಶಿಸುವಾಗ  ಅಸಾಧ್ಯ ಬಿಸಿಲು  ನಮಗೆ ಸ್ವಾಗತ ಕೊರಿತು. ಸುತ್ತಲೂ ಹಸಿರಿನಿಂದ ಕೂಡಿದ ಬೆಟ್ಟಗಳ ಶ್ರೇಣಿ  ಅವುಗಳ ನಡುವೆ ನೆಲೆಗೊಂಡಿದೆ ಈ ಪ್ರದೇಶ, ಪ್ರಕಾಶಣ್ಣ  ಇಲ್ಲಿನ ಆಚಾರಗಳ ಬಗ್ಗೆ ಮೊದಲು ಸಂಕ್ಷಿಪ್ತ  ವಿವರ ನೀಡಿದ್ದ ಕಾರಣ , ನಮ್ಮ ಪ್ಯಾಂಟು  ಷರಟು  ತೆಗೆದು ಪಂಚೆ ಉಟ್ಟು  ದೇವಾಲಯಕ್ಕೆ ಹೋಗುವ ತಯಾರಿ ನಡೆಸಿದೆವು . ಮೊದಲು ದೇವಾಲಯದ ಕಛೇರಿಗೆ  ಹೋಗಿ ಸೇವೆಯ  ಚೀಟಿ ಪಡೆದೆವು .
 

ಭಕ್ತಿಗೆ ಒಲಿಯದ  ದೇವರಿಲ್ಲ

ಅಲ್ಲಿಂದ  ನಮ್ಮ ನಡಿಗೆ  ಶ್ರೀಧರ  ತೀರ್ಥ  ಎಂದು ಕರೆವ  ಜಾಗಕ್ಕೆ ಸಾಗಿತು.  ಅಲ್ಲಿನ ನೋಟ ಬಹಳ ಹಿತಕರವಾಗಿತ್ತು,  ಹಲವಾರು ಭಕ್ತರು  ಭಕ್ತಿಯಿಂದ  ಅಲ್ಲಿನ ತೀರ್ಥದಲ್ಲಿ ಸ್ನಾನ ಮಾಡುತ್ತಿದ್ದರು,  ನಾವು  ಸಹ ಹಾಕಿದ ಬಟ್ಟೆಯನ್ನು ಬಿಚ್ಚದೆ  ಹಾಗೆಯೇ  ತೀರ್ಥದಲ್ಲಿ  ಮಿಂದೆವು,  ಬಹಳ ಹಿತಕರವಾದ ಅನುಭವ ಅದು.

 ಅರೆ ವರದ ಹಳ್ಳಿಯಲ್ಲಿ ನೋಡಬೇಕಾದ ಜಾಗಗಳ ಬಗ್ಗೆ  ಹೇಳಿಲ್ಲಾ ಆಲ್ವಾ  , ಬನ್ನಿ ಸನ್ನಿಧಿಗೆ ಹೋಗುವ ಮೊದಲು  ನೋಡ ಬೇಕಾದ ಜಾಗಗಳ  ಬಗ್ಗೆ ತಿಳಿಯೋಣ , ವರದ ಹಳ್ಳಿಯಲ್ಲಿ  ನೀವು ನೋಡಬೇಕಾದದ್ದು , ಮೊದಲು  ಅಲ್ಲಿನ ವರದ ತೀರ್ಥ , ಆ ನಂತರ  ಸುಂದರ ಬೆಟ್ಟ ಗುಡ್ಡಗಳ ನೋಟವನ್ನು  ಸವಿಯಿರಿ,  ಅಲ್ಲಿಂದ ಮೆಟ್ಟಿಲುಗಳನ್ನು ಹತ್ತಿದರೆ ನಿಮಗೆ ಸಿಗುವುದು ಶ್ರೀಧರ ಸ್ವಾಮಿಗಳ   ಸಮಾಧಿ ಇರುವ ದೇವಾಲಯ, ಅಲ್ಲೇ ಇದೆ  ಒಂದು ಗುಹೆ ,  ಮೂವತ್ತು ಅಡಿ  ಎತ್ತರದ ಧರ್ಮ ಸ್ಥಂಭ , ಯಜ್ಞ ಮಂಟಪ, ಗೋ ಶಾಲೆ, ಸಂಸ್ಕೃತ ಪಾಠ ಶಾಲೆ. ಅಣ್ಣ ದಾಸೋಹ ಮಂದಿರ  ಇತ್ಯಾದಿ .


ಶ್ರೀಧರ  ಸನ್ನಿಧಿಗೆ  ಸಾಗುವ ಮೆಟ್ಟಿಲುಗಳು


ಭಕ್ತಿಯಿಂದ ಸ್ನಾನ ಮಾಡಿದ ನಾವು ಶ್ರೀಧರ  ಗುಡ್ಡದ ಮೆಟ್ಟಿಲುಗಳನ್ನು  ಹತ್ತುತ್ತಾ ಸಾಗಿದೆವು . ಹಲವು ಭಕ್ತರು ದರುಶನ ಭಾಗ್ಯ ಪಡೆದು  ಪುನೀತರಾಗಿ ಎದರುಗಡೆಯಿಂದ ಬರುತ್ತಿದ್ದರು .  ಶ್ರೀಧರ ತೀರ್ಥದಲ್ಲಿ ಸ್ನಾನಮಾಡಿದ  ನಮಗೆ ಬಿಸಿಲು ಅಷ್ಟಾಗಿ ಕಾಡಲಿಲ್ಲ,  ಮೆಟ್ಟಿಲುಗಳನ್ನು ಹತ್ತಿ ಅವದೂತನ ಸನ್ನಿಧಿಗೆ ಬಂದೆವು. ಅಲ್ಲಿನ ನೋಟ ಬಹಳ ಹರ್ಷ ದಾಯಕ ವಾಗಿತ್ತು.


