| ಬನ್ನಿ ನಮ್ಮ ಜೊತೆ |
ನಮಸ್ಕಾರ ಬಹಳ ದಿನಗಳ ನಂತರ ಭೇಟಿ ನಮ್ಮದು, ಈ ಸರಕು ಬಹಳ ತಿಂಗಳಿನದು , ಹೌದು ಸಾರ್ ಹಳೆಯ ಅಕ್ಕಿ ಯಿಂದ ಮಾಡಿದ ಅನ್ನ ಬಹಳ ರುಚಿ ನಿಮಗೆ ಗೊತ್ತಲ್ಲ, , ಹಾಗೆ ನನ್ನ ಪ್ರವಾಸದ ನೆನಪು ಕೂಡ ಸುಮಾರು ಒಂದೂವರೆ ವರ್ಷದ್ದು , ಬನ್ನಿ ಜಾರೋಣ ನೆನಪಿಗೆ
ಒಂದು ದಿನ ಮನೆಯಲ್ಲಿ ಕುಳಿತವನಿಗೆ ಯಾಕೋ ಬೇಸರ, ಮೂಲೆಯಲ್ಲಿ ಕುಳಿತಿದ್ದ ಕ್ಯಾಮರ ಮುನಿಸಿಕೊಂಡಿತ್ತು, ಬಾರಯ್ಯ ಎಲ್ಲಾದರೂ ಹೋಗೋಣ ಅಂತಾ ಮಗನನ್ನು ಕರೆದರೆ ನನಗೆ ಪರೀಕ್ಷೆ ಇದೆ ಬರಲ್ಲಾ ಎಂಬ ಉತ್ತರ, ಹೆಂಡತಿ ಅಯ್ಯೋ ಅವನಿಗೆಪರೀಕ್ಷೆ ಇದ್ಯಂತೆ ನಾನು ಬರಲ್ಲಾ ಅಂತಾ ಅವಳಿಗೆ ಪರೀಕ್ಷೆ ಬಂದಂತೆ ಆಡಿದಳು , ಇನ್ನು ಅಮ್ಮ ಪಾಪ ನೀನು ಎಲ್ಲಾದರು ಹೋಗಿ ಬಾ ಮನಸಿಗೆ ಖುಷಿಯಾಗುತ್ತೆ, ಅನ್ನುತ್ತಾ ಪ್ರೇರಣೆ ನೀಡಿದರು, ಅಮ್ಮನ ಮಾತಿಗೆ ನನ್ನ ಪತ್ನಿ ಮಗನ ಹಿಮ್ಮೇಳ ಬೇರೆ, ಎಲ್ಲರೂ ಸೇರಿ ನನ್ನನ್ನು ಆಚೆ ಕಳುಹಿಸಲು ಪ್ಲಾನ್ ಮಾಡಿದಂತೆ ಅನ್ನಿಸಿತು, ಹ ಹ ಆದರೆ ಆದರ ಹಿಂದೆ ಎಲ್ಲರಿಗೂ ನನ್ನ ಬಗ್ಗೆ ಕಾಳಜಿ ಇತ್ತು,
| ಗಿರಿ ಶಿಖರ ದ ಒಂದು ನೋಟ ಕ್ಯಾಮರದಲ್ಲಿ |
ಎಲ್ಲಿಗೆ ಹೋಗೋದು ಅನ್ನುತ್ತಾ ಯೋಚಿಸುತ್ತಾ ಇರಲು , ನಮ್ಮ ಗಿರೀಶ್ ಸೋಮಶೇಖರ್ ನೆನಪಾಗಿ ಫೋನ್ ಮಾಡಿದರೆ ಸಾರ್ ಬಹಳ ಖುಷಿಯಾಗುತ್ತೆ ಸಾರ್ ನಿಮಗೆ ಹೇಗೂ ಎರಡನೇ ಶನಿವಾರ, ಭಾನುವಾರ ಸೇರಿ ಎರಡುದಿನ ರಜೆ ಇರುತ್ತೆ ಬನ್ನಿ ನಾನೂ ನಿಮ್ಮ ಜೊತೆ ಬರುವೆ ಎಂಬ ಪ್ರೀತಿಯ ಆಮಂತ್ರಣ, ಕೊಟ್ಟರು
