Monday, November 14, 2011

ಮೂರು ನದಿಗಳು ಸಂಗಮವಾಗುವ ಸ್ಥಳ !!!! ಜಗದ ಜನರ ಕಣ್ಣಿಗೆ ಬೀಳದೆ ನಿರ್ಮಲವಾಗಿದೆ!!!!

ಮೂರು ನದಿಗಳು ಸೇರುವ ಪಾತ್ರ ಗೂಗಲ್ ಮ್ಯಾಪ್ನಲ್ಲಿ


ಹೌದು ಈ ಜಾಗದ ಬಗ್ಗೆ ಪರಿಚಯ ಮಾಡಿಕೊಡಲಾ ಬೇಡವ ಎಂಬ ಜಿಜ್ಞಾಸೆ ಕಾಡಿದೆ. ಪರಿಚಯ ಮಾಡಿಕೊಟ್ಟರೆ ಹೆಚ್ಚಿನ ಜನ ಬಂದು ಈ ಜಾಗದ ನಿರ್ಮಲತೆ ಹಾಳಾಗುವ ಭಯ.ಏಕೆಂದರೆ ನಮ್ಮಲ್ಲಿ ಇಂತಹ ಸ್ಥಳಗಳಿಗೆ ಹೋಗುವ ಕೆಲವು ಜನ ಗೊತ್ತಲ್ಲ!!! ಚೆನ್ನಾಗಿ ತಿಂದು ಕುಡಿದು ಮಜಾ ಮಾಡಿ ಕುಡಿದ ಬಾಟಲ್ ಗಳನ್ನೂ , ಕಸವನ್ನು ಚೆಲ್ಲಾಡಿ ಬರುತ್ತಾರೆ.[ ಉದಾಹರಣೆ ಕೆ.ಆರ್.ಎಸ ಸಮೀಪವಿರುವ ಬಲಮುರಿ ] ಎಂಬ ಭಯ, ಪರಿಚಯ ಮಾಡಿಕೊಡದಿದ್ದರೆ ಇಂತಹ ಸುಂದರ ಪರಿಸರವನ್ನು ನೋಡುವ ಅವಕಾಶವನ್ನು ಹಲವಾರು ಒಳ್ಳೆಯ ಜನರಿಗೆ ತಪ್ಪಿಸಬೇಕಲ್ಲಾ ಎನ್ನುವ ಸಂಕಟ , ಇವುಗಳ ಮೇಲಾಟದಲ್ಲಿ ಪರಿಚಯ ಮಾಡಿಕೊಡುವ ಬಗ್ಗೆ ನಿರ್ಧರಿಸಿ ಈ ಲೇಖನ ಪ್ರಕಟಿಸಿದ್ದೇನೆ. ಏನ್ ಮಹಾ ಬುದ್ದಿವಂತಾ ಇವನು ಎಲ್ಲಾ ಗೊತ್ತೂ ಅನ್ನೋಹಂಗೆ ಆಡ್ತಾನೆ ಬಹಳ ಜಂಬಾ ಇವನಿಗೆ ಅಂತೀರಾ ??? ಇಲ್ಲಾ ರೀ ನೀವು ಇಲ್ಲಿ ಪರಿಚಯ ಮಾಡಿಕೊಳ್ಳುವ ಪರಿಸರದ ಜಾಗದ ಬಗ್ಗೆ ಅಂತರ್ಜಾಲ ಜಾಲಾಡಿದರೂ ಮಾಹಿತಿ ದೊರೆಯಲ್ಲಾ , ವಿಕಿಪಿಡಿಯಾ ದಲ್ಲೂ ಮಾಹಿತಿ ಇಲ್ಲ, ಗೂಗಲ್ ಸರ್ಚ್ ಈ ಜಾಗದ ಬಗ್ಗೆ ತಲೆ ಒಗೆಯುತ್ತದೆ. ಅಚ್ಚರಿ ಆಯ್ತಾ ಬನ್ನಿ ಆ ಜಾಗಕ್ಕೆ ಹೋಗೋಣ. ಕೆ.ಆರ್.ಎಸ. ಹಿನ್ನೀರಿನ ತಡಿಯಲ್ಲಿ ಹಲವಾರು ವಿಸ್ಮಯ ಕಾರಿ ಜಾಗಗಳು ಅಡಗಿಕೊಂಡಿವೆ, ಹಿನ್ನೀರಿನ ಚಾಚು ಮಂಡ್ಯ ಜಿಲ್ಲೆ ಹಾಗು ಮೈಸೂರು ಜಿಲ್ಲೆಗೆ ಸೇರಿದ ಪಾಂಡವಪುರ , ಕೆ ಆರ್.ಪೇಟೆ ,[ಮಂಡ್ಯ ಜಿಲ್ಲೆ ] ಕೆ.ಆರ್.ನಗರ , ಹುಣಸೂರು [ ಮೈಸೂರು ಜಿಲ್ಲೆ ] ಈ ಭಾಗದಲ್ಲಿ ಹರಡಿ ಕೊಂಡಿದೆ. ಈ ಭಾಗಗಳಲ್ಲಿನ ಹಲವಾರು ವಿಸ್ಮಯಗಳು ಹೊರ ಜಗತ್ತಿಗೆ ತಿಳಿದಿಲ್ಲ. ಅದಕ್ಕೆ ಹೆಚ್ಚಿನ ಪ್ರಚಾರವೂ ಇಲ್ಲ ಹಾಗಾಗಿ ಜನರ ಕಣ್ಣಿಗೆ ಮರೆಯಾಗಿ ಉಳಿದಿವೆ.ಅಂತಹ ಒಂದು ಜಾಗ ಈ ಸಂಗಮೇಶ್ವರ ಪುರ ಅಥವಾ ಸಂಗಾ ಪುರ ಎನ್ನುವ ಸ್ಥಳ.

ಸಂಗಮೇಶ್ವರ ಹಾಗು ಪಾರ್ವತಿ ದೇವಾಲಯಗಳು.

ಈ ಪ್ರದೇಶದಲ್ಲಿ ಮೂರು ನದಿಗಳು ಸಂಗಮವಾಗಿ ಸುಂದರ ಪರಿಸರ ನಿರ್ಮಿಸಿವೆ.ಕೊಡಗು ಜಿಲ್ಲೆ ತಲಕಾವೇರಿ ಯಿಂದ ಹರಿದು ಬರುವ ಕಾವೇರಿ, ಕೊಡಗಿನ ಬ್ರಹ್ಮ ಗಿರಿ ಬೆಟ್ಟದ ಲ್ಲಿ ಹುಟ್ಟಿ ಇರುಪ್ಪು ಮೂಲಕ ಹರಿದು ಬರುವ ಲಕ್ಷ್ಮಣ ತೀರ್ಥ ಹಾಗು ಚಿಕ್ಕ ಮಗಳೂರು ಜಿಲ್ಲೆ ಮೂಡಿಗೆರೆಯ ಸಮೀಪದ "ಜಾವಳಿ" ಯಿಂದ ಹರಿದು ಬರುವ ಹೇಮಾವತಿ ನದಿಗಳು ಇಲ್ಲಿ ಪ್ರೀತಿಯಿಂದ ಸಂಗಮಿಸಿ ಸಂಭ್ರಮಿಸುತ್ತವೆ .ಮೂರು ನದಿಗಳು ಇಲ್ಲಿ ಹಲವಾರು ಸಣ್ಣ ಸಣ್ಣ ಭೂಶಿರ,ಹಾಗು ದ್ವೀಪಗಳನ್ನು ನಿರ್ಮಿಸಿವೆ.
ಭೂಶಿರದ ಕಡೆಗೆ ಸಾಗುವ ಹಾದಿ

ಜನರ ಕಣ್ಣಿಗೆ ಕಾಣದೆ ನಿರ್ಮಲವಾಗಿರುವ ಸಂಗಮೇಶ್ವರ
ಭೂಶಿರದ ತುದಿಯ ಭಾಗ. [ ಎಡಭಾಗದಲ್ಲಿ ಹೇಮಾವತಿ , ಬಲಭಾಗದಲ್ಲಿ ಕಾವೇರಿ , ಎದುರು ಭಾಗದಲ್ಲಿ ಲಕ್ಷ್ಮಣ ತೀರ್ಥ ನದಿಗಳ ಸಂಗಮ]

ಪ್ರದೇಶಕ್ಕೆ ಐತಿಹಾಸಿಕ ಪೌರಾಣಿಕ ಮಹತ್ವ ಸಾರುವ ವಿಚಾರಗಳು ಇಲ್ಲದಿದ್ದರೂ ಕುಟುಂಬ ಸಮೇತ ಎಲ್ಲರೂ ಹಾಯಾಗಿ ಯಾವುದೇ ಅಡೆತಡೆ ಇಲ್ಲದೆ ವಿಹರಿಸಿ ಬರಬಹುದು. ಪ್ರದೇಶಕ್ಕೆ ಬರುವವರು ಯಾವುದೇ ಕಾರಣಕ್ಕೂ ಮರೆಯದೆ ತಿಂಡಿ ಊಟಗಳನ್ನು ಜೊತೆಯಲ್ಲಿ ತನ್ನಿರಿ . ದಯಮಾಡಿ ಸುಮಾರುಎರಡು ಹೊತ್ತಿನ ಆಹಾರ ತರುವುದು ಒಳ್ಳೆಯದು .ಈ ಪ್ರದೇಶದಲ್ಲಿ ಚೆಲುವನ್ನು ನೋಡುತ್ತಾ ದಿನ ಕಳೆಯುವುದು ತಿಳಿಯುವುದಿಲ್ಲ. ಭೂಶಿರದ ತಟದಲ್ಲಿ ಕುಳಿತು ಗುಂಪಾಗಿ ಊಟ ಮಾಡುತ್ತಿದರೆ ಅನುಭವವೇ ಬೇರೆ. ಇಲ್ಲಿಯೂ ಸಹ ಹಲವಾರು ಬಗೆಯ ಪಕ್ಷಿಗಳನ್ನು ಪಕ್ಷಿವೀಕ್ಷಕರು ಗಮನಿಸಬಹುದು, ನೀರಿನಲ್ಲಿ ಯಾವುದೇ ಹೆದರಿಕೆ ಇಲ್ಲದೆ ಸುರಕ್ಷಿತ ಜಾಗದಲ್ಲಿ ಈಜಬಹುದು,[ ಆದರೆ ಗಮನಿಸಿ ಹೆಚ್ಚು ದೂರ ಹೋದಲ್ಲಿ ಸುಳಿಗೆ ಸಿಲುಕುವ ಅಪಾಯವಿದೆ ] ಸನಿಹದಲ್ಲೇ ಇರುವ ಸಂಗಮೇಶ್ವರ ,ಪಾರ್ವತಿ ದೇವಾಲಯದಲ್ಲಿ ದೇವರ ಆಶೀರ್ವಾದ ಪಡೆಯಬಹುದು.ಎಲ್ಲಕಿಂತ ಹೆಚ್ಹಾಗಿ ಯಾವುದೇ ಗಲೀಜಿಲ್ಲದ , ನಿರ್ಮಲವಾದ ಪ್ರದೇಶದಲ್ಲಿ ಕುಟುಂಬದವರು ಮನರಂಜನೆಯ ಆಟ ಆಡಿ ಸಂತೋಷ ಹೊಂದ ಬಹುದು. ಪ್ರದೇಶಕ್ಕೆ ಬಂದೊಡನೆ ನಿಮಗೆ ಎದುರಾಗುವುದು ಮೀನುಗಾರರ ಹರಿಗೋಲು, ಸಣ್ಣ ಶೆಡ್ಡುಗಳು ಇತ್ಯಾದಿ
ನದಿಯಲ್ಲಿ ಸಿಗುವ ಮೀನುಗಳು
ಹೌದು ಇಲ್ಲಿ ಹೇರಳವಾಗಿ ಸಿಗುವ ಹಲವಾರು ಜಾತಿಯ ಮೀನುಗಳು ಮೈಸೂರು, ಬೆಂಗಳೂರು, ಪೂನ, ಮುಂತಾದೆಡೆಗೆ ಸಾಗಿಸಲ್ಪಡುತ್ತವೆ. ಛಾಯ ಚಿತ್ರ ತೆಗೆಯುವ ಹವ್ಯಾಸ ಇದ್ದಲ್ಲಿ ಕ್ಯಾಮರಾಗಳಿಗೆ ಹಬ್ಬ ಅಂತೂ ಗ್ಯಾರಂಟಿ .ಒಮ್ಮೆ ನೀವೂ ಸಹ ನಿಮ್ಮ ಕುಟುಂಬ ದೊಡನೆ ಇಲ್ಲಿಗೆ ಮರೆಯದೆ ಹೋಗಿಬನ್ನಿ [ ಆದರೆ ಅಲ್ಲಿನ ನಿರ್ಮಲತೆ ಕಾಪಾಡಲು ಸಹಕರಿಸಿ ]
ನಿರ್ಮಲ ವಾತಾವರಣದ ಸುಂದರ ನೋಟ

Wednesday, November 9, 2011

ವರಾಹನಾಥ ಕಲ್ಲಹಳ್ಳಿಯ ನೀವು ನೋಡಿದ್ದೀರಾ ????? ಹೇಮಾವತಿ ನದಿಯ ತಟದಲ್ಲಿ ಭೂದೇವಿಯ ಜೊತೆ ಕುಳಿತ ವರಾಹಾವತಾರಿ !!!!!


ಭೂ  ವರಾಹ ನಾಥ ಸ್ವಾಮೀ ಮೂಲ ವಿಗ್ರಹ.