ಶ್ರೀಧರ  ದೇಗುಲದ  ಹೊರ ನೋಟ



ದೇವಾಲಯದ  ಸನ್ನಿಧಿಯ ನೋಟ ಸವಿದು  , ಒಳಗಡೆ ಬಂದೆವು ಧಿವ್ಯ ಸನ್ನಿಧಿಯ ದರ್ಶನ ಲಭಿಸಿತು. ಮಂಗಳಾರತಿ , ನಂತರ ಅಲ್ಲಿನ  ನಿಶ್ಯಬ್ಧ  ವಾತಾವರಣದಲ್ಲಿ  ಸುಮಾರು ಇಪ್ಪತ್ತು ನಿಮಿಷಗಳ ಕಾಲ  ಏಕ ಚಿತ್ತತೆ ಇಂದ   ನಿಶ್ಯಬ್ಧವಾಗಿ ಕುಳಿತೆ . ಮನಸಿನಲ್ಲಿದ್ದ ಕಲ್ಮಶ  ಕರಗಿ ಹೋಯಿತು,  ಮನದಲ್ಲಿ  ಹೊಸ ಉತ್ಸಾಹದ ಚಿಲುಮೆ ಚಿಮ್ಮಿತ್ತು,  ಅಲ್ಲಿನ  ಪ್ರಶಾಂತತೆ  ಮನ ಸೂರೆಗೊಂಡಿತ್ತು, 
ಬೆಳಗಿನಿಂದ ಧಣಿದಿದ್ದ ದೇಹದ ಆಯಾಸ  ದೂರವಾಗಿ, ಹೊಸ  ಚೈತನ್ಯ  ಲಭಿಸಿತ್ತು.  ದರ್ಶನ ನಂತರ  ದೇವಾಲಯದ ಸುತ್ತ  ಹಲವು ನೋಟ ನೋಡುತ್ತಾ  ಕ್ಯಾಮರಾದಲ್ಲಿ   ನೆನಪಿನ  ನೋಟಗಳನ್ನು ಸೆರೆ  ಹಿಡಿಯುತ್ತಾ ಸಾಗಿದೆ.




 ಶ್ರೀಧರ  ಸ್ವಾಮಿಗಳ  ಜೀವನದ  ಹಲವು ನೋಟಗಳು ಇಲ್ಲಿವೆ




ವಿವಿಧ ಸೇವೆ, ನಡೆಯುವ   ಪುಣ್ಯ ಮಂಟಪ ಇದು

ಸರ್ವ ಜನರ ಹಿತ ಕಾಯುವ  ಧ್ಯೇಯ  ಇಲ್ಲಿದೆ

ಶ್ರೀಧರ ಸ್ವಾಮಿಗಳು  ಬಳಸುತ್ತಿದ್ದ  ರುದ್ರಾಕ್ಷಿ  ಮಾಲೆ , ಗುಹೆಯಲ್ಲಿ ಕಂಡಿದ್ದು

ಯಾಗ ಶಾಲಾ

ಶ್ರೀಧರ ಸ್ವಾಮಿಗಳ ಪಾದುಕೆ

ಸುಂದರ ವೃಂದಾವನ

ಶ್ರೀಧರ ಸ್ವಾಮಿಗಳ ದೇವಾಲಯದ  ಸುತ್ತ   ಹೆಜ್ಜೆ ಹಾಕುತ್ತಾ ನಿಧಾನವಾಗಿ ಸಾಗುತ್ತಿದ್ದೆವು, ನಾನೂ ಹಾಗು ಪ್ರಕಾಶಣ್ಣ , ಅಲ್ಲಿಯೇ ಗೋಡೆಯ ಮೇಲೆ ಕಂಡಿತು ಹಲವು ವಿಶೇಷತೆ , ಶ್ರೀಧರ  ಸ್ವಾಮಿಗಳ  ಜೀವನದ ಹಲವು  ಚಿತ್ರಗಳು ಅಲ್ಲಿ  ಕಂಡವು .
ನಮ್ಮ  ಹಿಂಭಾಗದಲ್ಲಿ  ಇತ್ತು , ಸೇವಾ ಮಂಟಪ,  ಸುಂದರ ಮಂಟಪ  ದರ್ಶನ ಪಡೆದು,  ಮುಂದುವರೆದೆವು,