ಕಟ್ ಮಾಡಿದ್ರೆ ಗಿರೀಶ್ ನನ್ನ ಭೇಟಿ ಹಾಸನ ನಗರದ ಬಸ್ ನಿಲ್ದಾಣದಲ್ಲಿ , ನಗುಮುಖದಿಂದ ಬಂದವರು ಜೊತೆ ಗೂಡಿದರು, ಗೆಳೆಯನ ಹೊತ್ತ ಗೆಳೆಯನ ಕಾರು ಸಕಲೇಶಪುರಕ್ಕೆ ಓಡಿತು, ದಾರಿ ಸವೆಸುತ್ತಾ ಎರಡು ದಿನದಲ್ಲಿ ನೋಡಬೇಕಾದ ಸ್ಥಳಗಳ ಬಗ್ಗೆ ಒಂದು ಪಟ್ಟಿ ಸಿದ್ದಪಡಿಸಿದೇವು, ಮೊದಲು ಲಗ್ಗೆ ಇಟ್ಟ ಸ್ಥಳ ಅದ್ಭುತವಾದ ಇತಿಹಾಸವನ್ನು ತನ್ನೊಳಗೆ ಅಡಗಿಸಿಕೊಂಡ ಸಕಲೇಶಪುರದ ಮಂಜರಾಬಾದ್ ಕೋಟೆಗೆ .
![]() |
| ನಕ್ಷತ್ರ ಆಕಾರದಲ್ಲಿ ನಿರ್ಮಿತವಾದ ಕೋಟೆ ಗೂಗಲ್ ನಲ್ಲಿ ಕಂಡಂತೆ |
ಹೌದು ಬಹಳ ದಿನಗಳಿಂದ ಈ ಕೋಟೆ ನೋಡಬೇಕೆಂಬ ಆಸೆ ಇತ್ತು, ಹಿಂದೆ ಒಮ್ಮೆ ಬಂದಿದ್ದರೂ ಕ್ಯಾಮರ ಇಲ್ಲದೆ ಯಾವ ಚಿತ್ರವೂ ನನ್ನಲ್ಲಿ ಇರಲಿಲ್ಲ. ನಮ್ಮ ದೇಶದ ತಂತ್ರಜ್ಞಾನ ದಲ್ಲಿ ಮಹತ್ತರ ಪಾತ್ರ ವಹಿಸಬೇಕಾದ ಈ ಕೋಟೆ ತನ್ನ ಇತಿಹಾಸವನ್ನು ಬಿಟ್ಟು ಕೊಡದೆ ಹಸಿರ ಮರೆಯಲ್ಲಿ ಕೇವಲ ಪಿಕ್ನಿಕ್ ಜಾಗವಾಗಿ ಮಲಗಿದೆ.
ಶ್ರೀ ರಂಗಪಟ್ಟಣ ಆಳುತ್ತಿದ್ದ ಟಿಪ್ಪೂ ಸುಲ್ತಾನ 1784 ರ ಸುಮಾರಿನಲ್ಲಿ ಮಂಗಳೂರು ಪ್ರಾಂತದಲ್ಲಿ ಎದ್ದ ದಂಗೆ ಅಡಗಿಸಿ ಬರುವಾಗ ಈ ಆಯಕಟ್ಟಿನ ಪ್ರದೇಶದಲ್ಲಿ ರಕ್ಷಣೆ ಉದ್ದೇಶ ವ್ಯಾಪಾರಿ ಉದ್ದೇಶಕ್ಕಾಗಿ ಈ ನಕ್ಷತ್ರಾಕಾರದ ಕೋಟೆಯನ್ನು ಕಟ್ಟಿಸಿದನೆಂದು ತಿಳಿದು ಬರುತ್ತದೆ, ಇದರ ನಿರ್ಮಾಣ 1785 ರಲ್ಲಿ ಪ್ರಾರಂಭವಾಗಿ 1792 ರಲ್ಲಿ ಮುಕ್ತಾಯಗೊಂಡಿದೆ . 1792 ರಿಂದ ಇಂದಿನವರೆಗೂ ಸುಮಾರು ಎರಡು ಶತಮಾನ ಕಳೆದರು ನಿಸರ್ಗದ ಎಲ್ಲಾ ಬಗೆಯ ಸವಾಲು ಗಳನ್ನ ಎದುರಿಸಿ ನಿಂತಿದೆ .