ವರಾಹ ನಾಥ ಕಲ್ಲಹಳ್ಳಿ  ಮಂಡ್ಯ ಜಿಲ್ಲೆಯ ಕೆ .ಅರ. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ !ಕೆ.ಅರ. ಪೇಟೆ ಯಿಂದ ೧೮.ಕಿ.ಮಿ.,ಮೈಸೂರಿನಿಂದ ೪೩ ಕಿ.ಮಿ. ದೂರದಲ್ಲಿದೆ.ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ದೇವಾಲಯ ನಿರ್ಮಾಣವಾಗಿದೆ!ದೇವಾಲಯ ಪೂರ್ವಕ್ಕೆ ಮುಖ ಮಾಡಿದ್ದು ,ಗರ್ಭ ಗಡಿಯಲ್ಲಿ ಎತ್ತರದ ಪೀಠದ ಮೇಲೆ ವರಾಹ ಸ್ವಾಮಿ ಹಾಗು ಎಡ ತೊಡೆಯ ಮೇಲೆ ಭೂದೇವಿಯು ಆಸಿನಳಾಗಿದ್ದು, ಅವಳ ಸೊಂಟವನ್ನು ವರಾಹಸ್ವಾಮಿಯು ಬಳಸಿ ವಿಶಿಷ್ಟ ಬಂಗಿಯಲ್ಲಿ ದರ್ಶನ ನೀಡುತ್ತಾನೆ!ಮೂರ್ತಿಯು  ಭವ್ಯ ವಾಗಿದ್ದು ೧೫ ಅಡಿ ಎತ್ತರವಿದೆ!ಹೊರಗಿನಿಂದ ದೇವಾಲಯ ನೋಡಿದವರಿಗೆ ಇಷ್ಟು ದೊಡ್ಡ ದೇವರ ಮೂರ್ತಿ ಒಳಗಡೆ ಇದೆ ಎಂದರೆ ನಂಬಲಾರರು!ಇದನ್ನು ಭೂವರಾಹನಾಥ  ಸನ್ನಿದಿ ಎಂದು ನಂಬಿರುವ  ಜನರು ಭೂಮಿಗೆ ಸಂಬಂದಿಸಿದ ಕಷ್ಟಗಳು ಪರಿಹಾರ ವಾಗುತ್ತವೆ ಎಂದು ಹೇಳುತ್ತಾರೆ!ದೇವಾಲಯದ ಮುಂಭಾಗದಲ್ಲಿ  ಒಂದು ಶಿಲಾಶಾಸನದ ಕಲ್ಲಿದ್ದು ದೇವಾಲಯದ ಮಾಹಿತಿ ನೀಡುತ್ತಿದೆ
ಶಾಸನ ಕಲ್ಲು 
ಹಿಂದೆ ಇದ್ದ ದೇವಾಲಯ.[ ಈಗ ಹೊಸ ದೇವಾಲಯ ನಿರ್ಮಾಣ ಆಗುತ್ತಿದೆ ]

.೧೩೩೪ರ ಈ ಶಾಸನದ ರೀತ್ಯಾ ಮಹಾಪ್ರಧಾನ ಆದಿ ಸಿಂಗೇಯ ನಾಯಕನು ಕಲ್ಲಹಳ್ಳಿ ಗ್ರಾಮವನ್ನು ಅಗ್ರಹಾರವಾಗಿಸಿ ,ರಾಣಿ ದೇಮಲದೇವಿಯ ಹೆಸರಿನಲ್ಲಿ ದೇವಲಾಪುರ ಎಂದು ನಾಮಕರಣ ಮಾಡಿ ,ರಾಜ ಗುರು ಗುಮ್ಮಟ ದೇವನಿಗೆ ದಾನ ಮಾಡಿರುವುದಾಗಿ ತಿಳಿಸುತ್ತದೆ.ಶಾಸನದಲ್ಲಿ ಸೂರ್ಯ-ಚಂದ್ರ ,ಕಮಂಡಲ ,ದೀಪ ಮಾಲೆ ಕಂಬ ಅರ್ದ ಮಾನವ ಹಾಗು ಅರ್ದ ಬೇರುಂಡ ಪಕ್ಷಿ ಕೆತ್ತನೆಯಿದ್ದು ,ಪಂಜ ಮೇಲೆತ್ತಿ  ಗರ್ಜಿಸಿರುವ ಹುಲಿಯ ಕೆತ್ತನೆ ಅದ್ಭುತವಾಗಿದೆ              .ಬಂದವರು ಜೊತೆಯಲ್ಲಿ  ಊಟ ತಿಂಡಿ ಯನ್ನು ತರುವುದು ಒಳ್ಳೆಯದು ! ಇಲ್ಲಿ ತಿನ್ನಲು ಯಾವ ಸೌಲಬ್ಯ ಇರುವುದಿಲ್ಲ .ಮೈಸೂರಿನಿಂದ ಒಂದು ಸರ್ಕಾರಿ ಬಸ್ಸು ಬೆಳಿಗ್ಗೆ ೭ ಗಂಟೆಗೆ ಹೊರಡುತ್ತದೆ .ಸ್ವಂತ ವಾಹನ ಇದ್ದಲ್ಲಿ ಇನ್ನು ಸುತ್ತ ಮುತ್ತ  ಕೆಲವು ಪ್ರದೇಶ ನೋಡಬಹುದು!ಒಮ್ಮೆ ಪ್ರಯತ್ನಿಸಿ ಸಂತೋಷ ಹೊಂದಿರಿ.

Sunday, October 30, 2011

ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ !!!!ಈಗ ಇವನ್ಯಾರೆಂದು ನಮಗೆ ಗೊತ್ತೇ ಇಲ್ಲಾ !!!!

ಕನ್ನಡನಾಡಿಗೆ ತಮ್ಮ ವಿಶೇಷ ಕೊಡುಗೆ ನೀಡಿದ ಹಲವಾರು ಮಹನೀಯರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿ ಮರೆಯಾಗಿದ್ದಾರೆ.ಹಾಲಿ ಇವರು ಯಾರು ಎಂಬುದೇ ಬಹಳಷ್ಟು  ಕನ್ನಡಿಗರಿಗೆ ಗೊತ್ತಿಲ್ಲ , ಯಾಕೆಂದ್ರೆ ಇವರ ಹೆಸರಿನಲ್ಲಿ ನಮ್ಮ ನಾಡಿನಲ್ಲಿ ಯಾವುದೇ ರಸ್ತೆ, ಪುತ್ತಳಿ,,ವೃತ್ತ, ಬಡಾವಣೆ, ಇರುವುದಿಲ್ಲ ಹಾಗು ಇವರ ಬಗ್ಗೆ  ಕನಿಷ್ಠ ನೆನಪೂ ಸಹ ಮೂಡಿಸುವ ಮಾಹಿತಿಗಳೂ ಸಹ ಮರೆಯಾಗುತ್ತಿವೆ.ಯಾವುದೇ ಪ್ರದೇಶದ ಭಾಷೆ , ಸಾಹಿತ್ಯ,ಸಂಸ್ಕೃತಿ,ಇತಿಹಾಸಗಳ ಅಧ್ಯಯನಕ್ಕೆ ಶಾಸನಗಳು ಅಮೂಲ್ಯ ಆಕರಗಳು,ಇವು ಒಂದು ಜನಾಂಗದ ಆಸ್ತಿ , ಕನ್ನಡ ನಾಡಿನ ಶಾಸನ ಸಂಪತ್ತು ಹೇರಳವಾಗಿದ್ದರೂ ಅವುಗಳು ಮರೆಯಾಗಿದ್ದಾಗ , ಅವುಗಳನ್ನು ಹುಡುಕಿ  ಸಂಶೋದಿಸಿ ಕನ್ನಡ ನಾಡಿನ ಹಿರಿಮೆ ಸಾರಿದ ಈ ಸಾಹಸಿ ಗೆ ನಮ್ಮ ನಾಡಿನಲ್ಲಿ ಕನ್ನಡಿಗರ ಹೃದಯದಲ್ಲಿ  ಸ್ಥಾನ  ಸಿಗಬೇಕಾದದ್ದು  ನ್ಯಾಯ.. ಕನ್ನಡಿಗರಾದ ನಾವು   ಕನ್ನಡ ರಾಜ್ಯೋತ್ಸವ  ಆಚರಣೆ ಮಾಡುವ ಮೊದಲು  ಕನ್ನಡ ಇತಿಹಾಸಕ್ಕೆ ಕೊಡುಗೆ ನೀಡಿ ,ಕನ್ನಡ ನಾಡಿನಲ್ಲಿ ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮರೆಯಾಗಿಹೋದ ಒಬ್ಬ ಧೀಮಂತ ವ್ಯಕ್ತಿ ಬಗ್ಗೆ  ತಿಳಿಯಬೇಕಾಗಿದೆ ಹಾಗು ಮುಂದಿನ ಪೀಳಿಗೆಗೆ ಇಂತಹ ಮಹನೀಯರ ಬಗ್ಗೆ ತಿಳಿಸಬೇಕಾಗಿದೆ. ಹಾಗಾಗಿ  "ಬೆಂಜಮಿನ್ ಲೆವಿಸ್ ರೈಸ್"  ಬಗ್ಗೆ ತಿಳಿಯೋಣ ಬನ್ನಿ.


1894 ರ ಮೈಸೂರ ಜಿಲ್ಲೆಯ  ಎಪಿಗ್ರಾಫಿಯಾ
         


        .ಬೆಂಜಮಿನ್ ಲೆವಿಸ್ ರೈಸ್ [1837 -1927 ]ರವರು ಹುಟ್ಟಿದ್ದು 17 ನೆ ಜುಲೈ 1837 ರಲ್ಲಿ  ಇಂಗ್ಲೆಂಡಿನಲ್ಲಿ ವಿಧ್ಯಾಭ್ಯಾಸ ಮುಗಿಸಿ 1860 ರಲ್ಲಿ ಭಾರತಕ್ಕೆ ಕಾಲಿಡುತ್ತಾರೆ.ಅವರಿಗೆ ಮೊದಲು ಸಿಕ್ಕ ಕೆಲಸವೇ ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಹುದ್ದೆ.ನಂತರ 1865  ರಿಂದ   1868  ವರೆಗೆ ಮೈಸೂರು ಹಾಗು ಕೊಡಗು ಪ್ರಾಂತಗಳಲ್ಲಿ ಶಾಲಾ ತನಿಖಾಧಿಕಾರಿ ಹುದ್ದೆ ನಿರ್ವಹಣೆ ಮಾಡಿರುತ್ತಾರೆ..ನಂತರ 1868  ರಲ್ಲಿ ವಿಧ್ಯಾ ಇಲಾಖೆಯ ಮುಖ್ಯಾಧಿಕಾರಿಯಾಗಿ  ಉತ್ತಮ ಸೇವೆ ಸಲ್ಲಿಸಿ ಎಲ್ಲರ ಗಮನ ಸೆಳೆಯುತ್ತಾರೆ.[ನಿಮಗೆ ತಿಳಿದಿರಲಿ ಮೈಸೂರು ಪ್ರಾಂತದಲ್ಲಿ ಇವರು ಜನಗಣತಿ ಆರಂಭಿಸಿ ಮಾಹಿತಿ ಅಂಕಿ ಅಂಶ ಕಲೆ ಹಾಕಿ  ಯೋಜನೆ ತಯಾರಿಕೆಗೆ ಅನುವು  ಮಾಡಿಕೊಟ್ಟಿದ್ದಾರೆ ಹಾಗು ಈ ಜನಗಣತಿ ಭಾರತದ ಮೊದಲ ಜನಗಣತಿ ಎಂದು ಇಂದಿಗೂ ಹೇಳಲಾಗುತ್ತದೆ.ಭಾರತದ ಮೊದಲ ಜನಗಣತಿ ಪ್ರಾರಂಭವಾಗಿದ್ದು ಕನ್ನಡ ನಾಡಿನಲ್ಲಿ ಎಂದರೆ ಪ್ರತಿ ಕನ್ನಡಿಗನೂ ಹೆಮ್ಮೆಪಡಬೇಕು.ಇದೆ ಆಧಾರದ ಮೇಲೆ ಇಂದಿಗೂ  ಸಹ ಭಾರತ ಜನಗಣತಿಯನ್ನು ಪ್ರತಿ ಹತ್ತು ವರ್ಷಕೊಮ್ಮೆ ದೇಶಾಧ್ಯಂತ ನಡೆಸಲಾಗುತ್ತಿದೆ]   ನಂತರ 1882  ರಲ್ಲಿ .ಹಂಟರ್ ವಿಧ್ಯಾ ಸಮಿತಿಯ ಕಾರ್ಯದರ್ಶಿಯಾಗಿ  ಇಲಾಖೆಯ ಜವಾಬ್ಶಾರಿ ನಿರ್ವಹಿಸಿ ಅಂದಿನ ಸರ್ಕಾರದ ಮೆಚ್ಚುಗೆಗೆ ಪಾತ್ರರಾಗುತ್ತಾರೆ.ಇವರ ಕಾರ್ಯಶೀಲತೆ ಗಮನಿಸಿದ ಸರ್ಕಾರ ಇವರನ್ನು 1884 ರಲ್ಲಿ ಹೊಸದಾಗಿ ರಚಿಸಿದ ಪುರಾತತ್ವ ಇಲಾಖೆಯ ನಿರ್ದೇಶಕರನ್ನಾಗಿ ನಿಯೋಜಿಸುತ್ತದೆ.ಹಾಗು 1890 ರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ನಿಯೋಜನೆ ಮಾಡುತ್ತದೆ. ಈ ಅವಧಿಯಲ್ಲಿ ಬಿ.ಎಲ್.ರೈಸ್ ರವರು ಮಹಾತ್ಸಾಧನೆ ಮಾಡುತ್ತಾರೆ. ಮೊದಲೇ ಉತ್ಸಾಹಿಯಾಗಿದ್ದ  ರೈಸ್ ತಾವು ಕರ್ತವ್ಯ  ನಿರ್ವಹಿಸುವ ಅವಧಿಯಲ್ಲೇ ಹಲವು ಭಾಷೆಯಲ್ಲಿ  ಪಾಂಡಿತ್ಯ ಪಡೆದು,ಕನ್ನಡ ನಾಡನ್ನು, ಜನರನ್ನು ಚೆನ್ನಾಗಿ ಅರಿತಿದ್ದರು.ಪ್ರವಾಸ ಮಾಡುವ ಸಮಯದಲ್ಲಿ ತಮಗೆ ದೊರೆತ ಓಲೆಗರಿಗಳು,ಹಸ್ತ ಪ್ರತಿಗಳು,ಸ್ಥಳ ಪುರಾಣ, ಚರಿತ್ರೆ ಇವುಗಳನ್ನು ಕಲೆ ಹಾಕಿದ್ದರು.ಇವರ ಅವಧಿಯಲ್ಲಿ ಹಲವಾರು ದೇವಾಲಯಗಳಲ್ಲಿದ್ದ , ಪಾಳು ಬಿದ್ದ ದೇವಾಲಯ/ಮಂಟಪ ಗಳ ಬಳಿ ದೊರೆತ , ಹೊಲ ಗದ್ದೆಗಳಲ್ಲಿ ಅನಾಥವಾಗಿಬಿದ್ದಿದ್ದ , ಶಾಸನಗಳು,ಊರ ಒಳಗಡೆ ಕಂಡುಬಂದ , ಬಹಳಷ್ಟು ಶಾಸನಗಳನ್ನು ಪತ್ತೆ ಹಚ್ಚಿ  ಅಭ್ಯಾಸ ಮಾಡಿ ಅವುಗಳಿಂದ ತಿಳಿದುಬರುವ  ಮಾಹಿತಿಯನ್ನು ಕ್ರೂಧೀಕರಿಸಿ ರಾಶಿ ಹಾಕಿದರು.





