Sunday, May 19, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .02 ದಾಂಡೇಲಿ ಅಂತಾ ಯಾಕೆ ಕರೆಯುತ್ತಾರೆ ಗೊತ್ತಾ ??



ದಾಂಡೇಲಿ ಗೆ ಸ್ವಾಗತ



ದಾಂಡೇಲಿ  ಪಯಣ ಯಾಕೋ ಮೊದಲ  ಸಂಚಿಕೆಗೆ   ನಿಂತಿತ್ತು.  ಕಳೆದ ಸಂಚಿಕೆಯ ಕಥನ. ಏನ್ ಮಾಡೋದು ಒಮ್ಮೊಮ್ಮೆ  ಬರೆಯುವ ತುಡಿತ ಇದ್ದರೂ ಬರೆಯಲು ವಿಗ್ನಗಳು ಹಲವಾರು. ಕಳೆದ ಎರಡುವಾರಗಳಿಂದ ಬರೆಯಲು ನೂರೆಂಟು ಅಡ್ಡಿಗಳ ಸರಮಾಲೆ. ಹೌದು ಎರಡು ವಾರದ ಹಿಂದೆ ಎರಡನೇ ಕಂತನ್ನು ಬರೆಯಲು ಕುಳಿತೆ  ಎಲ್ಲ ಸಿದ್ದ ಪಡಿಸಿಕೊಂಡು  ಕಂಪ್ಯೂಟರ್ ಆನ್ ಮಾಡಿ ಚಿತ್ರಗಳಿಗೆ ಹುಡುಕಿದರೆ  ಎಲ್ಲಾ ಚಿತ್ರಗಳು ಮಂಗ ಮಾಯ , ಇದೇನಪ್ಪಾ ಅಂತಾ ನೋಡಿದ್ರೆ ನನ್ನ ಮಗ ಹೊಸ ಉತ್ಸಾಹದಲ್ಲಿ  ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಹೋಗಿ ನನ್ನ ಕಂಪ್ಯೂಟರ್ನಲ್ಲಿ ಸುಮಾರು  ಸಾವಿರಕ್ಕೂ ಹೆಚ್ಚು ಅಮೂಲ್ಯ ಫೋಟೋಗಳನ್ನು  ಅಳಿಸಿಹಾಕಿದ್ದ , ಆದರೆ  ಲೇಖನಕ್ಕೆ ಅವಶ್ಯವಾದ ಚಿತ್ರಗಳನ್ನು  ಮತ್ತೆ ಹುಡುಕಲು ಆರಂಭಿಸಿದೆ ಕೊನೆಗೆ ನನ್ನ  ಎಕ್ಸ್ಟರ್ನಲ್ ಹಾರ್ಡ್ ಡಿಸ್ಕ್ ನಲ್ಲಿ ಅವಿತು ಕುಳಿತಿದ್ದ ಫೋಟೋಗಳನ್ನು ಮತ್ತೆ ಪಡೆದು ಬರೆಯಲು ಇವತ್ತು ಕುಳಿತೆ . 