![]() |
| ಮಂಜರಬಾದ್ ಕೋಟೆ ಕೊಡಗು ಹಾಗು ಮಂಗಳೂರು ಪ್ರಾಂತಕ್ಕೆ ಹೆಬ್ಬಾಗಿಲಿನಂತೆ ಆಗಿತ್ತು. |
ಅಂದಿನ ಐತಿಹಾಸಿಕ ರಕ್ಷಣೆಯ ದೃಷ್ಟಿಯಿಂದ ಬಹಳ ಆಯಕಟ್ಟಿನ ಜಾಗದಲ್ಲಿದ್ದ ಕೋಟೆ ಇದು, ಟಿಪ್ಪೂ ಸುಲ್ತಾನನಿಗೆ ತಲೆ ನೋವಾಗಿದ್ದ ಮಂಗಳೂರು, ಮಡಿಕೇರಿ ಪ್ರಾಂತದ ಮೇಲೆ ಹಿಡಿತ ಸಾಧಿಸಲು ಹಾಗು ಮಂಗಳೂರು ಮೂಲಕ ತನ್ನ ವ್ಯಾಪಾರ ವಹಿವಾಟನ್ನು ಮಾಡಲು ಅನುಕೂಲವಾಗುವಂತೆ ವ್ಯಾಪಾರ ಸಾಮಗ್ರಿಗಳನ್ನು , ರಕ್ಷಣೆಗಾಗಿ ಮದ್ದು ಗುಂಡುಗಳನ್ನು ಸಂಗ್ರಹ ಮಾಡಲು ಅನುಕೂಲವಾಗಿತ್ತು ಈ ಕೋಟೆ . ಬಯಲುಸೀಮೆ , ಯಿಂದ ಮಲೆನಾಡು , ಕರಾವಳಿ ಪ್ರದೇಶಕ್ಕೆ ಹೆಬ್ಬಾಗಿಲಿನಂತೆ ಈ ಕೋಟೆ ಕಾರ್ಯನಿರ್ವಹಣೆ ಮಾಡಿರುವುದು ಕಂಡು ಬರುತ್ತದೆ. ಈ ಕೋಟೆಯ ರಚನೆ ಹಿಡಿದೆ ಅಂದರೆ ವೈರಿಗಳ ಚಲನ ವಲನ ವೀಕ್ಷಣೆ ಹಾಗು ಅವರನ್ನು ಹತ್ತಿಕ್ಕಲು ಅನುಕೂಲವಾಗುವಂತೆ ವೈಜ್ಞಾನಿಕವಾಗಿ ಈ ಕೋಟೆ ನಿರ್ಮಾಣ ಆಗಿದೆ.