ದೇವಾ  ದರುಶನವ  ನೀಡೆಯ



ಅಲ್ಲೇ ಸಮೀಪದಲ್ಲಿ ಒಬ್ಬ  ವೃದ್ಧರು  ಗಾಲಿ  ಕುರ್ಚಿಯಲ್ಲಿ ಕುಳಿತ್ತಿದ್ದರು, ಅವರನ್ನು ದರ್ಶನಕ್ಕೆ ಕರೆದೊಯ್ಯಲು, ಅವರ ಕುಟುಂಬ  ಸಾಹಸ ಪಡುತ್ತಿತ್ತು,  ಆ ನೋಟ ನನ್ನ ಮನ ಕರಗಿಸಿತು,  ದೇವರೇ ಇವರಿಗೆ ಒಳ್ಳೆಯದು ಮಾಡಪ್ಪಾ ಅನ್ನುತ್ತಾ  ಮುಂದೆ ಸಾಗಿದೆ,  ಶ್ರೀಧರ ಸ್ವಾಮಿಗಳ  ಹಲವು ಅರ್ಥ ಪೂರ್ಣ ವಾಕ್ಯಗಳನ್ನು ಅಲ್ಲಿ  ಪ್ರಕಟ ಮಾಡಿದ್ದಾರೆ, ಅವುಗಳನ್ನು ನೋಡುತ್ತಾ ಸಾಗಿದೆ,  ಪ್ರಕಾಶಣ್ಣ ನನ್ನನ್ನು  ಶ್ರೀಧರ ಸ್ವಾಮಿಗಳು ಧ್ಯಾನ ಮಾಡಿದ  ಗುಹೆಯ  ಬಳಿ ಕರೆದೊಯ್ದರು, ಅಲ್ಲಿನ ಫೋಟೋ ತೆಗೆಯಲು ಬೆಳಕಿನ  ಅಡಚಣೆ ಇದ್ದರೂ  ಕಷ್ಟಪಟ್ಟು, ಸುಮಾರಾದ ಒಂದು ಫ್ತೋ ತೆಗೆದೇ ಅದು ಶ್ರೀಧರ ಸ್ವಾಮಿಗಳು ಉಪಯೋಗಿಸುತ್ತಿದ್ದ  ರುದ್ರಾಕ್ಷಿಮಾಲೆಯಾಗಿತ್ತು. ನಂತರ, ಯಾಗ ಶಾಲೆ, ಪಾದುಕೆ, ದರ್ಶನ ಮಾಡಿ  ಪುನೀತ ನಾದೆ.



 ಪ್ರಸಾದ ಸ್ವೀಕರಿಸಲು ನಿಂತ ಭಕ್ತರು 



ಅಲ್ಲಿನ ನೋಟ ನೋಡುತ್ತಾ , ಆ ಪ್ರದೇಶವನ್ನು  ಬಿಟ್ಟು ಹೋಗಲು ಮನಸು ತಕರಾರು ಮಾಡುತ್ತಿತ್ತು, ಆದರೂ ಒಲ್ಲದ ಮಸಿನಿಂದ ಮೆಟ್ಟಿಲುಗಳನ್ನು ಇಳಿಯುತ್ತಾ  ಸಾಗಿದೆವು, ದ್ವಜ ಸ್ಥಂಭ ನೋಡಲು  ಆಗಲಿಲ್ಲ, ಮತ್ತೊಮ್ಮೆ ನೋಡುವ  ಅವಕಾಶ  ಸಿಗಲೆಂದು  ಆಶಿಸಿ  ಮುಂದುವರೆದೆವು, ಪ್ರಸಾದ ಸ್ವೀಕಾರ ಮಾಡಲು ಭೋಜನ ಶಾಲೆಗೇ  ಬಂದೆವು . ವ್ಯವಸ್ಥಿತವಾದ  ಭೋಜನ ಶಾಲೆಯಲ್ಲಿ  ಪ್ರಸಾದ ಸ್ವೀಕರಿಸಿದೆವು. ಜೊತೆಗೆ ಅಲ್ಲಿನ  ಕೆಲವು ನಿಯಮಗಳು  ಇಷ್ಟವಾದವು, ಅವುಗಳಲ್ಲಿ,  ಊಟ ಮಾಡಿದ ತಟ್ಟೆಗಳನ್ನು  ಶುಚಿಗೊಳಿಸುವುದು,  ಊಟದ ಸಮಯದಲ್ಲಿ ಮೊಬೈಲ್  ಬಳಸದಂತೆ ತಾಕೀತು ಮಾಡಿರುವುದು  ನಿಜಕ್ಕೂ ಶ್ಲಾಘನೀಯ .



ಬೆಂಗಳೂರಿನಿಂದ  ಬರುವ ಬಸ್ಸು

ಪ್ರವಾಸ ಸ್ವೀಕರಿಸಿದ  ನಾವು ಹೊರಗೆ ಬಂದಾಗ  ಅಲ್ಲೊಂದು ಬಸ್ಸಿನಲ್ಲಿ  ವರದಹಳ್ಳಿ, ಸಾಗರ, ಪುಣೆ ಎನ್ನುವ ಬೋರ್ಡು ಇತ್ತು,   ಹೌದು ವರದ ಹಳ್ಳಿಗೆ  ಮಹಾರಾಷ್ಟ್ರದಿಂದಲೂ  ಹೆಚ್ಚಿನ ಭಕ್ತರು ಆಗಮಿಸುತ್ತಾರೆ, ಜೊತೆಗೆ ಬೆಂಗಳೂರಿನಿಂದ  ಇಲ್ಲಿಗೆ ಹಲವು ಖಾಸಗಿ  ಬಸ್ಸುಗಳು ಇಲ್ಲಿಗೆ ಭಕ್ತರನ್ನು ಕರೆತರುತ್ತವೆ.