ರಾಣಿ ಚೆನ್ನಮ್ಮ ವೃತ್ತ



 ನನ್ನ ಪುರಾಣ ಇದ್ದದ್ದೇ ಬನ್ನಿ ಹೋಗೋಣ ಎರಡನೇ ಸಂಚಿಕೆಗೆ ಹಸಿರ ದೃಶ್ಯ ವೈಭವ ನೋಡುತ್ತಾ   ಬಂದೆ ಬಿಟ್ಟೆವು  ದಾಂಡೇಲಿ ಗೆ  , ಅಲ್ಲಿ ಕಾಣಿಸಿದ್ದು "ವೆಲ್ಕಂ ಟು ದಾಂಡೇಲಿ"  ಎನ್ನುವ ಕಮಾನು.............................................ಸ್ವಾಗತ ಕೋರಿತು, ಹೊಸ ಊರಿನ ದರ್ಶನ ಹಳಿಯಾಳ ದಾಂಡೇಲಿ  ರಸ್ತೆಯಲ್ಲಿ ಊರ ಒಳಗೆ  ಪ್ರವೇಶಿಸಿದ ನಮ್ಮ ಕಾರುಗಳು   ನಿಧಾನವಾಗಿ ಚಲಿಸಿದವು , ರಾಣಿಚೆನ್ನಮ್ಮ ವೃತ್ತ ದಾಟಿ ಎಡಗಡೆಗೆ ತಿರುಗಿ  ಸ್ವಲ್ಪ ದೂರ ಹೋದ ನಮಗೆ ಕಾಳಿ ನದಿ ಗೆ ಅಡ್ಡಲಾಗಿ ಕಟ್ಟಿದ ಒಂದು ಸೇತುವೆ  ಎದುರಾಯಿತು


ದಾಂಡೇಲಿ ಪಕ್ಕದ ಸೇತುವೆ
ಅದನ್ನು ದಾಟಿ ತಲುಪಿದ್ದೆ   ಜಂಗಲ್  ಲಾಡ್ಜ್   . ಅಲ್ಲಿ ನಮ್ಮನ್ನು ಸ್ವಾಗತಿಸಿದ  ಜಂಗಲ್ ಲಾಡ್ಜ್  ಬೋರ್ಡು  ನಿಮಗೆ ಈ ಊರಿನ ಇತಿಹಾಸ ಗೊತ್ತಾ ಅಂತಾ   ಕೇಳಿತ್ತು,  ಪ್ರವಾಸ ಮುಗಿಸಿ  ಬಂದ ನಾನು ಈ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡೆ  ಆದರೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ಬಗ್ಗೆ  ಗೆಜೆತೀರ್ ಗಳಲ್ಲಿಯೂ ಹೆಚ್ಚಾಗಿ ಮಾಹಿತಿ ದೊರಕಲಿಲ್ಲ. ಹಲವು ಹಿರಿಯರ ಸಹಾಯ ಪಡೆದರೂ  ಅವರಿಂದಲೂ ಹೆಚ್ಚಿನ ಮಾಹಿತಿ ದೊರಕಲಿಲ್ಲ. ಅದ್ಯಾಕೋ ಕಾಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ  ಇತಿಹಾಸ ದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಲಾರದು. ಈ ಬಗ್ಗೆ ಅಲ್ಲಿನ ಜ್ಞಾನವಂತರು ವಿಚಾರ ಮಾಡಬೇಕಾದ ಅವಶ್ಯಕತೆ ಇದೆ. ಆದಾಗ್ಯೂ ಅಂತರ್ಜಾಲದಲ್ಲಿ ಜಾಲಾಡಿ ಸ್ವಲ್ಪ ಮಾಹಿತಿ ಕಲೆ ಹಾಕಿದ್ದೆನೆ. ಇದಕ್ಕೆ ಪುರಾವೆಯೂ ಸಹ ಇದೆ.