| ಕೋಟೆಯ ಹೆಬ್ಬಾಗಿಲು |
ಕೋಟೆ ವಿಶೇಷವಾಗಿದ್ದು ಇದರಲ್ಲಿ ಇಂಡೋ ಸಾರ್ಸೆನಿಕ್ ಶೈಲಿಯ ಕಲೆ ಅನಾವರಣಗೊಂಡಿದ್ದು , ಸೂಕ್ಷ್ಮವಾಗಿ ಗಮನಿಸಿದರೆ ಕೋಟೆಯ ಹಲವು ಬಾಗಿಲುಗಳ ಕಾಮಾನಿನ ಮೇಲೆ ಸುಂದರ ಕಲೆ ಅನಾವರಣ ಆಗಿರುವುದನ್ನು ಗಮನಿಸಬಹುದು, ಇನ್ನೊಂದು ವಿಶೇಷ ಎಂದರೆ ಈ ಕೋಟೆಯ ನಿರ್ಮಾಣದಲ್ಲಿ ಗಾರೆ ಗಚ್ಚು, ಚಪ್ಪೆ ಇಟ್ಟಿಗೆ , ಕಲ್ಲು, ಮರ ಇಷ್ಟರ ಉಪಯೋಗ ಮಾತ್ರ ಆಗಿದೆ, ಕಬ್ಬಿಣದ ಉಪಯೋಗ ಬಹಳ ಕಡಿಮೆ ಆಗಿದೆ, ಕಮಾನು ಗಳ ನಿರ್ಮಾಣ ದಲ್ಲಿಯೂ ಸಹ ಕಬ್ಬಿಣದ ಉಪಯೋಗ ಆಗಿಲ್ಲ, ಚಪ್ಪಟೆಯಾದ ಇಟ್ಟಿಗೆ, ಗಾರೆ ಗಚ್ಚುವಿನಿಂದ ಕಮಾನುಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಇದರಲ್ಲಿ ಫ್ರೆಂಚ್ ತಂತ್ರಜ್ಞರ , ಹಾಗು ಸ್ಥಳೀಯ ತಂತ್ರಜ್ಞರ ಸಂಯೋಗದಲ್ಲಿ ತಾಂತ್ರಿಕವಾಗಿ ಬಲಿಷ್ಠ ಕೋಟೆ ರೂಪ ತಳೆದಿದೆ . ಕಟ್ಟಡ ತಂತ್ರಜ್ಞಾನ , ವಿನ್ಯಾಸ , ನಿರ್ಮಾಣ , ಜೊತೆಗೆ ಪರಿಸರ ನಿರ್ವಹಣೆ ಬಗ್ಗೆ ಇದನ್ನು ಉತ್ತಮ ಉದಾಹರಣೆ ಎಂದು ಪರಿಗಣಿಸಿ ಸಂಶೋಧನೆ ನಡೆಸ ಬೇಕಾಗಿದೆ .
| ಮಂಜರಾಬಾದ್ ಕೋಟೆಗೆ ಇರುವ ಮೆಟ್ಟಿಲುಗಳು |
ಸಕಲೇಶಪುರದಿಂದ ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರದಿಂದ ಏಳು ಕಿಲೋಮೀಟರು ಕ್ರಮಿಸಿದರೆ ತಿರುವು ಸಿಗುತ್ತದೆ , ಅಲ್ಲಿಂದ ಸಾಗುವ ಕಾಲು ಹಾದಿಯಲ್ಲಿ ಕ್ರಮಿಸಿದರೆ ನಿಮಗೆ ಮೆಟ್ಟಿಲುಗಳ ದರ್ಶನ ಆಗುತ್ತದೆ, ಮೆಟ್ಟಿಲು ಹತ್ತಿ ಹೊರಟರೆ ನೀವು ಒಂದು ಬೆಟ್ಟದ ಮೇಲೆ ಸಮತಟ್ಟಾದ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ ೩೨೪೦ ಅಡಿ ಎತ್ತರದಲ್ಲಿರುತ್ತೀರಿ