ಮದ್ದೂರ್ ತಾಲೂಕಿನ ಅಪರೂಪದ ಆತಕೂರ್ ಶಾಸನ



.
ತಲಕಾಡಿನ ಶಾಸನ.  



              
ಈ ರೀತಿ  ಶಾಸನ , ಮಾಹಿತಿ ಸಂಗ್ರಹಿಸಿದ ಬಿ.ಎಲ್.ರೈಸ್ ತಾವೇ ಆಸಕ್ತಿ ಯಿಂದ ಹಲವಾರು ಶಾಸನಗಳನ್ನು ಓದಿ, ಹಿರಿಯರಿಂದ ಮಾಹಿತಿ ಪಡೆದು,ಯಾವುದೇ ಪೂರ್ವಾಗ್ರಹವಿಲ್ಲದೆ ಟಿಪ್ಪಣಿ ಮಾಡಿಕೊಂಡು ಆಸಕ್ತಿ ಪೂರ್ಣ ಕಾರ್ಯ ಮುಂದುವರೆಸಿದರು .1876 ರಲ್ಲಿ ಬರ್ಗೆಸ್ ಎಂಬುವರು ಆರಂಭಿಸಿದ" indian antiquary "  ಪತ್ರಿಕೆಯ ಮೊದಲ ಸಂಚಿಕೆಯಲ್ಲೇ ಮಡಿಕೇರಿ ತಾಮ್ರ ಶಾಸನದ ಬಗ್ಗೆ ಲೇಖನ ಪ್ರಕಟಿಸಿದರು.1879  ರಲ್ಲಿ ಮೈಸೂರು ಹಾಗು ಕೊಡಗಿನ ಸೀಮೆಯಲ್ಲಿ ದೊರೆತ ಶಾಸನಗಳ ಇಂಗ್ಲೀಷ್ ಅನುವಾದದ "ಮೈಸೂರ್ ಇನ್ಸ್ಕ್ರಿಪ್ಶನ್ಸ್" ಗ್ರಂಥ ಪ್ರಕಟ  ಮಾಡಿದರು.ನಂತರ ಎಪಿಗ್ರಾಫಿಯ ಕರ್ನಾಟಕ ಗ್ರಂಥ ಮಾಲೆ ಆರಂಭಿಸಿ  ಕೊಡಗಿನ ಸೀಮೆಯಲ್ಲಿ ಕಂಡುಬಂದ ಶಾಸನಗಳ ಅಪೂರ್ವ ಕ್ರೂಧೀಕರಣ ಮಾಡಿ ಕನ್ನಡ ಹಾಗು ಇಂಗ್ಲೀಷ್ ಭಾಷೆಯಲ್ಲಿ ಅರ್ಥ ನೀಡಿ  1896 ರಲ್ಲಿ "ಕೊಡಗಿನ ಗೆಜೆಟೀರ್" ಅನ್ನು ಎಪಿಗ್ರಾಫಿಯ ಕರ್ನಾಟಕ ಮಾಲೆಯಲ್ಲಿ ಮೊದಲು ಹೊರತಂದು ಇತಿಹಾಸ ನಿರ್ಮಿಸಿದರು.ಇದು ಇಡೀ ದೇಶದಲ್ಲೇ ಪ್ರಥಮವಾಗಿ ಪ್ರಕಟವಾದ  ಶಾಸನಗಳ ಒಂದು ಅಪೂರ್ವ ಗ್ರಂಥವಾಯಿತು.ನಂತರ ಇದನ್ನು ಈಗ ದೇಶಾದ್ಯಂತ ಮಾಡಲಾಗುತ್ತಿದೆ.1889 ರಲ್ಲಿ ಹಾಸನ ಜಿಲ್ಲೆ  ಶ್ರವಣ ಬೆಳಗೊಳದಲ್ಲಿ ದೊರೆತ ಶಾಸನಗಳ ಆಧಾರದ ಮೇಲೆ "ಶ್ರವಣ ಬೆಳಗೊಳದ ಶಾಸನಗಳು '' ಎಂಬ ಎರಡನೇ ಸಂಪುಟ ಹೊರಬಂದಿತು.ಅಧಿಕಾರದಲ್ಲಿದ್ದ ಹದಿನಾರು ವರ್ಷದಲ್ಲಿ  ಎಪಿಗ್ರಾಫಿಯಾ ಕರ್ನಾಟಕದ ಉಳಿದ ಹತ್ತು ಬೃಹದ್ ಸಂಪುಟಗಳನ್ನು ಪ್ರಕಟ ಮಾಡಿ ಜಿಲ್ಲಾ ವಾರು  ಶಾಸನಗಳ  ಮಾಹಿತಿ ಪ್ರಕಟಿಸಿದ್ದಾರೆ.




ಶ್ರೀ ರಂಗ ಪಟ್ಟಣದ ಸಮೀಪ  ಕಬ್ಬಿನ ಗದ್ದೆಯಲ್ಲಿ ಸಿಕ್ಕಿರುವ ಶಾಸನ.


ಬಿ.ಎಲ್. ರೈಸ್ ರವರು ಹನ್ನೆರಡು ಸಂಪುಟಗಳ ಕರ್ನಾಟಕ ಎಪಿಗ್ರಾಫಿಯ ಪ್ರಕಟಿಸಿದ ಬೆನ್ನಹಿಂದೆ ಅದರಲ್ಲಿ 8869 ಶಾಸನಗಳು ಬೆಳಕಿಗೆ ಬಂದಿದ್ದವು.ಅವರ ಕಾರ್ಯಕ್ಕೆ ಹಲವಾರು ಘನ ವಿಧ್ವಾಂಸರು, ಮೇಧಾವಿಗಳು, ಹಿರಿಯರು, ಜೊತೆಗೆ ಹಲವು ಗ್ರಾಮಗಳ ಜನತೆ  ಪ್ರೋತ್ಸಾಹ ನೀಡಿ ಮಾಹಿತಿ ಕಲೆಹಾಕಲು ನೆರವಾಗಿದ್ದರು .ಇದರಿಂದಾಗಿ ಕರ್ನಾಟಕದ ಚರಿತ್ರೆಯನ್ನು ಅರಿಯಲು ಒಂದು ಒಳ್ಳೆಯ ಆಧಾರ ಸಿಕ್ಕಿತು.ಬಿ.ಎಲ್.ರೈಸ್ ಕಂಡು ಹಿಡಿದ ಶಾಸನಗಳು ಕರ್ನಾಟಕದ ಚರಿತ್ರೆಯನ್ನು ಕ್ರಿ.ಪೂ.3  ನೆ ಶತಮಾನಕ್ಕೆ ಕರೆದೊಯ್ದವು. ಈ ಎಲ್ಲಾ ಶಾಸನಗಳಿಂದ ತಿಳಿದು ಬಂದ ರಾಜಕೀಯ ತಿರುಳನ್ನು ಬಿ.ಎಲ್.ರೈಸ್ " ಮೈಸೂರ್ ಅಂಡ್ ಕೂರ್ಗ್ ಫ್ರಂ ಇನ್ಸ್ಕ್ರಿಪ್ಶನ್ಸ್"ಎಂಬ ಗ್ರಂಥದಲ್ಲಿ ಬರೆದಿದ್ದಾರೆ. ಇವರು ಪ್ರಕಟಿಸಿರುವ ಎಪಿಗ್ರಾಫಿಯಾ ಶೇಣಿಯ ಗ್ರಂಥಗಳಲ್ಲಿ ಹಲವು ದೇವಾಲಯಗಳ ನಕ್ಷೆ ಪ್ರಕಟಗೊಂಡಿದ್ದು ಇವರು ಎಷ್ಟು ವೈಜ್ಞಾನಿಕವಾಗಿ ಅವುಗಳ ಅಧ್ಯಯನ ಮಾಡಿದ್ದಾರೆ ಎಂಬುದನ್ನು ತೋರಿಸುತ್ತವೆ.



ಸೋಮನಾಥಪುರದ ದೇವಾಲಯದ ನಕ್ಷೆ


Tuesday, October 4, 2011

ಇಲ್ಲೊಂದು ಆಕ್ಸಿಡೆಂಟ್ ಪುರಾಣ!!!ಹರಕೆಕುರಿಯ ಕಥಾಯಣ!!!!!!

  ನಮಸ್ಕಾರ  ಒಳ್ಳೆ ನವರಾತ್ರಿ ಸಮಯದಲ್ಲಿ   ಇದ್ಯಾವುದೋ ಆಕ್ಸಿಡೆಂಟ್ ಪುರಾಣ ತಂದಾ!!!!!! ಅಂತಾ ಬಯ್ದುಕೋ  ಬೇಡಿ , ನವರಾತ್ರಿಯನ್ನು ನಮ್ಮ ಬ್ಲಾಗ್ ಮಿತ್ರರು ನಗು ನಗುತ್ತಾ ಆಚರಿಸಲಿ ಅಂತಾ ಒಂದು ಹಳೆಯ ನೈಜ ಘಟನೆಯ ಚಳಕು ಇಲ್ಲಿ ಹಾಕಿದ್ದೇನೆ. ಓದಿ  ನೀವು ನಕ್ಕರೆ  ಅದೇ ನನ್ನ ನವರಾತ್ರಿಯ  ಶುಭಾಶಯಗಳು .ಬನ್ನಿ ಹೋಗೋಣ ಬಸ್ಸಿಗೆ.

 ಯಾರ್ರೀ ತುಮಕೂರು , ತುಮಕೂರು ಬೇಗ ಬನ್ನಿ ರೈಟ್ .......... ಹತ್ತಿ  ಸರ್ ಹತ್ತಿ ಸಾರ್ ......... ಅಂದ ಕಂಡಕ್ಟರ್ ...............................!!! ಬಸ್ಸಿನಲ್ಲಿ ಪ್ರತಿ ನಿತ್ಯ ಪ್ರಯಾಣಿಸುತ್ತಿದ್ದ .....ವಿವಿಧ ಸರ್ಕಾರಿ ಇಲಾಖೆ, ಬ್ಯಾಂಕ್, ಖಾಸಗಿ , ಇತರ ಸಂಸ್ಥೆಯ ಅಧಿಕಾರಿಗಳು, ನೌಕರರು,    ಸ್ಟಾರ್ಟ್ ಆದ ಬಸ್ಸನ್ನು  ದಡ ದಡ ನೆ ಹತ್ತಿ ತಮ್ಮ ತಮ್ಮ ಜಾಗ ಹಿಡಿದರು, ಬಸ್ಸಿನಲ್ಲಿ ಸೀಟ್ ಸಿಕ್ಕವರು ರಾಜ್ಯ ಗೆದ್ದ ಹರುಷದಲ್ಲಿ ಪೇಪರ್ ಓದುತ್ತಾ ಇರುವಂತೆ ನಟಿಸುತ್ತಾ ನಿಂತವರ ಚಲನ ವಲನ ನೋಡುತ್ತಾ ಮನದಲ್ಲಿ ನಗುತ್ತಾ ಮಂಡಿಗೆ ತಿನ್ನುತ್ತಿದ್ದರೆ , ಸೀಟ್ ಸಿಗದೇ ನಿಂತವರು ತಮ್ಮ ಅಸಮಾಧಾನವನ್ನು ಕಂಡಕ್ಟರ್ , ಡ್ರೈವರ್ ಮೇಲೆ ಹಾಕಿ............  ಈ ಬಸ್ಸು ಬಹಳ ಸ್ಲೋ ಕಣ್ರೀ ಇವರ ಕೊಬ್ಬು ಜಾಸ್ತಿಯಾಯ್ತು . ಇವರಿಂದಾಗಿ ನಾವು ಯಾವತ್ತೂ ಸರಿಯಾದ ಟೈಮಿಗೆ ನಮ್ಮ ಕೆಲಸಕ್ಕೆ ಹೊಗೊಕಾಗಲ್ಲಾ ಅಂತಾ ಶಾಪಾ ಹಾಕ್ತಾ ಇರ್ತಿದ್ರೂ........ ಸೀಟ್ ಸಿಗುವುದು ಸಿಗದಿರುವ ಆಟಾ ಎಲ್ಲರಿಗೂ ಒಂದಲ್ಲಾ ಒಂದು ದಿನ  ಅನುಭವ ಆಗುತ್ತಿದ್ದ ಕಾರಣ ಬರುತ್ತಿದ್ದ ಡೈಲಾಗ್ ಗಳು ವೆತ್ಯಾಸವಾಗುತ್ತಿದ್ದವು....