ದಾಂಡೇಲ ರಾಯನ  ದೇವಾಲಯ  

ದಾಂಡೇಲಿ ಹೆಸರಿನ ಹಿಂದೆ ಒಂದು ದುರಂತ ಪ್ರೇಮದ ಕಥೆ ಇದೆ,   ಈ ಕಥೆಯ ಹೀರೋ "ದಾಂಡೇಲಪ್ಪ" ಇವನು ಒಬ್ಬ ಸಾಮಾನ್ಯ ಆಳಾಗಿ ಒಬ್ಬ  ಜಮೀನ್ದಾರನ  ಬಳಿ ಕೆಲಸ ಮಾಡುತ್ತಿರುತ್ತಾನೆ, ಜಮಿನ್ದಾರನ  ಕುಟುಂಬವನ್ನು "ಮಿರಾಶಿ " ಎಂದು ಕರೆಯುತ್ತಿದ್ದರಂತೆ,  ಆ ಕುಟುಂಬದ ಒಬ್ಬ ಯುವತಿ ಕೆಲಸಗಾರ  ಆಳು "ದಾಂಡೇಲಪ್ಪ" ನನ್ನು ಪ್ರೀತಿಸಿ ಬಯಸುತ್ತಾಳೆ ,  ಆದರೆ ಆ ಕುಟುಂಬದ ನೀಯತ್ತಿನ ಆಳು  ತನ್ನ  ಧಣಿ ಯ ಕುಟುಂಬಕ್ಕೆ ದ್ರೋಹ ಮಾಡಬಾರದೆಂಬ  ಕಾರಣಕ್ಕೆ  ಆ ಯುವತಿಯ ಪ್ರೀತಿಯನ್ನು  ನಿರಾಕರಿಸುತ್ತಾನೆ. ಇದರಿಂದ ಕೋಪ ಗೊಂಡ ಆ ಯುವತಿ  "ದಾಂಡೇಲಪ್ಪ" ನ ಮೇಲೆ ಅಪವಾದ ಹೊರೆಸಿ  ತನ್ನ ಹಿರಿಯರ ಬಳಿ  ಚಾಡಿ  ಹೇಳುತ್ತಾಳೆ , ಹಿಂದೆ ಮುಂದೆ ಯೋಚಿಸದೆ  ಆ ಯುವತಿಯ  ಸಹೋದರರು  ಹರಿತವಾದ ಕತ್ತಿಯಿಂದ   "ದಾಂಡೇಲಪ್ಪ"ನ ತಲೆಯನ್ನು  ಕೊಚ್ಚಿ ಹಾಕುತ್ತಾರೆ.   "ದಾಂಡೇಲಪ್ಪ" ನ ರುಂಡ ಒಂದು ಕಡೆ ಹಾಗು ಮುಂಡ  ಒಂದು ಕಡೆ  ಚೆಲ್ಲುತ್ತಾರೆ  . ಹೀಗೆ ಅಂತ್ಯವಾಗುತ್ತದೆ ಅ ದುರಂತ ಪ್ರೇಮಕಥೆ  , ಈ ಘಟನೆ ಯಿಂದ ದಾಂಡೇಲಪ್ಪ ಅಮರನಾಗಿ ಈ ಊರಿನ ಹೆಸರಾಗಿ ಉಳಿದು ಕೊಂಡಿದ್ದಾನೆ . ಇಂದಿಗೂ  ದಾಂಡೇಲಿಯ  ಹೊರವಲಯದಲ್ಲಿ  "ದಾಂಡೇಲಪ್ಪ" ನ  ರುಂಡ ಹಾಗು ಮುಂದ ಬಿದ್ದ  ಅವನ ಹೆಸರಿನಲ್ಲಿ ಎರಡು ದೇವಾಲಯ ಇರುವುದಾಗಿ ತಿಳಿದು ಬರುತ್ತದೆ. ಆದರೆ ನನ್ನ ಕಣ್ಣಿಗೆ ಬಿದ್ದುದು ಒಂದು ಮಾತ್ರ


ದಾಂಡೇಲಿ ರೆಸಾರ್ಟ್ ಗೆ ಪ್ರವೇಶ

 ದಾಂಡೇಲಿ ಕಥೆಯನ್ನು ಮೆಲಕು ಹಾಕುತ್ತಾ  ರೆಸಾರ್ಟ್ ಆವರಣ ಪ್ರವೇಶಿಸಿದೆ, ಅರೆ .....   ಇದೇನು ಕಾಡಿನ ಈ ಪ್ರದೇಶಕ್ಕೆ ಇವರ್ಯಾಕೆ ಬಂದರು ???  ಹೌದು ಇವರ್ಯಾಕೆ ಬಂದರು  ಇಲ್ಲಿನ ಜೀವಿಗಳ  ಜೀವನಕ್ಕೆ ತೊಂದರೆ ಮಾಡಲು ........... !!?