ಅಲ್ಲಿದೆ ಈ ಮಂಜರಾಬಾದ್ ಕೋಟೆ, ಮಲೆನಾಡಿನ ಮಂಜಿನಿಂದ ಆವರಿಸುವ ಪ್ರದೇಶದಲ್ಲಿರುವ ಕಾರಣ ಇದನ್ನು ಮಂಜರಬಾದ್ ಎಂದು ಕರೆದರೂ ಎನ್ನುತ್ತಾರೆ. ಬನ್ನಿ ಮುಂದೆ ಹೋಗೋಣ
| ಕೋಟೆಗೆ ತೆರಳುವ ಹಾದಿ |
| ಸ್ಮಾರಕಗಳ ಬಳಕೆ ಇಂತಹ ಕಾರ್ಯಕ್ಕಾಗಿ ಮಾತ್ರ |
ಮೆಟ್ಟಿಲು ಹತ್ತಿ ಮಣ್ಣಿನ ಹಾದಿಯಲ್ಲಿ ನಡೆದ ನಾವು ಮುಂದೆ ಬಂದೆವು , ಅಲ್ಲಿಯೇ ಸಮೀಪದಲ್ಲಿ ಪ್ರವಾಸದ ನೆಪದಲ್ಲಿ ಬರುವ ನಮ್ಮವರು ಮಾಡುವ ಕೆಲಸದ ಗೋಚರವಾಯಿತು, ಹೌದು ನಾನು ಪ್ರತಿ ಪ್ರವಾಸಿ ತಾಣದಲ್ಲಿಯೂ, ಐತಿಹಾಸಿಕ ತಾಣಗಳಲ್ಲಿ ,ನೋಡುವ ದೃಶ್ಯ ಇಲ್ಲಿ ಮತ್ತೆ ಗೋಚರಿಸಿತು, ಇಂತಹ ಜಾಗಗಳು ಹೆಂಡ ಕುಡಿಯಲು, ಮೊಜುಮಾಡಲು , ಜೂಜಾಡಲು , ಅನೈತಿಕ ಚಟುವಟಿಕೆ ನಡೆಸಲು ಉತ್ತಮವಾದ ಜಾಗಗಳೆಂದು ನಮ್ಮ ನಾಗರೀಕ ಸಮಾಜದ ಪ್ರಭುಗಳು ನಿರ್ಧರಿಸಿ ಇಂತಹ ಕಾರ್ಯ ಮಾಡುತ್ತಾರೆ, ಅವಿಧ್ಯಾವಂತರ ಜೊತೆ ಆಧುನಿಕ ಪ್ರಪಂಚದ ಹೈ ಟೆಕ್ ವಿಧ್ಯೆ ಕಲಿತ ನಾವುಗಳೂ ಸಹ ಹೀಗೆ ನಡೆದುಕೊಂಡು ನಮ್ಮ ನಾಡಿಗೆ, ಸಂಸ್ಕೃತಿಗೆ ಪ್ರತಿನಿತ್ಯ ಅವಮಾನ ಮಾಡುತ್ತಿದ್ದೇವೆ .
| ಹೆಬ್ಬಾಗಿಲಿನಲ್ಲಿ ಕಲೆಯ ಅನಾವರಣ |
| ಕೋಟೆಯ ಕೀ ಪ್ಲಾನ್ ಇಲ್ಲಿದೆ ನೋಡಿ |
ಮುಂದೆ ಹೋರಟ ನಮ್ಮನ್ನು ಸುಂದರ ಕಲೆಯನ್ನು ಹೊತ್ತ ಹೆಬ್ಬಾಗಿಲು ಸ್ವಾಗತಿಸಿತು, ಹೌದು ಹೆಬ್ಬಾಗಿಲ ಕಮಾನಿನ ಮೇಲೆ ಸುಂದರ ಇಂಡೋ ಸಾರ್ಸೆನಿಕ್ ಶೈಲಿಯ ಕಲೆ ಅನಾವರಣ ಆಗಿತ್ತು, ಇಂತಹದೆ ಕಲೆಗಳನ್ನು, ಶ್ರೀರಂಗಪಟ್ಟಣ, ಮೈಸೂರಿನ ಸ್ಮಾರಕಗಳಲ್ಲಿ ಕಾಣಬಹುದು . ಹೆಬ್ಬಾಗಿಲು ಒಳಗೆ ಹೊಕ್ಕ ನನ್ನ ಕ್ಯಾಮರ ಒಮ್ಮೆ ಎಲ್ಲಾ ಕಡೆ ತಡಕಾಡಿತು, ಅರೆ ನನ್ನ ನೆತ್ತಿಯ ಮೇಲೆ ಇತ್ತು ಒಂದು ನಕ್ಷತ್ರ , ಅಚ್ಚರಿಯಿಂದ ಗಮನವಿಟ್ಟು ನೋಡಿದೆ, ಹೆಬ್ಬಾಗಿಲ ಚಾವಣಿ ಮೇಲೆ ಮೂಡಿಸಲಾಗಿತ್ತು, ಮಂಜರಾಬಾದ್ ಕೋಟೆಯ ವಿವರವಾದ ಕೀ ಪ್ಲಾನ್ , ಅಬ್ಬ ಎಂತಹ ಜನ ಸಾರ್ ಅಂದಿನವರು, ಆಲ್ವಾ, ಬಹುಷಃ ಇನ್ಯಾವರೀತಿ ಯಿಂದಲೂ ಎರಡು ಶತಮಾನ ಕಳೆದರೂ ಅಳಿಸಿ ಹೋಗದ ಒಂದು ಕೀ ಪ್ಲಾನ್ ಅನ್ನು ಹೀಗೆ ಸಂರಕ್ಷಿಸಲು ಅನುಕೂಲ ಆಗುವಂತೆ ರಚಿಸಿದ್ದಾರೆ. ಮನದಲ್ಲೇ ಅವರಿಗೆ ವಂದಿಸಿ ಮುಂದೆ ಹೊರಟೆವು
| ಕೋಟೆಯ ಒಳ ಆವರಣ ಮ್ಯಾಗಜಿನ್ ಹೌಸ್ |
| ಕೋಟೆಯ ಒಳ ಆವರಣ ನೀರು ಸಂಗ್ರಹಣೆ ಕೊಳ |
ಕೋಟೆಯ ಒಳ ಆವರಣಕ್ಕೆ ಬಂದ ನಮಗೆ ಕೋಟೆಯ ಒಳ ಸನ್ನಿವೇಶ ಗೋಚರ ಆಯಿತು, ಮದ್ದಿನ ಮನೆ , ಜನಗಳು ಉಳಿಯಲು ಅನುಕೂಲ ಆಗುವ ಗೃಹಗಳು, ವ್ಯಾಪಾರ ಸಾಮಗ್ರಿ ಶೇಖರಣೆ ಗೆ ಅನುಕೂಲ ವಾಗುವ ಕೋಣೆಗಳು , ನೀರು ಸಂಗ್ರಹಣೆಗೆ ಕೋಟೆಯ ಮದ್ಯ ಭಾಗದಲ್ಲಿ ಕೊಳ , ಸುತ್ತಲೂ ಅಬೇಧ್ಯ ಗೋಡೆಗಳು, ಕಾವಲು ಬುರುಜು, ಎಲ್ಲವನ್ನು ಅಲ್ಲಿ ದರ್ಶಿಸಿದೆವು. ಹಸಿರ ಸಿರಿಯ ನಡುವೆ ಈ ಕೋಟೆ ತನ್ನದೇ ಶೈಲಿಯಲ್ಲಿ ಮೆರೆದಿತ್ತು.
ಅ ಹೌದು ಅಲ್ಲಿದ್ದ ಮದ್ದು ಸಂಗ್ರಹಣ ಮನೆ [ ಮ್ಯಾಗಜಿನ್ ಹೌಸ್ ] ಬಗ್ಗೆ ವಿಚಾರದ ಅರಿವಿಲ್ಲದ ಕೆಲವು ಪ್ರವಾಸಿಗಳ ಚೆಲ್ಲಾಟಕ್ಕೆ ಬಲಿಯಾಗಿತ್ತು,ಈ ಮದ್ದಿನ ಮನೆಯ ವಿಶೇಷ ಎಂದರೆ ಯಾವುದೇ ಹವಾಮಾನ ಏರಿತಗಳನ್ನು ತಡೆದುಕೊಂಡು ಮದ್ದು ಗುಂಡುಗಳನ್ನು ಸಂರಕ್ಷಣೆ ಮಾಡಲು ಇಂತಹ ಮನೆಗಳ ನಿರ್ಮಾಣ ಆಗಿದೆ, ಪಿರಮಿಡ್ ಆಕೃತಿಯಲ್ಲಿ ರಚನೆಯಾಗಿರುವ ಇವುಗಳ ಒಳಗೆ ಹೊಕ್ಕರೆ ನಿಮಗೆ ಹವಾ ನಿಯಂತ್ರಿತ ಕೋಣೆಯ ಅನುಭವ ಆಗುತ್ತದೆ, ಚಳಿಗಾಲದಲ್ಲಿ ಕೊರೆಯುವ ಚಳಿಯಲ್ಲೂ ಬೆಚ್ಚನೆ ಅನುಭವ ನೀಡುವ ಇವು, ಬೇಸಿಗೆಯಲ್ಲಿ ಉರಿ ಬಿಸಿಲನ್ನು ನಿಗ್ರಹಿಸಿ ತಣ್ಣನೆಯ ಅನುಭವ ನೀಡುತ್ತವೆ, ಮಳೆಗಾಲದಲ್ಲಿ ಶೀತದಿಂದ ರಕ್ಷಣೆ ನೀಡುವ ಈ ಮದ್ದಿನ ಮನೆಯ ವಿಶೇಷ , ಇಂತಹ ಸುಮಾರು ಮದ್ದಿನ ಮನೆಗಳನ್ನು ಶ್ರೀ ರಂಗ ಪಟ್ಟಣ ಕೋಟೆಯ ಒಳಗೆ ಕಾಣಬಹುದು, ನಿರ್ಮಾಣ ಕ್ಷೇತ್ರದಲ್ಲಿ ಇಂದಿಗೂ ಇಂತಹ ಹವಾನಿಯಂತ್ರಿತ ಮದ್ದಿನ ಮನೆಗಳು ಇಂದಿನ ತಾಂತ್ರಿಕತೆಗೆ ಸವಾಲಾಗಿ ನಿಂತಿವೆ . ಸುಮಾರು ಒಂದು ಘಂಟೆಗೂ ಹೆಚ್ಚು ಹೊತ್ತು ಅಲ್ಲಿ ಕಳೆದ ನಾವು ಮುಂದಿನ ಹಾದಿ ಹಿಡಿಯಲು ಇತಿಹಾಸದ ಕೋಟೆಯಿಂದ ಹೊರಗೆ ಬಂದೆವು .
| ಹಾದಿ ಬದಿಯಲ್ಲಿನ ಅಂಗಡಿಗಳು |
ಕೋಟೆಯಿಂದ ಮುಖ್ಯ ರಸ್ತೆಗೆ ಬಂದ ನಾವು ಕಂಡ ದೃಶ್ಯ ಒಮ್ಮೆ ನಗು ಬರಿಸಿತ್ತು, ಅತ್ತಾ ಇತಿಹಾಸ ನರಳುತ್ತಿದ್ದರೆ, ಇತ್ತ ಅದರ ಚಿಂತೆ ಇಲ್ಲದೆ ಸಮಾಜ ಯಾಂತ್ರಿಕ ಬದುಕಿನಲ್ಲಿ ಮುಳುಗಿ ಹೋಗಿತ್ತು, ಮಂಗಳೂರು, ಸಕಲೇಶ ಪುರ ರಸ್ತೆಯಲ್ಲಿ ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ವಾಹನಗಳು ಹರಿದಾಡುತ್ತಿದ್ದವು , ಅತ್ತ ಪ್ರವಾಸಿಗಳಿಗೆ ಕಾಯುತ್ತಾ ಕುಳಿತ ಅಂಗಡಿಯವರು ತಮ್ಮದೇ ಲೋಕದಲ್ಲಿ ಮುಳುಗಿದ್ದರು,
ಸದ್ದಿಲ್ಲದೇ ಜಾಗ ಖಾಲಿ ಮಾಡಿದ ನಾವು ಕಲ್ಲಿನಲ್ಲಿ ಕಲೆಯ ಅರಳಿಸಿ ಮೆರೆದಿಹ ಐತಿಹಾಸಿಕ ಊರಿಗೆ ಬಂದೆವು ನಮ್ಮನ್ನು ಸ್ವಾಗತ ಕೋರಿದ್ದು ಈ ಕಲ್ಲಿನ ಕುಟ್ಟಾಣಿ. ................................. ಕಲೆಯ ಸಾಮ್ರಾಜ್ಯದೊಳಗೆ ಹೋಗುತ್ತಿದ್ದ ನನಗೆ ರೋಮಾಂಚನ ಶುರು ಆಗಿತ್ತು. ................ ಮುಂದೆ???? ಎರಡನೇ ಕಂತಿನಲ್ಲಿ ಜೊತೆಯಾಗೊಣ