 ಹಾಗೆ ಕಳೆಯುತ್ತಿದ್ದ ಪ್ರಯಾಣದಲ್ಲಿ  ಒಮ್ಮೆ ಹೀಗಾಯ್ತು .........................."ದುರಾಸೆ ಪುರ "ದ ಬಳಿ ಬರುತ್ತಿದ ನಮ್ಮ ಎಕ್ಸ್ಪ್ರೆಸ್ಸ್ ಬಸ್ಸಿಗೆ ಒಂದು   "ಕುರಿ ಮರಿ"   ರಸ್ತೆಯ ಒಂದು ಬದಿಯಿಂದ  ಗಾಭರಿ ಯಿಂದ ಓಡಿಬಂದು ಚಲಿಸುತ್ತಿದ್ದ ಬಸ್ಸಿನ  ಎಡಭಾಗದ   ಹಿಂದಿನ ಚಕ್ರಕ್ಕೆ ಸಿಕ್ಕಿ  ಹಾಕಿಕೊಂಡು ಮೃತ ಪಟ್ಟಿತು , ಅದನ್ನು  ಅಟ್ಟಿಸಿಕೊಂಡು ಬಂದ ಚಿಕ್ಕ ಮಗು  ಆ "ಕುರಿ ಮರಿ " ಸತ್ತಿದ್ದನ್ನು ಕಂಡು ಸಂತೋಷದಿಂದ  ನಕ್ಕಿತ್ತು. ಅಲ್ಲೇ ರಸ್ತೆಯಲ್ಲಿದ್ದ  ಹಲವು ಜನರು ಬಸ್ಸನ್ನು ಅಡ್ಡ ಹಾಕಿ  ನಿಲ್ಲಿಸಿ  ಡ್ರೈವರ್ ಹಾಗು ಕಂಡಕ್ಟರ್ ಗೆ ಗೂಸ ಕೊಟ್ಟರು ಬನ್ನಿ  ಸನ್ನಿವೇಶ ನೀವು ನೋಡುವಿರಂತೆ..................................!!!!!!!!!!ಯಾವಾಗ ಕುರಿಮರಿ  ಬಸ್ಸಿನ ಚಕ್ರಕ್ಕೆ ಸಿಕ್ಕಿ ಕೊಂಡಿತೋ  , ಬಸ್ಸು ನಿಂತ ತಕ್ಷಣ  , ಪಾಪ ಡ್ರೈವರ್ ಹತ್ತಿರ ಹೋದ ಒಬ್ಬ  ಲೇ ಯಾರ್ಲಾ  ಅದು ಡೈವರ್ರು  ಇಳಿಲಾ  ಕೇಳಾಕೆ ಅಂತಾ ಹೇಳಿ ಕತ್ತಿನ ಪಟ್ಟಿ ಹಿಡಿದು ಕೊಂಡು ಬಸ್ಸಿನಿಂದ ಎಳೆದುಕೊಂಡಾ , ಅಲ್ಲಾ ಕಣ್ಲಾ ಅನ್ಯಾಯವಾಗಿ ಕುರಿಯ  ಸಾಯ್ಸಿ ಬುಟ್ಟೆ ಅಂತಾ ಎರಡು ಏಟು ಕೊಟ್ಟಾ.  ಬಸ್ಸಿನಲ್ಲಿ ಪ್ರತಿನಿತ್ಯ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರು  ಕೆಳಗೆ ಇಳಿದು ಡ್ರೈವರ್ ರಕ್ಷಣೆಗೆ ಧಾವಿಸಿದರು. ಆಗ ಶುರುವಾಯ್ತು. ಪಂಚಾಯ್ತಿ.{ಸುಲಭವಾಗಿ ಅರ್ಥವಾಗಲು ಒಂದೊಂದು ಕ್ಯಾರಕ್ಟರ್ ಗೆ ಹೆಸರಿಟ್ಟಿದ್ದೀನಿ}
.................................................... ...........ಸಪ್ಪೆ  ಕ್ಯಾತಾ :- ಅಲ್ಲಾ ಕಣ್ಲಾ ಡೈವರ್ರು  ಅನ್ನಾಯವಾಗಿ    ಕುರಿಮರಿಯ ತೀರ್ಸಿ ಬುಟ್ಟಲ್ಲಾ.........ಈಗೇನ್   ಮಾಡಬೇಕೂ ಯೋಳು ????                                                                     ...........                                           ಡ್ರೈವರ್ :- ಅಲ್ಲಾ ಯಜಮಾನ  ನಾನು ನಿದಾನವಾಗಿ ಬತ್ತಿದ್ದೆ , ಕುರಿಮರಿ ಬಂದು ಹಿಂದಿನ ಚಕ್ರಕ್ಕೆ ಸಿಗಾಕಂದ್ರೆ ನಾನ್ ಏನ್ ಮಾಡ್ಲಿ ಹೇಳು, ಅಂದಾ................................................................!!!!!!!!!. .................................                                         ಬಸ್ರಾಜ :- ನಾನೂ ನೋಡ್ತಾನೆ ಇವ್ನಿ, ಕುರಿಮರಿ ಬತ್ತಿದ್ದಾಗ ನೀನು ಬಿರೇಕ್ [ಬ್ರೇಕ್] ಹಾಕ್ನೆ ಇಲ್ಲಾ . ಬೊ ಸ್ಪೀಡಾಗಿ ಬಂದು  ಹಿಂದಿನ ಚಕ್ರುಕ್ಕೆ  ಕುರಿ ಸಿಗಾಕ್ಸಿ ಬುಟ್ಟೆ , ನೀನು ಬೇಕೂಂತಲೇ ಇಂಗೆ ಮಾಡಿದ್ದೀಯೇ , ಯೋ ಇವ ಇಂಗೆ ಕನೈಯ್ಯೋ  ನಮ್ಮೂರ ಜನ ಕಂಡ್ರೆ ಆಗಾಕಿಲ್ಲಾ , ಅವತ್ತು  ಪಟ್ಟಣ ದಲ್ಲಿ ಕೈತೊರ್ಸಿದ್ರೆ  ನಿಲ್ಲಿಸದೆ ಮೈಮೇಲೆ ಬಸ್ ಹತ್ತಿಸಕ್ಕೆ ಬತ್ತಾನೆ ಅಂತಾ ತನ್ನ ಹಳೆ ಸೇಡಿನ ಆರೋಪ ಮಾಡಿದಾ................!!!!                                  ಅಷ್ಟರಲ್ಲಿ  ಲಬೋ ಲಬೋ ಅಂತಾ ಬಾಯಿ ಬಡಿದುಕೊಳ್ಳುತ್ತಾ  ಒಂದು ಹೆಂಗಸು ಹಾಗು ಒಂದು ಗಂಡಸು ಬಂದರೂ !!!!!!  ಅಯ್ಯಯ್ಯೋ ಹೊಯ್ತಲ್ಲಾಪ್ಪ ನನ್ನ ಕುರಿ ಹೋದ ತಿಂಗಾ [ ತಿಂಗಳು ]  ತಾನೇ ಸಂತೇಲಿ ಕೊಂದ್ಕಂಡ್ ಬಂದಿದ್ದೆ!!!! ಹಾಳಾದ್ ಬಸ್ಸು  ಸಾಯ್ಸ್ಬುದ್ತೆ ಎನ್ಗಪ್ಪಾ ಬದುಕೋದು ನಮ್ಮಂತಾ ಬಡವರೂ ಅಂತಾ  ಡ್ರೈವರ್ಗೆ ಸಹಸ್ರ ನಾಮ ಸಹಿತ , ಅರ್ಚನೆ ಮಾಡಿ  ಡ್ರೈವರ್ ವಂಶ ಪಾವನ ಮಾಡಿದ್ದಳು.[ ಪಾಪ ಇಂತಹ ಹಳ್ಳಿಗಳ ಕಡೆ ದಿನನಿತ್ಯಾ ಸಂಚರಿಸೋ ಸಾರಿಗೆ ಸಂಸ್ಥೆ / ಖಾಸಗಿ ಬಸ್ಸಿನ  ಸಿಬ್ಬಂದಿಗಳ ಪಾಡೇ ಹಾಗೆ ಆಗಾಗ ಇಂತಹ ಅರ್ಚನೆ ಸಹಸ್ರನಾಮಾರ್ಚನೆ  , ಗೂಸ ತಿನ್ನುವಿಕೆ ನಡೆಯುತ್ತಿರುತ್ತವೆ...].ಇದ್ಯಾಕೋ ನಿಲ್ಲೋ ಲಕ್ಷಣ ಕಾನ್ತಿಲ್ಲಾ ಅನ್ನಿಸಿ ಬಸ್ಸಿನಲ್ಲಿದ್ದ   ಕೆಲವರು ಕೆಳಗೆ ಇಳಿದರೂ ................................................................. ಇಳಿದದ್ದರಲ್ಲಿ ಅವರ ಸ್ವಾರ್ಥವೂ  ಇತ್ತು ಅನ್ನಿ , ಬಸ್ ಡ್ರೈವರ್ ನ ಬಿಡಿಸಿ ಬಸ್ಸನ್ನು ಹೊರಡಿಸಿದರೆ ತಾವು ಕೆಲಸಕ್ಕೆ ಸರಿಯಾದ ಸಮಯಕ್ಕೆ ತಲುಪಬಹುದು ಅನ್ನೋ ತರಾತುರಿ ಯಲ್ಲಿ ಇಳಿದು  ರೀ ಡ್ರೈವರ್ ಅದೇನ್ ಪೈಸಲ್  ಮಾಡಿಬಿಟ್ಟು ಬನ್ರೀ .... ಲೇಟಾಗುತ್ತೆ ಅಂತಾ ಅನ್ನುತ್ತಾ , ಯಾರ್ರೀ  ಕುರಿಯವ್ರು ಅಂತಾ ಪಂಚಾಯ್ತಿ ಶುರುಮಾಡಿದರು.  ನಂತರ ಅಲ್ಲೇ ಇದ್ದ ನಮ್ಮ ಮಲ್ಲಿಕಾರ್ಜುನ ಮೇಷ್ಟ್ರು  ಇಳಿದು ಬಂದು ನ್ಯಾಯ ಶುರುಮಾದಿದ್ರೂ...............ಅವರನ್ನ ಪ್ರೀತಿಯಿಂದ ಮಲ್ಲಿಕ್ ಅನ್ನೋಣ.                                              ಮಲ್ಲಿಕ್ :- ರೀ ಅದ್ಯಾರು ಕುರಿಯವ್ರು ಬನ್ರೀ ಮುಂದಕ್ಕೆ .........!!!!!                                                                         ಕುರಿ ಮಾಲೀಕರು ಯಜಮಾನ್ರು :- ನಾಮೇ ಸಾ , ಅಂತಾ ಬಂದ್ರೂ .............................!!!!!!!!!!!!!                                                                                                                   ಮಲ್ಲಿಕ್ :- ನೋಡಯ್ಯಾ ಯಜಮಾನ  ನಾನೂ ನೋಡ್ತಾ ಇದ್ದೆ  ಬಸ್ನವ್ರ್ದು  ತಪ್ಪಿಲ್ಲಾ ... ಕುರಿ ಓಡಿಬಂದು ಚಕ್ರಕ್ಕೆ ಸಿಗಾಕತು , ಅದೇನು  ಇಸ್ಕಂಡು  ಬಸ್ಸನ್ನು ಬುಟ್ಟು ಬುಡು [ಬಿಟ್ಟು ಬಿಡು ] .......                                                                       ಕುರಿಮಾಲಿಕರು :- ಹೋದ ತಿಂಗಾ[ ತಿಂಗಳು ]  ತಾನೇ ಕಿರ್ಗಾವಲ್ ಸಂತೇಲಿ  ಎಡ್ಸಾವ್ರಾ[ ಎರಡು ಸಾವಿರಾ ] ಕೊಟ್ಟು ತಂದಿದ್ದೆ.ದಿನಾ ಐವತ್ತು ಕರ್ಚುಮಾಡಿ ಹುಳ್ಳಿ, ಬಾಳೆಹಣ್ಣು, ಎಲ್ಲಾ ಕೊಟ್ಟು ತಯಾರಿ ಮಾಡಿದ್ದೆ ....... ಒಂದೈದು ಸಾವಿರಾ ಆಗ್ಬೈದು ಅಂದಾ. [ ಸತ್ತಿದ್ದ ಕುರಿ ಹಿಂದಿನ ಚಕ್ರದಲ್ಲಿ ಬಿದ್ದಿತ್ತು  ಅದರ ದೇಹದಲ್ಲಿ ಅವನು  ಹೇಳಿದ ತಯಾರಿಯ  ಯಾವ ಲಕ್ಷಣಗಳೂ ಇರಲಿಲ್ಲ ] .........!!!!!!!!                                                                                                              ಮಲ್ಲಿಕ್ :- ಯೋ ಯಜಮಾನ ಅವೆಲ್ಲಾ ಬ್ಯಾಡ  ಸುಮ್ನೆ ನೂರ್ ರುಪಾಯಿ ಕೊಡ್ತಾರೆ  ಇಸ್ಕಂಡು ಹೋಗು , ಜಾಸ್ತಿ ಎಳದ್ರೆ         ನಿಂಗೆ ತೊಂದ್ರೆ ಅಂದ್ರೂ. .......!!!!                        ಗ್ರಾಮಸ್ತರು :- ಹ ಹ ಹ ಅಂತಾ ನಕ್ಕು , ಅಲ್ಲಾ ಸಾ ಅದೇನ್ ತೀರ್ಮಾನ ನಿಮ್ಮದು ಅಂತಾ ಹೇಳಿದ್ರೂ, ಅಲ್ಲೇ ಇದ್ದ ಒಬ್ಬಾ ಲೇ ಈ ಕುರಿಯ ನಮ್ಮೂರ ದ್ಯಾವ್ರ್ಗೆ ಹರಕೆ ಬುಟ್ಟಿತ್ತು ಅಲ್ವೇ ..............................................!!! ಅಂದಾ,   ಎಲ್ಲರಿಗೂ ಹೊಸ ಅಸ್ತ್ರ ಸಿಕ್ಕಿತ್ತು.  ಹೂ ಕಲಾ   [ಹೌದು ಕಣೋ ]   ಈಗ ಇವರ ಕುರಿ ಸತ್ತೊಯ್ತಲ್ಲಾ ಅದಕ್ಕೆ  ಇವ್ರು  ದ್ಯಾವ್ರ್ಗೆ ಗೆ "ಐದ  ಸಾವ್ರಾ" ದಂಡಾ  ಕಟ್ ಬೇಕಾಯ್ತದೆ   ಅಂದಾ ....!!!! ಮೊದಲೇ ಉರಿಯುತ್ತಿದ್ದ ಬೆಂಕಿಗೆ ಅವ ತುಪ್ಪಾ ಸುರಿದು ವಿಜಯದ ನಗೆ ನಕ್ಕಿದ್ದಾ.  ಬಸ್ಸಿನಲ್ಲಿ ಇದ್ದವರಿಗೆಲ್ಲಾ ಇವತ್ತು ತಮ್ಮ ಕೆಲಸದ ಜಾಗದಲ್ಲಿ ಮೇಲಧಿಕಾರಿಗಳಿಂದ , ಸಾರ್ವಜನಿಕರಿಂದ ,ಕೇಳಬೇಕಾದ ಮಾತುಗಳನ್ನು ನೆನೆದು ಮೈ ಚಳಿ ಶುರು ಆಗಿತ್ತು  ಬಸ್ಸಿನ ಡ್ರೈವರ್, ಕಂಡಕ್ಟರ್ ಇಬ್ಬರಿಗೂ  ಏನೂ ತಿಳಿಯದೆ ಬೆಪ್ಪಾಗಿ ನಿಂತಿದ್ದರು.                                                                                                                                                                 ಇದನೆಲ್ಲಾ  ಗಮನಿಸುತ್ತಿದ್ದ  ಮಲ್ಲಿಕ್   :- ನೋಡ್ರಪ್ಪಾ ಇದು ಸರ್ಕಾರಿ ಬಸ್ಸು ಅನ್ಗೆಲ್ಲಾ ಬಸ್ ನಿಲ್ಸಿ ತೊಂದ್ರೆ ಕೊಡಬಾರದು, ಅದೇನು ಕೊಡ್ತಾರೋ ಇಸ್ಕಂಡು  ಸುಮ್ನೆ ಬಸ್ ಬುಡಿ,  ಕುರಿಯವ್ರಿಗೆ ಇನ್ನೂರು ಹಾಗು ನಿಮ್ಮೂರ್ ದ್ಯಾವ್ರ್ಗೆ ನಾನೇ ತಪ್ಪು ಕಾಣಿಕೆ ನೂರ್ ರುಪಾಯಿ ಹಾಕ್ತೀನಿ ಅಂದ್ರೂ................................!!!!!!                                                                     ಗ್ರಾಮಸ್ಥರು :- ಏ ಅದೇನ್ಗಾದ್ದೂ ಸಾ , ಇದ್ಯಾವ್ ಸೀಮೆ ತೀರ್ಮಾನ , ಅದೆಲ್ಲಾ ಆಗಾಕಿಲ್ಲಾ ಬುಡಿ ಸಾ ಅಂದ್ರೂ , ಕೊನೆಗೆ ಒಗ್ಲಿ  "ಯೋಳು"[ ಏಳು ಸಾವಿರಾ ]   ಸಾವ್ರಾ   ಕೊಡ್ಸಿ ಅಂದ್ರೂ  ...........................!!!!!                                        ಮಲ್ಲಿಕ್ :- ಅಲ್ಲಾ ಕಣ್ರಪ್ಪಾ ನೀವು ತಪ್ಪು ಮಾಡ್ತಾ ಇದೀರಿ ಅಂತಾ , ಅಲ್ಲೇ ಇದ್ದ  ಕೆಲವು ಮುಖಗಳನ್ನು ನೋಡಿ , ಲೇ ಬಸವ, ಸೀನ, ಕೃಷ್ಣ  ಬನ್ರೋ ಇಲ್ಲಿ  ಅಂದ್ರೂ , .......................................!!!!!  ಆ ಬಹುಷಃ ಹೈಸ್ಕೂಲ್ ಮಕ್ಕಳಿರಬೇಕೂ, ಸಾ ನಮಸ್ತೆ ಸಾ ಅಂತಾ ಓಡಿಬಂದು ನಿಂತವು. [ಆಮೇಲೆ ತಿಳೀತು ಆ ಮಕ್ಕಳು ಅವರ ಶಾಲೆಯ ಮಕ್ಕಳು ಎಂದು ] ಲೇ ನಿಜ ಹೇಳ್ರೋ  ಈ ಕುರಿನ  ದ್ಯಾವ್ರಿಗೆ ಬಿಟ್ಟಿದ್ರೆನೋ ಅಂದ್ರೂ  ,                                                                                                                                                   ಮಕ್ಕಳು:- ಇಲ್ಲಾ ಸಾ ಇದು ಈ ರಾಜೇಶನ ಮನೆ ಕುರಿ ಸಾ ಅಂದವು. ಯಾರೋ ರಾಜೇಶ ಅಂದ್ರೆ ಅದೇ ಎಂಟನೆ ಕ್ಲಾಸಲ್ಲಿ ಇಲ್ವಾ ಸಾ ಅವನವು ಅಂದವು.                                                                                                         ಅಷ್ಟರಲ್ಲಿ ಗ್ರಾಮಸ್ತರ ಕಡೆ ತಿರುಗಿದ  ಮಲ್ಲಿಕ್ ಯಾಕ್ರೈಯ್ಯಾ ಸುಳ್ಳು ಹೇಳ್ತೀರಿ  ಅಂದ್ರೆ ಅಲ್ಲೇ ಇದ್ದ ಒಬ್ಬಾ ಇಲ್ಲಾ ಸಾ ಈಗತಾನೆ  ನಮ್ಮ ಹೈದಾ ಯೋಳ್ದಾ, ಈ ಕುರಿ ಅಲ್ವಂತೆ , ಅದೂ ಇಂಗೆಯ ಇತ್ತಲ್ಲಾ  ಅದಕೆ ಹಂಗಾಯ್ತು ಅಂತಾ ತಿಪ್ಪೆ ಸಾರಿಸಿದ. ಅಲ್ಲಿಗೆ ಹರಕೆ ದಂಡಾ ತಪ್ಪಿತು. ಮುಂದೆ ಸರಿ ಬಿಡ್ರಪ್ಪಾ ಎಂಗೂ ನಮ್ಮ ಟೈಮ್ ವೇಷ್ಟ್ ಮಾಡಿದ್ದೀರಿ ಬನ್ನಿ  ಇನ್ನೇನು ಪೋಲಿಸ್ ಸ್ಟೇಶನ್ ನಲ್ಲೆ ಇತ್ಯರ್ಥ ಆಗ್ಲಿ , ಎಂಗೂ ಬಸ್ಸಿನ ಡ್ರೈವರ್ಗೆ ಹೊಡೆದಿದ್ದೀರಿ, ನಾವೇ ಸಾಕ್ಷಿ ಹೇಳ್ತೀವಿ, ಬಸ್ಸಿನ ನಂಬರ್ ಬರ್ಕೊಳ್ಳಿ  , ಅಂತಾ ತಾಳಿ ಪೋಲಿಸ್ ನವರಿಗೆ ನಾನೇ ಫೋನ್ ಮಾಡ್ತೀನಿ ಅಂತಾ ಫೋನ್ ತೆಗೆದು ಹಲೋ ಅಂದ್ರೂ ಅಷ್ಟೇ .........................................!!!!!!                                                                                                               ಗ್ರಾಮಸ್ಥರು :-  ಏ ಬುಡಿ ಸಾ ಇದಕೆಲ್ಲಾ ಯಾಕೆ ಪೋಲಿಸು , ಕಟ್ಲೆ ಎಲ್ಲಾ  ನಾಮೇ ಸರಿ ಮಾಡ್ಕಂದ್ರಾಯ್ತು    ಅಂತಾ ಹೋಗ್ಲಿ  ಐದು  ಸಾವ್ರಾ ಕೊಡ್ಸಿ ಸಾ ಅಂದ್ರೂ .  