ಇಲ್ಲಿನ ತೀರ್ಥದ  ವಿಸ್ಮಯ ನಿಜಕ್ಕೂ ಅಚ್ಚರಿ

ಮತ್ತೊಂದು ವಿಚಾರ ಇಲ್ಲಿನ  ಶ್ರೀಧರ  ತೀರ್ಥದ್ದು , ಈ  ಜಲ ಇಲ್ಲಿನ ಸುತ್ತ ಮುತ್ತಲಿನ  ಗುಡ್ಡಗಳಿಂದ  ಹಲವು ಕಾಡನ್ನು  ಬಳಸಿ ಬರುತ್ತದೆ. ಹಲವು ಔಷಧಿ ಸ್ವರೂಪದ  ಗಿಡ ಮರಗಳು, ಬೇರುಗಳನ್ನು  ಈ ಜಲ ಸ್ಪರ್ಶಿಸುವ ಕಾರಣ  ಇದು ಬಹಳ ಪವಿತ್ರ ಅನ್ನಿಸುತ್ತದೆ.   ನಿಮಗೆ ಅಲ್ಲಿ  ಹಲವು ಜನರು ದೊಡ್ಡ ದೊಡ್ಡ ಕ್ಯಾನುಗಳಲ್ಲಿ  ಅಲ್ಲಿನ ಪುಣ್ಯ ಜಲವನ್ನು ತುಂಬಿಕೊಳ್ಳುವ  ನೋಟ ಕಾಣಿಸುತ್ತದೆ,  ಮೊದಲು ನಿಮಗೆ  ಇದು ವಿಚಿತ್ರವಾಗಿ ಕಂಡರೂ  ನಿಮಗೆ ಅನುಭವ ಆದಾಗ  ಅಚ್ಚರಿ ಆಗುತ್ತದೆ . ಇಲ್ಲಿನ ತೀರ್ಥವನ್ನು ನಿಮ್ಮ ಮನೆಯಲ್ಲಿ ಎಷ್ಟು ದಿನ ಇಟ್ಟರೂ ವಾಸನೆಯಾಗಲಿ, ಅಥವಾ ಅದರ ಮೂಲ ರುಚಿಯಾಗಲಿ ಕೆಡುವುದಿಲ್ಲ, ಇದು ನಿಜಕ್ಕೂ ಅಚ್ಚರಿಯ ವಿಚಾರ . ಇದು ನನ್ನ ಅನುಭವದ ವಿಚಾರ ಕೂಡ,  ಹಲವು ಕ್ಷೇತ್ರಗಳ  ತೀರ್ಥ ತಂದು  ಮನೆಯಲ್ಲಿ ಇಟ್ಟುಕೊಂಡ ಕೆಲ  ದಿನಗಳಲ್ಲಿ  ಆ ಜಲ  ವಾಸನೆ ಬರುವುದನ್ನು ಕಂಡಿದ್ದೇನೆ, ನೀರನ್ನು  ಹಾಗೆಯೇ ಒಂದು ಬಾಟಲಿನಲ್ಲಿ  ತುಂಬಿ ಇಟ್ಟರೆ  ಕೆಲದಿನಗಳಲ್ಲಿ  ಆ ನೀರಿನಲ್ಲಿ  ಹುಳುಗಳು ಕಾಣ ಸಿಗುತ್ತವೆ, ಇದು ವೈಜ್ಞಾನಿಕ  ಸತ್ಯ, ಆದರೆ  ಶ್ರೀಧರ  ತೀರ್ಥ ಜಲ ಮನೆಗೆ ತಂದು  ಸುಮಾರು ಒಂದು ತಿಂಗಳಾದರೂ  ಮೊದಲ ದಿನ ಆ ಜಲ ಕುಡಿದಾಗ ಯಾವ  ರುಚಿ ಯಿತ್ತೋ , ಹಾಗೆ ಇಂದಿಗೂ ಇರುವುದು ನನಗೆ ವಿಸ್ಮಯ ಅನ್ನಿಸಿದೆ.


ರಾತ್ರಿ ಡಿಮ್ ಅಂಡ್ ಡಿಪ್ ಕೊಡು ಮಗಾ


ಸುಂದರ ಅನುಭವದ ಮೂಟೆ ಹೊತ್ತು ಸಂತ್ರುಪ್ತನಾಗಿ ವಾಪಸ್ಸು ನಮ್ಮ ಕಾರಿನ ಬಳಿ ಬರುವ  ಹಾದಿಯಲ್ಲಿ ಕಣ್ಣಿಗೆ  ಬಿತ್ತು , ಆ ಬನವಾಸಿ  ಸೂಪರ್  ಬಸ್ಸು  ,  ಕೀಟಲೆಯ  ಮನಸು ಜಾಗೃತವಾಯಿತು,  ಪ್ರಕಾಶಣ್ಣ  ಇಲ್ಲಿ ನೋಡಿ ಅಂದೇ  '' ರಾತ್ರಿ ಡಿಮ್ ಡಿಪ್  ಕೊಡು ಮಗಾ''  ಎಂಭ ಘೋಷ ವಾಕ್ಯ ,  ನಮ್ಮ  ಪಟ್ಟಣ ಗಳಲ್ಲಿ ಇರಬೇಕಾದ  "ಡಕೋಟಾ   ಎಕ್ಸ್ಪ್ರೆಸ್ "   ಸ್ವಚ್ಚಂದ  ಪರಿಸರ ಇರುವ ಇಲ್ಲಿಗ್ಯಾಕೆ ಬಂತೂ  ಅಂತಾ   ಜೋರಾಗಿ ನಕ್ಕೆವು.  ಇಂತಹ ಸಮಯದಲ್ಲಿಯೂ   ನಮ್ಮ ಮುಖದಲ್ಲಿ ನಗು ಅರಳಿಸಿದ ಈ ಬಸ್ಸಿಗೆ ಥ್ಯಾಂಕ್ಸ್ ಹೇಳುತ್ತಾ , ಸಾಗರ ಪಟ್ಟಣಕ್ಕೆ  ವಾಪಸ್ಸು  ಹೊರಟೆವು .  ಕೆಳದಿಯ ಇತಿಹಾಸದ  ಕೂಗು ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ... !







Wednesday, May 28, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ .....!!

ತುಂಟ ಮನಸಿನ  ಸರದಾರನೊಡನೆ  ಐಸ್ ಕ್ಯಾಂಡಿ ತಿನ್ನುವ ಯೋಗ


ನಮಸ್ಕಾರ  ಗೆಳೆಯರೇ  ಇತೀಚೆಗೆ   ಘಟನೆ ನಡೆಯಿತು,  ನಮ್ಮ ಬ್ಲಾಗ್ ಲೋಕದ  ಸಹೋದರಿ  ಪುಟ್ಟಿ ಒಬ್ಬಳು  ಪ್ರೀತಿಯಿಂದ ಮದುವೇ   ನಿಶ್ಚಯ  ಆಗಿರುವುದಾಗಿ ತಿಳಿಸಿ , ಅಣ್ಣಾ ನೀವು  ಮದುವೆಗೆ ಬರಲೇಬೇಕು ಅಂದಳು ,  ನಿನ್ನ ಮದುವೆ ಯಾವತ್ತು  ಪುಟ್ಟಿ ಅಂದೇ , ಅಣ್ಣಾ  ಅದು ಮೇ  ೧೧ ರಂದು ಬರಲೇಬೇಕು   ಒತ್ತಾಯದ ಕರೆ  ಬಂತು , ಯೋಚಿಸಿದೆ  ಅಲ್ಲಮ್ಮ  ಮೇ ೧೧ ಕ್ಕೆ  ಬೇರೆ  ಕಾರ್ಯಕ್ರಮ ಇದೆ  ಬಲವಂತಾ  ಮಾಡಬೇಡ , ನಿನ್ನ  ಮದುವೆ ನಿಶ್ಚಿತಾರ್ಥಕ್ಕೆ  ಬರುತ್ತೇನೆ ಯಾವತ್ತು ಹೇಳು  ಅಂದೇ,  ಏಪ್ರಿಲ್ ೧೩ ಕ್ಕೆ ಇದೆ  ಮಂಜುಗುಣಿ ಹತ್ತಿರ ನಮ್ಮೂರು ಬರಲೇ ಬೇಕು  ಅಂದಳು .  ಹೀಗೆ ಶುರು ಆಗಿತ್ತು ಮತ್ತೊಂದು ಪ್ರವಾಸದ  ಸಿದ್ದತೆ .

ಮುಂದಿನ ಸಿದ್ದತೆ  ಯಾರ ಜೊತೆ ಹೊರಡ  ಬೇಕೂ ಎನ್ನುವುದು,  ಮೊದಲು ಗೆಳೆಯ  ಶ್ರೀಕಾಂತ್ ಮಂಜುನಾಥ್  ಅವರ  ಜೊತೆ ಹೊರಡಲು  ಸಿದ್ದತೆ ನಡೆಯಿತು, ಆದರೆ  ಆಕಸ್ಮಿಕವಾಗಿ ಬಂದ  ಅವರ ಕಾರ್ಯ ಕ್ಷೇತ್ರದ  ಅಡಚಣೆ  ಅವರ ಪ್ರವಾಸ ರದ್ದು ಪಡಿಸಿತು, ಇನ್ನು  ನಮ್ಮ ಪ್ರಕಾಶಣ್ಣ   ಬರುವ ಬಗ್ಗೆ  ಫೋನ್ ಮಾಡಿದೆ,  ಅಣ್ಣ ಟ್ರೈ ಮಾಡ್ತೀನಿ  ಎರಡು ದಿನ ಟೈಮ್  ಕೊಡಿ ಅಂದರು, ನಂತರ  ಎರಡು ದಿನ ಬಿಟ್ಟು ಫೋನ್ ಮಾಡಿದ್ರೆ  ಸ್ವಲ್ಪ ಅವರ ಕೆಲಸದ  ಒತ್ತಡದಲ್ಲಿ   ಡೋಲಾಯಮಾನದ ಮನಸ್ಸಿನಿಂದ  ಸ್ವಲ್ಪ ತಡಕಾಡಿದರು , ಪ್ರಕಾಶಣ್ಣ  ದಾರಿಯಲ್ಲಿ  ಹೋಗ್ತಾ  ವರದಹಳ್ಳಿ  ನೋಡೋ ಆಸೆ ಇದೆ ಅಂತಾ  ನನಗೆ ಅರಿವಿಲ್ಲದೆ ಬಾಯಿಂದ  ಬಂದಿತ್ತು,   ಅರೆ ಅಚ್ಚರಿ  ಅಣ್ಣ  ಬರುತ್ತೇನೆ ನಡೆಯಿರಿ ಅಂತಾ  ಒಪ್ಪಿಗೆ ಕೊಟ್ರು, ಹೊರಡುವ  ಹಿಂದಿನ ದಿನ  ಅವರ ಮನೆಯಲ್ಲಿ ಆಶಾ ಅತ್ತಿಗೆ ಇಂದ ಒಳ್ಳೆಯ  ಊಟ ಹೊಡೆದು , ಮಾತುಕತೆ ಹರಟೆ  ಮಾಡಿದೆವು,  ಅಯ್ಯೋ ಬಾಲಣ್ಣ ಅವರು  ಕಾರ್  ಡ್ರೈವ್ ಮಾಡದೆ  ನಿಮ್ಮ ಜೊತೆ ಬರ್ತಾ ಇರೋದೇ  ಸೋಜಿಗ  ನನಗೆ,  ಬಹುಷಃ  ಇದೆ ಮೊದಲ ಸಾರಿ  ಕಾರ್ ಡ್ರೈವ್ ಮಾಡದೆ  ಬೇರೆಯವರು ಡ್ರೈವ್ ಮಾಡುವ ಕಾರಿನಲ್ಲಿ ಊರಿಗೆ ಹೋಗ್ತಾ ಇರೋದು ಎನ್ನುವ ವಿಚಾರ  ಬಿಚ್ಚಿಟ್ಟರು ......!  ಹರಟೆ ಹೊಡೆದು  ನಿದ್ದೆಗೆ ಜಾರಿದೆ,