Friday, September 30, 2011

ರೀತಿ!! ಈ ರೀತಿ !!! ಇನ್ನೊಂದು ರೀತಿ !!!!

ಮೊದಲು ಗೆಳೆಯ  ಪ್ರಕಾಶ್ ಅಣ್ಣ ಬರೆದ  ಬರೆದ "ರೀತಿ" ....   ಓದಿ    ಇಟ್ಟಿಗೆ ಸಿಮೆಂಟು: ರೀತಿ..., ನಂತರ ಮತ್ತೊಬ್ಬ ಗೆಳೆಯ  ದಿನಕರ ಮೊಗೆರ ಬರೆದ  "ಈ ರೀತಿ"....http://dinakarmoger.blogspot.in/2011/09/blog-post.html ಓದಿ ನಂತರ ಬನ್ನಿ ಇಲ್ಲಿದೆ "ಇನ್ನೊಂದು ರೀತಿ"!!!!!!!    ರೀತಿ , ಈ ರೀತಿ ಕತೆಗಳ  ಮುಂದುವರೆದ ಸಂಚಿಕೆಗೆ  ಅದೇ "ಇನ್ನೊಂದು ರೀತಿ "   ತಿರುವಿನ ಹಂದರ.                                                                                                                                ...................................................................................................................................................................                                              " ನಾನು ಬಗ್ಗಿ ನೋಡಿದೆ......

ONE MESSAGE RECEIVED.....!!!!
""                                                                                            
 " I am missing you a lot , how is your wife ????    ............ raagini "
                                      
ಅರೆ ಇದೇನಿದು !!! ಇವಳ್ಯಾರು ರಾಗಿಣಿ ??? ಈ ಬಗ್ಗೆ  ಇವನೇನು ಹೇಳೇ ಇರ್ಲಿಲ್ಲಾ !!!!! ತಾಳು ತಾಳು " ರಾಗಿಣಿ " ಮದುವೆಯ ಆರತಕ್ಷತೆಯಲ್ಲಿ  ಪರಿಚಯಿಸಿದ್ದ ನೆನಪು  ಆದರೆ ಆ ದಿನ ಸೇರಿದ್ದ ಸಾವಿರಾರು ಜನರಲ್ಲಿ  ಯಾರ ಮುಖ ಜ್ಞಾಪಕಕ್ಕೆ ಬರುತ್ತೆ??? ಆಲ್ವಾ . ಯಾಕೋ ಮನದಲ್ಲಿ ನನಗೆ ತುಮುಲ ಶುರುವಾಯ್ತು.............!!!!!!!! ಅಷ್ಟರಲ್ಲಿ ..................................
ನನ್ನ ಮೊಬೈಲಿನಲ್ಲಿ  ಎಸ.ಎಂ.ಎಸ ಬಂದ ಸದ್ದು ............................................!!!!!!!!!!!!!!!!!!!! ಇನ್ಬಾಕ್ಸ್  ತೆರೆದು ಮೆಸ್ಸೇಜ್  ನೋಡಿದೆ........................................................................!!!!!!!!!!    HAPPY WISHES TO "YOU, HOW IS HUBBY ?? IS HE SMARTER THAN ME ???  I MISSED U  A LOT , I..................................GUESS ME!!!!! .................................................A  HERO !!!!.......................!!"
                                                                                                                                                                 ನನಗೆ ಕೆಟ್ಟ ಕೋಪ ಬಂದು  ಮತ್ತೆ ನನ್ನ ಮೊಬೈಲ್ ನಿಂದ  ಎಸ. ಎಂ.ಎಸ. ಮಾಡಿದೆ  WHO'S THIS???...................ಅಷ್ಟರಲ್ಲಿ  ಪುಟ್ಟಣ್ಣಿ   ಆಫಿಸ್ ಗೆ ಲೇಟಾಯ್ತು  ತಿಂಡಿ ಕೊಡ್ತೀಯಾ ........................................... ಅವನ ಕರೆ ಬಂತು ಮನಸ್ಸಿನಲ್ಲಿ .ಗೊಂದಲದ ಗೂಡಾಗಿದ್ದ  ನಾನು  ಯಾಂತ್ರಿಕವಾಗಿ  ಹೋಗಿ  ತಿಂಡಿ ಕೊಟ್ಟೆ. ........................................!!!                  ಯಾಕೆ    "ಪುಟ್ಟಣ್ಣಿ" ರಾತ್ರಿ ಬೇಸರ ಇನ್ನೂ ಹೋಗಿಲ್ವಾ ಚಿನ್ನಾ ................. ಅಂತಾ ಅವನು ಹೇಳಿದ ಮಾತಿಗೆ  ಬಲವಂತದ ನಗೆ ನಕ್ಕು   ಹಾಗೇನಿಲ್ಲಾ  ಅಂತಾ ಸುಮ್ಮನಾದೆ.                .................... ತಿಂಡಿ ತಿನ್ನುವಾಗಲೂ  ಆತಂಕದಿಂದ ಆತ  ತನ್ನ ಮೊಬೈಲ್ ನಿಂದ ಮೆಸ್ಸೇಜ್  ಕಳುಹಿಸುತ್ತಲೇ ಇದ್ದದ್ದು ನನ್ನ ಗಮನಕ್ಕೆ ಬಂದು  "ಈ ಮನುಷ್ಯ ಒಬ್ಬ ಮುಖವಾಡ  ಧರಿಸಿದ  ಮೋಸಗಾರ ಅನ್ನಿಸಿತ್ತು." ಆದರೂ ಈ ಜಗತ್ತಿಗೆ ನಾವಿಬ್ಬರು  ಅಧಿಕೃತ ವಾಗಿ ಗಂಡ ಹೆಂಡಿರೆಂಬ  ಪದವಿ ಹೊತ್ತು ಮೆರೆಯಬೇಕಾದ  ಅನಿವಾರ್ಯತೆ ಇದೆ ಅನ್ನಿಸಿ  ಮೌನವಾಗಿ ರೋಧಿಸಿದ್ದೆ, ಮತ್ತೊಮ್ಮೆ ನನ್ನ  ಮೊಬೈಲಿನ ಮೆಸ್ಸೇಜ್  ಜ್ಞಾಪಕಕ್ಕೆ ಬಂದು  ನನ್ನ ಭಾವನೆಗಳನ್ನು ಅಣಕಿಸುತ್ತಿತ್ತು. ಹಾಗು ಹೀಗೂ ನಮ್ಮಿಬ್ಬರ  ಈ ಜೀವನ  ಆಟ ಈ ರೀತಿ "ಕಣ್ಣಾ ಮುಚ್ಚಾಲೆ"  ಆಟ ಆಗಿತ್ತು.  .........................             ತಿಂಡಿ ತಿಂದ ಆತ   " ಪುಟ್ಟಣ್ಣಿ" .....  ಬೈ ಚಿನ್ನಾ ಅಂತಾ ನನಗೆ ಅರಿವಿಲ್ಲದೆ  ನನ್ನ  ಬಳಸಿ ಕೆನ್ನೆಯ ಮಚ್ಚೆಗೆ  ಮುತ್ತಿಟ್ಟ !!!!!  ಕೋಪ ಬಂದರು ಸಾವರಿಸಿಕೊಂಡು  ನೋಡುವಷ್ಟರಲ್ಲಿ  ಆತ ಗೇಟು ದಾಟಿ  ಕಾರ್ ಒಳಗೆ ಹೊಕ್ಕಿ ಹೊರಟೇಬಿಟ್ಟ..................................!!!!!!!!!!!!!!!!!!!!!! ನಾನು ನಿಧಾನವಾಗಿ ಕೋಪ ಕಡಿಮೆ ಮಾಡಿಕೊಂಡು  ಖಾಲಿ ಇರುವ ಮನೆಯೊಳಗೇ ನಿಧಾನವಾಗಿ  ಬಂದು ನನ್ನ ಹಾಸಿಗೆಯ ಮೇಲೆ ಬಿದ್ದು ಕೊಂಡೆ........ ...............................
    ಮತ್ತೆ ನನ್ನ ಮೊಬೈಲ್ ರಿಂಗ್ ಆದಾಗ  ಎಚ್ಚರ ಗೊಂಡ ನಾನು ಹೆಲೋ ಅಂದದ್ದೇ  ಆ ಕಡೆಯಿಂದಾ  ಸಾರಿ ಕಣೆ ಬೆಳಿಗ್ಗೆ ನಿಂಗೆ ಎಸ. ಎಂ.ಎಸ. ಮಾಡಿದ್ದೆ   ಆದ್ರೆ ನೀನು ಕೋಪದಿಂದ  WHO'S THIS???.         ಅಂದೆ ಹಾಗಾಗಿ ನಿನ್ನೊಡನೆ ನಾನೇ ಮಾತಾಡಿ  ಬಿಡೋಣ ಅಂತಾ ಕಾಲ್ ಮಾಡಿದೆ . ನಾನು ಯಾರು ಗೊತಾಗ್ಲಿಲ್ವಾ ??? ಅರೆ "ಬುದ್ದು"   ನಾನು ಕಣೆ  ಜಯಂತ್  ಈಗ ಗೊತ್ತಾಯ್ತಾ!!!!  ಮಾರಾಯ್ತಿ  ನಿನ್ನನ್ನು ಎಲ್ಲೆಲ್ಲಿ ಹುಡುಕೋದು??????  ಕೊನೆಗೆ ನಿನ್ನ ಫ್ರೆಂಡ್  ಶೀಲ ಹತ್ತಿರ ನಿನ್ನ ನಂಬರ್ ತಗೊಂಡು ಕಾಲ್ ಮಾಡಿದೆ ,ನನ್ನ ಮೇಲೆ ಕೋಪಾನ??? ಅಂತಾ ಒಂದೇ ಸಮನೆ  ನನಗೆ ಮಾತಾಡಲೂ ಅವಕಾಶ ಕೊಡದೆ ಮಾತಾಡಿದ . ಮೊದಮೊದಲು ಅವ ಯಾರೆಂದು ತಿಳಿಯೋದು ಕಷ್ಟವಾದರೂ ನಂತರ ಅವನ್ಯಾರೆಂದು ತಿಳೀತು. ನಂತರ ನಾನು ಏನೋ ಸಮಾಚಾರ ಹೇಗಿದ್ದೀ ?? ಎಲ್ಲಿದ್ದೀ ?? ಅಂದೆ ......................., ಅಯ್ಯೋ ಬುದ್ದು!!!! ಯಾಕೆಳ್ತಿಯಾ ನನ್ನ ಪಾಡು  ಅದು, ಸರಿ ನಿಂಗೆ ಮದುವೇ ಆಯ್ತಂತೆ  ಹ್ಯಾಗಿದ್ದಾನೆ ನಿನ್ನ ಹಬ್ಬಿ , ನನಗಿಂತಾ ಸ್ಮಾರ್ಟಾ!!!!!!! ಅಂದಾ  ಯಾಕೋ ಗೊತ್ತಿಲ್ಲಾ .ಸ್ವಲ್ಪ ಇರೋ ಮತ್ತೆ ಕಾಲ್ ಮಾಡ್ತೆನಿ ಅಂತಾ ಫೋನ್ ಇಟ್ಟೆ!!!!!     ಆಗಲೇ ಮನಸು ನೆನಪಿನಾಳಕ್ಕೆ ಇಳೀತು.....................................................  ...................................................!!!! ಆಗ ಆಗಿದ್ದೆ  ಹಿಂದಿನ ಕಥೆಯ ಅನಾವರಣ.   ಹೌದು ಅಂದು ನಮ್ಮ  ಊರಿನ ಕಾಲೇಜಿನಲ್ಲಿ ಓದುವಾಗ  ನಡೆದ   ಗೋವಾ  ಘಟನೆ ನಂತರ  ನಾನು ಆ ಕಾಲೇಜಿಗೆ ಹೋಗದ ಕಾರಣ  ನನ್ನನ್ನು   ಆ ಕಾಲೇಜು ಬಿಡಿಸಿ  ಓದು ಮುಂದುವರೆಸಲು  ಈ ಊರಿಗೆ ತಂದು ಇಲ್ಲಿನ ಕಾಲೇಜಿಗೆ  ಸೇರಿಸಿದರು. ಹಾಗಾಗಿ ನನ್ನ ಚಿಕ್ಕಪ್ಪನ ಮನೆಗೆ   ಬಂದು ನೆಲೆನಿಂತೆ. ಆದರೂ ನೊಂದ ಮನಸಿನಲ್ಲಿ ಆ ಕಹಿ ನೆನಪು ಹಾಗೆ ಉಳಿದಿತ್ತು.   ಆ ನೋವಿನ ಸಮಯದಲ್ಲಿ ಒಂಟಿಯಾಗಿ ಜೀವನದಲ್ಲಿ ಬಳಲಿದ್ದ  ನನಗೆ ಅರಿವಿಲ್ಲದಂತೆ ಹತ್ತಿರ ಬಂದವನೇ  ಇವನು , ನಾನೆಷ್ಟು ದೂರ ಸರಿದರೂ  ನನಗೆ ಧೈರ್ಯ  ತುಂಬಿ , ಜೀವನದಲ್ಲಿ ಹೊಸ ಆಸೆ  ತುಂಬಿ ಭಾವನೆಗಳನ್ನು  ಚಿಗುರಿಸಿ,  ಹೂ ಬಿಡುವ ವೇಳೆಗೆ ಮಾಯವಾಗಿದ್ದ , ಯಾವಾಗಲೂ "ಬುದ್ದು" ಬುದ್ದು" ಅಂತಾ ರೇಗಿಸುತ್ತಾ  ನನ್ನ ಮನಸನ್ನು ಆಕ್ರಮಿಸಿಕೊಂಡು ಬಿಟ್ಟಿದ್ದ , ಅವನೇ ಒಂದು ದಿನ ಮದುವೇ ಪ್ರಸ್ತಾಪ ಮಾಡಿದನಾದರೂ ನಾನೇ ನನ್ನ ಅಹಂಕಾರದಿಂದ ಅವನನ್ನು ದೂರ ಇಟ್ಟು ಅವಮಾನಿಸಿದ್ದೆ. ಅಂದಿನಿಂದಾ ಅವನು ಒಬ್ಬ ಫ್ರೆಂಡ್ ಅನ್ನಿಸಿದ್ದರೂ ನಾನು ಓದು ಮುಗಿಸಿ  ಮತ್ತೆ  ನನ್ನ ಊರಿಗೆ ಹೊರಟಾಗ  ಅವನ ಬಾಡಿದ ಮುಖ ನೋಡಿ ತಡೆಯಲಾಗದೆ  ನಾನೇ ಅವನನ್ನು ಕಂಡು   ಪ್ರೀತಿಯ ನಿವೇದನೆ ಮಾಡಿದ್ದೆ............................!! ನಂತರ ಕೆಲದಿನಗಳಲ್ಲಿ ಅವ ವಿದೇಶಕ್ಕೆ ಹೊರಟಾಗ  ನಮ್ಮಿಬ್ಬರ  ಪ್ರೀತಿ ಪ್ರೇಮದ ಬಗ್ಗೆ   ನಮ್ಮ ಮನೆಯವರೊಂದಿಗೆ ಹೇಳಿಕೊಳ್ಳಲಾಗದಷ್ಟು  ಅಸಹಾಯಕರಾಗಿ  ನೋವಿನಿಂದ ನರಳುತ್ತಾ  ದೂರಾದೆವು.   ಆ "ಜಯಂತ್ "  ಇಂದು ಕಾಲ್ ಮಾಡಿದಾಗ  ಏನೂ ಮಾಡಲು ತೋಚದೆ  ಏನೋ ಹೇಳಿ ಫೋನ್ ಇಟ್ಟಿದ್ದೆ.                                                                                                      ಈ "ಜಯಂತ್"ನನ್ನ ಬಾಳಿನಲ್ಲಿ ಬಂದಿದ್ದ    ಘಟನೆಯನ್ನು  ನಾನು ಅವನಿಗೆ ಹೇಳದೆ  ಮುಚ್ಚಿಟ್ಟು................................................................. ಅಂದು ನಮ್ಮ ಪ್ರಥಮ  ರಾತ್ರಿಯ ವೇಳೆ ನನ್ನ ಗಂಡ     
"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ.. 
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."   ಅಂದ ಮಾತನ್ನು ಧಿಕ್ಕರಿಸಿ .................. ನನ್ನ ಈ ಕಥೆಯನ್ನು ಅವನಲ್ಲಿ ಹೇಳದೆ  ನಾನು ನನ್ನ ವರ್ತನೆಯಿಂದ  ಗೆದ್ದವಳಂತೆ ಮೆರೆದೆ ಆದರೆ ಅಂದು ನನಗರಿವಿಲ್ಲದೆ ಜೀವನದಲ್ಲಿ ಸೋತಿದ್ದೆ...............................!!!          ಮತ್ತೆ ಮೊಬೈಲ್ ರಿಂಗ್ ಆದಾಗ ಅವನೇ ......................................................ಮಾತಾಡಿ           !!!!!!!!!!!!!!!!!!!                                                   
ಯಾಕೆ ಬುದ್ದು ಫೋನ್ ಅವಾಯಿಡ್  ಮಾಡ್ತಾ ಇದ್ದೀಯ ಇಲ್ಲಿ ಕೇಳು  ನಿನಗೆ ಒಂದು ಸರ್ಪ್ರೈಸ್ ಕೊಡಬೇಕು ನಿನ್ನ ಗಂಡನ ಜೊತೆ ನಾಳೆ  "ಇಂದ್ರ ಲೋಕ"  ಹೋಟೆಲ್ ಗೆ ಬರಬೇಕೂ ಆಯ್ತಾ , ಇಲ್ಲಾನ್ನಬೇಡ , ನೀನು ಬರದೆ ಹೋದ್ರೆ  ನಿಮ್ಮ ಮನೆಗೆ ಬಂದು ಬಿಡ್ತೇನೆ ಅಷ್ಟೇ ಆಮೇಲೆ ನನ್ನ ಬೈಯ್ಯಭಾರದು ಅಂದಾ , ........................................................................... ನಾನು ಬೇಡಾ ಕಣೋ ಇದೆಲ್ಲಾ...............!!!  ನನಗೀಗ ಮದುವೇ ಆಗಿದೆ  ನೆಮ್ಮದಿಯಾಗಿ ಇರೋಕೆ ಬಿಡು  ಅಂದೆ. ನೋಡೇ" ಬುದ್ದು "  ನೀನು ನಾಳೆ ನಿನ್ನ ಹಬ್ಬಿಯ ಜೊತೆ ಹೋಟೆಲ್ ಗೆ ನಾಳೆ ಸಂಜೆ  ಐದೂವರೆ ಗೆ ಬರ್ತೀಯ ಅಷ್ಟೇ  ಬರದಿದ್ದರೆ  ಗೊತ್ತಲ್ಲಾ ಅಂತಾ ಫೋನ್ ಇಟ್ಟಾ...........................................ಕೆಟ್ಟ ಕೋಪ ಬಂದರು  ಹಳೆಯ ನೆನಪು ಅವನನ್ನು ಒಮ್ಮೆ ನೋಡೋಣ ಅಂತಾ ಕಾಡಿಸಿತ್ತು. ಸರಿ ನನ್ನ ಪತಿಗೆ ಹೇಳೋಣ ಅಂತಾ ಅಂದುಕೊಂಡು  ಅವನನ್ನು ಇವನಿಗೆ ಭೇಟಿಮಾದಿಸಿದರೆ, ಇವನು  ಹ್ಯಾಗೆ ರಿಯಾಕ್ಟ್ ಮಾಡ್ತಾನೆ ಅಂತಾ ಯೋಚನೆ ಶುರು ಆಯ್ತು , ಏನೋ ಒಂದು ಹೇಳೋಣ ಅಂತಾ ಅಂದುಕೊಂಡು  ಸಂಜೆ  ನನ್ನ ಪತಿ ಮನೆಗೆ ಬರೋದನ್ನು  ಕಾಯುತ್ತಾ ಟಿ.ವಿ.ಮುಂದೆ ಕುಳಿತೆ ಅದರಲ್ಲಿ  ಬರುತ್ತಿದ್ದ ಸೀರಿಯಲ್  ಯಾಕೋ ಬೋರಾಗಿ ................ಅದನ್ನು ಆಫ್ ಮಾಡಿ ........... ಕಂಪ್ಯೂಟರ್ ಮುಂದೆ ಕುಳಿತು  ನನ್ನ ಬ್ಲಾಗ್ ನಲ್ಲಿ ಒಂದು ವಿರಹ ಗೀತೆ ಬರೆದೆ. ......."ಗತಿಸಿದ ನೆನಪುಗಳ ರಾಡಿಯನ್ನು ತೊಳೆಯಲು ಮಳೆಯಂತೆ ನೀನು ಬಾ>>>>!!!" ......!!!!!!!!!!!!!!!!!!!!! ಸಾಲುಗಳು ಮೂಡಿಬಂದವು.