ಕಟ್ ಮಾಡಿದ್ರೆ ಮುಂಜಾವಿನ  ಐದು ಘಂಟೆಗೆ  ನಮ್ಮ ಪಯಣ ಆರಂಭ  ಅಣ್ಣಾ , ಎನ್. ಹೆಚ್ . ೪ ರಲ್ಲಿ ಹೋಗೋಣ  ಬೇಗ ಹೋಗ ಬಹುದು ಅಂತಾ  ಸೂಚನೆ  ಪ್ರಕಾಶ್ ಹೆಗ್ಡೆ ಯವರಿಂದ  ಆದರೆ ಈ ತರಲೆ ಕೇಳಬೇಕಲ್ಲಾ , ಅಣ್ಣಾ  ಶಿವಮೊಗ್ಗಾ ಕಡೆಯಿಂದಾ  ಹೋಗೋಣ , ಸಕ್ರೆ  ಬೈಲು  ನೋಡ ಬೇಕು  ಅಂತಾ  ವರಾತ  ನನ್ನಿಂದ  ಇಲ್ಲೇ ಮೊದಲ ತುಂಟಾಟ  ಶುರು .ಆಗಿತ್ತು,  ಆದರೆ  ಪ್ರೀತಿಯ ಮನದ ಗೆಳೆಯ  ನನ್ನ ಮಾತಿಗೆ ತಲೆ ಆಡಿಸಿ  ಜೈ ಅಂದರು, ಬೆಂಗಳೂರಿನಿಂದ  , ನೆಲಮಂಗಲ,  ತಲುಪುವಷ್ಟರಲ್ಲಿ  ಹೊಟ್ಟೆ ಲಾವ್ ಲಾವ್  ಎನ್ನುತ್ತಿತ್ತು,   ಆದ್ರೆ    ಪ್ರಕಾಶಣ್ಣ  ತುಮಕೂರಿನಲ್ಲಿ  ಒಳ್ಳೆ ಹೋಟೆಲ್ನಲ್ಲಿ  ತಿಂಡಿ ತಿನ್ನೋಣ  ಎನ್ನುತ್ತಾ  ಮಾತಿನಲ್ಲಿ ತೊಡಗಿದೆವು, ಮಾತನಾಡುತ್ತಾ  ತುಮಕೂರು, ತಲುಪಿದೆವು,  ನಮ್ಮ ಹೊಟ್ಟೆ ಹಸಿವನ್ನು ನೀಗಿಸಲು  ಮುಂಜಾನೆ ಆರು ಘಂಟೆಗೆ  ಯಾವ ಹೋಟೆಲ್ಗಳೂ  ತೆರೆದಿರಲಿಲ್ಲ,  ಸರಿ ಮುಂದೆ ನೋಡೋಣ ಅಂತಾ ಗುಬ್ಬಿ, ಗೆ ಬಂದರೆ  ಆಲ್ಲಿಯೂ  ಅದೇ ಕಥೆ,   ಪಯಣದಲ್ಲಿ  ಹೊಟ್ಟೆ ಹಸಿವು   ನಮ್ಮ ಮಾತಿಗೆ ಕಡಿವಾಣ  ಹಾಕಿತ್ತಾದರೂ  , ಹಸಿವನ್ನು ಮರೆಯಲು   ಒಂದಷ್ಟು ಜೋಕ್  ಹೇಳಿಕೊಂಡರೂ  ಹೊಟ್ಟೆಯಲ್ಲಿನ ಹಸಿವು  ನಗಲೂ  ತ್ರಾಣ ಇಲ್ಲದಂತೆ  ಮಾಡಿತ್ತು . ತಿಪಟೂರು  ತಲುಪಷ್ಟರಲ್ಲಿ  ಹೈರಾನಾಗಿದ್ದೆವು . ಕೊನೆಗೂ ಕಂಡಿತ್ತು,  ತಿಪಟೂರು  ಪಟ್ಟಣದಲ್ಲಿ   ಪೈ ಹೋಟೆಲ್ .  ನೋ ಪಾರ್ಕಿಂಗ್ ಇದ್ದ ಬೋರ್ಡ್  ಬಳಿ  ಕಾರುನಿಲ್ಲಿಸಲು  ಹೋಟೆಲ್ನವರು  , ನೋ ಪಾರ್ಕಿಂಗ್  ಬೋರ್ಡ್ ಅನ್ನೇ  ಮುಂದೆ ಸರಿಸಿ  ಅನುವು ಮಾಡಿಕೊಟ್ಟರು .


 ತಿಪಟೂರಿನ ಪೈ ಹೋಟೆಲ್ ಬಳಿ  ತುಂಟ ಪ್ರಕಾಶಣ್ಣ ತೋರಿದ  ಭೂತರಾಜ  


ದಡಬಡಾಯಿಸಿ  ಕಾರಿನಿಂದ ಇಳಿದು ಬಕಾಸುರನಂತೆ  ಹೋಟೆಲ್ ಹೊಕ್ಕೆ, ಹಿಂದೆ ನಗುನಗುತ್ತಾ  ತುಂಟ ಪ್ರಕಾಶಣ್ಣ  ಬರುತ್ತಿದ್ದರು.  ಸಪ್ಲೆಯರ್  ಬಂದ  ತಕ್ಷಣ  ಅಯ್ಯಾ ಮೊದಲು ಏನಿದೆ ಅಂತಾ ಕೇಳೋದು ಬಿಟ್ಟು, ಇಡ್ಲೀ  ವಡೆ ತಗೊಂಡು ಬಾರಪ್ಪಾ  ಅಂದೇ . ಪುಣ್ಯಾತ್ಮ ನಮ್ಮ ಹಸಿವಿನ ಹಪ ಹಪಿಯ   ಮುಖನೋಡಿ,  ಪಾಪ ಎನ್ನಿಸಿರಬೇಕು  ತಕ್ಷಣವೇ  ಇಡ್ಲೀ ವಡೆ ತಂದಿಟ್ಟ . ಕ್ಷಣಮಾತ್ರದಲ್ಲಿ  ಎಲ್ಲವೂ ಗಾಯಬ್,  ಮತ್ತೆ ಇನ್ನೊಂದು  ಬಗೆಯ ತಿಂಡಿ ತಿಂದು ಕಾಫಿ ಕುಡಿದು  ಹಸಿವಿನ ಸಂಕಟದಿಂದ  ಪಾರಾದೆವು.  ಹೊಟ್ಟೆ ತುಂಬಿದ  ನಂತರ  ಮತ್ತೆ ತುಂಟತನ ಶುರು ಆಯಿತು.  ಹೋಟೆಲ್ ಹೊರಗೆ ಬಂದ  ಅಲ್ಲಿನ ಸುತ್ತ ಮುತ್ತಲ ಪರಿಸರ  ಅವಲೋಕನ ಮಾಡುತ್ತಿದ್ದೆವು . ಅಷ್ಟರಲ್ಲಿ ಪ್ರಕಾಶಣ್ಣ  ,  ಬಾಲಣ್ಣ ಅಂದ್ರು , ತಿರುಗಿ ನೋಡಿದರೆ  ಹಾರಿನ ಹಿಂದೆ ನಿಂತು ಪೋಸ್ ಕೊಡುತ್ತಿದ್ದರು  , ಬಲ ಕೈಬೆರಳು  ಏನನ್ನೋ ತೋರುತ್ತಿತ್ತು,  ನೋಡಿದರೆ ಕಾರಿನ ಹಿಂದೆ ಬರೆದಿದ್ದ  "ಭೂತರಾಜ"  ಎಂಬ ಪದ ಕಾಣಿಸಿ  ಜೋರಾಗಿ ನಗು ಬಂತು, ಸ್ವಲ್ಪ ಸಮಯದ ಮೊದಲು  ಹಸಿವಿನಿಂದ  ಬಳಲಿ , ಏನು ಸಿಕ್ಕರೂ  ತಿನ್ನಲು ಸಿದ್ದರಿದ್ದ  ನಾವೂ ಭೂತರಾಜರೆ  ಆಗಿದ್ದದ್ದು ನೆನಪಿಗೆ  ಬಂತು .        ನಮ್ಮ    ಪಯಣ ಮುಂದುವರೆಯಿತು  ಅರಸೀಕೆರೆ ಕಡೆಗೆ .


ಬತ್ತಿರುವ ಈ ಕೆರೆಯಲ್ಲಿ ಈಜು  ಹೊದೆದೀರಿ ಜೋಕೆ 


ಅರಸೀಕೆರೆ ಹತ್ತಿರವಾಗುತ್ತಿದ್ದಂತೆ  ಕಂಡಿದ್ದು ಒಂದು ಬತ್ತಿದ ವಿಶಾಲವಾದ ಕೆರೆ  ಅಲ್ಲೊಂದು ಬೋರ್ಡು, "ಕೆರೆಯ ಈ ಪ್ರದೇಶದಲ್ಲಿ ಈಜಾಡುವುದನ್ನು ನಿಷೇಧಿಸಲಾಗಿದೆ , ಈಜಾಡುವುದು ಕಂಡುಬಂದಲ್ಲಿ  ಶಿಕ್ಷೆಗೆ  ಗುರಿಪಡಿಸಲಾಗುವುದು "  ಎಂಬ ಸೂಚನೆ ನೋಡಿ ನಮ್ಮ ತುಂಟ ಪ್ರಕಾಶಣ್ಣ  ಈಜಲು  ತೆರಳಿದರು  , . ಅತ್ತ ಈ  ಸೂಚನಾ ಫಲಕ ನೋಡಿ  ನಗುತ್ತಾ  ಒಂದಷ್ಟು ಸುತ್ತಮುತ್ತಲಿನ ಫೋಟೋ ತೆಗೆದೇ , ಅರಸೀಕೆರೆ ಊರಿಗೆ  ಹೆಸರು ಬರಲು ಕಾರಣ ಈ ವಿಶಾಲವಾದ ಕೆರೆ . ಹೊಯ್ಸಳ ಅರಸರ ಕಾಲದಲ್ಲಿ  ಒಬ್ಬ  ರಾಣಿ ಕಟ್ಟಿಸಿದ  ಕೆರೆ ಇದು, ಹಾಗಾಗಿ ಅರಸಿ ಕಟ್ಟಿಸಿದ  ಕೆರೆ " ಅರಸೀಕೆರೆ "  ಆಯಿತು. ಈ ಊರನ್ನು " ಬಲ್ಲಾಳಪುರ"  ಅಂತಾನು ಕರೆಯುತ್ತಿದ್ದರು . ಅರಸಿಕೆರೆಗೆ  ಹೆಸರು ಬರಲು ಕಾರಣವಾದ  ಹೊಯ್ಸಳರ ಕಾಲದ  ಈ ಕೆರೆಯನ್ನು ಸಂರಕ್ಷಿಸಿ  ಇತಿಹಾಸವನ್ನು  ಕಾಪಾಡಿ ಅಲ್ಲಿನ ಪರಿಸರವನ್ನೂ ಕಾಪಾಡಬೇಕಾದ  ಅನಿವಾರ್ಯತೆ ಇಂದು ಆಗ ಬೇಕಾಗಿದೆ .