Thursday, September 22, 2011

ನಾವ್ಯಾಕೆ ಹೀಗೆ ಎಡಬಿಡಂಗಿಗಳು???? ಜೀವನ ಇಷ್ಟೇನೆ ??? ಚಮ್ಮಾರ ಕಲಿಸಿದ ಪಾಠ !!!!!!!



  •  "ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ " ಹಾಡು ತೇಲಿ ಬರುತ್ತಿತ್ತು , ಹಾಗೆ ಹೆಜ್ಜೆಹಾಕುತ್ತಾ  ನಡೆದು ಬರುತ್ತಿದ್ದೆ , ರಸ್ತೆಯ ಬದಿಯಲ್ಲಿ  ಹರಿದ  ಚಾಪೆಯ ಮೇಲೆ  ಸುತ್ತಾ ಹರಿದ ಚಪ್ಪಲಿ ರಾಶಿಗಳ ನಡುವೆ  ವಯಸ್ಸಾದ  ವ್ಯಕ್ತಿಯೊಬ್ಬ ತನ್ನೆದುರು ನಿಂತ ದಡೂತಿ ಮಹಿಳೆಯ ಮುಂದೆ ಕೈಚಾಚಿ  ತನ್ನ ಕೆಲಸದ ಕೂಲಿ ಬೇಡುತ್ತಿದ್ದ . ಮೈತುಂಬಾ ಒಡವೆ ರಾಶಿ ಹಾಕಿಕೊಂಡಿದ್ದ ಆ ಮಹಿಳೆ  ಹಣ ಕೊಡಲು ಕೊಸರಾಡುತ್ತಿದ್ದರು. ಬನ್ನಿ ಹತ್ತಿರ  ಹೋಗಿ ನೋಡೋಣ.

  • ಚಮ್ಮಾರ :-) "ತಾಯಿ ಇಗೊಳ್ಳಿ ನಿಮ್ಮ ಚಪ್ಪಲಿ ರೆಡಿ  ಹತ್ತು ರುಪಾಯಿ............... ಕೊಡಿ  "  
  •   
  •  ಮಹಿಳೆ :-)    "ಏನಪ್ಪಾ ಹಾಗೆ ಹೀಗೆ  ಎರಡು ಹೊಲಿಗೆ ಹಾಕಿಬಿಟ್ಟು  ಹತ್ತು ರುಪಾಯಿ ಕೇಳ್ತೀಯ ??? ನಾ ಕೊಡೋದೇ     ಎರಡು ರುಪಾಯಿ  "      

  •                                                                                                     ಚಮ್ಮಾರ :- "ಅಲ್ಲಾ ತಾಯಿ ನಿಮ್ಮೆದುರ್ಗೆ ಕಾಲ್ ಗಂಟೆ ಯಿಂದ  ಎರಡೂ ಚಪ್ಪಲಿ  ಒಲ್ದಿದ್ದೀನಿ  , ಹೊಲ್ಗೆ ದಾರ , ಮ್ಯಾಣ ಎಲ್ಲಾ ಸಾನೆ ದುಬಾರಿ ಯಾಗವೇ  , ನೀವು ತಿಳ್ದೊರು  ನೀವೇ ಇನ್ಗಂದ್ರೆ ಎಂಗೆ ತಾಯಿ , ಹತ್ತು ರುಪಾಯಿ ಕೊಡಿ ಇಲ್ಲಾ ಅನ್ಬ್ಯಾಡಿ''
  •                                                                                                        ಮಹಿಳೆ :-  "ಏನಯ್ಯ  ಬಲೆ ಮಾತಾಡ್ತಿ  ತಗೋ  ಅಂತಾ ಐದು ರುಪಾಯಿ  ನಾಣ್ಯ ಎಸೆದು ಹೊರಟಳು. "
  •    

  • ಚಮ್ಮಾರ   :- "ತಾಯಿ ತಾಯಿ ಬಡವನ ಹೊಟ್ಟೆ ಮ್ಯಾಲೆ   ಒಡಿ ಬ್ಯಾಡಿ   ಒಗ್ಲಿ ಇನ್ಮೂರು ರುಪಾಯಿ ಕೊಡಿ."

  •     ಅಂತಾ ಬೇಡಿದ  ಆದರೆ  ಅ ಹೆಂಗಸು ಈ ಮಾತನ್ನು  ಕೇಳದೆ   ಸರ ಸರನೆ ಹೊರಟೆ ಬಿಟ್ಟಳು . ಮನಸಿಗೆ  ಬೇಸರವಾಯಿತು ಹಾಗೆ ಸ್ವಲ್ಪ ದೂರ ಮುಂದುವರೆದೆ  ನನ್ನ ಸ್ನೇಹಿತ ರಘು  ಸಿಕ್ಕಿದ . ಬಾರೋ ಬಹಳ ವರ್ಷ ಆಯ್ತು ನಿನ್ನ ಜೊತೆ ಮಾತಾಡಬೇಕು , ನನ್ನ ಅಂಗಡಿಗೆ ಹೋಗೋಣ ಬಾ ಅಂತಾ ಬಲವಂತ ಮಾಡಿ ಕರೆದೊಯ್ದಾ . ಅಂಗಡಿಗೆ ಹೋದ್ರೆ  ಎರಡುವರ್ಷದ ಹಿಂದೆ  ಸುಮಾರಾಗಿದ್ದ  ಸಣ್ಣ ಬಟ್ಟೆ ಅಂಗಡಿ ಇಂದು   ವಿವಿಧ ಬಗೆಯ ಸೀರೆ , ಗಾರ್ಮೆಂಟ್ಸ್  ಗಳ ಷೋ ರೂಂ ಆಗಿ ಕಂಗೊಳಿಸಿತ್ತು.. ಬಾ ಗುರು  ನಿಧಾನವಾಗಿ ಮಾತಾಡೋಣ ಅಂತಾ ಅಂದವನೇ  ಯಾರನ್ನೋ ನೋಡಿ, ಬಾಲು ಸ್ವಲ್ಪ ಇರು  ಬಂದೆ ಒಂದು ಒಳ್ಳೆ ಗಿರಾಕಿ ಬಂದಿದ್ದಾರೆ  ಅಂತಾ ನನ್ನನ್ನು ಕುರ್ಚಿಯಲ್ಲಿ ಪತಿಷ್ಟಾಪಿಸಿ ಹೊರಟ. ನಾನೂ ಸಹ ಯಾರಪ್ಪಾ ಅಂತಾ  ಅತ್ತ ಗಮನಿಸಿದರೆ  ಅದೇ ಹೆಂಗಸು !!! ಹೌದು ನಿಜ ಅದೇ ಹೆಂಗಸು  ಆ ಚಮ್ಮಾರನಿಗೆ  ಚಳ್ಳೆ ಹಣ್ಣು ತಿನ್ನಿಸಿ ಬಂದ ಮಹಾ ತಾಯಿ  ದರ್ಶನ ಇಲ್ಲಿ.  ಅಷ್ಟರಲ್ಲಾಗಲೇ ನನ್ನ ಸ್ನೇಹಿತನ ಹೆಂಡತಿ  ಆ ಹೆಂಗಸಿಗೆ ಸೀರೆ ತೋರಿಸುತ್ತಾ  ವ್ಯಾಪಾರ ಶುರು ಮಾಡಿದ್ದರು. ನನ್ನ ಸ್ನೇಹಿತನನ್ನು  ಪಕ್ಕಕ್ಕೆ ಕರೆದು  ನಡೆದ ವಿಚಾರ ತಿಳಿಸಿ  ಈ ಮಹಿಳೆ ಮಾಡಿದ ಮಹಾ ಕಾರ್ಯ ವರ್ಣಿಸಿದೆ,  ನೋಡ್ತಾ ಇರು ಹಾಗೆ  ಅಂದವನೇ ಅವನ ಹೆಂಡತಿಗೆ  ಮರಾಟಿಯಲ್ಲಿ ಏನೋ ಹೇಳಿದ .  ಅವನ ಹೆಂಡತಿ ಇಲ್ಲೇ ಬನ್ನಿ ಅಣ್ಣಾ , ಅಕ್ಕಾ ಚೆನ್ನಾಗಿದ್ದಾರಾ  ಅಂತಾ ನಕ್ಕು ವ್ಯಾಪಾರದಲ್ಲಿ ಮಗ್ನರಾದರು. ನಾನೂ ಸಹ ಅಲ್ಲೇನು ನಡೆಯುತ್ತದೆ ಅಂತಾ ಆಸಕ್ತಿಯಿಂದಾ ನೋಡುತ್ತಾ ಹತ್ತಿರದಲ್ಲಿ ಕುಳಿತೆ. ಬನ್ನಿ ಅಲ್ಲಿನ ಮಾತನ್ನು ಕೇಳೋಣ.


  •   ರಘು :- "ನಮಸ್ಕಾರ ಮೇಡಂ , ಬಹಳ ದಿನ ಆಯ್ತು  ನಮ್ ಅಂಗಡಿಗೆ ಬಂದು. ಅಂದವನೇ ಲೇ ಯಾರೋ ಅಲ್ಲಿ  ಮೇಡಂ ಅವರಿಗೆ ಕೂಲ್  ಆಗಿ ಬಾದಾಮಿ ಹಾಲು ತಗೊಂಬಾರೋ ........" ಅಂದಾ..


Tuesday, September 13, 2011

ಬಿಳಿಗಿರಿ ರಂಗನ ಪುನರ್ ಪ್ರತಿಷ್ಟಾಪಿಸಿದ ಮುಜೀಬ್ ಅಹಮದ್ !!ಇಮಾಮರ ಗೋಕುಲಾಷ್ಟಮಿ ಸಂಬಂಧ ಇಲ್ಲಿದೆ!!!!!

ಕಳೆದ ವಾರ  ಹಾಗೆ ಮನೆಯಲ್ಲಿ ಕುಳಿತಿದ್ದೆ , ಸ್ನೇಹಿತರಿಗೆ ಮೊಬೈಲಿನಿಂದ ರಂಜಾನ್ , ಗೌರಿ ಹಬ್ಬ, ಗಣೇಶ ಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದೆ. ನನ್ನ ಹಲವಾರು ಸ್ನೇಹಿತರಿಗೆ  ಶುಭ ಸಂದೇಶ ಕಳುಹಿಸಿದ ನಾನು ಮಾರನೆಯ ದಿನದ ಹಬ್ಬದ ತಯಾರಿಯಲ್ಲಿ  ತೊಡಗಿದೆ. ಅಷ್ಟರಲ್ಲಿ   ಸ್ನೇಹಿತರೊಬ್ಬರ   ಕರೆಬಂದು ದಿನಾಂಕ 28 /08 /2011 ರ  ವಿಜಯ ಕರ್ನಾಟಕ ಪತ್ರಿಕೆಯ ಲವ್ ಲವಿಕೆಯ ಸಂಚಿಕೆಯನ್ನು ಓದಲು ತಿಳಿಸಿದರು. ಪತ್ರಿಕೆಯನ್ನು ಕೈಗೆತ್ತಿಕೊಂಡು ಓದಲು ಹೋದಾಗ ಕಂಡಿದ್ದೆ ನನಗೂ ತಿಳಿದಿದ್ದ ಈ ವಿಸ್ಮಯ. ಹೌದು ಇದನ್ನು ನಾನೂ ಸಹ ಬ್ಲಾಗಿನಲ್ಲಿ ಹಾಕಲು ಉದ್ದೇಶಿಸಿದ್ದೆ. ಆದರೆ ನೆಚ್ಚಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಡಾ// ಏಜಾಸುದ್ದೀನ್ ರವರು ಒಂದು ಅಂದದ ವಿಚಾರ ಪೂರ್ಣ ಲೇಖನವನ್ನು ಬರೆದಿದ್ದರು. ನೆಚ್ಚಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿ "ಇಮಾಮ ಸಾಬರ ಗೋಕುಲಾಷ್ಟಮಿ " ಸಂಭಂದದ  ಕಥೆ  ಬರೆದಿದ್ದೇನೆ. [ ಈ ಲೇಖನ ಬರೆಯುವ ಮೊದಲು ಶ್ರೀ ಮುಜೀಬ್ ಅಹಮದ್ ರವರ  ಅವರಿಂದ ಮತ್ತಷ್ಟು ಮಾಹಿತಿ ಪಡೆದು ಈ ಲೇಖನ  ಪ್ರಕಟಿಸಲು ಅನುಮತಿ ಪಡೆದಿದ್ದೇನೆ]. ಆದರೂ ಬರೆದ  ಡಾ//ಎಜಾಸುದ್ದೀನ್ , ಹಾಗು ಪ್ರಕಟಣೆ ಮಾಡಿರುವ ವಿಜಯ ಕರ್ನಾಟಕ ಪತ್ರಿಕೆಗೆ ಕೃತಜ್ಞನಾಗಿದ್ದೇನೆ.                                     
ವಿಜಯ ಕರ್ನಾಟಕ ಪತ್ರಿಕೆಯ ಲೇಖನ

ಬನ್ನಿ  ವಿಚಾರ ತಿಳಿಯೋಣ. 1986 ನೆ ಇಸವಿ, ಬಿಳಿಗಿರಿ ರಂಗನ ಬೆಟ್ಟ  ಆಗಿನ್ನೂ  ಅವಿಭಜಿತ ಮೈಸೂರು ಜಿಲ್ಲೆಯಲ್ಲಿಯೇ ಇತ್ತು. ಒಮ್ಮೆ ಬಿಳಿಗಿರಿ ರಂಗನಾಥ ಸ್ವಾಮಿಯ ಅರ್ಚಕರಾದ  ಶ್ರೀ ನಾಗರಾಜ ಭಟ್ಟರು ತಾಲೂಕು ಕಚೇರಿಗೆ ಬಂದು ತಹಸಿಲ್ದಾರ್ ರವಲ್ಲಿ ಮನವಿ ಮಾಡಿ ಕೊಳ್ಳುತ್ತಾರೆ  ಸ್ವಾಮೀ  ಬಿಳಿಗಿರಿ ರಂಗನಾಥನ ಮೂಲ ವಿಗ್ರಹ ಅಲ್ಲಾಡುತ್ತಿದೆ  , ದಯಮಾಡಿ ಇದನ್ನು  ಪರಿಶೀಲಿಸಿ ಸರ್ಕಾರದ ವತಿಯಿಂದ ಕ್ರಮ ವಹಿಸಿ ದೇವಾಲಯ ದಲ್ಲಿ ಮೂಲ ವಿಗ್ರಹ ಪುನರ್ ಪ್ರತಿಷ್ಟಾಪಿಸಿ ದೇವಾಲಯದ ಪೂಜೆ ನಡೆಯಲು ಅವಕಾಶ ಮಾಡಿಕೊಡಿ,  ಎಂದು ವಿನಂತಿ ಮಾಡುತ್ತಾರೆ. ಯಾವುದೇ ದೇವಾಲಯದಲ್ಲಿ  ಭಗ್ನಗೊಂಡ, ವಿರೂಪಹೊಂದಿದ , ಅಲ್ಲಾಡುವ  ವಿಗ್ರಹಗಳನ್ನು ಪೂಜಿಸುವುದಿಲ್ಲಾ ಎಂಬ ಅಂಶ ತಿಳಿದಿದ್ದ  ತಹಸಿಲ್ದಾರ್ ಮುಜೀಬ್ ಅಹಮದ್ ರವರು , ಈ ಕಾರ್ಯದ ಬಗ್ಗೆ ಅರ್ಜಿ ಸ್ವೀಕರಿಸಿ  ಯೋಚಿಸಲು ತೊಡಗುತ್ತಾರೆ. ಅರ್ಚಕ ರಾದ ನಾಗರಾಜ ಭಟ್ಟರ ಬಳಿ ಮತ್ತಷ್ಟು ಹೆಚ್ಚಿನ ಮಾಹಿತಿ ವಿನಿಮಯ ಮಾಡಿ ಅವರನ್ನು ಬೀಳ್ಕೊಟ್ಟು ತಮ್ಮ ಯೋಚನಾ ಲಹರಿಯಲ್ಲಿ ತೊಡಗುತ್ತಾರೆ.ಇಂತಹ ಕಾರ್ಯದಲ್ಲಿ ತಾವು ತೊಡಗಿದಾಗ ಯಾವ ರೀತಿ ಪರಿಣಾಮ ಆಗಬಹುದು ಎಂಬ ವಿಚಾರದ ಬಗ್ಗೆ ಯೋಚಿಸಿದಾಗ ಅವರ ಮನಸ್ಸು ಭಾವೈಕ್ಯದ ಪರವಾಗಿ ನಿಲ್ಲುತ್ತದೆ. ಮಾರನೆಯದಿನ ದೇವಾಲಯದ ಧರ್ಮದರ್ಶಿಗಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅವಲೋಕಿಸುತ್ತಾರೆ. ಈ ವಿಚಾರಗಳನ್ನು ಸರ್ಕಾರದ ಮಟ್ಟದ ಮುಜರಾಯಿ[ ಧಾರ್ಮಿಕ ದತ್ತಿ ಇಲಾಖೆ ] ಕಮಿಷನರ್ , ಹಾಗು ಜಿಲ್ಲಾಧಿಕಾರಿಗಳಿಗೆ  ಇಲ್ಲಿನ ವಿಚಾರದ  ಬಗ್ಗೆ ಪತ್ರ ಬರೆದು ಅವರ ಮನ  ಒಲಿಸಿ  ಅವರನ್ನು ಬಿಳಿಗಿರಿ  ರಂಗನ ಬೆಟ್ಟಕ್ಕೆ ಕರೆತರುತ್ತಾರೆ. ಅವರುಗಳೊಂದಿಗೆ ಸಮಾಲೋಚಿಸಿ ನಂತರ  ಯಳಂದೂರು ತಾಲೂಕಿನ  ಸರ್ವ ಜನಾಂಗದ ಮುಖಂಡರ ಸಭೆಯನ್ನು ಕರೆದು ವಿಚಾರ ವಿಮರ್ಶೆ ಮಾಡಲಾಗಿ ಎಲ್ಲಾ  ಜನಾಂಗದ ಮುಖಂಡರು ಮುಜೀಬ್ ಅಹಮದ್ ರವರ ನೇತೃತ್ವದಲ್ಲಿ  ಪುನರ್ಪ್ರತಿಷ್ಟಾಪನೆ  ಕಾರ್ಯ ಆಗಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ. ಅದರಂತೆ 1980 ರ  ಸೆಪ್ಟೆಂಬರ್ 01 ಮಧ್ಯಾಹ್ನ 12  ಘಂಟೆಗೆ   ಕಾರ್ಯಕ್ರಮ  ವಿಧಿ ವಿಧಾನ ಆರಂಭಿಸಿ ಅಕ್ಟೋಬರ್ 26 ರಂದು ಹೊಸ ವಿಗ್ರಹವನ್ನು ಧಾರ್ಮಿಕ ವಿಧಿಗಳೊಂದಿಗೆ ಪುನರ್ಪ್ರತಿಷ್ಟಾಪಿಸಬೇಕೆಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಎಲ್ಲಾ ಜವಾಬ್ಧಾರಿ ಹೊತ್ತ ಮುಜೀಬ್ ರವರಿಗೆ  ಮನದಲ್ಲಿ ತಳಮಳ ಇಂತಹ ಜವಾಬ್ಧಾರಿ ಕಾರ್ಯದಲ್ಲಿ ತಾನು ಎಷ್ಟರ ಮಟ್ಟಿಗೆ ತೊಡಗಬಲ್ಲೆ, ಹೆಚ್ಚು ಕಡಿಮೆ ಆದರೆ ಗತಿಯೇನು?? ಎಂಬ ಬಗ್ಗೆ ಯೋಚನೆ ಕಾಡಲು ಆರಂಭವಾಗುತ್ತದೆ.  1986 ರ ಆಗಸ್ಟ್ 31 ರಂದು ರಾತ್ರಿ ಒಂದೆರಡು ಬಾರಿ ಕನಸಿನಲ್ಲಿ ಬಿಳಿಗಿರಿರಂಗನೆ ಕನಸಿನಲ್ಲಿ ಬಂದು ಈ ಕಾರ್ಯವನ್ನು ಮಾಡಲು ನೀನು ಸಮರ್ಥ ಎಂದು ಹೇಳಿದಂತೆ ಭಾಸವಾಗುತ್ತದೆ . ಬೆಳಗಾಗುವುದನ್ನೇ ಕಾದಿದ್ದು ಮುಂಜಾನೆಯೇ ಬಿಳಿಗಿರಿ ರಂಗನ ಬೆಟ್ಟಕ್ಕೆ  ಆತುರಾತುರವಾಗಿ ದಾವಿಸುತ್ತಾರೆ. ದೇವರ ವಿಗ್ರಹದ ಎದುರು ನಿಲ್ಲ ಬೇಕೆಂಬ ಭಾವನೆ ಕಾಡಿ  ಅಲ್ಲಿಗೆ ಹೋಗಿ ವಿಗ್ರಹದ ಎದುರು ನಿಂತರೆ ಅಂದಿನ ಪ್ರಧಾನ ಆಗಮಿಕರಾದ  ಶ್ರೀ ಕೇಶವಾಚಾರ್ ರವರು ಯಜ್ಞಸಮಾನವಾದ ಕಾರ್ಯದ ಚುಕ್ಕಾಣಿಯನ್ನೇ ಇವರ ಕೈಗೆ ನೀಡುತ್ತಾರೆ.ಹಾಗು ಮುಜೀಬ್ ಅಹಮದ್ ರವರ ಹೆಸರಿನಲ್ಲೇ ಪ್ರತಿಷ್ಠಾಪನಾ ಸಂಕಲ್ಪ ಮಾಡಲಾಗುತ್ತದೆ , ಇದನ್ನು ಕಂಡು ದಿಗ್ಭ್ರಮೆಯಿಂದ  ಇದೇನು ಕೇಶವಾಚಾರರೆ??? ನೀವು ಮಾಡಿದ್ದು ಎಂದರೆ   ನನ್ನದೇನೂ ಇಲ್ಲಪ್ಪಾ  ಎಲ್ಲವೂ ಆ  ಬಿಳಿಗಿರಿರಂಗ ಆಡಿಸುತ್ತಿರುವ ನಾಟಕ ಇದು ಅಷ್ಟೇ ಅನ್ನುತ್ತಾರೆ. ಹಾಗು ಮೂಲವಿಗ್ರಹವನ್ನು ತಾತ್ಕಾಲಿಕವಾಗಿ ಬೇರೆಡೆಗೆ ಇದುವ ದಾರಿ ಮಾಡಿಕೊಡುವ ಕಳಾಕರ್ಷಣೆ ವಿಧಿ ಪ್ರಾರಂಭ ಆಗುವ ಸಮಯದಲ್ಲಿ ಪ್ರಧಾನ ಆಗಮಿಕರು ಗರ್ಭಗುಡಿಯೊಳಗೆ ಮೊದಲು ಮುಜೀಬ್ ಅಹಮದ್ ರವರನ್ನು ಕರೆದುಕೊಂಡು ಹೋಗುತ್ತಾರೆ.ಆಗ ಮನ ತುಂಬಿಬಂದ ಮುಜೀಬ್ ಅಹಮದ್ ರವರು ತಮ್ಮನ್ನು ತಾವು ನಂಬದ ಹಂತಕ್ಕೆ ಮುಟ್ಟಿರುತ್ತಾರೆ . ಸತತವಾಗಿ ಇವರ ಮುಂದಾಳತ್ವದಲ್ಲಿ ಐವತ್ತಾರು ದಿನ  ಹಗಲು ರಾತ್ರಿ  ಧಾರ್ಮಿಕ ಕಾರ್ಯಗಳು ನಿರ್ವಿಗ್ನವಾಗಿ ನಡೆಯುತ್ತವೆ. ಈ ಕಾರ್ಯಕ್ಕೆ ಬರುವ ಸಹಸ್ರಾರು ಭಕ್ತರಿಗೆ ಯಾವುದೇ ತೊಂದರೆ  ಆಗದಂತೆ   ಸಕಲ ವ್ಯವಸ್ತೆಯನ್ನು ಮಾಡಿ ಮುಜೀಬ್ ಅಹಮದ್  ಜೈ ಅನ್ನಿಸಿಕೊಳ್ಳುತ್ತಾರೆ.  1986  ರ ಅಕ್ಟೋಬರ್ 26ರಂದು ಬಿಳಿಗಿರಿರಂಗನ ಪರ್ತಿಷ್ಟಾಪನೆ ಕಾರ್ಯ ಯಶಸ್ವಿಯಾಗಿ ನೆರವೇರಿತು.ಅಲ್ಲಿಗೆ ಆಗಮಿಸಿದ್ದ ವಿವಿಧ ಧಾರ್ಮಿಕ ಕ್ಷೇತ್ರಗಳ ಆಗಮಿಕರು ಸುಮಾರು ಐವತ್ತು ಜನಕ್ಕೂ ಹೆಚ್ಚು ಆಗಮಿಕರು ವೇಧಘೋಶಗಳಿಂದ ವಾತಾವರಣವನ್ನು ಭಕ್ತಿ ಪರವಶಗೊಳಿಸುತ್ತಾರೆ. ನಂತರ ಕಾರ್ಯಕ್ರಮ ಮುಗಿಸಿ ಹೊರಡುವ ಸಮಯ ಬಂದಾಗ ಮುಜೀಬ್ ಅಹಮದ್ ರವರನ್ನು ಅಪ್ಪಿಕೊಂಡ ಪ್ರಧಾನ ಆಗಮಿಕರಾದ ಕೇಶವಾಚಾರ್ ರವರು  ಸ್ವಾಮೀ ನಿಮ್ಮ ಸಹಕಾರದಿಂದ ಬಿಳಿಗಿರಿರಂಗನ  ಪ್ರೇರಣೆಯಂತೆ ಕೆಲಸ ಸುಗಮವಾಗಿ ಆಯಿತು. ನೀವೊಬ್ಬ ಮಹಾಬ್ರಾಹ್ಮಣ  ನನಗೆ ಹೊರಡಲು ಅನುಮತಿ ಕೊಡಿ ಎಂದು ಭಾವ ಪೂರ್ವಕವಾಗಿ ಗದ್ಗತಿತರಾಗುತ್ತಾರೆ .ಕಣ್ಣಲ್ಲಿ ಆನಂದ ಭಾಷ್ಪ ಸುರಿಸುತ್ತಾ  ನಿಮ್ಮನ್ನು ಆ ಬಿಳಿಗಿರಿರಂಗ ಹರಸಿದ್ದಾನೆ ಎಂಬ  ಮನದ ಮಾತನ್ನು ಹೇಳುತ್ತಾರೆ.ಬಿಳಿಗಿರಿ ರಂಗನಾಥನ ಮೂರ್ತಿಯಲ್ಲಿ ಒಂದು ದಿವ್ಯ ಕಳೆ ಈ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿತ್ತು.