ನೀರಿಗಾಗಿ ಬಾಯ್ಬಿಟ್ಟ  ಕೆರೆಯ ಅಂಗಳ

ಬಿಸಿಲಿನ  ತಾಪಕ್ಕೆ  ಒಣಗಿ  ಭೂಮಿ ಬಿರಿದು  ಕೆರೆಯ ಅಂಗಳ   ಜೀವ ಜಲಕ್ಕಾಗಿ  ಬಕಪಕ್ಷಿಯಂತೆ  ಕಾದು  ಕುಳಿತ್ತಿತ್ತು,  ಕೆರೆಯ ಅಕ್ಕಪಕ್ಕ ಹಸು, ಎಮ್ಮೆ , ಹಕ್ಕಿ,   ಮುಂತಾದ ಜೀವಿಗಳು  ಬತ್ತಿದ   ಕೆರೆ  ನೋಡಿ ನೀರಡಿಕೆ  ತಾಳದೆ  ಸಂಕಟ ಪಡುತ್ತಿದ್ದವು.  ಒಮ್ಮೆ ಮನಸು ಭಾರವಾಯಿತು,


 ತಣ್ಣನೆ ಐಸ್ ಕ್ಯಾಂಡಿ  ಕೈಯಲ್ಲಿ   ಹಿತವಾದ ಮಾತು ಮೊಬೈಲ್ ನಲ್ಲಿ



 ನೆತ್ತಿಯ ಮೇಲೆ ಸೂರ್ಯ ಕೆಂಡ ಸುರಿಯುತ್ತಿದ್ದ , ಪಯಣ ಮುಂದೆ ಸಾಗಿತು.   ಅರಸೀಕೆರೆ  ಪಟ್ಟಣ,  ಬಾಣಾವರ, ಕಡೂರು, ಬೀರೂರು, ತರೀಕೆರೆ .ದಾಟಿ  ಪಯಣ  ಸಾಗಿತ್ತು,  ಬಿಸಿಲ  ತಾಪ  ಏರುತ್ತಲೇ ಇತ್ತು, ದಾರಿಯಲ್ಲಿ ಸಿಕ್ಕಿದ  ಒಬ್ಬ ಐಸ್ ಕ್ಯಾಂಡಿ  ಮಾರುವ  ವ್ಯಾಪಾರಿ , ತಕ್ಷಣವೇ  ಕಾರನ್ನು ನಿಲ್ಲಿಸಿ,  ಹಳ್ಳಿಯಲ್ಲಿ ಕಳೆದ ಬಾಲ್ಯವ ನೆನೆಯುತ್ತಾ  ಐಸ್ ಕ್ಯಾಂಡಿ ಚೀಪುತ್ತಾ  ರಸ್ತೆ ಬದಿಯಲ್ಲಿ  ನಿಂತೆವು . ಕುಳಿತು ಕುಳಿತೂ  ಕೈ ಕಾಲು   ಸೋಮಾರಿಯಾಗಿದ್ದವು .  ಓಡಾಡಿದ ನಂತರ  ಸ್ವಲ್ಪ   ಆರಾಮು ಅನ್ನಿಸಿತು,  ಪಯಣ  ಮುಂದುವರೆಯಿತು . ಭದ್ರಾವತಿ,ದಾಟಿ   ಶಿವಮೊಗ್ಗ  ತಲುಪಿದೆವು.


ಅಭಿವೃದ್ದಿಯ  ಹಾದಿಯಲ್ಲಿ ಶಿವಮೊಗ್ಗ



ಹಿಂದೆ ಬಂದಾಗ  ಹೇಗೇಗೋ ಇದ್ದ  ಶಿವಮೊಗ್ಗ  ಹೊಸ ರೂಪ  ದರ್ಶನ  ಮಾಡಿಸಿತು .  ಅಗಲವಾದ ರಸ್ತೆಗಳು,  ಹೊಸ ಹೊಸ  ಬಿಲ್ದಿಂಗುಗಳು , ಮಾಲುಗಳ ದರ್ಶನ, ಹೈ  ಟೆಕ್ ಬಸ್ ನಿಲ್ದಾಣ , ಮುಂತಾದವು ಕಣ್ಣಿಗೆ ಬಿದ್ದವು.  ಸುಂದರ ಶಿವಮೊಗ್ಗ  ಶುಚಿಯಾಗಿ   ಕಾಣುತ್ತಿತ್ತು . ನಮ್ಮ ಪಯಣ  ಮುಂದೆ ಸಾಗುತ್ತಿತ್ತು.    ಸಾಗರ ನಮ್ಮನ್ನು  ಕೈ ಬೀಸಿ ಕರೆಯುತ್ತಿತ್ತು,  ಕಟ್ ಮಾಡಿದ್ರೆ  ಸಾಗರದಲ್ಲಿನ ಹೋಟೆಲ್ ನಲ್ಲಿ  ಕಾಫಿ ಕುಡಿದು  ಹೊರ ಬಂದೆವು . ಮುಂದಿನ ನಮ್ಮ ಪಯಣ  ಶ್ರೀಧರ ಸ್ವಾಮಿಗಳ  ಸನ್ನಿಧಿ  ವರದಹಳ್ಳಿ ಕಡೆ.   ಆ ದಾರಿಯಲ್ಲಿ   ನಮ್ಮ ಕಾರು   ಓಡುತ್ತಿತ್ತು . ಮನದಲ್ಲಿ ಶ್ರೀಧರ ಸ್ವಾಮಿಗಳ  ಕಲ್ಪನೆ ಉದ್ಭವವಾಗುತ್ತಿತ್ತು.